UNESCO REPORT : 272 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗೆ! ಶೈಕ್ಷಣಿಕ ವಲಯದಲ್ಲಿ ಆತಂಕ ತಂದ ಯುನೆಸ್ಕೋ ವರದಿ
UNESCO REPORT-2025: ಒಂದಲ್ಲ ಎರಡಲ್ಲ ಜಗತ್ತಿನಾದ್ಯಂತ 272 ಮಿಲಿಯನ್ ಬಂಗಿಂತಲೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ ಎನ್ನುವ ವರದಿಯನ್ನು ಯುನೆಸ್ಕೋದ ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ತಂಡ(ಜಿಇಎಂ) ಬಹಿರಂಗಪಡಿಸಿದ್ದು, ಇದು ಈ ಹಿಂದಿನ ಅಂಕಿ-ಅಂಶಗಳನ್ನು ಪರಿಗಣಿಸಿದರೆ 21 ಮಿಲಿಯನ್ಗಿಂತ ಹೆಚ್ಚು ಎನ್ನುವುದು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿದೆ.
2024ರ ವಿಶ್ವ ಜನಸಂಖ್ಯಾ ವರದಿ ಪ್ರಕಾರ, 2025ರಲ್ಲಿ 6ರಿಂದ 17 ವರ್ಷ ವಯಸ್ಸಿನ ಮಕ್ಕಳ ಸಂಖ್ಯೆ 49 ಮಿಲಿಯನ್ (ಶೇ.3.1ರಷ್ಟು) ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ದೇಶ-ದೇಶಗಳ ನಡುವಿನ ಯುದ್ಧಗಳ ವಿಚಾರದಿಂದ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗೆ ಉಳಿದುಕೊಂಡಿದ್ದಾರೆ ಎನ್ನುವುದು ವರದಿಯಲ್ಲಿ ಉಲ್ಲೇಖವಾದ ವಿಚಾರ.
ಎಲ್ಲ ಹಂತದಲ್ಲೂ ಔಟ್:
ಪ್ರಾಥಮಿಕ ಶಾಲಾ ವಯಸ್ಸಿನ ಸುಮಾರು ಶೇ. 11ರಷ್ಟು ಮಕ್ಕಳು (78 ಮಿಲಿಯನ್), ಪ್ರೌಢ ಶಾಲಾ ವಯಸ್ಸಿನ ಹದಿಹರೆಯದವರಲ್ಲಿ ಶೇ.15ರಷ್ಟು (64 ಮಿಲಿಯನ್) ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಶೇ.31ರಷ್ಟು (130 ಮಿಲಿಯನ್) ಶಾಲೆಯಿಂದ ಹೊರಗಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ಸರಾಸರಿಗಳ ಸ್ಥಿರವಾದ ಪ್ರವೃತ್ತಿಗಳನ್ನು ಸೃಷ್ಟಿಸಲು ಈ ವರದಿಯು ಬಹು ದತ್ತಾಂಶ ಮೂಲಗಳನ್ನು (ಆಡಳಿತಾತ್ಮಕ, ಸಮೀಕ್ಷೆ ಮತ್ತು ಜನಗಣತಿ) ಬಳಸಿಕೊಂಡಿದೆ.
ಆದರೆ ದೇಶಗಳು ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಂಡರೆ ಪ್ರಗತಿಯನ್ನು ದಾಖಲಿಸಬಹುದಾಗಿದ್ದು, 2030ರ ಹೊತ್ತಿಗೆ ಇದರ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯೂ ಇದೆ ಎಂದು ವರದಿ ತಿಳಿಸಿದೆ. ಸಂಘರ್ಷಗಳು ಶಾಲಾ ದಾಖಲಾತಿ ಮತ್ತು ಹಾಜರಾತಿಯ ಮೇಲೆ ಪರಿಣಾಮ ಬೀರುತ್ತವೆ. ಆದರೆ ಸಂಘರ್ಷಗಳಿಂದ ಉಂಟಾಗುವ ಅಡಚಣೆಗಳು ದತ್ತಾಂಶ ಸಂಗ್ರಹಣೆಗೆ ಅಡ್ಡಿಯಾಗುತ್ತವೆ. ಇದು ಸಮಸ್ಯೆಯ ನಿಜವಾದ ಪ್ರಮಾಣವನ್ನು ಅರ್ಥಮಾಡಿಕೊಳ್ಳುವಲ್ಲಿ ಕೂಡ ಕೆಲವೊಮ್ಮೆ ತಪ್ಪುಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ, ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣದ ಮೇಲೆ ತಾಲಿಬಾನ್ ನಿಷೇಧ ಹೇರಿರುವುದರಿಂದ 1.4 ಮಿಲಿಯನ್ ಹುಡುಗಿಯರು ಶಾಲಾ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ.
ಕ್ರಮಶಾಸ್ತ್ರೀಯ ವಿಧಾನಗಳು:
ಶಾಲೆಯಿಂದ ಹೊರಗಿರುವ ಮಾದರಿಯು ಆಡಳಿತಾತ್ಮಕ ದಾಖಲೆಗಳು, ಸಮೀಕ್ಷೆಗಳು ಮತ್ತು ಜನಗಣತಿಗಳು ಸೇರಿದಂತೆ ಬಹು ದತ್ತಾಂಶ ಮೂಲಗಳನ್ನು ಬಳಸುತ್ತದೆ. ಈ ವಿಧಾನ ಸ್ಥಿರವಾದ ಪ್ರಾದೇಶಿಕ ಮತ್ತು ಜಾಗತಿಕ ಸರಾಸರಿಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಆದರೆ ಸಮೀಕ್ಷೆಯ ದತ್ತಾಂಶದ ಮೇಲಿನ ಅವಲಂಬನೆಯು ಮಕ್ಕಳ ಸಂಖ್ಯೆಯ ಒಂದು ಭಾಗವನ್ನು ಮಾತ್ರ ಶಾಲೆಯಿಂದ ಹೊರಗಿದೆ ಎಂದು ವರ್ಗೀಕರಿಸುತ್ತದೆ. ಮತ್ತೊಂದೆಡೆ, ಆಡಳಿತಾತ್ಮಕ ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಅಂಕಿ-ಅಂಶಗಳಲ್ಲಿ ಹೆಚ್ಚಳಕ್ಕೂ ಕಾರಣವಾಗಬಹುದು ಎನ್ನಲಾಗಿದೆ.
ಬಡದೇಶಗಳೇ ಹಿಂದೆ:
ಬಡ ದೇಶಗಳು ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು ಶ್ರೀಮಂತ ದೇಶಗಳಲ್ಲಿ ಶೇ.3ರಷ್ಟು ಇದ್ದರೆ ಬಡ ದೇಶಗಳಲ್ಲಿ ಶೇ.36ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಯಿಂದ ಹೊರಗುಳಿದ ಜನಸಂಖ್ಯೆಯ ಸುಮಾರು ಮುಕ್ಕಾಲು ಭಾಗ ಮಧ್ಯ ಮತ್ತು ದಕ್ಷಿಣ ಏಷ್ಯಾ (ಶೇ.34) ಮತ್ತು ಆಫ್ರಿಕಾ (ಶೇ.39) ದೇಶದಲ್ಲಿದೆ. ಜಾಗತಿಕವಾಗಿ ಶಾಲೆಯಿಂದ ಹೊರಗುಳಿದವರಲ್ಲಿ ಹುಡುಗಿಯರಿ ಗಿಂತ ಹುಡುಗರೇ ಹೆಚ್ಚು. 139 ಮಿಲಿಯನ್ ಹುಡುಗರಾದರೆ 133 ಮಿಲಿಯನ್ ಹುಡುಗಿಯರು ಎನ್ನುವುದು ವರದಿಯಲ್ಲಿ ನೀಡಿರುವ ಮಾಹಿತಿ. 2007ರಿಂದ ಇಂಥದ್ದೊಂದು ಟ್ರೆಂಡ್ ಹೆಚ್ಚಾಗುತ್ತಿದೆ.
2030ಕ್ಕೆ 84 ಮಿಲಿಯನ್ ಹೊರಗೆ:
ಈ ವರದಿಯ ಪ್ರಕಾರ, ಕಡಿಮೆ ಆದಾಯದ ದೇಶಗಳಲ್ಲಿ ಶೇ.70ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 2030ರ ವೇಳೆಗೆ ಈ ದೇಶಗಳು ಶಿಕ್ಷಣ ರಂಗದಲ್ಲಿ ಪ್ರಗತಿ ಸಾಧಿಸಲು ವಿಫಲರಾದರೆ ಸರಿಸುಮಾರು 84 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿಯುವ ಅಪಾಯದಲ್ಲಿದ್ದಾರೆ. ಶಾಲೆಯಿಂದ ಹೊರಗುಳಿದ ದರಗಳನ್ನು ಕಡಿಮೆ ಮಾಡುವಲ್ಲಿ ಈ ದೇಶಗಳ ಪ್ರಾಮಾಣಿಕ ಪ್ರಯತ್ನಗಳು ಸಾಗಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
✅ ರಾಷ್ಟ್ರಗಳ ನಡುವೆ ನಡೆಯುವ ಸಂಘರ್ಷಗಳು ಕೂಡ ಶಿಕ್ಷಣದಿಂದ ಹೊರಗೆ ಉಳಿಯುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಅಪಘಾನಿಸ್ತಾನ ಸೇರಿದಂತೆ ಈಗ ಇಸ್ರೇಲ್ ಜತೆಗೆ ಉಕ್ರೇನ್ ವಿಚಾರಗಳನ್ನು ತೆಗೆದುಕೊಂಡಾಗ ದೊಡ್ಡ ಪ್ರಮಾಣದಲ್ಲಿ ಅಲ್ಲಿನ ಮಕ್ಕಳು ಶಿಕ್ಷಣವನ್ನು ತ್ಯಜಿಸುವ ಪ್ರಮೇಯ ಯುವಜನರು ಹೆಚ್ಚಾಗಿರುತ್ತದೆ. ಭಾರತದ ವಿಚಾರದಲ್ಲಿ ಈ ವರದಿ ಕೊಂಚ ಸಮಾಧಾನವಾದ ವಿಚಾರವನ್ನು ಪ್ರಸ್ತಾಪ ಮಾಡಿದರೂ ಕೂಡ ಇಲ್ಲಿ ಶಾಲೆಗೆ ಬಿಡುವವರ ಸಂಖ್ಯೆ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುವುದು ಕೂಡ ಚಿಂತಿಸುವ ವಿಚಾರ
– ತ್ರಿಶಾನ್ ಡಿಸೋಜ, ಮುಖ್ಯಸ್ಥರು, ಎಜು ಫಾರ್ ಅಲ್ ಸಂಸ್ಥೆ, ಬೆಂಗಳೂರು.
✅ ಯುನೆಸ್ಕೋದ ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ತಂಡ(ಜಿಇಎಂ) ವರದಿ ನಿಜಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಚಿಂತನೆಗೆ ಇಂಬುಕೊಡುವ ವಿಚಾರವಾಗಿದೆ. ಬಹಳಷ್ಟು ಬಡ ರಾಷ್ಟ್ರಗಳಲ್ಲಿ ಈ ಅಧ್ಯಯನಗಳು ನಡೆದು ವರದಿ ಸಿದ್ಧಪಡಿಸಿದರಿಂದ ಇದಕ್ಕೆ ಮುಂದುವರಿದ ರಾಷ್ಟ್ರಗಳು ಶಿಕ್ಷಣ ವಿಚಾರದಲ್ಲಿ ನೆರವಿಗೆ ಮುಂದಾಗಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.
‘ಡಾ.ಮಂಜುನಾಥ್ ಶಿಕ್ಷಣ ತಜ್ಞ, ಮಂಗಳೂರು.