The Central Board of Secondary Education (CBSE) has made installation of CCTV cameras mandatory in class 10th and 12th examination centres.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 10ನೇ ಹಾಗೂ 12ನೇ ತರಗತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಪರೀಕ್ಷೆ ಬರೆಯುವ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿಲ್ಲದಿದ್ದರೆ ಕೇಂದ್ರವಾಗಿ ಪರಿಗಣಿಸುವುದಿಲ್ಲ. ಈ ನಿಯಮವು 2025 ರ ಪರೀಕ್ಷೆಯಿಂದಲೇ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮಂಡಳಿ ಸಂಯೋಜಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಿರುವ ಸಿಬಿಎಸ್‌ಇ, ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯನ್ನು ಖಾತರಿಪಡಿಸುವಂತೆ ಸೂಚಿಸಿದೆ.
44 ಲಕ್ಷ ವಿದ್ಯಾರ್ಥಿಗಳು ಭಾಗಿ:
ಪ್ರಸಕ್ತ ಸಾಲಿನಲ್ಲಿ 10ನೇ ಹಾಗೂ 12ನೇ ತರಗತಿಯ ಮಂಡಳಿ ಪರೀಕ್ಷೆಗೆ 44 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ ಎಂದು ಸಿಬಿಎಸ್‌ಇ ಮಾಹಿತಿ ನೀಡಿದೆ. ಇಷ್ಟು ದೊಡ್ಡಮಟ್ಟದಲ್ಲಿ ಪರೀಕ್ಷೆಯನ್ನು ಸುಗಮ ಹಾಗೂ ಯಾವುದೇ ಅಕ್ರಮಗಳಿಲ್ಲದಂತೆ ನಡೆಸಲು ಮಂಡಳಿಯು ‘ಸಿಸಿಟಿವಿ ನೀತಿ’ಯನ್ನು ರೂಪಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ನಿರ್ವಹಿಸುವ ಪ್ರದೇಶದ ಸಮಗ್ರ ಚಿತ್ರಣ ನೀಡಲು ಅತಿ ಹೆಚ್ಚು ಸ್ಪಷ್ಟತೆಯನ್ನು ಹೊಂದಿರುವ ಕ್ಯಾಮರಾಗಳನ್ನು ಅಳವಡಿಸುವಂತೆ ಸೂಚನೆ ನೀಡಿದೆ.
ಎರಡು ತಿಂಗಳು ಕಾದಿಡಬೇಕು
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ತರಗತಿ, ಹಾಗೂ ಪರೀಕ್ಷಾ ಕೇಂದ್ರದ ಎಲ್ಲ ಚಟುವಟಿಕೆಗಳ ಚಿತ್ರೀಕರಣವನ್ನು ಫಲಿತಾಂಶ ಘೋಷಣೆಯಾದ ದಿನದಿಂದ ಕನಿಷ್ಠ ಎರಡು ತಿಂಗಳವರೆಗೆ ಕಾದಿಡಬೇಕು ಎಂದು ಸಿಬಿಎಸ್‌ಇ ನಿರ್ದೇಶನ ನೀಡಿದೆ. ಮಂಡಳಿಯು ಪರಿಶೀಲನೆಗೆ ಒಳಪಡಿಸಲು ಇಚ್ಛಿಸಿದಲ್ಲಿ, ಅದನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗುವಂತಿರಬೇಕು. ಜತೆಗೆ, ವಿದ್ಯಾರ್ಥಿಗಳ ಹಾಗೂ ಪರೀಕ್ಷೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರ ಖಾಸಗಿತನ ಕಾಪಾಡಲು ಈ ದೃಶ್ಯಗಳು ಅಧಿಕೃತ ವ್ಯಕ್ತಿಗಳ ಸುಪರ್ದಿಯಲ್ಲಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ವೆಚ್ಚವನ್ನು ಆಯಾ ಶಿಕ್ಷಣ ಸಂಸ್ಥೆಗಳೇ ಭರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸೂಕ್ತ ಮಾಹಿತಿ ನೀಡಿರತಕ್ಕದ್ದು. ಈ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ನೀಡುವ ಸಲಹೆಗಳನ್ನು ಪರಿಗಣಿಸಲು ಮಂಡಳಿ ನಿರ್ದೇಶನ ನೀಡಿದೆ.
ಮುಖ್ಯ ಉದ್ದೇಶಗಳು
- ಪರೀಕ್ಷಾ ಅಕ್ರಮಗಳನ್ನು ತಡೆಯುವುದು
- ಪರೀಕ್ಷಾ ಚಟುವಟಿಕೆಗಳ ಮೇಲೆ ನಿಗಾ
- ವಿವಾದಗಳಿಗೆ ಪರಿಹಾರ, ತನಿಖೆಗೆ ಸಾಕ್ಷ್ಯ ಲಭ್ಯ
- ಒಟ್ಟಾರೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ
8000 ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳು
ಮಂಡಳಿ ಪರೀಕ್ಷೆಗಳನ್ನು ನಡೆಸಲು ದೇಶಾದ್ಯಂತ 8 ಸಾವಿರ ಶಾಲೆಗಳನ್ನು ಕೇಂದ್ರಗಳಾಗಿ ಸಿಬಿಎಸ್‌ಇ ಗುರುತಿಸಿದೆ. ಈ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಈ ವ್ಯವಸ್ಥೆಯಿಲ್ಲದಿದ್ದಲ್ಲಿ, ಪರೀಕ್ಷಾ ಕೇಂದ್ರವಾಗಿ ಮುಂದುವರಿಯಲು ಕ್ಯಾಮರಾಗಳನ್ನು ಅಳವಡಿಸಲು ಒಪ್ಪಿರುವುದಾಗಿ ತಿಳಿಸುವುದು ಕೂಡ ಕಡ್ಡಾಯ ಎಂದು ಹೇಳಿದೆ. ಪ್ರತಿ 10 ಕೊಠಡಿಗಳಿಗೆ ಒಬ್ಬರಂತೆ ಅಥವಾ 240 ವಿದ್ಯಾರ್ಥಿಗಳಿಗೆ ಒಬ್ಬರಂತೆ ಪರೀಕ್ಷಾ ಮೇಲ್ವಿಚಾರಕರನ್ನು ನೇಮಿಸುವಂತೆ ಸೂಚಿಸಲಾಗಿದೆ.
ಇಲಾಖೆ, ಸರ್ಕಾರಿ ಸಿಬ್ಬಂದಿಗಳಾದಲ್ಲಿ ವಜಾ
ಅರ್ಧ ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು, ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿ ಮಂಡಳಿ ನಡೆಸುವ ಪರೀಕ್ಷೆಗಳ ಅವ್ಯವಹಾರದಲ್ಲಿ ಭಾಗಿಯಾಗುವ ಸರ್ಕಾರಿ ನೌಕರರನ್ನು ವಜಾಗೊಳಿಸಲಿದೆ. ಜತೆಗೆ, ಅಕ್ರಮಕ್ಕೆ ಸಹಕರಿಸಿದವರು ಖಾಸಗಿ ಶಾಲೆ ಹಾಗೂ ಇನ್ನಿತರ ವ್ಯಕ್ತಿಗಳಾಗಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ. ಈ ಕುರಿತು ಮಂಡಳಿ ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದೆ.
ಪರೀಕ್ಷಾ ಮಂಡಳಿ ಸುತ್ತೋಲೆ
ಕರ್ನಾಟಕ ಶಿಕ್ಷಣ (ತಿದ್ದುಪಡಿ) ಕಾಯ್ದೆ-2017ರ ಪ್ರಕಾರ ಪರೀಕ್ಷೆ ಅವ್ಯವಹಾರ ಪ್ರಕರಣಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಳ್ಳುವ ಸರ್ಕಾರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ಇತರ ಯಾವುದೇ ಸರ್ಕಾರಿ ಸಂಸ್ಥೆಯ ವ್ಯಕ್ತಿಗಳಾಗಿದ್ದರೆ ವಜಾಗೊಳಿಸಲಾಗುತ್ತದೆ. ಖಾಸಗಿ ಶಾಲೆಯ ಸಿಬ್ಬಂದಿ ಅಥವಾ ಪರೀಕ್ಷಾ ಅಕ್ರಮಗಳಲ್ಲಿ ಪಾಲ್ಗೊಳ್ಳುವವರು ಮತ್ತು ಇದಕ್ಕೆ ಸಹಕರಿಸುವವರು, ಪ್ರಚೋದಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಬಾಹ್ಯ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿರುವುದಾಗಿ ಮಂಡಳಿ ಹೇಳಿದೆ.