7th Pay Commission:Revision of Pension and Pensionary Benefits of State Government Employees.
7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಮುಂದುವರೆದು, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು ಮೇಲೆ (4)ರಲ್ಲಿ ಓದಲಾದ ದಿನಾಂಕ: 23.08.2024ರಲ್ಲಿ ವಿಸ್ತ್ರತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿ ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ ಅಂಗೀಕರಿಸಿರುವಂತೆ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಈ ಕೆಳಕಂಡಂತೆ ಆದೇಶಗಳನ್ನು ಹೊರಡಿಸಲು ಸರ್ಕಾರವು ಹರ್ಷ ವ್ಯಕ್ತಪಡಿಸುತ್ತದೆ.
ರಾಜ್ಯ ಸರ್ಕಾರವು ರಚಿಸಿದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯನ್ನು ಈ ಕೆಳಕಂಡಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.
1. ಕನಿಷ್ಠ ನಿವೃತ್ತಿ ವೇತನ ಬಗ್ಗೆ:
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ವಯ ಸಂದರ್ಭಾನುಸಾರ ಲಭ್ಯವಿರುವ ಈ ಕೆಳಕಂಡ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ.13,500/-ಗಳಿಗೆ ಪರಿಷ್ಕರಿಸತಕ್ಕದ್ದು.
A. ವಯೋ ನಿವೃತ್ತಿ ವೇತನ
B. ವಿಶ್ರಾಂತಿ ನಿವೃತ್ತಿ ವೇತನ
C. ಅಶಕ್ತತಾ ನಿವೃತ್ತಿ ವೇತನ
D ಪರಿಹಾರ ನಿವೃತ್ತಿ ವೇತನ
E. ಅನುಕಂಪ ಭತ್ಯೆ
2. ಗರಿಷ್ಠ ನಿವೃತ್ತಿ ವೇತನ ಬಗ್ಗೆ:
ಅ. ಮೇಲಿನ ಕಂಡಿಕೆ-1 ರಲ್ಲಿ ನಿರ್ಧಿಷ್ಟಪಡಿಸಿರುವ ವಿವಿಧ ರೀತಿಯ ನಿವೃತ್ತಿ ವೇತನಗಳ ಗರಿಷ್ಠ ಮೊತ್ತದ ಪರಿಮಿತಿಯನ್ನು ಪ್ರಸ್ತುತ ಮಾಹೆಯಾನ ರೂ. 75,300/- ಗಳಿಂದ ಮಾಹೆಯಾನ ₹.1,20,600/-ಗಳಿಗೆ ಪರಿಷ್ಕರಿಸತಕ್ಕದ್ದು,
ಬ. ಕೆಲವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 210 ರಡಿ ಮಂಜೂರು ಮಾಡಲಾಗುವ ತಾರ್ತಿಕ (ಅಡ್ ಹಾಕ್) ನಿವೃತ್ತಿ ವೇತನದ ಪರಿಮಿತಿಯು ಮಾಹೆಯಾನ ರೂ.13,500/-ಗಳನ್ನು ಮೀರತಕ್ಕದ್ದಲ್ಲ.
3. ಕುಟುಂಬ ನಿವೃತ್ತಿ ವೇತನ ಬಗ್ಗೆ:
ಅ. ಸರ್ಕಾರಿ ನೌಕರರ ಅವಲಂಬಿತರಿಗೆ ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತವು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ. 13,500/- ಗಳಿಗೆ ಪರಿಷ್ಕರಿಸತಕ್ಕದ್ದು.
ಬ. ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯು ಪ್ರಸ್ತುತ ಮಾಹೆಯಾನ ರೂ. 45,180/- ರಿಂದ ಮಾಹೆಯಾನ ರೂ. 80,400/-ಗಳಿಗೆ ಪರಿಷ್ಕರಿಸತಕ್ಕದ್ದು.
ಕ. ಈ ಮೇಲಿನ ಪರಿಮಿತಿಯ ಮಿತಿಗೊಳಪಟ್ಟು ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಮೊತ್ತವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಡಿ ಲಭ್ಯವಾಗುವ ಕುಟುಂಬ ನಿವೃತ್ತಿ ವೇತನದ ಉಪಲಬ್ದಗಳ ಶೇ. 30ರಷ್ಟು ಇರತಕ್ಕದ್ದು.
ಡ. ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರ ಅವಕಾಶಗಳಂತೆ, ದಿನಾಂಕ: 01.07.2022 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಮೃತ ಸರ್ಕಾರಿ ನೌಕರನ ಅವಲಂಬಿತರು ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ಮೊತ್ತವನ್ನು ದಿನಾಂಕ: 01.08.2024ರಿಂದ ಪಡೆಯಲು ಅರ್ಹರಿರುತ್ತಾರೆ..
ಇ. ದಿನಾಂಕ: 01.07.2022ರ ಪೂರ್ವದಲ್ಲಿ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿದ್ದ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಈ ಆದೇಶದ ಅನುಬಂಧದಲ್ಲಿ ತೋರಿಸಿರುವಂತೆ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಲಭ್ಯವಿರುತ್ತದೆ.
4. ತುಟ್ಟಿ ಭತ್ಯೆ ಬಗ್ಗೆ.
ಅ. ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು ದಿನಾಂಕ: 1ನೇ ಜುಲೈ 2022 ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ಕುಟುಂಬ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು ದಿನಾಂಕ: 1ನೇ ಜನವರಿ 2023ರಿಂದ ಲೆಕ್ಕಹಾಕಿ ಈ ಕೆಳಗೆ ತಿಳಿಸಿರುವ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.
ಬ. ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸತಕ್ಕದ್ದು ಅದರಂತೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಈ ಕೆಳಕಂಡಂತೆ ಕಾಲ್ಪನಿಕವಾಗಿ ಕ್ರಮಬದ್ಧಗೊಳಿಸತಕ್ಕದ್ದು:
01.07.2023 -ಶೂನ್ಯ
01.01.2023 – 2.75% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ
01.07.2023– 5.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ
01.01.2024– 8.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ.
ಕ. ಮುಂದಿನ ತುಟ್ಟಿ ಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು.
ಡ. ತುಟ್ಟಿ ಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈರಿಂದ ಅನ್ವಯಿಸುವಂತೆ ವರ್ಷಕ್ಕೆ ಎರಡು ಬಾರಿ ಪಾವತಿಸುವುದು.
5. ನಿವೃತ್ತಿ ಉಪದಾನ / ಮರಣ ಉಪದಾನ :
ಅ. ದಿನಾಂಕ: 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ: 01.08.2024ಕ್ಕೂ ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅವಕಾಶಗಳನ್ವಯ ಪಾವತಿಸಲಾಗುವ ನಿವೃತ್ತಿ ಉಪದಾನವು ಪೂರ್ಣಗೊಳಿಸಲಾದ ಪ್ರತಿ ಆರು ಮಾಸಿಕ ಅರ್ಹತಾ ಸೇವೆಗೆ ಪ್ರಸ್ತುತ ಉಪಲಬ್ಧಗಳ ಗರಿಷ್ಠ ಮಿತಿ 16 1/2 ಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಉಪಲಬ್ಧಗಳ 1/4 ನೇ ಭಾಗಕ್ಕೆ ಸಮನಾಗತಕ್ಕದು. ಈ ರೀತಿ ಲೆಕ್ಕ ಹಾಕಲಾದ ನಿವೃತ್ತಿ ಉಪದಾನದ ಗರಿಷ್ಠ ಮಿತಿಯು ರೂ.20.00 ಲಕ್ಷಗಳಾಗಿರುತ್ತದೆ.
ಬ. ದಿನಾಂಕ: 01.07.2022 ರಂದು ಅಥವಾ ತದನಂತರ ಆದರೆ ದಿನಾಂಕ: 01.08.2024ರೊಳಗೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಡಿ ಲಭ್ಯವಿರುವ ಮರಣ ಉಪದಾನವು ಈ ಕೆಳಕಂಡ ದರಗಳಲ್ಲಿ ಲಭ್ಯವಾಗುತ್ತದೆ:
ಕ. ದಿನಾಂಕ: 01.08.2024ರಂದು ಮತ್ತು ತದನಂತರದಲ್ಲಿ ಸೇವೆಯಿಂದ ನಿವೃತ್ತನಾದ ಅಥವಾ ಸೇವೆಯಲ್ಲಿರುವಾಗಲೇ ಮೃತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ/ಳ ಪ್ರಕರಣದಲ್ಲಿ ಅವನ/ಅವಳ ನಿವೃತ್ತಿ/ಮರಣ ಉಪದಾನವನ್ನು ಪರಿಷ್ಕೃತ ಉಪಲಬ್ದಗಳನ್ನು ಆಧಾರವಾಗಿರಿಸಿ ಈ ಮೇಲೆ ತಿಳಿಸಿರುವಂತೆ ಲೆಕ್ಕಹಾಕತಕ್ಕದ್ದು.
6.ಉಪಲಬ್ಧದ ಬಗ್ಗೆ;
ವಿವಿಧ ನಿವೃತ್ತಿ ವೇತನ ಸೌಲಭ್ಯಗಳು ಮತ್ತು ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳನ್ನು ಲೆಕ್ಕ ಹಾಕುವುದಕ್ಕೋಸ್ಕರ ಪರಿಗಣಿಸುವ ಉಪಲಬ್ಧ ಎಂದರೆ ಸಂದರ್ಭಾನುಸಾರ ಸರ್ಕಾರಿ ನೌಕರನ ನಿವೃತ್ತಿ ಅಥವಾ ಮರಣದ ದಿನಾಂಕದಂದು ಧಾರಣೆ ಮಾಡಿದ ಹುದ್ದೆಗೆ ಅನ್ವಯಿಸುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಅಂತಿಮ ಮೂಲ ವೇತನ ಎಂದು ಅರ್ಥೈಸತಕ್ಕದ್ದು ಮತ್ತು ಅದು ಕೆಳಕಂಡಿರುವುದನ್ನು ಒಳಗೊಂಡಿರುತ್ತದೆ:
ಅ) ಗರಿಷ್ಠ ವೇತನ ಶ್ರೇಣಿಗೂ ಮೀರಿ, ಸ್ಥಗಿತ ವೇತನ ಬಡ್ತಿ ನೀಡಲಾಗಿದ್ದಲ್ಲಿ ಅದು.
(ಆ) ಸಂದರ್ಭಾನುಸಾರ ಕರ್ನಾಟಕ ನಾಗರೀಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು 2018ರ ನಿಯಮ 7ರ ಉಪನಿಯಮ (3) ರಡಿ ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು 2024ರ ನಿಯಮ 7ರ ಉಪನಿಯಮ (3) ರಡಿ ನೀಡಲಾಗಿರುವ ವೈಯಕ್ತಿಕ ವೇತನ.
(ಇ) 20, 25 ಮತ್ತು 30 ವರ್ಷಗಳ ಸೇವೆಗೆ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತಕ್ಕಿಂತ ಹೆಚ್ಚಿನದಾಗಿ ಮಂಜೂರು ಮಾಡಲಾದ ಹೆಚ್ಚುವರಿ ವೇತನ ಬಡ್ತಿಗಳು.
7. ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆ:
(ಅ) ದಿನಾಂಕ:01.07.2022 ರಂದು ಇದ್ದಂತ ಪುಸಕ್ತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ.
(ಆ) ದಿನಾಂಕ: 01.07.2022 ರಂದು ಇದ್ಯಂತ ಪುಸಕ್ತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಮೇಲಿನ ಶೇಕಡ 31ರಷ್ಟು ತುಟ್ಟಿ ಭತ್ಯೆ.
(ಇ) ದಿನಾಂಕ:01.07.2022 ರಂದು ಇದ್ಯಂತ ಪ್ರಸಕ್ತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ. 27.5ರಷ್ಟು ಫಿಟ್ಮೆಂಟ್ ಸೌಲಭ್ಯ.
ಈ ಮೇಲಿನ (ಅ) + (ಆ) + (ಇ)ರ ಒಟ್ಟು ಮೊತ್ತವು ಸಂದರ್ಭಾನುಸಾರ ಪರಿಷ್ಕೃತ ಕನಿಷ್ಠ ನಿವೃತ್ತಿ ವೇತನ/ಕನಿಷ್ಠ ಕುಟುಂಬ ನಿವೃತ್ತಿ ವೇತನದ ಮೊತ್ತ ಮಾಹೆಯಾನ ರೂ.13,500/-ಗಳಿಗೆ ಕಡಿಮೆ ಇರತಕ್ಕದ್ದಲ್ಲ ಮತ್ತು ಅದು ಗರಿಷ್ಠ ನಿವೃತ್ತಿ ವೇತನ ರೂ. 1,20,600/- ಮತ್ತು ಗರಿಷ್ಠ ಕುಟುಂಬ ನಿವೃತ್ತಿ ವೇತನ ರೂ.80,400/- ಮಿತಿಯನ್ನು ಮೀರತಕ್ಕದ್ದಲ್ಲ.
7.2 ಒಂದು ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸದಸ್ಯರಿಗೆ ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡುವ ಪ್ರಕರಣಗಳಲ್ಲಿ, ಈ ಆದೇಶದನ್ವಯ ಹೆಚ್ಚಳವಾಗುವ ಪಿಂಚಣಿ ಮೊತ್ತವನ್ನು ಪ್ರತಿ ಸದಸ್ಯನ ಪಾಲಿಗೆ ಅನ್ವಯಿಸಿ ನಿರ್ಧರಿಸತಕದ್ದು ಮತ್ತು ಅದು ಅನ್ವಯಿಸುವ ನಿಯಮಗಳು ಅಥವಾ ಆದೇಶಗಳಲ್ಲಿ ನಿರ್ಧಿಷ್ಟಪಡಿಸಿದ ಮಿತಿಗೊಳಪಟ್ಟಿರುತ್ತದೆ.
7.3 ಒಟ್ಟು ಕುಟುಂಬ ನಿವೃತ್ತಿ ವೇತನವನ್ನು ಮೇಲ್ಕಾಣಿಸಿದ ಸೂಚನೆಗಳನ್ವಯ ಕ್ರೋಢೀಕರಿಸಿ ಒಂದೇ ಖಜಾನೆಯಲ್ಲಿ ಪಾವತಿಸುತ್ತಿದ್ದಲ್ಲಿ ಸದರಿ ಪಾಲುಗಳ ಕ್ರೋಢೀಕರಣ ಮತ್ತು ಪಾಲುಗಳ ನಿರ್ಧರಣೆಗಳನ್ನು ಸಂಬಂಧಿಸಿದ ಖಜಾನಾಧಿಕಾರಿಯೇ ಲೆಕ್ಕಹಾಕತಕ್ಕದ್ದು. ಬೇರೆ ಬೇರೆ ಖಜಾನೆಗಳಲ್ಲಿ ಪಾಲುಗಳನ್ನು ಪಡೆಯಲಾಗುತ್ತಿದ್ದ ಪ್ರಕರಣಗಳಲ್ಲಿ ಮಹಾಲೇಖಪಾಲರನ್ನು ಸಮಾಲೋಚಿಸುವುದು.
ದಿನಾಂಕ: 01.07.2022ಕ್ಕೂ ಮುಂಚೆ ಸೇವೆಯಿಂದ ನಿವೃತ್ತರಾದ ಅಥವಾ ಸೇವಾವಧಿಯಲ್ಲಿರುವಾಗಲೇ ಮರಣ ಹೊಂದಿದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರ ಪ್ರಕರಣಗಳಲ್ಲಿ ಈ ಆದೇಶದನ್ವಯ ಹೆಚ್ಚಳವಾಗುವ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಮೊತ್ತವನ್ನು ಅನ್ವಯಿಸುವ ನಿವೃತ್ತಿ ವೇತನದಾರರು / ಕುಟುಂಬ ನಿವೃತ್ತಿ ವೇತನದಾರರಿಗೆ ಈ ಮೇಲಿನ ನಿಬಂಧನೆಗಳ ಪೂರೈಕೆಗೊಳಪಟ್ಟು ಮಹಾಲೇಖಪಾಲರಿಂದ ಯಾವುದೇ ಪ್ರಾಧೀಕರಣ ಪಡೆಯದೇ ಖಜಾನಾಧಿಕಾರಿಯೇ ಪಾವತಿಸತಕ್ಕದ್ದು.
7.5 ದಿನಾಂಕ: 01.07.2022ರಂದು ಇದ್ದಂತ ನಿವೃತ್ತಿ ವೇತನದಾರರ/ಕುಟುಂಬ ನಿವೃತ್ತಿ ವೇತನದಾರರ ಪ್ರಸಕ್ತ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೊತ್ತವು ಈ ಆದೇಶದ ಅನುಬಂಧದಲ್ಲಿ ತೋರಿಸಿದಂದ
8. ಈ ಆದೇಶದನ್ವಯ ಮಂಜೂರು ಮಾಡಲಾಗುವ ನಿವೃತ್ತಿ ವೇತನವು ಅಥವಾ ಕುಟುಂಬ ನಿವೃತ್ತಿ ವೇತನವನ್ನು ಈ ಕೆಳಕಂಡ ನಿಬಂಧನೆಗಳಿಗೊಳಪಟ್ಟಿರುತ್ತದೆ:
8.1 ಸಂದರ್ಭಾನುಸಾರ ಪ್ರಸಕ್ತ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನದ ಲಭ್ಯತೆಯ ಜೊತೆಗೆ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನದ ಹೆಚ್ಚಳದ ಕಾರಣದಿಂದಾಗಿ ಲಭ್ಯವಾಗುವ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಮೊತ್ತವು ಮಾಹೆಯಾನ ಲಭ್ಯವಿರುವ ಗರಿಷ್ಠ ನಿವೃತ್ತಿ ವೇತನ ಅಥವಾ ಗರಿಷ್ಠ ಕುಟುಂಬ ನಿವೃತ್ತಿ ವೇತನದ ಮಿತಿಯನ್ನು ಮೀರುವಂತಿದ್ದಲ್ಲಿ, ಅದರ ಒಟ್ಟಾರೆ ಮೊತ್ತವು ಈ ಮೇಲಿನ ಕಂಡಿಕೆ (2) ಮತ್ತು (3)ರಲ್ಲಿ ತಿಳಿಸಿರುವ ಗರಿಷ್ಠ, ಪಿಂಚಣಿ ಮತ್ತು ಗರಿಷ್ಠ ಕುಟುಂಬ ಪಿಂಚಣಿಯ ನಿರ್ಧಿಷ್ಟ ಮೊತ್ತಕ್ಕೆ ಸೀಮಿತಗೊಳಿಸತಕ್ಕದ್ದು.
8.2 ನಿವೃತ್ತಿ ವೇತನ ಹೆಚ್ಚಳ ಬಾಕಿಗೆ ಅರ್ಹತೆ ಹೊಂದಿದ್ದ ಮೃತ ಪಿಂಚಣಿದಾರರ ಪ್ರಕರಣದಲ್ಲಿ ಅನ್ವಯಿಸುವ ನಿಯಮಗಳ ಅವಕಾಶಗಳಡಿ ಕುಟುಂಬ ಪಿಂಚಣಿಯನ್ನು ಪಡೆಯಲು ಅರ್ಹನಿರುವ ವ್ಯಕ್ತಿಗೆ ಅಥವಾ ಮೃತ ಪಿಂಚಣಿದಾರರ ವಾರಸುದಾರರಿಗೆ ಪಾವತಿಸತಕ್ಕದ್ದು. ಪಾವತಿಸತಕ್ಕದ್ದು. ಅಂತಹ ಪಾವತಿಯನ್ನು ಮಾಡುವಲ್ಲಿ ಕರ್ನಾಟಕ ಖಜಾನೆ ಸಂಹಿತೆಯಲ್ಲಿ ವಿಧಿಸಲಾದ ಕಾರ್ಯ ವಿಧಾನವನ್ನು ಅನುಸರಿಸತಕ್ಕದ್ದು.
9. ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಕ್ರಮಬದ್ಧಗೊಳಿಸುವ ಕುರಿತಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002 ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಅಸಾಧಾರಣ ನಿವೃತ್ತಿ ವೇತನ) ನಿಯಮಗಳು 2003 ಮತ್ತು ಅದರಡಿ ಕಾಲ ಕಾಲಕ್ಕೆ ಹೊರಡಿಸಿದ ಆದೇಶಗಳು ಸೂಕ್ತ ಬದಲಾವಣೆಗಳೊಂದಿಗೆ ಅನ್ವಯಿಸತಕ್ಕದ್ದು.
9.1 ನಿವೃತ್ತಿ ವೇತನ, ನಿವೃತ್ತಿ ಉಪದಾನ, ಕುಟುಂಬ ನಿವೃತ್ತಿ ವೇತನ ಮತ್ತು ಪರಿವರ್ತಿತ ನಿವೃತ್ತಿ ವೇತನ ಕ್ರಮಬದ್ಧಗೊಳಿಸುವ ಕುರಿತಂತೆ ಚಾಲ್ತಿಯಲ್ಲಿರುವ ನಿಯಮ/ಆದೇಶಗಳು ಮುಂದುವರೆದು ಅನ್ವಯಿಸುತ್ತದೆ.
9.2 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಇತರೆ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
9.3 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002 ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಅಸಾಧಾರಣ ನಿವೃತ್ತಿ ವೇತನ) ನಿಯಮಗಳು, 2003 ಗಳಿಗೆ ಸೂಕ್ತ ತಿದ್ದುಪಡಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
10. ಪರಿವರ್ತಿತ ನಿವೃತ್ತಿ ವೇತನದ ಪ್ರಕರಣಗಳಲ್ಲಿ ಪಿಂಚಣಿಯನ್ನು ಪೂರ್ವಸ್ಥಿತಿಗೆ ತರುವುದು:ಪರಿವರ್ತಿತ ನಿವೃತ್ತಿ ವೇತನದ ಪ್ರಕರಣಗಳಲ್ಲಿ ಪಿಂಚಣಿಯನ್ನು ಪೂರ್ವಸ್ಥಿತಿಗೆ ತರುವುದು:
A. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 376ರ ಅಡಿ ಸರ್ಕಾರಿ ನೌಕರನು ತನ್ನ ನಿವೃತ್ತಿ ವೇತನದ ಒಂದು ಭಾಗವನ್ನು ಪರಿವರ್ತಿಸಿಕೊಂಡಿದ್ದ ಪಕ್ಷದಲ್ಲಿ, ಪರಿವರ್ತಿಸಲಾದ ದಿನಾಂಕದಿಂದ 15 ವರ್ಷಗಳ ನಂತರ ಅವನ ನಿವೃತ್ತಿ ವೇತನವನ್ನು ಪೂರ್ವಸ್ಥಿತಿಗೆ ತರತಕ್ಕದ್ದು.
11. 80 ವರ್ಷಗಳು ಮತ್ತು ಮೇಲ್ಪಟ್ಟ ವಯೋಮಾನದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಹೆಚ್ಚುವರಿ ನಿವೃತ್ತಿ ವೇತನ/ ಹೆಚ್ಚುವರಿ ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳನ್ನು ಮಂಜೂರು ಮಾಡಿ ಹೊರಡಿಸಲಾದ ದಿನಾಂಕ: 11.01.2019ರ ಸರ್ಕಾರಿ ಆದೇಶ ಸಂಖ್ಯೆ: ಆಇ (ವಿ) 120 ಪಿಇಎನ್ 2018ರ ಅವಕಾಶಗಳು ಪರಿಷ್ಕೃತ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಮುಂದುವರೆದು ಅನ್ವಯಿಸುತ್ತದೆ.
A. ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಜೊತೆಯಾಗಿ ಲಭ್ಯವಿರುವ ಪಿಂಚಣಿದಾರರ ಪ್ರಕರಣಗಳಲ್ಲಿ ಸಂದರ್ಭಾನುಸಾರ ಈ ಮೇಲೆ ತಿಳಿಸಿದ ದಿನಾಂಕ: 11.01.2019ರ ಆದೇಶದನ್ವಯ ಲಭ್ಯವಿರುವ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಜೀವಂತ ಸದಸ್ಯನ ಪರಿಷ್ಕೃತ ನಿವೃತ್ತಿ ವೇತನಕ್ಕೆ ಮಾತ್ರ ಸೀಮಿತಗೊಳಿಸತಕ್ಕದ್ದು.
12. ಯು.ಜಿ.ಸಿ, ಎ.ಐ.ಸಿ.ಟಿ.ಇ ಮತ್ತು ಐ.ಸಿ.ಎ.ಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದು ದಿನಾಂಕ: 01.07.2022ರ ಪೂರ್ವದಲ್ಲಿ ನಿವೃತ್ತರಾದ ರಾಜ್ಯ ಸರ್ಕಾರಿ ನೌಕರರಿಗೆ ಈ ಆದೇಶಗಳು ಅನ್ವಯಿಸುತ್ತವೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೊತ್ತವು ಈ ಆದೇಶದ ಅನುಬಂಧದಲ್ಲಿ ತೋರಿಸಿದಂತೆ ಲಭ್ಯವಿರುತ್ತದೆ ಹಾಗೂ ಸದರಿ ಪಿಂಚಣಿ ಪರಿಷ್ಕರಣೆಯ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024 ರಿಂದ ಲಭ್ಯವಾಗತಕ್ಕದ್ದು.
ಅ. ದಿನಾಂಕ: 01.07.2022 ಮತ್ತು ನಂತರದಲ್ಲಿ ನಿವೃತ್ತರಾದ ಯು.ಜಿ.ಸಿ, ಎ.ಐ.ಸಿ.ಟಿ.ಇ ಮತ್ತು ಐ.ಸಿ.ಎ.ಆರ್ ವೇತನ ಶ್ರೇಣಿಗಳ ನೌಕರರಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಈ ಸಂಬಂಧ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.
12.1 ಎನ್.ಜಿ.ಪಿ.ಸಿ. ವೇತನ ಶ್ರೇಣಿಗಳ ಕಾರ್ಯನಿರತ ಮತ್ತು ನಿವೃತ್ತ ನ್ಯಾಯಾಂಗ ಅಧಿಕಾರಿಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ.
13. ದಿನಾಂಕ:01.04.2006 ರಂದು ಅಥವಾ ತದನಂತರ ನೇಮಕಗೊಂಡ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರಿಗೆ ಈ ಆದೇಶವು ಅನ್ವಯಿಸುವುದಿಲ್ಲ.
ಜಾರಿಗೆ ಬರುವ ದಿನಾಂಕ:
14. ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ದಿನಾಂಕ:01.07.2022 ರಿಂದ ಜಾರಿಗೆ ಬರುತ್ತವೆ. ಆದರೆ, ನಿವೃತ್ತಿ ವೇತನ/ ಕುಟುಂಬ
14.1 ನಿವೃತ್ತಿ ವೇತನ ಪರಿಷ್ಕರಣೆಯ ಕಾರಣದಿಂದ ಉಂಟಾಗುವ ಹೆಚ್ಚಳದ ಆರ್ಥಿಕ ಲಾಭವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.
14.2. ದಿನಾಂಕ:01.07.2022 ರಂದು ಮತ್ತು ನಂತರದಲ್ಲಿ ದಿನಾಂಕ: 01.08.2024 ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಅಥವಾ ಸೇವೆಯಲ್ಲಿರುವಾಗಲೇ ಮೃತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣಗಳಲ್ಲಿ ಅವನ ಪಿಂಚಣಿ ಸೌಲಭ್ಯಗಳನ್ನು ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2018ರ ಪ್ರಸಕ್ತ ಉಪಲಬ್ದಗಳನ್ನು ಆಧಾರವಾಗಿರಿಸಿ ಲೆಕ್ಕಹಾಕತಕ್ಕದ್ದು.
14.3. ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರನ್ವಯ ಕಾಲ್ಪನಿಕವಾಗಿ ಪರಿಷ್ಕರಿಸಲಾದ ವೇತನದ ಆಧಾರದ ಮೇಲೆ ನಿರ್ಧರಿಸಲಾದ ಪಿಂಚಣಿ ಸೌಲಭ್ಯದ ಆರ್ಥಿಕ ಲಾಭವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.
14.4 ದಿನಾಂಕ: 01.08.2024ರಂದು ಮತ್ತು ನಂತರದಲ್ಲಿ ನಿವೃತ್ತರಾಗುವ ಅಥವಾ ಮೃತರಾಗುವ ಸರ್ಕಾರಿ ನೌಕರರ ನಿವೃತ್ತಿ ಸೌಲಭ್ಯಗಳನ್ನು ಈ ಮೇಲಿನ ಕಂಡಿಕೆ 5ರಲ್ಲಿ ನಿರ್ಧಿಷ್ಟಪಡಿಸಿರುವ ಗರಿಷ್ಠ ಮಿತಿಯ ಪರಿಮಿತಿಗೊಳಪಟ್ಟು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಪಡೆದ ಉಪಲಬ್ದಗಳನ್ನು ಆಧಾರವಾಗಿರಿಸಿ ಲೆಕ್ಕಹಾಕತಕ್ಕದ್ದು.
14.5 ದಿನಾಂಕ:01.07.2022ರ ಪೂರ್ವದಲ್ಲಿ ನಿವೃತ್ತರಾದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ನಿವೃತ್ತಿ ವೇತನ ಪರಿಷ್ಕರಣೆ /ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆಯಿಂದಾಗಿ ಉಂಟಾಗುವ ನಿವೃತ್ತಿ ವೇತನ /ಕುಟುಂಬ ನಿವೃತ್ತಿ ವೇತನ ಹೆಚ್ಚಳದ ಮೊತ್ತವು ಈ ಆದೇಶದ ಅನುಬಂಧದಲ್ಲಿ ತೋರಿಸಿರುವಂತೆ ಇರತಕ್ಕದ್ದು ಮತ್ತು ಅದನ್ನು 1ನೇ ಆಗಸ್ಟ್ 2024ರಿಂದ ಅನ್ವಯಿಸುವಂತೆ ನಗದಾಗಿ ಪಾವತಿಸುವುದು.
15. ಈ ಆದೇಶದ ಅವಕಾಶಗಳ ನಿರ್ವಚನೆ/ಅರ್ಥೈಸುವಲ್ಲಿ ಅಥವಾ ಈ ಆದೇಶವನ್ನು ಜಾರಿಗೊಳಿಸುವಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ಸೂಕ್ತ ಆದೇಶಕ್ಕಾಗಿ ಆರ್ಥಿಕ ಇಲಾಖೆಗೆ ಸಲ್ಲಿಸುವುದು.
CLICK HERE TO COMPLETE INFORMATION
ನಿವೃತ್ತ ನೌಕರರಿಗೆ ವೈದ್ಯಕೀಯ ಸೌಲಭ್ಯ ಸಂಬಂಧ ಸಂಧ್ಯಾಕಿರಣ ಯೋಜನೆಯನ್ನು ಶಿಫಾರಸ್ಸು ಮಾಡಿದ್ದು, ಅದು ಜಾರಿಗೆ ಬರುವವರೆಗೂ ವೈದ್ಯಕೀಯ ಭತ್ಯೆಯಾಗಿ ರೂ.500/_ ನೀಡಲು ಸೂಚಿಸಲಾಗಿದೆ.
ಇದರ ಸಂಬಂಧ ಇನ್ನೂ ಸರ್ಕಾರದ ಆದೇಶ ಹೊರಡಿಸಿರುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿ.