Cadre and Recuritment:
ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಮಗ್ರವಾಗಿ ವೃಂದ ಮತ್ತು ನೇಮಕಾತಿ (Cadre&Recuritment) ನಿಯಮಗಳನ್ನು ತಿದ್ದುಪಡಿ ಮಾಡುವ ಕುರಿತಾಗಿ ಇಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ.
ಪ್ರಶ್ನೆಗಳು:
ಅ) ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಮಗ್ರವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಕುರಿತು 2018ರಿಂದ ಇಲ್ಲಿಯವರೆಗೆ ಕಡತ ಚಾಲ್ತಿಯಲ್ಲಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆಯೇ;
ಉತ್ತರ: ಶಾಲಾ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಣೆ ಮಾಡುವ ಬಗ್ಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು ದಿನಾಂಕ: 30/05/2018ರಂದು
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಆ) ಹಾಗಿದ್ದಲ್ಲಿ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸುವ ಕುರಿತು ಸರ್ಕಾರ ಕಾಲಮಿತಿಯೇನಾದರೂ ವಿಧಿಸಿದೆಯೇ; ಯಾವ ಕಾಲಮಿತಿಯೊಳಗಾಗಿ ಅಂತಿಮ ಗೊಳಿಸಲಾಗುವುದು; ಕಳೆದ ಆರು ವರ್ಷಗಳಿಂದ ಅಂತಿಮಗೊಳಿಸದೇ ಇರಲು ಕಾರಣಗಳೇನು; (ಸಂಪೂರ್ಣ ಮಾಹಿತಿ ನೀಡುವುದು)
ಇ) ಶಾಲಾ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲು ಆರು ವರ್ಷಗಳ ಸಮಯ ಅವಶ್ಯಕವೇ; ಹಾಗಿದ್ದಲ್ಲಿ; ತಿದ್ದುಪಡಿ ಮಾಡಲು ಇನ್ನು ಅವ‍್ಯವಿರುವ ಕಾಲಮಿತಿ ಎಷ್ಟು; ಈ ಕುರಿತು ಕಳೆದ ಆರು ವರ್ಷಗಳಿಂದ ನಡೆಸಿರುವ ಸಭೆಯ ನಡವಳಿಗಳು, ಸಂಬಂಧಪಟ್ಟ ಇಲಾಖೆ ನೀಡಿರುವ ಅಭಿಪ್ರಾಯಗಳು ಹಾಗೂ ಶಿಕ್ಷಣ ಇಲಾಖೆಯು ನೀಡಿರುವ ಸಮರ್ಥನೆಗಳ ಸಂಪೂರ್ಣ ಪ್ರತಿಗಳನ್ನು ನೀಡುವುದು;
ಈ)ದಿನಾಂಕ:03/10/2024ರಂದು ಈ ಕುರಿತು ವೃಂದ ಪರಿಶೀಲನಾ ಸಮಿತಿಯ ಉಪಸಮಿತಿಯು ನಡೆಸಿರುವ ಸಭೆಯ ನಡವಳಿಗಳನ್ನು ನೀಡುವುದು;
ಉತ್ತರಗಳು:
ಶಾಲಾ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ (Cadre & Recuritment) ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಣೆ ಮಾಡುವ ಬಗ್ಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು ದಿನಾಂಕ: 30/05/2018ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಈ ಕುರಿತಂತೆ ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್ 97 ಎಸ್‌ಆರ್‌ಡಿ 2004, ದಿನಾಂಕ:08/10/2004, ಸಿಆಸುಇ 82 ಸೇನಿಡಿ 2006 ದಿನಾಂಕ: 13/07/2007 ಮತ್ತು ಸುತ್ತೋಲೆ ಸಂಖ್ಯೆ:ಸಿಆಸುಇ 124 ಸೇನಿಡಿ 2012 ದಿನಾಂಕ:10/08/2012ರನ್ವಯ ಸಿಆಸು ಇಲಾಖೆ, ಆರ್ಥಿಕ ಇಲಾಖೆ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳ ಅಭಿಪ್ರಾಯ ಪಡೆಯಲಾಗಿದ್ದು, ಸದರಿ ಇಲಾಖೆಗಳು ನೀಡಿರುವ ಅಭಿಪ್ರಾಯಗಳನ್ನು ಅನುಕ್ರಮವಾಗಿ ಅನುಬಂಧ-1, ಅನುಬಂಧ-2 ಮತ್ತು ಅನುಬಂಧ-3ರಲ್ಲಿ ನೀಡಲಾಗಿದೆ.
ಸದರಿ ಇಲಾಖೆಗಳು ನೀಡಿರುವ ಅವಲೋಕನೆಗಳ ಹಿನ್ನೆಲೆಯಲ್ಲಿ ದಿನಾಂಕ:24/05/2018,17/06/2020 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಮತ್ತು ದಿನಾಂಕ:23/10/2018ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿರುತ್ತದೆ. ಸಭೆಯ ನಡವಳಿಗಳನ್ನು ಅನುಬಂಧ-4, 5 ಮತ್ತು 6ರಲ್ಲಿ ಒದಗಿಸಿದೆ.
ಆದರೆ, ಮೇಲಿನಂತೆ ಆಯುಕ್ತರು ಸಲ್ಲಿಸಿದ್ದ ಸದರಿ ಪ್ರಸ್ತಾವನೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿನ ಕೆಲವು ಹುದ್ದೆಗಳ ನೇಮಕಾತಿ ವಿಧಾನ ಮತ್ತು ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯಲ್ಲಿ ಸ್ಪಷ್ಟತೆ ಹಾಗೂ ನಿಖರತೆ ಇಲ್ಲದೇ ಇರುವುದರಿಂದ ಸದರಿ ನ್ಯೂನತೆಗಳನ್ನು ಸರಿಪಡಿಸಿ ಸಮಗ್ರವಾಗಿ ಪರಿಷ್ಕರಿಸಿದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಯುಕ್ತರನ್ನು ಕೋರಲಾಗಿತ್ತು. ಅದರಂತೆ ದಿನಾಂಕ:18/04/2022ರಂದು 31 ವೃಂದಗಳಿಗೆ ಸಂಬಂಧಿಸಿದಂತೆ ನಂತರ ದಿನಾಂಕ:05/09/2022 ರಂದು ಸಮಗ್ರವಾಗಿ ಒಟ್ಟು 73 ವೃಂದಗಳಿಗೆ ಸಂಬಂಧಿಸಿದ ಪರಿಷ್ಕೃತ ಪ್ರಸ್ತಾವನೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಅದರಂತೆ, ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗಳ ಅಭಿಪ್ರಾಯ ಪಡೆಯಲಾಗಿರುತ್ತದೆ. ಸದರಿ ಇಲಾಖೆಗಳು ನೀಡಿರುವ ಅಭಿಪ್ರಾಯಗಳನ್ನು ಅನುಕ್ರಮವಾಗಿ ಅನುಬಂಧ-7, ಅನುಬಂಧ-8 ಮತ್ತು ಅನುಬಂಧ- 9ರಲ್ಲಿ ಒದಗಿಸಲಾಗಿದೆ.
ಮೇಲ್ಕಂಡ ಇಲಾಖೆಗಳು ನೀಡಿರುವ ಅಭಿಪ್ರಾಯ / ಅವಲೋಕನೆಗಳ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆಯ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:03/10/2024ರಂದು ವೃಂದ ಪರಿಶೀಲನಾ ಸಮಿತಿಯ ಉಪ ಸಮಿತಿ ಸಭೆ (Sub Committee of the cadre review Committee) ನಡೆದಿರುತ್ತದೆ. ಸದರಿ ಸಭೆಯ ನಡವಳಿಗಳನ್ನು ಅನುಬಂಧ-10ರಲ್ಲಿ ಒದಗಿಸಿದೆ.
ಸದರಿ ಸಭೆಯಲ್ಲಿ ನಿರ್ಣಯಿಸಿದಂತೆ ಸಿಆಸು ಇಲಾಖೆ ಮತ್ತು ಆರ್ಥಿಕ ಇಲಾಖೆಗಳ ಅಭಿಪ್ರಾಯ ಸ್ವೀಕೃತವಾದ ನಂತರ ಕರಡು ನಿಯಮಗಳನ್ನು ಸಿದ್ಧಪಡಿಸಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯಿಂದ ಪರಿಶೋಧಿಸಿಕೊಂಡು ಪ್ರಸ್ತಾವನೆಯನ್ನು ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ವೃಂದ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಿ ಅನುಮೋದನೆ ಪಡೆದು, ಸಚಿವ ಸಂಪುಟದ ಅನುಮೋದನೆಯೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಲು ಕ್ರಮವಹಿಸಲಾಗುವುದು ಎಂದು ಸದನದಲ್ಲಿ ನೀಡಿದ ಉತ್ತರ.