Increased SC/ST Reservation Under 2022 Act: ಹೈಕೋರ್ಟ್ ಮಧ್ಯಂತರ ಆದೇಶದ ನಂತರ ನೇಮಕಾತಿ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ
Increased SC/ST Reservation Under 2022 Act: ಹೈಕೋರ್ಟ್ ಮಧ್ಯಂತರ ಆದೇಶದ ನಂತರ ನೇಮಕಾತಿ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ
2022ರ ಅಧಿನಿಯಮದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿಸಲಾದ ಮೀಸಲಾತಿ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾದ ಪ್ರಕರಣಗಳ ಹಿನ್ನೆಲೆ, ನ್ಯಾಯಾಲಯ ನೀಡಿದ ಮಧ್ಯಂತರ ಆದೇಶ ಮತ್ತು ಅದರ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ.
ಮೇಲೆ (1)ರಲ್ಲಿ ಓದಲಾದ ದಿನಾಂಕ 20.06.1995ರ ಸರ್ಕಾರದ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕ್ರಮವಾಗಿ ನಿಗಧಿಪಡಿಸಲಾಗಿದ್ದ ಶೇ15 ಮತ್ತು ಶೇ 3 ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಭರ್ತಿ ಮಾಡಬೇಕಾದ ರಿಕ್ತ ಸ್ಥಾನಗಳಿಗೆ 100 ಬಿಂದುಗಳ ರೋಸ್ಟರ್ ನ್ನು ನಿಗಧಿಪಡಿಸಲಾಗಿರುತ್ತದೆ.
2. ಮೇಲೆ (2) ರಲ್ಲಿ ಓದಲಾದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ, 2022ರಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ರಾಜ್ಯದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಶೇ. 17 ಮತ್ತು ಶೇ.7 ರಂತೆ ಮೀಸಲಾತಿ ಪ್ರಮಾಣವನ್ನು ಅನುಕ್ರಮವಾಗಿ ಹೆಚ್ಚಿಸಲಾಗಿರುತ್ತದೆ.
3. ಮೇಲೆ (3)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2022ರ ಅಧಿನಿಯಮದನ್ವಯ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ರಿಕ್ತ ಸ್ಥಾನಗಳಿಗೆ ಸಂಬಂಧಿಸಿದಂತೆ 100 ಬಿಂದುಗಳ ಪರಿಷ್ಕೃತ ರೋಸ್ಟರನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
4. ಮೇಲೆ (4) ರಲ್ಲಿ ಓದಲಾದ ದಿನಾಂಕ 08.03.2023ರ ಸರ್ಕಾರದ ಆದೇಶದಲ್ಲಿ ಪ್ರತಿಯೊಂದು ನೇರ ಮೀಸಲಾತಿ ಪ್ರವರ್ಗದಡಿ (under each category of vertical reservation) ಮಾಜಿ ಸೈನಿಕ, ಅಂಗವಿಕಲ, ಮಹಿಳೆ, ಯೋಜನೆಗಳಿಂದ ನಿರ್ವಸಿತರಾದವರು, ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ ಮತ್ತು ತೃತೀಯ ಲಿಂಗಿಗಳಿಗೆ ಕಲ್ಪಿಸಲಾದ ಸಮತಳ ಮೀಸಲಾತಿಯನ್ನು ಜಾರಿಗೊಳಿಸಲು 100 ಬಿಂದುಗಳ ರೋಸ್ಮರನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
5. ಮೇಲೆ (5) ರಲ್ಲಿ ಓದಲಾದ ದಿನಾಂಕ 25.08.2025ರ ಸರ್ಕಾರದ ಆದೇಶದಲ್ಲಿ ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗಳೆಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17 ಮೀಸಲಾತಿಯನ್ನು ಪ್ರವರ್ಗ-ಎ ರಲ್ಲಿನ ಸಮುದಾಯಗಳಿಗೆ ಶೇಕಡ 6, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ಮತ್ತು ಪ್ರವರ್ಗ-ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
6. ಮೇಲೆ (6) ರಲ್ಲಿ ಓದಲಾದ ದಿನಾಂಕ 03.09.2025ರ ಸರ್ಕಾರದ ಆದೇಶದಲ್ಲಿ ದಿನಾಂಕ 28.12.2022ರ ಆದೇಶದಲ್ಲಿ ನಿಗದಿಪಡಿಸಲಾಗಿದ್ದ 100 ಬಿಂದುಗಳ ಮೀಸಲಾತಿ ರೋಸ್ಟರ್ನಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಮಾತ್ರ ಸದರಿ ಆದೇಶದದಲ್ಲಿರುವ ಅನುಬಂಧದಂತೆ ಪುನರ್ ವರ್ಗೀಕರಿಸಿ ಆದೇಶಿಸಲಾಗಿರುತ್ತದೆ.
7. ಮೇಲೆ (7)ರಲ್ಲಿ ಓದಲಾದ ಪ್ರಕರಣಗಳಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ, 2022ರನ್ನಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ.15 ರಿಂದ ಶೇ.17ಕ್ಕೆ ಹಾಗೂ ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಲಾಗಿರುವುದನ್ನು ಪ್ರಶ್ನಿಸಲಾಗಿದ್ದು, ಸದರಿ ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ: 27.11.2025ರಂದು ಕೆಳಗಿನಂತೆ ಮಧ್ಯಂತರ ಆದೇಶ ನೀಡಿರುತ್ತದೆ.
6. Considering that recruitment process has already begun pursuant to certain notifications specifying the enhanced reservation under the Karnataka Scheduled Castes and Scheduled Tribes (Reservation of Seats in Education Institutions and Appointments of Posts and Services under the State) Act, 2022 (hereafter Act), we consider it apposite to modify our order dated 19.11.2025 to direct that no further notifications for recruitment or appointment on the basis of increased reservation would be issued till the disposal of the present petitions. The recruitment pursuant to the process that is already begun, may be continued. However, any appointment made shall be subject to the final outcome of the present petitions.
8. ಮಾನ್ಯ ಉಚ್ಚ ನ್ಯಾಯಾಲಯವು ಮೇಲಿನಂತೆ ನೀಡಿರುವ ಮಧ್ಯಂತರ ಆದೇಶದಿಂದಾಗಿ ಹಲವಾರು ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ನಿರುದ್ಯೋಗಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ಮುಂದುವರೆಸಬೇಕಾಗಿರುವುದರಿಂದ ನೇಮಕಾತಿ ಅಧಿಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 1 ಸೇಹಿಮ 2022, ದಿನಾಂಕ: 28-12-2022ರ ಆದೇಶದ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ಆದೇಶ ಮತ್ತು ರೋಸ್ಟರ್ ಬಿಂದುಗಳಂತೆ (ಮೀಸಲಾತಿ ಪ್ರಮಾಣ ಶೇ.50ಕ್ಕೆ) ಹೊರಡಿಸುವುದು ಸೂಕ್ತವೆಂದು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಆದೇಶದ ವಿವರ:
ಪ್ರಸ್ತಾವನೆಯಲ್ಲಿ ವಿವರಿಸಿರುವ ಸನ್ನಿವೇಶದಲ್ಲಿ, ಸರ್ಕಾರ ಈ ಕೆಳಕಂಡಂತೆ ಆದೇಶಿಸಿದೆ.
1. ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ, 2022ನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ, ದಿನಾಂಕ 27.11.2025ರ ನಂತರದಲ್ಲಿ ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 1 ಸೇಹಿಮ 2022, ದಿನಾಂಕ: 28-12-2022ರ ಆದೇಶದ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ಆದೇಶ ಮತ್ತು ರೋಸ್ಟರ್ ಬಿಂದುಗಳಂತೆ (ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 8 ಸೇಹಿಮ 1995, ದಿನಾಂಕ 20.06.1995ರನ್ವಯ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ) ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸುವಂತೆ ಎಲ್ಲಾ ನೇಮಕಾತಿ/ಆಯ್ಕೆ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.
2. ಈ ರೀತಿಯ ಆಯ್ಕೆಯನ್ನು ಹಿಂದಿನ ನೇಮಕಾತಿಯಲ್ಲಿ ಅಂದರೆ ದಿನಾಂಕ 28.12.2022ರ ಆದೇಶದಲ್ಲಿ ಗೊತ್ತುಪಡಿಸಿರುವ ರೋಸ್ಟರಿನ ಯಾವ ಬಿಂದುವಿನಲ್ಲಿ ನಿಲ್ಲಿಸಲಾಗಿತ್ತೋ ಆ ಬಿಂದುವಿನ ಮುಂದಿನ ರೋಸ್ಟರ್ ಬಿಂದುವಿಗೆ ಸರಿಸಮವಾದ ಬಿಂದುವನ್ನು ದಿನಾಂಕ 20.06.1995ರ ಸರ್ಕಾರದ ಆದೇಶ ಸಂಖ್ಯೆ: ಸಿಅಸುಇ 8 ಸೇಹಿಮ 1995ರಲ್ಲಿ ಗುರುತಿಸಿ ಅಲ್ಲಿಂದ ಪ್ರಾರಂಭಿಸಿ ಆಯ್ಕೆ ಮಾಡತಕ್ಕದ್ದು (ಉದಾಹರಣೆಗೆ ಹಿಂದಿನ ನೇಮಕಾತಿಯಲ್ಲಿ ದಿನಾಂಕ 28.12.2022ರ ಆದೇಶದಲ್ಲಿ ಗೊತ್ತುಪಡಿಸಿರುವ ರೋಸ್ಟರ್ ನ ಅನುಸಾರ 10 ನೇ ಬಿಂದುವಿನವರೆಗೆ ಪೂರ್ಣಗೊಳಿಸಲಾಗಿದ್ದಲ್ಲಿ, ಈಗ ಮಾಡಬೇಕಾಗಿರುವ ಅಯ್ಕೆಯನ್ನು ದಿನಾಂಕ 20.06.1995ರ ಆದೇಶದಲ್ಲಿನ ಅನುಬಂಧ-1ರ ರೋಸ್ಟರಿನ 11 ನೇ ಬಿಂದುವಿನಿಂದ ಪ್ರಾರಂಭಿಸಿ ಪೂರ್ಣಗೊಳಿಸತಕ್ಕದ್ದು).
3. ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ 27.11.2025ರ ಮದ್ಯಂತರ ಆದೇಶಕ್ಕಿಂತ ಹಿಂದೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿರುವ ಪ್ರಕರಣಗಳನ್ನು ಯಥಾಪ್ರಕಾರ ಮುಂದುವರೆಸಿ, ಅಂತಿಮಗೊಳಿಸುವುದು ಹಾಗೂ ನೇಮಕಾತಿ ಆದೇಶದಲ್ಲಿ ಸ್ಪಷ್ಟವಾಗಿ ಈ ನೇಮಕಾತಿಯು ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆಂದು ಷರಾ ದಾಖಲಿಸತಕ್ಕದ್ದು.
4. ಸಮತಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 02 ಸೇಹಿಮ 2023, ದಿನಾಂಕ: 8.3.2023ರಲ್ಲಿ ನಿಗಧಿಪಡಿಸಲಾಗಿರುವ ರೋಸ್ಟರ್ ಬಿಂದುಗಳನ್ನೇ ಮುಂದುವರೆಸುವುದು. ಹಿಂದಿನ ನೇಮಕಾತಿಯಲ್ಲಿ ದಿನಾಂಕ 08.03.2023 ಆದೇಶದಲ್ಲಿ ಗೊತ್ತುಪಡಿಸಿರುವ ರೋಸ್ಟರಿನ ಯಾವ ಬಿಂದುವಿನಲ್ಲಿ ನಿಲ್ಲಿಸಲಾಗಿತ್ತೋ ಆ ಬಿಂದುವಿನ ಮುಂದಿನ ರೋಸ್ಟರ್ ಬಿಂದುವಿನಿಂದ ಪ್ರಾರಂಭಿಸಿ ಆಯ್ಕೆ ಮಾಡತಕ್ಕದ್ದು.
5. ಮಾನ್ಯ ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಗಳು / ನೇಮಕಾತಿ ಪ್ರಾಧಿಕಾರಗಳು ಮುಂದಿನ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಶೇ 6 ರಷ್ಟು (ಪರಿಶಿಷ್ಟ ಜಾತಿಗೆ ಶೇ.2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.4) ಹುದ್ದೆಗಳನ್ನು ಕಾಯ್ದಿರಿಸತಕ್ಕದ್ದು.
6. ಮುಂದುವರೆದು, ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳಲ್ಲಿ ಸುಮಾರು 56432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು ಮುಂದಿನ 30 ದಿನಗಳಲ್ಲಿ ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ / ನೇಮಕಾತಿ ಪ್ರಾಧಿಕಾರಗಳಿಗೆ ತಿಳಿಸಿದೆ.
ಮೇಲಿನ ಸೂಚನೆಗಳು ಸರ್ಕಾರದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೆ.
