Ganita Ganaka Programme-2025: ಗಣಿತ ಗಣಕ ಯೋಜನೆ: ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ಕಾರದ ವಿನೂತನ ಯೋಜನೆ
Ganita Ganaka Programme-2025: 2024-25ನೇ ಸಾಲಿನ ಆಯವ್ಯಯ ಭಾಷಣದ ಘೋಷಣೆಯಂತೆ ‘ಗಣಿತ ಗಣಕ”” ಕಾರ್ಯಕ್ರಮವನ್ನು 17 ಜಿಲ್ಲೆಗಳ 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ 14,711 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 3 ರಿಂದ 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6,99,705 ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಗೆ ಆಸಕ್ತಿ ಅಭಿವೃದ್ಧಿಸಿ ಶಿಕ್ಷಕರು ಶಾಲಾ ಅವಧಿಯ ನಂತರ ಪೋನ್ ಕರೆಯ ಮೂಲಕ (ರಿಮೋಟ್ ಟ್ಯೂಟರಿಂಗ್) ವಿದ್ಯಾರ್ಥಿಗಳಿಗೆ ಪೋಷಕರನ್ನು ತೊಡಗಿಸಿಕೊಂಡು ಗಣಿತದ ಮೂಲ ಕ್ರಿಯೆಗಳನ್ನು ವೃದ್ಧಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದ ಯಶಸ್ಸು ಹಾಗೂ ಪರಿಣಾಮಕತೆಯನ್ನು ಪರಿಗಣಿಸಿ, ಇದರಿಂದ ಪೋಷಕರಿಂದ ವ್ಯಕ್ತವಾದ ಶಿಕ್ಷಕರ ಕಾಳಜಿ ಕಾರ್ಯಕ್ರಮದ ಧನಾತ್ಮಕ ಅಂಶಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಕರು ತಮ್ಮ ಕಲಿಕೆಯ ಬಗ್ಗೆ ಕಾಳಜಿವಹಿಸುತ್ತಿರುವುದು ಕಲಿಕೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆಯನ್ನು ಒದಗಿಸುತ್ತದೆ.
ಈ ಹಿನ್ನೆಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ “ಗಣಿತ ಗಣಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಮಗ್ರ ಶಿಕ್ಷಣ ಕರ್ನಾಟಕ ಪ್ರಸ್ತಾಪಿಸಿತ್ತು. 3 ರಿಂದ 5ನೇ ತರಗತಿಗಳ ಹಂತದಲ್ಲಿ ವಿದ್ಯಾರ್ಥಿಗಳು ಮೂಲ ಪರಿಕಲ್ಪನೆಗಳನ್ನು ಸಾಧಿಸಿ, ಮುಂದಿನ ಎಲ್ಲಾ ಹಂತದ ಶಿಕ್ಷಣ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಉತ್ತಮ ಸಾಧನೆ ಪ್ರದರ್ಶಿಸುವಂತೆ ಮಾಡುವುದು, ಪೋಷಕರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ 111(iii) ರಲ್ಲಿ ಈ ಕೆಳಕಂಡಂತೆ ಘೋಷಿಸಲಾಗಿರುತ್ತದೆ;
“ಗಣಿತ ಗಣಕ ಕಾರ್ಯಕ್ರಮದಡಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಮೂಲಕ ವೈಯಕ್ತಿಕ ಬೋಧನೆಯೊಂದಿಗೆ ಬುನಾದಿ ಗಣಿತ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ವಿಸ್ತರಿಸುವುದು.”
ಮೇಲೆ ಓದಲಾದ ಕ್ರಮಾಂಕ (2)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಈ ಮುಂದಿನಂತೆ ಪ್ರಸ್ತಾಪಿಸಿರುತ್ತಾರೆ. ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ 2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5ನೇ ತರಗತಿಗಳಲ್ಲಿ ಓದುತ್ತಿರುವ ಸುಮಾರು 13,51,642 ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಅಭಿವೃದ್ಧಿಸಿ ಮೂಲ ಗಣಿತ ಪರಿಕಲ್ಪನೆಗಳನ್ನು ಶಾಲಾ ಅವಧಿಯ ನಂತರ ಶಿಕ್ಷಕರಿಂದ ಮಕ್ಕಳಿಗೆ ಪೋನ್ ಕರೆ ಮೂಲಕ (ರಿಮೋಟ್ ಟ್ಯೂಟರಿಂಗ್) ಅರ್ಥೈಸಲಾಗುವುದು. ಸದರಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ ಶಿಕ್ಷಕರಲ್ಲಿ ಅಗತ್ಯ ಕೌಶಲ್ಯಗಳನ್ನು ವ್ಯದ್ಧಿಸಲಾಗುವುದು.
ಈ ಸಂಬಂಧ 1, 2 ಮತ್ತು 3ನೇ ತರಗತಿಗಳಿಗೆ ನಲಿ-ಕಲಿ ಪದ್ಧತಿ ಜಾರಿಯಲ್ಲಿರುವುದರಿಂದ ತರಗತಿವಾರು ಕಲಿಕಾ ಫಲಗಳನ್ನು ಸಾಧಿಸದೆ ಕಲಿಕಾ ನ್ಯೂನ್ಯತೆ ಇರುವುದು ಕಳೆದ 5 ವರ್ಷಗಳಿಂದ ASER ಮತ್ತು NAS ಸಮಿಕ್ಷೇಯಲ್ಲಿ ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಪರಿಹಾರವಾಗಿ ಬೋಧನೆಯ ಅತ್ಯಗತ್ಯವಿರುತ್ತದೆ.
ಕಾರ್ಯಕ್ರಮ ವೆಚ್ಚದ ವಿವರ:

ರಾಜ್ಯಾದ್ಯಂತ ಎಲ್ಲಾ 38,548 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಮಾರು 13,51,642 ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿ ಆಸಕ್ತಿ ಹಾಗೂ ಮೂಲ ಕ್ರಿಯೆಗಳ ಕೌಶಲ್ಯವನ್ನು ಶಿಕ್ಷಕರು ಶಾಲಾ ಅವಧಿಯ ನಂತರ ಪೋನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ವೃದ್ಧಿಸಲು ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿ-ಪಾಲ್, ಅಲೋಕಿಟ್ ಮತ್ತು ಯೂತ್ ಇಂಪ್ಯಾಕ್ಟ್ ಸಂಸ್ಥೆಗಳ ಸಹಯೋಗದೊಂದಿಗೆ “ಗಣಿತ ಗಣಕ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಸುಮಾರು 75,000 ಶಿಕ್ಷಕರಿಗೆ ಶಾಲಾ ಅವಧಿಯ ನಂತರ ಫೋನ್ ಕರೆ ಮಾಡಲು (ರಿಮೋಟ್ ಟ್ಯೂಟರಿಂಗ್) ಪ್ರತಿ ಶಿಕ್ಷಕರಿಗೆ ರೂ.800/- ಸಹಾಯಧನವನ್ನು ಒಟ್ಟು ರೂ.600.00 ಲಕ್ಷಗಳ ಮೊತ್ತದಲ್ಲಿ ಅನುಷ್ಠಾನಗೊಳಿಸುವುದಾಗಿ ಪ್ರಸ್ತಾಪಿಸಿರುತ್ತಾರೆ. ಹಾಗೂ ಪ್ರಸ್ತಾಪಿಸಲಾದ ಮೊತ್ತವನ್ನು 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಪಿ.ಎ.ಬಿ ಅನುಮೋದಿತ ‘ಎಲಿಮೆಂಟರಿ ಟಿ.ಎಲ್.ಎಂ’ ಉಪಕ್ರಮದ ಅಡಿಯಲ್ಲಿ ಒದಗಿಸುವ ಅನುದಾನದಡಿ ಅನುಮೋದನೆಯಾಗಿರುವ ಅನುದಾನಗಳಿಂದ ಭರಿಸಬಹುದಾಗಿದೆ ಎಂದು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ತಿಳಿಸಿರುತ್ತಾರೆ.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.
ಆದೇಶದ ವಿವರ:
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5ನೇ ತರಗತಿಗಳಲ್ಲಿ ಓದುತ್ತಿರುವ ಸುಮಾರು 13,51,642 ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಅಭಿವೃದ್ಧಿಸಿ ಮೂಲ ಗಣಿತ ವಿಷಯ ಪರಿಕಲ್ಪನೆಗಳನ್ನು ಶಿಕ್ಷಕರಿಂದ ಮಕ್ಕಳಿಗೆ ಶಾಲಾ ಅವಧಿಯ ನಂತರ ಪೋನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ಅರ್ಥೈಸುವುದು ಮತ್ತು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು, ಕಾರ್ಯಕ್ರಮದ ಆಯೋಜನೆಗೆ ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ ಶಿಕ್ಷಕರಲ್ಲಿ ಅಗತ್ಯ ಕೌಶಲ್ಯಗಳನ್ನು ವೃದ್ಧಿಸಿ ಕಾರ್ಯಕ್ರಮವನ್ನು ನಿರ್ವಹಿಸುವುದು.
ಸುಮಾರು 75,000 ಶಿಕ್ಷಕರಿಗೆ ತಲಾ ರೂ.800/- ರಂತೆ ಶಾಲಾ ಅವಧಿಯ ನಂತರ ಪೋನ್ ಕರೆಗಾಗಿ (ರಿಮೋಟ್ ಟ್ಯೂಟರಿಂಗ್) ತಗಲುವ ಒಟ್ಟು ರೂ.600.00 ಲಕ್ಷಗಳ ವೆಚ್ಚವನ್ನು ಲೆಕ್ಕ ಶೀರ್ಷಿಕ 2202-02-107-0-06ರಡಿ ಒದಗಿಸಿರುವ ರೂ.400.00 ಲಕ್ಷಗಳು ಹಾಗೂ ರೂ.200 ಲಕ್ಷಗಳನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಪಿ.ಎ.ಬಿ ಅನುಮೋದನೆಯಂತೆ ‘ಎಲಿಮೆಂಟರಿ ಟಿ.ಎಲ್.ಎಂ’ ಉಪಕ್ರಮದ ಅಡಿಯಲ್ಲಿ ಭರಿಸಿ, ಮುಂದುವರೆದು, ಕಾರ್ಯಕ್ರಮ ಅನುಷ್ಠಾನದಲ್ಲಿ ಪಾಲ್ಗೊಳ್ಳುವ ಸುಮಾರು 75,000 ಶಿಕ್ಷಕರಿಗೆ ಪೋನ್ ಕರೆ ಮಾಡಲು (ರಿಮೋಟ್ ಟ್ಯೂಟರಿಂಗ್) ಅರ್ಹತೆಯಂತೆ ತಲಾ ರೂ.300/- ಸಹಾಯಧನವನ್ನು Karnataka Direct Benefit Transfer (DBT) Portal ಮುಖಾಂತರ ನೇರ ನಗದು ವರ್ಗಾವಣೆ (DBT) ಮೂಲಕ ಆಧಾರ್ ಜೋಡಣೆಯಾಗಿರುವ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಖಜಾನೆ-2ಯಿಂದ ವರ್ಗಾಯಿಸಲು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ರವರಿಗೆ ಅನುಮತಿ ನೀಡಿ ಆದೇಶಿಸಿದೆ.
ಕಾರ್ಯಕ್ರಮದ ವೆಚ್ಚದ ವಿವರ:

ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಕಾರ್ಯಕ್ರಮವನ್ನು ನಿರ್ವಹಿಸುವ ಕಾರ್ಯಸೂಚಿ:
1. ಸದರಿ ಕಾರ್ಯಕ್ರಮವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಪ್ರತಿ ಹಂತವು ಐದು ವಾರಗಳ ಕಾಲ ನಡೆಯುವುದು.
2. ಪ್ರತಿ ಐದು-ವಾರದ ಹಂತಕ್ಕೆ ಶಿಕ್ಷಕರು 4 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದು.
3. ಪ್ರತೀ ವಿದ್ಯಾರ್ಥಿಗೆ ವಾರಕ್ಕೆ ಒಂದು ಬಾರಿ ಫೋನ್ ಕರೆ ಮೂಲಕ ಗಣಿತದ ಮೂಲ ಪರಿಕಲ್ಪನೆಗಳನ್ನು ವಿದ್ಯಾರ್ಥಿಯ ಕಲಿಕಾ ಮಟ್ಟದ ಅನ್ವಯ) ವಿದ್ಯಾರ್ಥಿ-ಪೋಷಕರ ಭಾಗವಹಿಸುವಿಕೆಯೊಂದಿಗೆ 30 ರಿಂದ 40 ನಿಮಿಷಗಳ ಪಾಠಗಳನ್ನು ನಿರ್ವಹಿಸುವುದು. ಸಕ್ರಿಯ
4. ಗಣಿತ ಕಲಿಕೆಗೆ ತರಗತಿ ಸಮಯದ ಜೊತೆಗೆ ಹೆಚ್ಚು ಸಮಯ ಒದಗಿಸಿ ಗುಣಾತ್ಮಕ ಕಲಿಕೆಗೆ ಅನುವು ಮಾಡಿಕೊಡುವುದು.
5. ಪ್ರತೀ 18-20 ವಿದ್ಯಾರ್ಥಿಗಳಿಗೆ ಒಬ್ಬ ಮೆಂಟರ್ ಶಿಕ್ಷಕರಂತೆ ಗುರುತಿಸುವುದು.
6. ಪ್ರತೀ ಮೆಂಟರ್ ಶಿಕ್ಷಕರಿಗೆ 18-20 ವಿದ್ಯಾರ್ಥಿಗಳನ್ನು ಮ್ಯಾಪ್ ಮಾಡುವುದು.
7. ಸದರಿ ಕಾರ್ಯಕ್ರಮವನ್ನು ಪರಿಣಾಕಾರಿಯಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಡಿಜಿಟಲ್ ಸ್ವರೂಪದ ಮಾರ್ಗಸೂಚಿ ಕೈಪಿಡಿಯನ್ನು ಸಿದ್ಧಪಡಿಸಿ ಪ್ರತಿ ಶಿಕ್ಷಕರಿಗೆ ಡಿಜಿಟಲ್ ರೂಪದಲ್ಲಿ ತಲುಪಿಸಲಾಗುವುದು. ಹಾಗೂ ತರಬೇತಿಯನ್ನು ಸಹ ಈಗಾಗಲೇ ಜ್ಞಾನಸೇತು ಕಾರ್ಯಕ್ರಮದಲ್ಲಿ ಯೋಜಿಸಿರುವಂತೆ ನೀಡುವುದು.
ಅಲೋಕಿಟ್ (Alokit) ಮತ್ತು ಯೂಥ್ ಇಂಪ್ಯಾಕ್ಟ್ (Youth Impact) ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳು:
1. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಗಣಿತದ ಮೂಲಭೂತ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಬೆಂಬಲ ಮತ್ತು ಸಲಹೆಯನ್ನು ಒದಗಿಸುವುದು.
2. ವಿದ್ಯಾರ್ಥಿಗಳಲ್ಲಿ ಕಲಿಕಾ ಅಂತರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ರಾಜ್ಯದ “ಗಣಿತ ಗಣಕ” ಕಾರ್ಯಕ್ರಮದ ವಿನ್ಯಾಸ ಹಾಗೂ ಅನುಷ್ಠಾನದಲ್ಲಿ ಬೆಂಬಲ ನೀಡುವುದು.
3. ಶಿಕ್ಷಕರ ವೃತ್ತಿಪರ ಅಭಿವೃದ್ಧಿ (Teachers Professional Development) ಮೂಲಕ ಮೂಲಭೂತ ಕಲಿಕಾ ಫಲಿತಾಂಶಗಳ ಸಿದ್ಧತೆ, ಬೋಧನೆ, ಮೌಲ್ಯಮಾಪನ ಮತ್ತು ಅಂತಿಮವಾಗಿ ಸಾಧನೆಯನ್ನು ಸುಧಾರಿಸಲು ರಾಜ್ಯದ ಪ್ರಯತ್ನಗಳನ್ನು ಬೆಂಬಲಿಸುವುದು.
4. ಗಣಿತದಲ್ಲಿ ವಿದ್ಯಾರ್ಥಿಗಳ ಮೂಲಭೂತ ಕಲಿಕೆಯನ್ನು ಸುಧಾರಿಸಲು “ಗಣಿತ ಗಣಕ” ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗದರ್ಶನ ಮತ್ತು ಬೆಂಬಲ ನೀಡಲು ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ರಾಜ್ಯದ ಪ್ರಯತ್ನಗಳನ್ನು ಬೆಂಬಲಿಸುವುದು.
5. ರಾಜ್ಯ ಮತ್ತು ಜಿಲ್ಲಾಮಟ್ಟದ ಅನುಷ್ಠಾನ ಸಿಬ್ಬಂದಿಯನ್ನು ಅಲೋಕಿಟ್ ಮತ್ತು ಯೂತ್ ಇಂಪ್ಯಾಕ್ಟ್ ಸಂಸ್ಥೆಗಳವತಿಯಿಂದ ನಿಯೋಜಿಸಿ, “ಗಣಿತ ಗಣಕ” ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಿರುವ ಕಾರ್ಯಾಚರಣಾತ್ಮಕ ಬೆಂಬಲ ನೀಡುವುದು. ನಿಯೋಜನೆಯ ವಿವರಗಳನ್ನು ಕೂಡಲೇ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗಳಿಗೆ ನೀಡುವುದು.
6. ನಿರೀಕ್ಷಿತ ಕಲಿಕಾ ಫಲಿತಾಂಶಗಳನ್ನು ಅಳೆಯಲು SATS ತಂತ್ರಾಂಶದಲ್ಲಿ ಅಳವಡಿಸುವ ಬೇಸ್‌ಲೈನ್ ಮೌಲ್ಯಮಾಪನವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸೇತುಬಂಧ ಕಾರ್ಯಕ್ರಮದ ಮೂಲಕ ಪಡೆಯತಕ್ಕದ್ದು. ಅಂತಿಮ ಮೌಲ್ಯ ಮಾಪನವನ್ನು (Endline Assessment) SATS ತಂತ್ರಾಂಶದಲ್ಲಿ ದಾಖಲಾಗುವ Lesson Based Assessment, Formative Formative Assessment a Summative Assessment ಮೂಲಕ ನಡೆಸುವುದು.
ಸದರಿ ಕಾರ್ಯಕ್ರಮದ ಅನುಷ್ಠಾನದಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ನಿರ್ದೇಶಕರು, ರಾಜ್ಯ: ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರುಗಳು ಪಾಲಿಸಬೇಕಾದ ಷರತ್ತುಗಳು/ನಿಬಂಧನೆಗಳು:
1. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸದರಿ ಯೋಜನೆಯ ಮೇಲುಸ್ತುವಾರಿ ಪ್ರಾಧಿಕಾರವಾಗಿ ಹಾಗೂ ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇವರು ಅನುಷ್ಠಾನಾಧಿಕಾರಿಯಾಗಿ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಅನುದಾನದ ಸದ್ಬಳಕೆಗಾಗಿ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ.
2. ಅಲೋಕಿಟ್ ಹಾಗೂ ಯೂತ್ ಇಂಪ್ಯಾಕ್ಸ್ ಸಂಸ್ಥೆಯ ಜೊತೆಗಿನ ಒಡಂಬಡಿಕೆ(MoU) ಪ್ರತಿ, ಈ ಆದೇಶದ ಪ್ರತಿ, ತರಬೇತಿಯ ವಿವರಗಳು ಮತ್ತು ವೇಳಾಪಟ್ಟಿ ಹಾಗೂ ಭೌತಿಕ ಮತ್ತು ಆರ್ಥಿಕ ಖರ್ಚು/ವೆಚ್ಚಗಳನ್ನು ಶಿಕ್ಷಕವಾರು ಪಾವತಿಸಿರುವ ಅನುದಾನ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗಳ ಅಧಿಕೃತ ಇಲಾಖಾ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸತಕ್ಕದ್ದು.
3. ಸದರಿ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಅಲೋಕಿಟ್ ಹಾಗೂ ಯೂತ್ ಇಂಪ್ಯಾಕ್ಟ್ ಸಂಸ್ಥೆಯ ರವರು ನಿರ್ವಹಿಸುವುದು.
4. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸದರಿ ಕಾರ್ಯಕ್ರಮದ ಪರಿಣಾಮಕಾರಿ ಶಾಲಾವಾರು ಪ್ರಗತಿ ಕುರಿತು ಮೇಲುಸ್ತುವಾರಿ ನಡೆಸಿ ಪ್ರಗತಿಯ ವರದಿಯನ್ನು Monthly Program Implementation Calendar (MPIC) ಸಭೆಗಳಲ್ಲಿ ಮತ್ತು ರಾಜ್ಯ ಹಂತದ ಮಾಸಿಕ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮಂಡಿಸತಕ್ಕದ್ದು.
5. “ಗಣಿತ ಗಣಕ” ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅಲೋಕಿಟ್ ಹಾಗೂ ಯೂತ್ ಇಂಪ್ಯಾಕ್ಟ್ ಸಂಸ್ಥೆಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ ಹಾಗೂ ಸದರಿ ಸಂಸ್ಥೆಗಳ ಸಹಯೋಗವು ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಆರ್ಥಿಕ ಹೊರೆಯನ್ನು ಸರ್ಕಾರದ ಮೇಲೆ ವಿಧಿಸುವಂತಿಲ್ಲ. ಶಿಕ್ಷಕರು ಅಲೋಕಿಟ್, ಯೂತ್ ಇಂಪ್ಯಾಕ್ಟ್ ಹಾಗೂ ಜೆ-ಪಾಲ್ ಸಂಸ್ಥೆಯಗಳ ತಂತ್ರಾಂಶಗಳಲ್ಲಿ ದತ್ತಾಂಶ ನಮೂದು ಕಾರ್ಯವನ್ನು ಮಾಡುವಂತಿಲ್ಲ.
6. ರಾಜ್ಯ ಮಟ್ಟ ಜಿಲ್ಲಾ ಮಟ್ಟ ಮತ್ತು ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಸರ್ಕಾರಿ ಸುತ್ತೋಲೆ/ಜ್ಞಾಪನ ಹೊರಡಿಸುವುದು.
ಮುಖ್ಯ, ಶಿಕ್ಷಕ ಹಾಗೂ ಶಿಕ್ಷಕರು ನಿರ್ವಹಿಸಬೇಕಾದ ಜವಾಬ್ದಾರಿಗಳು:
1. ಪ್ರತಿ ಹಂತದಲ್ಲಿ ಪರಿಕಲ್ಪನೆಗಳನ್ನು ಕಲಿಯುವ ಅತಿ ಅವಶ್ಯವಿರುವ ಇರುವ 4 ವಿದ್ಯಾರ್ಥಿಗಳನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಿಕೊಳ್ಳುವುದು ಹಾಗೆಯೇ 5 ಹಂತಗಳಿಗೆ ಕಡಿಮೆ ಸ್ತರದಿಂದ ಹೆಚ್ಚು ಸ್ತರದವರೆಗೆ ಏರಿಕೆ ರೀತಿಯಲ್ಲಿ ಪ್ರತೀ ಹಂತಕ್ಕೆ 4 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಕಲಿಕೆಯನ್ನು ಪೋನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ನಿರ್ವಹಿಸುವುದು.
2. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪೋಷಕರಿಗೆ ಕಾರ್ಯಕ್ರಮದ ವಿನ್ಯಾಸ ಹಾಗೂ ಪ್ರಾಮುಖ್ಯತೆ ಬಗ್ಗೆ, ಅರಿವು ಮೂಡಿಸುವುದು. ಅವರ ಮಗುವನ್ನು ಏಕೆ ಈ ಕಾರ್ಯಕ್ರಮಕ್ಕೆ ಒಳಪಡಿಸಿದೆ ಹಾಗೂ ಹೇಗೆ ಅವರ ಸಹಾಯದೊಂದಿಗೆ ಮಗುವಿನ ಕಲಿಕಾ ಮಟ್ಟವನ್ನು ಸುಧಾರಿಸಬಹುದೆಂದು ಪೋಷಕರ ಸಭೆಯಲ್ಲಿ (Parent-Teacher Meet) ತಿಳಿಸುವುದು.
3. ವಿದ್ಯಾರ್ಥಿಗಳಿಗೆ ಪೋನ್ ಕರೆ ಮಾಡಿದಾಗ ಪೋಷಕರನ್ನು ತಮ್ಮ ಮಕ್ಕಳ ಕಲಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು.
4. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಲು ತರಬೇತಿಯಲ್ಲಿ ನೀಡಿದ ಮಾಹಿತಿಯಂತೆ ಬೇಸ್ ಲೈನ್ ಕರೆ ಮೌಲ್ಯಾಂಕನ ನಡೆಸಿ ಅದರ ಆಧಾರದ ಮೇಲೆ ಗಣಿತದ ಮೂಲ ಪರಿಕಲ್ಪನೆಗಳನ್ನು ಕಲಿಸುವ ಕ್ರಮ ಕೈಗೊಳ್ಳುವುದು.
5. ಪ್ರತಿ ಪೋನ್ ಕರೆ ಅವಧಿ(Phone Tutoring Session) ನಂತರ ಮಾಹಿತಿಯನ್ನು SATS ದತ್ತಾಂಶದಲ್ಲಿ ದಾಖಲಿಸುವುದು.
6. “ಗಣಿತ ಗಣಕ” ನಿರ್ವಹಣಾ ಕೈಪಿಡಿಯನ್ನು ಕೂಲಂಕಷವಾಗಿ ಓದಿ ಹಾಗೂ ತರಬೇತಿಯಲ್ಲಿ ನೀಡಿದ ಮಾರ್ಗದರ್ಶನದಂತೆ ಕಾರ್ಯಕ್ರಮವನ್ನು ನಿರ್ವಹಿಸುವುದು.
ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಶಿಕ್ಷಕರು ಹಾಗೂ ಅನುಷ್ಠಾನಾಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಸಮ್ಮಿಲನದೊಂದಿಗೆ ನಿರ್ದೇಶಕರು, ಡಿ.ಎಸ್.ಇ.ಆರ್.ಟಿರವರ ನೇತೃತ್ವದಲ್ಲಿ ಇನ್ನಿತರ ತರಬೇತಿ ಪ್ಯಾಕೇಜ್‌ನಡಿ ಅರ್ಧ ದಿನದ ತರಬೇತಿ ನೀಡಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಕ್ರಮವಹಿಸುವುದು.
ಈ ಕಾರ್ಯಕ್ರಮವನ್ನು ಶಾಲಾ, ತಾಲ್ಲೂಕು, ಮತ್ತು ಜಿಲ್ಲಾ ಹಂತದಲ್ಲಿ ಮೇಲುಸ್ತುವಾರಿಯನ್ನು ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ ಮತ್ತು ಆಡಳಿತ) ರವರು ನಿರ್ವಹಿಸುವುದು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಡುವ ಪೋನ್ ಕರೆಗಳ ಬಗ್ಗೆ, ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ ಮತ್ತು ಆಡಳಿತ) ರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿವಾರ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯುವುದು.
ಪ್ರತಿ ಆವರ್ತದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಕುರಿತು ಬೇಸ್‌ಲೈನ್‌ಕರೆಯನ್ನು ನಿರ್ವಹಿಸಿ ಶಿಕ್ಷಕರು Students Achievement Tracking System (SATS) ನಲ್ಲಿ ದಾಖಲಿಸಲು ಕ್ರಮ ಕೈಗೊಳ್ಳುವುದು.
ಈ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಆಯ್ಕೆ ಮಾಡಲಾಗಿರುವ ಶಾಲೆಗಳ ಪಟ್ಟಿ ತರಬೇತಿಪಡೆದ ಶಿಕ್ಷಕರ ವಿವರ, ಸಂಪನ್ಮೂಲ ವ್ಯಕ್ತಿಗಳ ವಿವರವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗಳ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು, ಸೂಕ್ತ ಕ್ರಮವಹಿಸತಕ್ಕದ್ದು.
ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸದರಿ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ, ವಿಸ್ತ್ರತವಾದ ಮಾರ್ಗಸೂಚಿಯನ್ನು ಹೊರಡಿಸುವುದು.
ಈ ಆದೇಶವು ಸರ್ಕಾರವು ಆಯಾ ಸಂದರ್ಭದಲ್ಲಿ ಹೊರಡಿಸಲಾಗುವ ಆದೇಶ/ತಿದ್ದುಪಡಿ ಆದೇಶ ಮತ್ತು ಸುತ್ತೋಲೆಗಳಿಗೆ ಒಳಪಟ್ಟಿರುತ್ತದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 421 ವೆಚ್ಚ-8/2025, ದಿನಾಂಕ: 16.05.2025 ರಲ್ಲಿ ನೀಡಲಾದ ಸಹಮತಿ ಹಾಗೂ ಆದೇಶ ಸಂಖ್ಯೆ: FD 02 TFP 2025, ದಿನಾಂಕ: 30.06.2025ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.