189 Computer Lab in High Schools – Other Cabinet Decisions.

Cabinet Decisions.

 

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ (ಟಿಎಎಲ್‌ಪಿ) ವಿಸ್ತರಣೆ ಭಾಗವಾಗಿ 189 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಾದರಿ ಕಂಪ್ಯೂಟರ್ ಲ್ಯಾಬ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಪಡೆಯುವ ಅವಕಾಶ ಒದಗಿ ಬರಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಜತೆಗೆ, ಡಿಎಸ್‌ಇಆರ್‌ಟಿ ನಿರ್ದೇಶನದಂತೆ ಕೊಠಡಿಗಳನ್ನು ಸ್ಥಾಪಿಸಲಾಗುತ್ತದೆ. ರಾಜ್ಯದ ಹಲವು ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದಲ್ಲದೆ, 74 ಆದರ್ಶ ವಿದ್ಯಾಲಯ ಮೇಲ್ದರ್ಜೆಗೆ ಹಾಗೂ ಬೆಂಗಳೂರಿನ ಯುವಿಸಿಇಗೆ 50 ಎಕರೆ ಭೂಮಿ ಹಾಗೂ 500 ಕೋಟಿ ರೂ. ಒದಗಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.

74 ಆದರ್ಶ ವಿದ್ಯಾಲಯಗಳಲ್ಲಿ ದ್ವಿತೀಯ ಪಿಯುವರೆಗೂ ಬೋಧನೆ

ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗುಣಾತ್ಮಕ ಶಿಕ್ಷಣವನ್ನು ನೀಡುವ ಆದರ್ಶ ವಿದ್ಯಾಲಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರಸ್ತುತ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ 74 ಬ್ಲಾಕ್‌ಗಳಲ್ಲಿ ಈ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಇದೀಗ ಇಲ್ಲಿ ದ್ವಿತೀಯ ಪಿಯುವರೆಗೆ ಬೋಧನೆಗೆ ಅನುಕೂಲವಾಗುವಂತೆ ಈ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಣ ಮಾಡಲಾಗುತ್ತದೆ.

ಯುವಿಸಿಇಗೆ 50 ಎಕರೆ ಭೂಮಿ 500 ಕೋಟಿ ರೂ. ಅನುದಾನ

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಯೂನಿವರ್ಸಿಟಿ ಕಾಲೇಜ್ ಆಫ್‌ ಇಂಜಿನಿಯರಿಂಗ್‌ಗೆ (ಯುವಿಸಿಇ) ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 50 ಎಕರೆ ಭೂಮಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಐಐಟಿ ಮಾದರಿಯಲ್ಲಿ ಕಟ್ಟಡ ಹಾಗೂ ಇತರ ಮೂಲಸೌಕರ್ಯಗಳನ್ನು ಯುವಿಸಿಜಿಇಗೆ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸುಸಜ್ಜಿತ ಕ್ಯಾಂಪಸ್ ಸ್ಥಾಪನೆಗೆ 500 ಕೋಟಿ ರೂ.ಗಳನ್ನು ಒದಗಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಂಪುಟದ ಇತರ ನಿರ್ಧಾರಗಳು

  • ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ಹಾಸ್ಟೆಲ್‌ಗೆ 20 ಗುಂಟೆ ಜಾಗ
  • ಯಾದಗಿರಿ ವೀರಶೈವ ವಸತಿ ನಿಲಯ, ಸಾಂಸ್ಕೃತಿಕ ಭವನಕ್ಕೆ 3 ಸಾವಿರ ಚದರಡಿ ಜಾಗ ನೀಡಲು ಒಪ್ಪಿಗೆ
  • ಕಾರವಾರದ ಡಿಯೋಸಿನ್ ಎಜುಕೇಶನ್ ಸೊಸೈಟಿಗೆ 5 ಎಕರೆ ಗುತ್ತಿಗೆ ಜಾಗ
  • ರಾಜ್ಯಪಾಲರಿಗೆ ಮಾಹಿತಿ ಕಳುಹಿಸುವ ಮುನ್ನ ಸಂಪುಟದಲ್ಲಿ ಚರ್ಚೆ ಕಡ್ಡಾಯ
  • ರಾಜ್ಯದಲ್ಲಿ ಕೇಂದ್ರದ ತನಿಖಾ ಸಂಸ್ಥೆ ಸಿಬಿಐ ಮುಕ್ತ ತನಿಖೆಗೆ ಅವಕಾಶವಿಲ್ಲ
  • ಕಸ್ತೂರಿ ರಂಗನ್ ವರದಿಗೆ ಸರ್ಕಾರದ ಉತ್ತರ

 

Leave a Comment