State Level Best Teacher Award-2025:ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ / ಶಿಕ್ಷಕ ಪ್ರಶಸ್ತಿಗೆ ಅರ್ಜಿ
State Level Best Teacher Award-2025: ತರಗತಿ ಕೋಣೆಯಲ್ಲಿ ವಿಷಯ ಪಾಂಡಿತ್ಯದ ಜೊತೆಗೆ ಪೂರಕ ಪರಿಕರಗಳೊಂದಿಗೆ ಬೋಧನಾ ಚಟುವಟಿಕೆಗಳನ್ನು ಸಾದರಪಡಿಸಿ ಮಕ್ಕಳಲ್ಲಿ ಶಾಶ್ವತ ಮತ್ತು ಸಂತಸದಾಯಕ ಕಲಿಕೆಯನ್ನುಂಟು ಮಾಡುವ ಬಹುಮುಖ ವ್ಯಕ್ತಿತ್ವದ ಶಿಕ್ಷಕರನ್ನು ಉಪನ್ಯಾಸಕರನ್ನು ಮುಖ್ಯ ಶಿಕ್ಷಕರನ್ನು ಹಾಗೂ ಪ್ರಾಂಶುಪಾಲರನ್ನು ಗುರ್ತಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸೆಪ್ಟೆಂಬರ್-05 ರಂದು ಕ್ರಮವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡುವುದರ ಮೂಲಕ ಗೌರವಿಸುತ್ತಿವೆ.
ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ತೊಡಗಿಸಿ. ಕೊಳ್ಳುವ ಹಲವು ಅತ್ಯುತ್ತಮ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು ಅಂತಹ ತೆರೆಮರೆಯ ಸಾಧಕರನ್ನು ಸ್ವಯಂಪ್ರೇರಿತವಾಗಿ ಗುರುತಿಸಿ ಸದರಿ ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕೆನ್ನುವುದು ಸರ್ಕಾರದ ಮತ್ತು ಶಾಲಾ ಶಿಕ್ಷಣ ಇಲಾಖೆಯ ಆಶಯವಾಗಿರುತ್ತದೆ. ಇದರಿಂದಾಗಿ ರಾಜ್ಯದ ಶಿಕ್ಷಕ ವೃಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮತ್ತಷ್ಟು ಹುರುಪಿನಿಂದ ತೊಡಗಿಸಿಕೊಳ್ಳಲು ಪ್ರೇರೇಪಣೆಯನ್ನು ಮತ್ತು ಉತ್ತೇಜನವನ್ನು ಒದಗಿಸಿದಂತಾಗುತ್ತದೆ.
ಈ ನಿಟ್ಟಿನಲ್ಲಿ ಸಕಾಲಿಕ ಕ್ರಮಗಳನ್ನು ವಹಿಸಬೇಕಾಗಿರುವುದು ಸಂಬಂಧಿಸಿದ ಇಲಾಖಾಧಿಕಾರಿಗಳ ಆದ್ಯ ಕರ್ತವ್ಯ ಹಾಗೂ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ. ಅದರಂತೆ, ಸದರಿ ಅಂಶಗಳ ಕುರಿತು ಈ ಸುತ್ತೋಲೆಯಲ್ಲಿರುವ ಮಾರ್ಗದರ್ಶಿ ಸೂತ್ರಗಳನ್ನು ಪರಿಪಾಲಿಸಲು ತಿಳಿಸಿದೆ.
ಪ್ರಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರು ಅರ್ಹ ಶಿಕ್ಷಕರನ್ನು, ಉಪನ್ಯಾಸಕರನ್ನು ಮುಖ್ಯ ಶಿಕ್ಷಕರನ್ನು ಹಾಗೂ ಪ್ರಾಂಶುಪಾಲರನ್ನು ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲು 2018 ರಿಂದ ಜಾರಿಗೆ ತಂದಿರುವ ಆನ್-ಲೈನ್ ವ್ಯವಸ್ಥೆಯ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಸಹ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ / ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು ವಿಶೇಷ ಶಿಕ್ಷಕರನ್ನು ಹಾಗೂ ಮುಖ್ಯ ಶಿಕ್ಷಕರನ್ನು ಆಯ್ಕೆ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್-ಲೈನ್ ಮೂಲಕವೇ ನಿರ್ವಹಿಸಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಅನುಮತಿಯನ್ನು ನೀಡಿರುತ್ತದೆ. ಈ ಪ್ರಕಾರ ಕಳೆದ ಆರು ವರ್ಷಗಳಿಂದ ಸದರಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತಿದೆ.
ಅದರಂತೆ 2025-26 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಹ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ಆನ್-ಲೈನ್ ಪೋರ್ಟಲ್ https://schooleducation.karnataka.gov.in ರ ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯಿಂದ ಪ್ರಾರಂಭವಾಗಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳ ಶಿಫಾರಸ್ಸು ಪ್ರಕ್ರಿಯೆ ಹಾಗೂ ರಾಜ್ಯ ಮಟ್ಟದ ಆಯ್ಕೆ ಸಮಿತಿ ಕೈಗೊಳ್ಳುವ ಅಂತಿಮ ಆಯ್ಕೆಪಟ್ಟಿಯವರೆಗಿನ ಎಲ್ಲಾ ಹಂತಗಳನ್ನು /ಪ್ರಕ್ರಿಯೆಗಳನ್ನು ಕೆಳಕಂಡ ವೇಳಾಪಟ್ಟಿಯ ಅನುಸಾರ ಸಂಪೂರ್ಣವಾಗಿ ಆನ್-ಲೈನ್ ಮೂಲಕ ನಡೆಸಲು 2025-26 ನೇ ಸಾಲಿನ “ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ / ಶಿಕ್ಷಕ “ ಪ್ರಶಸ್ತಿಗೆ ಆಯ್ಕೆಯಾಗ ಬಯಸಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಉದ್ದೇಶಿಸಲಾಗಿದೆ.
ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಇರಬೇಕಾದ ಅರ್ಹತೆಗಳು ಮತ್ತು ಅನುಸರಿಸಬೇಕಾದ ಕಾರ್ಯ ವಿಧಾನ ಕೆಳಕಂಡಂತಿದೆ.
ಅರ್ಹತೆಗಳು.
1. ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಅಥವಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಯಂ ಆಗಿ ನೇಮಕವಾಗಿ / ಅನುದಾನಿತ ಪ್ರಾಥಮಿಕ ಅಥವಾ ಅನುದಾನಿತ ಪ್ರೌಢಶಾಲೆಗಳಲ್ಲಿ ಅನುದಾನ ಸಹಿತವಾಗಿ ಅನುಮೋದನೆಗೊಂಡು ಕನಿಷ್ಠ ಹತ್ತು ವರ್ಷಗಳ (ಈ ಸುತ್ತೋಲೆ ಹೊರಡಿಸಿರುವ ದಿನಾಂಕದಲ್ಲಿದ್ದಂತೆ) ತೃಪ್ತಿದಾಯಕ ಸೇವೆಯನ್ನು ಸಲ್ಲಿಸಿರುವ ಹಾಗೂ ಇದರಲ್ಲಿ, ಕಳೆದ ಐದು ವರ್ಷಗಳಿಂದ ಶಾಲೆಯಲ್ಲಿ ಬೋಧನೆಯನ್ನು ಮಾಡುತ್ತಿರುವ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಈ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
2. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ತಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಒಳಗೊಂಡ ಸಮಗ್ರ ಮಾಹಿತಿಯನ್ನು ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಆನ್-ಲೈನ್ ಅರ್ಜಿಯ ಮೂಲಕ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. ಇದರಲ್ಲಿ ಕೋವಿಡ್-19 ರ ಶೈಕ್ಷಣಿಕ ವರ್ಷಗಳಲ್ಲಿ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆ ನಿಗದಿಪಡಿಸಿದ್ದ ಪರ್ಯಾಯ ಮಾರ್ಗಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಕಾರ್ಯಪ್ರವೃತ್ತರಾಗಿರಬೇಕು.
3. ಯಾವುದೇ ಗಂಭೀರ ಆರೋಪ, ಶಿಸ್ತು ಪ್ರಕರಣ, ಕ್ರಿಮಿನಲ್ ಪ್ರಕರಣ, ಇಲಾಖಾ ವಿಚಾರಣೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣವನ್ನು ಎದುರಿಸುತ್ತಿರುವವರು ಹಾಗೂ ವ್ಯತಿರಿಕ್ತ ಷರಾ ಇರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
4. ಈಗಾಗಲೇ ರಾಜ್ಯ / ರಾಷ್ಟ್ರ ಪ್ರಶಸ್ತಿ ಪಡೆದಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಸಲ್ಲಿಸುವ ಕಾರ್ಯ ವಿಧಾನ.
1. ಅರ್ಜಿ ಸಲ್ಲಿಸುವ ಮುನ್ನ ಶಾಲಾ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣ (ವೆಬ್ ಸೈಟ್) https://schooleducation.karnataka.gov.in ದ ಮುಖಪುಟದಲ್ಲಿರುವ ಈ ಸುತ್ತೋಲೆ ಮತ್ತು ತತ್ಸಂಬಂಧಿ ಬಳಕೆದಾರರ ಕೈಪಿಡಿ (USER MANUAL) ಯನ್ನು ಸಂಪೂರ್ಣವಾಗಿ ಓದಿ ಮನನ ಮಾಡಿಕೊಳ್ಳುವುದು.
2. ನಂತರ ಶಾಲಾ ಶಿಕ್ಷಣ ಇಲಾಖೆಯ https://schooleducation.karnataka.gov.in ಅಂತರ್ಜಾಲ ತಾಣದ ಮುಖ ಪುಟದ ಬಲ ಭಾಗದಲ್ಲಿರುವ ” ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ / ಶಿಕ್ಷಕ ಪ್ರಶಸ್ತಿ ” ಎಂಬ ಕೊಂಡಿಯನ್ನು (ಲಿಂಕ್) ಕ್ಲಿಕ್ ಮಾಡಿ ವೆಬ್-ಪೋರ್ಟಲ್ ಲಾಗಿನ್ ಪುಟಕ್ಕೆ ಭೇಟಿ ನೀಡುವುದು. ಅಲ್ಲಿ ತಮ್ಮ ಎಂಪ್ಲಾಯಿ ಐಡಿ (ಕೆ.ಜಿ.ಐ.ಡಿ ಸಂಖ್ಯೆ / ಎಲ್.ಐ.ಸಿ ವಿಮಾ ಸಂಖ್ಯೆ) ಯನ್ನು, ಇ.ಇ.ಡಿ.ಎಸ್‌ನಲ್ಲಿ ದಾಖಲಿಸಿರುವ ತಮ್ಮ ಮೊಬೈಲ್‌ಗೆ ಬರುವ One Time Password (O.T.P) ಯನ್ನು ಹಾಗೂ ಈ ವೆಬ್ ಸ್ಟ್ರೀನ್‌ನಲ್ಲಿ ಕಾಣುವ ಸೆಕ್ಯುರಿಟಿ ಕೋಡ್ ಇವುಗಳನ್ನು ನಮೂದಿಸಿ ಲಾಗಿನ್ ಆಗಬೇಕು.
ಒಂದು ವೇಳೆ, ಇ.ಇ.ಡಿ.ಎಸ್‌ನಲ್ಲಿ ದಾಖಲಿಸಿರುವ ತಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದಲ್ಲಿ ಹಣ ಸೆಳೆಯುವ & ಬಟವಾಡೆ (ಡಿ.ಡಿ.ಒ) ಅಧಿಕಾರಿಯ ಮೂಲಕ ಲಿಖಿತ ಮನವಿಯನ್ನು teacheraward2025@gmail.com- e-mali ಗೆ ಸಲ್ಲಿಸಿದ್ದಲ್ಲಿ ಮೊಬೈಲ್ ಸಂಖ್ಯೆಯನ್ನು ಇಂಧೀಕರಿಸಲು ನಿಯಮಾನುಸಾರ ಕ್ರಮವಹಿಸಲಾಗುವುದು.
3. ಅನುಬಂಧ-01 ರಲ್ಲಿ ನೀಡಲಾಗಿರುವ ಮಾದರಿ ಅರ್ಜಿ ನಮೂನೆಯನ್ನು ಪರಾಮರ್ಶಿಸಿ ಅದರಂತೆ ತಮ್ಮ ವೈಯಕ್ತಿಕ ಮತ್ತು ಸೇವಾ ವಿವರಗಳು, ಸೇವಾವಧಿಯಲ್ಲಿ ಮಾಡಿರುವ ವಿಶೇಷ ಸಾಧನೆಗಳು ಹಾಗೂ ಕೋವಿಡ್-19 ರ ಅವಧಿಯ ಶೈಕ್ಷಣಿಕ ಸಾಲುಗಳಲ್ಲಿ ಸರ್ಕಾರ ಮತ್ತು ಶಾಲಾ ಶಿಕ್ಷಣ ನಿಗದಿಪಡಿಸಿದ ಪರ್ಯಾಯ ಮಾರ್ಗಗಳ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ವಹಿಸಲಾಗಿರುವ ಕ್ರಮಗಳು ಸೇರಿದಂತೆ ಕಳೆದ ಐದು ಸಾಲುಗಳ ವಿವರಗಳನ್ನು ಒಳಗೊಂಡ 02 ಎಂ.ಬಿ ಗೆ ಮೀರದ ಪೂರಕ ದಾಖಲೆಗಳೊಂದಿಗೆ (ಆಡಿಯೋ ವೀಡಿಯೋ. ಫೋಟೋಗಳು ಇತ್ಯಾದಿ…) ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಆನ್-ಲೈನ್‌ನಲ್ಲಿ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
4. ಹೀಗೆ ಅರ್ಜಿ ಸಲ್ಲಿಸುವಾಗ ಅರ್ಜಿಯಲ್ಲಿನ ಅಂಶಗಳಿಗೆ ಯೂನಿಕೋಡ್ನಲ್ಲಿ ವಿವರಣೆಯನ್ನು ಹಾಗೂ ಅದಕ್ಕೆ ಅನುಗುಣವಾಗಿ ಪೂರಕ ದಾಖಲೆಗಳನ್ನು ಹಾಗೂ ಲಿಂಕ್‌ಗಳನ್ನು ಆಯಾ ಅಂಶಗಳ ಎದುರಿನಲ್ಲಿ ಆನ್-ಲೈನ್ ನಲ್ಲಿ (ತಾಂತ್ರಿಕ ಅಡಚಣೆಗಳು ಉಂಟಾಗದೇ, ಸುಸೂತ್ರವಾಗಿ ವೀಕ್ಷಿಸುವ ರೀತಿಯಲ್ಲಿ) ಅಪ್-ಲೋಡ್ ಮಾಡಬೇಕು. ಅರ್ಜಿಯಲ್ಲಿ ಅಗತ್ಯವಿಲ್ಲದೇ ಯಾವುದೇ ಅಂಶವನ್ನು ವಿವರಣೆಯನ್ನು, ದಾಖಲೆಗಳನ್ನು ಆಡಿಯೋಗಳನ್ನು ವೀಡಿಯೋಗಳನ್ನು ಅಪ್ ಲೋಡ್ ಮಾಡಬಾರದು ಹಾಗೂ ಪುನರಾವರ್ತನೆ ಮಾಡಬಾರದು.ಉದಾ:- You Tube ಲಿಂಕ್ ಅಳವಡಿಸುವ ವಿಧಾನ – ಅರ್ಜಿದಾರರು ತಮ್ಮ ವೈಯಕ್ತಿಕ You Tube ಖಾತೆಗೆ ವೀಡಿಯೋಗಳನ್ನು ಅಪ್‌ಲೋಡ್ ಮಾಡಿ. SHARE (ಹಂಚಿಕೆ) ಬಟನ್ ಕ್ಲಿಕ್ ಮಾಡಿ, ಬಳಿಕ Copy Link (ಲಿಂಕ್ ನಕಲಿಸು) ಆಯ್ಕೆಯನ್ನು ಕ್ಲಿಕ್ ಮಾಡಿ ಪಡೆದ ಲಿಂಕ್ ಅನ್ನು ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಆಯ್ಕೆ ತಂತ್ರಾಂಶದಲ್ಲಿ ಅಳವಡಿಸಬಹುದಾಗಿದೆ. Google Drive ಲಿಂಕ್ ಅಳವಡಿಸುವ ವಿಧಾನ – ಇದೇ ರೀತಿಯಲ್ಲಿ Google Drive ಮೂಲಕವೂ ವೀಡಿಯೋಗಳನ್ನು ಅಪ್ ಲೋಡ್ ಮಾಡಬಹುದು. ಅಪ್ ಲೋಡ್ ಮಾಡಿದ ನಂತರ, ಆ ವೀಡಿಯೋ ಮೇಲೆ Share (ಹಂಚಿಕೆ) ಬಟನ್ ಕ್ಲಿಕ್ ಮಾಡಿ, General access Anyone with the link ಆಯ್ಕೆ ಮಾಡಿ Role (ಪಾತ್ರ)ಅನ್ನು Viewer (ವೀಕ್ಷಕ) ಎಂದು ನಿಗದಿಪಡಿಸಿ. Copy link (ಲಿಂಕ್ ನಕಲಿಸು) ಆಯ್ಕೆಯನ್ನು ಕ್ಲಿಕ್ ಮಾಡಿ ಪಡೆದ ಲಿಂಕ್ ಅನ್ನು ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಆಯ್ಕೆ ತಂತ್ರಾಂಶದಲ್ಲಿ ಅಳವಡಿಸಬಹುದಾಗಿದೆ.
ಒಂದು ವೇಳೆ, ಅರ್ಜಿದಾರರು ಅಪ್ ಲೋಡ್ ಮಾಡಿರುವ ವಿವರಣೆಗಳು, ದಾಖಲೆಗಳು, ಆಡಿಯೋಗಳು ಹಾಗೂ ವೀಡಿಯೋಗಳು ತಾಂತ್ರಿಕ ದೋಷಗಳಿಂದ ಕೂಡಿದ್ದು ವೀಕ್ಷಣೆ ಸಾಧ್ಯವಾಗದಿದ್ದಲ್ಲಿ, ಅದನ್ನು ಮೌಲ್ಯಮಾಪನದಲ್ಲಿ ಪರಿಗಣಿಸುವುದಿಲ್ಲ ಅರ್ಜಿದಾರರ ಈ ಅಚಾತುರ್ಯಕ್ಕೆ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆ ಹಾಗೂ ಯಾವುದೇ ಹಂತದ ಆಯ್ಕೆ ಸಮಿತಿ ಜವಾಬ್ದಾರರಾಗಿರುವುದಿಲ್ಲ.
5. ಅರ್ಜಿದಾರರು ಸದರಿ ಅರ್ಜಿಯಲ್ಲಿ ತಾವು ಸಲ್ಲಿಸಿರುವ ಎಲ್ಲಾ ಮಾಹಿತಿಯನ್ನು ಎಲ್ಲಾ ವಿವರಗಳನ್ನು ಹಾಗೂ ಎಲ್ಲಾ ಪೂರಕ ದಾಖಲೆಗಳನ್ನು ವೀಕ್ಷಿಸಿ (View ಮಾಡಿ). ಸದರಿ ಮಾಹಿತಿ, ವಿವರಗಳು ಮತ್ತು ಪೂರಕ ದಾಖಲೆಗಳು ನೈಜತೆಯಿಂದ ಕೂಡಿರುತ್ತದೆ / ಸತ್ಯವಾಗಿರುತ್ತದೆ ಎಂದು. ಒಂದು ವೇಳೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸದರಿ ಮಾಹಿತಿ, ವಿವರಗಳು ಮತ್ತು ಪೂರಕ ದಾಖಲೆಗಳು ನೈಜತೆಯಿಂದ ಕೂಡಿಲ್ಲದಿರುವುದು ಹಾಗೂ ಅಸತ್ಯವಾಗಿರುವುದು ಕಂಡುಬಂದಲ್ಲಿ / ಸಾಬೀತಾದಲ್ಲಿ ಅಂತಹ ಪ್ರಕರಣದಲ್ಲಿ ನಿಯಮಾನುಸಾರ ಶಿಸ್ತುಕ್ರಮಕ್ಕೆ ಅರ್ಹರಿರುವುದಾಗಿ ಸ್ವಯಂ ದೃಢೀಕರಣವನ್ನು ಕಡ್ಡಾಯವಾಗಿ ಖುದ್ದು ಅರ್ಜಿದಾರರು ಅರ್ಜಿಯ ಕೊನೆಯಲ್ಲಿ ನೀಡತಕ್ಕದ್ದು ಅದರೊಂದಿಗೆ ಈ ಅಂಶಗಳನ್ನು ಆಯಾ ಶಾಲಾ ಮುಖ್ಯ ಶಿಕ್ಷಕ / ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಿಂದ (ಶಿಕ್ಷಕರ/ವಿಶೇಷ ಶಿಕ್ಷಕರ ಪ್ರಕರಣದಲ್ಲಿ) / ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ (ಮುಖ್ಯ ಶಿಕ್ಷಕರ ಪ್ರಕರಣದಲ್ಲಿ) ದೃಢೀಕರಣವನ್ನು ಖುದು ಅರ್ಜಿದಾರರು ಪಡೆದು, ಪಿ.ಡಿ.ಎಫ್ ಮಾದರಿಯಲ್ಲಿ ಸದರಿ ಅರ್ಜಿಯ ಕೊನೆಯಲ್ಲಿ ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು.
ಅಂತಿಮವಾಗಿ ಆನ್-ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯಾದ (Submit) ಆದ ನಂತರ ಅರ್ಜಿ ಸಲ್ಲಿಸಿರುವ ಬಗ್ಗೆ, ಖಾತ್ರಿ ಪಡಿಸಲು ಅರ್ಜಿದಾರರ ಇ.ಇ.ಡಿ.ಎಸ್‌ನಲ್ಲಿನ ಮೊಬೈಲ್ ಸಂಖ್ಯೆಗೆ ಸಂದೇಶ (ಎಸ್.ಎಂ.ಎಸ್) ಬರುತ್ತದೆ.
6. ಒಂದು ವೇಳೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದಾದರೂ ಮಾಹಿತಿ ಅಥವಾ ದಾಖಲೆ ಬಿಟ್ಟುಹೋಗಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಅರ್ಜಿದಾರರ ಲಿಖಿತ ಕೋರಿಕೆಯ ಮೇರೆಗೆ ಒಂದು ಬಾರಿ ಮಾತ್ರ ಅಂತಹ ಅರ್ಜಿಯನ್ನು / ಪ್ರಸ್ತಾವನೆಯನ್ನು ವಾಪಸ್ಸು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅರ್ಜಿದಾರರ ಲಿಖಿತ ಕೋರಿಕೆಯನ್ನು ಆಧರಿಸಿ, ಈ ಕಛೇರಿಗೆ teacheraward2025@gmail.com ಈ ಇ-ಮೇಲ್ ಮೂಲಕ ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅವಧಿಯಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
7. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಸಂದೇಹಗಳುಂಟಾದಲ್ಲಿ / ಅಡಚಣೆ ಉಂಟಾದಲ್ಲಿ / ತಾಂತ್ರಿಕ ಸ್ವರೂಪದ ಮಾರ್ಗದರ್ಶನದ ಅವಶ್ಯಕತೆ ಇದ್ದಲ್ಲಿ ಇ-ಮೇಲ್ ವಿಳಾಸ teacheraward2025@gmail.com ಅನ್ನು ಸಂಪರ್ಕಿಸುವುದು.
2025-26 ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ / ಶಿಕ್ಷಕ ಪ್ರಶಸ್ತಿಗೆ ಆಯಾ ಜಿಲ್ಲೆಗಳ ಅತ್ಯುತ್ತಮ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಕಂಡಂತೆ ಅರ್ಜಿಗಳನ್ನು ಸಲ್ಲಿಸುವುದನ್ನು ಪ್ರೋತ್ಸಾಹಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳು ಕೆಳಕಂಡ ಕ್ರಮಗಳನ್ನು ವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.
1. ರಾಜ್ಯದ ಎಲ್ಲಾ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿ.ಟಿ.ಇ)ಗಳ ಪ್ರಾಂಶುಪಾಲರು, ಉಪನಿರ್ದೇಶಕರು, ಆಡಳಿತ/ಅಭಿವೃದ್ಧಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರ ತರಬೇತಿ ಕೇಂದ್ರ (ಟಿ.ಟಿ.ಐ), ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಶಾಲಾ ಉಸ್ತುವಾರಿ ಅಧಿಕಾರಿಗಳು ಮತ್ತು ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ-ತಮ್ಮ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಗೆ 2025-26 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ” ಪ್ರಶಸ್ತಿಗೆ ದಿನಾಂಕ : 25-07-2025 ರಿಂದ 10-08-2025 ರವರೆಗೆ ಮೇಲ್ಕಂಡಂತೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವ ಬಗ್ಗೆ, ವ್ಯಾಪಕ ಪ್ರಚಾರದ ಮೂಲಕ, ಆಂದೋಲನದ ಮೂಲಕ, ಶಾಲಾ ಉಸ್ತುವಾರಿ ಅಧಿಕಾರಿಗಳ ಮೂಲಕ, ಖುದ್ದಾಗಿ ಹಾಗೂ ಕಛೇರಿ ಸೂಚನಾ ಫಲಕಯಲ್ಲಿ ಅಳವಡಿಸುವುದರ ಮೂಲಕ ಗಮನಕ್ಕೆ ತರುವುದು.
ಮೇಲ್ಕಂಡ ಕ್ರಮ ಸಂಖ್ಯೆ 1 ರಿಂದ 7 ರವರೆಗಿನ ಅಂಶಗಳನ್ನು ಅನುಸರಿಸಿ ಸದರಿಯವರು ನಿಗದಿತ ಅವಧಿಯೊಳಗೆ ಸುಸೂತ್ರವಾಗಿ ಅರ್ಜಿ ಸಲ್ಲಿಸಲು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಲು ನಿಯಮಾನುಸಾರ ಸೂಕ್ತ ಕ್ರಮಗಳನ್ನು ವಹಿಸಲು ತಿಳಿಸಿದೆ.
2. ಮೇಲ್ಕಂಡ ಎಲ್ಲಾ ಅರ್ಹತೆಗಳು ಇದ್ರೂ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಉತ್ಸಾಹ ತೋರದಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ, ವಿಶೇಷ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರನ್ನು ಗುರುತಿಸಿ ಸಂಬಂಧಿಸಿದ ಮುಖ್ಯಸ್ಥರು, ಶಾಲಾ ಉಸ್ತುವಾರಿ ಅಧಿಕಾರಿಗಳು, ಸಂಬಂಧಿಸಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು(ಆಡಳಿತ) ಹಾಗೂ ಡಯಟ್ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಸದರಿ ಅರ್ಜಿದಾರರಿಗೆ ಉತ್ಸಾಹ ತುಂಬಿ ಮತ್ತು ಹುರಿದುಂಬಿಸಿ ಅರ್ಜಿ ಸಲ್ಲಿಸಲು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಮೂಲಕ ಅಗತ್ಯ ಪ್ರೋತ್ಸಾಹಕ ಕ್ರಮಗಳನ್ನು ಸಕಾಲದಲ್ಲಿ ವಹಿಸುವಂತೆ ಸದರಿ ಅಧಿಕಾರಿಗಳಿಗೆ ತಿಳಿಸಲಾಗಿದೆ.
3. ಈ ಸಂಬಂಧ ಸದರಿ ಕಛೇರಿಗಳಲ್ಲಿ ಆದರಲ್ಲೂ ಮುಖ್ಯವಾಗಿ ಆಯಾ ಡಯಟ್‌ಗಳಲ್ಲಿ ಸಹಾಯ ಕೇಂದ್ರ (Help desk) ಗಳನ್ನು ಈ ಪ್ರಕ್ರಿಯೆ ಅಂತ್ಯದವರೆಗೂ ತೆರೆಯಲು ಹಾಗೂ ಓರ್ವ ನುರಿತ ಮತ್ತು ನಿಷ್ಪಕ್ಷಪಾತವಾದ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನು ನೇಮಿಸಿ, ಆಯಾ ಜಿಲ್ಲಾ ವ್ಯಾಪ್ತಿಯ ಎಲ್ಲಾ ಅರ್ಹ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಈ ಕುರಿತಾದ ಮಾಹಿತಿ ದೊರೆತಿರುವುದನ್ನು ಖಾತರಿಪಡಿಸಿಕೊಂಡು ಸದರಿಯವರು ಮೇಲ್ಕಂಡಂತೆ ಅರ್ಜಿ ಸಲ್ಲಿಸಲು ಪ್ರೇರಣೆ ನೀಡಲು ಅಗತ್ಯ ಕ್ರಮಗಳನ್ನು ವಹಿಸಲು ಹಾಗೂ ಈ ಸಂಬಂಧ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಮತ್ತು ಸದರಿ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಪ್ರಕ್ರಿಯೆಯನ್ನು ನಿರಂತರ ಅನುಪಾಲನೆ ಮಾಡಲು ನಿಯಮಾನುಸಾರ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ವಹಿಸುವಂತೆ ಮೇಲ್ಕಂಡ ಎಲ್ಲಾ ಇಲಾಖಾಧಿಕಾರಿಗಳು ಇಲಾಖಾಧಿಕಾರಿಗಳಿಗೆ ಈ ಮೂಲಕ ತಿಳಿಸಲಾಗಿದೆ.
4. ಮುಂದುವರೆದು, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ, ಅಪರ ಆಯುಕ್ತರ ಕಛೇರಿಗಳ ಹಂತದಲ್ಲಿ ಮತ್ತು ಆಯಾ ವಿಭಾಗೀಯ ಸಹನಿರ್ದೇಶಕರ ಕಛೇರಿಗಳ ಹಂತದಲ್ಲಿ ಹಾಗೂ ಸಹಾಯ ಕೇಂದ್ರ (Help desk) ಗಳನ್ನು ಈ ಪ್ರಕ್ರಿಯೆ ಅಂತ್ಯದವರೆಗೂ ತೆರೆಯಲು ಹಾಗೂ ಓರ್ವ ನುರಿತ ಮತ್ತು ನಿಷ್ಪಕ್ಷಪಾತವಾದ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು, ಅಧೀನ ಕಛೇರಿಗಳ ಅಧಿಕಾರಿಗಳಿಗೆ ಹಾಗೂ ಅರ್ಹ ಅರ್ಜಿದಾರರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಹಾಗೂ ಸದರಿ ನೋಡಲ್ ಅಧಿಕಾರಿಗಳು ಹಾಗೂ ಇಲಾಖಾಧಿಕಾರಿಗಳು ನಿರಂತರ ಅನುಪಾಲನೆ ಮಾಡಿ ರಾಜ್ಯದ ಪ್ರತಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸ್ತಾವನೆಗಳು ಸಲ್ಲಿಕೆಯಾಗುವ ನಿಟ್ಟಿನಲ್ಲಿ ಸದರಿ ಅಧೀನ ಅಧಿಕಾರಿಗಳಿಗೆ ಕಾಲಕಾಲಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲು ಹಾಗೂ ಮೇಲುಸ್ತುವಾರಿ ಮಾಡಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ವಹಿಸುವಂತೆ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ / ಕಲಬುರಗಿ, ನಿರ್ದೇಶಕರು, ಡಿ.ಎಸ್.ಇ.ಆರ್.ಟಿ, ಬೆಂಗಳೂರು, ವಿಭಾಗೀಯ ಸಹನಿರ್ದೇಶಕರು, ಬೆಂಗಳೂರು / ಮೈಸೂರು /ಬೆಳಗಾವಿ / ಕಲಬುರಗಿ ವಿಭಾಗ ಹಾಗೂ ಉಪನಿರ್ದೇಶಕರು. ಕ.ರಾ.ಶಿ.ಕ.ನಿಧಿ., ಬೆಂಗಳೂರು ಇವರುಗಳಿಗೆ ತಿಳಿಸಲಾಗಿದೆ.
5. ವಿವಿಧ ಹಂತಗಳ ಆಯ್ಕೆ ಸಮಿತಿಗಳ ಕುರಿತಾದ ಇತರ ಅಂಶಗಳನ್ನು ತದನಂತರ ತಿಳಿಸಲಾಗುವುದು.
ವಿ.ಸೂ:-ಮೇಲ್ಕಂಡ ಅಂಶಗಳಲ್ಲಿ ಸಂದರ್ಭಾನುಸಾರ ಬದಲಾವಣೆಗಳನ್ನು ತರುವ ಅಧಿಕಾರವನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಕಾಯ್ದಿರಿಸಿಕೊಂಡಿರುತ್ತದೆ.
(ಅಡಕ: ಬಳಕೆದಾರರ ಕೈಪಿಡಿ (USER MANUAL) & ಅನುಬಂಧ-01 ರ ಪ್ರತಿಗಳು).
CLICK HERE TO DOWNLOAD USER MANUAL
CLICK HERE TO DOWNLOAD CIRCULAR