KCSR RULE: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರ ನಡತೆ ಹೇಗಿರಬೇಕು? ಏನು ಹೇಳುತ್ತೆ ನಿಯಮ?
KCSR: ಸರ್ಕಾರಿ ನೌಕರರ ನಡತೆ ಹೀಗೆ ಇರಬೇಕು ಎಂದು ತಿಳಿಸಿಕೊಡುವ ಉದ್ದೇಶದಿಂದ ಪ್ರಸ್ತುತ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 2021 ಜಾರಿಯಲ್ಲಿದ್ದು, 1 ರಿಂದ 35 ನಿಯಮಗಳಲ್ಲಿ ತಿಳಿಸಿ ಕೊಡಲಾಗಿದೆ.
ಇಂದಿನ ಸಮಾಜದಲ್ಲಿ ಚಿಕ್ಕ ಮಕ್ಕಳಿಂದ ವಯಸ್ಸದ ವ್ಯಕ್ತಿಗಳವರೆಗೂ ಸಾಮಾಜಿಕ ಜಾಲತಾಣ ವನ್ನು ಉಪಯೋಗಿಸುತ್ತಿದ್ದು, ಇಡೀ ಸಮಾಜ ಹಾಗೂ ಹೋಗುಗಳೇ ಕೈ ಬೆರಳ ತುದಿಯಲ್ಲಿ ಸಿಗುವಂತೆ ಮಾಡಿಕೊಳ್ಳಲಾಗುತ್ತದೆ.
ಇಂತಹ ವಿಷಯದಲ್ಲಿ ಸರ್ಕಾರಿ ನೌಕರರು ಹೊರತಾಗಿಲ್ಲ., ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರ ನಡತೆ ಹೇಗಿರಬೇಕು ಎಂಬುದನ್ನು ಕನಾಸೇ( ನಡತೆ) ನಿಯಮಗಳು, 2021 ರ ನಿಯಮ 10 ರಲ್ಲಿ ತಿಳಿಸಿಕೊಡಲಾಗಿದ್ದರೂ ಸಹ ಕರ್ನಾಟಕ ಸರ್ಕಾರ ಸುತ್ತೋಲೆ ಸಂಖ್ಯೆ:ಸಿಆಸುಇ 36 ಎಸ್ಆರ್ಸಿ 2021, ದಿನಾಂಕ:14.12.2021 ರಲ್ಲಿ ವಿವರಿಸಲಾಗಿದೆ.
1.ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು, 2021ರ ನಿಯಮ 3(1)ರ ಅನುಸಾರ ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರಲೇಬೇಕು.
2.ಸರ್ಕಾರಿ ನೌಕರನಿಗೆ ಅನುಚಿತವಾದ ಯಾವುದನ್ನೂ ಮಾಡುವಂತಿಲ್ಲ.
3.ಇದೇ ನಿಯಮಗಳ ನಿಯಮ 3(2)ರ ಅನುಸಾರ ಪ್ರತಿಯೊಬ್ಬ ಸರ್ಕಾರಿ ನೌಕರನು ರಾಜಕೀಯವಾಗಿ ತಟಸ್ಥನಾಗಿರಬೇಕು.
4.ಇದೇ ನಿಯಮಗಳ ನಿಯಮ 3(5)ರ ಅನುಸಾರ ಪ್ರತಿಯೊಬ್ಬ ಸರ್ಕಾರಿ ನೌಕರನು ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಸಮರ್ಥಿಸಬೇಕು ಮತ್ತು ಎತ್ತಿಹಿಡಿಯಬೇಕು. ಹಾಗೂ ನ್ಯಾಯಸಮ್ಮತವಾಗಿ ಮತ್ತು ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕು. ಹಾಗೂ ಯಾವುದೇ ವ್ಯಕ್ತಿಯ ಅಥವಾ ಪಕ್ಷದ ಬಗ್ಗೆ ತಾರತಮ್ಮ ಮಾಡುವಂತಿಲ್ಲ.
5.2021ರ ನಿಯಮಗಳ ನಿಯಮ 10ರ ಅನುಸಾರ ಆಕಾಶವಾಣಿ, ದೂರದರ್ಶನ ಪ್ರಸಾರ, ಚಲನಚಿತ್ರ ಅಥವಾ ಬರವಣಿಗೆಯು ಸಂಪೂರ್ಣವಾಗಿ ಸಾಹಿತ್ಯಕ, ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ್ದಾಗಿಲ್ಲವಾದರೆ, ಸರ್ಕಾರಿ ನೌಕರನು ನೇಮಿಸಲಾದ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯಬೇಕು.
6.ನಿಯಮ 10ರ 2ನೇ ಪರಂತುಕದಲ್ಲಿ ಇಂತಹ ಚಟುವಟಿಕೆಗಳಿಂದ ಸರ್ಕಾರಿ ನೌಕರರ ಅಧಿಕೃತ ಕರ್ತವ್ಯಗಳಿಗೆ ಭಾದಕವಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ.
7.ಇದೇ ನಿಯಮಗಳ ನಿಯಮ 11ರ ಅನುಸಾರ ಸರ್ಕಾರಿ ನೌಕರನು ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತಹ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡುವಂತಿಲ್ಲ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸವಂತಿಲ್ಲ.
8.ಆದರೆ, ಸರ್ಕಾರಿ ನೌಕರರ ಮಾನ್ಯತೆ ಪಡೆದ ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರ ಸೇವಾ ಸ್ಥಿತಿ ಗತಿ ರಕ್ಷೆಸುವ ಅಥವಾ ಅವುಗಳಲ್ಲಿ ಸುಧಾರಣೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶಗಳಿಗಾಗಿ ವ್ಯಕ್ತಪಡಿಸಿದ ಪ್ರಾಮಾಣಿಕ ಅಭಿಪ್ರಾಯಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
9.ಅಂತರ್ಜಾಲದ ವೆಬ್ಸೈಟ್ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಿಲ್ಲ.
10.ಹಾಗೂ ಸರ್ಕಾರದ ನೀತಿಗೆ ವಿರುದ್ದವಾದ ಅಥವಾ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಲೇಖನ, ಅಭಿಪ್ರಾಯ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ.
ಮೇಲೆ ತಿಳಿಸಿದ ಎಲ್ಲಾ ನಿಯಮಗಳು ಒಬ್ಬ ಸರ್ಕಾರಿ ನೌಕರನು ಸಮಾಜದಲ್ಲಿ ಜವಾಬ್ದಾರಿಯುತ ವಾಗಿ ನಡೆದುಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸುತ್ತವೆ.
ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರನು ಪ್ರದರ್ಶಿಸುವ ವರ್ತನೆಯು ಸಹ ಕ.ನಾ.ಸೇ(ನಡತೆ) ನಿಯಮಗಳು, 2021ರ ವ್ಯಾಪ್ತಿಗೆ ಒಳಪಡುತ್ತವೆ. ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (CCA) ನಿಯಮಗಳು, 1957ರ ಅವಕಾಶಗಳನ್ವಯ ಸಕ್ಷಮ ಪ್ರಾಧಿಕಾರಗಳು ಶಿಸ್ತುಕ್ರಮ ಕೈಗೊಳ್ಳಬಹುದಾಗಿದೆ.