ಅಳಿಯನ ಹೊಣೆ- ಸುಂದರವಾದ ಕಥೆ-35

ಅಳಿಯನ ಹೊಣೆ- ಸುಂದರವಾದ ಕಥೆ

ಅಳಿಯನ ಹೊಣೆ: ಒಂದು ಊರಿನಲ್ಲಿ ದೊಡ್ಡ ಕುಟುಂಬಿಯಾದ ರಂಗ ರಾಜನೆಂಬವನಿದ್ದ. ಅವನಿಗೆ ಹತ್ತು ಮಕ್ಕಳಿದ್ದರು. ಹಿರಿಯವರೆಲ್ಲ ವರಿಸೆಯಾಗಿ ಆರು ಮಂದಿಯವರೆಗೆ ಹೆಣ್ಣು ಮಕ್ಕಳೇ. ಪುಣ್ಯಕ್ಕೆ ರಂಗರಾಜನು ಅಂಥ ಬಡವನಾಗಿರಲಿಲ್ಲ. ನೂರು ಎಕರೆವರೆಗೆ ಒಳ್ಳೆಯ ಬೆಳೆ ಬರುವ ಹೊಲಗದ್ದೆಗಳು ಅವನಿಗಿದ್ದುವು.

ಹೀಗಿರುವಾಗ ದೊಡ್ಡ ಮಗಳಿಗೆ ಮದುವೆ ಯಾಯಿತು. ಮತ್ತೆ ಕೆಲವೇ ದಿನಗಳಲ್ಲಿ ರಂಗರಾಜನು ಯಾವುದೋ ದೀರ್ಘವ್ಯಾಧಿಗೆ ಗುರಿಯಾಗಿ ಹಾಸಿಗೆ ಹಿಡಿದನು. ಮನೆತನದ ವಹಿವಾಟು ನೋಡಿ ಕೊಳ್ಳಲು ದೊಡ್ಡ ಮಗನಿಗೆ ಪ್ರಾಯ ಬಂದಿರಲಿಲ್ಲ. ಆದುದರಿಂದ ಅವನು ತನ್ನ ದೊಡ್ಡ ಅಳಿಯನನ್ನು ತನ್ನ ಮನೆಯಲ್ಲೇ ಇದ್ದು ಮನೆಭಾರ ಹೊರುವಂತೆ ಕೇಳಿಕೊಂಡನು. ದೊಡ್ಡ ಮನೆತನದ ಯಜಮಾನಿಕೆ ದೊರೆಯಿತೆಂಬ ಸಂತೋಷದಲ್ಲಿ ದೊಡ್ಡ ಅಳಿಯ ರಾಜಯ್ಯ ಅದಕ್ಕೆ ಒಪ್ಪಿದ. ಅವನು ಒಳ್ಳೆಯ ವ್ಯವಹಾರ ದಕ್ತನಾಗಿಯೂ ಇದ್ದನು. ಆದುದರಿಂದ ಮಾವಯ್ಯನ ವ್ಯವಹಾರಗಳನ್ನು ಅರ್ಥಮಾಡಿ ಕೊಳ್ಳಲು ಅವನಿಗೆ ಬಹಳ ದಿನ ಬೇಕಾಗಿರಲಿಲ್ಲ.

ಎಲ್ಲಾ ಲೆಕ್ಕ ಹಾಕಿಕೊಂಡ ಮೇಲೆ ಅವನು ಕುಟುಂಬ ದೊಳಗೆ ಮಿತವ್ಯಯವನ್ನು ಅವಲಂಬಿಸಬೇಕೆಂದು ಕೊಂಡು, ಅದಕ್ಕೆ ತಕ್ಕ ಹಾಗೆ ಕೆಲವು ಪದ್ಧತಿಗಳನ್ನು ಅಮಲಿಗೆ ತಂದನು. ವರ್ಷಕ್ಕೆ ಮೂರುಸಾರಿ ಮಾತ್ರ ಹೊಸ ಬಟ್ಟೆಗಳು. ವಾರಕ್ಕೊಮ್ಮೆ ವಿಶೇಷ ಅಡಿಗೆ. ರಂಗರಾಜನ ಹೊಲಗದ್ದೆಗಳನ್ನೂ ಪಶುಗಳನ್ನೂ ನೋಡಿಕೊಳ್ಳಲು ಮೂವತ್ತು ಮಂದಿ ನೌಕರರಿದ್ದರು. ಅವರೆಲ್ಲರಿಗೂ ರಂಗರಾಜನ ಮೇಲೆ ಭಕ್ತಿ ವಿಶ್ವಾಸ ಗಳಿದ್ದುವು. ಆದರೂ ರಾಜಯ್ಯನು ಗದ್ದುಗೆಯ ಅಡಿ ಯಲ್ಲಿರುವ ಹೆಗ್ಗಣದಂತೆ ಸಾಧ್ಯವಾದಷ್ಟು ಮಾವ ಯ್ಯನ ಸೊತ್ತನ್ನು ಗಂಟು ಕಟ್ಟಿಕೊಳ್ಳುತ್ತಿದ್ದನು. ಅದಕ್ಕಾಗಿಯೇ ಎಲ್ಲದರಲ್ಲಿಯೂ ಮಿತವ್ಯಯ ನ್ಯಾಯವನ್ನು ತೂರಿಸುತ್ತಿದ್ದನು. ರಂಗರಾಜನ ಉಳಿದ ಐವರು ಹೆಣ್ಣು ಮಕ್ಕಳಲ್ಲಿ ನಾಲ್ವರಿಗೂ ರಾಜ ಯ್ಯನೇ ಮದುವೆ ಮಾಡಿಸಿದ್ದನು. ಆ ನಾಲ್ಕು ಮಂದಿ ಅಳಿಯಂದಿರೂ ತನ್ನ ಹಿಡಿತದಲ್ಲಿರತಕ್ಕವರೆಂದು ನೋಡಿಯೇ ಮಾಡಿಸಿದ್ದನು. ಅವನ ಹಿರಿತನದಲ್ಲಿ ತಾವಾರೂ ತಲೆ ಹಾಕದಿದ್ದರೇನೇ ತಮಗೆ ಸುಖ ಎಂದುಕೊಂಡು ಅವರೂ ಸುಮ್ಮನಿದ್ದರು.

ಹೀಗಿರುವಾಗ ರಂಗರಾಜನ ಆರನೇ ಮಗಳಿಗೆ ಮಾತ್ರ ರಾಜಯ್ಯನ ಇಷ್ಟದಂತೆ ಮದುವೆ ಮಾಡಲು ಸಾಧ್ಯವಾಗಲಿಲ್ಲ. ಆ ಹುಡುಗಿ ವೀರರಾಜನೆಂಬವ ನನ್ನು ಪ್ರೇಮಿಸಿ ಅವನ ಹೊರತು ಬೇರೆ ಯಾರನ್ನೂ ಮಾಡಿಕೊಳ್ಳಲಾರೆನೆಂದು ಪಟ್ಟುಹಿಡಿದಳು. ಹಾಗೆ ವೀರರಾಜನು ಚಿಕ್ಕಳಿಯನಾಗಿ ಬಂದ ಮೇಲೆ ರಾಜಯ್ಯನಿಗೆ ಕಷ್ಟಗಳು ಪ್ರಾರಂಭವಾದುವು.

ವೀರರಾಜನು ಎಲ್ಲ ಅಳಿಯಂದಿರಿಗಿಂತ ಚಿಕ್ಕವ ನಾದರೂ ಒಳ್ಳೆಯ ಬುದ್ಧಿ ತೀಕ್ಷತೆಯುಳ್ಳವನು. ಅವನು ರಾಜಯ್ಯನ ಪ್ರತಿಯೊಂದು ಕೆಲಸವನ್ನೂ ಒಂದು ಕಣ್ಣಿನಲ್ಲಿ ನೋಡುತ್ತ, ಅದೇಕೆ ಹಾಗೆ ಅದೇಕೆ ಹೀಗೆ ಎಂದು ಕೆದರಿಕೆದರಿ ಕೇಳತೊಡಗಿದನು.

ಇದರಿಂದಾಗಿ ರಾಜಯ್ಯನ ಹಿರಿತನಕ್ಕೆ ಅಡಿ ಗಡಿಗೂ ಅಡ್ಡಗಲ್ಲು ಬೀಳತೊಡಗಿತು. ಹೀಗೇ ಬಿಟ್ಟರೆ ಅವನಿಂದ ತನಗೆ ಮುಂದೆ ದೊಡ್ಡ ಅಪಾಯ ವಾದೀತೆಂದು ಭಾವಿಸಿ ಅವನು ಮಾವಯ್ಯನೊಂದಿಗೆ, ” ನೋಡುತ್ತಿದ್ದೀರಷ್ಟೇ ಮಾವಯ್ಯಾ, ಇತ್ತೀಚೆಗೆ ನಮಗೆ ಹಣದ ಮುಗ್ಗಟ್ಟು ತುಂಬಾ ಬಂದಿದೆ. ಕಾರಣ ಮತ್ತೇನಿಲ್ಲ. ಮನೆಯೊಳಗೂ ಹೊರಗೂ ಕ್ರಮಶಿಕ್ಷಣ ತಪ್ಪಿಹೋಯಿತು. ನಾನು ಮನೆಗೆ ಅಳಿಯನಾದರೂ ಆಸ್ತಿಗೆ ವಾರಸುದಾರನಲ್ಲ ನೋಡಿ. ಯಾರೂ ನನ್ನ ಮಾತನ್ನು ಕೇಳುವುದಿಲ್ಲ.” ಎಂದನು. ರಂಗರಾಜನು ನೊಂದುಕೊಂಡು, “ಹಾಗಾದರೆ ಏನು ಮಾಡಬೇಕೆನ್ನು ತ್ತೀ ? ” ಎಂದು ಕೇಳಿದನು.

“ನಿಮಗೆ ನನ್ನ ಮೇಲೆ ನಂಬುಗೆ ಇದ್ದರೆ ನಿಮ್ಮ ದೊಡ್ಡ ಮಗನಿಗೆ ಸ್ವಲ್ಪ ವ್ಯವಹಾರಜ್ಞಾನ ಬರುವ ವರೆಗೆ, ಆಸ್ತಿಯನ್ನು ಕಾಪಾಡುವ ಸರ್ವಹಕ್ಕು ಗಳನ್ನೂ ನನಗೇ ಕೊಟ್ಟಿರುವುದಾಗಿ ಪ್ರಕಟಿಸಿಬಿಡಿರಿ. ಮತ್ತೆ ನೋಡೋಣ” ಎಂದ ರಾಜಯ್ಯ.

ರೋಗಿಷ್ಠನಾಗಿ ಹಾಸಿಗೆ ಹಿಡಿದ ರಂಗರಾಜನು ಹಾಗೆಯೇ ಮನೆಯೊಳಗಿರುವವರನ್ನೂ, ನೌಕರ ರನ್ನೂ ಕರೆದು ರಾಜಯ್ಯ ಏನು ಹೇಳಿದರೂ ಅದು ತಾನು ಹೇಳಿದ್ದೆಂದೇ ತಿಳಿಯಬೇಕೆಂದು, ಅವನ ಮೇಲೆ ದೂರುತಂದರೆ ತಾನು ಕೇಳುವುದಿಲ್ಲವೆಂದು ಸ್ಪಷ್ಟ ವಾಗಿ ಹೇಳಿಬಿಟ್ಟನು.

ಇಷ್ಟಾದ ಮೇಲೆ ರಾಜಯ್ಯನ ದರ್ಬಾರು ಜೋರಾಯಿತು. ಅವನು ಮೊದಲಿಗಿಂತಲೂ ಹೆಚ್ಚು ಚುರುಕಾಗಿ ಮಾವಯ್ಯನ ಸೊತ್ತನ್ನು ಕೊರೆದುಕೊಳ್ಳ ಹೊಡೆಯ ತೊಡಗಿದನು. ಎಲ್ಲರಿಗಿಂತ ಹೆಚ್ಚು ಪ್ರತಿ ಬಂಧಕನಾಗಿದ್ದ ಚಿಕ್ಕಳಿಯ ವೀರರಾಜನ ಮೇಲೆ, ಒಂದು ಕಳ್ಳತನದ ಆರೋಪವನ್ನು ಹೇಳಿ, ನ್ಯಾಯಾಧಿ ಕಾರಿಗಳಿಗೆ ಒಪ್ಪಿಸಿ ನಿರ್ಬಂಧದಲ್ಲಿಡಿಸಿಬಿಟ್ಟನು. ವ್ಯವ ಹಾರವು ಇಷ್ಟೊಂದು ವೀಪರೀತಕ್ಕಿಟ್ಟುಕೊಂಡಾಗ ರಂಗರಾಜನು ರಾಜಯ್ಯನನ್ನು ಆಕ್ಷೇಪಿಸಿ ಮಾತಾಡಲು ತೊಡಗಿದನು. ಮಾವಯ್ಯನಿಗೆ ಮತಿ ಚಲಿಸಿತೆಂದೂ ಹುಚ್ಚು ತಗಲಿತೆಂದೂ ರಾಜಯ್ಯ ಪ್ರಚಾರಮಾಡ ತೊಡಗಿ, ಮಾವಯ್ಯನನ್ನು ಕೋಣೆಯೊಳಗೆ ಬಂಧಿಸಿಟ್ಟನು. ಈಗ ಅವನಿಗೆ ಯಾವ ಅಡ್ಡಿಯೂ ಇರ ಲಿಲ್ಲ. ಅವನೀಗ ಒಳ್ಳೆಯ ಧೈರ್ಯದಿಂತ ತನ್ನ ಊರಿ ನಲ್ಲಿ ಒಂದು ದೊಡ್ಡ ಮನೆಯನ್ನೂ ಕಟ್ಟತೊಡಗಿದ.

ಅಷ್ಟರಲ್ಲಿ ವೀರರಾಜನ ಮೇಲಿದ್ದ ಕಳ್ಳತನದ ಆರೋಪಣೆ ಸುಳ್ಳೆಂದು ರುಜುವಾಗಿ, ಅಧಿಕಾರಿಗಳು ಅವನನ್ನು ಬಿಟ್ಟು ಬಿಟ್ಟರು. ಅವನು ಪರಿಸ್ಥಿತಿಯನ್ನು ತಿಳಿದು ನ್ಯಾಯಾಧಿಕಾರಿಗೆ ರಾಜಯ್ಯನ ದುಷ್ಟ ತನಗಳನ್ನು ಹೇಳಿದನು. ತನ್ನ ಮಾವಯ್ಯನಿಗೆ ಬುದ್ದಿ ಕೆಟ್ಟು ಹೋಯಿತೆಂಬುದೂ ಸುಳ್ಳೆಂದು ವೈದ್ಯರ ಮೂಲಕ ಪರೀಕ್ಷೆ ನಡೆಯಿಸಿ ನಿರೂಪಿಸಿದನು. ಇದೆಲ್ಲಾ ನ್ಯಾಯಾಧಿಕಾರಿಗಳ ಸಮಕ್ಷಮದಲ್ಲಿಯೇ ನಡೆದುದರಿಂದ ರಾಜಯ್ಯ ನಿರುಪಾಯನಾದನು.

ಬಂಧನದಿಂದ ಹೊರಬಂದ ರಂಗರಾಜ, ಮತ್ತೆ ಯಜಮಾನಿಕೆಯ ಅಧಿಕಾರಕ್ಕೆ ಬಂದು, ದೊಡ್ಡ ಅಳಿಯನಿಗೆ ತಾನು ಕೊಟ್ಟ ಅಧಿಕಾರವನ್ನು ರದ್ದು ಮಾಡಿ, ಅದನ್ನು ಚಿಕ್ಕ ಅಳಿಯ ವೀರರಾಜನಿಗೆ ಒಪ್ಪಿಸಿದನು.

ಕೆಲವು ತಿಂಗಳು ಕಳೆಯಿತು. ವೀರರಾಜನು ರಾಜಯ್ಯನ ನಿಜ ಸ್ವರೂಪವನ್ನು ತೋರಿಸಿ ಕೊಟ್ಟನೇ ಹೊರತು, ಬೇರೆ ಯಾವ ಅಭಿವೃದ್ಧಿಯನ್ನೂ ಸಾಧಿಸ ಲಾರದೆ ಹೋದನು. ನೌಕರರೆಲ್ಲ ಸೋಮಾರಿಗಳಾ ಗಿದ್ದರು. ರಾಜಯ್ಯ ಕೆಲವು ನೌಕರರನ್ನು ಒಳಪಡಿಸಿ ಕೊಳ್ಳಲು ಅವರಿಗೆ ಸೋಮಾರಿತನವನ್ನು ಬರಿಸಿದ್ದನು. ಅದರಿಂದ ಇತರ ನೌಕರರಿಗೂ ಕೆಲಸದಲ್ಲಿರುವ ಶ್ರದ್ದೆ ಹೊರಟು ಹೋಗಿತ್ತು. ತಮ್ಮ ಶ್ರಮ ಫಲಿತವನ್ನು ಕುರಿತು ಅಭಿಮಾನಿಸಿಕೊಳ್ಳುವುದನ್ನೂ ಎಲ್ಲ ನೌಕರರೂ ಮರೆತಿದ್ದರು. ಪಶು ಸಂಪದಗಳು ಅಸ್ತ್ರ ವ್ಯಸ್ತವಾಗಿದ್ದುವು. ಇದನ್ನೆಲ್ಲ ಸರಿಮಾಡಲು ವೀರ ರಾಜನಿಗೆ ಯಾಕೋ ಸಾಧ್ಯವಾಗಲೇ ಇಲ್ಲ.

ಕಡೆಗೆ ಅವನು ತನ್ನ ಅಶಕ್ತತೆಯನ್ನು ಕುರಿತು ಒಂದುಸಾರಿ ರಂಗರಾಜನೊಂದಿಗೆ ಮಾತಾಡಿದನು. ಅದನ್ನು ಕೇಳಿ ರಂಗರಾಜನು ನಕ್ಕು, “ರಾಜಯ್ಯ ದುಷ್ಟಬುದ್ಧಿಯವನಾದರೂ ಸಾಮರ್ಥ್ಯ ಉಳ್ಳವನು. ಅವನಲ್ಲಿದ್ದ ಸ್ವಾರ್ಥಬುದ್ಧಿ ಅವನ ಸಾಮರ್ಥ್ಯವನ್ನು ಹಾಳು ಕೆಲಸಕ್ಕೀಡು ಮಾಡಿತು. ನೀನು ಅವನ ತಪ್ಪಗಳನ್ನು ಎಣಿಸಿಕೊಂಡಿರುವು ದನ್ನು ಬಿಟ್ಟು, ಖರ್ಚಿಗೆ ಸರಿ ತೂಗುವ ಆದಾಯ ಹೆಚ್ಚಾಗುವ ದಾರಿ ನೋಡು, ಕೋಪ ಭಾವನೆ ಬಿಟ್ಟರೆ ವಿವೇಕ ಸರಿಯಾದ ಮಾರ್ಗ ತೋರಿಸುತ್ತದೆ. ಹೊಸ ಅಳಿಯನಾದ ನಿನ್ನ ಬಾಧ್ಯತೆ ಅದೇ ” ಎಂದನು.

ಆಮೇಲೆ ವೀರರಾಜನು ರಾಜಯ್ಯನ ಮೇಲಿನ ಕೋಪವನ್ನು ಮರೆತು. ರಂಗರಾಜನ ವ್ಯವಹಾರ ಗಳನ್ನು ಸಕ್ರಮವಾಗಿ ಎರಡು ವರ್ಷಗಳಲ್ಲಿ ಹಿಂದಿನ ಒಳ್ಳೆಯ ಸ್ಥಿತಿಗೇ ಒಯ್ದು ನಿಲ್ಲಿಸಿದನು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

2 thoughts on “ಅಳಿಯನ ಹೊಣೆ- ಸುಂದರವಾದ ಕಥೆ-35”

  1. Nice, I love chandamama stories, in my childhood I read more than 800 books of chandamama, it was so colourful and messaged , nice , in the year 1991 it was the golden era for the stories, eagerly waiting for magazine and periodicals . But this generation lose this physical touch of books of stories, I have still few books of chandamama, those are my assets

    Reply

Leave a Comment

error: Content is protected !!