ಕೋಳಿಯ ಬೆಲೆ- ಸುಂದರವಾದ ಕಥೆ
ಒಂದು ಗ್ರಾಮದಲ್ಲಿ ತಿಮ್ಮಯ್ಯನೆಂಬೊಬ್ಬ ಕುಂಬಾರನಿದ್ದನು. ಒಂದುವರ್ಷ ಸಂಕ್ರಾಂತಿ ಹಬ್ಬ ಬಂತು. ತಿಮ್ಮಯ್ಯನ ಹೆಂಡತಿ ಒಂದು ಕೋಳಿ ಕೊಂಡುತರುವಂತೆ ಗಂಡನಿಗೆ ಹೇಳಿ ದಳು. ಆ ಗ್ರಾಮದ ಜಮೀನುದಾರ ಸಂಜೀನಯ್ಯನ ಬಳಿಗೆ ಹೋಗಿ ತನಗೊಂದು ಕೋಳಿ ಯನ್ನು ಮಾರುವಂತೆ ಕೇಳಿದ ತಿಮ್ಮಯ್ಯ,
ಸಂಜೀವಯ್ಯ ತಿಮ್ಮಯ್ಯನಿಗೆ ಒಂದು ಕೋಳಿಮರಿಯನ್ನು ಕೊಟ್ಟು ” ಈಗ ಕಾಸಿಲ್ಲದಿದ್ದರೆ ನಿಧಾನವಾಗಿ ಕೊಡುವಿಯಂತೆ, ಲೆಕ್ಕ ಬರೆಯಿಸಿರುತ್ತೇನೆ” ಎಂದನು. ತಿಮ್ಮಯ್ಯನಿಗೆ ಆ ಗ್ರಾಮದಲ್ಲಿ ಅಷ್ಟೊಂದು ಆದರ ತೋರಿಸಿದವರಿರಲಿಲ್ಲ. ಆದುದರಿಂದ ತಿಮ್ಮಯ್ಯ ಸಂಜೀವಯ್ಯನನ್ನು ಮನಃಪೂರ್ವಕವಾಗಿ ಹೊಗಳಿ ಕೊಂಡಾಡಿ ಮನೆಗೆ ಹಿಂತಿರುಗಿದನು, ಅಂದು ತಿಮ್ಮಯ್ಯ ಅವನ ಹೆಂಡತಿ ಕೋಳಿಯನ್ನು ಕೊಯ್ದು ಅಡಿಗೆಮಾಡಿಕೊಂಡು ತೃಪ್ತಿಯಾಗಿ ಊಟಮಾಡಿದರು.
ಕೊಂಚ ದಿನಗಳಾದ ನಂತರ ತಿಮ್ಮಯ್ಯ ಜಮೀನು ದಾರನಿಗೆ ಕೋಳಿಯ ಬಾಬತ್ತು ಹಣವನ್ನು ಕೊಡಲು ಅವನ ಬಳಿಗೆ ಬಂದನು.ಈಗ ನನಗೆ ಕೈ ತುಂಬಾ ಕೆಲಸವಿದೆ. ಆ ಲೆಕ್ಕ ನೋಡಲು ಬಹಳ ಸಮಯ ಹಿಡಿಯುತ್ತದೆ. ಮತ್ತೆ ಎಂದಾದರೂ ಬಾ” ಎಂದ ಸಂಜೀವಯ್ಯ,ಕೋಳಿಯ ಬೆಲೆ ತೆಗೆದುಕೊಳ್ಳಲು ಲೆಕ್ಕವೇನು ನೋಡಬೇಕು ರಾಯರೇ? ಎಷ್ಟು ಕೊಡಬೇಕೋ ತಿಳಿಸಿ, ಲೆಕ್ಕ ಪೈಸಲ್ ಮಾಡಿ ಹೊರಟುಹೋಗುತ್ತೇನೆ” ಎಂದ ತಿಮ್ಮಯ್ಯ, “ಅರೆ, ಅದೇನು ಚಿಕ್ಕಪುಟ್ಟ ಲೆಕ್ಕವಿಲ್ಲ ಕಣಯ್ಯ” ಎಂದು ತಿಮ್ಮಯ್ಯನನ್ನು ಕಳುಹಿಸಿ ಬಿಟ್ಟ ಜಮೀನುದಾರ, ತಿಮ್ಮಯ್ಯ ಸಂಜೀವಯ್ಯನ ಮನೆಗೆ ಐದಾರು ಬಾರಿ ತಿರುಗಾಡಿದನಂತರ ಒಂದು ದಿನ ಸಂಜೀವಯ್ಯ ಕಾಗದ ಸೀಸದಕಡ್ಡಿ ತೆಗೆದುಕೊಂಡು, ಲೆಕ್ಕ ಹಾಕಿ ಕೋಳಿಯ ಬಾಬತ್ತು ಎಲ್ಲಾ ಸೇರಿ ಇನ್ನೂರ ಐವತ್ತು ರೂಪಾಯಿ ಚಿಲ್ಲರೆ ಆಗುತ್ತೆ. ಚಿಲ್ಲರೆಯ ಮಾತುಬಿಡು, ಇನ್ನೂರೈವತ್ತು ರೂಪಾಯಿ ಮಾತ್ರ ಕೊಟ್ಟು ಬಿಡು, ತೀರಿತು” ಎಂದ. ತಾನು ಊಟಮಾಡಿದ ಕೋಳಿಯ ಬೆಲೆ ಇನ್ನೂರೈವತ್ತು ರೂಪಾಯಿಯಿಂದ ಕೂಡಲೇ ತಿಮ್ಮಯ್ಯನ ಬಾಯಿಂದ ಮಾತೇ ಹೊರಡಲಿಲ್ಲ “ಒಂದು ಕೋಳಿಯ ಬೆಲೆ ಇನ್ನೂರೈವತ್ತು ರೂಪಾಯಿಯೆ? ಅದೇನಾದರೂ ಸುವರ್ಣ ಕೋಳಿಯೇ ?” ಎಂದು ಕೇಳಿದನು.
“ ನನ್ನ ಲೆಕ್ಕದಲ್ಲಿ ದಗಾಕೋರತನವೇನೂ ಇಲ್ಲ. ಬೇಕಾದರೆ ನಿನ್ನಿಷ್ಟ ಬಂದವರ ಹತ್ತಿರ ಹೋಗಿ ಲೆಕ್ಕ ಹಾಕಿಸಿಕೊಳ್ಳಬಹುದು. ನೀನು ತೆಗೆದುಕೊಂಡ ಕೋಳಿ ಇಂದಿನ ತನಕ ಎಷ್ಟು ಮೊಟ್ಟೆಗಳಿಡುತ್ತಿದ್ದುವು? ಅವುಗಳ ಬೆಲೆಯೆಲ್ಲಾ ನೀನು ಕೊಡಲೇಬೇಕು” ಎಂದ.
ಜಮೀನುದಾರ. ತಿಮ್ಮಯ್ಯ ಬೆಕ್ಕಸ ಬೆರಗಾದ. “ಈ ವಿಷಯ ಪಟೇಲರೇ ಇತ್ಯರ್ಥ ಮಾಡಲಿ ” ಎಂದ ತಿಮ್ಮಯ್ಯ.
“ಆಗತ್ಯವಾಗಿ ಕೇಳು. ನಾನು ಬೇಡವೆಂತ ಹೇಳಿದೆನೇ?” ಎಂದ ಸಂಜೀವಯ್ಯ, ಪಟೇಲ ತನಗೆ ಅನುಕೂಲವಾಗಿ ತೀರ್ಪು ಕೊಡುವನೆಂದು ಜಮೀನುದಾರನಿಗೆ ತಿಳಿದಿತ್ತು.
ಇಬ್ಬರೂ ಒಟ್ಟಿಗೆ ಪಟೇಲರ ಹತ್ತಿರಕ್ಕೆ ಹೋದರು. ಸಂಜೀವಯ್ಯ ಪಟೇಲರೊಂದಿಗೆ ಪಟೇಲರೇ, ತಿಮ್ಮಯ್ಯ ಮೊನ್ನೆ ಸಂಕ್ರಾಂತಿ ಯಲ್ಲ ಅದರ ಹಿಂದಿನ ಸಂಕ್ರಾಂತಿಯಂದು ನನ್ನ ಬಳಿ ಒಂದು ಕೋಳಿಮರಿ ಕೊಂಡು ಕೊಂಡ. ಅದರ ಬಾಬತ್ತು ಹಣ ಕೊಡುತ್ತೇನೆ. ಅಂತ ಹೇಳುತ್ತಿದ್ದಾನೆ. ಆ ಕೋಳಿ ಇಂದಿನ ತನಕ ಎಷ್ಟು ಮೊಟ್ಟೆಗಳಿಡುತ್ತಿದ್ದುವೋ, ಅವು ಗಳಲ್ಲಿ ಎಷ್ಟು ಮರಿಗಳಾಗಿ, ಮತ್ತೆ ಅವು ಮರಿಗಳಾಗಿ ಬೆಳೆದು ಎಷ್ಟಾರೆ ಮೊಟ್ಟೆಗಳಿಡುತ್ತಿದ್ದುವೋ ಲೆಕ್ಕ ಹಾಕಿ ಎರಡು ನೂರು ಐವತ್ತು ರೂಪಾಯಿಗಳಾಯಿತೆಂದು ಹೇಳಿದೆ. ಇದೋ ನೋಡಿ ಪಟ್ಟಿ, ನೀವೂ ಸಹ ನೋಡಿ, ಏನಾದರೂ ತಪ್ಪಿದೆಯೇನೋ ಹೇಳಿ. ಅನ್ಯಾಯದ ಸೊತ್ತು ನನಗೇಕೆ?” ಎಂದ.
ಪಟೇಲರು ಪಟ್ಟಿಯನ್ನು ಮೇಲಿಂದ ಕೆಳಗೆ ಅತ್ತಿಂದಿತ್ತ ನೋಡಿ “ಏನು ತಿಮ್ಮಯ್ಯ, ಲೆಕ್ಕದಲ್ಲಿ ತಪ್ಪೇನಿಲ್ಲವಲ್ಲಾ” ಎಂದ.
“ನಾನು ಆಗಲೇ ಹೇಳಿದೆ. ತಿಮ್ಮಯ್ಯ ನಂಬಲಿಲ್ಲ. ಪಾಪ, ಅವಿದ್ಯಾವಂತ, ಲೆಕ್ಕ ಗಿಕ್ಕ ಬರೋಲ್ಲ” ಎಂದು ಸಂಜೀವಯ್ಯ ತಿಮ್ಮಯ್ಯನನ್ನು ನೋಡಿ ಮರುಕಗೊಂಡವನಂತೆ ಹೇಳಿದ. ತಿಮ್ಮಯ್ಯ ಹತಾಶನಾದನು. ಪಟೇಲರ ಅಪ್ಪಣೆ ಪಡೆದು ವಿಚಾರಮಗ್ನನಾಗಿ ಮನೆಯ ಕಡೆ ಹೋಗುತ್ತಿದ್ದ. ದಾರಿಯಲ್ಲಿ ಶ್ಯಾನು ಭೋಗರು ಸಿಕ್ಕಿ ಏನು ತಿಮ್ಮಯ್ಯಾ, ಏನೋ ದೀರ್ಘಾಲೋಚನೆಯಲ್ಲಿರುವಂತಿದೆ. ಏನಾಯಿತು?” ಎಂದು ಕೇಳಿದರು. ತಿಮ್ಮಯ್ಯ ನಡೆದ ಸಂಗತಿಯನ್ನು ತಿಳಿಸಿದ.
“ಪಟೇಲರು ನಿನಗೆ ಬೇಸ್ತು ಕೊಟ್ಟರೆ? ನಾನು ಹೇಳಿದಂತೆ ಮಾಡುವೆಯಾ? ಸಂಜೀವಯ್ಯನ ಬಳಿಗೆ ಹೋಗಿ ನಾಳೆ ಊರ ಚಾವಡಿ ಯಲ್ಲಿ ಪಂಚಾಯತಿಗೆ ಒಪ್ಪಿಕೊಳ್ಳುವಂತೆ ಹೇಳು. ನಿನ್ನ ಪರವಾಗಿ ನಾನು ಸಾಕ್ಷ್ಯ ಕೊಡುವೆನೆಂದೂ ಸಹ ಹೇಳು” ಎಂದರು ಶ್ಯಾನುಭೋಗರು, ಸ್ವಲ್ಪ ಸಂತೋಷಗೊಂಡು ತಿಮ್ಮಯ್ಯ ಸಂಜೀವಯ್ಯನ ಬಳಿಗೆ ಹೋಗಿ ಅಂತೆಯೇ ಹೇಳಿದ.
“ಮತ್ತೆ ಏನಯ್ಯಾ ಪಂಚಾಯತಿ? ಪಟೇಲರೇ ಹೇಳಿದರಲ್ಲಾ” ಎಂದ ಜಮೀನುದಾರ. “ನನಗೆ ನಿಮ್ಮ ಲೆಕ್ಕವಾವುದೂ ಅರ್ಥವಾಗಲಿಲ್ಲ. ಪಂಚಾಯಿತಿದಾರರು ಏನು ಹೇಳಿದರೆ ಹಾಗೆ ಮಾಡುತ್ತೇನೆ. ಶ್ಯಾನುಭೋಗರು ನನ್ನ ಕಡೆ ಸಾಕ್ಷ್ಯ ನುಡಿಯುವರು. ಶ್ಯಾನು ಭೋಗರೆಂದರೆ ನಿಮಗೆ ಭಯವಿಲ್ಲವಷ್ಟೇ?” ಎಂದ ತಿಮ್ಮಯ್ಯ.
“ನನಗೆಂತಹದಯ್ಯಾ ಭಯ,” ಎಂದು ಸಂಜೀವಯ್ಯ ಪಂಚಾಯಿತಿಗೆ ಒಪ್ಪಿಕೊಂಡ. ಮಾರನೇಯದಿನ ಸಾಯಂಕಾಲ ಊರ ಚಾವಡಿಯಲ್ಲಿ ಎಲ್ಲರೂ ಸೇರಿದರು. ಆದರೆ ಶ್ಯಾನುಭೋಗರ ಪತ್ತೆಯಿಲ್ಲ. ಶ್ಯಾನುಭೋಗರೂ ತನಗೆ ಮೋಸಮಾಡಿದರೆಂದು ತಿಮ್ಮಯ್ಯ ಅನುಮಾನಗೊಂಡನು. ಎಲ್ಲರೂ ಅವನನ್ನು ನೋಡಿ ಮುಸಿಮುಸಿ ನಗಲಾರಂಭಿಸಿದರು. ಇನ್ನೇನು ಕತ್ತಲಾಗುವ ಸಮಯಕ್ಕೆ ಶ್ಯಾನುಭೋಗರು ಉಸಿರು ಬಿಟ್ಟು ದಾವುಗಾಲು ಇಡುತ್ತ ಬೇಗ ಬೇಗನೆ ಅಲ್ಲಿಗೆ ಬಂದರು.
“ನಾನು ಬರುವುದು ತುಸ ತಡವಾಯಿತು, ಕ್ಷಮಿಸಬೇಕು. ಕೆಲಸಗಾರರು ಇಂದೇ ಬಿತ್ತನೆ ಮಾಡಬೇಕೆಂದು ಹೇಳಲು ಬೀಜವನ್ನು ಹುರಿದು ಬಿತ್ತಿಸಬೇಕಾಯಿತು. ಆ ಕೆಲಸ ಮುಗಿಸಿಕೊಂಡು ನೆಟ್ಟಗೆ ಇಲ್ಲಿಗೆ ಬರುತ್ತಿದ್ದೇನೆ” ಎಂದರು ಶ್ಯಾನುಭೋಗರು.
“ಬಿತ್ತನೆಯ ಬೀಜಗಳನ್ನು ಹುರಿಯುವುದೆಂದರೇನು ಶ್ಯಾನುಭೋಗರೇ? ಎಲ್ಲಾ ದರೂ ಹುರಿದ ಬೀಜಗಳು ಮೊಳಕೆ ಬಿಡುವುದುಂಟೇ?” ಮೂದಲಿಸಿದ ಪಟೇಲ.
ತಿಮ್ಮಯ್ಯ ತಿಂದ ಕೋಳಿ ಮರಿಯಿಡುವಾಗ ಹುರಿದ ಬೀಜಗಳು ಮೊಳಕೆ ಬಿಡಲಾರದೆ ಎಂದು ಕೊಂಡೆ ” ಎಂದರು ಶ್ಯಾನುಭೋಗರು,
ಎಲ್ಲರೂ ಗೊಳ್ಳನೆ ನಕ್ಕರು. ಪಟೇಲನನ್ನು ಎಗತಾಳಿ ಮಾಡಿದರು. ಜಮೀನುದಾರನು ಮೆಲ್ಲನೆ ಅಲ್ಲಿಂದ ಜಾರಿಕೊಂಡನು. ಅವನು ತಿಮ್ಮಯ್ಯನನ್ನು ಮತ್ತೆ ಕೋಳಿಯ ಖರೀದಿ ಕೇಳುವ ಗೋಜಿಗೆ ಹೋಗಲಿಲ್ಲ.