Janaushadhi Kendra: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಹಂಚಿಕೆ ಮಾಡುವ ಕುರಿತು ಆದೇಶ-2025

Janaushadhi Kendra: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಹಂಚಿಕೆ ಮಾಡುವ ಕುರಿತು ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Janaushadhi Kendra:ಪ್ರಸ್ತಾವನೆ: ಮೇಲೆ ಓದಲಾದ ಕ್ರ.ಸಂ(1) ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಹಾಗೂ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮೂರು 200 ಜನೌಷಧಿ ಮಳಿಗೆಗಳನ್ನು ಸ್ಥಾಪಿಸಲು ಸರ್ಕಾರದ ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರ.ಸಂ. (2) ರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರುಗಳು ಬ್ರಾಂಡೆಡ್ ಔಷಧಿಗಳನ್ನು ರೋಗಿಗಳಿಗೆ ಸಲಹಾ ಚೀಟಿ (Prescription) ರೂಪದಲ್ಲಿ ನೀಡುವುದನ್ನು ನಿಷೇಧಿಸಲಾಗಿದೆ ಹಾಗೂ ಆರೋಗ್ಯ: ಸಂಸ್ಥೆಗಳಲ್ಲಿ ಲಭ್ಯವಿರದ ಔಷಧಿಗಳನ್ನು ಸಂಬಂಧಿಸಿದ ವೈದ್ಯರುಗಳು, ರೋಗಿಗಳಿಗೆ ನೀಡುವ ಸಲಹಾ ಚೀಟಿ (Prescription) ಗಳನ್ನು Generic ಹೆಸರಿನಲ್ಲಿ ಬರೆಯಲು ಕಡ್ಡಾಯವಾಗಿ ಸೂಚಿಸಿದೆ. ಈ ಔಷಧಿಗಳನ್ನು ಆರೋಗ್ಯ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಿರುವ ಜನೌಷಧಿ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಔಷಧಿ ಸಿಗುವ ಬಗ್ಗೆ ರೋಗಿಗಳಿಗೆ ವಿವರಿಸಿ ಅಲ್ಲಿಂದ ಆ ಔಷಧಿಗಳನ್ನು ಖರೀದಿಸಲು ಸಲಹೆ ನೀಡುವಂತೆ ಸಹ ಸೂಚಿಸಿದೆ ಹಾಗೂ ಜನರಿಕ್ ಔಷಧಿಗಳು, ಬ್ರಾಂಡೆಡ್ ಔಷಧಿಯಷ್ಟೇ ಉತ್ತಮ ಗುಣಮಟ್ಟ, ರೋಗನಿವಾರಕ ಸಾಮರ್ಥ್ಯ ಹೊಂದಿರುತ್ತದೆ ಎಂದು ರೋಗಿಗಳಿಗೆ ಶಿಕ್ಷಣ ಹಾಗೂ ಪ್ರಚಾರದ ಮೂಲಕ ಜಾಗೃತಿ ಮೂಡಿಸುವುದು ಮತ್ತು ಜನರಿಕ್ ಔಷಧಿಗಳನ್ನು ಈ ಒಂದು ಸದುದ್ಧೇಶಕ್ಕಾಗಿ ತೆರೆದಿರುವ ಜನೌಷಧಿ ಮಳಿಗೆಗಳ ಮೂಲಕವೇ ಖರೀದಿಸಲು ಜನಸಾಮಾನ್ಯರಿಗೆ ಉತ್ತೇಜನದ ಮುಖಾಂತರ ತಿಳುವಳಿಕೆ ನೀಡಲು ಆದೇಶಿಸಿದೆ.

ಮೇಲೆ ಓದಲಾದ ಕ್ರ.ಸಂ (3)ರ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಏಕಕಡತದಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸ್ತುತ 207 ಜನೌಷಧಿ ಕೇಂದ್ರಗಳಿಗೆ ಅನುಮತಿ ನೀಡಲಾಗಿರುತ್ತದೆ. ಅರ್ಜಿದಾರರು ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಸಲ್ಲಿಸಿದ ಅರ್ಜಿಯನ್ನು ARS ಮುಂದೆ ಮಂಡಿಸಿ ಅದರ ಅನುಮೋದನೆಯ ನಂತರ ಆಯುಕ್ತರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದಿಂದ ಅನುಮೋದನೆ ಆದ ನಂತರ ಅರ್ಜಿದಾರರಿಗೆ ಅನುಮತಿ ನೀಡಲಾಗುತ್ತದೆ. ಆದುದರಿಂದ, ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸುವ ನೀತಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿರುತ್ತದೆ.

ಪ್ರಸ್ತುತ ಜನೌಷಧಿ ಕೇಂದ್ರಗಳ ಸ್ಥಾಪನೆಗೆ 31 ಅರ್ಜಿಗಳು ಆಯುಕ್ತರ ಹಂತದಲ್ಲಿ ಬಾಕಿ ಇರುತ್ತವೆ. ಸದರಿ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದ ಈಗಿನ ನೀತಿಯು, ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಹಳೆಯದಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಸಿಯನ್ನು ಮರುಪರಿಶೀಲಿಸುವುದು ಅಗತ್ಯವಿರುತ್ತದೆ. ಆದುದರಿಂದ ಆಯುಕ್ತಾಲಯದಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ಕೋರಿರುತ್ತಾರೆ.

ಪ್ರಸ್ತುತ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ಔಷಧಿಗಳನ್ನು ಹೊರಗಿನಿಂದ ಖರೀದಿಸಲು ಶಿಫಾರಸ್ಸನ್ನು ಮಾಡದಂತೆ ನೋಡಿಕೊಳ್ಳುವುದು ಸರ್ಕಾರ ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದೊಳಗೆ ಜನಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವ್ಯತಿರಿಕ್ತವಾಗುತ್ತದೆ.

ಭಾರತದ ಬಿ.ಪಿ.ಪಿ.ಐ ಬ್ಯೂರೋ ಆಫ್ ಫಾರ್ಮ ಈ ಜನೌಷಧಿ ಕೇಂದ್ರಗಳಿಗೆ ನೋಡಲ್ ಕೇಂದ್ರ ಸಂಸ್ಥೆಯಾಗಿದ್ದು, ಈ ಕೇಂದ್ರಗಳಿಂದ ಖರೀದಿಸುವ ಔಷಧಿಗಳಿಗೆ ವಿಶೇಷ ರಿಯಾಯ್ತಿಯನ್ನು ಒದಗಿಸುತ್ತದೆ.

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಪ್ರಸ್ತಾವನೆ ಮತ್ತು ಲಭ್ಯವಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 173 ಪಿಟಿಡಿ 2025, ಬೆಂಗಳೂರು. ದಿನಾಂಕ:14.05.2025

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಜನೌಷಧಿ ಕೇಂದ್ರಗಳ ಹಂಚಿಕೆಯನ್ನು ಸ್ಥಗಿತಗೊಳಿಸಲು ಮತ್ತು ಅದಕ್ಕೆ ಅನುಗುಣವಾಗಿ ಜನೌಷಧಿ ಕೇಂದ್ರಗಳ ಪ್ರಾರಂಭಕ್ಕಾಗಿ ಆಯುಕ್ತಾಲಯದಲ್ಲಿ ಅನುಮೋದನೆಗಾಗಿ ಬಾಕಿ ಇರುವ 31 ಅರ್ಜಿಗಳನ್ನು ತಿರಸ್ಕರಿಸಲು ಅನುಮೋದನೆ ನೀಡಿ ಆದೇಶಿಸಿದೆ.

ಆದಾಗ್ಯೂ, ಸರ್ಕಾರಿ ಆಸ್ಪತ್ರೆಗಳ ಹೊರಗೆ ಜನೌಷಧಿ ಕೇಂದ್ರಗಳ ಸ್ಥಾಪನೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರದ ಕಾರಣ ಮುಂದುವರಿಯಬಹುದಾಗಿದೆ.

ಮುಂದುವರೆದು,ಪ್ರಸ್ತುತ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಸ್ತಿತ್ವದಲ್ಲಿರುವ ಜನೌಷದಿ ಕೇಂದ್ರಗಳನ್ನು ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಯಮಗಳ (MOU) ಪ್ರಕಾರ ಸ್ಥಗಿತಗೊಳಿಸಲು ಅಗತ್ಯ ಕ್ರಮವಹಿಸತಕ್ಕದ್ದು.

ಹಾಗೆಯೇ, ಜೆನೆರಿಕ್ ಔಷಧಿಗಳ ಖರೀದಿಗೆ ಬಿ.ಪಿ.ಪಿ.ಐ ಯೊಂದಿಗೆ ಕೆ.ಎಸ್.ಎಂ.ಎಸ್.ಸಿ.ಎಲ್ ರವರು ವಿಶೇಷ ದರಗಳನ್ನು ರೂಪಿಸಲು ಸೂಚಿಸಿದೆ. ಪರ್ಯಾಯವಾಗಿ, ಆಸ್ಪತ್ರೆಗಳು ಬಿ.ಪಿ.ಪಿ.ಐ (BPPI) ಯಿಂದ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸಕ್ಕದ್ದು. ಎಂದು ಆದೇಶದಲ್ಲಿ ತಿಳಿಸಲಾಗಿದೆ.

CLICK HERE TO DOWNLOAD ORDER 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!