Civil Judge Post: ಸಿವಿಲ್ ನ್ಯಾಯಾಧೀಶರ ಹುದ್ದೆಗೆ 3 ವರ್ಷ ವಕೀಲ ವೃತ್ತಿ ಕಡ್ಡಾಯ.
Civil Judge Post: ನ್ಯಾಯಾಂಗ ಸೇವೆ ಪರೀಕ್ಷೆ ಬರೆಯಲು ಮೂರು ವರ್ಷಗಳ ಕಾನೂನು ವೃತ್ತಿ (ವಕೀಲಿಕೆ) ಕೈಗೊಳ್ಳುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆರಂಭಿಕ ಹಂತದ ಹುದ್ದೆಗಳ ಪರೀಕ್ಷೆ ಬರೆಯುವವರಿಗೂ ಕಾನೂನು ವೃತ್ತಿಯ ಅನುಭವ ಕಡ್ಡಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Civil Judge Post: ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಕಾನೂನು ಸೇವಾ ಹುದ್ದೆಗಳ ಆಕಾಂಕ್ಷೆಗಳ ಮೇಲೆ ಭಾರಿ ಪರಿಣಾಮ ಉಂಟು ಮಾಡಲಿದೆ ಎಂದೇ ವಿಶ್ಲೇಷಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾ. ಅಗಸ್ಟೀನ್ ಜಾರ್ಜ್ ಅವರನ್ನು ಒಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರಾಗುವವರಿಗೆ ನ್ಯಾಯಾಂಗ ಕಲಾಪದ ಅರಿವಿರಬೇಕು ಎಂಬುದರ ಮಹತ್ವವನ್ನು ಎತ್ತಿ ಹಿಡಿದಿದೆ.
ಹೊಸದಾಗಿ ಕಾನೂನು ಪದವಿ ಪಡೆದು ಬಂದವರನ್ನು ನೇಮಕಾತಿ ಮಾಡಿಕೊಳ್ಳುವುದರಿಂದ ಹಲವಾರು ಸಂಕಷ್ಟಗಳು ಎದುರಾಗಿವೆ. ಹಲವು ಹೈಕೋರ್ಟ್‌ಗಳು ಇದನ್ನು ಗಮನಕ್ಕೆ ತಂದಿವೆ. ನ್ಯಾಯಾಂಗ ದಕ್ಷತೆ ಹಾಗೂ ಸ್ಪರ್ಧಾತ್ಮಕತೆ ಹೊಂದಲು ಕಾನೂನು ವೃತ್ತಿಯ ಅನುಭವ ಹೊಂದುವುದು ಅಗತ್ಯ ಎಂದು ಸಿಜಿಐ ಗವಾಯಿ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತ ನ್ಯಾಯಾಧೀಶರ ಸಂಘದ ಮನವಿ: ಅಖಿಲ ಭಾರತ ನ್ಯಾಯಾಧೀಶರ ಸಂಘದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಹೊಸಬರನ್ನು ನ್ಯಾಯಾಧೀಶರ ಹುದ್ದೆಗೆ ನೇಮಿಸಿಕೊಂಡ ಪರಿಣಾಮ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಹಲವು ಉಚ ನ್ಯಾಯಾಲಯಗಳು ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ್ದವು.
158 ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಸಿಗಲಿದೆ ಚಾಲನೆ:
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ರಾಜ್ಯದಲ್ಲಿ 158 ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ. ಕಳೆದ ಫೆಬ್ರವರಿಯಲ್ಲಿ ನ್ಯಾಯಾಧೀಶರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಕಾನೂನು ಪದವೀಧರರಾಗಿದ್ದು, ಆಯಾ ಮೀಸಲಾತಿಗೆ ಅನ್ವಯಿಸುವ ವಯೋಮಿತಿಯೊಳಗಿದ್ದವರು ಅರ್ಜಿ ಸಲ್ಲಿಸಬಹುದಾಗಿತ್ತು.