Application Invitation for Recruitment of Medical Assistant Posts in Navy

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿಗಳು, ಸಮರ ನೌಕೆಗಳು, ಯುದ್ಧ ವಿಮಾನಗಳು ಹಾಗೂ ಕ್ಷಿಪಣಿ ವಾಹಕಗಳಲ್ಲಿ ಕೆಲಸ ಮಾಡುವ ಅವಕಾಶದ ಜತೆಗೆ, ಕ್ಲಿನಿಕ್‌ಗಳು, ವಾರ್ಡ್ ನಿರ್ವಹಣೆ ಹಾಗೂ ವೈದ್ಯಕೀಯ ಸಂಬಂಧಿತ ವಿಭಾಗಗಳನ್ನು ನೋಡಿಕೊಳ್ಳುವ ಕೆಲಸ ನಿಮ್ಮದಾಗಲಿದೆ. ಇದಕ್ಕಾಗಿ ವೈದ್ಯಕೀಯ ಸಹಾಯಕ ಹುದ್ದೆಗಳ ನೇಮಕಾತಿಗೆ ಭಾರತೀಯ ನೌಕಾಪಡೆ ಸೀನಿಯರ್ ಸೆಕೆಂಡರಿ ರಿಕ್ರೂಟ್ (ಎಸ್‌ಎಸ್‌ಆರ್) ವಿಭಾಗದಲ್ಲಿ ಭರ್ತಿ ಮಾಡಿಕೊಳ್ಳುತ್ತಿದೆ. ದ್ವಿತೀಯ ಪಿಯುಸಿಯನ್ನು ವಿಜ್ಞಾನ ವಿಭಾಗದಲ್ಲಿ ಅದರಲ್ಲೂ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರವನ್ನು ಅಧ್ಯಯನ ಮಾಡಿದಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಾಥಮಿಕ ತರಬೇತಿ ಬಳಿಕ ಕಾಯಂ ಸೇವಾ ಹುದ್ದೆ ನೀಡಲಾಗುತ್ತದೆ. ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಪಿಯು ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ನೇಮಕಾತಿ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ. ನಂತರ ದೈಹಿಕ ಸಹಿಷ್ಣುತಾ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಅಂತಿಮ ನೇಮಕಾತಿಗೆ ಪರಿಗಣಿಸಲಾಗುತ್ತದೆ.

ವಿದ್ಯಾರ್ಹತೆ:

ಸೀನಿಯರ್ ಸೆಕೆಂಡರಿ ರಿಕ್ರೂಟ್ (ಮೆಡಿಕಲ್ ಅಸಿಸ್ಟೆಂಟ್ ) ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕ ಮತ್ತು ಒಟ್ಟಾರೆ ಶೇ 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಪಿಯುಸಿ ಪಾಸಾದವರಿಗೆ ಅರ್ಜಿ ಸಲ್ಲಿಸಲು ಅವಕಾಶ

20 ವರ್ಷ ಈ ಸೇವಾವಧಿ

ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಸೇವಾವಧಿ ಕನಿಷ್ಠ 20 ವರ್ಷಗಳ ಸೇವಾವಧಿಯನ್ನು ನಿಗದಿ ಮಾಡಲಾಗಿದೆ. ವೇತನದ ಜತೆಗೆ, ಇತರ ಭತ್ಯೆ, ವೈದ್ಯಕೀಯ ಸೌಲಭ್ಯ, ವಿಮೆ ಯೋಜನೆಗಳಿಗೂ ಅರ್ಹರಾಗಿರುತ್ತಾರೆ. 47,600-1,51,100 ರೂ. ವೇತನ ಶ್ರೇಣಿಯ – ಹುದ್ದೆಯವರೆಗೂ ಬಡ್ತಿಗೆ ಅವಕಾಶ ಇರಲಿದೆ.

ಅಕ್ಟೋಬರ್‌ನಲ್ಲಿ ಪರೀಕ್ಷೆ

ಹುದ್ದೆಗೆ ಅಭ್ಯರ್ಥಿಗಳು joinindiannavy.gov.in ಲಾಗ್ ಇನ್ ಆಗುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ದೈಹಿಕ ಕ್ಷಮತೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆಗಳನ್ನು ಅಕ್ಟೋಬ‌ರ್ ಮಧ್ಯ ಭಾಗದಲ್ಲಿ ಆಯೋಜಿಸಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಅಂಕಗಳೇ ಆಧಾರ:

12ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕಾತಿಗೆ ಆಹ್ವಾನಿಸಲಾಗುತ್ತದೆ. ಕನಿಷ್ಠ 157 ಸೆಂ.ಮೀ ಎತ್ತರ ಮತ್ತು ಕನಿಷ್ಠ 5 ಸೆಂ.ಮೀ ಎದೆಯ ವಿಸ್ತರಣೆಯನ್ನು ಹೊಂದಿರುವವರಿಗೆ ದೂರದ ಓಟ, ಪುಷ್-ಅಪ್ ಸೇರಿ ವಿವಿಧ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ನಡೆಸಲಾಗುತ್ತದೆ. ಈ ಹಂತದಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ಹೇಳಲಾಗುತ್ತದೆ. ನಂತರ ದಾಖಲೆ ಪರಿಶೀಲನೆ, ವಿಸ್ತ್ರತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟಾರೆ 100 ಅಂಕಗಳ ಪ್ರಶ್ನೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಇಂಗ್ಲಿಷ್, ವಿಜ್ಞಾನ, ಜೀವಶಾಸ್ತ್ರ, ಮತ್ತು ಸಾಮಾನ್ಯ ಅರಿವು/ತಾರ್ಕಿಕ ಸಾಮರ್ಥ್ಯ ಕುರಿತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ವಿಭಾಗವು 25 ಅಂಕಗಳನ್ನು ಹೊಂದಿರುತ್ತದೆ. ಪರೀಕ್ಷೆಯ ಒಟ್ಟು ಅವಧಿ ಒಂದು ಗಂಟೆಯಾಗಿದೆ.

ವೇತನ ಶ್ರೇಣಿ

ಓಡಿಶಾದ ಚಿಲ್ಕಾದಲ್ಲಿರುವ ನೌಕಾ ನೆಲೆಯಲ್ಲಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾಥಮಿಕ ತರಬೇತಿ ನೀಡಲಾಗುತ್ತದೆ. ನಂತರ ವೃತ್ತಿಪರ ತರಬೇತಿಗೆ ನಿಯೋಜಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ 14,600ರೂ. ಸೈಪೆಂಡ್ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ರಕ್ಷಣಾ ವೇತನ ಹಂತ 3ರ ಅನ್ವಯ 21,700-69,100ರೂ. ಗಳ ವೇತನ ಶ್ರೇಣಿ ನಿಗದಿ ಮಾಡಲಾಗುತ್ತದೆ.

ವಯೋಮಿತಿ:

ಅಭ್ಯರ್ಥಿಗಳು 01-ನವೆಂಬರ್-2003 ರಿಂದ 30 ಏಪ್ರೀಲ್ 2007 ಎರಡು ದಿನಾಂಕಗಳನ್ನು ಒಳಗೊಂಡಂತೆ) ನಡುವೆ ಜನಿಸಿದವರಾಗಿರಬೇಕು.

ಅಧಿಸೂಚನೆ: https://bit.ly/3TgkfLg

ಹೆಚ್ಚಿನ ವಿವರಗಳಿಗಾಗಿ: joinindiannavy.gov.in

ಅರ್ಜಿ ಸಲ್ಲಿಕೆಗೆ ಕೊನೇ ದಿನ 17.09.2024


2 thoughts on “Application Invitation for Recruitment of Medical Assistant Posts in Navy”

Leave a Comment