II PUC Marks Improvement Deadline: ವಿದ್ಯಾರ್ಥಿಗಳಿಗೆ 2 ವರ್ಷಗಳ ಮಾತ್ರ ಅವಕಾಶ
II PUC Marks Improvement Deadline: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಕ್ರಾಂತಿಕಾರಿ ಬದಲಾವಣೆಯೊಂದನ್ನು ತಂದಿದೆ. ಇಲ್ಲಿಯವರೆಗೆ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಅಥವಾ ಅನುತ್ತೀರ್ಣರಾದಲ್ಲಿ ಪರೀಕ್ಷೆ ಬರೆಯಲು ನೀಡಲಾಗಿದ್ದ ಆರು ಅವಕಾಶಗಳ ನಿಯಮವನ್ನು ಇಲಾಖೆ ರದ್ದುಗೊಳಿಸಿದೆ. ಇನ್ಮುಂದೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷದಿಂದ ಕೇವಲ ಎರಡು ವರ್ಷಗಳ ಒಳಗೆ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಹಳೆಯ ನಿಯಮದ ಅನ್ವಯ, ವಿದ್ಯಾರ್ಥಿಗಳು ಯಾವುದೇ ಕಾಲಮಿತಿಯ ನಿರ್ಬಂಧವಿಲ್ಲದೆ ಆರು ಬಾರಿ ಮರುಪರೀಕ್ಷೆ ಬರೆಯಲು ಅವಕಾಶವಿತ್ತು. ಇದರ ಪರಿಣಾಮವಾಗಿ, ದಶಕಗಳ ಹಿಂದೆ ಪಿಯುಸಿ ಪರೀಕ್ಷೆ ಬರೆದವರೂ ಅಂಕ ಸುಧಾರಣೆಗಾಗಿ ಮತ್ತೆ ಪರೀಕ್ಷೆಗೆ ಹಾಜರಾಗುತ್ತಿದ್ದರು. ಇಂತಹ ದೀರ್ಘಕಾಲಿಕ ಅವಧಿಯು ಪರೀಕ್ಷಾ ಮೌಲ್ಯಮಾಪನ ಮತ್ತು ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಇದೆ ಕಾರಣಕ್ಕಾಗಿ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವ ಈ ಹೊಸ ನಿಯಮವು ಎರಡು ಶೈಕ್ಷಣಿಕ ವರ್ಷಗಳ ಒಳಗೆ ಫಲಿತಾಂಶ ಸುಧಾರಣೆ ಅಥವಾ ಉತ್ತೀರ್ಣರಾಗಲು ಪರೀಕ್ಷೆ ಬರೆಯಬೇಕು ಎಂದು ಹೇಳಲಾಗಿದೆ. ಎರಡು ವರ್ಷಗಳ ನಂತರ ಪರೀಕ್ಷೆ ಬರೆಯಲು ಯಾವುದೇ ಅವಕಾಶ ಇರುವುದಿಲ್ಲ ಎಂದು” ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಆದೇಶಿಸಿದೆ.
ಬದಲಾವಣೆ ಏಕೆ?:
ಶಿಕ್ಷಣ ಇಲಾಖೆಯು ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಪಠ್ಯಕ್ರಮದಲ್ಲಿ ಆಗಾಗ ಆಗುವ ಬದಲಾವಣೆಗಳು. ಪ್ರತಿ ವರ್ಷವೂ ಪಠ್ಯಕ್ರಮ ಪರಿಷ್ಕರಣೆಗೊಳ್ಳುತ್ತಿರುವುದರಿಂದ, ಹಳೆಯ ಪಠ್ಯಕ್ರಮದ ಆಧಾರದ ಮೇಲೆ ದಶಕಗಳ ನಂತರ ಪರೀಕ್ಷೆ ಬರೆಯುವುದು ಸಮಂಜಸವಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ತ್ವರಿತವಾಗಿ ಸಾಧಿಸಬೇಕು ಮತ್ತು ಆ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯಬೇಕು ಎಂಬುದು ಈ ಹೊಸ ನಿಯಮದ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯು ಪರೀಕ್ಷಾ ಪದ್ಧತಿಯಲ್ಲಿ ಶಿಸ್ತು ಮತ್ತು ಸಮಯಬದ್ಧತೆಯನ್ನು ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
▪️ಪಿಯುಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ
▪️ಆರು ಬಾರಿ ಪರೀಕ್ಷೆ ಬರೆಯುವ ಹಳೆಯ ನಿಯಮ ರದ್ದು
▪️ಫಲಿತಾಂಶ ಸುಧಾರಣೆ ಬಯಸುವವರಿಗೆ ಇನ್ನು ಕಠಿಣ ಸವಾಲು
ವಿದ್ಯಾರ್ಥಿಗಳ ಗಮನಕ್ಕೆ…
ನೋಂದಣಿ ವರ್ಷವೇ ಮಾನದಂಡ: ನೀವು ಮೊದಲ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷದಿಂದಲೇ ನಿಮ್ಮ 2 ವರ್ಷಗಳ ಅವಧಿ ಪ್ರಾರಂಭವಾಗುತ್ತದೆ.
ಸತತ ಅವಕಾಶಗಳು:
ಮುಖ್ಯ ಪರೀಕ್ಷೆ ಮತ್ತು ಅದರ ನಂತರ ಬರುವ ಪೂರಕ ಪರೀಕ್ಷೆಗಳನ್ನು ಒಳಗೊಂಡಂತೆ, 2 ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬಹುದು.
ಅಂಕ ಸುಧಾರಣೆಗೆ ಮಿತಿ:
ಕೇವಲ ಅನುತ್ತೀರ್ಣರಾದವರು ಮಾತ್ರವಲ್ಲ, ಈಗಾಗಲೇ ಪಾಸಾಗಿದ್ದು ಅಂಕ ಕಡಿಮೆ ಬಂದಿದೆ ಎಂದು ಮರುಪರೀಕ್ಷೆ ಬರೆಯುವವರಿಗೂ ಇದೇ 2 ವರ್ಷಗಳ ಮಿತಿ ಅನ್ವಯಿಸುತ್ತದೆ.
ಹಳೆಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ:
ಈ ಹೊಸ ನಿಯಮದ ಅಡಿಯಲ್ಲಿ ತಮ್ಮ ಕೊನೆಯ ಅವಕಾಶದ ಬಗ್ಗೆ ಕಾಲೇಜು ಅಥವಾ ಮಂಡಳಿಯಿಂದ ಸ್ಪಷ್ಟನೆ ಪಡೆಯುವುದು ಉತ್ತಮ.
ಪಠ್ಯಕ್ರಮದ ಅರಿವಿರಲಿ:
ಎರಡು ವರ್ಷಗಳ ನಂತರ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲವಾದ್ದರಿಂದ, ಚಾಲ್ತಿಯಲ್ಲಿರುವ ಪಠ್ಯಕ್ರಮದ ಅಡಿಯಲ್ಲೇ ಪರೀಕ್ಷೆ ಪೂರೈಸುವುದು ಕಡ್ಡಾಯ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ವರದಾನವೇ ಅಥವಾ ಸವಾಲೇ?
ರಾಜ್ಯ ಶಿಕ್ಷಣ ಇಲಾಖೆಯು ಪಿಯುಸಿ ಪರೀಕ್ಷೆಗಳಿಗೆ 2 ವರ್ಷಗಳ ‘ಡೆಡ್ಲೈನ್’ ವಿಧಿಸಿರುವುದು ಶೈಕ್ಷಣಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಇದ್ದ ‘ಆರು ಅವಕಾಶಗಳ’ ಸಡಿಲಿಕೆಯನ್ನು ಕಡಿತಗೊಳಿಸಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ತರುವ ಪ್ರಯತ್ನವೆಂದು ತೋರಿದರೂ, ಇದು ವಿದ್ಯಾರ್ಥಿಗಳ ಮೇಲೆ ಮಿಶ್ರ ಪ್ರತಿಕ್ರಿಯೆ ಬೀರಲಿದೆ.
ಶಿಕ್ಷಣ ಇಲಾಖೆಯ ಈ ನಿರ್ಧಾರವು ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತಿನ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಅನಿವಾರ್ಯ ಕಾರಣಗಳಿಂದ ಸಂದರ್ಭಗಳಲ್ಲಿ ವಿನಾಯಿತಿ ನೀಡುವ ಬಗ್ಗೆಯೂ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ವಿಶೇಷ ಸರ್ಕಾರ ಚಿಂತಿಸಬೇಕಿದೆ.
ವಿದ್ಯಾರ್ಥಿಗಳು ಈಗಿನಿಂದಲೇ ಯೋಜಿತವಾಗಿ ಅಭ್ಯಾಸ ಮಾಡುವುದು ಈ ಹೊಸ ನಿಯಮವನ್ನು ಎದುರಿಸಲು ಇರುವ ಏಕೈಕ ದಾರಿ.