Book Demand Submission for 2026–27:SATS ಮೂಲಕ ಪಠ್ಯಪುಸ್ತಕ, ದಿನಚರಿ ಮತ್ತು ಮೌಲ್ಯಶಿಕ್ಷಣ ಪುಸ್ತಕಗಳ ಬೇಡಿಕೆ ಸಲ್ಲಿಕೆ
Book Demand Submission for 2026–27:ಈ ಮೇಲಿನ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ 2026-27ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ, ಮೌಲ್ಯಶಿಕ್ಷಣ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗಿನ ಸಂಬಂಧಿಸಿದ ಎಲ್ಲಾ ಅನುಪಾಲನ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಬೇಡಿಕೆ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಜವಾಬ್ದಾರಿಯನ್ನು ನಿಗದಿಪಡಿಸಿದೆ.
2026-27ನೇ ಶೈಕ್ಷಣಿಕ ಸಾಲಿಗೆ 1 ರಿಂದ 10ನೇ ತರಗತಿಗಳ ಪಠ್ಯಪುಸ್ತಕ, ದಿನಚರಿ ಹಾಗೂ ಸರ್ಕಾರಿ ಶಾಲೆಗಳಿಗೆ ಮೌಲ್ಯಶಿಕ್ಷಣ ಪುಸ್ತಕ, ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳ 4 ರಿಂದ 9ನೇ ತರಗತಿಗಳಿಗೆ ಅಭ್ಯಾಸ ಪುಸ್ತಕ ಬೇಡಿಕೆಯನ್ನು ದಾಖಲಿಸುವ ಪ್ರಕ್ರಿಯೆಯು ದಿನಾಂಕ: 07.02.2026
ರಿಂದ 16.02.2026 ರವರೆಗೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಶಾಲಾ, ಕ್ಲಸ್ಟರ್, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಹಂತದಿಂದ ಪರಿಶೀಲನೆ ಹಾಗೂ ಅನುಪಾಲನೆಯ ಚಟುವಟಿಕೆಗಳನ್ನು ನಿಗದಿತ ವೇಳಾಪಟ್ಟಿಯಂತೆ ಕ್ರಮವಹಿಸಬೇಕಿದೆ.
ಪಠ್ಯಪುಸ್ತಕ ಬೇಡಿಕೆ ಸಂಬಂಧ ಪೂರ್ವಸಿದ್ದತಾ ಕಾರ್ಯ ಚಟುವಟಿಕೆಗಳು:
1. SATS ತಂತ್ರಾಂಶಕ್ಕೆ ಒಳಪಟ್ಟಿರುವ ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಸರ್ಕಾರದಿಂದ ಅನುಮೋದಿಸಲ್ಪಟ್ಟಿರುವ ಅನುದಾನ ರಹಿತ ಶಾಲೆಗಳು ಮತ್ತು ಇತರೇ ಇಲಾಖೆಗಳಿಂದ ನಡೆಯುವ ಹಾಗೂ ಅಗತ್ಯಕ್ಕನುಗುಣವಾಗಿ ಹೊರ ರಾಜ್ಯಗಳ ಶಾಲೆಗಳನ್ನು ಒಳಗೊಂಡಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು ತಾಲ್ಲೂಕಿನಲ್ಲಿರುವ ಯಾವ ಶಾಲೆಯೂ SATS ನಿಂದ ಕೈಬಿಟ್ಟು ಹೋಗದಂತೆ ಖಾತ್ರಿ ಪಡೆಸಿಕೊಳ್ಳುವುದು.
2. ಶಾಲಾವಾರು ಬೇಡಿಕೆಯನ್ನು ಸಲ್ಲಿಸುವಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ಶೀರ್ಷಿಕೆಗಳಿಗೆ ಮಾತ್ರ (ಪ್ರಥಮ, ದ್ವಿತೀಯ, ತೃತೀಯ ಭಾಷೆ ಹಾಗೂ ಕೋರ್ ವಿಷಯಗಳ ಸಂಖ್ಯೆ ಸಮನಾಗಿರಬೇಕು) ಬೇಡಿಕೆಯನ್ನು ಸಲ್ಲಿಸುವ ಬಗ್ಗೆ, ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿ ಮತ್ತು ಬ್ಲಾಕ್ ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ತಾಲೂಕು ನೋಡಲ್ ಅಧಿಕಾರಿಗಳು ಪರಿಶೀಲಿಸಿ, ಉಲ್ಲೇಖಿತ ಆದೇಶಗಳನ್ವಯ ಬೇಡಿಕೆಯು ಆಯಾ ಶಾಲಾ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇರುವುದರ ಬಗ್ಗೆ ಪರಿಶೀಲಿಸಿಕೊಂಡು SATS ನಲ್ಲಿ ಇಂದೀಕರಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡು SATS ನಲ್ಲಿ ದಾಖಲಾಗಿರುವ ಸಂಖ್ಯೆಯನ್ನಷ್ಟೇ ಬೇಡಿಕೆಗೆ ಪರಿಗಣಿಸಿ ಅನುಮೋದಿಸುವುದು.
3. ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ (ಸರ್ಕಾರಿ, ಆದರ್ಶ ಶಾಲೆಗಳು, ಸ್ಥಳೀಯ ಸಂಸ್ಥೆ ಕಾರ್ಪೋರೇಷನ್) ಶಾಲೆಗಳು, ಅನುದಾನಿತ ಶಾಲೆಗಳು, ಉಚಿತ ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
4. ಗಡಿನಾಡು ಶಾಲೆಗಳಿಗೆ ಅವಶ್ಯವಿರುವ ಪಠ್ಯಪುಸ್ತಕಗಳ ಬಗ್ಗೆ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಇವರು ಖಾತ್ರಿ ಪಡಿಸಿಕೊಂಡು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಡನೆ ಕನ್ನಡ ಭಾಷಾ ಪಠ್ಯಪುಸ್ತಕಗಳಿಗೆ ಮಾತ್ರ 000233 ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
5. ಅನುದಾನ ರಹಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಯಡಿಯಲ್ಲಿ ನಡೆಯುವ ಶಾಲೆಗಳು ಹಾಗೂ ಹೊರ ರಾಜ್ಯಗಳ ಶಾಲೆಗಳಿಗೆ ಮಾರಾಟ ವಿಭಾಗದಲ್ಲಿ ಮಾತ್ರ ಬೇಡಿಕೆಯನ್ನು ಸಲ್ಲಿಸುವುದು. ಹೊರ ರಾಜ್ಯದ ಶಾಲೆಗಳ ಬೇಡಿಕೆಯನ್ನು (SPECIAL INDENT) ಸಲ್ಲಿಸಲು ಬೆಂಗಳೂರು ದಕ್ಷಿಣ ವಲಯ-3 (5-3) ಮಾತ್ರ ಅವಕಾಶ ನೀಡಲಾಗಿದೆ.
6. ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಬೇಡಿಕೆಗೆ ಅನುಗುಣವಾಗಿ ಬಾಲ ಚೇತನ ಚಟುವಟಿಕೆ ಪುಸ್ತಕ ಮತ್ತು ದಿನಚರಿಗಳನ್ನು ಮುದ್ರಿಸಿ ತಾಲ್ಲೂಕು ಹಂತಕ್ಕೆ ಪೂರೈಕೆ ಮಾಡಲಾಗುವುದು. ಸಂಬಂಧಿಸಿದ ಶಾಲೆಗಳಿಗೆ ವಿದ್ಯಾರ್ಥಿಗಳ ನೈಜ ಸಂಖ್ಯೆಗೆ ಅನುಗುಣವಾಗಿ ವಿತರಿಸಲು ಕ್ರಮವಹಿಸುವುದು.
7. ಸರ್ಕಾರಿ ಆದೇಶದಂತೆ ಒಟ್ಟು 27 ಜಿಲ್ಲೆಗಳಿಗೆ (ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಮಧುಗಿರಿ, ವಿಜಯನಗರ, ವಿಜಯಪುರ, ಯಾದಗಿರಿ) ಮರುಸಿಂಚನ ಕಾರ್ಯಕ್ರಮದಡಿ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ ತಾಲ್ಲೂಕು ಹಂತಕ್ಕೆ ಪೂರೈಕೆ ಮಾಡಲಾಗುವುದು. ಸಂಬಂಧಿಸಿದ ಶಾಲೆಗಳಿಗೆ ವಿದ್ಯಾರ್ಥಿಗಳ ನೈಜ ಸಂಖ್ಯೆಗೆ ಅನುಗುಣವಾಗಿ ವಿತರಿಸಲು ಕ್ರಮವಹಿಸುವುದು.
8. ತಾಲ್ಲೂಕು ಹಂತದಲ್ಲಿ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರುಗಳಿಗೆ ಮತ್ತು ಸಿ.ಆರ್.ಪಿ.ಗಳಿಗೆ ಎಸ್.ಎ.ಟಿ.ಎಸ್.ಕೆ.ಟಿ.ಬಿ.ಎಸ್. ಮಾಡ್ಯೂಲ್ ಕುರಿತಂತೆ ಪ್ರಸಕ್ತ ಸಾಲಿನಲ್ಲಿ ಎಸ್.ಎ.ಟಿ.ಎಸ್. ಕೆ.ಟಿ.ಬಿ.ಎಸ್ ಮಾಡ್ಯೂಲ್‌ನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುವುದು.
9. ರಾಜ್ಯದ ಎಲ್ಲಾ KPS, ಬಿ.ಪಿ.ಎಸ್. ಪಿ.ಎಂ.ಶ್ರೀ. ಇ.ಸಿ.ಸಿ.ಇ ತರಗತಿ ಹೊಂದಿರುವ ಶಾಲೆಗಳು, CEPMIZ ತಾಲ್ಲೂಕಿನ ಶಾಲೆಗಳು, ಎ.ಡಿ.ಬಿ ಶಾಲೆಗಳು ಹಾಗೂ ಕೆಳಕಂಡ 15 ಜಿಲ್ಲೆಗಳ (ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಗ್ರಾಮಾಂತರ, ರಾಮನಗರ, ಹಾವೇರಿ, ಕಲ್ಬುರ್ಗಿ, ಶಿವಮೊಗ್ಗ, ಹಾಸನ, ತುಮಕೂರು, ದಕ್ಷಿಣ ಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ ಹಾಗೂ ಕೊಪ್ಪಳ)
1 ರಿಂದ 5ನೇ ತರಗತಿಗಳಿಗೆ ದ್ವಿಭಾಷಾ ಪಠ್ಯಪುಸ್ತಕಗಳಿಗೆ (ಕನ್ನಡ-ಆಂಗ್ಲ ಮತ್ತು ಉರ್ದು-ಆಂಗ್ಲ) ಬೇಡಿಕೆ ಸಲ್ಲಿಸಬೇಕು. ಮೇಲ್ಕಂಡ ದ್ವಿಭಾಷಾ ಶಾಲೆಗಳನ್ನು ಹೊರತು ಪಡಿಸಿದ ತಮಿಳು, ತೆಲುಗು, ಮರಾಠಿ, ಹಿಂದಿ ಮಾಧ್ಯಮದ ಶಾಲೆಗಳು ಹಾಗೆಯೇ ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಕಲಿನಲಿ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವುದು.
10. ಗಣಿಬಾಧಿತ ತಾಲ್ಲೂಕುಗಳಲ್ಲಿನ (CEPMIZ) (ಮೊಳಕಾಲೂರು, ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ಬಳ್ಳಾರಿ, ಸೊಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳ) ಶಾಲೆಗಳಲ್ಲಿ 1 ರಿಂದ 5ನೇ ತರಗತಿಗಳಿಗೆ ದ್ವಿಭಾಷಾ ಪಠ್ಯಪುಸ್ತಕಗಳಿಗೆ (ಕನ್ನಡ-ಆಂಗ್ಲ ಮತ್ತು ಉರ್ದು-ಆಂಗ್ಲ ಬೇಡಿಕೆ ಸಲ್ಲಿಸಬೇಕು.
11. ರಾಜ್ಯದ ಉಳಿದ ಶಾಲೆಗಳಿಗೆ 1 ರಿಂದ 3ನೇ ತರಗತಿವರೆಗೆ ನಲಿಕಲಿ ಕನ್ನಡ ಹಾಗೂ 1 ಮತ್ತು 2ನೇ ತರಗತಿಗೆ ನಲಿಕಲಿ ಉರ್ದು ಶಾಲೆಗಳಲ್ಲಿ ನಲಿಕಲಿ ಪದ್ಧತಿಯ ಅನುಸಾರ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸುವುದು.
12. ಮಾರಾಟ ವಿಭಾಗದಡಿಯಲ್ಲಿ ಬೇಡಿಕೆ ಸಲ್ಲಿಸುವ ಸಂದರ್ಭದಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಕಡ್ಡಾಯವಾಗಿ ಶೇಕಡಾ 25 ರಷ್ಟು ಮುಂಗಡ ಪಾವತಿಗೆ ಕ್ರಮವಹಿಸುವುದು. ಮುಂಗಡ ಪಾವತಿಸದೆ ಇರುವ ಶಾಲೆಗಳಿಗೆ ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲು ಅವಕಾಶ ಇರುವುದಿಲ್ಲ.
13. ಅನುದಾನರಹಿತ ಹಾಗೂ ಇತರೆ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಗಳಲ್ಲಿನ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ರಾಜ್ಯ ಪಠ್ಯಕ್ರಮದ ಆಂಗ್ಲ ಭಾಷೆ ಮತ್ತು ಗಣಿತ ಪಠ್ಯಪುಸ್ತಕಗಳ ಬದಲಾಗಿ ಎನ್.ಸಿ.ಇ.ಆರ್.ಟಿ ಯ ಆಂಗ್ಲ ಭಾಷೆ ಮತ್ತು ಗಣಿತ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸುವುದು.
14. ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳು ನಿಗದಿಪಡಿಸಿದ ಸಮಯದೊಳಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ನಿರಂತರವಾಗಿ ಪರಿಶೀಲಿಸಿ, ಅನುಪಾಲನೆ ಮಾಡಲು ಅಗತ್ಯ ಕ್ರಮವಹಿಸುವುದು.
2026-27ನೇ ಶೈಕ್ಷಣಿಕ ಸಾಲಿನಲ್ಲಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ಆಯಾ ಹಂತಗಳ ಜವಾಬ್ದಾರಿಗಳು:
1. ಶಾಲಾ ಹಂತ (ದಿನಾಂಕ:07.02.2026 ರಿಂದ 16.02.2026 ರವರೆಗೆ)
1) ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವ ಮೊದಲು ಶಾಲೆಯ ವಿಧ, ಶಾಲೆಯಲ್ಲಿರುವ ಮಾಧ್ಯಮಗಳು ಹಾಗೂ ಬೋಧಿಸುತ್ತಿರುವ ಭಾಷೆಗಳು (ಪಥಮ/ದ್ವಿತೀಯ/ತೃತೀಯ ಭಾಷೆ) ಹಾಗೂ ಶಾಲೆಗೆ ಅಗತ್ಯವಿರುವ ಶೀರ್ಷಿಕೆಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
2) ತರಗತಿವಾರು, ಮಾಧ್ಯಮವಾರು, ಶೀರ್ಷಿಕವಾರು ಅವಶ್ಯವಿರುವ ಪಠ್ಯಪುಸ್ತಕಗಳ ಬೇಡಿಕೆಯನ್ನು 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಮಾತ್ರ SATS ತಂತ್ರಾಂಶದಲ್ಲಿ ನಿಖರವಾಗಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ದಾಖಲಿಸುವುದು.
3) 2026-27ನೇ ಸಾಲಿಗೆ ಸಂಕಲನಾತ್ಮಕ-1 ಮತ್ತು ಸಂಕಲನಾತ್ಮಕ-2 ಮಾದರಿಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿರುವುದರಿಂದ ಭಾಗ-1 ಮತ್ತು ಭಾಗ-2 ಎರಡೂ ಪಠ್ಯಪುಸ್ತಕಗಳಿಗೂ ಸಮಪ್ರಮಾಣದಲ್ಲಿ ಬೇಡಿಕೆಯನ್ನು ದಾಖಲಿಸುವುದು ಕಡ್ಡಾಯವಾಗಿರುತ್ತದೆ.
4) ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯವರು ಉಚಿತ ವಿಭಾಗದಲ್ಲಿ ಮಾತ್ರ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವುದು.
5) ಶಾಲಾ ಹಂತದಲ್ಲಿ ತಮ್ಮ SATS LOGIN ಮೂಲಕ ದಿನಾಂಕ: 07.02.2026 ರಿಂದ 16.02.2026 ರವರೆಗೆ ಬೇಡಿಕೆ ಸಲ್ಲಿಸಲು ಅವಕಾಶ ನೀಡಿದ್ದು, ನಿಗದಿತ ದಿನಾಂಕದೊಳಗೆ ಮುಖ್ಯಶಿಕ್ಷಕರು ಬೇಡಿಕೆ ಸಲ್ಲಿಸುವುದು.
6) ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ದಿನಚರಿ, ಮೌಲ್ಯ ಶಿಕ್ಷಣ ಪುಸ್ತಕ ಹಾಗೂ 4 ರಿಂದ 9ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಭ್ಯಾಸ ಪುಸ್ತಕಗಳಿಗೆ ಮಾತ್ರ ಬೇಡಿಕೆ ಸಲ್ಲಿಸುವುದು.
7) ಯಾವುದೇ ಅನುದಾನಿತ ಶಾಲೆಗಳಲ್ಲಿ ಅನುದಾನ ರಹಿತ ವಿಭಾಗಗಳಿದ್ದಲ್ಲಿ ಆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಗತ್ಯವಿರುವ ಶೀರ್ಷಿಕೆಗಳ ಬೇಡಿಕೆಯನ್ನು ಕಡ್ಡಾಯವಾಗಿ ಮಾರಾಟ ವಿಭಾಗದಲ್ಲಿ ದಾಖಲಿಸುವುದು. ಬೇಡಿಕೆಯನ್ನು Freeze ಮಾಡುವ ಮುನ್ನ ಅನುದಾನಿತ ಮತ್ತು ಅನುದಾನ ರಹಿತ ವಿಭಾಗಗಳಡಿ ಶೀರ್ಷಿಕವಾರು ಬೇಡಿಕೆಯನ್ನು ನಿಖರವಾಗಿ ದಾಖಲಿಸಿರುವುದನ್ನು ಖಾತರಿ ಪಡಿಸಿಕೊಳ್ಳುವುದು.
8) ಖಾಸಗಿ ಅನುದಾನರಹಿತ ಶಾಲೆಗಳವರು ಮಾರಾಟ ವಿಭಾಗದಡಿಯಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವುದು ಹಾಗೂ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್.ಟಿ.ಇ. ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ವಿಭಾಗದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವುದು.
9) ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿಯಲ್ಲಿರುವ ಶಾಲೆಗಳು ಮಾರಾಟ ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
10) SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು Submit ಮಾಡುವ ಮೊದಲು ತಮ್ಮ ಶಾಲೆಗೆ ಅವಶ್ಯವಿರುವ ಎಲ್ಲಾ ತರಗತಿ, ಮಾಧ್ಯಮದ ಶೀರ್ಷಿಕೆಗಳ ಬೇಡಿಕೆಯನ್ನು ಅಗತ್ಯ ಸಂಖ್ಯೆಯಲ್ಲಿ ದಾಖಲಿಸಿರುವ ಬಗ್ಗೆ, ಮತ್ತೊಮ್ಮೆ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳುವುದು. ಬೇಡಿಕೆಯ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದು, ದೃಢೀಕರಿಸಿ ಒಂದು ಪ್ರತಿಯನ್ನು ಶಾಲೆ, ಸಂಸ್ಥೆಯಲ್ಲಿ ಕಾಯ್ದಿರಿಸುವುದು. ಮತ್ತೊಂದು ಪ್ರತಿಯನ್ನು ತಮ್ಮ ವ್ಯಾಪ್ತಿಯ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ.) ರವರಿಗೆ ನೀಡುವುದು.
11) ಶಾಲೆಗೆ ಅಗತ್ಯವಿಲ್ಲದ ಶೀರ್ಷಿಕೆಗಳಿಗೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚುವರಿ ಬೇಡಿಕೆ ಸಲ್ಲಿಸಿದ್ದಲ್ಲಿ ಅಯಾ ಶಾಲೆಯ ಮುಖ್ಯ ಶಿಕ್ಷಕರೇ ನೇರ ಹೊಣೆಗಾರರಾಗುತ್ತಾರೆ. ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಸರ್ಕಾರಿ ಆದೇಶದಂತೆ ಆಯಾ ಮುಖ್ಯ ಶಿಕ್ಷಕರೇ ದಂಡದ ರೂಪದಲ್ಲಿ ಭರಿಸಬೇಕಾಗುವುದು, ಆಗತ್ಯವಿರುವ ಶೀರ್ಷಿಕೆಗಳಿಗೆ ಬೇಡಿಕೆಯನ್ನು ಸಲ್ಲಿಸದಿದ್ದಲ್ಲಿ, ಮುಂದಿನ ಆಗುಹೋಗುಗಳಿಗೆ ಆಯಾ ಶಾಲಾ ಮುಖ್ಯಸ್ಥರೇ ನೇರ ಹೊಣೆಗಾರರಾಗುತ್ತಾರೆ.
12) ಅನುದಾನ ರಹಿತ ಖಾಸಗಿ ಶಾಲೆಗಳವರು ಮಾರಾಟ ಪಠ್ಯಪುಸ್ತಕಗಳಿಗೆ ಸಂಬಂಧಿಸದಂತೆ ತಾಲ್ಲೂಕು ಹಂತದಲ್ಲಿ ಬೇಡಿಕೆಯನ್ನು ಅನುಮೋದಿಸಿದ ನಂತರ ಶೇ.25 ರಷ್ಟು ಮುಂಗಡ ಹಣವನ್ನು SATS Payment gateway ಮೂಲಕ ಪಾವತಿಸುವುದು. ಇಲ್ಲವಾದಲ್ಲಿ ಅಂತಹ ಶಾಲೆಗಳ ಬೇಡಿಕೆಯನ್ನು ಮುದ್ರಣಕ್ಕೆ ಪರಿಗಣಿಸುವುದಿಲ್ಲ.
13) ಮುಖ್ಯಶಿಕ್ಷಕರು ಬೇಡಿಕೆಯನ್ನು Freeze ಮಾಡುವ ಮೊದಲು ಶಾಲೆಯ ಸಹ ಶಿಕ್ಷಕರಿಂದ ಮತ್ತೊಮ್ಮೆ ಪರಿಶೀಲಿಸಿ ಸರಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
2. ಕ್ಲಸ್ಟರ್ ಹಂತ (ದಿನಾಂಕ: 12.02.2026 ರಿಂದ 18.02.2026 ರವರೆಗೆ)
ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಅನುದಾನರಹಿತ, ಇತರೆ ಇಲಾಖೆಗಳ ಶಾಲೆಗಳಿಂದ ಪಠ್ಯಪುಸ್ತಕ, ಅಭ್ಯಾಸಪುಸ್ತಕ ಹಾಗೂ ದಿನಚರಿಗಳ ಬೇಡಿಕೆಯನ್ನು ಸಲ್ಲಿಸಿ, ದೃಢೀಕರಣ ಮಾಡುವ ಜವಾಬ್ದಾರಿಯು ಆಯಾ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ.) ರವರದ್ದಾಗಿರುತ್ತದೆ.
1) ಶಾಲೆಗಳಿಂದ ಬೇಡಿಕೆಯನ್ನು ಸಲ್ಲಿಸುವ ಮುಂಚೆ ಈಗಾಗಲೇ ಸೂಚಿಸಿರುವಂತೆ ಶಾಲೆಗಳಲ್ಲಿ ಉಳಿಕೆ ಇರುವ ಪಠ್ಯಪುಸ್ತಕಗಳನ್ನು ತಾಲ್ಲೂಕು ಹಂತದ ದಾಸ್ತಾನು ಮಳಿಗೆಗಳಿಗೆ ಹಿಂತಿರುಗಿಸಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು.
2) 2026-27ನೇ ಸಾಲಿಗೆ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳು ತಮಗೆ ಅಗತ್ಯವಿರುವ ಮಾಧ್ಯಮ, ಭಾಷೆ, ಶೀರ್ಷಿಕೆಗಳನ್ನು 2025-26 ನೇ ಸಾಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿವಾರು ಬೇಡಿಕೆ ಸಲ್ಲಿಸಿರುವ ಬಗ್ಗೆ ವರಿಶೀಲಿಸಿಕೊಂಡು ಬೇಡಿಕೆಯನ್ನು ಅನುಮೋದಿಸಲು ಕ್ರಮವಹಿಸುವುದು.
3) ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ವಿಧದ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ನಿಗದಿತ ದಿನಾಂಕದೊಳಗೆ ತರಗತಿವಾರು, ಶೀರ್ಷಿಕವಾರು, ಮಾಧ್ಯಮವಾರು ದಾಖಲಿಸುವ ಬಗ್ಗೆ ಸೂಕ್ತ ಮಾರ್ಗದ್ರಶನ ನೀಡಿ, ಸಕಾಲದಲ್ಲಿ ಬೇಡಿಕೆ ಸಲ್ಲಿಸಲು ಅಗತ್ಯ ಬೆಂಬಲ ನೀಡುವುದು.
4) ಶಾಲೆಗಳು ದಾಖಲಿಸಿರುವ ಬೇಡಿಕೆಯು ಸಮಪರ್ಕವಾಗಿಲ್ಲದಿದ್ದರೆ, ಅಂತಹ ಶಾಲೆಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ “reject” ಮಾಡಿ ಶಾಲೆಗಳಿಗೆ ಹಿಂತಿರುಗಿಸಿ ಸರಿಪಡಿಸಿದ ನಂತರ ಅಂತಹ ಶಾಲೆಗಳಿಂದ ಕಡ್ಡಾಯವಾಗಿ SATS ತಂತ್ರಾಂಶದ ಮೂಲಕವೇ ಪುನರ್ ಬೇಡಿಕೆಯನ್ನು ಸಲ್ಲಿಸಲು ಕ್ರಮವಹಿಸುವುದು. ನಂತರ ಮತ್ತೊಮ್ಮೆ ಪರಿಶೀಲಿಸಿ ಬೇಡಿಕೆ ಸಲ್ಲಿಸಿರುವುದು ಸರಿ ಇರುವುದನ್ನು ಖಾತರಿ ಪಡಿಸಿಕೊಂಡು ತಂತ್ರಾಂಶದಲ್ಲಿ ನಿಗದಿತ ದಿನಾಂಕದೊಳಗೆ ಅನುಮೋದಿಸುವುದು (Approve)
5) ಶಾಲೆಗಳು ಬೇಡಿಕೆ ಸಲ್ಲಿಸಿದ ನಂತರ ಆ ಶಾಲೆಗಳಲ್ಲಿನ ತರಗತಿ, ವಿದ್ಯಾರ್ಥಿಗಳ ಸಂಖ್ಯೆ ಮಾಧ್ಯಮ, ಭಾಷೆಗಳಿಗೆ ಪೂರಕವಾಗಿಯೇ ಬೇಡಿಕೆ ಸಲ್ಲಿಸಿರುವುದನ್ನು ದಾಖಲೆ ಸಹಿತ ಪರಿಶೀಲಿಸಬೇಕು.
6) ಎಲ್ಲಾ ಶಾಲೆಗಳ ಮುಖ್ಯಸ್ಥರು SATS ತಂತ್ರಾಂಶದಲ್ಲಿ ನಿಖರವಾಗಿ ಬೇಡಿಕೆ ಸಲ್ಲಿಸಿದ ನಂತರ ನೀಡಿದ ದೃಢೀಕೃತ ಪ್ರತಿಯನ್ನು SATS ತಂತ್ರಾಂಶದಲ್ಲಿ ಲಭ್ಯವಿರುವ ಕ್ರೂಢೀಕೃತ ಮಾಹಿತಿಯೊಂದಿಗೆ ತುಲನೆ ಮಾಡಿ ಶಾಲಾವಾರು ದಾಖಲಿಸಿರುವ ಬೇಡಿಕೆಯು, ನಿಖರವಾಗಿದ್ದಲ್ಲಿ ಮಾತ್ರ ದೃಢೀಕರಿಸಿ, SATS ತಂತ್ರಾಂಶದಲ್ಲಿ Approve ಮಾಡಿ (ಅನುಮೋದಿಸಿ) ಬ್ಲಾಕ್ ಹಂತಕ್ಕೆ ಕಳುಹಿಸುವುದು.
7) CRP ರವರು ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು SATS ದಾಖಲಾತಿಗನುಗುಣವಾಗಿಯೇ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಿರುವುದರ ಬಗ್ಗೆ ಕಡ್ಡಾಯವಾಗಿ ಶೇ.100ರಷ್ಟು ಖಾತ್ರಿ ಪಡಿಸಿಕೊಂಡು, ದೃಢೀಕೃತ ಪ್ರತಿ ನೀಡುವುದು.
8) ಯಾವುದೇ ಶಾಲೆಗಳು ಅಗತ್ಯವಿರದ ತರಗತಿ ಮಾಧ್ಯಮದ, ಶೀರ್ಷಿಕೆಗಳಿಗೆ ಹಾಗೂ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಸಲ್ಲಿಸಿದ ಬೇಡಿಕೆಯನ್ನು ಅನುಮೋದನೆ ಮಾಡಿದರೆ ಸಂಬಂಧಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ)ರವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಆಯಾ ಸಿ.ಆರ್.ಪಿ.ರವರೇ ಭರಿಸಬೇಕಾಗುವುದು.
9) ಶೂನ್ಯ ದಾಖಲಾತಿ ಹಾಗೂ closed schools ಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವಂತಿಲ್ಲ. ಈ ಬಗ್ಗೆ, ಕ್ಲಸ್ಟರ್ ಹಂತದಲ್ಲಿ ಪರಿಶೀಲಿಸಿಕೊಂಡು ಖಾತರಿಪಡಿಸಿಕೊಂಡ ನಂತರ ಮಾತ್ರವೇ ಬೇಡಿಕೆಯನ್ನು ಅನುಮೋದಿಸುವುದು.
10) ಖಾಸಗಿ ಅನುದಾನ ರಹಿತ ಶಾಲೆಗಳು ಹಾಗೂ ವಿವಿಧ ಇಲಾಖೆಗಳಡಿಯಲ್ಲಿ ನಡೆಯುತ್ತಿರುವ ಶಾಲೆಗಳು ಬೇಡಿಕೆ ಸಲ್ಲಿಸುವಾಗ ಬೇಡಿಕೆಗೆ ಅನುಗುಣವಾಗಿ ಶೇ.25 ರಷ್ಟು ಮುಂಗಡ ಹಣವನ್ನು SATS Payment gateway ಮೂಲಕ ಪಾವತಿಸಿರುವ ಬಗ್ಗೆ, ಪರಿಶೀಲಿಸಿ ಕ್ರಮವಹಿಸುವುದು.
11) CRPರವರು ತಮ್ಮ ವ್ಯಾಪ್ತಿಯ ಪ್ರತಿ ಶಾಲೆಗಳವರು SATS ನಲ್ಲಿ ಸಲ್ಲಿಸಿರುವ ಬೇಡಿಕೆ ಪಟ್ಟಿ ಹಾಗೂ ಕ್ರೂಢೀಕೃತ ಪಟ್ಟಿಯನ್ನು ಸಂಗ್ರಹಿಸಿಡುವುದು.
III ತಾಲೂಕು ಹಂತ: (ದಿನಾಂಕ: 14.02.2026 ರಿಂದ 20.02.2026ರವರೆಗೆ)
1) ಶಾಲೆಗಳಲ್ಲಿ ಉಳಿಕೆಯಾಗಿರುವ 2025-26ನೇ ಸಾಲಿನ ಉಚಿತ ಪಠ್ಯಪುಸ್ತಕಗಳನ್ನು ತಾಲ್ಲೂಕು ದಾಸ್ತಾನು ಮಳಿಗೆಗಳಿಗೆ ಹಿಂಪಡೆದಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
2) ತರಗತಿವಾರು, ಮಾಧ್ಯಮವಾರು ಶೀರ್ಷಿಕವಾರು ಉಳಿಕೆ ಪಠ್ಯಪುಸ್ತಕಗಳ ಮಾಹಿತಿಯನ್ನು ನಿಖರವಾಗಿ ಅಯಾ ವಹಿಗಳಲ್ಲಿ ದಾಖಲಿಸಿ ಕ್ರೋಢೀಕರಿಸುವುದು ಹಾಗೂ ವ್ಯವಸ್ಥಿತವಾಗಿ ತರಗತಿವಾರು, ಮಾಧ್ಯಮವಾರು ಶೀರ್ಷಿಕವಾರು ಪಠ್ಯಪುಸ್ತಕಗಳನ್ನು ಗೋದಾಮುಗಳಲ್ಲಿ ಸುರಕ್ಷಿತವಾಗಿ ಜೋಡಿಸಿಡುವುದು.
3) ರಾಜ್ಯ ಹಂತಕ್ಕೆ ನೀಡಿರುವ ಉಳಿಕೆಯಾಗಿರುವ ಉಚಿತ ಮತ್ತು ಮಾರಾಟ ವಿಭಾಗದ ಪಠ್ಯಪುಸ್ತಕಗಳ ಮಾಹಿತಿಗೂ, ವಾಸ್ತವವಾಗಿ ದಾಸ್ತಾನುಮಳಿಗೆಗಳಲ್ಲಿರುವ ಪಠ್ಯಪುಸ್ತಕಗಳಿಗೂ ತಾಳೆಯಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು.
4) ಪಠ್ಯಪುಸ್ತಕ ದಾಸ್ತಾನು ಮಳಿಗೆಯು ಸುರಕ್ಷಿತ ಕಟ್ಟಡವಾಗಿರುವ ಬಗ್ಗೆ ದೃಢೀಕರಿಸಿಕೊಂಡು ನಂತರದಲ್ಲಿ ತಾಲ್ಲೂಕುಗಳ ಪಠ್ಯಪುಸ್ತಕ ಗೋದಾಮು ವಿಳಾಸವನ್ನು SATS ತಂತ್ರಾಂಶದಲ್ಲಿ ಅಳವಡಿಸುವುದು. ಪಠ್ಯಪುಸ್ತಕಗಳು ಹಾಳಾಗದಂತೆ ಎಚ್ಚರವಹಿಸುವುದು.
5) ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು ತಾಲ್ಲೂಕಿನ ಎಲ್ಲಾ ಕ್ಲಸ್ಟರ್ ಗಳ ಶಾಲೆಗಳ ಬೇಡಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿ, ಉಸ್ತುವಾರಿ ಮಾಡಲು SATS ತಂತ್ರಾಂಶದಲ್ಲಿ ಅವಕಾಶವನ್ನು ಕಲ್ಪಿಸಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
6) ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ರವರು SATS ತಂತ್ರಾಂಶದಲ್ಲಿ ಬೇಡಿಕೆ ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ಪರಿಶೀಲಿಸಬೇಕು. ಶಾಲೆಗಳ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಿಂದ ವ್ಯತ್ಯಯಗಳಾಗಿದ್ದಲ್ಲಿ ಸಂಬಂಧಿಸಿದ ಶಾಲೆಗಳಿಂದ ಸರಿಪಡಿಸಬೇಕು.
7) ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು SATS ನಲ್ಲಿ ದಾಖಲಿಸುತ್ತಿರುವ ಪ್ರಕ್ರಿಯೆಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಉಸ್ತುವಾರಿ ಮಾಡಿ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯ SATS ನಲ್ಲಿ ದಾಖಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಯನ್ನು ದಾಖಲಿಸುತ್ತಿರುವ ಬಗ್ಗೆ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ)ಗಳು ಅನುಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿ ಪ್ರತಿ ದಿನ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು.
8) ತಾಲ್ಲೂಕು ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳು ತರಗತಿ, ಮಾಧ್ಯಮವಾರು ಅವಶ್ಯವಿರುವ ಶೀರ್ಷಿಕೆಗಳ ಬೇಡಿಕೆಯನ್ನು ವಿದ್ಯಾರ್ಥಿಗಳ ನೈಜ ಸಂಖ್ಯೆಗೆ ಅನುಗುಣವಾಗಿ SATS ತಂತ್ರಾಂಶದಲ್ಲಿ ದಾಖಲಿಸಿರುವ ಬಗ್ಗೆ, ಪರಿಶೀಲಿಸಿ ಸರಿ ಇರುವ ಬಗ್ಗೆ, ಖಾತರಿ ಪಡಿಸಿಕೊಳ್ಳುವುದು.
9) ಕ್ಲಸ್ಟರ್ ಹಂತದಲ್ಲಿ ಅನುಮೋದನೆಯಾಗಿರುವ ಶಾಲೆಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ಪರಿಶೀಲಿಸಿ,ಶಾಲೆಗಳು ದಾಖಲಿಸಿರುವ ಬೇಡಿಕೆಗಳು ಸಮರ್ಪಕವಾಗಿಲ್ಲದಿದ್ದರೆ ಅಂತಹ ಕ್ಲಸ್ಟರ್ ಶಾಲೆಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ‘Reject’ ಮಾಡಿ ಹಿಂತಿರುಗಿಸುವುದು, ಸರಿಪಡಿಸಿದ ಪುನರ್ ಬೇಡಿಕೆಯನ್ನು ಕ್ಲಸ್ಟರ್ ಗಳಿಂದ ಕಡ್ಡಾಯವಾಗಿ SATS ತಂತ್ರಾಂಶದ ಮೂಲಕವೇ ಪಡೆಯುವುದು. ನಂತರ ಮತ್ತೊಮ್ಮೆ ಪರಿಶೀಲಿಸಿ, ಸರಿ ಇರುವುದನ್ನು ಖಾತರಿ ಪಡಿಸಿಕೊಂಡು, ತಂತ್ರಾಂಶದಲ್ಲಿ ಅನುಮೋದಿಸುವುದು.
10) ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಬಾಲ ಚೇತನ ಚಟುವಟಿಕೆ ಪುಸ್ತಕ ಮತ್ತು ದಿನಚರಿಗಳನ್ನು ಹಾಗೂ 27 ಜಿಲ್ಲೆಗಳಿಗೆ (ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಮಧುಗಿರಿ, ವಿಜಯನಗರ, ವಿಜಯಪುರ, ಯಾದಗಿರಿ) ಮರುಸಿಂಚನ ಕಾರ್ಯಕ್ರಮದಡಿ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ ತಾಲ್ಲೂಕು ಹಂತಕ್ಕೆ ಪೂರೈಕೆ ಮಾಡಲಾಗುವುದು. ಸಂಬಂಧಿಸಿದ ಶಾಲೆಗಳ ವಿದ್ಯಾರ್ಥಿಗಳ ನೈಜ ಸಂಖ್ಯೆಗೆ ಅನುಗುಣವಾಗಿ ವಿತರಿಸಲು ತಾಲ್ಲೂಕು ನೋಡೆಲ್ ಅಧಿಕಾರಿಗಳು ಕ್ರಮವಹಿಸುವುದು.
11) ಅನುದಾನ ರಹಿತ ಶಾಲೆಗಳು ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ ನಂತರ ಶೇ.25% ಮುಂಗಡ ಮೊತ್ತವನ್ನು SATS Payment Gateway ಮೂಲಕ ಪಾವತಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದು.
12) ಮುಂದಿನ ದಿನಗಳಲ್ಲಿ ಉಂಟಾಗುವ ಯಾವುದೇ ಪಠ್ಯಪುಸ್ತಕಗಳ ವ್ಯತ್ಯಯಗಳಿಗೆ (ಕೊರತೆ/ಹೆಚ್ಚುವರಿ) ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಮತ್ತು ಪಠ್ಯಪುಸ್ತಕ ನೋಡಲ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
13) ಶಾಲೆಗಳು ಸಲ್ಲಿಸಿರುವ ಬೇಡಿಕೆಯು ಸಮರ್ಪಕವಾಗಿರುವುದನ್ನು ದೃಢೀಕರಿಸಿಕೊಳ್ಳಲು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶೇ.10 ರಷ್ಟು ಶಾಲೆಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಶೇ.20 ರಷ್ಟು ಶಾಲೆಗಳ ಬೇಡಿಕೆಯನ್ನು ದಾಖಲೆ ಸಹಿತ ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು ಹಾಗೂ ಇದಕ್ಕೆ ದಾಖಲೆ ಸಂಗ್ರಹಿಸಿಡಬೇಕು.
14) ತಾಲ್ಲೂಕಿನಲ್ಲಿರುವ ಶೂನ್ಯ ದಾಖಲಾತಿ ಹಾಗೂ closed ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವಂತಿಲ್ಲ. ಈ ಬಗ್ಗೆ ಪರಿಶೀಲಿಸಿಕೊಂಡು ಖಾತರಿಪಡಿಸಿಕೊಂಡ ನಂತರ ಮಾತ್ರವೇ ಬೇಡಿಕೆಯನ್ನು ಅನುಮೋದಿಸುವುದು.
15) ಸಮೂಹ ಸಂಪನ್ಮೂಲ ವ್ಯಕ್ತಿಗಳ ದೃಢೀಕರಣಗಳನ್ನು ಸಂಗ್ರಹಿಸಿ ನಿಗದಿತ ನಮೂನೆಯಲ್ಲಿ ತಾಲ್ಲೂಕು ದೃಢೀಕರಣವನ್ನು ಜಿಲ್ಲಾ ಹಂತಕ್ಕೆ ಸಲ್ಲಿಸುವುದು.
16) ತಾಲ್ಲೂಕು ಹಂತದ ಬೇಡಿಕೆಯ ಕ್ರೋಢೀಕೃತ ನಮೂನೆಯನ್ನು ದೃಢೀಕರಣದೊಂದಿಗೆ ನೋಡಲ್ ಅಧಿಕಾರಿಗಳು ಸಂಗ್ರಹಿಸಿಡುವುದು.
4. ಜಿಲ್ಲಾ ಹಂತ (ದಿನಾಂಕ:21.02.2026 ರಿಂದ 24.02.2026 ರ ವರೆಗೆ)
1) ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಪ್ರಾರಂಭಿಸಿದ ದಿನದಿಂದ ಶಾಲಾವಾರು, ಕ್ಲಸ್ಟರ್‌ವಾರು, ತಾಲ್ಲೂಕುವಾರು ಬೇಡಿಕೆಯನ್ನು ನಿಗದಿತ ಅವಧಿಯೊಳಗೆ ದಾಖಲಿಸುತ್ತಿರುವ ಬಗ್ಗೆ ಪ್ರತಿ ದಿನವು ಉಸ್ತುವಾರಿ ಮಾಡುವುದು ಹಾಗು ಪ್ರಗತಿಯನ್ನು ವೇಳಾಪಟ್ಟಿಯನುಸಾರ ಅನುಪಾಲಿಸುವುದು,
2) ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳು ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳು ಸಭೆ ನಡೆಸಿ ಸರಿಯಾಗಿ ಬೇಡಿಕೆ ಪ್ರಕ್ರಿಯೆ ನಡೆಸಲು ಮಾರ್ಗದರ್ಶನ ನೀಡಬೇಕು.
3) ರಾಜ್ಯ ಕಚೇರಿಯಿಂದ ನೀಡಿರುವ ವೇಳಾಪಟ್ಟಿಯನ್ವಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಂಡು ನಿಗದಿತ ದಿನಾಂಕದೊಳಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲ್ಲೂಕು, ಕ್ಲಸ್ಟರ್ ಶಾಲೆಗಳು ವಠ್ಯಪುಸ್ತಕಗಳ ಬೇಡಿಕೆಯನ್ನು SATS ನಲ್ಲಿ ದಾಖಲಿಸುವಂತೆ ಸೂಕ್ತ ಕ್ರಮವಹಿಸುವುದು.
4) ಜಿಲ್ಲಾ ವ್ಯಾಪ್ತಿಯ ಎಲ್ಲಾ ವಿಧದ ಶಾಲೆಗಳು 2026-27ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಿರುವ ಬಗ್ಗೆ, ತಾಲ್ಲೂಕು ನೋಡಲ್ ಅಧಿಕಾರಿಗಳ ದೃಢೀಕರಣವನ್ನು ಸಂಗ್ರಹಿಸಿಕೊಂಡು ಜಿಲ್ಲಾ ಹಂತದ ದೃಢೀಕರಣವನ್ನು ನಿಗದಿತ ನಮೂನೆಯಲ್ಲಿ ರಾಜ್ಯ ಹಂತಕ್ಕೆ ಸಲ್ಲಿಸುವುದು.
5) ಜಿಲ್ಲಾ ಹಂತದ ದೃಢೀಕೃತ ಪ್ರತಿಯೊಂದನ್ನು ಹಾಗೂ ತಾಲ್ಲೂಕುವಾರು ಬೇಡಿಕೆಯ ಕ್ರೂಢೀಕೃತ ಪ್ರತಿಯನ್ನು ಜಿಲ್ಲಾ ನೋಡಲ್ ಅಧಿಕಾರಿಗಳು ಸಂಗ್ರಹಿಸಿಡುವುದು.
6) ಆಯಾ ಜಿಲ್ಲಾ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯವಿರದ ತರಗತಿ, ಮಾಧ್ಯಮ, ಶೀರ್ಷಿಕೆಗಳಿಗೆ ಬೇಡಿಕೆಯನ್ನು ಸಲ್ಲಿಸಿದ್ದಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳು ಸಂಪೂರ್ಣ ಜವಾಬ್ದಾರರಾಗುತ್ತಾರೆ ಹಾಗೂ ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಉಪನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳೇ ಭರಿಸಬೇಕಾಗುತ್ತದೆ.
7) ಮಾರಾಟ ವಿಭಾಗದಲ್ಲಿ ಬೇಡಿಕೆಯನ್ನು ಸಲ್ಲಿಸಿದ ನಂತರ ಖಾಸಗಿ ಶಾಲೆಗಳು ಶೇ 25 ರಷ್ಟು ಮುಂಗಡವನ್ನು ಪಾವತಿಸುವ ಬಗ್ಗೆ, ಖಾತ್ರಿ ಪಡಿಸಿಕೊಳ್ಳುವುದು.
8) ಜಿಲ್ಲೆಯಲ್ಲಿರುವ ಶೂನ್ಯ ದಾಖಲಾತಿ ಹಾಗೂ closed ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವಂತಿಲ್ಲ. ಈ ಬಗ್ಗೆ ಪರಿಶೀಲಿಸಿಕೊಂಡು ಖಾತರಿಪಡಿಸಿಕೊಂಡು ಬೇಡಿಕೆ ಸಲ್ಲಿಸುವಂತೆ ಕ್ರಮವಹಿಸುವುದು.
9) ತಾಲ್ಲೂಕು ಪಠ್ಯಪುಸ್ತಕ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರ ಸುರಕ್ಷಿತ ಕಟ್ಟಡವಾಗಿರುವ ಬಗ್ಗೆ, ದೃಢೀಕರಣವನ್ನು ಈ ಕಛೇರಿಗೆ ತಪ್ಪದೇ ಸಲ್ಲಿಸುವುದು ಹಾಗೂ ಪಠ್ಯಪುಸ್ತಕಗಳು ಹಾಳಾಗದಂತೆ ಎಚ್ಚರವಹಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
10) ರಾಜ್ಯದ ಎಲ್ಲಾ ವಿಧದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸುವ ಕಾರ್ಯಕ್ರಮವು ಇಲಾಖೆಯ ಮಹತ್ತರ ಯೋಜನೆ ಆಗಿರುವುದರಿಂದ ಎಲ್ಲಾ ಶಾಲೆಗಳು ಸಂಬಂಧಿಸಿದ ಎಲ್ಲಾ ಶೀರ್ಷಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿರುವ ಬಗ್ಗೆ ಆದ್ಯ ಗಮನಹರಿಸಿ ಯಾವುದೇ ಲೋಪಗಳು ಉಂಟಾಗದಂತೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು.
ಇತರೆ ಪ್ರಮುಖ ಅಂಶಗಳು:
2026-27ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಅಳವಡಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ “User manual” SATS Login ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ನೋಡಲ್ ಅಧಿಕಾರಿಗಳ ದೂರವಾಣಿ ಅಥವಾ SATS ತಂಡವನ್ನು ಇ-ಮೇಲ್ ವಿಳಾಸ satsmdktbs2023@gmail.com ಮೂಲಕ ಸಂಪರ್ಕಿಸಬಹುದಾಗಿದೆ
ತಾಲ್ಲೂಕು ಹಾಗೂ ಜಿಲ್ಲಾ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳೇ ಪ್ರಸಕ್ತ ಸಾಲಿನ ಬೇಡಿಕೆಯನ್ನು ಪರಿಶೀಲಿಸಿ ಕ್ರೋಢೀಕರಿಸುವ ಸಂಪೂರ್ಣ ಪ್ರಕ್ರಿಯೆಯ ಜವಾಬ್ದಾರಿಯನ್ನು ನಿರ್ವಹಿಸುವುದು. ಸದರಿ ಪ್ರಕ್ರಿಯೆಯ ನಿರ್ವಹಣೆಗೆ ಕ್ಷೇತ್ರ ಸಮನ್ವಯಾಧಿಕಾರಿ (ಬಿ.ಆರ್.ಸಿ.) ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಪ್ರೋಗ್ರಾಮರ್‌ಗಳನ್ನು ಕಡ್ಡಾಯವಾಗಿ ನಿಯೋಜಿಸುವುದು ಹಾಗೂ ನಿಯೋಜಿಸಿದ ಬಗ್ಗೆ ಮಾಹಿತಿಯನ್ನು ಈ ಕಛೇರಿಗೆ ಸಲ್ಲಿಸುವುದು.
ಸಾರ್ವಜನಿಕ ವಲಯದಲ್ಲಿ ಪಠ್ಯಪುಸ್ತಕಗಳ ವಿತರಣೆ ಬಗ್ಗೆ ಯಾವುದೇ ರೀತಿಯ ದೂರುಗಳು ಬಂದಲ್ಲಿ, ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು, ಆ ಕಾರಣ ಎಲ್ಲಾ ಹಂತದ ಉಸ್ತುವಾರಿ ಅಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿರುವ ನಿಯಮಗಳನ್ನಯ ಕಾರ್ಯೋನ್ಮುಖರಾಗಿ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಬೇಡಿಕೆಯನ್ನು ನಿಖರವಾಗಿ ದಾಖಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದು.
ವಿಶೇಷವಾಗಿ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಖಾಸಗಿ ಶಾಲೆಗಳು ಉಲ್ಲೇಖ(1)ರ ಆದೇಶದಂತೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕದ ಬೇಡಿಕೆಯನ್ನು ಸಲ್ಲಿಸಲು ಅಗತ್ಯ ಕ್ರಮವಹಿಸುವುದು.
ತಾಲ್ಲೂಕು ಪಠ್ಯವುಸ್ತಕ ದಾಸ್ತಾನು ಮಳಿಗೆಯಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳ ಸಹಾಯಕಾರಾಗಿ ಅಗತ್ಯ ಸಂಖ್ಯೆಯ ಡಿ ದರ್ಜೆ ನೌಕರರನ್ನು ಕಡ್ಡಾಯವಾಗಿ ನಿಯೋಜಿಸುವುದು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಸುವ ಸಂಬಂಧ ಸಾಗಾಣಿಕೆ ವೆಚ್ಚವಾಗಿ ಪ್ರತಿ ಮಗುವಿಗೆ ರೂ 4=00 ಗಳಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಖಾತೆಗೆ ಡಿ.ಬಿ.ಟಿ ಮೂಲಕ ಜಮೆ ಮಾಡಲಾಗುವುದು. ತಾಲ್ಲೂಕಿನಿಂದ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸಾಗಿಸುವ ಜವಾಬ್ದಾರಿ ಆಯಾ ಶಾಲಾ ಮುಖ್ಯಶಿಕ್ಷಕರಾಗಿರುತ್ತದೆ. ಸಾಗಾಣಿಕೆ ವೆಚ್ಚದ ಬಳಕೆಗೆ ಅಗತ್ಯ ದಾಖಲೆಗಳನ್ನು ನಿರ್ವಹಿಸಿ ಉಪಯೋಗಿತ ಪ್ರಮಾಣ ಪತ್ರವನ್ನು ತಾಲ್ಲೂಕು ಹಂತಕ್ಕೆ ನೀಡುವುದು.
ಕನ್ನಡ ಭಾಷಾ ಅಧಿನಿಯಮದ ಪ್ರಕಾರ 2026-27 ನೇ ಸಾಲಿನಿಂದ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕ ಜಾರಿಯಲ್ಲಿರುವುದಿಲ್ಲ.
ವಿಶೇಷ ಸೂಚನೆ: 2026-27ನೇ ಶೈಕ್ಷಣಿಕ ಸಾಲಿಗೆ ಈ ಕೆಳಕಂಡ ತರಗತಿಯ ಶೀರ್ಷಿಕೆಗಳು ಬದಲಾವಣೆ ಆಗಿರುವುದರಿಂದ, ಬೇಡಿಕೆ ಸಲ್ಲಿಸುವಾಗ ಸ್ಟಾಕ್‌ನಲ್ಲಿ ಉಳಿಕೆಯಾದ ಪಠ್ಯಪುಸ್ತಕಗಳನ್ನು ಪರಿಗಣಿಸುವಂತಿಲ್ಲ.

ಮೇಲಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಪಠ್ಯಪುಸ್ತಕಗಳ ಜಿಲ್ಲಾ ಮತ್ತು ತಾಲ್ಲೂಕು ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಯಾವುದೇ ರೀತಿಯ ವ್ಯತ್ಯಯಗಳು ಉಂಟಾಗದಂತೆ ಕಾಲಮಿತಿಯೊಳಗೆ ಕ್ರಮವಹಿಸುವುದು. ಹೆಚ್ಚಿನ ಮಾಹಿತಿಗಾಗಿ ‘ಪಠ್ಯಪುಸ್ತಕಗಳ ಬೇಡಿಕೆ, ಸ್ವೀಕೃತಿ, ಪೂರೈಕೆ ಕೈಪಿಡಿ”ಯನ್ನು ಅವಲೋಕಿಸುವುದು.
ಎಲ್ಲಾ ವಿಧದ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನಿಗದಿತ ಸಮಯದೊಳಗೆ ಒದಗಿಸುವ ನಿಟ್ಟಿನಲ್ಲಿ, ವಠ್ಯಪುಸ್ತಕಗಳ ಬೇಡಿಕೆಯನ್ನು ನಿಖರವಾಗಿ ವೇಳಾಪಟ್ಟಿಯನ್ವಯ ದಾಖಲಿಸಿ, ಪಠ್ಯಪುಸ್ತಕಗಳ ಬೇಡಿಕೆ ಪ್ರಕ್ರಿಯೆಯನ್ನು ದಿನಾಂಕ:16.02.2026 ರೊಳಗೆ ಯಶಸ್ವಿಗೊಳಿಸಲು ಈ ಮೂಲಕ ಸೂಚಿಸಿದೆ.
