Study for competitive exam: ಸ್ಪರ್ಧಾತ್ಮಕ ಪರೀಕ್ಷೆ ಎಷ್ಟು ಸಮಯ ಓದಬೇಕು? 10 ಅಂಶಗಳು…

Study for competitive exam: ಸ್ಪರ್ಧಾತ್ಮಕ ಪರೀಕ್ಷೆ ಎಷ್ಟು ಸಮಯ ಓದಬೇಕು?

Study for competitive exam: ನಾವು ಒಂದು ದಿನಕ್ಕೆ ಎಷ್ಟು ಸಮಯವನ್ನು ಅಭ್ಯಾಸಕ್ಕೆ ನಾಮ ‘ಮೀಸಲಿಡಬೇಕು ಎಂದು ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ. ಇದಕ್ಕೆ ಉತ್ತರಿಸುವುದು ಬಹಳ ಕಷ್ಟ. ಕೆಲವರು ಅರ್ಧ ಗಂಟೆಯಲ್ಲಿ ಒಂದು ವಿಷಯವನ್ನು ಅರ್ಥ ಮಾಡಿಕೊಂಡರೆ ಇನ್ನು ಕೆಲವರು ಅದೇ ವಿಷಯವನ್ನು ಎರಡು ಗಂಟೆಗಳ ಕಾಲ ಓದಿದರೂ ಆ ವಿಷಯವು ಅರ್ಥವಾಗುವುದಿಲ್ಲ. ಸಿವಿಲ್ ಸರ್ವೀಸಸ್ ಪರಿಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳು ದಿನವೊಂದಕ್ಕೆ 8 ಗಂಟೆಗಳಿಂದ 12 ಗಂಟೆಗಳವರೆಗೆ ಅಭ್ಯಾಸವನ್ನು ಮಾಡುತ್ತಾರೆ. ನೌಕರಿಯಲ್ಲಿದ್ದುಕೊಂಡೇ ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆಯುವವರಿಗೆ ಕೆಲವೊಮ್ಮೆ 6 ಗಂಟೆಗಳ ಅಭ್ಯಾಸ ಮಾಡುವುದು ಕಷ್ಟ. ಹೀಗಾಗಿ ಅವರು ವಾರದ ದಿನಗಳಂದು ದಿನಕ್ಕೆ 5 ಗಂಟೆ ಅಭ್ಯಾಸ ಮಾಡಿ, ವಾರಾಂತ್ಯದಲ್ಲಿ ದಿನವೊಂದಕ್ಕೆ 12 ಗಂಟೆಗಳ ಕಾಲ ಅಭ್ಯಾಸವನ್ನು ಮಾಡುತ್ತಾರೆ. ಇನ್ನೊಬ್ಬರು ಅನುಸರಿಸುವ ಅಭ್ಯಾಸದ ಮಾದರಿಯು ನಮಗೂ ಸೂಕ್ತ ಎಂದು ಅಭ್ಯರ್ಥಿಗಳು ತಿಳಿಯಲೇಬಾರದು.

ಸಾಮರ್ಥ್ಯ ಭಿನ್ನ:

ಪ್ರತಿಯೊಬ್ಬರ ಸಾಮರ್ಥ್ಯವೂ ಬೇರೆ ಬೇರೆಯೇ. ಹೀಗಾಗಿ ನಿಮಗೆ ತಕ್ಕುದಾದ ಮಾದರಿಯನ್ನು ನೀವೇ ರೂಪಿಸಿಕೊಳ್ಳಬೇಕೇ ಹೊರತು ಬೇರೆಯವರಲ್ಲ. ಒಂದು ಅಂಶ ಖಚಿತ. ಅದೇನೆಂದರೆ ಪ್ರತಿಯೊಬ್ಬ ಅಭ್ಯರ್ಥಿಯೂ ಸರಾಸರಿ 8 ಗಂಟೆಗಳ ಅಭ್ಯಾಸವನ್ನು ಮಾಡದಿದ್ದರೆ ಯಶಸ್ಸು ನಿಶ್ಚಿತವಲ್ಲ.

ಕೆಲವರು ಬೆಳಗ್ಗೆ ಅಭ್ಯಾಸ ಮಾಡಲು ಇಷ್ಟಪಡುತ್ತಾರೆ. ಕೆಲವರು ರಾತ್ರಿ ಅಭ್ಯಾಸ ಮಾಡಲು ಇಷ್ಟಪಡುತ್ತಾರೆ. ನಮ್ಮ ಸ್ನೇಹಿತ ರಾತ್ರಿ ಅಭ್ಯಾಸ ಮಾಡಿದ, ನಾನು ರಾತ್ರಿ ಮಾಡುತ್ತೇನೆ.ಎಂದು ಇನ್ನೊಬ್ಬರನ್ನು ಅನುಕರಿಸಲು ಹೋದರೆ ಉಪಯೋಗವಾಗುವುದಿಲ್ಲ. ಅಭ್ಯಾಸ ಮಾಡುವಾಗ ನಿರಂತವಾಗಿ 8 ಗಂಟೆಗಳ ಕಾಲ ಯಾರಿಗೂ ಅಭ್ಯಾಸ ಮಾಡಲು ಸಾಧ್ಯವಿಲ್ಲ.


ಏಕೆಂದರೆ ನಮ್ಮ ಮನಸ್ಸು ಒಂದು ವಿಷಯದ ಬಗ್ಗೆ ಒಂದು ಗಂಟೆಗಿಂತ ಹೆಚ್ಚು ಕಾಲ ತದೇಕಚಿತ್ತದಿಂದ ಗಮನಹರಿಸಲು ಸಾಧ್ಯವಿಲ್ಲ. ಹೀಗಾಗಿ ಬುದ್ದಿವಂತ ಅಭ್ಯರ್ಥಿಗಳು ಬ್ರಾಹ್ಮೀ ಮಹೂರ್ತದಂತಹ ಸಮಯದಲ್ಲಿ (ಸೂರ್ಯೋದಯಕ್ಕೆ 90 ನಿಮಿಷಗಳ ಮುಂಚೆ) ಕಷ್ಟದ ವಿಷಯವನ್ನು ಅಭ್ಯಾಸ ಮಾಡುತ್ತಾರೆ. ಸುಲಭವಾಗಿರುವ ವಿಷಯವನ್ನು ಬೇರೆ ಸಮಯದಲ್ಲಿ ಮಾಡುತ್ತಾರೆ.

ಇನ್ನು ಕೆಲವರು ಒಂದು ಗಂಟೆ ಕಷ್ಟದ ವಿಷಯವನ್ನು ಅಭ್ಯಾಸ ಮಾಡಿ 10 ನಿಮಿಷದ ವಿರಾಮದ ನಂತರ ಒಂದು ಗಂಟೆ ಸುಲಭವಿಷಯವನ್ನು ಅಭ್ಯಾಸ ಮಾಡಿ, ಮತ್ತೆ 10 ನಿಮಿಷದ ವಿರಾಮ ತೆಗೆದುಕೊಳ್ಳುತ್ತಾರೆ. ಹೀಗೆ ಕಠಿಣ ಹಾಗೂ ಸುಲಭ ವಿಷಯಗಳ ಅಭ್ಯಾಸ ಮಾಡುವುದರಿಂದ ಅವರಿಗೆ ಬೋರ್ ಆಗುವುದಿಲ್ಲ. ಕೆಲವು ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ವಿಷಯಗಳು ಮತ್ತು ಪ್ರಿಲಿಮ್ಸ್ ಪರೀಕ್ಷೆಯ ವಿಷಯಗಳನ್ನು ಒಟ್ಟಾಗಿಯೇ ಅಭ್ಯಾಸ ಮಾಡುತ್ತಾರೆ. ಒಂದು ಗಂಟೆಗಳ ಕಾಲ ಐಚ್ಚಿಕ ವಿಷಯವನ್ನು ಓದಿದರೆ ಮುಂದಿನ ಒಂದು ಗಂಟೆ ಸಿ-ಸ್ಯಾಟ್ ಪರೀಕ್ಷೆಯ ಬಗ್ಗೆ ಓದಬಹುದು. ಇನ್ನು ಕೆಲವರು ಒಂದು ಗಂಟೆ ಓದು ಹಾಗೂ ಬರವಣಿಗೆಯನ್ನು ಮಾಡಿ ಮುಂದಿನ ಒಂದು ಗಂಟೆಯನ್ನು ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಲು ಮೀಸಲಿಡುತ್ತಾರೆ. ಏಕೆಂದರೆ ಅಭ್ಯಾಸ ಮಾಡುವುದೆಂದರೆ ಕೇವಲ ಪುಸ್ತಕಗಳನ್ನು ಓದುವುದೇ ಅಲ್ಲವಲ್ಲ. ಅಭ್ಯಾಸವೆಂದರೆ ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವುದು ಮತ್ತು ನಾವು ನಮ್ಮ ಉತ್ತರಗಳನ್ನು ಯಾವ ರೀತಿ ಉತ್ತಮ ಮಾಡಿಕೊಳ್ಳಬಹುದುಎಂದು ಪ್ರಯತ್ನಿಸುವುದು.

ಬ್ರೇಕ್ ತೆಗೆದುಕೊಳ್ಳಿ:

ಅಭ್ಯಾಸ ಮಾಡುವಾಗ ಕಾಲಕಾಲಕ್ಕೆ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತಲೇ ಇರಬೇಕು. ವಿರಾಮ ತೆಗೆದುಕೊಳ್ಳದೆ. ಅಭ್ಯಾಸ ಮಾಡಿದರೆ ಕಲಿತದ್ದು ಮರೆಯುವ ಸಂಭವ ವಿರುತ್ತದೆ. 90 ನಿಮಿಷಗಳ ಅಭ್ಯಾಸದ ನಂತರ 10 ನಿಮಿಷ ಬ್ರೇಕ್ ತೆಗೆದುಕೊಳ್ಳುವುದು ಉತ್ತಮ. ಬ್ರೇಕ್‌ನ ಸಮಯದಲ್ಲಿ ಹೊರಗಡೆ ಹೋಗಿ ಗಾಳಿಯ ಸೇವನೆ ಮಾಡಿ, ಬಿಸಿಲಲ್ಲಿ ನಿಂತು, ಹಸಿರು ಗಿಡಗಳನ್ನು ನೋಡಿ ಮನಸ್ಸನ್ನು ಅಹ್ಲಾದಗೊಳಿಸಿಕೊಳ್ಳಬಹುದು. ಕೆಲವರು ತಾವು ಕಲಿಯಬೇಕಾದ ವಿಷಯವನ್ನು ಪಾಡ್‌ ಕಾಸ್ಟ್‌ಗಳಲ್ಲಿ ಹಾಕಿಕೊಂಡು ವಾಕಿಂಗ್ ಮಾಡುತ್ತಾ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾರೆ.

ಗುಣಮಟ್ಟದ ಕಲಿಕೆ:

ಅಭ್ಯಾಸ ಮಾಡುವಾಗ ನಾವು ಗಮನಿಸಬೇಕಾದ್ದು ಗುಣಮಟ್ಟವನ್ನೇ ಹೊರತು ಪ್ರಮಾಣವನ್ನಲ್ಲ. ಹೀಗಾಗಿ ನೀವು ಎಷ್ಟು ಸಮಯವನ್ನು ಬಳಸಿದಿರಿ ಎನ್ನುವುದಕ್ಕಿಂತ ನೀವು ಸಮಯದ ಉತ್ತಮ ಉಪಯೋಗವನ್ನು ಹೇಗೆ ಮಾಡಿಕೊಂಡಿರಿ ಎನ್ನುವುದೇ ಪ್ರಮುಖ ಅಂಶವಾಗುತ್ತದೆ. ಮೊದಲಿಗೆ ನೀವು ಅಭ್ಯಾಸವನ್ನು ಹೇಗೆ ಮಾಡುವಿರಿ ಎನ್ನುವ ಕಾರ್ಯಯೋಜನೆಯನ್ನು ತಯಾರಿಸಿ. ಇದನ್ನು ಮಾಡುವಾಗ ಪರೀಕ್ಷೆಯ ಪಠ್ಯಕ್ರಮದ ಎಲ್ಲ ಮುಖ್ಯ ವಿಷಯಗಳನ್ನೂ ಅಭ್ಯಸಿಸಲು, ಪುನರ್ ಮನನ ಮಾಡಲು, ಅಣಕು ಪರೀಕ್ಷೆಗಳಿಗೆ ಹೋಗಲು, ಉತ್ತರಗಳನ್ನು ಬರೆಯುವ ಅಭ್ಯಾಸ ಮಾಡಲು ಸಮಯವನ್ನು ಮೀಸಲಿಡಬೇಕಾದ್ದು ಅತಿ ಅವಶ್ಯ.

ವಿಭಜಿಸಿ ಓದಿ:

ಬಹಳ ವಿಶಾಲವಾದ ಸಿವಿಲ್ ಸರ್ವೀಸಸ್ ಪಠ್ಯಕ್ರಮವನ್ನು ವಿಭಜಿಸುವುದು ಮುಖ್ಯ. ಹೀಗೆ ಪಠ್ಯಕ್ರಮವನ್ನು ವಿಂಗಡಿಸಿಕೊಂಡ ನಂತರ ಪ್ರತಿಯೊಂದು ವಿಭಾಗವನ್ನೂ ಅಭ್ಯಸಿಸಲು ಸಾಕಷ್ಟು ಸಮಯ ಮೀಸಲಿಡಬೇಕು. ಪ್ರತಿದಿನ, ಪ್ರತಿವಾರ, ಪ್ರತಿ ತಿಂಗಳು ಇಂತಿಷ್ಟು ಪಾಠಗಳನ್ನು ಓದುತ್ತೇನೆ ಎಂದು ಮೊದಲಿಗೆ ವಿಂಗಡಿಸಿಕೊಂಡು ನಿಮಗಿರುವ ಸಮಯದಲ್ಲಿ ಅಷ್ಟೂ ಪಠ್ಯವನ್ನು ಓದುವಂತೆ ಸಮಯದ ವಿಂಗಡಣೆ ಮಾಡಿಕೊಳ್ಳಬೇಕು.

ಪಠ್ಯಕ್ರಮದಲ್ಲಿ ನಿಮಗೆ ಸುಲಭ ಮತ್ತು ಕಷ್ಟ ಎನಿಸುವ ವಿಷಯಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿಕೊಳ್ಳಬೇಕು. ಆನಂತರ ನಿಮಗೆ ಕಠಿಣ ಎನಿಸುವ ವಿಷಯಗಳನ್ನು ಮೊದಲು ಓದಬೇಕು. ಕಠಿಣ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾದ್ದರಿಂದ ಅವುಗಳಿಗೆ ಹೆಚ್ಚು ಸಮಯ ನಿಗದಿ ಮಾಡಬೇಕು. ಹೀಗೆ ಪಠ್ಯಕ್ರಮದ ವಿಷಯಗಳಿಗೆ ಓದಿನ ಸಮಯವನ್ನು ನೀವು ನಿಗದಿ ಮಾಡಿಕೊಂಡ ನಂತರ ಅಭ್ಯಾಸಕ್ಕಾಗಿ ವೇಳಾಪಟ್ಟಿ ರಚಿಸಿಕೊಂಡು ನಿಗದಿತ ಸಮಯದಲ್ಲಿ ನಿಗದಿತ ಪಾಠಗಳನ್ನು ಅಭ್ಯಾಸ ಮಾಡಬೇಕು. ಪಾಠಗಳ ಅಭ್ಯಾಸಕ್ಕಾಗಿ ನಿಮಗಿರುವ ಸಮಯವನ್ನು ಮೀಸಲಿಟ್ಟ ನಂತರ ಅಣಕು ಪರೀಕ್ಷೆಗಳಿಗಾಗಿ ಹಾಗೂ ಪ್ರಶ್ನೆ ಪತ್ರಿಕೆಗಳಿಗೆ ಉತ್ತರವನ್ನು ಬರೆಯಲು ಸಮಯ ನಿಗದಿ ಮಾಡಬೇಕು

ಪಾಯಿಂಟ್ ಮಾಡಿಕೊಳ್ಳಿ:

ಉತ್ತಮ ಅಭ್ಯರ್ಥಿಗಳು ತಾವು ಯಾವುದಾದರೊಂದು ಪಾಠವನ್ನು ಓದಿದರೆ ಆ ಪಾಠದ ಮುಖ್ಯ ಅಂಶಗಳನ್ನು ಬುಲೆಟ್ ಪಾಯಿಂಟ್‌ಗಳ ರೂಪದಲ್ಲಿ ಒಂದು ಪುಸ್ತಕದಲ್ಲಿ ಗುರುತು ಹಾಕಿಕೊಳ್ಳುತ್ತಾರೆ. ಇದರಿಂದ ಪುನ‌ರ್ ಮನನ ಮಾಡುವುದು ಸುಲಭ. ಅಲ್ಲದೆ, ನಮ್ಮ ಜ್ಞಾಪಕ ಶಕ್ತಿ. ಚೆನ್ನಾಗಿರಬೇಕಾದರೆ ಬರೆಯುವುದೂ ಅಗತ್ಯ.

ಪ್ರತಿಯೊಬ್ಬರು ತಮ್ಮ ಸಾಮರ್ಥ್ಯವೇನು ಎಂದು ಅರಿತು ಅದಕ್ಕೆ ತಕ್ಕಂತೆ ಅಭ್ಯಾಸ ಮಾಡಿಕೊಳ್ಳುವುದು ಒಳಿತು.

____________©______________

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!