Child Line 1098: ಶಾಲೆ ಕಾಲೇಜುಗಳಲ್ಲಿ 1098 ಚೈಲ್ಡ್‌ಲೈನ್ ಫಲಕ ಕಡ್ಡಾಯ..
Child Line 1098: ಚೈಲ್ಡ್ ಲೈನ್ 1098- ಮಕ್ಕಳ ಹಕ್ಕುಗಳ ರಕ್ಷಣೆಗೆ ಒಂದು ಆಪದ್ಭಾಂಧವ, ತೊಂದರೆ, “ಹಿಂಸೆ, ಕಷ್ಟ, ಶೋಷಣೆ, ನೋವಿನಲ್ಲಿರುವ ಮಕ್ಕಳನ್ನು ರಕ್ಷಣಾ ವ್ಯವಸ್ಥೆಗಳಿಗೆ ಉಚಿತವಾಗಿ, ಸುಲಭವಾಗಿ ಮತ್ತು ವೇಗವಾಗಿ ಸಂಪರ್ಕಿಸುತ್ತಿರುವ ಅದ್ಭುತ ಸಹಾಯವಾಣಿ (ಟೆಲಿಫೋನ್) ಸಂಖ್ಯೆ 1098 (ಹತ್ತು ಒಂಭತ್ತು ಎಂಟು – ಮಕ್ಕಳಿಗೆ ಮತ್ತು ವಯಸ್ಕರಿಗೂ ಸುಲುಭವಾಗಿ ನೆನಪಿನಲ್ಲಿ ಉಳಿಯಲು ಈ ಸಂಖ್ಯೆಯನ್ನು ಹೀಗೆಯೇ ಹೇಳಬೇಕಿದೆ). ಕಳೆದ 25 ವರ್ಷಗಳಲ್ಲಿ ಚೈಲ್ಡ್‌ಲೈನ್ 1098 ಮೂಲಕ ಕೋಟ್ಯಂತರ ಮಕ್ಕಳು ರಕ್ಷಣೆ ಪಡೆದಿದ್ದಾರೆ ಮತ್ತು ಈಗಲೂ ಪಡೆಯುತ್ತಿದ್ದಾರೆ.
ಈ ಸಂಖ್ಯೆ ಕುರಿತು ಎಲ್ಲ ಮಕ್ಕಳಿಗೆ ತಿಳಿದಿರಬೇಕು. ಅಷ್ಟೇ ಅಲ್ಲ ಎಲ್ಲ ವಯಸ್ಕರಿಗೆ, ಅದರಲ್ಲೂ ಮಕ್ಕಳೊಡನೆ ಸದಾಕಾಲ ಇರುವವರಿಗೂ ತಿಳಿದಿರಬೇಕು. ಮಕ್ಕಳೊಡನೆ ದಿನದ ಅತಿ ಹೆಚ್ಚು ಕಾಲ ಇರುವವರೆಂದರೆ ಆದು ಶಾಲಾ ಕಾಲೇಜುಗಳ ಶಿಕ್ಷಕ ಶಿಕ್ಷಕಿಯರು, ಇವರೊಡನೆ ಇನ್ನೂ ಒಂದಷ್ಟು ಜನರಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಇತರ ಕೆಲಸಗಳನ್ನು ನಿರ್ವಹಿಸುವ ಆಡಳಿತ ಸಿಬ್ಬಂದಿ, ಸಹಾಯಕರುಗಳು, ಆಡಳಿತ ಮಂಡಳಿ (ಎಸ್.ಡಿ.ಎಂ.ಸಿ – ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ), ಇತ್ಯಾದಿ. ಇವರಿಗೂ ಮಕ್ಕಳೊಡನೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಂಬಂಧ ಇರುತ್ತದೆ. ಈ ಎಲ್ಲರೂ ಒಂದಲ್ಲಾ ಒಂದು ರೀತಿ ಮಕ್ಕಳ ಹಿತ ಕಾಪಾಡುವವರು, ರಕ್ಷಿಸುವವರು ಆಗಿದ್ದಾರೆ. ಇವರೆಲ್ಲರಿಗೂ ಚೈಲ್ಡ್‌ಲೈನ್ 1098 ಸಂಖ್ಯೆ ತಿಳಿದಿರಲೇಬೇಕು.
ಇತ್ತೀಚೆಗೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತೊಮ್ಮೆ ಸುತ್ತೋಲೆ ಹೊರಡಿಸಿ, ‘ಚೈಲ್ಡ್‌ಲೈನ್ 1098 ಸಂಖ್ಯೆಯನ್ನು ಶಾಲೆ ಕಾಲೇಜುಗಳ ಗೋಡೆಗಳ ಮೇಲೆ ಬರೆದು ವ್ಯಾಪಕ ಪ್ರಚಾರ ಮಾಡಬೇಕು., ಎಂದು ನಿರ್ದೇಶಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹವೂ-ಅಗತ್ಯವೂ ಆದ ಕ್ರಮವಾಗಿದೆ. ಇದನ್ನು ಸ್ವಲ್ಪ ಮುಂದುವರಿಸಿ 3 ಮಕ್ಕಳು ಸದಾಕಾಲ ಒಡನಾಡುವ ವಿದ್ಯಾರ್ಥಿ ನಿಲಯಗಳು/’ಹಾಸ್ಟೆಲ್, ಆಟದ ಮೈದಾನ, ಗ್ರಂಥಾಲಯಗಳು, ಇನ್ನೂ ಮುಂದಕ್ಕೆ ಆಲೋಚಿಸಿದರೆ, ತರಬೇತಿ ಕೇಂದ್ರಗಳು, ಪಾಠದ ಮನೆ / ಟ್ಯೂಷನ್ ಸೆಂಟರ್, ಅಥವಾ ಕೋಚಿಂಗ್ ಕೇಂದ್ರಗಳು, ಮಕ್ಕಳ ಪಾಲನಾ ನಿಲಯಗಳು, ರಿಯಾಲಿಟಿ ಶೋ ನಡೆಸುವ ಸ್ಟುಡಿಯೋಗಳು, ಇತ್ಯಾದಿಯಲ್ಲೂ ಈ ಅದ್ಭುತ ಸಂಖ್ಯೆಯನ್ನು ಬರೆಸಬೇಕು.
ಅದೇ ರೀತಿ ಮಕ್ಕಳು, ಪೋಷಕರು ಅತಿ ಹೆಚ್ಚು ಹೋಗುವ ಇನ್ನೊಂದಷ್ಟು ಸ್ಥಳಗಳೆಂದರೆ ಪುಸ್ತಕ, ಪೆನ್ನು, ಇತ್ಯಾದಿ ಕೊಳ್ಳುವ ಅಂಗಡಿಗಳು, ಶಾಲೆ ಕಾಲೇಜುಗಳಲ್ಲಿ ಇರುವ ಕ್ಯಾಂಟೀನ್, ಸಂಗೀತ, ನೃತ್ಯ, ಕಲೆ, ಇತ್ಯಾದಿ ಅಭ್ಯಾಸ ಮಾಡುವ ಕೇಂದ್ರಗಳು, ಮನೋರಂಜನಾ ಕೇಂದ್ರಗಳು, ಮಕ್ಕಳು ಓಡಾಡುವ ಬಸ್, ವ್ಯಾನ್, ಆಟೋಗಳು, ಇತ್ಯಾದಿಗಳಲ್ಲೂ ‘ಚೈಲ್ಡ್‌ಲೈನ್ 1098’ ಬರೆಸಲೇಬೇಕು.
ಈ ಚೈಲ್ಡ್‌ಲೈನ್ 1098 ಸಹಾಯವಾಣಿ ದಿನದ 24 ಗಂಟೆಯೂ, ಅಂದರೆ ಹಗಲು ಮತ್ತು ರಾತ್ರಿ ಜಾಗೃತವಾಗಿರುತ್ತದೆ. ಯಾರು ಬೇಕಾದರೂ ಮಕ್ಕಳಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಕುರಿತು ಇಲ್ಲಿಗೆ ಯಾವುದೇ ದೂರವಾಣಿ (ಮೊಬೈಲ್ ಮತ್ತು ಲ್ಯಾಂಡ್‌ಲೈನ್) ಮೂಲಕ ಯಾವುದೇ ಸಮಯದಲ್ಲಿ ಆವಶ್ಯಕತೆ ಬೀಳುತ್ತದೋ ಆಗ ಸಂಪರ್ಕಿಸಬಹುದು. ಎಲ್ಲಿಂದ ಕರೆ ಮಾಡಲಾಗಿದೆ ಮತ್ತು ಏನು ಸಮಸ್ಯೆ ಎನ್ನುವುದನ್ನು ಅಲ್ಲಿನ ಸಿಬ್ಬಂದಿ ತಿಳಿದುಕೊಂಡು ಆಯಾ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳ ಕಚೇರಿಗೆ ಇಲ್ಲವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ತಲುಪಿಸಿ ತಕ್ಷಣ ಕ್ರಮ ಕೈಗೊಳ್ಳಲು ಹೇಳುತ್ತಾರೆ.
ಸಂಬಂಧಿಸಿದ ಅಧಿಕಾರಿಗಳು ಸಹಾಯಕ್ಕೆ ಮುಂದಾಗುತ್ತಾರೆ. ಇದು ಮಕ್ಕಳ ಮೇಲೆ ಆಗುವ ದೈಹಿಕ, ಲೈಂಗಿಕ, ಮಾನಸಿಕ ಶೋಷಣೆ ಇರಬಹುದು, ಮಕ್ಕಳು ಭಿಕ್ಷೆ ಬೇಡುವುದು, ಬಾಲಕಾರ್ಮಿಕರು, ಬಾಲ್ಯವಿವಾಹ, ಮಕ್ಕಳ ಸಾಗಣೆ, ಮಾರಾಟದ ಸಾಧ್ಯತೆಗಳು, ಮಕ್ಕಳಿಗೆ ಸಿಗಬೇಕಾದ ಸೇವಾ ಸೌಲಭ್ಯಗಳಲ್ಲಿ ವ್ಯತ್ಯಯ, ಮಕ್ಕಳಿಗೆ ಮೋಸ ಮಾಡುವುದು, ಮಕ್ಕಳು ತಪ್ಪಿಸಿಕೊಳ್ಳುವುದು ಅಥವಾ ಕಳೆದು ಹೋಗುವುದು, ಮಕ್ಕಳನ್ನು ಮನೆ ಇತ್ಯಾದಿಗಳಿಂದ ಹೊರಕ್ಕೆ ಅಟ್ಟುವುದು/ಓಡಿಸುವುದು, ಮಕ್ಕಳನ್ನು ಯಾರಾದರೂ ಹಾರಿಸಿಕೊಂಡು/ಓಡಿಸಿಕೊಂಡು ಹೋಗುವುದು ಆಗಿರಬಹುದು.
ಇಷ್ಟೇ ಅಲ್ಲದೆ ಇಂದಿನ ದಿನಗಳಲ್ಲಿನ ದೊಡ್ಡ ಸಮಸ್ಯೆಯಾಗಿರುವ ಮೊಬೈಲ್ ತೊಂದರೆಗಳನ್ನು (ಪುಸಲಾಯಿಸುವುದು, ಹೆದರಿಸುವುದು, ಇತ್ಯಾದಿ) ಕುರಿತು ಕೂಡಾ ಚೈಲ್ಡ್‌ಲೈನ್ 1098ಗೆ ದೂರು ಕೊಡಬಹುದು ಮತ್ತು ಸಹಾಯ ಪಡೆಯಬಹುದು.
ಇಲ್ಲಿ ಒಂದು ವಿಚಾರ ಗಮನಿಸಿ: ಯಾರು ಟೆಲಿಫೋನ್ ಕರೆ ಮಾಡಿ ಮಾಹಿತಿ / ದೂರು ಕೊಟ್ಟಿದ್ದು ಎಂಬ ಮಾಹಿತಿಯನ್ನು ಚೈಲ್ಡ್‌ಲೈನ್ 1098 ಬಹಿರಂಗ ಮಾಡುವುದಿಲ್ಲ. ಈ ಚೈಲ್ಡ್‌ಲೈನ್ 1098 ಅನ್ನುವ ಕಲ್ಪನೆಯನ್ನು 1996ರಲ್ಲಿ ಮುಂದಿಟ್ಟವರು ಮುಂಬಯಿ ನಗರದಲ್ಲಿನ ಟಾಟಾ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನಲ್ಲಿ (TISS)ಸಮಾಜಕಾರ್ಯ ಸ್ನಾತಕೋತ್ತರ ಪದವಿ ವಿಭಾಗದ ಜೆರೂ ಬಿಲ್ಲಿಮೋರಿಯಾ, 1990ರ ದಶಕದಲ್ಲಿ ಬೀದಿಯ ಮೇಲೆ ವಾಸ ಮಾಡುವ ಮತ್ತು ಚಿಂದಿ ಆಯುವುದು, ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಬದುಕುತ್ತಿದ್ದ ಮಕ್ಕಳೊಡನೆ ಅವರ ಪುನರ್ವಸತಿಗಾಗಿ ಜೆರೂ ಕೆಲಸ ಮಾಡುತ್ತಿದ್ದರು.
ಈ ಮಕ್ಕಳಿಗೆ ಏನಾದರೂ ತೊಂದರೆ ಆದಾಗ ತುರ್ತಾಗಿ ‘ಜೆರೂ ಅಕ್ಕ’ನನ್ನು ಸಂಪರ್ಕಿಸಲು ಇದ್ದ ವ್ಯವಸ್ಥೆ ಜೆರೂ ಅವರ ಮನೆಯ ಟೆಲಿಫೋನ್. ಅದಕ್ಕೆ ಹಣ ಕೊಡಬೇಕಿತ್ತು. ಆಗ ಬಂದ ಚಿಂತನೆ ಈ ಟೆಲಿಫೊನ್ ಸಂಪರ್ಕ ಮಕ್ಕಳಿಗೆ ಉಚಿತವಾಗಿ ಸಿಗುವಂತಾದರೆ? ದಿನದ 24 ಗಂಟೆಯೂ ಕರೆ ಸ್ವೀಕರಿಸುವಂತಾದರೆ? ತೊಂದರೆಯಲ್ಲಿರುವ ಎಲ್ಲ ಮಕ್ಕಳಿಗೆ ಈ ಸೇವೆ ಸಿಗುವ ಕುರಿತು ಮಕ್ಕಳೊಡನೆ ನಡೆದ ಆಲೋಚನೆ ಆಗಿನ ಪೊಲೀಸ್, ದೂರಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಯಾಗಿ ‘ಚೈಲ್ಡ್‌ಲೈನ್ 1098’ ಆಗಿ ಬೆಳೆಯಿತು. ಈ ಪರಿಕಲ್ಪನೆ ಬೆಳೆಸಲು, ಎಲ್ಲೆಡೆ ವ್ಯಾಪಿಸಲು ಜೆರೂ ಬಿಲ್ಲಿಮೋರಿಯಾ ಅವರಿಗೆ ‘ಅಶೋಕಾ ಇನ್ನೋವೇಟರ್ಸ್ ಫಾರ್ ದ ಪಬ್ಲಿಕ್’ನ ಫೆಲೋಶಿಪ್ ಲಭಿಸಿತು.
1998-99ರಿಂದ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ಎನ್ನುವ ಸಂಸ್ಥೆ ಮತ್ತು ಭಾರತ ಸರ್ಕಾರದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಾಯದಿಂದ ಇಡೀ ಭಾರತದಲ್ಲಿ ವಿವಿಧ ಸ್ವಯಂಸೇವಾ ಸಂಘಟನೆಗಳ ಜೊತೆಯಾಗಿ ಕೆಲಸ ಆರಂಭಿಸಿತು. ಹಾಗೆಯೇ ಚೈಲ್ಡ್‌ಲೈನ್ 1098 ಎಂದರೆ ಮಕ್ಕಳಿಗೆ ಸಹಾಯ ಮಾಡುವ ತುರ್ತು ಸೇವೆ ಎಂದು ಮಕ್ಕಳ ನ್ಯಾಯ ಕಾಯಿದೆಯಲ್ಲೂ ಸ್ಪಷ್ಟ ಮಾಡಲಾಗಿದೆ. ಈಗ ಚೈಲ್ಡ್‌ಲೈನ್ 1098 ಸೇವೆಗಳನ್ನು ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಗಳು (DCPU)ಗಳು ನಿರ್ವಹಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಬಾಲ್ಯವಿವಾಹಗಳು, ಬಾಲಗರ್ಭಿಣಿಯರು, ಬಾಲಕಾರ್ಮಿಕರು, ಶಾಲೆಗಳಲ್ಲಿ ಮಕ್ಕಳು ಗೈರಾಗುವುದು, ಮಕ್ಕಳು ಕಣ್ಮರೆಯಾಗುವುದು, ಮಕ್ಕಳ ಮೇಲೆ ದೈಹಿಕ, ಲೈಂಗಿಕ ದೌರ್ಜನ್ಯಗಳು, ಮೋಸಗಳನ್ನು ಮನಗಂಡ ಕರ್ನಾಟಕ ಸರ್ಕಾರವು ಚೈಲ್ಡ್‌ಲೈನ್ 1098 ಕುರಿತು ಎಲ್ಲ ಮಕ್ಕಳಿಗೆ ತಿಳಿದಿರಬೇಕೆಂದು ಇನ್ನೊಂದು ನಿರ್ದೇಶನ ನೀಡಿದೆ.
ಕೇವಲ ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಮಾತ್ರವಲ್ಲ, ಈ ಸಂಖ್ಯೆಯನ್ನು ಶಾಲಾ ಕಾಲೇಜುಗಳ ವೆಬ್‌ಸೈಟ್‌ನಲ್ಲಿ, ಮಕ್ಕಳಿಗಾಗಿ ಸಿದ್ಧಪಡಿಸುವ ಪುಸ್ತಕಗಳು, ನೋಟ್ ಪುಸ್ತಕಗಳು ಹಾಗೂ ಎಲ್ಲಾ ಪುಟಗಳ ಕೆಳಭಾಗದಲ್ಲಿ ಲೇಬಲ್ ಮೇಲೆ ಮುದ್ರಿಸಬೇಕು ಎಂದು ನಿರ್ದೇಶಿಸಿದ್ದಾರೆ. ಹಾಗೆಯೇ ಬೆಳಗ್ಗೆ ಮಕ್ಕಳೆಲ್ಲರೂ ಸೇರುವ ಪ್ರಾರ್ಥನೆ ಸಮಯದಲ್ಲೂ ಚೈಲ್ಡ್‌ಲೈನ್ 1098 ಕುರಿತು ತಿಳಿಸಬೇಕು ಎಂದು ಹೇಳಲಾಗಿದೆ. ಇದು ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿದೆ. ಚೈಲ್ಡ್‌ಲೈನ್ 1098 ಸೇವೆಗಳನ್ನು ಕುರಿತು ಪ್ರಚಾರ ಮಾಡಲು ಹಿಂದೆ ಇದ್ದ ಲೋಗೋ ಲಾಂಛನವನ್ನು ಬದಲಿಸಿ ಹೊಸ ವಿನ್ಯಾಸವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಅದನ್ನು ಬಳಸುವುದು ಸೂಕ್ತ. ಎಲ್ಲ ಮಕ್ಕಳಿಗೆ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮತ್ತು ಪೋಷಕರಿಗೆ, ಶಾಲೆಗಳಿಗೆ ವಿವಿಧ ಕಾರಣಗಳಿಗಾಗಿ ಬರುವವರಿಗೆ, ಆಡಳಿತ ಮಂಡಳಿ ಸದಸ್ಯರು ಎಲ್ಲರಿಗೂ ‘ಶಾಲಾ ಮಕ್ಕಳ ರಕ್ಷಣಾ ನೀತಿ’ ತಿಳಿದಿರಬೇಕು ಮತ್ತು ಚೈಲ್ಡ್‌ಲೈನ್ 1098 ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಅರಿವು ಇರಲೇಬೇಕು. ಚೈಲ್ಡ್‌ಲೈನ್ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿದಿಲ್ಲದಿದ್ದರೆ ಈಗಲೇ ಕರೆ ಮಾಡಿ ಪರಿಚಯ ಮಾಡಿಕೊಳ್ಳಿ. ಬನ್ನಿ ಉಚಿತ ದೂರವಾಣಿ ಸಹಾಯ ಸಂಖ್ಯೆ ‘ಚೈಲ್ಡ್‌ಲೈನ್ ಹತ್ತು ಒಂಭತ್ತು ಎಂಟು -1098 ಕುರಿತು ಮಾತನಾಡೋಣ, ಪ್ರಕಟಿಸೋಣ ಮತ್ತು ವ್ಯಾಪಕ ಪ್ರಚಾರ ಕೊಡೋಣ. “ಎಲ್ಲ ಮಕ್ಕಳಿಗೆ ಎಲ್ಲ ಹಕ್ಕುಗಳು’ ಎನ್ನುವುದನ್ನು ಖಾತರಿ ಪಡಿಸೋಣ.
