SATHEE-2024: ಪರೀಕ್ಷಾ ಸಂಗಾತಿ ಸಾಥಿ ಉಚಿತ ಆನ್ಲೈನ್ ತರಗತಿ

ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲೈವ್ ತರಗತಿ

 

SATHEE

ಇಂಜಿನಿಯರಿಂಗ್‌, ಬ್ಯಾಂಕಿಂಗ್, ವೈದ್ಯಕೀಯ, ಎಸ್‌ಎಸ್ಸಿ ಸೇರಿದಂತೆ ಹಲವು ಕೋರ್ಸ್‌ಗಳ ಪ್ರವೇಶಾತಿ ಪರೀಕ್ಷೆಗಳಿಗೆ ಸಂಪೂರ್ಣ ಉಚಿತವಾಗಿ ವಿದ್ಯಾರ್ಥಿಗಳನ್ನು ಅಣಿ ಮಾಡಲು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಹಾಗೂ ತರಬೇತಿ ಸಮಿತಿಯು (ಎನ್‌ಸಿಇಆರ್‌ಟಿ) ‘ಸಾಥಿ’ ಪೋರ್ಟ್‌ಲ್‌ನೊಂದಿಗೆ ಸಿದ್ಧವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಭಾಗವಾಗಿ ಐಐಟಿ ಕಾನ್ಸುರ, ಕೇಂದ್ರ ಶಿಕ್ಷಣ ಸಚಿವಾಲಯದ ಸಹಯೋಗದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ 7 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನ್ವಯವಾಗುವಂತೆ ಉಚಿತ ಅಧ್ಯಯನ ಸಾಮಗ್ರಿ, ಲೈವ್ ತರಗತಿಗಳು ಮಾರ್ಗದರ್ಶನ, ಟೆಸ್ಟ್ ಸೇರಿದಂತೆ ವಿಭಿನ್ನ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೃತಕ ಬುದ್ಧಿಮತ್ತೆಯನ್ನು ಒಳಗೊಂಡ ಎಐ ಚಾಟ್‌ಬಾಟ್ ವಿದ್ಯಾರ್ಥಿಗಳ ಗೊಂದಲಗಳನ್ನು ಬಗೆಹರಿಸಲಿದೆ. ಐಐಟಿ, ಏಮ್ಸ್, ಐಟಿಯಂಥ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ವಿಷಯಗಳಲ್ಲಿ ಪರಿಣತಿ ಹೊಂದಿರುವವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಎನ್‌ಸಿಇಆರ್‌ಟಿಗೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಗಳನ್ನೂ ನೀಡಲಾಗುತ್ತಿದ್ದು, ಯುಪಿಎಸ್‌ಸಿ ಇನ್ನಿತರ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಾಗುತ್ತಿರುವವರು ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು. 4.37 ಲಕ್ಷ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.

ಡಿಟಿಎಚ್ ಚಾನಲ್ ಮೂಲಕವೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅಧ್ಯಯನ ನಡೆಸುವುದಕ್ಕೆ ಮಾತ್ರವಲ್ಲದೇ ಪರೀಕ್ಷಾ ಸ್ವರೂಪವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಲಿದೆ.

ಸ್ವಯಂ ಮೌಲ್ಯಮಾಪನ

ಕೃತಕ ಬುದ್ಧಿಮತ್ತೆ ತಂತ್ರಾಂಶದಿಂದ ವಿದ್ಯಾರ್ಥಿಗಳಿಗೆ ಪ್ರಗತಿ ಮತ್ತು ತಯಾರಿಯ ಕುರಿತು ಸ್ವಯಂ ಅವಲೋಕನ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಲಿಕಾ ಕ್ರಮದ ಕುರಿತು ನಿಗಾ ವಹಿಸಿ ವಿದ್ಯಾರ್ಥಿಗಳ ಅಧ್ಯಯನದ ಬಗ್ಗೆ ಶಕ್ತಿ, ದೌರ್ಬಲ್ಯವನ್ನು ತಿಳಿದುಕೊಂಡು ಅದನ್ನು ತಿದ್ದಿಕೊಳ್ಳಲು ಸೂಚನೆಯನ್ನು ಕೂಡ ನೀಡುತ್ತದೆ.

ಯಾವೆಲ್ಲ ಪರೀಕ್ಷೆಗಳಿಗೆ ಮಾರ್ಗದರ್ಶನ?

ಜೆಇಇ, ನೀಟ್, ಕ್ಲಾಟ್, ಐಸಿಎಆರ್, ಗೇಟ್‌, ಎಸ್‌ಎಸ್‌ಸಿ, ಬ್ಯಾಂಕ್ ಪಿಒ, ಆರ್‌ಆರ್‌ಬಿ, ಸಿಯುಇಟಿ.

ಚಾಟ್‌ಬಾಟ್ ಸಂಗಾತಿ

ವಿದ್ಯಾರ್ಥಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಸಕ್ರಿಯವಾಗಿರುತ್ತದೆ. ವೆಬ್‌ಸೈಟ್‌ನ ಕೆಳಗೆ ಕಾಣಿಸಿಕೊಳ್ಳುವ ರೋಬಾಟ್ ಚಿತ್ರವನ್ನು ಒತ್ತಿ ಚಾಟ್‌ಬಾಟ್ ತೆರೆಯಬಹುದು. ವಿದ್ಯಾರ್ಥಿಗಳ ಎಲ್ಲ ಪಠ್ಯಾಧಾರಿತ ಗೊಂದಲಗಳನ್ನು ಸ್ನೇಹಿತನಂತೆ ಈ ಚಾಟ್‌ಬಾಟ್ ಬಗೆಹರಿಸುತ್ತದೆ. ಇದರ ಮೂಲಕ ಯಾವುದೇ ಅನುಮಾನಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಸೇವೆಗಳು ಯಾವವು?

» ಉಚಿತ ಆನ್‌ಲೈನ್ ಅಧ್ಯಯನ ಸಾಮಗ್ರಿ
» 45 ದಿನಗಳ ಉಚಿತ ಕ್ರಾಶ್ ಕೋರ್ಸ್‌ಗಳು
» ವಿಡಿಯೋ ಉಪನ್ಯಾಸ
» ಮಾಕ್ ಟೆಸ್ಟ್ ಆಯೋಜನೆ
» ಆಯಾ ಕ್ಷೇತ್ರದ ಪರಿಣತರ ಮಾರ್ಗದರ್ಶನ

ಲೈವ್ ತರಗತಿಗಳು

ನಿತ್ಯ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೆ ಝೂಮ್ ಮೂಲಕ ಲೈವ್ ಭೇಟಿಯಾಗಿ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ, ಭಾನುವಾರ ಹಾಗೂ ಇತರ ರಜಾದಿನಗಳಲ್ಲಿ ವಿರಾಮವಿರುತ್ತದೆ.

ನೋಂದಣಿ

ಆಸಕ್ತ ವಿದ್ಯಾರ್ಥಿಗಳು https:// sathee.prutor.ai/ ಮೂಲಕ ನೋಂದಣಿಯಾಗಿ ಪ್ರಯೋಜನ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ – CLICK HERE

 

 

Leave a Comment