ನನ್ನ ಕನಸಿನ ಭಾರತ ಹೇಗಿರಬೇಕು?-ಪ್ರಬಂಧ-01

ನನ್ನ ಕನಸಿನ ಭಾರತ ಹೇಗಿರಬೇಕು?-ಪ್ರಬಂಧ-01

 

ನನ್ನ ಕನಸಿನ ಭಾರತ ಹೇಗಿರಬೇಕು? ಪೀಠಿಕೆ: ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸುತ್ತೇವೆ ಮತ್ತು ನಮ್ಮ ಈ ಪ್ರಾಚೀನ ಭೂಮಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ನಾವು ಸಮೃದ್ಧ ಮತ್ತು ಸಂತೋಷದ ಭಾರತವನ್ನು ನೋಡಲು ಬಯಸುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಭಾರತ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ಕನಸು ಇದೆ.

ವಿವರಣೆ:

ಭಾರತ ಒಂದು ಕಾಲದಲ್ಲಿ ವಿಶ್ವಗುರುವಾಗಿತ್ತು. ಇದನ್ನು ನಮಗೆ ನಾವೇ ಹೇಳಿಕೊಂಡರೆ ಅತಿಶಯೋಕ್ತಿ ಅನಿಸಬಹುದು, ಕೆಲವರಿಗೆ ಬುರುಡೆ ಅನಿಸಬಹುದು. ಭಾರತದ ಶ್ರೇಷ್ಠತೆ, ಶಕ್ತಿ ಎಂಥದು ಎಂಬುದನ್ನು ಅಮೆರಿಕದ ಖ್ಯಾತ ಲೇಖಕ ಮಾರ್ಕ್ ಟ್ರೈನ್ ಒಂದು ಶತಮಾನದ ಹಿಂದೆಯೇ ಹೀಗೆ ಹೇಳಿದ್ದಾರೆ: ‘ಭಾರತವು ಮಾನವ ಜನಾಂಗದ ತೊಟ್ಟಿಲು, ಮಾನವ ನುಡಿಯ ಜನ್ಮಸ್ಥಳ, ಇತಿಹಾಸದ ತಾಯಿ, ದಂತಕಥೆಯ ಅಜ್ಜಿ ಮತ್ತು ಸಂಪ್ರದಾಯದ ಮುತ್ತಜ್ಜಿ, ಮನುಷ್ಯನ ಇತಿಹಾಸದಲ್ಲಿ ನಮ್ಮ ಅತ್ಯಮೂಲ್ಯ ಮತ್ತು ಅತ್ಯಂತ ಕಲಾತ್ಮಕ ಸಾಮಗ್ರಿಗಳು ಭಾರತದಲ್ಲಿ ಮಾತ್ರ ಸಂಗ್ರಸಲ್ಪಟ್ಟಿವೆ.”

ಶತಮಾನಗಳ ಕಾಲದ ದುರಾಡಳಿತದಿಂದಾಗಿ ಕುಸಿದಿದ್ದ ಭಾರತವನ್ನು ನಾವು ಈಗ ಮತ್ತೆ ವಿಶ್ವಗುರುವಾಗಿಸುವ ಕನಸು ಕಾಣುತ್ತಿದ್ದೇವೆ. ಗುರು ಎಂದರೆ ಶಕ್ತಿ, ಸಾಮರ್ಥ್ಯ, ಸಮೃದ್ಧಿ, ಕೌಶಲ, ಚತುರತೆ, ಬುದ್ದಿವಂತಿಕೆಗಳ ಸಂಗಮ. ಭಾರತ ಈಗ ಈ ಎಲ್ಲ ಗುಣಗಳ, ಸಾಮರ್ಥ್ಯಗಳ ಖನಿಯಾಗಿ ರೂಪುಗೊಳ್ಳುತ್ತಿದೆ.

ಮೇಲು-ಕೀಳು ಎಂಬ ಭಾವನೆಗಳಿಂದ ಮುಕ್ತವಾದ, ಮನುಷ್ಯನ ಘನತೆ, ಅವನ ಸ್ವಾತಂತ್ರ್ಯ, ಅವನ ಶಕ್ತಿ ಸಾಮರ್ಥ್ಯಗಳ ಬೆಳವಣಿಗೆಗೆ ವಿಪುಲ ಅವಕಾಶಗಳಿರುವ ಹೊಸ ಭಾರತೀಯ ಸಮಾಜವನ್ನು ಹೊಂದುವುದು ಸ್ವಾಮಿ ವಿವೇಕಾನಂದರ ಕನಸಾಗಿತ್ತು.

ರವೀಂದ್ರನಾಥ ಟಾಗೋ‌ರ್ ಅವರು ‘ವೇರ್ ದಿ ಮೈಂಡ್ ಈಸ್ ವಿಥೇಟ್ ಫಿಯರ್’ ಎಂಬ ಕವನದಲ್ಲಿ ತಮ್ಮ ಕನಸಿನ ಭಾರತ ಹೇಗಿರಬೇಕು ಎಂದು ಅದ್ಭುತವಾಗಿ ವಿವರಿಸಿದ್ದಾರೆ.

ಈ ಎಲ್ಲ ಮಹನೀಯರು ತಮ್ಮ ಕಾಲದಲ್ಲಿ ತಾವು ನೋಡಬ ಯಸಿದ್ದ ಭಾರತದ ಕುರಿತಾಗಿ ಕನಸನ್ನು ಕಂಡಿದ್ದಂತೆಯೇ ನನಗೂ ಕೂಡ ನನ್ನ ಭಾರತ ಹೇಗಿರಬೇಕೆಂಬ ಕನಸಿದೆ. ಅದರ ವಿವರಣೆ ಇಲ್ಲಿದೆ.

ಶಿಕ್ಷಣ:

ಮೌಲ್ಯಗಳನ್ನು ತುಂಬುವ ಮತ್ತು ಎಲ್ಲರಿಗೂ ಜೀವನೋಪಾ ಯಕ್ಕೆ ಬೇಕಾಗುವ ಕೌಶಲಗಳನ್ನು ನೀಡುವ ಗುಣಮಟ್ಟದ ಶಿಕ್ಷಣ ಲಭ್ಯವಿರುವ ದೇಶವಾಗಿ ನಾನು ಭಾರತವನ್ನು ನೋಡಬಯಸುತ್ತೇನೆ. ಶಿಕ್ಷಣವೆಂದರೆ ಕೇವಲ ಓದು ಬರಹವಲ್ಲ, ಅದು ಜೀವನ ವಿಧಾನವಾ ಗಬೇಕು. ಶೈಕ್ಷಣಿಕ ಸಂಸ್ಥೆಗಳು ಪದವಿ ಪತ್ರ ನೀಡುವ ಕಾರ್ಖಾನೆಗಳಾ ಗದೆ, ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿ ಒಂದಿಲ್ಲ ಒಂದು ಉತ್ಪಾದಕ ಉದ್ಯೋಗವನ್ನು ಕೈಗೊಳ್ಳಲು ನೆರವಾಗುವಂತಿರಬೇಕು.

ಮಹಿಳಾ ಸಬಲೀಕರಣ:

ನನ್ನ ಕನಸಿನ ಭಾರತದಲ್ಲಿ ಮಹಿಳೆಯರನ್ನು ಎಲ್ಲೆಡೆ ಗೌರವಿಸಬೇಕು. ಅವರಿಗೆ ಪುರುಷರಿಗೆ ಸಮಾನವಾದ ಅಧಿ ಕಾರ, ಸವಲತ್ತುಗಳು ಹಾಗೂ ಹಕ್ಕುಗಳನ್ನು ನೀಡಬೇಕು. ಅವರನ್ನು ಕುಟುಂಬದ ಅತ್ಯಂತ ಪ್ರಮುಖ ಸದಸ್ಯರನ್ನಾಗಿ ಪರಿಗಣಿಸಬೇಕು. ಅಲ್ಲಿ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಂತಿರಬೇಕು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರಬೇಕು. ಅತ್ಯಾಚಾರ, ದೈಹಿಕ ಹಲ್ಲೆ, ಅಪಹರಣ, ಆಸಿಡ್ ದಾಳಿ, ಕೌಟುಂಬಿಕ ಹಿಂಸೆ, ವರದಕ್ಷಿಣೆ ವ್ಯವಸ್ಥೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳ ಬಗ್ಗೆ ಚಿಂತಿಸಬೇಕಾಗಿಲ್ಲದ ಸುರಕ್ಷಿತ ವಾತಾವರಣವನ್ನು ಅವರಿಗೆ ನೀಡಬೇಕು. ಅವರು ತಮ್ಮ ಸಂಪೂರ್ಣ ಸಾಮರ್ಥ್ಯ ಮತ್ತು ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಲು ಸುರಕ್ಷಿತ ಭಾವನೆ. ಹೊಂದಿರಬೇಕು. ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುವ ವಾತಾವರಣ ಇರಬೇಕು.

ಭ್ರಷ್ಟಾಚಾರ ಮುಕ್ತ ಭಾರತ:

ನಮ್ಮ ದೇಶದ ಅಭಿವೃದ್ಧಿಯ ಹಾದಿಯಲ್ಲಿ ಭ್ರಷ್ಟಾಚಾರವು ದೊಡ್ಡ ಅಡಚಣೆಯಾಗಿದೆ. ಭ್ರಷ್ಟಾಚಾರವು ಕೇವಲ ಸರಕಾರ, ರಾಜಕೀಯ ವ್ಯವಸ್ಥೆ, ಅಧಿಕಾರಿ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ; ಅದು ಸಮಾಜವ್ಯಾಪಿಯಾಗಿದೆ. ಕೇವಲ ಇತರರತ್ತ ಬೆರಳು ತೋರಿದರೆ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ. ಪ್ರತಿಯೊಬ್ಬರು ಪ್ರಾಮಾಣಿಕತೆಯನ್ನು ಒಂದು ಮೌಲ್ಯ ಎಂದು ಗೌರವಿಸಿ ಅಳವಡಿಸಿಕೊಳ್ಳಬೇಕು. ನನ್ನ ಕನಸಿನ ಭಾರತ ಭ್ರಷ್ಟಾಚಾರ ಮುಕ್ತವಾಗಿರಬೇಕು.

ಉದ್ಯೋಗಾವಕಾಶಗಳು:

ಯುವಜನರಿಗೆ ಉದ್ಯೋಗಾವಕಾಶ ಗಳನ್ನು ಸೃಷ್ಟಿಸುವುದು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಮುಖ ಅಂಶಗಳಲ್ಲಿ ಒಂದು. ನಾನು ಕನಸು ಕಾಣುವ ಭಾರತದಲ್ಲಿ ಯುವಜನರಿಗೆ ಅಗಾಧ ಅವಕಾಶಗಳಿರಬೇಕು. ಒಬ್ಬ ವ್ಯಕ್ತಿಯು ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಬೇಕು.

ಉದ್ಯೋಗಕ್ಕಾಗಿ ಸರಕಾರದತ್ತ ಮುಖಮಾಡದೇ ಸ್ವಯಂ ಉದ್ಯೋಗಿಗಳಾಗುವತ್ತ, ಉದ್ಯಮಿಗಳಾಗುವತ್ತ ಗಮನಹರಿಸ ಬೇಕು. ಇದು ಭಾರತವು ಉನ್ನತ ಸ್ಥಾನ ತಲುಪಲು ನೆರವಾಗುತ್ತದೆ.

ಸ್ವಚ್ಛ ಹಸಿರು ಮತ್ತು ಮಾಲಿನ್ಯ ಮುಕ್ತ ಪರಿಸರ: ನನ್ನ ಕನಸಿನ ಭಾರತವು ಸ್ವಚ್ಛಮತ್ತು ಆರೋಗ್ಯಕರ ಪರಿಸರವನ್ನು ಹೊಂದಿರಬೇಕು. ಜನರು ಹಸಿರಿನಿಂದ ಕಂಗೊಳಿಸುವ, ತಾಜಾ ಗಾಳಿ ಸಿಗುವ, ಮಾಲಿನ್ಯ ಮುಕ್ತ ಪರಿಸರದಲ್ಲಿ ಆನಂದದಿಂದ ಬದುಕುವಂತಾಗಬೇಕು. ಸ್ವಚ್ಛತೆ – ಮತ್ತು ನೈರ್ಮಲ್ಯದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತಿರಬೇಕು.

ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಗತಿ:

ಇಂದು ಅಭಿವೃದ್ಧಿ ಹೊಂದಿದ ದೇಶಗಳೆಂದು ಕರುಸಿಕೊಳ್ಳುವ ರಾಷ್ಟ್ರಗಳು ಇನ್ನೂ ಅನಾಗರಿಕತೆಯಲ್ಲಿ ಉರುಳಾಡುತ್ತಿರುವಾಗಲೇ ಐದು ಸಾವಿರ ವರ್ಷಗಳ ಹಿಂದೆಯೇ ಭಾರತ ನಾಗರಿಕತೆಯ ಉತ್ತುಂಗವನ್ನು ತಲುಪಿತ್ತು ಎಂಬುದು ನಮಗೆಲ್ಲ ಪ್ರೇರಕ ಶಕ್ತಿಯಾಗಬೇಕು. ಆಧ್ಯಾತ್ಮದ ಬೆಳಕಿನಲ್ಲಿ ವೈಜ್ಞಾನಿಕ ಪ್ರಗತಿಯು ವೇಗ ಪಡೆದುಕೊಳ್ಳಬೇಕು. ಜ್ಞಾನದ ಗುರಿ ಮಾನವನ ಉದ್ಧಾರ ಎಂಬುದನ್ನು ನಾವು ಜಗತ್ತಿಗೆ ಸಾರಿ ಹೇಳಬೇಕು.

ಶಾಂತಿ, ಸಹಿಷ್ಣುತೆ:

ಜಗತ್ತಿನಲ್ಲಿರುವುದೆಲ್ಲ ಭಾರತದಲ್ಲಿದೆ. ಭಾರತದಲ್ಲಿ ಇರಲಾರದ್ದು ಜಗತ್ತಿನಲ್ಲಿ ಇಲ್ಲ ಎಂಬ ಮಾತಿನಂತೆ ಭಾರತವು ಧರ್ಮ, ಜಾತಿ, ಭಾಷೆ, ಜನಾಂಗ ಇತ್ಯಾದಿಗಳ ವಿಷಯದಲ್ಲಿ – ವೈವಿಧ್ಯತೆಯ ತವರೂರಾಗಿದೆ. ವೈವಿಧ್ಯತೆ ಇರುವಲ್ಲಿ ಶಾಂತಿ ಕದಡುವ, ಸಂಘರ್ಷದ ಸಾಧ್ಯತೆ ಇದ್ದೇ ಇರುತ್ತದೆ. ಇದು ದೇಶದ ಪ್ರಗತಿಗೆ ಮಾರಕವಾಗುತ್ತದೆ. ಆದ್ದರಿಂದ, ನಾವು ಭಾರತೀಯರು ಪರಸ್ಪರ ಸಹೋದರರಂತೆ ಬದುಕಬೇಕು.

ಸ್ವಾವಲಂಬಿ, ಸಮೃದ್ಧ ಭಾರತ:

ನನ್ನ ಭಾರತದ ಕುರಿತ ಅತ್ಯಂತ`ದೊಡ್ಡ ಕನಸೆಂದರೆ, ಅದು ಸ್ವಾವಲಂಬಿಯಾಗಿ, ಸಮೃದ್ಧವಾಗಿ ಬೆಳೆಯಬೇಕು. ಎಲ್ಲ ಕ್ಷೇತ್ರಗಳಲ್ಲಿ ಉತ್ಪಾದನೆ, ಉದ್ಯೋಗ, ಆದಾಯಗಳು ಹೆಚ್ಚಾಗಬೇಕು. ಬಡತನ, ಹಸಿವು ಸಂಪೂರ್ಣವಾಗಿ ತೊಲಗಬೇಕು. ರಫ್ತುಗಳು ಆಮದುಗಳನ್ನು ಮೀರಬೇಕು. ಪ್ರತಿಭಾ ಪಲಾಯನ ನಿಲ್ಲಬೇಕು. ಜಗತ್ತು ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತಾಗಬೇಕು.

ಉಪಸಂಹಾರ:

ಎಲ್ಲರಿಗೂ ಸಮಾನ ಅವಕಾಶಗಳಿರುವ, ಶಾಂತಿ,ಸಮೃದ್ಧಿಗಳಿಂದ ತುಂಬಿರುವ, ಸತ್ಯದ ನೆಲೆವೀಡಾಗಿರುವ, ಮಳೆಯರನ್ನು ಗೌರವಿಸುವ, ಎಲ್ಲಾ ಧರ್ಮಗಳ ಜನರು ಸಹಬಾಳ್ವೆ ನಡೆಸುವ, ಹಿಂಸೆ, ಭಯೋತ್ಪಾದನೆ, ಹಸಿವು ಮತ್ತು ಸಂಕಟಗಳಿಂದ ಮುಕ್ತವಾಗಿರುವ, ಭಾರತೀಯನಾಗಿರುವುದಕ್ಕೆ ಪ್ರತಿಯೊಬ್ಬ ನಾಗರಿಕನು ಹೆಮ್ಮೆ ಪಡುವ ದೇಶವಾಗಿ ಭಾರತ ರೂಪುಗೊಳ್ಳಬೇಕೆಂಬುದು ನನ್ನ ಕನಸಾಗಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!