ಅರಣ್ಯವಾಸ -ಓದಲೇಬೇಕಾದ ಒಂದೊಳ್ಳೆ ಕಥೆ
ಹಲವಾರು ವರ್ಷಗಳ ಹಿಂದೆ ಜಯಸಿಂಹನು ಕಾಶ್ಮೀರದ ಅರಸನಾಗಿದ್ದನು. ಅವನ ತಮ್ಮ ಶಕ್ತಿಸಿಂಹನು ಅಣ್ಣನಮೇಲೆ ಪಿತೂರಿ ಹೂಡಿ, ಅಣ್ಣನನ್ನು ಅರಣ್ಯಕ್ಕೆ ಅಟ್ಟಿ ತಾನೇ ಅರಸ ನಾದನು. ಆದರೆ ಜಯಸಿಂಹನು ಪ್ರಜಾನು ರಾಗಿಯಾಗಿದ್ದುದರಿಂದ ಅವನ ಸಾಮಂತರು ಕೆಲವರು ತಮ್ಮ ಪದವಿಗಳನ್ನು ತೊರೆದು ಜಯಸಿಂಹನ ಸೇವೆಮಾಡಲು ಆತನೊಂದಿಗೆ ಅವರೂ ಅರಣ್ಯಕ್ಕೆ ಹೊರಟರು. ಅಂತಲೇ ಜಯಸಿಂಹನು ಅರಣ್ಯದಲ್ಲಿದ್ದರೂ ಆತನ ಬಳಿ ಸ್ವಲ್ಪವಾದರೂ ಪರಿವಾರ ಇದ್ದೇ ಇರುತಿತ್ತು.
ಜಯಸಿಂಹನಿಗೆ ಲೀಲಾವತಿ ಎಂಬ ಮಗಳಿದ್ದಳು. ಶಕ್ತಿಸಿಂಹನಿಗೆ ಮಾಲತಿ ಎಂಬ ಒಬ್ಬಳೇ ಮಗಳು. ಅವರಿಬ್ಬರೂ ಸಮ ವಯಸ್ಥರಾಗಿದ್ದುದರಿಂದ ತನ್ನ ಮಗಳಿಗೆ ಜೊತೆಯಾಗಿರಲಿ ಎಂದುಕೊಂಡು ಶಕ್ತಿ ಸಿಂಹನು ಲೀಲಾವತಿಯನ್ನು ತಂದೆಯೊಂದಿಗೆ ಅರಣ್ಯಕ್ಕೆ ಕಳುಹಿಸಿಕೊಡಲಿಲ್ಲ. ತಂದೆಯರು ಶತ್ರುಗಳಾಗಿದ್ದರೂ ಮಕ್ಕಳಲ್ಲ.
ಲೀಲಾವತಿ ಮಾಲತಿಯರು ತುಂಬಾ ಅನ್ನೋನ್ಯವಾಗಿದ್ದರು. ಲೀಲಾವತಿ ಆಗಾಗ ತನ್ನ ತಂದೆಯನ್ನು ನೆನೆಸಿಕೊಂಡು ದುಃಖಿಸು ವಳು. ಆಗ ಮಾಲತಿ ಅವಳಿಗೆ ಸಮಾಧಾನ ಹೇಳುವಳು. ಅವಳ ಚಿಂತೆ ದೂರಮಾಡಲು ಅವಳು ಸತತ ಪ್ರಯತ್ನಿಸುವಳು.
ಹೀಗಿರಲು ಶಕ್ತಿಸಿಂಹನ ಆಸ್ಥಾನದಲ್ಲಿ ಒಂದುದಿನ ಮಲ್ಲಯುದ್ದ ಕೈ ಏರ್ಪಾಡಾಯಿತು. ಕಾಳಗದಲ್ಲಿ ಭಾಗವಹಿಸುವವರಲ್ಲಿ ಒಬ್ಬನು ಶಕ್ತಿಸಿಂಹನ ಆಸ್ಥಾನದ ಜಟ್ಟಿ, ಅವನು ಜಗ ಜಟ್ಟಿಯೆಂದು ಪ್ರಸಿದ್ದಿ ಪಡೆದಿದ್ದನು. ಅವ ನೊಂದಿಗೆ ಹೋರಾಡಿ ಅನೇಕ ಜನ ಜಟ್ಟಿಗಳು ಪ್ರಾಣವನ್ನೇ ಕಳೆದುಕೊಂಡಿದ್ದರು. ಇಂದು ಅವನೊಂದಿಗೆ ಹೋರಾಡುವವನು ಒಬ್ಬ ಸಾಮಾನ್ಯ ಯುವಕನಂತೆ ಕಾಣಿಸಿದನು.
ಆ ಯುವಕನನ್ನು ಕಂಡಕೂಡಲೇ ಶಕ್ತಿ ಸಿಂಹನಿಗೆ ಮರುಕವಾಯಿತು. “ನಮ್ಮ ಜಟ್ಟಿ ಈ ತರುಣನನ್ನು ನಿಮಿಷ ಮಾತ್ರದಲ್ಲಿ ಸೋಲಿಸಿ ಬಿಡುತ್ತಾನೆ, ಸಂದೇಹವೇ ಇಲ್ಲ. ಆದುದರಿಂದ ಇಂದಿನ ಪಂದ್ಯದಲ್ಲಿ ಭಾಗವಹಿಸಬೇಡವೆಂದು ನೀವು ಆ ಯುವಕನಿಗೆ ಬುದ್ದಿವಾದ ಹೇಳಿ ” ಎಂದು ಶಕ್ತಿಸಿಂಹನು ಲೀಲಾವತಿ ಮತ್ತು ಮಾಲತಿಯರೊಂದಿಗೆ ಹೇಳಿದನು.
ಆ ಯುವಕನ ಹೆಸರು ಮಕರಾಂಕ, ಭಟರು ಅವನನ್ನು ರಾಜಕುಮಾರಿಯರಿದ್ದ ಸ್ಥಳಕ್ಕೆ ಕರೆದುಕೊಂಡು ಹೋದರು. ಅವನ ಎಳೆವಯಸ್ಸು, ಅಂದಚೆಂದಗಳನ್ನು ನೋಡಿ ರಾಜಕುಮಾರಿಯರಿಗೆ ಕನಿಕರವುಂಟಾಯಿತು. “ನಮ್ಮ ಜಟ್ಟಿ ನಿಮಗಿಂತಲೂ ಧಷ್ಟಪುಷ್ಟ ನಾಗಿದ್ದಾನೆ. ಮಲ್ಲಯುದ್ಧದಲ್ಲಿ ನುರಿತವನು. ನಿಮಗಿಂತಲೂ ಬಲಿಷ್ಠರನೇಕರನ್ನು ಲೀಲಾ ಜಾಲವಾಗಿ ಸೋಲಿಸಿರುತ್ತಾನೆ, ಕೆಲವರನ್ನು ಕೊಂದೂಬಿಟ್ಟಿದ್ದಾನೆ. ಆದುದರಿಂದ ನೀವು ಇಂದಿನ ಪಂದ್ಯದಲ್ಲಿ ಭಾಗವಹಿಸಬೇಡಿ ” ” ಎಂದು ಅವರು ಮಕರಾಂಕನೊಂದಿಗೆ ಹೇಳಿ ದರು. ಮಾಲತಿಗಿಂತಲೂ ಲೀಲಾವತಿ ಅವನನ್ನು ಪದೇಪದೇ ಕೇಳಿಕೊಂಡಳು. ಆದರೆ ಮಕ ರಾಂಕನಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಶ್ರೇಯಸ್ಸನ್ನು ಕೋರಿ ನೀವು ಕೊಟ್ಟ ಸಲಹೆಗೆ ನಾನು ಕೃತಜ್ಞನಾಗಿದ್ದೇನೆ. ಈ ಕಾಳಗದಲ್ಲಿ ಸಾಯಲು ಸಿದ್ಧನಾಗಿಯೇ ಬಂದಿದ್ದೇನೆ. ಸತ್ತರೆ ನನಗಾಗಿ ದುಃಖಿಸು ವವರು ಯಾರು ಇಲ್ಲ” ಎಂದನು.
ಮಲ್ಲಯುದ್ದ ಪ್ರಾರಂಭವಾಯಿತು. ಮಕ ರಾಂಕನು ಶಕ್ತಿಯಲ್ಲಿ ಕಡಿಮೆಯಾದರೂ ಯುಕ್ತಿಯಲ್ಲಿ ಪ್ರಚಂಡ, ಕೊಂಚ ಹೊತ್ತಿನ ನಂತರ ಅವನು ಆಜಾನುಬಾಹು ಮಲ್ಲನನ್ನು ಸೋಲಿಸಿಬಿಟ್ಟನು. ಅಲ್ಲಿ ನೆರೆದಿದ್ದ ಜನ ಸಮೂಹ ಆಶ್ಚರ್ಯದಿಂದ ಬೆರಗಾದರು. ಎರಡು ಕ್ಷಣಗಳ ನಂತರ ಹರ್ಷದಿಂದ ಕೈ ಚಪ್ಪಾಳೆ ತಟ್ಟಿದರು.
ಶಕ್ತಿಸಿಂಹನು ಮಕರಾಂಕನನ್ನು ಹತ್ತಿರಕ್ಕೆ ಬರಮಾಡಿಕೊಂಡು ವತ್ಸಾ, ನಿನ್ನ ಹೆಸರೇನು? ನಿನ್ನ ಮಾತಾಪಿತರು ಯಾರು?” ಎಂದು ಪ್ರೀತಿಯಿಂದ ಕೇಳಿದನು.
ಮಹಾಪ್ರಭು, ನನ್ನ ಹೆಸರು ಮಕರಾಂಕ, ನನ್ನ ಪಿತನ ಹೆಸರು ಗೋದಾದೇವ” ಎಂದು ಮಕರಾಂಕ ಮೆಲು ದನಿಯಲ್ಲಿ.
ಗೋಪಾಲದೇವನ ಹೆಸರನ್ನು ಕೇಳಿದಾಕ್ಷಣ ಶಕ್ತಿಸಿಂಹನ ಮುಖ ಬಾಡಿತು. ಅದಕ್ಕೆ ಕಾರಣವಿಲ್ಲದಿರಲಿಲ್ಲ. ಗೋಪಾಲದೇವನು ಕೆಲವಾರು ವರ್ಷಗಳ ಕೆಳಗೆ ಸತ್ತು ಹೋಗಿದ್ದರೂ, ಜೀವದಿಂದಿದ್ದಾಗ ಜಯಸಿಂಹನ ಆಪ್ತ ಸ್ನೇಹಿತನಾಗಿದ್ದನು. ಜಯಸಿಂಹನ ಆಪ್ತರು ಯಾರಾದರೂ ಸರಿ ಶಕ್ತಿಸಿಂಹನಿಗೆ ಹಿಡಿಸುತ್ತಿರಲಿಲ್ಲ.
“ನೀನು ಮತ್ತೆ ಯಾರ ಮಗನಾಗಿದ್ದರೂ ನಾನು ಸಂತೋಷಪಡುತ್ತಿದ್ದೆ” ಎಂದು ಹೇಳಿ ಶಕ್ತಿಸಿಂಹನು ಆಸನದಿಂದ ಎದ್ದು ಒಳಕ್ಕೆ ಹೊರಟುಬಿಟ್ಟನು.
ಆ ಯುವಕನು ತನ್ನ ತಂದೆಯ ಮಿತ್ರನ ಮಗನೆಂದು ಅರಿತು ಲೀಲಾವತಿ ಆನಂದಚಿತ್ತಳಾದಳು. ಮಲ್ಲಯುದ್ಧದಲ್ಲಿ ಪ್ರತಿಭೆಯನ್ನು ತೋರಿಸಿದರೂ ರಾಜನು ತನ್ನನ್ನು ಉದಾ ಸೀನಭಾವದಿಂದ ನೋಡಿದನೆಂದು ಮಕ ರಾಂಕನಿಗೆ ದುಃಖವೂ, ಬೇಸರವೂ ಆಯಿತು. ರಾಜಕುಮಾರಿಯರು ಅವನ ಅಸಮಾಧಾನವನ್ನು ಗಮನಿಸಿ ಅಂತಃಪುರಕ್ಕೆ ಹೊರಡುವ ಮುಂಚೆ ಮಕರಾಂಕನ ಬಳಿಗೆ ಬಂದು ಅವನು ತೋರಿದ ಸಾಹಸದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಲೀಲಾವತಿ ತನ್ನ ಕೊರಳಲ್ಲಿದ್ದ ಮುತ್ತಿನ ಸರವನ್ನು ತೆಗೆದು ಅವನಿಗೆ ಕೊಡುತ್ತಾ “ನನ್ನ ಜ್ಞಾಪಕಾರ್ಥವಾಗಿ ಇದನ್ನು ನೀವು ಹಾಕಿಕೊಳ್ಳಿ. ಇದಕ್ಕಿಂತಲೂ ಹೆಚ್ಚಿನ ಬಹುಮಾನ ಕೊಡಲು ನನ್ನ ಬಳಿ ಈಗೇನೂ ಇಲ್ಲ ಎಂದಳು.
ಅಂದಿನಿಂದ ಲೀಲಾವತಿ ಅಡಿಗಡಿಗೆ ಮಕರಾಂಕನನ್ನು ಕುರಿತು ಮಾತನಾಡುವುದನ್ನು ಗಮನಿಸಿದ ಮಾಲತಿ ” ಏನೋ ಅಕ್ಕ, ನೀನು ಆ ಯುವಕನನ್ನು ಪ್ರೇಮಿಸುವೆಯಾ?” ಎಂದು ಪರಿಹಾಸ್ಯ ಮಾಡುತ್ತಿದ್ದಳು.
“ಅವರ ತಂದೆ ನಮ್ಮ ತಂದೆಯವರ ಆಪ್ತ ಸ್ನೇಹಿತರಾದಾಗ ಅವರು ನನ್ನ ಆಪ್ತ ವರ್ಗದವರಾಗಲಿಲ್ಲವೆ ” ಎಂದು ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳುವಳು ಲೀಲಾವತಿ.
ಶಕ್ತಿಸಿಂಹನಿಗೆ ಮಕರಾಂಕನ ಮೇಲುಂಟಾದ ಮತ್ಸರ ಕ್ರಮೇಣ ಲೀಲಾವತಿಯ ಕಡೆಗೂ ಹೊರಳಿತು. ಪ್ರಜೆಗಳಿಗೆ ಜಯಸಿಂಹನ ಮೇಲಿನ ಅಭಿಮಾನವಿನ್ನೂ ಕಡಿಮೆ ಯಾಗಲಿಲ್ಲ. ಮಾಲತಿಯನ್ನು ಮೆಚ್ಚಿಕೊಳ್ಳುತ್ತಿದ್ದರು ಜನ, ಆದರೆ ಲೀಲಾವತಿಯನ್ನು ಕಂಡರೆ ಅದಕ್ಕಿಂತಲೂ ಹೆಚ್ಚಿನ ಮಮತೆ ತೋರುವರು. ಲೀಲಾವತಿಯನ್ನು ಕಂಡಾಗ ಲೆಲ್ಲಾ ಅವರಿಗೆ ಜಯಸಿಂಹನು ಜ್ಞಾಪಕಕ್ಕೆ ಬರುತ್ತಿದ್ದನು.
ಧೀರ್ಘಾಲೋಚನೆ ಮಾಡಿ ಒಂದು ದಿನ ಶಕ್ತಿಸಿಂಹನು ಲೀಲಾವತಿಯ ಬಳಿಗೆ ಬಂದು ” ನಿನಗೆ ಇನ್ನು ಇಲ್ಲಿ ಸ್ಥಳವಿಲ್ಲ. ನೀನೂ ಸಹ ನಿಮ್ಮ ತಂದೆಯ ದಾರಿ ಹಿಡಿ” ಎಂದು ಕಠಿನವಾಗಿ ನುಡಿದನು.
“ಅದೇನಪ್ಪಾ ಹಾಗೆ ಹೇಳುವಿರಿ? ನಮ್ಮಿಬ್ಬರ ಶರೀರಗಳು ಬೇರೆಯಾಗಿದ್ದರೂ ಮನಸ್ಸೆಲ್ಲಾ ಒಂದೆ. ಈಗ ಅವಳು ಅರಣ್ಯಕ್ಕೆ ಹೋದರೆ ನಾನೊಂದು ಕ್ಷಣವಾದರೂ ಇಲ್ಲಿರಲಾರೆ. ನಮ್ಮಿಬ್ಬರ ಗೆಳೆತನವಾಗುವ ಮೊದಲೇ ನೀವು ಅವಳನ್ನು ಕಳುಹಿಸಿದ್ದರೆ ಆಗಿನ ಮಾತು ಬೇರೆ. ಈಗ ಇಷ್ಟು ಹೊಂದಿರುವ ನಮ್ಮನ್ನು ಅಗಲಿಸುವುದು ಅನ್ಯಾಯ” ಎಂದು ಮಾಲತಿ ತಂದೆಗೆ ಹೇಳಿದಳು.
” ನಿನಗೆಲ್ಲೋ ಹುಚ್ಚು ಈ ಲೀಲಾವತಿ ಮಾಯವಿನಿ, ಅಮಾಯಕತೆ ಸೋಗುಹಾಕಿ, ಮೌನವಾಗಿರುವುದನ್ನು ಕಂಡು ಜನರೆಲ್ಲ ಅವಳನ್ನು ಮೆಚ್ಚಿಕೊಳ್ಳುತ್ತಾರೆ. ಯಾರೂ ನಿನ್ನ ಕಡೆ ಗಮನ ಕೊಡುವುದಿಲ್ಲ. ನಿನ್ನ ಅಂತಸ್ತೇನು? ಅವಳು ಹೊರಟು ಹೋದ ಕ್ಷಣದಿಂದ ಪ್ರಜೆಗಳು ನಿನ್ನನ್ನು ಕೊಂಡಾಡುವರು ತಿಳಿಯಿತೆ? ಎಂದ ಶಕ್ತಿಸಿಂಹ.
ತಂದೆಯೊಂದಿಗೆ ವಾದಿಸಿ ಪ್ರಯೋಜನವಿಲ್ಲವೆಂದು ತಿಳಿದು, ಮಾಲತಿ ತಾನು ಲೀಲಾವತಿಯೊಂದಿಗೆ ಆರಣ್ಯಕ್ಕೆ ಹೋಗಲು ನಿರ್ಧರಿಸಿದಳು. ಲೀಲಾವತಿ ಬೇಡ ಬೇಡವೆಂದು ಎಷ್ಟು ಹೇಳಿದರೂ ಅವಳು ಕೇಳಲಿಲ್ಲ. “ ನಾವು ಈ ಉಡುಪುಗಳನ್ನು ಧರಿಸಿಕೊಂಡು ಹೋಗುವುದು ಅಪಾಯಕರ. ಸಾಧಾರಣ ಕುಟುಂಬ ಸ್ತ್ರೀಯರ ದಿರುಸಿನಲ್ಲಿ ಹೋದರೆ ನಮ್ಮನ್ನು ಯಾರೂ ಗುರುತು ಹಿಡಿಯಲಾರರು” ಎಂದಳು ಮಾಲತಿ,
“ಇಬ್ಬರೂ ಸ್ತ್ರೀಯರಂತೆ ಹೋಗುವುದಕ್ಕಿಂತಲೂ ಒಬ್ಬರು ಪುರುಷ ವೇಷ ಧರಿಸುವುದು ಉತ್ತಮ. ನಾನು ನಿನಗಿಂತಲೂ ದೊಡ್ಡವಳಂತೆ ಕಾಣುವೆನು. ನಾನು ಪುರುಷ ವೇಷ ಧರಿಸುವೆನು, ಸೋದರ ಸೋದರಿಯರಂತೆ ಕಾಣಿಸಿಕೊಂಡು ಇಲ್ಲಿಂದ ಹೊರಟುಬಿಡೋಣ” ಎಂದಳು ಲೀಲಾವತಿ, ಲೀಲಾವತಿ ತನ್ನ ಹೆಸರನ್ನು ಪುಷ್ಕರ ನೆಂದು ಬದಲಾಯಿಸಿಕೊಂಡಳು. ಮಾಲತಿ ಲಕ್ಷ್ಮಿ ಎಂದು ಹೆಸರಿಟ್ಟುಕೊಂಡಳು. ಅವರು ತಮ್ಮಿಂದ ಸಾಧ್ಯವಾದಷ್ಟು ನಗನಾಣ್ಯಗಳನ್ನು, ಅರಿವೆ ಅಂಚಡಿಗಳನ್ನು ಸಂಗಡ ತೆಗೆದುಕೊಂಡು, ಸಾಮಾನ್ಯವಾದ ಉಡಿಗೆ ತೊಡಿಗೆಗಳನ್ನು ಧರಿಸಿ, ಅರ್ಧರಾತ್ರಿ ಸಮಯದಲ್ಲಿ ಅರಮನೆಯನ್ನು ತೊರೆದು, ಅರಣ್ಯ ಮಾರ್ಗವಾಗಿ ಹೊರಟರು, ಅರಣ್ಯದಲ್ಲಿ ವಾಸಿ ಸುತ್ತಿದ್ದ ಜಯಸಿಂಹನನ್ನು ಕೂಡಿಕೊಳ್ಳಲು ಅವರು ನಿಶ್ಚಯಿಸಿದರು.
ಸಂಗಡ ಹಣವಿದ್ದ ಕಾರಣ ದಾರಿಯುದ್ದಕ್ಕೂ ಯಾವ ತಾಪತ್ರಯವೂ ಇಲ್ಲದೆ.ಪ್ರಯಾಣಸಾಗಿತು. ಆದರೆ ಅರಣ್ಯವನ್ನು ಪ್ರವೇಶಿಸಿದ ಕೂಡಲೇ ಒಂದಾದ ಮೇಲೊಂದರಂತೆ ಕಷ್ಟಗಳು ಪ್ರಾಪ್ತವಾದುವು, ಬಹು ದೂರ ಅರಣ್ಯದಲ್ಲಿ ಹೋದರೂ ಅವರಿಗೆ ಜಯಸಿಂಹನ ಸುಳಿವು ಸಿಗಲಿಲ್ಲ. ಕ್ರೂರಮೃಗ ಗಳ ಹೆದರಿಕೆ ಬೇರೆ. ಜೊತೆಗೆ ತಂದಿದ್ದ ತಿಂಡಿ ತೀರ್ಥಗಳೆಲ್ಲಾ ಮುಗಿದುಹೋಗಿದ್ದುವು. ರಾತ್ರಿ ತಲೆ ಮರೆಯಿಸಿಕೊಳ್ಳಲು ತಾವಿಲ್ಲ.
ಮಾಲತಿ ಒಂದು ಬಂಡೆಯ ಮೇಲೆ ಕುಳಿತು “ಅಕ್ಕ ನನಗೆ ಹಸಿವಿನಿಂದ ಬವಳಿ ಬರು ವಂತಿದೆ. ಇನ್ನು ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಾರೆ” ಎಂದಳು. ಇಬ್ಬರೂ ಕಣ್ಣೀರು ಸುರಿಸುತ್ತ ದಿಗ್ಮೂಢರಾಗಿರಲು ಅತ್ತ ಕಡೆ ಒಬ್ಬ ರೈತನು ಬಂದನು.
“ಅಯ್ಯಾ, ತಾವು ದೇವರಂತೆ ಬಂದಿರಿ. ಈಕೆ ನನ್ನ ತಂಗಿ ತಿಂಡಿಯಿಲ್ಲದೆ ಸುಸ್ತಾಗಿದ್ದಾಳೆ. ನಮಗಿಷ್ಟು ತಿಂಡಿ ಮತ್ತು ವಿಶ್ರಾಂತಿ ಪಡೆಯಲು ಸ್ಥಳ ಸಿಗುವ ಜಾಗ ತೋರಿಸಿದರೆ ನಿಮಗೆ ಪುಣ್ಯ ಬರುತ್ತದೆ” ಎಂದಳು ಪುರುಷ ವೇಷಧಾರಿ ಲೀಲಾವತಿ.
“ಅಯ್ಯಾ, ಸಮೀಪದಲ್ಲೇ ನಮ್ಮ ಧಣಿಯ ಗುಡಿಸಲು ಇದೆ. ಅಲ್ಲಿಗೆ ಬನ್ನಿ, ಇಂದೊ ನಾಳೆಯೋ ನಮ್ಮ ಧಣಿ ಆ ಗುಡಿಸಲನ್ನು ಮಾರಿ ನಗರಕ್ಕೆ ಹೋಗುವವರಿದ್ದಾರೆ. ಅದುವರೆಗೆ ನಮ್ಮ ಗುಡಿಸಲಿನಲ್ಲಿ ವಿಶ್ರಾಂತಿ ಪಡೆಯ ಬಹುದು” ಎಂದ ರೈತ.
ರಾಜಕುಮಾರಿಯರಿಗೆ ಈ ವ್ಯವಸ್ಥೆ ಲೇಸೆನಿಸಿತು. ಅವರು ರೈತನೊಂದಿಗೆ ಗುಡಿಸಲಿಗೆ
ಹೋಗಿ, ಮಿತ ಆಹಾರವನ್ನು ಭಜಿಸಿದರು. ನಂತರ ಆ ಗುಡಿಸಲನ್ನು ಅವರೇ ಕೊಂಡು ಕೊಂಡರು. ಗುಡಿಸಿಲಿನಲ್ಲಿ ಆಹಾರ ಪದಾರ್ಥಗಳಿದ್ದುವು. ಅವುಗಳನ್ನು ಉಪಯೋಗಿಸಿ ಕೊಳ್ಳುತ್ತ ಅವರು ಜಯಸಿಂಹನಿರುವ ಸ್ಥಳ ವನ್ನು ಹುಡುಕಾಡ ತೊಡಗಿದರು.
ಒಂದಾದ ಮೇಲೊಂದರಂತೆ ದಿನಗಳು ಉರುಳುತ್ತಿದ್ದವು. ಎಷ್ಟು ಹುಡುಕಿದರೂ ಅವರಿಗೆ ಜಯಸಿಂಹನಿದ್ದ ಸ್ಥಳ ಸಿಕ್ಕಲೇ ಇಲ್ಲ. ಒಂದು ದಿನ ಹಾಗೆ ಸುತ್ತಾಡುತ್ತಿರಲು ಅವರಿಗೆ ಒಂದು ಮರದ ಮೇಲೆ ಯಾರೋ ಲೀಲಾವತಿ ಎಂದು ಕೆತ್ತಿರುವುದು ಕಾಣಿಸಿತು. ಇದು ಮಕರಾಂಕನ ಕೆಲಸವೆಂದು ಲೀಲಾವತಿ ಕೂಡಲೇ ಊಹಿಸಿದಳು. ಯಾವ ಕಾರಣದಿಂದಲೋ ಆತನೂ ಈ ಅರಣ್ಯಕ್ಕೇ ಬಂದು ಎಲ್ಲೇ ಇರುವನೆಂದು ಆಕೆಗೆ ತೋರಿತು.
ಅವಳ ಊಹೆ ಸುಳ್ಳಾಗಿರಲಿಲ್ಲ. ಮಕರಾಂಕನೂ ಸಹ ಪರಿಸ್ಥಿತಿಗಳ ಒತ್ತಾಯಕ್ಕೆ ಗುರಿ ಯಾಗಿ ಅರಣ್ಯವನ್ನು ಸೇರಿಕೊಂಡಿದ್ದನು. ಮಕರಾಂಕ ಗೋಪಾಲದೇವನ ಕಿರಿಯಮಗ, ತಂದೆ ತೀರಿಕೊಂಡಾಗ ಅವನಿನ್ನೂ ಎಳೆ ವಯಸ್ಸಿನ ಬಾಲಕ, ಸಾಯುವ ಮುಂಚೆ ಗೋಪಾಲ ದೇವನು ತನ್ನ ಕಿರಿಯ ಮಗನನ್ನು ಹಿರಿಯ ಮಗನಾದ ಶಶಾಂಕನ ವಶಕ್ಕೆ ಒಪ್ಪಿಸಿ “ಮಗೂ, ಇವನನ್ನು ಕಾಪಾಡುವ ಭಾರ ನಿನ್ನದು. ಇವನಿಗೆ ವಿದ್ಯಾಬುದ್ಧಿಗಳನ್ನು ಕಲಿಸಿ ಉತ್ತಮ ಪೌರನನ್ನಾಗಿ ಮಾಡು” ಎಂದು ಹೇಳಿದ್ದನು. ಆದರೆ ಶಶಾಂಕನು ತಮ್ಮನಿಗೆ ದ್ರೋಹ ಬಗೆದನು. ಮಕರಾಂಕನನ್ನು ಶಾಲೆಗೆ ಕಳು ಹಿಸಲಿಲ್ಲ. ಅವನ ಯೋಗ ಕ್ಷೇಮದ ಕಡೆ ಗಮನ ಕೊಡಲಿಲ್ಲ. ಆದರೂ ಮಕರಾಂಕನು ತಂದೆ ಯಂತೆಯೇ ಸಾಧು ಸ್ವಭಾವದವನಾದುದರಿಂದ ನಡೆ ನುಡಿಗಳಿಂದ, ವಿನಯ, ವಿಧೇಯತೆ ಗಳಿಂದ ವಿದ್ಯಾವಂತರಿಗಿಂತಲೂ ಮಿಗಿಲೆನಿಸಿಕೊಂಡನು. ದಿನ ದಿನಕ್ಕೆ ಅವನ ಅಭಿವೃದ್ಧಿ ಯನ್ನು ಕಂಡು ಶಶಾಂಕನ ಹೊಟ್ಟೆ ಉರಿಯುತಿತ್ತು. ಅವನನ್ನು ಹೇಗಾದರೂ ನಾಶ ಮಾಡುವ ಉದ್ದೇಶದಿಂದ ಶಶಾಂಕನು ಅವನನ್ನು ಮಲ್ಲ ಯುದ್ಧ ಮಾಡಲು ತನ್ನ ಸ್ನೇಹಿತರ ಕಡೆಯಿಂದ ಹೇಳಿಸಿ ಒಪ್ಪಿಸಿದನು. ಅಣ್ಣನು ತನ್ನ ಸಾವನ್ನು ಕೋರುತ್ತಿರುವನೆಂದು ಗ್ರಹಿಸಿದ ಮಕರಾಂಕನು ಮರುಮಾತನಾಡದೆ ಮಲ್ಲ ಯುದ್ಧ ಪಂದ್ಯಕ್ಕೆ ಒಪ್ಪಿಕೊಂಡನು. ಆದರೆ ಮಕರಾಂಕನು ಮಲ್ಲ ಯುದ್ಧದಲ್ಲಿ ವಿಜಯ ಪಡೆಯಲು ಶಶಾಂಕನ ಆಶೆಯೆಲ್ಲಾ ನಿರಾಶೆ ಯಾಯಿತು. ವಿಜಯಿಯಾದ ತನ್ನ ತಮ್ಮನು ಮಲಗಿರುವಾಗ ಅವನ ಕೋಣೆಗೆ ಬೆಂಕಿ ಯಿಡಲು ನಿರ್ಧರಿಸಿದನು.
ಅದೃಷ್ಟವಶಾತ್ ಈ ರಹಸ್ಯ ಒಬ್ಬ ಮುದುಕನಿಗೆ ತಿಳಿಯಿತು. ಅವನು ಮಕರಾಂಕನೊಂದಿಗೆ ಮುಂದೆ ಉಂಟಾಗಲಿರುವ ತೊಂದರೆಯನ್ನು ತಿಳಿಸಿ, ಯಾರಿಗೂ ಗೊತ್ತಿಲ್ಲದಂತೆ ಮಕರಾಂಕನನ್ನು ಅರಣ್ಯಕ್ಕೆ ಕರೆದುಕೊಂಡು ಹೋದನು. ಅರಣ್ಯದಲ್ಲಿ ತಿಂಡಿ ತೀರ್ಥಗಳಿಲ್ಲದೆ ಅವರು ತುಂಬಾ ಅವಸ್ಥೆ ಪಟ್ಟರು.
ವೃದ್ದನು ಬವಳಿ ಬಂದು ಕೆಳಗೆ ಬಿದ್ದು ಬಿಟ್ಟನು. ಅವನನ್ನು ಒಂದು ಮರದ ಕೆಳಗೆ ಮಲಗಿಸಿ, ಮಕರಾಂಕನು ಮುಂದೆ ನಡೆದನು. ಹಾಗೇ ಹೋಗುತ್ತಿರಲು ಅವನಿಗೆ ಜಯಸಿಂಹನು ತನ್ನ ಅನುಚರರೊಂದಿಗೆ ಇರುವಸ್ಥಳ ಸಿಕ್ಕಿತು.
ಆಗ ತಾನೆ ಜಯಸಿಂಹನು ತನ್ನ ಸಂಗಡಿಗರೊಂದಿಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದನು. ಮಕರಾಂಕನು ಹಸಿವಿನ ಬಾಧೆಗೆ ತಾಳಲಾರದೆ ಆವೇಶದಿಂದ ಕತ್ತಿ ಹಿರಿದು ” ಯಾರಾದರೂ ಅಲ್ಲಿರುವ ಆಹಾರವನ್ನು ಮುಟ್ಟಿದರೆ ನನ್ನ ಖಡ್ಗಕ್ಕೆ ಬಲಿಯಾಗಬೇಕಾಗೀತು, ಹುಷಾರ್” ಎಂದು ಕರ್ಕಶವಾಗಿ ಕೂಗಿಕೊಂಡನು. ಜಯಸಿಂಹನು ತಾಳ್ಮೆಯಿಂದ ” ಇಷ್ಟು ಮಾತ್ರಕ್ಕೆ ಯಾರನ್ನೇಕೆ ಕೊಲ್ಲಬೇಕು, ಮಗು. ಹಸಿವಾಗಿದ್ದರೆ ನಮ್ಮೊಂದಿಗೆ ಕುಳಿತು ಊಟ ಮಾಡು. ನಾವು ಬೇಟೆಯಾಡಿ ತಂದ ಆಹಾರ ಯಥೇಚ್ಛವಾಗಿದೆ. ನಿನಗೆ ಯಾರೂ ಅಡ್ಡಿ ಮಾಡುವುದಿಲ್ಲ” ಎಂದನು. ಮಕರಾಂಕನಿಗೆ ತುಂಬಾ ನಾಚಿಕೆಯಾಯಿತು. ಅವನು ಮೆಲುದನಿಯಲ್ಲಿ “ಅಯ್ಯಾ, ನನ್ನ ದುಡುಕುತನವನ್ನು ಕ್ಷಮಿಸಿ. ಈ ಕಾಡಿನಲ್ಲೂ ಸೌಜನ್ಯಶಾಲಿಗಳಿರುವರೆಂದು ನಾನು ಕನಸಿನಲ್ಲೂ ನೆನೆಸಿರಲಿಲ್ಲ. ನನ್ನ ಕ್ಷುದ್ಭಾಧೆಯೇ ಈ ಆವೇಶಕ್ಕೆ ಕಾರಣ. ನನಗಿಂತಲೂ ಹಸಿವಿನ ಬಾಧೆಯಿಂದ ತೊಳಲಾಡುತ್ತಿರುವ ಮುದುಕನೊಬ್ಬನಿದ್ದಾನೆ. ಅವನನ್ನೂ ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಅವನು ತಿನ್ನುವತನಕ ನಾನು ಏನನ್ನೂ ಮುಟ್ಟಲಾರೆ” ಎಂದು ಹೇಳಿ, ತನ್ನ ನೌಕರನಿದ್ದ ಸ್ಥಳಕ್ಕೆ ಹೋಗಿ, ಅವನನ್ನು ಹೆಗಲಮೇಲೇರಿಸಿಕೊಂಡು ಅಲ್ಲಿಗೆ ಬಂದನು. ತರುವಾಯ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದರು.
ಊಟವಾದನಂತರ ಜಯಸಿಂಹನು ಮಕ ರಾಂಕನನ್ನು ಕುರಿತು ಎಲ್ಲ ವಿಷಯಗಳನ್ನೂ ತಿಳಿದುಕೊಂಡನು. ಅವನು ತನ್ನ ಗೆಳೆಯನ ಮಗನೆಂತಲೂ, ಅವನೂ ಸಹ ತನ್ನ ಸೋದರನ ವಂಚನೆಗೆ ಗುರಿಯಾಗಿರುವನೆಂದೂ ತಿಳಿದು ಕನಿಕರಗೊಂಡು ತನ್ನೊಂದಿಗೇ ಇರುವಂತೆ ಹೇಳಿ ಒಪ್ಪಿಸಿದನು.
ರಾಜಕುಮಾರಿಯರು ರೈತನ ಗುಡಿಸಿಲನ್ನು ಕೊಂಡುಕೊಂಡ ಮೂರು ದಿನಗಳಿಗೆ ಮಕರಾಂಕನು ಅರಣ್ಯಕ್ಕೆ ಬಂದನು. ಅವನು ಮರಗಳ ಮೇಲೆ ಕೆತ್ತಿದ್ದ ಲೀಲಾವತಿಯ ಹೆಸರನ್ನು ನೋಡಿ ರಾಜಕುಮಾರಿಯರು ಅವನು ಅಲ್ಲೇ ಎಲ್ಲೇ ಇರುವನೆಂದು ಗ್ರಹಿಸಿದರು.
ಮತ್ತೆ ಕೊಂಚ ದಿನಗಳ ನಂತರ ಪುರುಷ ವೇಷದಲ್ಲಿದ್ದು ಪುಷ್ಕರನೆಂದು ಹೆಸರಿಟ್ಟು ಕೊಂಡ ಲೀಲಾವತಿ ಅರಣ್ಯದಲ್ಲಿ ಒಬ್ಬೊಂಟಿಗನಾಗಿ ಕುಳಿತಿದ್ದ ಮಕರಾಂಕನನ್ನು ಕಂಡಳು. ಅವನ ಕೊರಳಲ್ಲಿ ತಾನು ಕೊಟ್ಟಿದ್ದ ಚಂದ್ರಹಾರ ಅವಳ ಕಣ್ಣಿಗೆ ಬಿತ್ತು. ಇಬ್ಬರಿಗೂ ಪರಿಚಯ ವಾದನಂತರ ಮಕರಾಂಕನು ಪುಷ್ಕರನಲ್ಲಿ ತನ್ನ ಪ್ರೇಯಸಿ ಲೀಲಾವತಿಯ ಲಕ್ಷಣಗಳನ್ನು ಕಂಡು ಚಕಿತನಾದನು. ಆದರೆ ಲೀಲಾವತಿ ಬೇಕೆಂತಲೇ ತುಸು ಬದಲಾಗಿ, ತನ್ನ ವೇಷಕ್ಕೆ ಅನುಗುಣವಾಗಿ, ಮಾತನಾಡುತ್ತಿದ್ದುದರಿಂದ ಅವನಿಗೆ ನಿಜಾಂಶ ತಿಳಿಯದಾಯಿತು.
“ಯಾರೋ ತರುಣನು ಇಲ್ಲಿನ ಮರಗಳ ಮೇಲೆಲ್ಲಾ ಲೀಲಾವತಿ ಎಂದು ಕೆತ್ತಿ ಮರಗಳನ್ನೆಲ್ಲಾ ಸುಮ್ಮನೆ ಹಾಳುಮಾಡುತ್ತಿದ್ದಾನೆ” ಎಂದು ಹೇಳಿದಳು ಲೀಲಾವತಿ,
ಮಕರಾಂಕನು ಅದು ತನ್ನ ಕೆಲಸವೇ ಎಂದು ಒಪ್ಪಿಕೊಂಡು “ ಲೀಲಾವತಿಯನ್ನು ನನ್ನಿಂದ ಮರೆಯಲು ಸಾಧ್ಯವಿಲ್ಲ.”
“ಹಾಗಾದರೆ ನೀವು ದಿನಾ ನಮ್ಮ ಗುಡಿಸಲಿಗೆ ಬನ್ನಿ. ಅಲ್ಲಿ ನಾನೂ ನನ್ನ ತಂಗಿ ಲಕ್ಷ್ಮಿಯೂ ವಾಸಿಸುತ್ತಿದ್ದೇವೆ. ನಾನು ಲೀಲಾ ವತಿಯಂತೆ ನಟಿಸುತ್ತೇನೆ. ನಿಮ್ಮ ಪ್ರೇಮವೆಲ್ಲ ನನ್ನ ಮುಂದೆ ತೋಡಿಕೊಂಡರೆ, ನಿಮಗೊಂದು ರೀತಿ ತೃಪ್ತಿಯಾದೀತು” ಎಂದಳು ಲೀಲಾವತಿ. ಮಕರಾಂಕನು ಅದೇ ರೀತಿ ಮಾಡುತ್ತಿದ್ದನು. ಇದರಿಂದ ಅವನಿಗೆ ತುಸವಾದರೂ ಸಂತೃಪ್ತಿ ಯಾಗಲಿಲ್ಲ, ಆದರೆ ಲೀಲಾವತಿಗೆ ಮಾತ್ರ ಅತ್ಯಾನಂದವಾಗುತಿತ್ತು. ಅವನ ಮಾತುಗಳೆಲ್ಲ ತನ್ನನ್ನು ಕುರಿತೇ ಆಡುತ್ತಿರುವ ವಿಷಯ ಆಕೆಗೆ ತಿಳಿದಿದೆ. ಮಾಲತಿ ಸಹ ಇವರ ಈ ಬಗೆಯ ನಾಟಕ ನೋಡಿ ಸಂತೋಷ ದಿಂದ ಕಿರುನಗೆ ಬೀರುವಳು.
ಲೀಲಾವತಿಯ ತಂದೆ ಜಯಸಿಂಹನಿದ್ದ ಸ್ಥಳ ರಾಜಕುಮಾರಿಯರಿಗೆ ಮಕರಾಂಕನಿಂದ ತಿಳಿಯಿತು. ಒಂದು ದಿನ ಲೀಲಾವತಿ ತನ್ನ ಛದ್ಮವೇಷದಿಂದಲೇ ತಂದೆಯನ್ನು ಕಾಣಲು ಅಡವಿಗೆ ಹೋದಳು. ಇಬ್ಬರ ನಡುವೆ ಈ ರೀತಿಯಾಗಿ ಸಂಭಾಷಣೆ ನಡೆಯಿತು. “ಮಗೂ, ನಿನ್ನ ತಂದೆ ತಾಯಿಗಳು. ಯಾರು?” ಎಂದು ಜಯಸಿಂಹನು ಕೇಳಿದನು. ” ನಾನು ಉನ್ನತ ವಂಶದಲ್ಲಿ ಜನಿಸಿದ್ದೇನೆ ” ಎಂದು ಸಮಾಧಾನ ಕೊಟ್ಟಳು ಲೀಲಾವತಿ. ಆದರೆ ಆಕೆ ತನ್ನ ನಿಜ ವಿಷಯವನ್ನು ತಿಳಿ ಸದೆಯೇ ಮೆಲ್ಲನೇ ಅಲ್ಲಿಂದ ಜಾರಿಕೊಂಡಳು. ಇನ್ನೊಂದು ದಿನ ಮಕರಾಂಕನು ಅಡವಿ ಯಲ್ಲಿದ್ದ ರೈತನ ಗುಡಿಸಲಿಗೆ ಹೋಗುತ್ತಿರಲು ದಾರಿಯಲ್ಲಿ ಅವನಿಗೆ ಯಾರೋ ಒಂದು ವ್ಯಕ್ತಿ ಪೊದೆಗಳ ನಡುವೆ ಮಲಗಿರುವುದು ಕಾಣಿಸಿತು, ಆ ವ್ಯಕ್ತಿಯ ಕಡೆ ಹರಿದು ಹೋಗು ತಿದ್ದ ಸರ್ಪವೊಂದು ಮಕರಾಂಕನು ಬರುವ ಸದ್ದು ಕೇಳಿ ಸರಸರನೆ ಪೊದೆಯ ಸಂದನ್ನು ಹೊಕ್ಕಿತು. ಅದನ್ನು ನೋಡುತ್ತಿದ್ದ ಮಕರಾಂಕನು ಪೊದೆಯೊಳಗೊಂದು ಹೆಣ್ಣು ಸಿಂಹ ವಿರುವುದನ್ನು ಕಂಡನು, ಅದು ಪೊದೆಯಲ್ಲಿ ಹೊಂಚಿಕೊಂಡಿದ್ದು ಮಲಗಿದ್ದ ಮನುಷ್ಯನ ಕಡೆ ತದೇಕ ದೃಷ್ಟಿಯಿಂದ ನೋಡುತ್ತಿತ್ತು. ಆ ಮನುಷ್ಯನು ತುಸು ಕದಲಿದರೆ ಸಾಕು, ಮೇಲೆ ಬಿದ್ದು ಕೊಲ್ಲಬೇಕೆಂದು ಅದರ ಉದ್ದೇಶ. ಸಾಮಾನ್ಯವಾಗಿ ಸಿಂಹಗಳು ಕದಲದ ಪ್ರಾಣಿ ಗಳನ್ನೂ, ಶವಗಳನ್ನೂ ಮುಟ್ಟುವುದಿಲ್ಲ.
ಕೂದಲೆಳೆಯಷ್ಟರಲ್ಲಿ ಹಾವಿನ ಗಂಡಾಂತರದಿಂದ ತಪ್ಪಿಸಿಕೊಂಡು ಈಗ ಸಿಂಹದ ಬಾಯಿಗೆ ತುತ್ತಾಗಲು ಸಿದ್ದವಾಗಿದ್ದ ವ್ಯಕ್ತಿಯನ್ನು ನೋಡುವ ಕುತೂಹಲವಾಯಿತು. ಅವನು ಆತುರದಿಂದ ತುಸಬಾಗಿ ನೋಡಲು ಆ ವ್ಯಕ್ತಿ ಮತ್ತೆ ಯಾರೂ ಅಲ್ಲ, ತನ್ನ ಅಣ್ಣ ಶಶಾಂಕನೆಂದು ತಿಳಿಯಿತು. “ನನ್ನನ್ನು ಕತ್ತಲು ಕೋಣೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಲೆಣಿಸಿದ್ದ ಈ ದುರುಳನು ಸಿಂಹದ ಬಾಯಿಗೆ ತುತ್ತಾಗಲಿ” ಎಂದು ಮಕರಾಂಕನು ಒಂದು ಕ್ಷಣ ಯೋಚಿಸಿದನು. ಆದರೆ ಮರುಕ್ಷಣವೇ ತನ್ನ ಅಣ್ಣನ ಪ್ರಾಣವನ್ನು ಕಾಪಾಡಬೇಕೆನಿಸಿತು. ಅವನು ಕತ್ತಿ ಹಿರಿದು ಸಿಂಹದಮೇಲೆ ಬಿದ್ದು ಅದನ್ನು ಕೊಂದುಹಾಕಿದನು. ಆದರೆ ಸಿಂಹವೂ ಸುಮ್ಮನೆ ಬಿಡಲಿಲ್ಲ. ತನ್ನ ಪಂಜಾದಿಂದ ಅವನ ಕೈಯನ್ನು ಬಲವಾಗಿ ಪರಚಿತು. ಮಕರಾಂಕನು ಸಿಂಹದೊಂದಿಗೆ ಕಾದಾಡುತ್ತಿರುವಾಗ ಶಶಾಂಕನಿಗೆ ಎಚ್ಚರವಾಯಿತು.
ತನ್ನ ಪ್ರಾಣ ಕಾಪಾಡಲು ತಮ್ಮನು ಮಾಡುತ್ತಿದ್ದ ಸಾಹಸವನ್ನು ಕಂಡು ಅವನಿಗೆ ನಾಚಿಕೆ ಯಾಯಿತು. ಸಿಂಹವು ಸತ್ತು ಕೆಳಗೆ ಬಿದ್ದ ನಂತರ ಅವನು ತಮ್ಮನನ್ನು ಅಪ್ಪಿಕೊಂಡು ” ನಾನು ನಿನಗೆ ದ್ರೋಹ ಬಗೆದಿದ್ದರೂ ನೀನು ನನ್ನ ಪ್ರಾಣವನ್ನು ಕಾಪಾಡಿದೆ. ನನ್ನನ್ನು ಕ್ಷಮಿಸು, ತಮ್ಮಾ” ಎಂದ.
ಮಕರಾಂಕನ ಕೈಯಿಂದ ಬಹಳ ರಕ್ತ ಸೋರಿ, ಅವನು ತುಂಬಾ ನಿತ್ಯಕ್ತನಾದನು. ಅವನು ಶಶಾಂಕನೊಂದಿಗೆ “ಅಣ್ಣಾ, ಈ ದಾರಿಯಲ್ಲೇ ಹೋದರೆ ಒಂದು ಗುಡಿಸಲು ಕಾಣಿಸುವುದು. ಅಲ್ಲಿ ಪುಷ್ಕರನೆಂಬ ಯುವಕನಿದ್ದಾನೆ. ಅವನು ನನ್ನ ಪ್ರಿಯ ಮಿತ್ರ. ತಮಾಷೆಗೆ ಅವನು ನನ್ನ ಪ್ರೇಯಸಿ ಲೀಲಾವತಿಯಂತೆ ಅಭಿನಯಿಸುವನು. ನೀನು ಹೋಗಿ ಅವನೊಂದಿಗೆ ನನ್ನ ವಿಷಯ ತಿಳಿಸುವೆಯಾ?” ಎಂದ.
ಶಶಾಂಕನು ತಕ್ಷಣ ದಾವುಗಾಲು ಹಾಕುತ್ತ ಗುಡಿಸಲಿಗೆ ಹೋಗಿ, ಪುಷ್ಕರ ಮತ್ತು ಲಕ್ಷ್ಮಿ ಯೊಂದಿಗೆ ಮಕರಾಂಕನು ಗಾಯಗೊಂಡ ವಿಷಯವನ್ನು ತಿಳಿಸಿದನು. ತಾನು ಮಕರಾಂಕನ ಅಣ್ಣ ಶಶಾಂಕನೆಂದೂ, ಒಮ್ಮೆ ಭ್ರಾತೃದ್ರೋಹಕ್ಕೆ ತಲೆ ಹಾಕಿದುದರಿಂದಲೇ ಮಕರಾಂಕನು ಅರಣ್ಯದನ ಪಾಲಾಗಬೇಕಾಯಿತೆಂದೂ ತನಗೀಗ ಬುದ್ಧಿ ಬಂದು, ಹೃದಯ ಪರಿವರ್ತನೆಯಾಗಿದೆ ಎಂದೂ ಹೇಳಿದನು. ಶಶಾಂಕನ ಬೇಗುದಿಯನ್ನು ಕಂಡು ಮಾಲತಿ ಬೆಣ್ಣೆಯಂತೆ ಕರಗಿಹೋದಳು. ಅವಳು ಅವನ ಬಾಧೆಯನ್ನು ಕೇಳಿ ಸಹಾನುಭೂತಿ ತೋರಿಸಿದಳು. ಕೂಡಲೇ ಅವರಿಬ್ಬರ ನಡುವೆ ಪ್ರೇಮವೇರ್ಪಟ್ಟಿತು.
ಈ ಸಂದರ್ಭದಲ್ಲಿ ಮತ್ತೊಂದು ವಿಚಿತ್ರ ನಡೆಯಿತು. ಮಕರಾಂಕನನ್ನು ಸಿಂಹವು ಪರಚಿತೆಂಬ ವಿಷಯ ತಿಳಿದ ಕೂಡಲೇ ಲೀಲಾವತಿ ಸ್ಮೃತಿ ತಪ್ಪಿ ಬಿದ್ದುಬಿಟ್ಟಳು. ಸ್ಮೃತಿ ಬಂದ ನಂತರ ತನ್ನ ದೌರ್ಬಲ್ಯವನ್ನು ಮುಚ್ಚಿಡಲು “ಮಕರಾಂಕನ ಪ್ರೇಯಸಿಯಂತೆ ಅಭಿನಯಿಸುವ ಅಭ್ಯಾಸವಾದುದರಿಂದ, ಈ ವಿಷಯ ಕೇಳಿದ ಕೂಡಲೇ ಮೂರ್ಛೆ ಬಂದಂತೆ ಅಭಿನಯಿಸಿದೆ” ಎಂದು ಆಕೆ ಶಶಾಂಕನೊಂದಿಗೆ ಹೇಳಿದಳು. ಆದರೆ ಬಿಳಿಚಿಕೊಂಡ ಪುಷ್ಕರನ
ಮುಖ ನೋಡಿದರೆ ಆ ಮೂರ್ಛೆ ನಟನೆಯಂತೆ ಶಶಾಂಕನಿಗೆ ತೋರಲಿಲ್ಲ.
ಅವನು ತನ್ನ ತಮ್ಮನಿದ್ದ ಸ್ಥಳಕ್ಕೆ ಹೋಗಿ ಗುಡಿಸಲಿನಲ್ಲಿ ನಡೆದ ವಿಷಯವನ್ನು, ಪುಷ್ಕರನು ಮೂರ್ಛೆಗೊಂಡುದುದನ್ನೂ ತಿಳಿಸಿ “ಆ ಹುಡುಗಿ ಲಕ್ಷ್ಮಿ ಇದ್ದಾಳೆಲ್ಲಾ ಅವಳನ್ನು ನಾನು ಪ್ರೇಮಿಸುತ್ತೇನೆ. ನಾನಾಕೆಯನ್ನು ವಿವಾಹವಾಗಿ ಆ ಗುಡಿಸಲಿನಲ್ಲಿರಲು ನಿಶ್ಚಯಿಸಿದ್ದೇನೆ. ನೀನು ಊರಿಗೆ ಹೋಗಿ ನಮ್ಮ ಆಸ್ತಿಯನ್ನೆಲ್ಲಾ ಸ್ವಾಧೀನಪಡಿಸಿಕೊಂಡು ಸುಖವಾಗಿರು. ನನಗೆ ಅವುಗಳ ಅಗತ್ಯవిల్ల” ಎಂದ.
“ಹಾಗಾದರೆ ನಾಳೆಯೇ ನಿಮ್ಮ ವಿವಾಹ ನಡೆಯುವಂತೆ ಪ್ರಯತ್ನಿಸುವೆನು, ಅದೇ ಅಲ್ಲಿ ಪುಷ್ಕರನು ಬರುತ್ತಿದ್ದಾನೆ. ಮನೆಯಲ್ಲಿ ಲಕ್ಷ್ಮಿ ಯೊಬ್ಬಳೇ ಇರುತ್ತಾಳೆ. ನೀನು ಹೋಗಿ ಅವಳನ್ನು ಮದುವೆಗೆ ಒಪ್ಪಿಸು. ಜಯಸಿಂಹನ ಸಮಕ್ಷಮದಲ್ಲೇ ವಿವಾಹ ನಡೆಯಲಿ” ಎಂದು ಹೇಳಿದ ಮಕರಾಂಕ.
ಶಶಾಂಕನು ಹೊರಟು ಹೋದ ನಂತರ ಮಕರಾಂಕನು ಲೀಲಾವತಿಯೊಂದಿಗೆ ತನ್ನ ಸಹೋದರನು ಲಕ್ಷ್ಮಿಯನ್ನು ಪ್ರೇಮಿಸಿ ವಿವಾಹವಾಗಲು ಸಿದ್ಧನಾಗಿರುವ ವಿಷಯವನ್ನು ತಿಳಿಸಿದನು.“ ಈ ಮದುವೆಯೊಂದಿಗೆ ನನ್ನ ಮತ್ತು ಲೀಲಾವತಿಯರ ವಿವಾಹವಾದರೆ ಎಷ್ಟು ಸೊಗುಸಾಗಿರುತ್ತಿತ್ತು !?” ಎಂದನು. ನಿನಗೆ ನಿಜವಾಗಿ ಲೀಲಾವತಿಯಮೇಲೆ ಅಷ್ಟೊಂದು ಪ್ರೇಮವಿದ್ದರೆ ನಾಳೆ ಬೆಳಗ್ಗೆ ಆಕೆ’ಯನ್ನು ನಾನಿಲ್ಲಿಗೆ ಕರೆತರುತ್ತೇನೆ. ಅಷ್ಟೇ ಅಲ್ಲ, ಆಕೆ ನಿನ್ನನ್ನು ವಿವಾಹವಾಗಲೂ ಒಪ್ಪಿ ಕೊಳ್ಳುವಂತೆ ಮಾಡುತ್ತೇನೆ. ನನಗೆ ಅಷ್ಟೋ ಇಷ್ಟೋ ಮಂತ್ರವಿದ್ಯೆ ಬರುತ್ತದೆ”ಎಂದಳು.
ಲೀಲಾವತಿ, ಒಂದು ಕಡೆ ಆಶೆ, ಮತ್ತೊಂದು ಕಡೆ ಅನುಮಾನ ಮಕರಾಂಕನನ್ನು ಬಾಧಿಸಿತು. “ಇದು ಪರಿಹಾಸ್ಯಕ್ಕೆ ಸಮಯವಲ್ಲ, ನಿಜ ಹೇಳು ಎಂದ ಮಕರಾಂಕ “ಇದರಲ್ಲಿ ಪರಿಹಾಸ್ಯವೇನಿಲ್ಲ. ನಾನು ನಿಜ ಹೇಳುತ್ತಿದ್ದೇನೆ. ನೀನು ಉತ್ತಮ ಉಡುಪುಗಳನ್ನು ಧರಿಸಿಕೊಂಡು ಮದುಮಗನಂತೆ ಕುಳಿತಿರು. ಅಗತ್ಯವೆನಿಸಿದರೆ ಜಯಸಿಂಹ ಮತ್ತೆ ಇತರರಿಗೂ ತಿಳಿಸು, ನಾಳೆ ಬೆಳಗ್ಗೆ ಲೀಲಾವತಿ ಇಲ್ಲಿರುವಂತೆ ಮಾಡುವ ಬಾಧ್ಯತೆ ನನ್ನದು, ಸರಿಯೇ ?’ ಎಂದಳು ಲೀಲಾವತಿ.
ಮಾರನೇಯ ದಿನ ಮುಂಜಾನೆ ಜಯಸಿಂಹನ ಸಮಕ್ಷಮದಲ್ಲಿ ಎರಡು ವಿವಾಹಗಳು. ನಡೆಯಲು ಸಿದ್ಧತೆಗಳಾದುವು. ಲಕ್ಷ್ಮಿ, ಶಶಾಂಕ ಮತ್ತು ಮಕರಾಂಕರು ಆತನಿದ್ದ ಸ್ಥಳಕ್ಕೆ ಬಂದರು. ಜಯಸಿಂಹನ ಪರಿವಾರ ಒಬ್ಬಳೇ ಮದುಮಗಳು ಇರುವುದನ್ನು ಕಂಡು ಅಚ್ಚರಿಗೊಂಡರು. ಪುಷ್ಕರನು ಲೀಲಾವತಿಯನ್ನು ಕರೆತರುವನೆಂದು ಮಕರಾಂಕನು ಹೇಳಿದನು. ಬರಲಿರುವ ಮದುಮಗಳು ತನ್ನ ಮಗಳೆಂದು ತಿಳಿದು ಜಯಸಿಂಹನು ಮತ್ತಷ್ಟು ಆಶ್ಚರ್ಯಹೊಂದಿದನು.
” ಪುಷ್ಕರನು ನಿನ್ನನ್ನು ಪರಿಹಾಸ್ಯ ಮಾಡಲು ಹಾಗೆ ಹೇಳಿರಬೇಕು. ನನ್ನ ಮಗಳನ್ನು ಕರೆತರಲು ಅವನಿಂದಾಗದು” ಎಂದ ಜಯಸಿಂಹ ಮಕರಾಂಕನೊಂದಿಗೆ.
ಇಷ್ಟರಲ್ಲಿ ಪುಷ್ಕರನು ಅಲ್ಲಿಗೆ ಬಂದು ಜಯಸಿಂಹನೊಂದಿಗೆ ” ನಾನು ನಿಮ್ಮ ಮಗಳನ್ನು ಇಲ್ಲಿಗೆ ಕರೆ ತಂದ ಪಕ್ಷಕ್ಕೆ ಆಕೆಯನ್ನು ಮಕರಾಂಕನು ವಿವಾಹವಾಗಲು ಅನುಮತಿ ನೀಡುವಿರಾ?” ಎಂದು ಕೇಳಿದ.
“ಆಗತ್ಯವಾಗಿ ಅನುಮತಿ ಕೊಡುತ್ತೇನೆ. ರಾಜ್ಯವಿದ್ದಿದ್ದರೆ ವರದಕ್ಷಿಣೆಯಾಗಿ ಕೊಡುತ್ತಿದ್ದೆ” ಎಂದ ಜಯಸಿಂಹ, “ಆಕೆಯನ್ನು ವಿವಾಹ ವಾಗುವುದು ನಿನಗೆ ಸಮ್ಮತವಷ್ಟೇ?”ಪುಷ್ಕರನು ಮಕರಾಂಕನನು ನೋಡಿ ಕೇಳಿದ.
“ನಾನು ಸಾರ್ವಭೌಮನಾದರೂ ಆಕೆಯನ್ನು ಮನಸ್ಪೂರ್ತಿಯಾಗಿ ಮದುವೆಯಾಗುವೆನು” ಎಂದ ಮಕರಾಂಕ.
ತರುವಾಯ ಪುಷ್ಕರನೂ ಲಕ್ಷ್ಮಿಯೂ ತಮ್ಮ ಗುಡಿಸಲಿಗೆ ಹೋದರು. ಲೀಲಾವತಿ ತನ್ನ ಪುರುಷವೇಷವನ್ನು ತೊರೆದಳು. ಇಬ್ಬರೂ ತಾವು ತಂದುಕೊಂಡಿದ್ದ ಅಮೂಲ್ಯವಸ್ತ್ರಾ ಭರಣಗಳನ್ನು ಧರಿಸಿದರು. ಅವರು ರಾಜ ಕುಮಾರಿಯರಂತೆ ಸಿದ್ಧರಾದರು. ಅವರು ಜಯಸಿಂಹನಿದ್ದ ಸ್ಥಳಕ್ಕೆ ಬಂದರು. ಲೀಲಾವತಿ ತಂದೆಗೆ ಪ್ರಣಾಮ ಮಾಡಿ ತನ್ನನ್ನು ಆಶೀರ್ವಾದ ಮಾಡುವಂತೆ ಕೇಳಿಕೊಂಡಳು. ಆಕೆ ತನ್ನ ತಂದೆಗೆ ತಮ್ಮ ಅಜ್ಞಾತವಾಸದ ಕಥೆ ಯಾವತ್ತೂ ತಿಳಿಸಿದಳು.
ತರುವಾಯ ಲೀಲಾವತಿಯನ್ನು ಮಕರಾಂಕನೂ, ಮಾಲತಿಯನ್ನು ಶಶಾಂಕನೂ ವಿವಾಹವಾದರು. ಈ ವಿವಾಹಗಳು ನಗರದಲ್ಲಿ ನಡೆದಿದ್ದರೆ ಬಹಳ ವಿಜೃಂಭಣೆಯಾಗಿ ನಡೆಯಬೇಕಾಗಿದ್ದರೂ ಇಲ್ಲಿ ಅರಣ್ಯದಲ್ಲಿ ಆನಂದಕ್ಕೆ ಮಾತ್ರ ಯಾವ ಕೊರತೆಯೂ ಇರ ಲಿಲ್ಲ. ವಿವಾಹ ಶಾಸ್ತ್ರಮುಗಿದ ನಂತರ ಎಲ್ಲರೂ ಎಲೆಗಳ ಮುಂದೆ ಕುಳಿತು ಊಟಮಾಡುತ್ತಿರುವಾಗ ಶಕ್ತಿಸಿಂಹನು ಕೆಲವಾರು ಭಟರೊಂದಿಗೆ ಅಲ್ಲಿಗೆ ಬಂದನು.
ತನ್ನ ಮಗಳು ಮಾಲತಿ ಮಾಯವಾದಾಗಿಲಿಂದ ಶಕ್ತಿಸಿಂಹನ ಕೋಪ ನೆತ್ತಿಗೇರಿತು. ದಿಕ್ಕಿಲ್ಲದೆ ಅಡವಿ ಪಾಲಾದ ತನ್ನ ಅಣ್ಣನ ಬಳಿಗೆ ತನ್ನ ಮಗಳು ಏಕೆ ಹೋಗಬೇಕು? ಜಯಸಿಂಹ ಮತ್ತು ಅವನ ಸಂಗಡಿಗರ ಸರ್ವನಾಶ ಮಾಡುವ ಉದ್ದೇಶದಿಂದಲೇ ಅವನು ಅಲ್ಲಿಗೆ ದಾಳಿ ತೆಗೆದುಕೊಂಡು ಬಂದನು.
ಆದರೆ ನೂತನ ವಧೂವರರನ್ನು, ಔತಣ ಕೂಟದಲ್ಲಿ ಭಾಗವಹಿಸಿದ್ದ ಪರಿಜನರನ್ನು ಕಂಡ ಕೂಡಲೇ ಶಕ್ತಿಸಿಂಹನಿಗೆ ಜ್ಞಾನೋದಯವಾಯಿತು. ಅರಣ್ಯದ ನಡುವೆಯೂ ಆನಂದಕ್ಕೆ ಕೊರತೆಯಿರಲಾರದೆಂದೂ, ಕಿರೀಟವಿದ್ದ ಮಾತ್ರಕ್ಕೆ ರಾಜನಾಗಲಾರನೆಂದೂ, ತನ್ನ ಅಣ್ಣನಾದ ಜಯಸಿಂಹನು ಎಲ್ಲಿದ್ದರೂ ರಾಜನೆಂದೂ ಶಕ್ತಿಸಿಂಹನು ಗ್ರಹಿಸಿದನು. ಅವನು ತನ್ನ ಅಣ್ಣನ ಪಾದಗಳ ಮೇಲೆ ಬಿದ್ದು ಕ್ಷಮಾಪಣೆ ಬೇಡಿಕೊಂಡನು. “ಅಣ್ಣಾ, ನಡೆದುದೇನೋ ನಡೆದು ಹೋಯಿತು.
ನೀನಿಲ್ಲದ ರಾಜ್ಯ ಅರಣ್ಯವಾಗಿದೆ. ನೀನಿರುವ ಅರಣ್ಯ ರಾಜ್ಯವಾಗಿದೆ. ಆದುದರಿಂದ ನೀನು ಮತ್ತೆ ಬಂದು ರಾಜ್ಯಭಾರ ಮಾಡು ” ಎಂದನು. ಅವನ ಮಾತು ಕೇಳಿ ಅಲ್ಲಿದ್ದವರೆಲ್ಲ ಹರ್ಷಿತರಾದರು. ಜಯಸಿಂಹನ ಅರಣ್ಯವಾಸ ಅಂದಿಗೆ ಮುಗಿಯಿತು. ತಮ್ಮ ಪದವಿಗಳನ್ನು ತ್ಯಜಿಸಿ ತನ್ನೊಂದಿಗೆ ಅರಣ್ಯಕ್ಕೆ ಬಂದು ಸೇವೆ ಸಲ್ಲಿಸಿದ ಸಾಮಂತರಿಗೆ ತನ್ನ ಮೆಚ್ಚಿಗೆಯನ್ನು, ಆದರವನ್ನು ಧಾರಾಳವಾಗಿ ತೋರಿಸಿದನು ಮಹಾರಾಜ ಜಯಸಿಂಹ. ಎಲ್ಲರೂ ತಮ್ಮ ತಮ್ಮ ಪದವಿಗಳನ್ನು ಮತ್ತೆ ಸ್ವೀಕರಿಸಿಕೊಂಡು ಸುಖವಾಗಿ ಬಾಳತೊಡಗಿದರು.