ಸ್ನಾತಕೋತ್ತರ ಪ್ರವೇಶಕ್ಕೆ ಪರೀಕ್ಷೆ ಶುಲ್ಕ ಪ್ರಕಟ.

ಪರಿಷ್ಕರಣೆಗೊಳಿಸಿದ ಶಿಕ್ಷಣ ಇಲಾಖೆ.

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸ್ನಾತಕೋತ್ತರ ಪದವಿ ಕೋರ್ಸ್ ಬೋಧಿಸುವ ಕಾಲೇಜುಗಳಲ್ಲಿನ ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವಂತೆ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಕಳೆದ ವರ್ಷ ಈ ಹಿಂದಿನ ಶುಲ್ಕವನ್ನೇ ಮುಂದುವರಿಸಿ ಆದೇಶಿಸಲಾಗಿತ್ತು. ಆದರೆ, ಈ ಬಾರಿ ಬೇಡಿಕೆ ಹಿನ್ನೆಲೆ 2023-24ನೇ ಸಾಲಿಗೆ ನಿಗದಿಪಡಿಸಲಾಗಿದ್ದ ಶುಲ್ಕವನ್ನು ಮರುಪರಿಷ್ಕರಿಸಿ 2024-25 ನೇ ಸಾಲಿಗೆ ಅನ್ವಯಿಸುವಂತೆ ಸೂಚಿಸಲಾಗಿದೆ.

ಅರ್ಜಿ ಶುಲ್ಕ, ಪ್ರವೇಶ, ಬೋಧನಾ, ಪ್ರಯೋಗಾಲಯ, ವೈದ್ಯಕೀಯ, ವರ್ಗಾವಣೆಪತ್ರ ಶುಲ್ಕ, ವಿದ್ಯಾಭ್ಯಾಸ ಪ್ರಮಾಣಪತ್ರ ಹಾಗೂ ಗ್ರಂಥಾಲಯ ಶುಲ್ಕ ಸೇರಿ 1650 ರೂ. ಎಂದು ನಿಗದಿ ಮಾಡಲಾಗಿದೆ. ಇದರೊಂದಿಗೆ ವಾಚನಾಲಯ, ಕ್ರೀಡಾ ಶುಲ್ಕ, ಕಾಲೇಜು ಮ್ಯಾಗಜಿನ್, ಸಾಂಸ್ಕೃತಿಕ ಚಟುವಟಿಕೆ ಹಾಗೂ ಗುರುತಿನ ಚೀಟಿ, ಕಾಲೇಜು ಅಭಿವೃದ್ಧಿ ಹಾಗೂ ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ ಸೇರಿ 1985 ರೂ. ಎಂದು ತಿಳಿಸಲಾಗಿದೆ. ಮೇಲಿನ ಎರಡೂ ಮೊತ್ತ ಸೇರಿದರೆ 3,635 ರೂ. ಆಗಲಿದೆ. ಇದರೊಂದಿಗೆ ಎಂಎಸ್ಸಿಗೆ (ಕಂಪ್ಯೂಟರ್ ಸೈನ್ಸ್‌, ಮೈಕ್ರೋಬಯಾಲಜಿ, ಬಯೋಟೆಕ್ನಾಲಜಿ ಮತ್ತು ಇನ್ನಾರ್ಮೇಷನ್ ಸೈನ್ಸ್) ಬಳಕೆ ಶುಲ್ಕವಾಗಿ 3000 ರೂ. ಎಂಸಿಎಗೆ 6000 ರೂ. ಮತ್ತು ಎಂಬಿಎಗೆ 1000 ರೂ. ನೀಡಬೇಕಾಗುತ್ತದೆ.

ಇನ್ನು, ಎಂಬಿಎ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ನಿಗದಿಪಡಿಸಿದ 20 ಸಾವಿರ ರೂ. ಶುಲ್ಕವನ್ನೇ 2024-25ನೇ ಸಾಲಿಗೆ ಮುಂದುವರಿಸಿದೆ. ಇದರ ಹೊರತಾಗಿ ಆಯಾ ವಿಶ್ವವಿದ್ಯಾಲಯಗಳು ನಿಗದಿಪಡಿಸಿದ ಪ್ರವೇಶ ಶುಲ್ಕ, ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.

ಪ್ರವೇಶ ಅವಧಿ ವಿಸ್ತರಣೆ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎಂಬಿಎ, ಎಂಸಿಎ,ಎಂಟೆಕ್, ಎಂ.ಆರ್ಕ್ ಸೇರಿದಂತೆ ಸ್ನಾತಕೋತ್ತರ ಕೋರ್ಸ್‌ಗಳ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನಂತರದ ಪ್ರಕ್ರಿಯೆಗಳ ಅವಧಿ ವಿಸ್ತರಿಸಿದೆ. ಅದರಂತೆ ಸೀಟು ಪಡೆದವರು ಶುಲ್ಕ ಪಾವತಿ, ಪ್ರವೇಶಪತ್ರ ಡೌನ್‌ಲೋಡ್‌ಗೆ ಡಿ.10ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ದಾಖಲಾಗಲು ಡಿ. 11 ಕೊನೆಯ ದಿನ.

ಒಂದು ವೇಳೆ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟು ರದ್ದುಪಡಿಸಿಕೊಳ್ಳಬೇಕಾದಲ್ಲಿ ಡಿ.11ರ ಸಂಜೆ ನಾಲ್ಕು ಗಂಟೆಯೊಳಗೆ ರದ್ದುಪಡಿಸಿಕೊಳ್ಳಬಹುದು. ಅಂತ ಅಭ್ಯರ್ಥಿಗಳಿಗೆ 5,000 ರೂ. ಕಡಿತಗೊಳಿಸಿ ಉಳಿದ ಮೊತ್ತವನ್ನು ಪಾವತಿಸಲಾಗುವುದು. ಈ ಅವಧಿಯ ನಂತರ ಸೀಟು ರದ್ದುಪಡಿಸಿಕೊಂಡಲ್ಲಿ ಪೂರ್ಣ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಥವಾ ಪೂರ್ಣ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

CLICK HERE TO DOWNLOAD ORDER

Leave a Comment