Childcare Leave for Female Teachers: ನಿಯಮಗಳು, ಸೌಲಭ್ಯಗಳು ಮತ್ತು ಕಾಲಮಿತಿ-2026: ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕರಿಗೆ ಶಿಶುಪಾಲನಾ ರಜೆ ಮಂಜೂರಾತಿ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿದೆ. ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ರಜೆ ಮಂಜೂರು, 5 ವರ್ಷವರೆಗೆ ಸ್ಥಳ ನಿಯುಕ್ತಿ ಸೌಲಭ್ಯ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಅ) ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕರಿಗೆ ಶಿಶುಪಾಲನೆ ರಜೆ ಮಂಜೂರು ಮಾಡಲು ಇರುವ ಮಾನದಂಡವೇನು:
ಮಹಿಳಾ ಶಿಕ್ಷಕರಿಗೆ ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವ ಸಂಬಂಧ ಸರ್ಕಾರದ ಎಲ್ಲಾ ಇಲಾಖೆಗಳು ಪಾಲಿಸುವ ಆದೇಶವನ್ನು ಅನುಬಂಧದಲ್ಲಿ ಒದಗಿಸಿದೆ. ಅದರ ಮಾನದಂಡಗಳ ಅನುಸಾರ ಶಿಶುಪಾಲನಾ ರಜೆ ಮಂಜೂರಾತಿಯನ್ನು ನೀಡಲಾಗುತ್ತಿದೆ.
ಆ) ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕರಿಗೆ ಶಿಶುಪಾಲನೆ ರಜೆ ಪಡೆಯಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:
ಈ ಕುರಿತು ಯಾವುದೇ ಮನವಿ ಅಥವಾ ದೂರು ಸ್ವೀಕೃತಿಯಾಗಿರುವುದಿಲ್ಲ ಹಾಗೂ ಮೇಲ್ಕಂಡ ಮಾನದಂಡಗಳಂತೆ ಸಕ್ಷಮ ಪ್ರಾಧಿಕಾರಗಳು ಕ್ರಮವಹಿಸುತ್ತಿದ್ದಾರೆ.
ಆದರೂ ಸಹ ಇನ್ನುಮುಂದೆ ಶಾಲಾ ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕರಿಗೆ ಶಿಶುಪಾಲನೆ ರಜೆ ಮಂಜೂರಾತಿಯನ್ನು ಸುಗಮಗೊಳಿಸಲು ಕೆಳಕಂಡಂತೆ ಕ್ರಮವಹಿಸಲಾಗುವುದು:
1) ಮಹಿಳಾ ಶಿಕ್ಷಕರಿಗೆ ಮಾತೃತ್ವ ರಜಾ ಮನವಿ ಸ್ವೀಕೃತಗೊಂಡ 15 ದಿನಗಳೊಳಗಾಗಿ ಸಕ್ಷಮ ಪ್ರಾಧಿಕಾರದಿಂದ ಮಾತೃತ್ವ ರಜೆಯನ್ನು ಮಂಜೂರು ಮಾಡುವುದು.
2) ಅದಲ್ಲದೆ, ಮಹಿಳಾ ಶಿಕ್ಷಕರು ಮಾತೃತ್ವ ರಜೆಯೊಂದಿಗೆ ಶಿಶುಪಾಲನಾ ರಜೆಯನ್ನು ಸಂಯೋಜಿಸಿ ಉಪಯೋಗಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಅಥವಾ ಶಿಶುಪಾಲನಾ ರಜೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ರಜಾ ಮನವಿ ಸ್ವೀಕೃತವಾದ 15 ದಿನಗಳೊಳಗಾಗಿ ರಜೆಯನ್ನು ಮಂಜೂರು ಮಾಡುವುದು.
3) ಮಾತೃತ್ವ ರಜೆಯ ನಂತರ ಮರಳಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಶಿಕ್ಷಕರಿಗೆ ಮಗುವಿನ ವಯಸ್ಸು, 05 ವರ್ಷ ಪೂರ್ಣಗೊಳ್ಳುವವರೆಗೂ ಮಗುವಿನ ಆರೈಕೆಗೆ ಅನುಕೂಲವಾಗುವ ರೀತಿಯಲ್ಲಿ ಸದರಿ ಮಹಿಳಾ ನೌಕರರು ಇಚ್ಛಿಸುವ ಸ್ಥಳಕ್ಕೆ ನಿಯುಕ್ತಿಗೊಳಿಸಲಾಗುವುದು.
4) ಮಾತೃತ್ವ ರಜೆ ಹಾಗೂ ಶಿಶುಪಾಲನಾ ರಜೆಯ ಮೇಲೆ ತೆರಳುವ ಮಹಿಳಾ ಶಿಕ್ಷಕರ ರಜೆಯ ಅವಧಿಗೆ ಅತಿಥಿ ಶಿಕ್ಷಕರನ್ನು ನಿಯುಕ್ತಿಗೊಳಿಸಲು ಕ್ರಮವಹಿಸಲಾಗುವುದು.
ಇ) ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕರಿಗೆ ಶಿಶುಪಾಲನೆ ರಜೆ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವ ಕಾಲಮಿತಿಯೊಳಗೆ ಮಂಜೂರು ಮಾಡಲು ಅವಕಾಶ ಇರುತ್ತದೆ.?
ಶಿಶುಪಾಲನೆ ರಜೆಯನ್ನು ಮಂಜೂರು ಮಾಡುವ ಸಂಬಂಧ ಸರ್ಕಾರದ ಆದೇಶ ಸಂಖ್ಯೆ: ಆಇ 4(ಇ) ಸೇನಿಸೇ 2021 ಬೆಂಗಳೂರು, ದಿನಾಂಕ: 21-06-2021ರಲ್ಲಿ ನಿರ್ದೇಶನಗಳನ್ನು ನೀಡಲಾಗಿದ್ದು, ಈ ಕುರಿತು ಯಾವುದೇ ಕಾಲಮಿತಿಯನ್ನು ನಮೂದಿಸಿರುವುದಿಲ್ಲ.
ಆದರೂ, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವು ಅತ್ಯಂತ ಕಾಳಜಿವಹಿಸಿ ಇನ್ನುಮುಂದೆ ರಜಾ ಮನವಿ ಸ್ವೀಕೃತಗೊಂಡ 15 ದಿನಗಳೊಳಗಾಗಿ ಮಂಜೂರು ಮಾಡಲು ಕ್ರಮವಹಿಸಲಾಗುವುದು.


CLICK HERE TO DOWNLOAD