Branches of psychology: ಮನೋವಿಜ್ಞಾನದ ಕ್ಷೇತ್ರಗಳು ನೋಟ್ಸ್ -02

Branches of psychology: ಮನೋವಿಜ್ಞಾನದ ಕ್ಷೇತ್ರಗಳು ನೋಟ್ಸ್ -02

Branches of psychology: ಮನೋವಿಜ್ಞಾನ ಬೆಳೆದಂತೆ ಅದರ ವ್ಯಾಪ್ತಿಕೂಡ ವಿಸ್ತಾರಗೊಳ್ಳುತ್ತಿದೆ. ಪರಿಣಾಮವಾಗಿ ವಿವಿಧ ಮನೋವಿಜ್ಞಾನ ಕ್ಷೇತ್ರಗಳು ಹುಟ್ಟಿಕೊಳ್ಳುತ್ತಿವೆ. ಮನೋವಿಜ್ಞಾನ ಕ್ಷೇತ್ರಗಳಲ್ಲಿ ಎರಡು ವಿಧ. ಅವುಗಳೆಂದರೆ ಅಧ್ಯಯನ ಕ್ಷೇತ್ರಗಳು ಮತ್ತು ಅನ್ವಯಿಕ ಕ್ಷೇತ್ರಗಳು, ಅವುಗಳಲ್ಲಿ ಪ್ರಮುಖವಾದ ಮನೋವಿಜ್ಞಾನ ಕ್ಷೇತ್ರಗಳು ಕೆಳಕಂಡಂತಿವೆ.

1. ಸಾಮಾನ್ಯ ಮನೋವಿಜ್ಞಾನ (General psychology)

ಸಾಮಾನ್ಯ ಮನೋವಿಜ್ಞಾನವು ಮಾನವನ ವರ್ತನೆಯ ಮೂಲ ತತ್ವಗಳಿಗೆ ಸಂಬಂಧಪಟ್ಟಿದೆ. ಇದು ಮಾನವನ ಮೂಲಭೂತ ತತ್ವಗಳನ್ನು ಹಾಗೂ ಸಿದ್ಧಾಂತಗಳನ್ನು ಅಧ್ಯಯನ ಮಾಡುತ್ತದೆ. ಮಾನವನ ಚಟುವಟಿಕೆಗಳಾದ ಅವಧಾನ, ಪ್ರತ್ಯಕ್ಷಾನುಭವ, ಅಭಿಪ್ರೇರಣೆಗಳು ಮತ್ತು ಪ್ರೇರಣೆಗಳು, ಬುದ್ಧಿಶಕ್ತಿ, ಕಲಿಕೆ, ಸ್ಮೃತಿ ಹಾಗೂ ವಿಸ್ಕೃತಿ ಮತ್ತು ವಿವೇಚನೆಗಳನ್ನು ಕುರಿತು ಅಧ್ಯಯನ ಮಾಡುತ್ತದೆ.

ಸಾಮಾನ್ಯ ಮನೋವಿಜ್ಞಾನವು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ನಿಯಮಗಳನ್ನು ಹಾಗೂ ತತ್ವಗಳನ್ನು ರೂಪಿಸುತ್ತದೆ. ಇದು ಮಾನವನ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತದೆ. ಆದ್ದರಿಂದ ಸಾಮಾನ್ಯ ಮನೋವಿಜ್ಞಾನವು ಇತರೆ ಎಲ್ಲ ಮನೋವಿಜ್ಞಾನ ಕ್ಷೇತ್ರಗಳಿಗೆ ಆಧಾರವಾಗಿದೆ ಎಂದು ಹೇಳಬಹುದು.

2. ವಿಕಾಸ ಮನೋವಿಜ್ಞಾನ (Developmental psychology)

ಈ ಶಾಖೆಯು ವ್ಯಕ್ತಿ ಹೇಗೆ ತನ್ನ ಜೀವನದುದ್ದಕ್ಕೂ ಬೆಳವಣಿಗೆ ಹೊಂದುತ್ತಾನೆ ಎಂಬ ಬಗ್ಗೆ ಮತ್ತು ವಿವಿಧ ವಯಸ್ಸಿನಲ್ಲಿ ಉಂಟಾಗುವ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡುತ್ತದೆ.

ಶಾರೀರಿಕ ಮನೋವಿಜ್ಞಾನಿಗಳು ವಿವಿಧ ಕ್ಷೇತ್ರಗಳಲ್ಲಿ ಅಂದರೆ, ಶಾಲೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ಇವರು ಸಮಸ್ಯಾತ್ಮಕ ಮಕ್ಕಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಅವರ ಪೋಷಕರಿಗೆ ಹೇಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

ಅಧಿವಯಸ್ಸಿನ ಮಕ್ಕಳ ಬೆಳವಣಿಗೆಗೆ ಸಂಬಂಧಪಟ್ಟಂತೆ ಈ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಜೊತೆಗೆ, ವಯಸ್ಕರಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಕಂಡುಬರುವ ಪಾರ್ಕಿನ್ಸನ್ ಖಾಯಿಲೆ, ಆಲ್‌ಜೆಮಿರ್ ಮುಂತಾದುವುಗಳ ಬಗ್ಗೆ ಕೂಡ ಅಧ್ಯಯನಗಳು ನಡೆಯುತ್ತಿವೆ. ಹೆಚ್ಚಿನ ಅಧ್ಯಯನಗಳು ಸಮಸ್ಯೆಗಳ ನಿವಾರಣೆ ಬಗ್ಗೆ ಇಲ್ಲವೆ ಸಮಸ್ಯೆಗಳ ನಿರ್ವಹಣೆ ಬಗ್ಗೆ ನಡೆಯುತ್ತಿವೆ.

3. ಸಾಮಾಜಿಕ ಮನೋವಿಜ್ಞಾನ (social psychology)

ಸಾಮಾಜಿಕ ಮನೋವಿಜ್ಞಾನವು ವ್ಯಕ್ತಿಯ ವರ್ತನೆಯನ್ನು ಅವನ ಸಾಮಾಜಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತದೆ. ವ್ಯಕ್ತಿಯ ಸಾಮಾಜೀಕರಣ, ವ್ಯಕ್ತಿ-ಗುಂಪಿನ ನಡುವಿನ ಸಂಬಂಧ, ಗುಂಪು-ಗುಂಪಿನ ನಡುವಿನ ಸಂಬಂಧ. ಗುಂಪಿನೊಳಗೇ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧ, ಸ್ಪರ್ಧೆ, ಸಹಕಾರ, ಪೂರ್ವಾಗ್ರಹ, ಮನೋಭಾವ, ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಜೊತೆಗೆ ವ್ಯಕ್ತಿಯ ಭಾವನೆಗಳು, ಅಭಿಪ್ರಾಯಗಳು ಹಾಗೂ ಸಾಮಾಜಿಕ ವರ್ತನೆಗಳ ಬಗ್ಗೆ ಸಹ ಅಧ್ಯಯನ ಮಾಡುತ್ತದೆ. ವ್ಯಕ್ತಿಯ ಮನೋಭಾವ, ವಿಧೇಯತೆ, ಅನುವರ್ತನೆ, ಗುಂಪು ತೀರ್ಮಾನ, ಸಹಕಾರ ಹಾಗೂ ಸ್ಪರ್ಧೆ ಬಗ್ಗೆ ಮಹತ್ತರವಾದ ಅಧ್ಯಯನಗಳು ನಡೆದಿವೆ.

ಇದರಿಂದ ಜನಸಮುದಾಯವನ್ನು ಒಡೆಯುವ ಅಂಶಗಳಾದ ಪೂರ್ವಾಗ್ರಹ, ಸಂಘರ್ಷ, ಯುದ್ಧ ಮುಂತಾದುವುಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗಿದೆ. ಅಲ್ಲದೆ ಮಾನವನ ಒಗ್ಗಟ್ಟಿಗೆ ಸಹಕಾರಿಯಾದ ಸಹಕಾರ ಮನೋಭಾವ, ಶಾಂತಿ ಸಂಯಮ, ಇತ್ಯಾದಿಗಳನ್ನು ಸಹ ತಿಳಿಯಲು ಈ ಅಧ್ಯಯನಗಳು ಸಹಕಾರಿಯಾಗಿವೆ.

ಸಾಮಾಜಿಕ ಮನೋವಿಜ್ಞಾನವು ವ್ಯಕ್ತಿಯ ಬೆಳವಣಿಗೆ ಮೇಲೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳ ಪ್ರಭಾವವನ್ನು ಅಧ್ಯಯನ ಮಾಡುತ್ತದೆ. ಜೊತೆಗೆ, ಜನಭಿಪ್ರಾಯಗಳ ಅಧ್ಯಯನ, ಮನೋಭಾವದಲ್ಲಿ ಪರಿವರ್ತನೆ, ಪೂರ್ವಾಗ್ರಹ, ಸಾಮಾಜಿಕ ಪ್ರೇರಣೆಗಳು, ಸಮೂಹ ಮತ್ತು ಗುಂಪು ವರ್ತನೆಗಳ ಅಧ್ಯಯನ ಮುಂತಾದುವು ಸಾಮಾಜಿಕ – ಸಾಂಸ್ಕೃತಿಕ ಅಂಶಗಳಿಂದ ರ್ಧಾರವಾಗುತ್ತವೆ.

ಪರಿಸರ ಕೂಡ ತನ್ನದೇ ಆದ ಪ್ರಭಾವಬೀರುತ್ತದೆ. ಆದ್ದರಿಂದ ಸಾಮಾಜಿಕ ಮನೋವಿಜ್ಞಾನವು ವ್ಯಕ್ತಿಯ ವರ್ತನೆಯನ್ನು ಅವನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತದೆ.

4. ಅಪಸಾಮಾನ್ಯ ಮನೋವಿಜ್ಞಾನ (Abnormal psychology) :

ಸಾಮಾನ್ಯ ವರ್ತನೆಗೆ ಭಿನ್ನವಾದ ವರ್ತನೆಯೇ ಅಪಸಾಮಾನ್ಯ ವರ್ತನೆ. ಇಂತಹ ಅಪಸಾಮಾನ್ಯ ವರ್ತನೆ ತೋರುವವರನ್ನು ಕುರಿತು ಅಪಸಾಮಾನ್ಯ ಮನೋವಿಜ್ಞಾನ ಅಧ್ಯಯನ ಮಾಡುತ್ತದೆ. ಕೆಲವು ಉದಾಹರಣೆಗಳೆಂದರೆ ಅತಿಯಾದ ಭಯ, ನೆನಪಿನ ಶಕ್ತಿಯಲ್ಲಿ ಲೋಪ, ಭ್ರಮೆ, ವಿಭ್ರಮೆ, ಪರಸ್ಪರ ಸಂಬಂಧವಿಲ್ಲದ ಮಾತುಗಳು, ಕಾರ್ಯಗಳ ಅಸರ್ಮಪಕ ನಿರ್ವಹಣೆ, ಇತ್ಯಾದಿ. ಅದೇ ರೀತಿ, ಮದ್ಯವ್ಯಸನ, ಮಾದಕ ವಸ್ತು ಚಟ, ಮುಂತಾದುವುಗಳನ್ನು ಸಹ ಅಪಸಾಮಾನ್ಯ ಮನೋವಿಜ್ಞಾನ ಅಧ್ಯಯನ ಮಾಡುತ್ತದೆ. ಅಪಸಾಮಾನ್ಯ ಮನೋವಿಜ್ಞಾನದ ಮೂರು ಭಾಗಗಳು
(1) ಮನೋಬೇನೆಗಳು
(2) ಮನೋವಿಕೃತಿಗಳು
(3) ಮನೋ-ದೈಹಿಕ ಬೇನೆಗಳು.

ಮನೋಬೇನೆಗಳು :

ಮನೋಬೇನಿಗರು ಸಾಮಾನ್ಯರಂತೆಯೇ ಕಂಡುಬಂದರೂ ಸಹ ತಮ್ಮ ಸಮಸ್ಯೆಗಳನ್ನು ಸಮರ್ಪಕವಾಗಿ ಬಗೆಹರಿಸಿಕೊಳ್ಳುವಲ್ಲಿ ಅಸಮರ್ಥರಾಗಿರುತ್ತಾರೆ. ದೈನಂದಿನ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಲಾರರು. ಉದಾಹರಣೆಗೆ ಅತಿಭೀತಿ. ಇಲ್ಲಿ ಜನ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಸಹ ಕೆಲವು ಸಂದರ್ಭಗಳಲ್ಲಿ ಅತಿಯಾದ ಭಯವ್ಯಕ್ತಪಡಿಸುವರು. ಇದರಿಂದಾಗಿ ಸಾಮರ್ಥ್ಯವಿದ್ದರೂ, ಅತಿಭಯದ ಪರಿಣಾಮವಾಗಿ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲಾರರು.


ಮನೋವಿಕೃತಿಗಳು :

ಮನೋವಿಕೃತಿಗಳು ತೀವ್ರ ಸ್ವರೂಪದ ಮನೋರೋಗಗಳು. ಮನೋವಿಕೃತಿಗೆ ಒಳಗಾದ ವ್ಯಕ್ತಿ ವಾಸ್ತವಿಕತೆಯ ಜೊತೆ ಸಂಪರ್ಕ ಕಳೆದುಕೊಳ್ಳುತ್ತಾನೆ. ತನ್ನ ದೈನಂದಿನ ಕೆಲಸಗಳನ್ನು ನಿರ್ವಹಿಸುವಲ್ಲಿ ತೀವ್ರವಾದ ಅಸಮರ್ಪಕತೆ ತೋರುತ್ತಾನೆ. ಜೊತೆಗೆ ನಡೆ-ನುಡಿಗಳಲ್ಲಿ ವೈಪರಿತ್ಯ ಕಂಡುಬರುತ್ತದೆ. ಮನೋವಿಕೃತಿಗೆ ಒಳಗಾದವರಲ್ಲಿ ಭ್ರಮೆ, ವಿಭ್ರಮೆಗಳು ಹೆಚ್ಚು. ಉದಾಹರಣೆಗೆ: ಇಚ್ಚಿತ್ತ (Schizophrenia) ಮನೋರೋಗದಿಂದ ಬಳಲುವವರು.

ಮನೋ ದೈಹಿಕ ಬೇನೆಗಳು :

ಮಾನಸಿಕ ಅಂಶಗಳು ದೈಹಿಕ ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮವೇ ಮನೋ ದೈಹಿಕ ಬೇನೆ. ಮಾನಸಿಕ ಒತ್ತಡ, ಹತಾಶೆ, ಮಾನಸಿಕ ತುಮುಲ ಮುಂತಾದ ಅಂಶಗಳು ಮನೋದೈಹಿಕ ಬೇನೆಯನ್ನು ಉಂಟುಮಾಡುತ್ತದೆ. ಉದಾಹರಣೆಗೆ: ಕರಳು ಹುಣ್ಣು, ಗೂರಲು, ಪಾರ್ಶ್ವ ತಲೆನೋವು, ಅಧಿಕರಕ್ತದ ಒತ್ತಡ, ಇಸುಬು, ಕಜ್ಜಿ, ಇತ್ಯಾದಿ.

5. ಪ್ರಾಣಿ ಮನೋವಿಜ್ಞಾನ (animal psychology):

ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವುದೇ ಪ್ರಾಣಿ ಮನೋವಿಜ್ಞಾನ, ಜೀವವಿಕಾಸದ ಜೊತೆಜೊತೆಗೆ ಮಾನಸಿಕ ಕ್ರಿಯೆಗಳ ವಿಕಾಸ ಕೂಡ ಆಗುತ್ತಾ ಬಂದಿದೆ. ಪ್ರಾಣಿಗಳ ಮಾನಸಿಕ ಪ್ರಕ್ರಿಯೆಗಳನ್ನು ಮನುಷ್ಯನ ಮಾನಸಿಕ ಪ್ರಕ್ರಿಯಗಳ ಜೊತೆ ಹೋಲಿಸಿದಾಗ ಪ್ರಾಣಿಗಳ ಮಾನಸಿಕ ಪ್ರಕ್ರಿಯೆಗಳು ತುಂಬಾ ಸರಳವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವುದು ಸುಲಭ. ಅಲ್ಲದೆ, ಪ್ರಾಣಿಗಳ ವರ್ತನೆಗೂ ಮನುಷ್ಯನ ಕೆಲವು ವರ್ತನೆಗಳಿಗೂ ಹೋಲಿಕೆ ಇದೆ.

ಆದ್ದರಿಂದ ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವ ಮೂಲಕ ಮನುಷ್ಯನ ವರ್ತನೆಯನ್ನು ಅರ್ಥಮಾಡಿಕೊಳ್ಳಬಹುದು. ಕೆಲವು ಪ್ರಯೋಗಗಳನ್ನು ಪ್ರಾಣಿಗಳ ವರ್ತನೆಯ ಮೇಲೆ ನಡೆಸಲು ಯಾವುದೇ ಕಾನೂನು ತೊಡಕುಗಳಾಗಲೀ, ಸಾಮಾಜಿಕ ಅಡಚಣೆಗಳಾಗಲೀ ಇರುವುದಿಲ್ಲ. ಹಾಗಾಗಿ ಪ್ರಾಣಿಗಳ ವರ್ತನೆ ಮೇಲೆ ಅಧ್ಯಯನ ನಡೆಸಿ ಅದರ ಫಲಿತಾಂಶದ ಹಿನ್ನಲೆಯಲ್ಲಿ ಮನುಷ್ಯನ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಉದಾಹರಣೆಗೆ, ಕಲಿಕೆ, ಸಂವೇಗಗಳು, ಪ್ರೇರಣೆಗಳು, ಮೆದುಳಿನ ಕ್ರಿಯೆಗಳು ಮುಂತಾದುವುಗಳಿಗೆ ಸಂಬಂಧಪಟ್ಟಂತೆ ಪ್ರಾಣಿಗಳ ಮೇಲೆ ಅಧ್ಯಯನ ಮಾಡಿ ಅದರ ಫಲಿತಾಂಶದ ಆಧಾರದ ಮೇಲೆ ಮಾನವನ ವರ್ತನೆಯನ್ನು ಅಧ್ಯಯನ ಮಾಡುತ್ತಿದ್ದಾರೆ.

6) ನೈದಾನಿಕ (ಚಿಕಿತ್ಸಕ) ಮನೋವಿಜ್ಞಾನ (Clinical psychology) :-

ಅಪಸಾಮಾನ್ಯ ಮನೋವಿಜ್ಞಾನದ ತತ್ವಗಳು ಹಾಗೂ ಸಿದ್ಧಾಂತಗಳನ್ನು ಅನುಸರಿಸಿ ಮಾನಸಿಕ ಸಮಸ್ಯೆಗಳಿಗೆ ನೈದಾನಿಕ ಮನೋವಿಜ್ಞಾನವು ಸೂಕ್ತ ಚಿಕಿತ್ಸೆ ನೀಡುತ್ತದೆ. ವರ್ತನಾ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ಬುದ್ದಿ ಮಾಂದ್ಯತೆ, ಬಾಲಾಪರಾಧ, ಮದ್ಯವ್ಯಸನ, ಮಾದಕವಸ್ತು ಚಟ, ಕಲಿಕಾ ಸಮಸ್ಯೆಗಳು, ಮುಂತಾದ ಸಮಸ್ಯೆಗಳನ್ನು ನೈದಾನಿಕ ಮನೋವಿಜ್ಞಾನವು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ನೈದಾನಿಕ ಮನೋವಿಜ್ಞಾನವು ಅಪಸಾಮಾನ್ಯ ವರ್ತನೆಯ ಕಾರಣಗಳನ್ನು ಕುರಿತು ಅಧ್ಯಯನ ಮಾಡುತ್ತದೆ.

ಮಾನಸಿಕ ಸಮಸ್ಯೆಗಳು ಮನುಷ್ಯನ ಬಗೆಹರಿಯದ ಸಂಘರ್ಷಗಳಿಂದ ಹಾಗೂ ಅಜ್ಞಾತ ಪ್ರೇರಣೆಗಳಿಂದ ಉಂಟಾಗುತ್ತವೆ. ಕೆಲವು ಮನೋವಿಜ್ಞಾನಿಗಳ ಪ್ರಕಾರ ಅಪಸಾಮಾನ್ಯ ವರ್ತನೆಗಳು ತಪ್ಪು ಕಲಿಕೆ ಅಥವಾ ತಪ್ಪು ಗ್ರಹಿಕೆಯ ಪರಿಣಾಮಗಳು. ಕೆಲವರ ಪ್ರಕಾರ ಅಪಸಾಮಾನ್ಯ ವರ್ತನೆಗೆ ಶಾರೀರಿಕ ಅಂಶಗಳು ಕಾರಣವಾಗಿವೆ. ಈ ಎಲ್ಲ ರೀತಿಯ ಅಭಿಪ್ರಾಯಗಳು ವಿವಿಧ ರೀತಿಯ ಚಿಕಿತ್ಸಾ ವಿಧಾನಗಳಿಗೆ ದಾರಿಮಾಡಿಕೊಟ್ಟಿವೆ.

ನೈದಾನಿಕ ಮನೋವಿಜ್ಞಾನಿಗಳು ಮಾನಸಿಕ ಅಸ್ವಸ್ಥರಿಗೆ ಮನೋಚಿಕಿತ್ಸೆ ನೀಡಿ ಗುಣಪಡಿಸುವರು. ನೈದಾನಿಕ ಮನೋವಿಜ್ಞಾನಿಗಳಿಗೂ ಮನೋವೈದ್ಯರಿಗೂ ಇರುವ ವ್ಯತ್ಯಾಸ ತಿಳಿಯಬೇಕು. ಮನೋವೈದ್ಯರು ಮೂಲತಃ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದಿರುತ್ತಾರೆ ಮತ್ತು ಮನೋರೋಗ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ (M.D. PSYCHIATRY) ಪಡೆದಿರುತ್ತಾರೆ. ಅವರು ತೀವ್ರ ಸ್ವರೂಪದ ಮನೋರೋಗಗಳಿಗೆ ಔಷಧಿ ನೀಡಿ ಅಥವಾ ಇತರ ವೈದ್ಯಕೀಯ ವಿಧಾನಗಳ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸುವರು.

ಆದರೆ ನೈದಾನಿಕ ಮನೋವಿಜ್ಞಾನಿಗಳು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಮನೋಚಿಕಿತ್ಸೆ ನೀಡುವ ಬಗ್ಗೆ ಉನ್ನತ ತರಬೇತಿ ಇಲ್ಲವೆ ಪಿ.ಎಚ್.ಡಿ ಪಡೆದಿರುತ್ತಾರೆ. ಮನೋವಿಜ್ಞಾನಿಗಳು ಮನೋವೈದ್ಯರಂತೆ ಔಷಧಿ ಸೂಚಿ ರಸೀತಿ ನೀಡಲಾರರು.

ಆದರೆ ರೋಗಿಯ ವರ್ತನೆಯಲ್ಲಿ ಸೂಕ್ತ ಬದಲಾವಣೆ ಉಂಟುಮಾಡುವ ಮೂಲಕ ಮನೋರೋಗವನ್ನು ಗುಣಪಡಿಸುವರು. ಮನೋವಿಜ್ಞಾನಿಗಳು ನಿರ್ವಹಿಸುವ ಪ್ರಮುಖ ಕರ್ತವ್ಯಗಳೆಂದರೆ. 1) ಮನೋರೋಗದ ಲಕ್ಷಣಗಳನ್ನು ಹಾಗೂ ಕಾರಣಗಳನ್ನು ಪತ್ತೆಹಚ್ಚಲು ಮನೋವೈಜ್ಞಾನಿಕ ಪರೀಕ್ಷೆಗಳನ್ನು ಮನೋರೋಗಿಗಳಿಗೆ ನೀಡುವುದು. 2) ಮನೋಚಿಕಿತ್ಸೆ ನೀಡುವುದು ಮತ್ತು 3) ಮನೋರೋಗಗಳ ಬಗ್ಗೆ ಸಂಶೋಧನೆ ನಡೆಸುವುದು.

7. ಶೈಕ್ಷಣಿಕ ಮನೋವಿಜ್ಞಾನ (Educational psychology) :-

ಕಲಿಕೆ ಮತ್ತು ಬೋಧನಾ ವಿಧಾನದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಮನೋವೈಜ್ಞಾನಿಕ ವಿಧಾನಗಳ ಮೂಲಕ ಪರಿಹಾರ ಸೂಚಿಸುವುದೇ ಶೈಕ್ಷಣಿಕ ಮನೋವಿಜ್ಞಾನದ ಮೂಲ ಉದ್ದೇಶ. ಕಲಿಕಾ ಪ್ರಕ್ರಿಯೆಯ ವಿಶ್ಲೇಷಣೆ ಶಿಕ್ಷಕರಿಗೆ ಹೆಚ್ಚು ಸಹಕಾರಿಯಾಗಿದೆ. ಕಲಿಕೆಗೆ ಸಂಬಂಧಿಸಿದಂತೆ ಮನೋವಿಜ್ಞಾನಿಗಳು ಅಪಾರ ಕೊಡುಗೆ ನೀಡಿದ್ದಾರೆ. ಅವುಗಳೆಂದರೆ, ಕಲಿಕಾ ನಿಯಮಗಳು, ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ತಂತ್ರಗಳು, ಮರೆವಿನ ಕಾರಣಗಳು ಮತ್ತು ಅವುಗಳ ನಿವಾರಣೆ, ಮುಂತಾದುವು.

ಶೈಕ್ಷಣಿಕ ಮನೋವಿಜ್ಞಾನಗಳು ನಿರ್ವಹಿಸುವ ಪ್ರಮುಖ ಕರ್ತವ್ಯಗಳೆಂದರೆ ಶೈಕ್ಷಣಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಸೂಚಿಸುವುದು, ಮಕ್ಕಳ ಸಾಧನೆಯ ಮಾಪನ ಮಾಡುವುದು, ಬೋಧನಾ ವಿಧಾನದಲ್ಲಿ ಉತ್ತಮ ಪ್ರಗತಿ ತರುವುದು.

ಪ್ರತಿಭಾವಂತರು ಹಾಗೂ ಕಳಪೆ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ಮಾಡುವುದು, ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನು ಅಧ್ಯಯನ ಮಾಡುವುದು, ವಿದ್ಯಾರ್ಥಿಗಳ ಭಾವನಾತ್ಮಕ, ಬೌದ್ಧಿಕ ಮತ್ತು ಸಮಯೋಜನಾ ಸಮಸ್ಯೆಗಳನ್ನು ಅಧ್ಯಯನ ಮಾಡುವುದು, ಮುಂತಾದುವು.

ಶೈಕ್ಷಣಿಕ ಮನೋವಿಜ್ಞಾನಿಗಳು ನಿರ್ವಹಿಸುವ ಇತರ ಕೆಲಸಗಳೆಂದರೆ, ಶೈಕ್ಷಣಿಕ ಮಾರ್ಗದರ್ಶನ, ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು, ಹೊಗಳಿಕೆ-ತೆಗಳಿಕೆ ವಿಧಾನದ ಬಳಕೆ, ಪುನರ್ಬಲದ ಉಪಯೋಗ, ಇತ್ಯಾದಿಗಳ ಬಗ್ಗೆ ಶಿಕ್ಷಕರಿಗೆ ಮನವರಿಕೆ ಮಾಡಿಕೊಡುವುದು.

ವಿದ್ಯಾರ್ಥಿಗಳ ತರಗತಿ ಹೊರಗಿನ ಮತ್ತು ಒಳಗಿನ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರ, ಪೋಷಕರಿಗೆ ಸೂಕ್ತ ಮಾರ್ಗದರ್ಶನ, ಇತ್ಯಾದಿ, ಶೈಕ್ಷಣಿಕ ಮನೋವಿಜ್ಞಾನದ ಅಧ್ಯಯನದ ಇತರ ವಿಷಯಗಳೆಂದರೆ, ಶಿಕ್ಷಕರ ವ್ಯಕ್ತಿತ್ವ ಮತ್ತು ವರ್ತನೆ, ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಅಧ್ಯಯನ, ಬೋಧನಾ ವಿಧಾನಗಳನ್ನು ಉತ್ತಮ ಪಡಿಸುವುದು, ಸ್ವಯಂ ಬೋಧನೆ. ಸೃಜನಶೀಲ ಚಿಂತನೆಯನ್ನು ಬೆಳೆಸುವುದು. ಸಮಸ್ಯೆ ಪರಿಹಾರದ ಸಾಮರ್ಥ್ಯವನ್ನು ಬೆಳೆಸುವುದು.

ಪರಿಹಾರ ವಿಧಾನಗಳನ್ನು ಅನುಸರಿಸಿ ಬುದ್ದಿಮಾಂದ್ಯ ಹಾಗೂ ಭಾವನಾತ್ಮಕ ತೊಂದರೆಯ ವಿದ್ಯಾರ್ಥಿಗಳಿಗೆ ಬೋಧಿಸುವ ವಿಧಾನ, ಮುಂತಾದ ಅನೇಕ ಕಲಿಕೆ, ಬೋಧನೆ, ವಿಧಾನಗಳ ಬಗ್ಗೆ ಶೈಕ್ಷಣಿಕ ಮನೋವಿಜ್ಞಾನಿಗಳು ಅಧ್ಯಯನ ನಡೆಸಿ ಪರಿಹಾರ ಸೂಚಿಸುತ್ತಿದ್ದಾರೆ.

psychology
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!