BILINGUAL DICTIONARY: 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ದ್ವಿಭಾಷಾ ನಿಘಂಟು,ಆಂಗ್ಲ ಭಾಷೆಯ ಕಲಿಕೆ ಈಗ ಇನ್ನೂ ಸುಲಭ ತಾಯ್ನುಡಿಯಲ್ಲಿ ಬಂದಿದೆ ದ್ವಿಭಾಷಾ ನಿಘಂಟು.
ಆಂಗ್ಲ ಭಾಷೆಯ ಕಲಿಕೆ ಈಗ ಇನ್ನೂ ಸುಲಭ ತಾಯ್ನುಡಿಯಲ್ಲಿ ಬಂದಿದೆ ದ್ವಿಭಾಷಾ ನಿಘಂಟು,ಇಂಗ್ಲಿಷ್ ಪದದ ಕನ್ನಡ ಅರ್ಥ ಹಾಗೂ ಎರಡು ಭಾಷೆಯ ವಾಕ್ಯ ರಚನೆ ಲಭ್ಯ.
ಶಬ್ದಭಂಡಾರವು ಪರಿಣಾಮಕಾರಿ ಸಂವಹನದ ಅಡಿಪಾಯವಾಗಿದೆ. ವ್ಯಾಪಕವಾದ ಶಬ್ದಭಂಡಾರದ ಜ್ಞಾನವು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಹೆಚ್ಚು ಆಳವಾಗಿ ವಿಶ್ಲೇಷಿಸಲು, ವಿಭಿನ್ನ ಪರಿಕಲ್ಪನೆಗಳನ್ನು ಅರ್ಥೈಸಲು, ಸಂಕೀರ್ಣ ವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.
ಜಾಗತೀಕರಣಗೊಂಡ ಸಮಾಜದಲ್ಲಿ, ಬಹು ಭಾಷೆಗಳ ಪ್ರಾವೀಣ್ಯತೆಯು ಅಮೂಲ್ಯವಾದ ಜೀವನ ಕೌಶಲ್ಯವಾಗಿದೆ. ಎರಡೂ ಭಾಷೆಗಳಲ್ಲಿ ಶಬ್ದ ಭಂಡಾರದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅಂದರೆ ಗೃಹ ಭಾಷೆ ಮತ್ತು ಇಂಗ್ಲಿಷ್ ಗಳಲ್ಲಿ ಹೊಸ ಪದಗಳನ್ನು ಅರ್ಥೈಸಲು ಅನುಕೂಲವಾಗುವಂತೆ ದ್ವಿಭಾಷಾ ನಿಘಂಟನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಭಾಷಾ ಪ್ರಾವೀಣ್ಯತೆಯನ್ನು ಹೊಂದಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.
ಬಹುಭಾಷಾ ಪ್ರಪಂಚದಲ್ಲಿ ಪ್ರಾಪಂಚಿಕ ಜ್ಞಾನವನ್ನು ಹೊಂದಲು ಈ ಸಂಪನ್ಮೂಲವು ವಿದ್ಯಾರ್ಥಿಗಳಿಗೆ ಉತ್ತಮ ಸಾಧನವಾಗಿದೆ. ಈ ದ್ವಿಭಾಷಾ ನಿಘಂಟು ಶಾಲೆ ಮತ್ತು ಮನೆಯ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುದಲ್ಲದೇ, ಮಗುವಿನ ಭಾಷಾ ಕಲಿಕೆಯಲ್ಲಿ ಪೋಷಕರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ಕೇವಲ ಉಲ್ಲೇಖನ ಗ್ರಂಥವಾಗಿರದೆ, ಜ್ಞಾನ, ತಿಳುವಳಿಕೆ ಮತ್ತು ಸಂವಹನ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಉತ್ತಮ ಸಾಧನವಾಗಿದೆ.
ವಿದ್ಯಾರ್ಥಿಗಳಿಗೆ ಎರಡೂ ಭಾಷೆಗಳಲ್ಲಿ ಬಲವಾದ ಅಡಿಪಾಯವನ್ನು ಒದಗಿಸಲು ಗುಣಮಟ್ಟದ ದ್ವಿಭಾಷಾ ನಿಘಂಟನ್ನು ವಿನ್ಯಾಸಗೊಳಿಸಿ, ಹೊರತರುವಲ್ಲಿ DSERT ಮತ್ತು ಬಾಲ ರಕ್ಷಾ ಭಾರತ್‌ನ (Save the Children ಎಂದೂ ಗುರುತಿಸಲ್ಪಟ್ಟಿರುವ) ಪ್ರಯತ್ನಗಳು ಶ್ಲಾಘನೀಯವಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ನಿಘಂಟಿನ ಸದುಪಯೋಗಪಡಿಸಿಕೊಂಡು, ವಿದ್ಯಾರ್ಥಿಗಳ ಭಾಷಾ ಕೌಶಲ್ಯಗಳ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತಾರೆಂದು ಆಶಿಸಲಾಗಿದೆ.
ಶಾಲಾ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಈ ನಿಘಂಟು ಒಂದು ಪ್ರಮುಖ ಸಾಧನವಾಗಿದೆ. ಮಕ್ಕಳು ವಿಷಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪದಗಳನ್ನು ಸರಿಯಾಗಿ ಬಳಸುವ ಮೂಲಕ ಅವರ ಸಂವಹನ ಮತ್ತು ಕಲಿಕೆಯನ್ನು ಸುಧಾರಿಸಲು ಈ ನಿಘಂಟು ಸಹಕಾರಿಯಾಗಲಿದೆ. ಇದು ದ್ವಿಭಾಷಾ ನಿಘಂಟು ಆಗಿರುವುದರಿಂದ ಮಕ್ಕಳು ಕನ್ನಡಕ್ಕೆ ಅಥವಾ ಇಂಗ್ಲಿಷ್‌ಗೆ ಅನುವಾದಿಸಬೇಕಾದ ಯಾವುದೇ ನಿರ್ದಿಷ್ಟ ಪದವನ್ನು ಅರ್ಥೈಸಲು ಸಹಾಯಕವಾಗುತ್ತದೆ.
ಈ ಪಠ್ಯಕ್ರಮ ಆಧಾರಿತ ನಿಘಂಟನ್ನು ಪ್ರಾಥಮಿಕ ಹಂತದ 6-14 ವರ್ಷ ವಯಸ್ಸಿನವರಿಗೆ ವಿನ್ಯಾಸಗೊಳಿಸಲಾಗಿದ್ದು, ಅದರಲ್ಲಿ ಪ್ರಮುಖ ಪದ, ಅದರ ಉಚ್ಚಾರಣೆ, ಕನ್ನಡದಲ್ಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅದರ ಅರ್ಥ ಮತ್ತು ವಾಕ್ಯದಲ್ಲಿ ಅದರ ಬಳಕೆಯನ್ನು ನೀಡಲಾಗಿದೆ. ಭಾಷೆಗಳು (ಕನ್ನಡ, ಇಂಗ್ಲಿಷ್, ಹಿಂದಿ) ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಒಳಗೊಂಡ ಎಲ್ಲಾ ವಿಷಯಗಳಲ್ಲಿನ ಪ್ರಮುಖ ಮತ್ತು ಅವಶ್ಯಕ ಪದಗಳನ್ನು ಈ ನಿಘಂಟಿನಲ್ಲಿ ಆಳವಡಿಸಿರುವುದರಿಂದ, ಮಕ್ಕಳು ಬೇರೆ ಬೇರೆ ವಿಷಯಗಳಿಗೆ ಪ್ರತ್ಯೇಕ ನಿಘಂಟುಗಳನ್ನು ಬಳಸುವ ಪ್ರಯಾಸವನ್ನು ತಪ್ಪಿಸುತ್ತದೆ.
ಶಿಕ್ಷಕರಿಗೆ ಸೂಚನೆಗಳು
ವಿದ್ಯಾರ್ಥಿಗಳು ಪ್ರತಿದಿನ ಎರಡೂ ಭಾಷೆಗಳಲ್ಲಿ ಹೊಸ ಪದಗಳನ್ನು ಕಲಿಯಲು ಅನುವಾಗುವಂತೆ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ನಿಘಂಟು ಸಿದ್ದಪಡಿಸಿದೆ. ಇದು 1 ರಿಂದ 8 ನೇ ತರಗತಿಯ ಪಠ್ಯಕ್ರಮವನ್ನು ಆಧರಿಸಿದ, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಪದಗಳನ್ನು ಒಳಗೊಂಡ ವಿಶಿಷ್ಟ ನಿಘಂಟು, ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ಕನ್ನಡ ಕಲಿಯುವಾಗ, ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಯಾವುದೇ ಪದದ ಅರ್ಥವನ್ನು ತಿಳಿಯಲು ಈ ದ್ವಿಭಾಷಾ ನಿಘಂಟನ್ನು ಬಳಸಬಹುದು. ಮಕ್ಕಳಲ್ಲಿ ಶಬ್ದ ಸಂಪತ್ತು ಮತ್ತು ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಎರಡೂ ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಎರಡು ಭಾಷೆಗಳಲ್ಲಿನ ಪದಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಈ ದ್ವಿಭಾಷಾ ನಿಘಂಟಿನಲ್ಲಿ
ಅಳವಡಿಸಿರುವ ವಿವಿಧ ಅಂಶಗಳು ಕೆಳಕಂಡಂತಿವೆ:
ಈ ನಿಘಂಟಿನಲ್ಲಿ ಪದಗಳನ್ನು ವರ್ಣಮಾಲೆಯ ಪ್ರಕಾರ ಪಟ್ಟಿ ಮಾಡಲಾಗಿದೆ.
ಎಲ್ಲಾ ವಿಷಯಗಳಲ್ಲಿ ವಯೋ ನಿರ್ದಿಷ್ಟ ಮತ್ತು ಹಂತವಾರು ಸಾಮರ್ಥ್ಯಗಳನ್ನು ಪಡೆಯಲು 1-5 ಮತ್ತು 6-8 ನೇ ತರಗತಿಗಳ ಎಲ್ಲಾ ವಿಷಯಗಳ ಪಠ್ಯಕ್ರಮ ಮತ್ತು ಪಾಠಗಳಿಂದ ಆಯ್ದ ಅವಶ್ಯಕ ಹಾಗೂ ಪ್ರಮುಖ ಪದಗಳು ನುಡಿಗಟ್ಟುಗಳಿಗೆ ಅರ್ಥಗಳನ್ನು ಒದಗಿಸಲಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳು ಹಾಗೂ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನೊಳಗೊಂಡ ಪ್ರಮುಖ ಮತ್ತು ಅವಶ್ಯಕ ಪದಗಳನ್ನು ಈ ನಿಘಂಟಿನಲ್ಲಿ ಆಳವಡಿಸಿರುವುದರಿಂದ ಮಕ್ಕಳು ಬೇರೆ ಬೇರೆ ವಿಷಯಗಳಿಗೆ ಪ್ರತ್ಯೇಕ ನಿಘಂಟುಗಳನ್ನು ಬಳಸುವ ಪ್ರಯಾಸವನ್ನು ತಪ್ಪಿಸುತ್ತದೆ.
ಪ್ರತಿ ಪದದ ನಮೂದಿನಲ್ಲಿ ಕೆಳಕಂಡ ಅಂಶಗಳನ್ನು ಒದಗಿಸಿದೆ.
ಕನ್ನಡ ಭಾಷೆಯಲ್ಲಿನ ಪದಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಅದರ ಅನುವಾದ ಅಥವಾ ಸಮಾನಾರ್ಥಕ ಪದ ನೀಡಿದೆ.
ಮಕ್ಕಳು ಪದಗಳನ್ನು ಸರಿಯಾಗಿ ಉಚ್ಚರಿಸಲು ಅನುಕೂಲವಾಗುವಂತೆ ಇಂಗ್ಲಿಷ್ ಪದದ ಉಚ್ಚಾರಣೆಯನ್ನು ಕೂಡಾ ನೀಡಿದೆ.
ದೈನಂದಿನ ಸನ್ನಿವೇಶಗಳಲ್ಲಿ ಪದಗಳ ಅರ್ಥ ಮತ್ತು ಬಳಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಪದಗಳು ಅಥವಾ ನುಡಿಗಟ್ಟುಗಳ ಅರ್ಥಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಒದಗಿಸಲಾಗಿದೆ.
ಚಿತ್ರ ನೋಡಿ ಪದಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಚಿತ್ರಗಳನ್ನು ಅಳವಡಿಸಿದೆ.
ವಿದ್ಯಾರ್ಥಿಗಳು ಸಹಜವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಆನುಕುಲವಾಗುವಂತೆ ವಾಕ್ಯಗಳಲ್ಲಿ ಪದಗಳನ್ನು ಬಳಸುವ ಉದಾಹರಣೆಗಳನ್ನು ಎರಡೂ ಭಾಷೆಗಳಲ್ಲಿ ಒದಗಿಸಲಾಗಿದೆ.
ಕೆಲವು ಪದಗಳು ಅಥವಾ ಅಭಿವ್ಯಕ್ತಿಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು, ಆಯಾ ಭಾಷೆಗಳಲ್ಲಿನ ಬಳಕೆಯನ್ನೇ ಉಳಿಸಿಕೊಳ್ಳಲಾಗಿದೆ.
ಇದನ್ನು ಬಳಸುವುದು ಹೇಗೆ?
ಈ ನಿಘಂಟಿನಲ್ಲಿ ಸೇರಿಸಲಾದ ಪದಗಳು / ನುಡಿಗಟ್ಟುಗಳ ಉಚ್ಚಾರಣೆಗೆ ಗಮನಕೊಡಿ. ವಿದ್ಯಾರ್ಥಿಗಳಲ್ಲಿನ ಮಾತನಾಡುವ ಕೌಶಲವನ್ನು ಅಭಿವೃದ್ಧಿಪಡಿಸಲು ಪದಗಳನ್ನು ಜೋರಾಗಿ ಹೇಳುವುದನ್ನು ಅಭ್ಯಾಸ ಮಾಡಿಸಿ.
ಒಂದು ಭಾಷೆಯಲ್ಲಿ ತಮಗೆ ತಿಳಿದಿರುವ ಪದಗಳಿಂದ ಪ್ರಾರಂಭಿಸಲು ಮತ್ತು ಇನ್ನೊಂದು ಭಾಷೆಯಲ್ಲಿ ಅವುಗಳ ಅನುವಾದಗಳನ್ನು ತಿಳಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ. ಇದು ಭಾಷೆಗಳ ನಡುವೆ ಸಂಪರ್ಕವನ್ನು ನಿರ್ಮಿಸಲು ಮತ್ತು ಕ್ರಮೇಣ ಭಾಷಾ ಪದ ಸಂಪತ್ತನ್ನು ಉತ್ತಮಪಡಿಸಿಕೊಳ್ಳಲು ಅನುವು ಮಾಡುತ್ತದೆ.
ವಾಕ್ಯಗಳನ್ನು ರಚಿಸುವ ಮೂಲಕ ಪದಕೋಶ ಮತ್ತು ಭಾಷಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ವಿವಿಧ ಸಾಂಸ್ಕೃತಿಕ ಹಿನ್ನೆಲೆಗಳನ್ನು ಅರ್ಥೈಸಲು ಪದಕೋಶ, ಭಾಷಾಕೌಶಲ ಹಾಗೂ ಪದಗಳ ಬಳಕೆಯ ಬಗ್ಗೆ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಚರ್ಚಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ.
ವಿದ್ಯಾರ್ಥಿಗಳ ಕಲಿಕೆಯನ್ನು ಬಲಪಡಿಸಲು ಮತ್ತು ಅದನ್ನು ಹೆಚ್ಚು ಸಂತಸದಾಯಕ ಮಾಡಲು ಸಂಬಂಧಿಸಿದ ಚಿತ್ರಗಳನ್ನು ನೀಡಲಾಗಿದೆ.
ಇದು ಕೇವಲ ಪರಾಮರ್ಶನಕ್ಕಾಗಿರದೆ ಜ್ಞಾನ, ತಿಳುವಳಿಕೆ ಮತ್ತು ಪರಸ್ಪರ ಸಂವಹನದ ಬೆಳವಣಿಗೆಗೆ ಉತ್ತಮ ಸಾಧನವಾಗಿದೆ.
ಎರಡೂ ಭಾಷೆಗಳಲ್ಲಿ ಭಾಷಾ ಕಲಿಕೆಗೆ ಬಲವಾದ ಅಡಿಪಾಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ನಿಘಂಟನ್ನು ಉತ್ತಮವಾಗಿ ಬಳಸಿಕೊಳ್ಳಬಹುದಾಗಿದೆ