ಬಡವರಮನೆ ಹೆಣ್ಣು-ಸುಂದರವಾದ ಕಥೆ-08

ಬಡವರಮನೆ ಹೆಣ್ಣು-ಸುಂದರವಾದ ಕಥೆ

ರಾಮಪುರವೆಂಬ ಗ್ರಾಮದಲ್ಲಿ ವೀರಯ್ಯನೆಂಬ ರೈತನಿದ್ದನು. ಆತನು ಬಹಳ ಮಿತವ್ಯಯದಿಂದ ಜೀವಿಸುತ್ತಾ ಒಂದಿಷ್ಟು ಭೂಮಿ ಕಾಣಿ ಮಾಡಿಕೊಂಡಿದ್ದನು. ಆತನಿಗೆ ರಘು ಎಂಬ ಮಗನಿದ್ದನು. ಮದುವೆ ವಯಸ್ಸಿಗೆ ಬಂದ ತರುಣ ರಘು, ವರದಕ್ಷಿಣೆ ತರುವ ಸೊಸೆ ಬರಲೆಂದು ವೀರಯ್ಯನ ಆಶಯ. ಆ ಹಣದೊಂದಿಗೆ ತನ್ನ ಹಣವನ್ನೂ ಸೇರಿಸಿ ಮತ್ತಷ್ಟು ಹೊಲವನ್ನು ಕೊಂಡುಕೊಳ್ಳುವ ಉದ್ದೇಶ ಆತನಿಗೆ. ಆದರೆ ರಘು ಮದುವೆಯ ವಿಷಯವನ್ನು ಅಲಕ್ಷಿಸಿದ್ದ.

ಅಂದು ನಗರದಲ್ಲಿ ರಥೋತ್ಸವ. ಉತ್ಸವ ನೋಡಲು ಗ್ರಾಮಸ್ಥರೆಲ್ಲ ಹೋಗುತ್ತಿದ್ದರು. ರಘು ಸಹ ತಮಾಷೆ ನೋಡಲು ಹೊರಟನು. ಅವನು ತಮ್ಮ ಜೋಳದ ಹೊಲದ ಬಳಿಗೆ ಬಂದಾಗ, ಅಲ್ಲಿ ಕಳೆ ಕೀಳುತ್ತಿದ್ದ ಲಕ್ಷ್ಮಿ ಎಂಬ ತರುಣಿ ಕಾಣಿಸಿದಳು.

ಲಕ್ಷ್ಮಿಯ ತಂದೆ ಒಂದಾನೊಂದು ಕಾಲ ದಲ್ಲಿ ಚೆನ್ನಾಗಿ ಬದುಕಿ ಬಾಳಿದ ರೈತ. ಆದರೆ ದುರದೃಷ್ಟವಶಾತ್ ಸಾಲಗಾರನಾಗಿ, ಆಸ್ತಿ ಯನ್ನೆಲ್ಲಾ ಕಳೆದುಕೊಂಡು ಬಡತನದಲ್ಲೇ ಸತ್ತು ಹೋದನು. ಲಕ್ಷ್ಮಿ ತನ್ನ ತಾಯಿ ಯನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದಳು. ಅನಾಥಳಾದ ಲಕ್ಷ್ಮಿಯನ್ನು ಅವಳ ಅಜ್ಜಿ ಸಾಕಿ ಸಲುಹಿದಳು. ಈಗ ಆ ಅಜ್ಜಿಗೆ ಕಣ್ಣು ಕಾಣಿಸುತ್ತಿರಲಿಲ್ಲ; ಕಿವಿ ಕೇಳಿಸುತ್ತಿರಲಿಲ್ಲ. ಲಕ್ಷ್ಮಿಯ ದುಡಿತದಿಂದಲೇ ಅವರ ಜೀವನ ಸಾಗಬೇಕಿತ್ತು. ಅವರಿಬ್ಬರೂ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದರು.

ರಘು ಲಕ್ಷ್ಮಿಯನ್ನು ಕಂಡು “ ಏನೇ, ಲಕ್ಷ್ಮಿ, ಎಲ್ಲರೂ ನಗರಕ್ಕೆ ಹೋಗುತ್ತಿದ್ದರೆ ನೀನಿಲ್ಲಿ ಕೆಲಸ ಮಾಡುತ್ತಿರುವೆಯಲ್ಲಾ? ಎಂದು ಕೇಳಿದನು. “ಹೋಗಲು ಪುರಸೊತ್ತು ಇದ್ದಿದ್ದರೆ ಹೋಗುತ್ತಿದ್ದೆ” ಎಂದಳು ಲಕ್ಷ್ಮಿ, “ ಕಳೆಕೀಳಲು ನಮ್ಮಪ್ಪ ಎಷ್ಟು ಕೊಡುತಾರೆ?” ಎಂದ ರಘು, “ಎರಡಾಣೆ ಕೊಡ್ತಾರೆ ಬಾಬು ” ಎಂದಳು ಲಕ್ಷ್ಮಿ, ” ಹಿಸ್, ಎರ ಡಾಣೇನೇ ? ನಾನು ಕೊಡ್ತೇನೆ ಬಿಡು ಲಕ್ಷ್ಮಿ,

ಹೋಗಿ ತಮಾಷೆ ನೋಡಿಕೊಂಡು ಬಾ ” ಮರುಕದಿಂದ ನುಡಿದ ರಘು. ನನಗೆ ಬೇಡ. ಹಣ ಸಂಪಾದಿಸುವು ದೊಂದೇ ಮುಖ್ಯವಲ್ಲ. ಮಾತಿಗೆ ಬೆಲೆ ಬೇಡವೇ? ಮಾಡಿ ಕೊಡುವೆ ನೆಂದ ಕೆಲಸ ಮಾಡಬೇಡವೇ ??” ಎಂದಳು ಲಕ್ಷ್ಮಿ, ರಘು ಮರುಮಾತನಾಡದೆ ತನ್ನ ಅಂಗಿಯನ್ನು ಕಳಚಿ ಒಂದು ಕಡೆಯಿಟ್ಟು, ತಾನೂ
ಸಹ ಕಳೆಕೀಳಲು ಪ್ರಾರಂಭಿಸಿದನು. ಕೆಲಸ
ಬೇಗ ಮುಗಿದುಹೋಯಿತು. ಆದರೆ ಹೊಲದಲ್ಲಿ ಕೆಲಸಮಾಡುವ ಅಭ್ಯಾಸವಿಲ್ಲದ ರಘು ಬಹುಬೇಗ ಆಯಾಸಗೊಂಡನು. ಅವನ
ಹಣೆಯ ಮೇಲೆ ಮೂಡಿದ ಬೆವರನ್ನು ನೋಡಿ ಲಕ್ಷ್ಮಿ ಪರಿಹಾಸ್ಯ ಮಾಡಿದಳು.

” ನೀವು ನನಗೆ ತುಂಬಾ ಸಹಾಯ ಮಾಡಿದಿರಿ. ಧನ್ಯವಾದಗಳು. ನಮ್ಮ ಮನೆಗೆ ಬನ್ನಿ, ಕೊಂಚ ಪಾನಕ ಮಾಡಿ ಕೊಡುತ್ತೇನೆ” ಎಂದಳು. ರಘು ಲಕ್ಷ್ಮಿಯ ಸಂಗಡ ಅವಳ ಗುಡಿಸಲಿಗೆ ಹೋದನು. ಬಡವರ ಮನೆಯಾದರೂ ಅಲ್ಲಿನ ವ್ಯವಸ್ಥೆ ತುಂಬಾ ಅಚ್ಚು ಕಟ್ಟಾಗಿತ್ತು. ಲಕ್ಷ್ಮಿಯ ಇಳಿವಯಸ್ಸಿನ ಅಜ್ಜಿ ಗೊಣಗುಟ್ಟುವ ಸ್ವಭಾವದವಳು, ” ಪಾಪ, ಈ ಮುದುಕಿಯೊಂದಿಗೆ ಲಕ್ಷ್ಮಿ ಹೇಗೆ ದಿನ ಕಳೆಯುತ್ತಿದ್ದಾಳೋ ಏನೋ, ಲಕ್ಷ್ಮಿ ತುಂಬಾ ಸಹನೆ ಶೀಲೆಯಿರಬೇಕು” ಎಂದುಕೊಂಡ ರಘು.

ಲಕ್ಷ್ಮಿ ಪಾನಕ ತಂದು ಕೊಟ್ಟಳು. ಪಾನಕವನ್ನು ಕುಡಿದು, ನೆಟ್ಟಗೆ ರಘು ಮನೆಗೆ ನಡೆದನು. ಅಲ್ಲಿ ವೀರಯ್ಯ ದನದ ಕೊಟ್ಟಿಗೆಯನ್ನು ದುರಸ್ತು ಮಾಡುತ್ತಿರುವುದು ಕಾಣಿಸಿತು.

ಆತನು ಮಗನನ್ನು ನೋಡಿ ” ರಘು, ನನಗಿಷ್ಟು ಸಹಾಯ ಮಾಡೋ, ಉತ್ಸವ ನೋಡಲು ಎಲ್ಲರೂ ನಗರಕ್ಕೆ ಹೋಗಿದ್ದಾರೆ. ಕೊಟ್ಟಿಗೆ ರಿಪೇರಿ ಮಾಡಲು ಒಬ್ಬರೂ ಸಿಕ್ಕಲಿಲ್ಲ. ನಾನೇ ಕೈಹಾಕಬೇಕಾಯಿತು” ಎಂದ.

ರಘು ತಂದೆಗೆ ನೆರವು ನೀಡುತ್ತಿದ್ದ. ಮಗನು ಅನ್ಯಮನಸ್ಕನಾಗಿರುವುದನ್ನು ಗಮನಿಸಿದ ವೀರಯ್ಯ “ ಏನೋ ತುಂಬಾ ಆಲೋಚಿಸು ತಿರುವಂತಿದೆಯಲ್ಲಾ’ ಎಂದು ಕೇಳಿದ.

” ಏನಿಲ್ಲ ಅಪ್ಪಾ, ಮದುವೆಯಾಗುವಂತೆ ನೀನೂ, ಅಮ್ಮಾ ಬಲವಂತ ಪಡಿಸುತ್ತಿದ್ದಿರಿ.

ಆದರೆ ಸರಿಯಾದ ಹುಡುಗಿ ಸಿಗಲಿಲ್ಲವೆಂದು ನಾನು ಸುಮ್ಮನಿದ್ದೆ. ಈಗ ನನಗೆ ನೆಚ್ಚುವ ಹುಡುಗಿಯೊಬ್ಬಳನ್ನು ಕಂಡೆ” ಎಂದ ರಘು.

“ಯಾರು ಆ ಹುಡುಗಿ ?” ಎಂದು ತಂದೆ ಕೇಳಿದ ಚಕಿತನಾಗಿ,

” ಲಕ್ಷ್ಮಿ ” ಎಂದ ರಘು ಗಂಭೀರವಾಗಿ,

” ನಮ್ಮ ಮನೆಗೆ ಆಗಾಗ್ಗೆ ಕೆಲಸಮಾಡಲು ಬರುತ್ತಾಳಲ್ಲಾ ಆ ಹುಡುಗಿಯೇ ?” ಕೇಳಿದ ವೀರಯ್ಯ. “ ಊಂ, ಹೌದು, ಅವಳೇ ನನಗೆ ಸರಿಯಾದ ಹುಡುಗಿ ” ಎಂದ ರಘು.

ವೀರಯ್ಯ ಕೊಂಚ ಯೋಚಿಸಿ “ ಒಮ್ಮೆ ಅವರೂ ಸಹ ಸ್ಥಿತಿವಂತರಾಗಿದ್ದರು. ಲಕ್ಷ್ಮಿ ಸಹ ಬುದ್ಧಿವಂತಳಾದ ಹುಡುಗಿ. ಆದರೆ ಅವರ ಈಗಿನ ಆರ್ಥಿಕಸ್ಥಿತಿ ಹದಗೆಟ್ಟಿರುವು ದಲ್ಲಾ” ಅನುಮಾನ ಸೂಚಿಸಿದ ವೀರಯ್ಯ.

“ಅವರ ಹಣದಿಂದ ನಮಗೇನಾಗಬೇಕು ಅಪ್ಪಾ. ಅವಳು ಜಾಣೆ; ಬುದ್ಧಿವಂತೆ, ಚೆಲುವೆ, ಅಷ್ಟು ಸಾಲದೆ ” ಎಂದ ರಘು.

“ ನಿಜ. ನನ್ನನ್ನು ಕೇಳಿದರೆ ಅಗತ್ಯವಾಗಿ ಅವಳನ್ನು ಮದುವೆಮಾಡಿಕೊಳ್ಳುವಂತೆ ಹೇಳುತ್ತೇನೆ. ಆದರೆ ನಿಮ್ಮ ತಾಯಿಯ ಅಭಿಪ್ರಾಯ ವೇನೊ? ಅವಳು ಕಡುಲೋಭಿ ಕಣೋ ! ಹಾಲು, ಮೊಸರು, ತುಪ್ಪ ಮುಂತಾದುವುಗಳನ್ನು ಮಾರಿದ ಹಣ ನನ್ನ ಕಣ್ಣಿಗೂ ಬೀಳಿಸುವುದಿಲ್ಲ. ಎಲ್ಲಾ ಎಲ್ಲೋ ಭದ್ರಪಡಿಸುತ್ತಾಳೆ. ನಿಮ್ಮಮ್ಮ ಈ ಸಂಬಂಧಕ್ಕೆ ಖಂಡಿತ ಒಪ್ಪಲಾರಳು?” ಎಂದ ವೀರಯ್ಯ.

ಅಂದೇ ರಘು ತಾಯಿಯೊಂದಿಗೆ ತನ್ನ ವಿವಾಹದ ಪ್ರಸ್ತಾಪಮಾಡಿದ. ಆಕೆ ಎಲ್ಲವನ್ನೂ ಕೇಳಿದನಂತರ “ ನೀನು ಇಷ್ಟಪಟ್ಟ ಲಕ್ಷ್ಮಿಯನ್ನು ಮದುವೆಯಾ ಗುವೆನೆಂದರೆ ಬೇಡವೆಂದು ಹೇಳುವೆನೇ, ಮಗು. ಆದರೆ ನಿಮ್ಮಪ್ಪನ ಜಿಪುಣತನವನ್ನು ನೀನು ಅರಿಯೆಯಾ ? ನೀನು ವರದಕ್ಷಿಣೆಯಿಲ್ಲದೆ ಬಡವರ ಹುಡುಗಿಯನ್ನು ಮದುವೆಯಾಗುವೆನೆಂದರೆ ಅವರು ಸ್ವಲ್ಪವೂ ಒಪ್ಪಲಾರರು,” ಎಂದಳು. ಆ ರಾತ್ರಿ ವೀರಯ್ಯ, ಆತನ ಹೆಂಡತಿ ತಮ್ಮ ಮಗನ ವಿವಾಹದ ವಿಷಯವನ್ನು ಕುರಿತು ಯೋಚಿಸಿದರು. ವೀರಯ್ಯನ ಹೆಂಡತಿಗೆ ದುರ್ಗ ಎಂಬ ಸೋದರ ಸೊಸೆಯೊಬ್ಬಳಿದ್ದಳು. ಅವಳನ್ನು ರಘುವಿಗೆ ಕೊಟ್ಟು ವಿವಾಹ ಮಾಡಬೇಕೆಂದು ಹಿಂದೊಮ್ಮೆ ಹಿರಿಯರು ಮಾತನಾಡಿಕೊಂಡಿದ್ದರು. ದುರ್ಗಳಿಗೆ ಐದಾರು ನೂರು ರೂಪಾಯಿ ಬೆಲೆಬಾಳುವ ಆಸ್ತಿ ಯಿತ್ತು. ಈಗ ಆ ಹುಡುಗಿ ಪಟ್ಟಣದಲ್ಲಿದ್ದಳು. ಅವಳನ್ನು ಕರೆತಂದು ಒಂದು ತಿಂಗಳು ಮನೆಯಲ್ಲಿಟ್ಟುಕೊಂಡರೆ ರಘುವಿನ ಮನಸ್ಸು ಲಕ್ಷ್ಮಿಯಿಂದ ದುರ್ಗಳ ಕಡೆಗೆ ಹೊರಳುವುದೆಂದು ಆ ದಂಪತಿಗಳು ಯೋಚಿಸಿದರು.

ವೀರಯ್ಯ ಯಾವುದೋ ನೆಪಹೂಡಿ ಗಾಡಿ ಮಾಡಿಕೊಂಡು ಪಟ್ಟಣಕ್ಕೆ ಹೋಗಿ, ದುರ್ಗಳನ್ನು ಮನೆಗೆ ಕರೆದುಕೊಂಡು ಬಂದನು. ದುರ್ಗಳಿಗೆ ಅಂದಕ್ಕಿಂತಲೂ ಆಡಂಬರ ಹೆಚ್ಚು. ಬುದ್ಧಿಗಿಂತಲೂ ಅಹಂಕಾರ ಬಹಳ. ತಾನೊಬ್ಬ ಲಕ್ಷಾಧಿಕಾರಿಣಿಯಂತೆ ವರ್ತಿಸುತ್ತಿದ್ದಳು.ಬಲು ಸೋಮಾರಿ. ಕುಳಿತಿದ್ದ ಸ್ಥಳದಲ್ಲೇ ಕಸಸೇರಿಸುವಳು ! ತನ್ನ ಸ್ವಂತ ಕೆಲಸಗಳನ್ನೂ ಸಹ ಬೇರೊಬ್ಬರು ಮಾಡಿಕೊಡಬೇಕು. ಈ ಹಳ್ಳಿಗಾಡಿನಲ್ಲಿರುವುದು ಬೇಸರವೆಂದು ಗೊಣಗುಟ್ಟುತ್ತಿದ್ದಳು. ಸದಾ ಹರಟೆ ಕೊಚ್ಚುತ್ತಾ ಇತರರು ಕೂಡ ತಮ್ಮ ಕೆಲಸ ಮಾಡದಂತೆ ಅಡಚಣೆ ಮಾಡುವಳು.

ರಘುವನ್ನು ಕುರಿತು ಅವನ ತಾಯಿ “ಅಪ್ಪಾ, ಮಗೂ, ದುರ್ಗ ಪಟ್ಟಣದಲ್ಲಿ ಬೆಳದಾಕೆ. ಅಲ್ಲಿನ ಕೆಲವಾರು ಚಟಗಳನ್ನು ಕಲಿತಿದ್ದಾಳೆ. ಅವಳ ಮನಸ್ಸು ತುಂಬಾ ಸರಳ. ಅವಳು ನಿನ್ನನ್ನು ಮದುವೆಯಾದರೆ ನಮಗೆ ಐನೂರು ರೂಪಾಯಿ ಆಸ್ತಿ ಬರುತ್ತದೆ. ಈ ಸಂಬಂಧವಾದರೆ ನಿಮ್ಮಪ್ಪನಿಗೆ ತುಂಬಾ ಸಂತೋಷವಾದೀತು. ಆದುದರಿಂದ ನೀನು ಅವಳೊಂದಿಗೆ ಸಹನೆಯಿಂದ ವರ್ತಿಸುತ್ತಿರಬೇಕು ” ಎಂದಳು.

” ಸರಿಯಮ್ಮಾ” ಎಂದ ರಘು, ಮನೆಯಲ್ಲಿ ದುರ್ಗಳ ಕಾಟವನ್ನು ತಡೆಯಲಾರದೆ ಇಬ್ಬರು ನೌಕರರು ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಹಸುವಿಗೆ ಕಾಯಿಲೆ ಬಂದಿತು. ಅದನ್ನು ನೋಡಿಕೊಳ್ಳಲು ನೌಕರ ರಿರಲಿಲ್ಲ. ಆದುದರಿಂದ ವೀರಯ್ಯ ಮಗನೊಂದಿಗೆ ” ಲೋ, ರಘು, ನೀನು ತುಸ ಹಸುವಿನ ಕಡೆ ಗಮನವಿಟ್ಟಿರೋ” ಎಂದನು.

“ ನಾನು ಈಗ ನಗರಕ್ಕೆ ಹೋಗುತ್ತಿದ್ದೇನೆ ಅಪ್ಪಾ, ದುರ್ಗಳಿಗೆ ಯಾವುದೋ ಸಾಮಾನು ಬೇಕಂತೆ ” ಎಂದ ರಘು. ವೀರಯ್ಯನ ಹೆಂಡತಿಗೆ ಏನು ಮಾಡಬೇಕೋ ತಿಳಿಯದಾಯಿತು. ತನಗೆ ಸಹಾಯಮಾಡಲು ಬರುವಂತೆ ಲಕ್ಷ್ಮಿಗೆ ಹೇಳಿ ಕಳುಹಿಸಿದಳು. ತನ್ನ ಅಜ್ಜಿಗೆ ಮೈ ಹುಷಾರಿಲ್ಲವೆಂದೂ, ಬರಲು ಸಾಧ್ಯವಿಲ್ಲವೆಂದೂ ಲಕ್ಷ್ಮಿ ಹೇಳಿಬಿಟ್ಟಳು.

ನಗರಕ್ಕೆ ಹೋದ ರಘು ಹತ್ತು ರೂಪಾಯಿ ಖರ್ಚು ಮಾಡಿ ದುರ್ಗಳು ಕೇಳಿದ ಸಾಮಾನುಗಳನ್ನು ತಂದುಕೊಟ್ಟನು.

ಅಂದು ರಾತ್ರಿ ವೀರಯ್ಯ ಮತ್ತು ಆತನ ಹೆಂಡತಿ ಸಂಸಾರ ತಾಪತ್ರಯಗಳನ್ನು ಕುರಿತು ಮಾತನಾಡಿಕೊಂಡರು.

“ ಈ ದುರ್ಗ ಬಂದಾಗಲಿಂದ ಎಲ್ಲಾ ತಾರುಮಾರಾಗಿದೆ. ಮೈಗಳ್ಳೆ, ಹಾಂ. ನನ್ನನ್ನು ತನ್ನ ಕೆಲಸದವಳೆಂದೇ ನೋಡುತ್ತಾ ಎಲ್ಲಾ ಈ ಚೋಟುದ್ದದ ಪೋರಿ. ಎಷ್ಟು ಸಾಮಾನುಗಳನ್ನು ಒಡೆದು ಹಾಕಿದಳೋ, ಎಷ್ಟು ವಸ್ತುಗಳನ್ನು ಹಾಳುಮಾಡಿದಳೋ ಆ ದೇವರಿಗೇ ಗೊತ್ತಾಗಬೇಕು. ನಿಕ್ಷೇಪ ದಂತಿದ್ದ ಮನೆ ನರಕವಾಗಿದೆ. ಅಬ್ಬಾ, ನನ್ನ ತಲೆ ಚಿಟ್ಟು ಹಿಡಿದುಹೋಗಿದೆ” ಎಂದಳು ಆಕೆ. “ಅಷ್ಟೇಯೇ? ನಮ್ಮ ರಘು ಅವಳ ಗುಲಾಮನಾಗಿಬಿಟ್ಟಿದ್ದಾನೆ. ಅವಳು ಆಸ್ತಿ ತರುವುದಂತಿರಲಿ, ಅದಕ್ಕೆ ಹತ್ತರಷ್ಟು ಅವಳು ಅವನಿಂದ ಖರ್ಚುಮಾಡಿಸುತ್ತಾಳೆ, ನೋಡುತ್ತಿರು” ಎಂದ ಆತ.

ಆ ದಂಪತಿಗಳು ಮತ್ತೆ ದುರ್ಗಳನ್ನು ಪಟ್ಟಣಕ್ಕೆ ಕಳುಹಿಸಿಬಿಡಲು ನಿರ್ಧರಿಸಿದರು. ಮಾರನೇಯ ದಿನವೇ ವೀರಯ್ಯ ಯಾವುದೋ ಕೆಲಸದ ನೆಪಹೂಡಿ ದುರ್ಗಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು.

ಅಂದೇ ವೀರಯ್ಯನ ಹೆಂಡತಿ ಲಕ್ಷ್ಮಿಯ ಗುಡಿಸಲಿಗೆ ಹೋಗಿ “ ಲಕ್ಷ್ಮೀ, ನಿನ್ನ ಅಜ್ಜಿಗೆ ಮೈಸ್ವಸ್ಥವಿಲ್ಲ. ಈ ದುಸ್ಥಿತಿಯಲ್ಲಿ ನಮ್ಮ ಮನೆಗೆ ಕೆಲಸ ಮಾಡಲು ಬರುವಂತೆ ನಿನಗೆ ಹೇಳುವುದು ಚೆನ್ನಲ್ಲ. ನೀವಿಬ್ಬರೂ ನಮ್ಮ ಮನೆಗೆ ಬಂದು ಅಲ್ಲೇ ಇದ್ದುಬಿಡಿ. ನನಗೆ ಸಹಾಯಕಳಿಲ್ಲದೆ ಆಗುವಂತಿಲ್ಲ. ನಿನ್ನ ಅಜ್ಜಿಗ ಬೇಕಾದ ಉಪಚಾರ ನಾನು ಮಾಡುತ್ತೇನೆ ?” ಎಂದಳು. ಲಕ್ಷ್ಮಿ ಅಜ್ಜಿಯೊಂದಿಗೆ ವೀರಯ್ಯನ ಮನೆಗೆ ಬಂದುಬಿಟ್ಟಳು. ಅವಳು ಆ ಮನೆಯಲ್ಲಿ ಕಾಲಿಟ್ಟ ಕೂಡಲೇ ಮತ್ತೆ ಮನೆ ಮೊದಲಿನಂತಾಯಿತು. ಮನೆಯನ್ನು ಒಪ್ಪವಾಗಿಡುವುದರಲ್ಲಿ ಲಕ್ಷ್ಮಿ ತುಂಬಾ ನುರಿತವಳು.

ಕೊಂಚಕಾಲ ಕಳೆಯಿತು. ಒಂದು ದಿನ ವೀರಯ್ಯ ಮಗನನ್ನು “ಮಗೂ, ಹಿಂದೊಂದು ಸಲ ಲಕ್ಷ್ಮಿಯನ್ನು ಮದುವೆಯಾಗಲು ಬಯಸಿದ್ದೆ. ಈಗಲೂ ಅವಳನ್ನು ಮದುವೆಯಾಗುವ ಇಚ್ಛೆಯಿದೆಯೆ?” ಎಂದು ಕೇಳಿದ.

” ನನಗೆ ಅವಳನ್ನು ಮದುವೆಯಾಗುವ ಬಯಕೆ ಈಗಲೂ ಇದೆ. ಈ ನಡುವೆ ಅಡ್ಡ ತಂದೊಡ್ಡಿದವರು ನೀವೇ ?” ಎಂದ ರಘು ಅಸಮಾಧಾನದಿಂದ, ನಂತರ ಲಕ್ಷ್ಮಿ ಮತ್ತು ರಘು ಇವರ ಮದುವೆಯಾಯಿತು. ಆ ಸಂಸಾರ ದಲ್ಲಿ ಸುಖಶಾಂತಿಗಳು ನೆಲೆಸಿದುವು.

CLICK HERE MORE STORIES

Leave a Comment