ಯುಕ್ತಿಶಾಲಿ- ಸುಂದರವಾದ ಕಥೆ
ಒಂದು ಊರಿನಲ್ಲಿ ಬಡದಂಪತಿಗಳು ಇದ್ದರು. ಅವರಿಗೆ ಒಬ್ಬ ಮಗ, ಒಬ್ಬ ಮಗಳು, ತಂದೆ ಕೂಲಿನಾಲಿ ಮಾಡುತ್ತಿದ್ದ. ತಾಯಿ ಕೊಟ್ಟಿ ಕುಟ್ಟಿ ಹಿಡಿ ಕಾಳು ತರು ತಿದ್ದಳು. ಮಗ ಕಾಡಿಗೆ ಹೋಗಿ ಉಡ ಗಳನ್ನು ಬೇಟೆಯಾಡಿ ತಂದು ಪಟ್ಟಣದಲ್ಲಿ ಮಾರುತ್ತಿದ್ದ. ಹುಡುಗಿ ಮನೆಯಲ್ಲಿದ್ದು ಮೂವರು ತಂದಿದ್ದನ್ನು ಅಡಿಗೆ ಮಾಡಿ ಸಿದ್ಧ ಮಾಡಿ ಇಡುತ್ತಿದ್ದಳು.
ಆ ಕುಟುಂಬದಲ್ಲಿ ಹುಡುಗಿ ಬಲು ಚುರುಕು,ಯುಕ್ತಿವಂತೆ. ಒಂದು ದಿನ ತಂದೆಯ ಹತ್ತಿರ ಹೋಗಿ ಅಪ್ಪಾ, ಹೀಗೆ ನೀವು ಎಷ್ಟು ದಿನ ಕಷ್ಟಪಟ್ಟರೂ ಹೊಟ್ಟೆ ತುಂಬುವಂತಿಲ್ಲ. ಶೆಟ್ಟರ ಹತ್ತಿರ ಹೋಗಿ ನೂರು ರೂಪಾಯಿ ಸಾಲ ತಂದು ವ್ಯಾಪಾರ ಮಾಡಿರಿ, ದೇವರ ದಯೆಯಿಂದ ಲಾಭ ಬಂದರೆ ಒಂದು ನಿಮಿಷದಲ್ಲಿ ಸಾಲ ತೀರಿಸಬಹುದು ‘ ಎಂಬುದಾಗಿ ಸಲಹೆ ಕೊಟ್ಟಳು.
ಅದಕ್ಕೆ ಆತನು ಮಗೂ, ನಿನ್ನ ಸಲಹೆ ಸೂಕ್ತವಾಗಿದೆ. ಆದರೆ ಸಾಲ ಮಾಡಿದರೆ ಅದನ್ನು ತೀರಿಸುವ ಮಾರ್ಗ ಯಾವುದು? ಶೆಟ್ಟಿ ಸಾಮಾನ್ಯನಲ್ಲ. ಈಗ ಒಳ್ಳೆ ಮಾತೇನೋ ಆಡುತ್ತಾನೆ. ನಾಳೆ ವಾಯಿದೆ ತೀರಿದ ಕೂಡಲೇ ಆಡಬಾರದ ಮಾತುಗಳನ್ನು ಆಡುವನು, ಜಗಳಕ್ಕೆ ಎಳೆಯುವನು. ಈ ಕಾರ್ಕೋಟಕನ ಬಾಧೆ ನಾವು ತಾಳಲಾರೆವು. ಆದರೂ ಸಾಲಮಾಡಿ ಉಣ್ಣುವುದು ಒಳ್ಳೆಯದೇ ? ಮಗು’ ಎಂದ.
ಅಪ್ಪಾ, ನೀವೇನೂ ಭಯಪಡಬೇಡಿ ಒಂದು ತಿಂಗಳ ವಾಯಿದೆಗೆ ನೂರು ರೂಪಾಯಿ ಶೆಟ್ಟರ ಹತ್ತಿರ ಸಾಲಮಾಡಿ, ಪಟ್ಟಣಕ್ಕೆ ಹೋಗಿ ಸರಕು ತೆಗೆದುಕೊಂಡು ಬನ್ನಿ. ನಾನು ಎಲ್ಲಾ ಇಲ್ಲಿ ನೋಡಿಕೊಳ್ಳು ವೆನು!’ ಎಂದು ಧೈರ್ಯ ಹೇಳಿದಳು ಹುಡುಗಿ,
ಮಗಳು ಇಷ್ಟು ಧೈಯ್ಯದಿಂದ ಏಕೆ ಹೇಳು ತಿರುವಳೋ, ನೋಡೋಣವೆಂದು ಆತನು ಶೆಟ್ಟಿಯ ಹತ್ತಿರಕ್ಕೆ ಹೋಗಿ ನೂರು ರೂಪಾಯಿ ಸಾಲ ಪಡೆದ, ಸರಕು ತರಲು ಪಟ್ಟಣಕ್ಕೆ ಹೋದ. ಆದರೆ ವಾಯಿದೆಗೆ ಮೊದಲು ಆತ ಹಿಂದಿರುಗಲು ಆಗಲಿಲ್ಲ.
ಸರಿಯಾಗಿ ಮೂವತ್ತು ದಿನಗಳು ಪೂರ್ತಿ ಯಾದ ಕೂಡಲೇ ಶೆಟ್ಟಿ ಅವರ ಮನೆ ಮುಂದೆ ಪ್ರತ್ಯಕ್ಷನಾದ. ಶೆಟ್ಟಿ ಬರುವ ವೇಳೆಗೆ ಮನೆಯಲ್ಲಿ ಹುಡುಗಿ ಮಾತ್ರ ಇದ್ದಳು.
ನಿಮ್ಮಪ್ಪ ಎಲ್ಲಿ ? ಎಂದು ಕೇಳಿದ ಶೆಟ್ಟಿ. ‘ಊರಿಗೆ ಹೋಗಿದ್ದಾರೆ’ ಎಂದು ಹುಡುಗಿ ಹೇಳಿದಳು.
ಯಾವಾಗ ಬರುತ್ತಾನೆ’ ಎಂದ ಶೆಟ್ಟಿ. ಬಂದರೆ ಬರೋಲ್ಲ, ಬರದಿದ್ದರೆ ಬರುತ್ತಾರೆ? ಎಂದು ನಿಧಾನವಾಗಿ ಉತ್ತರ ಕೊಟ್ಟಳು.
ಈ ರೀತಿ ಜವಾಬು ಕೇಳಿ ಶೆಟ್ಟಿಗೆ ಕೋಪ ನೆತ್ತಿಗೆ ಏರಿತು.
“ಸರಿ ನಿಮ್ಮ ತಾಯಿ ಎಲ್ಲಿ?” ಕೋಪದಿಂದ ಕೇಳಿದ.
“ನಮ್ಮ ತಾಯಿ ಕರಡ ಮನೆಗೆ ಭತ್ತ ಕುಟ್ಟಲು ಹೋದಳು’ ಎಂದಳು.
ಈ ಮಾತುಗಳು ಶೆಟ್ಟಿಗೆ ಅರ್ಥವಾಗಲಿಲ್ಲ. ಹುಡುಗಿ ತನ್ನನ್ನು ಹಾಸ್ಯ ಮಾಡುತ್ತಿರುವ ಳೆಂದು ಭಾವಿಸಿದ. ‘ಸರಿ, ಸರಿ ನಿಮ್ಮ ಅಣ್ಣ ಏನಾದ?’ ಎಂದು ಕೋಪದಿಂದ ಕಿರಿಚಿದ.
ಅದಕ್ಕೆ ಹುಡುಗಿ ನಗುತ್ತಾ ‘ನಮ್ಮ ಅಣ್ಣ ಕಾಲಿಲ್ಲದ ಕುದುರೆ ಹತ್ತಿ, ಕೂದಲಿಲ್ಲದ ಪ್ರಾಣಿಯನ್ನು ಬೇಟೆ ಆಡಲು ಹೋದನು” ಎಂದಳು.
ಶೆಟ್ಟಿಗೆ ಈ ಸಾರಿ ಕೋಪ ತಡೆಯಲು ಆಗಲಿಲ್ಲ. ( ಈ ದರಿದ್ರರಿಗೆ ಇಷ್ಟೊಂದು ಸೊಕ್ಕೇ ? ಎಂದುಕೊಂಡು ರಾಜನ ಹತ್ತಿರ ಹೋಗಿ ದೂರು ಕೊಟ್ಟ. ರಾಜರು ಆ ಹುಡುಗಿಯನ್ನು ಕರೆಸಿ ವಿಚಾರಣೆ ಮಾಡಿದರು.
ಅದಕ್ಕೆ ಆ ಹುಡುಗಿ ‘ಮಹಾಪ್ರಭು ! ನಾನು ಹೇಳಿದ ಮಾತುಗಳಲ್ಲಿ ಒಂದೂ ತಪ್ಪಿಲ್ಲ. ಶೆಟ್ಟರಿಗೆ ನನ್ನ ಮಾತುಗಳು ಅರ್ಥ ಆದವೋ, ಇಲ್ಲವೋ?! ಎಂದಳು.
“ಮತ್ತೆ ಹಾಗಿದ್ದರೆ ನಿನ್ನ ಉತ್ತರಗಳಿಗೆ ಅರ್ಥ ಹೇಳು’ ಅಂದರು ರಾಜರು.
‘ಮಹಾರಾಜ, ನಮ್ಮ ತಂದೆ ಹೋದ ಊರಿಗೂ, ನಮ್ಮ ಊರಿಗೂ ಮಧ್ಯೆ ಒಂದು ಸಣ್ಣ ನದಿ ಇದೆ. ಅದು ತಗ್ಗು ಪ್ರದೇಶ, ಆದ್ದರಿಂದ ಒಂದು ಹನಿ ಬಿದ್ದರೆ ನೀರು ತುಂಬಿ ಹರಿಯುತ್ತದೆ. ಒಂದು ವೇಳೆ ನಮ್ಮ ತಂದೆ ಹೊರಟ ಸಮಯಕ್ಕೆ ಮಳೆ ಬಂದರೆ ನದಿ ಪ್ರವಾಹ ಬಂದು ದಾಟಲು ಅಡಚಣೆಯಾಗು ಇದೆ. ಆದ್ದರಿಂದ ಬಂದರೆ ಬರೋಲ್ಲ, ಬರದಿದ್ದರೆ ಬರ್ತಾನೆ, ಎಂದೆ’ ಎಂದು ಹೇಳಿ ನಗುಮುಖ ಮಾಡಿದಳು.
“ಕರಡ ಮನೆಯೇನು? ಭತ್ತ ಕುಟ್ಟುವುದೇನು?’ ಎಂದು ರಾಜರು ಕೇಳಿದರು. ಅದಕ್ಕೆ ಕರಡ ಎಂಬ ಮನೆ ಹೆಸರಿನ ಧನವಂತರಿದ್ದಾರೆ. ಅವರ ಮನೆಯಲ್ಲಿ ಭತ್ತ ಕುಟ್ಟಲು ನಮ್ಮ ತಾಯಿ ಹೋದಳು.’ ಎಂದು ಹೇಳಿದ ಈ ಮಾತು ಬಹುಶಃ ಅರ್ಥಮಾಡಿ ಕೊಂಡಿರಲಾರರು ಶೆಟ್ಟರು.’ ಎಂದಳು.
“ಕಾಲಿಲ್ಲದ ಕುದುರೆ ಇದೆಯೆ? ಏನು ಅದರ ಅರ್ಥ’ ಎಂದು ಕೇಳಿದರು ರಾಜರು. “ನಿಮ್ಮ ಅಣ್ಣ ಎಲ್ಲಿ’ ಎಂದು ಕೇಳಿದರು ಶೆಟ್ಟರು. ನಮ್ಮ ಅಣ್ಣ ಚಿಕ್ಕಂದಿನಿಂದಲೂ, ಜೋಡು ಹಾಕಿಕೊಂಡು ಉಡಗಳ ಬೇಟೆಗೆ ಹೋಗುವುದು ವಾಡಿಕೆ. ಕಾಲಿಲ್ಲದ ಕುದುರೆ ಎಂದರೆ ಜೋಡು. ಉಡಕ್ಕೆ ಕೂದಲು ಇರುವುದಿಲ್ಲ, ಅಲ್ಲವೆ? ಆದ್ದರಿಂದ ಕೂದಲಿಲ್ಲದ ಪ್ರಾಣಿಯನ್ನು ಬೇಟೆಯಾಡಲು ಹೋದ ‘ ಎಂದು ಹೇಳಿದೆ. ಇದರಲ್ಲಿ ತಪ್ಪೇನೂ ಇಲ್ಲ” ಎಂದಳು.
ಹುಡುಗಿಯ ತಿಳುವಳಿಕೆಗೆ ಯುಕ್ತಿಗೆ ರಾಜರು ಮೆಚ್ಚಿ, ಶೆಟ್ಟಿಗೆ ವೃಥಾ ದೂರು ತಂದದಕ್ಕೆ ನೂರು ರೂಪಾಯಿ ಜುಲ್ಮಾನೆ ವಿಧಿಸಿ, ಆ ಹಣವನ್ನು ಹುಡುಗಿಗೆ ಬಹು ಮಾನ ಮಾಡಿದರು. ಮಹಾರಾಜರ ಸಾನ್ನಿಧ್ಯದಲ್ಲೇ ಅದೇ ನೂರು ರೂಪಾಯಿಗಳನ್ನು ಆಕೆ ಶೆಟ್ಟರಿಗೆ ಹಿಂದಕ್ಕೆ ಕೊಟ್ಟು, ಸಾಲ ತೀರಿಸಿದಳು.
ಪಟ್ಟಣಕ್ಕೆ ಹೋಗಿದ್ದ ತಂದೆ ಸರಕುಗಳೊಂದಿಗೆ ಮರುದಿನವೇ ಮನೆಗೆ ಬಂದರು, ತಮ್ಮ ಮಗಳ ಉಪಾಯವನ್ನು ಕೇಳಿದರು. ಬಹಳ ಸಂತೋಷಪಟ್ಟರು.