Family planning: ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳನ್ವಯ ವಿಶೇಷ ವೇತನ ಬಡಿ ಮಂಜೂರಾತಿ ಕುರಿತು ಸ್ಪಷ್ಟೀಕರಣ
Family planning: 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಜಾರಿಗೆ ಬಂದಿರುವ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ.
ಈ ವೇತನ ಶ್ರೇಣಿಗಳಲ್ಲಿ ವೇತನ ನಿಗಧಿಕರಣವನ್ನು ದಿನಾಂಕ:1.7.2022 ರಿಂದ ಮಾಡಲು ಅವಕಾಶವಿರುವುದಾಗಿದೆ. ಅಲ್ಲದೇ ದಿನಾಂಕ:1.7.2022 ರಿಂದ 31.7.2024 ರವರೆಗಿನ ಅವಧಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವೇತನ ನಿಗದಿಯಿಂದಾಗಿ ಅಥವಾ ಪುನರ್ನಿಗಧಿಯಿಂದಾಗಿ ವೇತನ ಮತ್ತು ಭತ್ಯೆಗಳನ್ನು ಮತ್ತು ನಿವೃತ್ತಿ ವೇತನದ ಹೆಚ್ಚಳಕ್ಕೆ ಯಾವುದೇ ಸರ್ಕಾರಿ ನೌಕರನು ಅರ್ಹನಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ದಿನಾಂಕ:1.7.2022 ರಿಂದ 31.7.2024ರ ಅವಧಿಯಲ್ಲಿ ಮಿತ ಕುಟುಂಬ ಯೋಜನಾ ಕ್ರಮವನ್ನು ಅಳವಡಿಸಿಕೊಂಡ ಪ್ರಕರಣಗಳಲ್ಲಿ ವೈಯಕ್ತಿಕ ವೇತನ ರೂಪದಲ್ಲಿ ನೀಡಲಾಗುವ ವಿಶೇಷ ವೇತನ ಬಡ್ತಿಯನ್ನು 2024ರ ರಾಜ್ಯ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಲಭ್ಯವಾಗುವ ವಾರ್ಷಿಕ ವೇತನದ ಬಡ್ತಿಯ ದರದಲ್ಲಿ ದಿನಾಂಕ:1.7.2022 ರಿಂದ ಜಾರಿಗೆ ಬರುವಂತೆ ಕಾಲ್ಪನಿಕವಾಗಿ ನೀಡತಕ್ಕದಾಗಿರುತ್ತದೆ.
ದಿನಾಂಕ:1.7.2022 ರಿಂದ 31.7.2024 ರವರೆಗಿನ ಅವಧಿಗೆ ಪರಿಷ್ಕೃತ ಶ್ರೇಣಿಯಲ್ಲಿನ ವಿಶೇಷ ವೇತನ ಬಡ್ತಿ ಮಂಜೂರಾತಿಯಿಂದ ಉಂಟಾದ ಆರ್ಥಿಕ ಹೆಚ್ಚಳಕ್ಕೆ ಸರ್ಕಾರಿ ನೌಕರರು ಅರ್ಹರಾಗಿರುವುದಿಲ್ಲ. ಈ ಅವಧಿಯಲ್ಲಿ ಪರಿಷ್ಕರಣೆಯ ಪೂರ್ವದ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿದ ವೇತನ ಬಡ್ತಿಯಂತೆ ಆರ್ಥಿಕ ಲಾಭವನ್ನು ಪಡೆಯಲು ಸರ್ಕಾರಿ ನೌಕರರು ಅರ್ಹರಿರುತ್ತಾರೆ.
ಆದರೆ, ಈ ಯೋಜನೆಯಲ್ಲಿ ಮಂಜೂರು ಮಾಡುವ ವೈಯಕ್ತಿಕ ವೇತನ ಬಡ್ತಿ ದರದ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ. ಉಳಿದಂತೆ ಈ ಸೌಲಭ್ಯ ಪಡೆಯುವ ನೌಕರರು ದಿನಾಂಕ:1.10.1985ರ ಸರ್ಕಾರಿ ಆದೇಶ ಸಂಖ್ಯೆ: ಆಇ 27 ಎಸ್ಆರ್ಎಸ್ 1985 ಹಾಗೂ ಈ ಸಂಬಂಧ ಕಾಲಕಾಲಕ್ಕೆ ಹೊರಡಿಸಿರುವ ಆದೇಶ/ಸುತ್ತೋಲೆ/ಸೇರ್ಪಡೆ ಆದೇಶ ಮುಂತಾದವುಗಳಲ್ಲಿ ನಿಗಧಿಪಡಿಸಿರುವ ಎಲ್ಲಾ ಷರತ್ತು ಮಾರ್ಗಸೂಚಿಗಳನ್ನು ಪೂರೈಸಿರಬೇಕೆಂಬುದನ್ನು ಈ ಮೂಲಕ ಸ್ಪಷ್ಟಪಡಿಸಿದೆ.

