List of SDMCs who made resolutions against providing eggs on all six days of a week (Oct 2024-March 2025)
List of SDMCs: 2024-25 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಿರುವ ಸುತ್ತೋಲೆಯಂತೆ ವಾರದ ಆರು ದಿನಗಳಂದು ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ಸಮರ್ಪಕವಾಗಿ ವಿತರಿಸದೇ, ತಮ್ಮದೇ ಆದ ವಿಧಾನವನ್ನು ಅನುಸರಿಸಿರುವ ಶಾಲಾ SDMC ರವರಿಗೆ ಸೂಕ್ತ ತಿಳುವಳಿಕೆ ನೀಡುವ ಬಗ್ಗೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿರುವಂತೆ, 2024-25ನೇ ಸಾಲಿನಿಂದ ಸೆಪ್ಟೆಂಬರ್ 2024ರಿಂದ ಉಲ್ಲೇಖಿತ (1) ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಅನುಷ್ಠಾನಗೊಳಿಸಿರುವಂತೆ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳಂದು ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ವಿತರಿಸಲಾಗುತ್ತಿದೆ.
ಆದರೆ, ರಾಜ್ಯದ ಕೆಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ರವರು ಸಭೆ ನಡೆಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನಗಳು ಮೊಟ್ಟೆ, ಉಳಿದಂತೆ ಮೂರು ದಿನ ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ, ಇನ್ನೂ ಕೆಲವು ಶಾಲೆಗಳಲ್ಲಿ ಸೋಮವಾರ, ಶನಿವಾರದಂದು ಮೊಟ್ಟೆ ವಿತರಣೆ ಮಾಡದೇ ಬಾಳೆಹಣ್ಣು ವಿತರಣೆ ಮಾಡಲು ನಿರ್ಣಯಿಸಿರುವುದು, ಪೋಷಕರ ಒಪ್ಪಿಗೆ ಪತ್ರ ಪಡೆದಿದ್ದಾಗ್ಯೂ ಸಹ ವಾರದ ಆರೂ ದಿನಗಳಂದು ಮೊಟ್ಟೆ ಸ್ವೀಕರಿಸುವ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸದೇ ಬಾಳೆಹಣ್ಣು ವಿತರಿಸುವ ಬಗ್ಗೆ ಏಕಪಕ್ಷೀಯವಾಗಿ ನಿರ್ಣಯಿಸಿರುವುದು, ಇತ್ಯಾದಿ ಕ್ರಮವಹಿಸಿ ಇಲಾಖೆಯ ಸೂಚನೆಗಳನ್ನು ಎಸ್.ಡಿ.ಎಂ.ಸಿ.ರವರು ಕೈಬಿಟ್ಟಿರುವುದು ಕಂಡುಬಂದಿರುತ್ತದೆ.
APF ಸಂಸ್ಥೆಯ ಪರಿಶೀಲನಾ ತಂಡದವರು ರಾಜ್ಯದಲ್ಲಿ ಅಕ್ಟೋಬರ್ 2024 ರಿಂದ ಮಾರ್ಚ್ 2025 ರವರೆಗೆ ಭೇಟಿ ನೀಡಿದ 762 ಶಾಲೆಗಳ ಪೈಕಿ, ಸುಮಾರು 568 ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ರವರು ಈ ರೀತಿಯ ಅಸಮರ್ಪಕವಾಗಿರುವ ತೀರ್ಮಾನಗಳನ್ನು ತೆಗೆದುಕೊಂಡು ಕ್ರಮವಹಿಸಿರುವುದು ಸದರಿ ಸಭೆಯಲ್ಲಿ ವರದಿ ನೀಡುವುದರ ಮೂಲಕ ಇಲಾಖೆಯ ಗಮನಕ್ಕೆ ತಂದಿದ್ದು, ಶಾಲೆಗಳ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಇದನ್ನು ಪರಿಶೀಲಿಸಲಾಗಿ, ಶಾಲೆಗಳಲ್ಲಿ ಹೀಗೆ ಎಸ್.ಡಿ.ಎಂ.ಸಿ.ರವರು ವಾರದಲ್ಲಿ 6 ದಿನಗಳಂದು ಪೂರಕ ಪೌಷ್ಠಿಕ ಆಹಾರವಾಗಿರುವ ಮೊಟ್ಟೆಯನ್ನು ಪೋಷಕರ ಒಪ್ಪಿಗೆ ಇದ್ದಾಗ್ಯೂ ಸಹ ವಿತರಿಸದೇ 2 ಇಲ್ಲವೇ 3 ದಿನಗಳಂದು ವಿತರಿಸುತ್ತಿರುವುದು ಸರಿಯಾದ ಕ್ರಮವಾಗಿರುವುದಿಲ್ಲ.
ಈ ರೀತಿಯಾದ ತೀರ್ಮಾನಗಳನ್ನು ಎಸ್.ಡಿ.ಎಂ.ಸಿ.ರವರು ಸ್ವಯಂ ಪ್ರೇರಿತರಾಗಿ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಸದರಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಇಲಾಖೆಯ ಕ್ಲಸ್ಟರ್ ಹಂತದ, ತಾಲ್ಲೂಕು ಹಂತದ ಹಾಗೂ ಜಿಲ್ಲಾ ಹಂತದ ಎಲ್ಲಾ ಸಂಬಂಧಪಟ್ಟ ಮೇಲ್ವಿಚಾರಣಾಧಿಕಾರಿಗಳು ಇಂತಹ ಪ್ರಕರಣಗಳನ್ನು ತಮ್ಮ ವ್ಯಾಪ್ತಿಯಲ್ಲಿ ಗಮನಿಸದೇ ಇರುವುದು ಹಾಗೂ ಇಂತಹ ತಪ್ಪು ಆಚರಣೆಗಳನ್ನು ಇದುವರೆವಿಗೂ ಸರಿಪಡಿಸದೇ ಇರುವುದು ಕರ್ತವ್ಯಲೋಪಕ್ಕೆ ಮತ್ತು ಕಾರ್ಯಕ್ರಮದ ಹಿತಾಸಕ್ತಿಯನ್ನು ಕಡೆಗಣಿಸಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪೌಷ್ಠಿಕ ಬೆಂಬಲದ ಕಾರ್ಯಕ್ರಮಕ್ಕೆ ತೀವ್ರ ಹಿನ್ನಡೆಯಾಗುತ್ತದೆ. ಇದು ಹೀಗೆ ಮುಂದುವರೆದಲ್ಲಿ ಸಂಬಂಧಪಟ್ಟ ಮೇಲ್ವಿಚಾರಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು ಮುಂದೆ ಇಂತಹ ತಪ್ಪುಗಳು ಆಗದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು, ಹಾಗೂ ಈ ಪತ್ರದೊಂದಿಗೆ ಲಗತ್ತಿಸಿರುವ (568 ಶಾಲೆಗಳ ಪಟ್ಟಿ : ಅನುಬಂಧ-1) ಶಾಲೆಗಳಿಗೆ ಸಂಬಂಧಿಸಿದ ತಾಲ್ಲೂಕು ಹಂತದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಲಸ್ಟರ್ ಹಂತದ ಸಿ.ಆರ್.ಪಿ.ಗಳು, ತಾಲ್ಲೂಕು ಪಂಚಾಯತ್ ಪಿ.ಎಂ.ಪೋಷಣ್ ಸಹಾಯಕ ನಿರ್ದೇಶಕರು ಕೂಡಲೇ ತಂಡದಲ್ಲಿ ಭೇಟಿ ನೀಡಿ, ಸದರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ತೆಗೆದುಕೊಂಡಿರುವ ತಪ್ಪು ನಿರ್ಣಯಗಳನ್ನು ಸರಿಪಡಿಸಿ, ಇಲಾಖೆಯು ನೀಡಿರುವ ಮಾರ್ಗಸೂಚಿಯಂತೆ ವಾರದ ಆರು ದಿನಗಳಂದು ಮೊಟ್ಟೆಯನ್ನು ಸ್ವೀಕರಿಸುವ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ವಿತರಿಸುವ ಅಗತ್ಯ ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ.
ಈ ಮೂಲಕ ನೀಡಿರುವ ಜ್ಞಾಪನ ಪತ್ರದ ಕುರಿತಾಗಿ ಜಿಲ್ಲಾವಾರು ಉಪನಿರ್ದೇಶಕರು (ಆಡಳಿತ) ರವರು ಅಗತ್ಯ ಕ್ರಮಗಳನ್ನು ಕೈಗೊಂಡು, ತಮ್ಮ ವ್ಯಾಪ್ತಿಯಲ್ಲಿರುವ ಸಂಬಂಧಿಸಿದ ಶಾಲೆಗಳಲ್ಲಿ ಇಲಾಖೆಯ ಮಾರ್ಗಸೂಚಿಯಂತೆ ಸೂಕ್ತ ಅನುಪಾಲನೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ರಾಜ್ಯ ಕಛೇರಿಗೆ ದಿನಾಂಕ: 15/07/2025ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.