SBI scholarship -2025: ಎಸ್ಬಿಐನಿಂದ ಸ್ಕಾಲರ್ಶಿಪ್|15 ಸಾವಿರ ರೂ. ಗಳಿಂದ 20 ಲಕ್ಷ ರೂ.ವರೆಗೆ ನೆರವು
SBI scholarship -2025: ಎಸ್ಬಿಐನಿಂದ ಸ್ಕಾಲರ್ಶಿಪ್|15 ಸಾವಿರ ರೂ. ಗಳಿಂದ 20 ಲಕ್ಷ ರೂ.ವರೆಗೆ ನೆರವು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಸ್ಬಿಐ ಫೌಂಡೇಷನ್ ಮೂಲಕ ದೇಶಾದ್ಯಂತ 22,230 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಿದೆ. ಇದಕ್ಕಾಗಿ ಈ ವರ್ಷ 90 ಕೋಟಿ ರೂ.ವಿನಿಯೋಗಿಸುವುದಾಗಿ ಹೇಳಿದೆ.
ಶಾಲಾ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳು, ಐಐಟಿ, ಐಐಎಂ ಸೇರಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ 2,230 ಜನರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎಸ್ಬಿಐ ತಿಳಿಸಿದೆ.
ಶಾಲಾ ಹಂತದಲ್ಲಿ 9ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು అజి ಸಲ್ಲಿಸಬಹುದಾಗಿದ್ದು, ಇವರಿಗೆ 15 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇನ್ನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 75 ಸಾವಿರ ರೂ. ದೊರೆಯಲಿದೆ. ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ 2.50 ಲಕ್ಷ ರೂ., ವೈದ್ಯಕೀಯ ವಿದ್ಯಾರ್ಥಿಗಳಿಗೆ 4.50 ಲಕ್ಷ ರೂ. ಸ್ಕಾಲರ್ಶಿಪ್ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಆದರೆ, ಪದವಿ, ಸ್ನಾತಕೋತ್ತರ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಎನ್ಐಆರ್ಎಫ್- ಪಟ್ಟಿಯಲ್ಲಿ 300ರೊಳಗಿನ ರ್ಯಾಂಕಿಂಗ್ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆ, ವಿವಿ ಹಾಗೂ ಕಾಲೇಜುಗಳಲ್ಲಿ ಓದುತ್ತಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಷರತ್ತು ವಿಧಿಸಲಾಗಿದೆ.
ಇನ್ನು, ಐಐಟಿ ಪ್ರವೇಶ ಪಡೆದಿದ್ದರೆ 2 ಲಕ್ಷ ರೂ. ಮತ್ತು ಐಐಎಂ ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ನೀಡಲಾಗುತ್ತದೆ. ವಿದೇಶದಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ 20 ಲಕ್ಷ ರೂ.ವರೆಗೆ ವಿದ್ಯಾರ್ಥಿ ವೇತನ ಸೌಲಭ್ಯ ಇರಲಿದೆ ಎಂದು ಎಸ್ಬಿಐ ಮಾಹಿತಿ ನೀಡಿದೆ.

ಎಸ್ಬಿಐ ಬ್ಯಾಂಕ್ ಖಾತೆ ಕಡ್ಡಾಯ:
ಅರ್ಜಿದಾರರು ಎಸ್ಬಿಐನಲ್ಲಿ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ವೇಳೆ ಬ್ಯಾಂಕ್ ಪಾಸ್ಬುಕ್ ಅಪ್ಲೋಡ್ ಮಾಡಬೇಕಿದ್ದು, ಹೀಗಾಗಿ ಅರ್ಜಿ ಸಲ್ಲಿಕೆಗೂ ಮುನ್ನ ಬ್ಯಾಂಕ್ ಖಾತೆ ತೆರೆಯುವಂತೆ ಸೂಚಿಸಲಾಗಿದೆ.