Service Register : ಶಿಕ್ಷಕರಿಗೆ ಸೇವಾ ಪುಸ್ತಕದ ಮಹತ್ವ
ಎಲ್ಲಾ ಸರಕಾರಿ ನೌಕರರಿಗೆ ಸೇವಾ ಪುಸ್ತಕದ ಮಹತ್ವ (Service Register) ತಿಳಿದುಕೊಳ್ಳುವುದು ಅವಶ್ಯಕತೆಯಿದ್ದರೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಳಿದವರಿಗಿಂತ ಹೆಚ್ಚು ಅವಶ್ಯಕತೆಯಿದೆ. ಸಾಮಾನ್ಯವಾಗಿ ಎಲ್ಲ ಸರಕಾರಿ ನೌಕರರ ಸೇವಾ ಪುಸ್ತಕಗಳು ಅವರು ಕಾರ್ಯನಿರ್ವಹಿಸುತ್ತಿರುವ ಕಾರ್ಯಾಲಯದಲ್ಲಿದ್ದರೆ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿರುತ್ತವೆ.
ಎರಡನೆಯದಾಗಿ ಅವರು ಪಡೆಯುವ ಸೇವಾ ಸೌಲಭ್ಯಗಳು, ರಜಾ ಮಂಜೂರಾತಿಯ ವಿವರಗಳು ಕಾಲಕಾಲಕ್ಕೆ ಸೇವಾ ಪುಸ್ತಕಗಳಲ್ಲಿ ಸಂಬಂಧಿಸಿದ ಸಿಬ್ಬಂದಿಗಳು ನಮೂದಿಸದೇ ಇರುವದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸಾಮಾನ್ಯ ವಿಷಯವಾಗಿದೆ. ಕೆಸಿಎಸ್‌ಆರ್ ನಿಯಮಗಳು 1958 ರ ನಿಯಮ 396 ರಿಂದ 415 ರವರೆಗೆ ಸರಕಾರಿ ನೌಕರರ ಸೇವಾ ಪುಸ್ತಕದ ಕುರಿತು ವಿವರಗಳನ್ನು ನೀಡಲಾಗಿದೆ.
ಗೆಜಟೆಡ್ ಅಧಿಕಾರಿಗಳ ಸೇವಾ ವಿವರವನ್ನು ಮಹಾ ಲೇಖಪಾಲರೇ ನಿರ್ವಹಿಸುತ್ತಾರೆ. ನಾನ್ ಗೆಜೆಟೆಡ್ ಸಿಬ್ಬಂದಿಗಳ ಸೇವಾಪುಸ್ತಕ ಗಳನ್ನು ಕಚೇರಿಯ ಮುಖ್ಯಸ್ಥರು/ ಇಲಾಖೆ ಮುಖ್ಯಸ್ಥರು ನಿರ್ವಹಿಸುತ್ತಾರೆ. ಕಚೇರಿಯ ಮುಖ್ಯಸ್ಥರು ಪ್ರತಿವರ್ಷ ಮಾರ್ಚ ತಿಂಗಳಲ್ಲಿ ಸೇವಾ ಪುಸ್ತಕಗಳನ್ನು ಪರಿಶೀಲಿಸಿ (ನಿಯಮ 412) ದೃಢೀಕರಿಸಬೇಕು ಮತ್ತು ಹೀಗೆ ದೃಢೀಕರಿಸಿದ ಬಗ್ಗೆ ಅವರು ತಮ್ಮ ಮೇ ತಿಂಗಳ ಸಂಬಳ ಬಿಲ್ಲಿಗೆ ಪರಿಶೀಲಿಸಿದ್ದಾಗಿ (ನಿಯಮ 414) ದೃಢೀಕರಿಸಬೇಕಾಗುತ್ತದೆ. ಹೀಗೆ ನಿಯಮಗಳಿದ್ದರೂ ಇದೊಂದು ಯಾಂತ್ರಿಕ ಕ್ರಿಯೆಯಾಗಿ ನಡೆಯುತ್ತಿರು ವದರಿಂದ ಅನೇಕ ಶಿಕ್ಷಕರು ತಮ್ಮ ನಿವೃತ್ತಿ ಸಮಯದಲ್ಲಿ ಪರಿತಪಿಸುತ್ತಾರೆ.
ಶಿಕ್ಷಕರು ಒಂದು ತಾಲೂಕಿನಿಂದ ಇನ್ನೊಂದು ತಾಲ್ಲೂಕು ಮತ್ತು ಜಿಲ್ಲೆಗೆ ವರ್ಗಾವಣೆಯಾದಾಗ ಸರಿಯಾದ ಸಮಯದಲ್ಲಿ ಕೊನೆಯ ವೇತನ ಪತ್ರ ಮತ್ತು ಸೇವಾ ಪುಸ್ತಗಳನ್ನು ವಿಳಂಬ ವಾಗಿ ಕಳಿಸುವುದು ಮತ್ತು ಪರಿಪೂರ್ಣ ವಾಗಿ ಬರೆಯದೇ ಕಳಿಸುವದರಿಂದ ಅವರು ಸಕಾಲಕ್ಕೆ ವೇತನ ಪಡೆಯದೇ ಸಂಕಷ್ಟಕ್ಕೆ ಸಿಲುಕುತ್ತಾರೆ.
ಸರಕಾರಿ ನೌಕರನ ಸರ್ಕಾರಿ ಜೀವನದ ಪ್ರತಿಯೊಂದು ಹಂತಗಳಾದ ಪದೋನ್ನತಿ, ಪ್ರೊಬೇಷನ್ ಅವಧಿಯು ತೃಪ್ತಿಕರವಾಗಿ ಕೊನೆಗೊಂಡ ದಿನಾಂಕ, ಬಡ್ತಿ, ವರ್ಗಾವಣೆ ಇತ್ಯಾದಿಗಳನ್ನು ನಿಯತವಾಗಿ ನಮೂದಿಸಬೇಕು. ಆದರೆ ಅನೇಕ ಕಚೇರಿ ಮುಖ್ಯಸ್ಥರು ಸರಿಯಾಗಿ ಈ ವಿಷಯಗಳ ಕಡೆಗೆ ಗಮನ ನೀಡುವದಿಲ್ಲ.
ಕರ್ನಾಟಕ ನ್ಯಾಯ ಮಂಡಳಿಯು ಕೂಡಾ ಅನೇಕ ಪ್ರಕರಣಗಳಲ್ಲಿ ಅಸಮರ್ಪಕ ಸೇವಾಪುಸ್ತಕಗಳ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಅನೇಕ ಸೂಚನೆಗಳನ್ನು ನೀಡಿದೆ. ಆದಾಗ್ಯೂ ಕೂಡಾ ನೌಕರರ ಬವಣೆ ತಪ್ಪಿಲ್ಲ.
ಅನೇಕ ಕಾರ್ಯಾಲಯಗಳಲ್ಲಿ ಶಿಕ್ಷಕರು ತಮ್ಮ ಸೇವಾ ಪುಸ್ತಕವನ್ನು ನೋಡಲು ಕೇಳಿಕೊಂಡರೆ ಅದೊಂದು ಗೌಪ್ಯ ವಿಷಯವೆಂಬಂತೆ ಅವರನ್ನು ಸೇವಾ ಪುಸ್ತಕದ ಸನಿಹಕ್ಕೂ ಕೂಡಾ ಬಿಟ್ಟುಕೊಡುವದಿಲ್ಲ. ಸರಕಾರವು ತನ್ನ ಆದೇಶ ಸಂಖ್ಯೆ .ಜಿಎಡಿ 64 ಮಾರ್ಚ 71, ದಿನಾಂಕ 19/1/1972 ರಲ್ಲಿ ಪ್ರತಿಯೊಬ್ಬ ನಾನ್ ಗೆಜಟೆಡ್ ನೌಕರರಿಗೆ ಉಚಿತವಾಗಿ ಡುಪ್ಲಿಕೇಟ್ ಸೇವಾ ಪುಸ್ತಕ ನೀಡಬೇಕೆಂದು ಸೂಚನೆಯಿದ್ದರೂ ವಾಸ್ತವವಾಗಿ ಇದು ಕಾರ್ಯರೂಪಕ್ಕೆ ಬರುತ್ತಿರುವುದು ಅಪರೂಪ.
ಮೂಲ ಸೇವಾ ಪುಸ್ತಕ ಕಳೆದು ಹೋಗಿದ್ದರೆ/ ಧ್ವಂಸವಾಗಿದ್ದರೆ ಮಹಾಲೇಕಪಾಲರು ಡುಪ್ಲಿಕೇಟ್ ಸೇವಾಪುಸ್ತಕದ ಆಧಾರದ ಮೇಲೆ ನಿವೃತ್ತಿ ಪ್ರಕರಣವನ್ನು ಅಂತಿಮಗೊಳಿಸುವರು.
(ಆದೇಶ ಸಂ. ಎಫ್ ಡಿ 41 ಎಸ್ ಆರ್ ಎಸ್ 73 ದಿನಾಂಕ 06-06-1973) ನಿಯಮ 407 ರ ಪ್ರಕಾರ ಕಾರ್ಯಾಲಯದ ಮುಖ್ಯಸ್ಥರು ಪ್ರತಿ ವರ್ಷ ಅವರ ಅಧೀನ ಸಿಬ್ಬಂದಿಗೆ ಅವರ ಸೇವಾ ಪುಸ್ತಕವನ್ನು ತೋರಿಸಿ, ಅವರಿಂದ ಸೇವಾ ಪುಸ್ತಕ ಪರಿಶೀಲಿಸಿದ ಕುರಿತು ರುಜುವನ್ನು ಪಡೆಯಬೇಕೆಂಬ ನಿಯಮವು ಇನ್ನೂ ಅನೇಕ ಕಾರ್ಯಾಲಯಗಳಲ್ಲಿ ಪುಸ್ತಕದಲ್ಲೇ ಉಳಿದಿದೆ.
ಸೇವಾ ಪುಸ್ತಕವನ್ನು ನಿಯಮ 119 ಮತ್ತು 397 ರನ್ವಯ ನಮೂನೆ 18 ರಂತೆ ಇರುತ್ತದೆ. ಸೇವಾ ಪುಸ್ತಕವನ್ನು ಸರಕಾರಿ ಖಜಾನೆಯಿಂದ ಶುಲ್ಕವನ್ನು ತುಂಬಿ ಕಚೇರಿಯ ಮುಖ್ಯಸ್ತರು ಪಡೆಯಬೇಕಾಗುತ್ತದೆ.
ಭಾಗ-1 ರಲ್ಲಿ ನೌಕರರ ವೈಯಕ್ತಿಕ ವಿವರಗಳಾದ ಹೆಸರು, ತಂದೆಯ ಹೆಸರು, ಭಾವಚಿತ್ರ, ಮದುವೆಯಾದಲ್ಲಿ ಜಂಟಿ ಭಾವಚಿತ್ರ, ವಾಸಸ್ಥಳ, ಜಾತಿ/ ಪಂಗಡ, ಜನ್ಮ ದಿನಾಂಕ, ವಿದ್ಯಾರ್ಹತೆ ಗಳು, ವೈಯಕ್ತಿಕ ಗುರುತಿನ ಚಿಹ್ನೆ, ಸಹಿ ಇತ್ಯಾದಿ ಮಾಹಿತಿಗಳನ್ನು ನಮೂದಿಸಲಾಗಿರುತ್ತದೆ.
ವೈದ್ಯಕೀಯ ಪರೀಕ್ಷೆ. ಗುಣ ಮತ್ತು ಪೂರ್ವ ಚರಿತ್ರೆ, ಸಂವಿಧಾನಕ್ಕೆ ನಿಷ್ಠೆ, ರಹಸ್ಯ ಪಾಲನೆ ಪ್ರಮಾಣ ವಚನ, ವೈವಾಹಿಕ ಸ್ಥಿತಿ, ಸ್ವಗ್ರಾಮ ಘೋಷಣೆ, ಈ ನಮೂದುಗಳ ಪರಿಶೀಲನೆ ದೃಢೀಕರಣ, ಜಿಪಿಎಫ್ ಸಂಖ್ಯೆ ಹಾಗೂ ನಾಮ ನಿರ್ದೇಶನ, ಕೆಜಿಐಡಿ, ಕುಟುಂಬದ ವಿವರಗಳು, ನಿವೃತ್ತಿ ಉಪದಾನಕ್ಕೆ ನಾಮ ನಿರ್ದೇಶನಗಳು ಇತ್ಯಾದಿಗಳು ಭಾಗ- 2ರಲ್ಲಿ ಇರುತ್ತವೆ.
ಭಾಗ-3 ದಲ್ಲಿ ಹಿಂದಿನ ಸೇವೆ ಕುರಿತು ವಿವರ, ಭಾಗ- 3ಬ ದಲ್ಲಿ ಅನ್ಯ ಸೇವಾ ನಿಯೋಜನೆ ಕುರಿತು ನಮೂದಿಸಲಾಗುತ್ತಿದೆ. ಭಾಗ-4 ರಲ್ಲಿ ನೇಮಕಾತಿ ಸಮಯದಲ್ಲಿ ಮತ್ತು ನಂತರ ಕೆಲಸ ನಿರ್ವಹಿಸಿದ ವಿವರ, ಮುಂಬಡ್ತಿ/ಹಿಂಬಡ್ತಿ, ರಜೆ, ಅಮಾನತ್ತು, ಕೆಲಸ ಖಾಯಂಗೊಳಿಸಿದ ವಿವರ ಇತ್ಯಾದಿಗಳ ವಿವರ ನಮೂದಿಸ ಲಾಗುತ್ತದೆ.
ಭಾಗ-5 ರಲ್ಲಿ ಎಲ್ಲ ರೀತಿಯ ರಜೆಗಳ ಬಗ್ಗೆ ನಮೂದಿಸ ಲಾಗುತ್ತಿದೆ. ಹೀಗೆ ಒಂದು ರೀತಿಯಲ್ಲಿ ಸೇವಾ ಪುಸ್ತಕವು ಸರಕಾರಿ ನೌಕರನ ಸೇವಾಜಾತಕವೇ ಸರಿ.
ಇದನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ಕಚೇರಿಯ ಮುಖ್ಯಸ್ಥರಿಗಿದ್ದರೂ ಕೆಲವೊಮ್ಮೆ ಅವರ ಬೇವಾಬ್ದಾರಿಯಿಂದ ನೌಕರರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಶಿಕ್ಷಕರಾಗಲಿ ಅಥವಾ ಇತರೆ ನೌಕರರಾಗಲಿ ನಿಯಮ 407 ರಲ್ಲಿ ತಿಳಿಸಿದಂತೆ ತಮ್ಮ ಸೇವಾ ಪುಸ್ತಕವನ್ನು ನೋಡಿ ವಿವರಗಳನ್ನು ಖಾತ್ರಿಪಡಿಸಿ ಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.
ಸರಕಾರದ ಆದೇಶದಂತೆ ಡುಪ್ಲಿಕೇಟ್ ಸೇವಾ ಪುಸ್ತಕವನ್ನು ಹೊಂದುವ ಹಕ್ಕನ್ನು ಹೊಂದಿರುತ್ತಾರೆ. ಈ ಸೌಲಭ್ಯವನ್ನು ಎಲ್ಲ ನೌಕಕರು ಬಳಸಿಕೊಂಡಲ್ಲಿ ನಿವೃತ್ತಿ ಸಮಯದಲ್ಲಿ ಅನುಭವಿಸುವ ಕಷ್ಟನಷ್ಟಗಳನ್ನು ತಪ್ಪಿಸಿಕೊಳ್ಳಬಹುದು.
ಈ ಅಂಕಣದಲ್ಲಿನ ವಸ್ತು, ಲೇಖಕರ ಮತ್ತು ಪ್ರಕಾಶಕರ ನಿರ್ವಚನಗಳಾಗಿವೆ.
ಸೂಚನೆ: ಸಾರ್ವಜನಿಕ ಶಿಕ್ಷಣ ಇಲಾಖಾ ಸೇವಾ ನಿಯಮಾವಳಿಗಳಿಗೆ ಹಂಬಂಧಿಸಿದಂತೆ ಯಾವುದೇ ಸಂಶಯ , ಸಮಸ್ಯೆ ಇದ್ದಲ್ಲಿ ನೀವು ಪತ್ರಿಕಾ ಕಚೇರಿಯ ವಿಳಾಸಕ್ಕೆ ಪತ್ರ ಬರೆದು ಅಥವಾ rajvarma7599@gmail.com ಗೆ ಇ-ಮೇಲ್ ಮಾಡಿ ಮಾಹಿತಿ ಪಡೆಯಬಹುದು.