Crop Loan:ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ 5 ಲಕ್ಷ ಬೆಳೆ ಸಾಲದ ಬಗ್ಗೆ
Crop Loan:
ಪ್ರಶ್ನೆ:
ಅ) ಕಳೆದ ಆಯ-ವ್ಯಯ ಮಂಡನೆ ಸಂದರ್ಭದಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲದ ಮಿತಿಯನ್ನು ರೂ.3 ಲಕ್ಷದಿಂದ ರೂ. 5 ಲಕ್ಷಕ್ಕೆ ಏರಿಸಲಾಗಿದೆ. ಹೆಚ್ಚುವರಿ ಮಾಡಿರುವ ಸದರಿ ರೂ.5 ಲಕ್ಷಗಳ ಸಾಲದ ಮೊತ್ತವನ್ನು ಇದುವರೆಗೆ ಎಷ್ಟು ವಿತರಣೆ ಮಾಡಲಾಗಿದೆ?
ಉತ್ತರ: 2023-24ನೇ ಸಾಲಿನ ಆಯವ್ಯಯ ಮಂಡನೆ ಸಂದರ್ಭದಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲದ ಮಿತಿಯನ್ನು ರೂ.3.00 ಲಕ್ಷದಿಂದ ರೂ.5.00 ಲಕ್ಷಕ್ಕೆ ಏರಿಸಲಾಗಿದ್ದು, ಈ ಮಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 2023-24 ನೇ ಸಾಲಿನಲ್ಲಿ 6,744 ರೈತರಿಗೆ ರೂ.290.51 ಕೋಟಿ ಮತ್ತು 2024-25 ನೇ ಸಾಲಿನಲ್ಲಿ ದಿನಾಂಕ:28-02-2025 ರವರೆಗೆ 13,689 ರೈತರಿಗೆ ರೂ.589.12 ಕೋಟಿ ಮೊತ್ತದ ಸಾಲ ವಿತರಿಸಿರುತ್ತವೆ.ಜಿಲ್ಲಾವಾರು ಸಾಲದ ಮಾಹಿತಿಯನ್ನು ಅನುಬಂಧದಲ್ಲಿ ನೀಡಲಾಗಿದೆ.
ಆ) ಸಂಬಂಧಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹೆಚ್ಚುವರಿ ಮಾಡಿರುವ ರೂ.5 ಲಕ್ಷ ಸಾಲದ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡುತ್ತಿಲ್ಲದಿರುವುದು ಕಂಡು ಬಂದಿದ್ದು ಅದಕ್ಕೆ ಕಾರಣಗಳೇನು? ಹಾಗೂ ಈ ಬಗ್ಗೆ ಸರ್ಕಾರ ಇದುವರೆಗೆ ಕೈಗೊಂಡ ಕ್ರಮವೇನು?
ಉತ್ತರ: ರಾಜ್ಯದ 10 ಕೃಷಿ ವಲಯಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಪ್ರತಿ ಬೆಳೆಗೆ ನಿಗದಿಪಡಿಸಿದ ಸ್ಟೇಲ್ ಆಫ್ ಫೈನಾನ್ಸ್ ಮಿತಿ, ರೈತರು ಹೊಂದಿರುವ ಭೂ ಹಿಡುವಳಿ ಹಾಗೂ ಬೆಳೆಯುವ ಬೆಳೆ ಆಧರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಗರಿಷ್ಠ ಸಾಲದ ಮಿತಿಯನ್ನು (ಕ್ರಮಿಕ ಪತ್ತಿನ ಮಿತಿ) ನಿಗದಿಪಡಿಸಿದ್ದು ಇದರನ್ವಯ 1,73,449 ರೈತರು ರೂ.3.00 ಲಕ್ಷದಿಂದ ರೂ.5.00 ಲಕ್ಷಗಳವರೆಗಿನ ಬೆಳೆ ಸಾಲ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಈ ಪೈಕಿ ದಿನಾಂಕ:28-02-2025 ರವರೆಗೆ : 13,689 ರೈತರಿಗೆ ರೂ.589.12 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ. ಈ ಕೆಳಕಂಡ ಕಾರಣಗಳಿಂದಾಗಿ ಸಾಲ ವಿತರಣೆ ಪ್ರಮಾಣ ಕಡಿಮೆಯಾಗಿರುತ್ತದೆ.
1. ನಬಾರ್ಡ್ ನಿಯಮದಂತೆ ಜಿಲ್ಲಾ ಕೇಂದ್ರ ಸಹಕಾರ ಕೇಂದ್ರ ಬ್ಯಾಂಕುಗಳು ಕಳೆದ ಮೂರು ವರ್ಷಗಳಲ್ಲಿ ವಿತರಣೆ ಮಾಡಿದ ಸರಾಸರಿ ಸಾಲದ ಆಧಾರವಾಗಿ ತಯಾರಿಸಬೇಕಾದ RLP (Realistic Lending Programme) ಗೆ ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ಶೇ.40 ರಷ್ಟು ಮತ್ತು ಹೆಚ್ಚಿನ ಬಡ್ಡಿ ದರದಲ್ಲಿ ಶೇ.60 ರಷ್ಟು ಮಾತ್ರ ಪುನರ್ಧನವನ್ನು ನೀಡಲು ನೀತಿ ಇದ್ದು, ಉಳಿದ ಬಂಡವಾಳವನ್ನು ಡಿಸಿಸಿ ಬ್ಯಾಂಕುಗಳು ತನ್ನ ಸಂಪನ್ಮೂಲದಿಂದಲೇ ಭರಿಸಬೇಕಿದ್ದು, ಬಂಡವಾಳದ ಕೊರತೆಯಾಗಿರುತ್ತದೆ.
2. ನಬಾರ್ಡ್ ಸಂಸ್ಥೆ ಶೇ.40 ರಷ್ಟು ಪ್ರಮಾಣದಲ್ಲಿ ನೀಡಬೇಕಾದ ರಿಯಾಯಿತಿ ಬಡ್ಡಿ ದರದ ಮಿತಿಯನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬಂದಿರುತ್ತದೆ. ನಬಾರ್ಡ್ ಸಂಸ್ಥೆ 2024-25ನೇ ಸಾಲಿನಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ಕಳೆದ ವರ್ಷದಲ್ಲಿ ಇದ್ದ ರೂ.5600 ಕೋಟಿಗಳಿಂದ ಪ್ರಾರಂಭದಲ್ಲಿ ರೂ. 2340.00 ಕೋಟಿಗಳಿಗೆ ನಿಗದಿಮಾಡಿ, ನಂತರ ರೂ.896.11 ಕೋಟಿಗಳ ಹೆಚ್ಚುವರಿ ಮಿತಿಯನ್ನು ನೀಡಿದ್ದು, ರೂ.2363.89 ಕೋಟಿ ಕಡಿಮೆಯಾಗಿರುತ್ತದೆ.
3. ಪ್ರತಿ ವರ್ಷ ಹೊಸ ಸದಸ್ಯರೂ ಸಹ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದು, ಡಿಸಿಸಿ ಬ್ಯಾಂಕುಗಳು ಈ ಹೊಸ ರೈತರಿಗೆ ಪ್ರಥಮ ಆದ್ಯತೆ ನೀಡಿ ರೂ.3.00 ಲಕ್ಷದವರೆಗೆ ಸಾಲ ವಿತರಿಸುತ್ತಿದ್ದು, ರೂ.3.00 ಲಕ್ಷಕ್ಕಿಂತ ಹೆಚ್ಚಿನ ಮಿತಿಗೆ ನಂತರದ ಆದ್ಯತೆ ನೀಡಲಾಗುತ್ತಿದೆ.
ನಬಾರ್ಡ್ ಪುನರ್ಧನದ ಮಿತಿಯನ್ನು ಹೆಚ್ಚಿಸುವಂತೆ ಮತ್ತು ಡಿಸಿಸಿ ಬ್ಯಾಂಕುಗಳ ಬಂಡವಾಳದ ಮಿತಿಯನ್ನು ಹೆಚ್ಚಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.
1. ರಿಯಾಯಿತಿ ಬಡ್ಡಿ ದರದ (ಶೇ.4.50) ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್‌ಗೆ ಸೂಚಿಸಲು ವಿತ್ತೀಯ ಸಚಿವರು, ಕೇಂದ್ರ ಸರ್ಕಾರ ಮತ್ತು ಮಾನ್ಯ ಪ್ರಧಾನ ಮಂತ್ರಿಗಳಿಗೆ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಿಂದ ದಿನಾಂಕ:14-11-2024 ರಂದು ಪತ್ರ ಬರೆಯಲಾಗಿದೆ.
ಕೇಂದ್ರ ವಿತ್ತ ಸಚಿವರು, ಕೇಂದ್ರ ಸರ್ಕಾರ ರವರು ನಬಾರ್ಡ್‌ನಲ್ಲಿ ಮಾರುಕಟ್ಟೆ ದರ ಆಧಾರಿತ ಹೆಚ್ಚಿನ ಬಡ್ಡಿ ದರದ ಪುನರ್ಧನವು ಲಭ್ಯವಿರುವುದಾಗಿ ದಿನಾಂಕ:20-11-2024 ರ ಪತ್ರದ ಮೂಲಕ ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ನಬಾರ್ಡ್ ರೂ.896.11 ಕೋಟಿಗಳ ಹೆಚ್ಚುವರಿ ಮಿತಿಯನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡಿರುತ್ತದೆ.
2. ಡಿಸಿಸಿ ಬ್ಯಾಂಕುಗಳ ಬಂಡವಾಳವನ್ನು ಹೆಚ್ಚಿಸಲು ಜಿಲ್ಲೆಯ ಸಹಕಾರ ಸಂಘಗಳು ಹೊಂದಿರುವ ಮೀಸಲು ನಿಧಿಯನ್ನು ಕಡ್ಡಾಯವಾಗಿ ಡಿಸಿಸಿ ಬ್ಯಾಂಕುಗಳಲ್ಲಿಯೇ ವಿನಿಯೋಗಿಸಲು ಸುತ್ತೋಲೆ ನೀಡಲಾಗಿದೆ.
3. ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಕೃಷಿ ಮಾರುಕಟ್ಟೆ ಸಮಿತಿಗಳು ಹೊಂದಿರುವ ಹೆಚ್ಚುವರಿ ನಿಧಿಯನ್ನು ಡಿಸಿಸಿ ಬ್ಯಾಂಕುಗಳಲ್ಲಿ ವಿನಿಯೋಗಿಸುವಂತೆ ಮನವೊಲಿಸಲಾಗುತ್ತಿದೆ.
4. ಸರ್ಕಾರದಿಂದ ರೈತರ ಪರವಾಗಿ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಬೇಕಾದ ಬಡ್ಡಿ ಸಹಾಯಧನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲು ಕ್ರಮವಹಿಸಲಾಗಿದ್ದು, ಮಾರ್ಚ್-2024 ರ ಅಂತ್ಯದ ಎಲ್ಲಾ ಬಿಲ್ಲುಗಳನ್ನು ಪಾವತಿಸಲಾಗಿದೆ.
ಪ್ರಶ್ನೆ: ಯಾವ ಕಾಲಮಿತಿಯೊಳಗೆ, ಸದರಿ ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಬೆಳೆ ಸಾಲದ ಏರಿಕೆ ಮಾಡಿರುವ ಹೆಚ್ಚುವರಿ ಹಣವು ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಸೂಕ್ತ ಕ್ರಮವಹಿಸಲಾಗುವುದೆ?
ಉತ್ತರ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಸಂಘಗಳು ತಯಾರಿಸಿರುವ ಕ್ರಮಿಕ ಪತ್ತು ಮಿತಿಯನ್ವಯ ಏರಿಕೆ ಮಾಡಿರುವ ಹೆಚ್ಚುವರಿ ಹಣವು ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲ ವಿತರಿಸಲು ರೂ.79,237.02 ಕೋಟಿಗಳ ಬಂಡವಾಳದ ಅವಶ್ಯಕತೆ ಇರುತ್ತದೆ.
ಹೊಸದಾಗಿ ಸೇರ್ಪಡೆಯಾಗುವ ರೈತರ ಬೇಡಿಕೆ, ನಬಾರ್ಡ್ ಮತ್ತು ಡಿಸಿಸಿ ಬ್ಯಾಂಕುಗಳ ಬಂಡವಾಳ ಆಧರಿಸಿ ಪ್ರತಿ ವರ್ಷ ಶೇ.10 ರಿಂದ ಶೇ.20 ರಷ್ಟು ಪ್ರಮಾಣದಲ್ಲಿ ಮಾತ್ರ ಹೆಚ್ಚುವರಿ ಸಾಲವನ್ನು ವಿತರಿಸಲು ಸಹಕಾರ ಸಂಘಗಳು ಸಶಕ್ತವಾಗಿರುತ್ತವೆ. ಇದರ ಆಧಾರದ ಮೇಲೆ 2024-25 ನೇ ಸಾಲಿಗೆ 35.10 ಲಕ್ಷ ರೈತರಿಗೆ ರೂ.25,000 ಸಾವಿರ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ಈ ಮಿತಿಯನ್ನು ಇದೇ ವರ್ಷದಲ್ಲಿ ತಲುಪಲು ಕ್ರಮವಹಿಸಲಾಗಿದೆ.