Microfinance: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂಕಿತ,ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ.
Microfinance: ಸರ್ಕಾರದ ಸ್ಪಷ್ಟನೆ ನಂತರ ಸುಗ್ರೀವಾಜ್ಞೆಗೆ ಸಹಿ,ಕಾನೂನಿನಡಿ ಸಾಲ ಕೊಟ್ರೆ ತೊಂದರೆ ಆಗಬಾರದು. ಮೂಲಭೂತ ಹಕ್ಕಿಗೆ ತೊಂದರೆಯಾಗದಂತೆ ಕ್ರಮ.ಸುಗ್ರೀವಾಜ್ಞೆಗೆ ಸಹಿ ಹಾಕಿ ರಾಜ್ಯಪಾಲರ ಸೂಚನೆ.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 03 ಶಾಸನ 2025, ಬೆಂಗಳೂರು, ದಿನಾಂಕ:12.02.2025.
ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025ರ ಫೆಬ್ರವರಿ ತಿಂಗಳ 12ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025ರ ಕರ್ನಾಟಕ ಅಧ್ಯಾದೇಶ ಸಂಖ್ಯೆ : 02 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ IV-A) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-
2025 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:02 ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025
(ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2025ರ ಫೆಬ್ರವರಿ ತಿಂಗಳ 12ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು (organizations) ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಒಂದು ಅಧ್ಯಾದೇಶ.
ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ, ಮತ್ತು ಭಾರತ ಸಂವಿಧಾನದ 213 (1)ನೇ ಅನುಚ್ಛೇದದ ಮೇರೆಗಿನ ಅಧಿಕಾರಗಳನ್ನು ಚಲಾಯಿಸಲು ಅವಶ್ಯಕ ಮತ್ತು ಯುಕ್ತವಾದ ಸನ್ನಿವೇಶಗಳು ಉದ್ಭವವಾಗಿವೆಯೆಂದು ಮಾನ್ಯ ಕರ್ನಾಟಕ ರಾಜ್ಯಪಾಲರು ಮನಗಂಡಿರುವುದರಿಂದ, ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸುವರು, ಎಂದರೆ :-
1. ಸಂಕ್ಷಿಪ್ತ ಹೆಸರು, ಪ್ರಾರಂಭ ಮತ್ತು ಅನ್ವಯ.- (1) ಈ ಅಧ್ಯಾದೇಶವನ್ನು ಕರ್ನಾಟಕ
ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025
ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೆ ಜಾರಿಗೆ ಬರತಕ್ಕದ್ದು.
(3) ಈ ಅಧ್ಯಾದೇಶದಲ್ಲಿ ಇರುವುದಾವುದೂ ಆರ್‌ಬಿಐನೊಂದಿಗೆ ನೋಂದಾಯಿಸಲಾದ ಯಾವುದೇ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗೇತರ ಹಣಕಾಸು ಕಂಪನಿಗೆ (NBFC) ಅನ್ವಯಿಸತಕ್ಕದ್ದಲ್ಲ.
(4) ಈ ಅಧ್ಯಾದೇಶದ ಉಪಬಂಧಗಳು ತತ್ಕಾಲದಲ್ಲಿ ಜಾರಿಯಲ್ಲಿರುವ ಅಸ್ತಿತ್ವದಲ್ಲಿನ ಯಾವುದೇ ಕಾನೂನಿನೊಂದಿಗೆ ಮುಂದುವರೆಯತಕ್ಕದು ಮತ್ತು ಅಧ್ಯಾರೋಹಿಯಾಗಿರತಕ್ಕದ್ದಲ್ಲ.
2.ಪರಿಭಾಷೆಗಳು..
(1) ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ
ಹೊರತು,-
(ಎ) “ಸಾಲಗಾರ” ಎಂದರೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು
ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ಮೌಖಿಕ ಅಥವಾ ಲಿಖಿತ ಕರಾರಿನಡಿ ಷರತ್ತುಗಳು ಮತ್ತು ನಿಬಂಧನೆಗಳೊಂದಿಗೆ, ಯಾವುದೇ ಉದ್ದೇಶಕ್ಕಾಗಿ ಸಾಲದ ರೂಪದಲ್ಲಿ ಹಣವನ್ನು ಪಡೆಯುವ, ಆ ಹಣವನ್ನು ಕೆಲವು ಕಾಲಾವಧಿಯೊಳಗೆ ಮರುಪಾವತಿಸತಕ್ಕ ವ್ಯಕ್ತಿ ಅಥವಾ ಸ್ವಸಹಾಯ ಗುಂಪು (SHG) ಅಥವಾ ಜಂಟಿ ಹೊಣೆಗಾರಿಕೆ ಗುಂಪು (JLG) ಅಥವಾ ವ್ಯಕ್ತಿಗಳ ಗುಂಪು;
(ಬಿ) “ಬಲವಂತದ ಕ್ರಮ” ಎಂದರೆ 8ನೇ ಪ್ರಕರಣದಲ್ಲಿ ವಿವರಿಸಲಾದ ಬಲವಂತದ ಕ್ರಮ;
(ಸಿ) “ಬಡ್ಡಿ” ಎಂಬುದು ಈ ಅಧ್ಯಾದೇಶದ ಉಪಬಂಧಗಳಡಿ ಪರಿಭಾಷಿಸಿದ ನಿಬಂಧನೆಗಳ ಉದ್ದೇಶಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ನಗದು ಅಥವಾ ಸಂದರ್ಭಾನುಸಾರವಾಗಿ ವಸ್ತುರೂಪದಲ್ಲಿ ಸಾಲಗಾರನಿಗೆ ನೀಡಿದ ಮೊತ್ತದ ಮೇಲಿನ ಲಾಭ ಹಾಗೂ ಅದು ದಿನಕ್ಕೆ, ವಾರಕ್ಕೆ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ವಿಧಿಸಲಾದ ಬಡ್ಡಿಯನ್ನು ಒಳಗೊಳ್ಳುವುದು;
(ಡಿ) “ಸಾಲ” ಎಂದರೆ ಸಾಲಗಾರನಿಗೆ ಬಡ್ಡಿಯ ಮೇರೆಗೆ ಖಚಿತವಾಗಿ ಅಥವಾ ಅನ್ಯಥಾ ನೀಡಲಾದ ಹಣದ ರೂಪದಲ್ಲಿನ ಅಥವಾ ಬೀಜ, ಗೊಬ್ಬರ, ಇತ್ಯಾದಿಗಳಂತಹ ವಸ್ತುರೂಪದಲ್ಲಿನ ಮುಂಗಡ ಅಥವಾ ಕೈಸಾಲ;
(ಇ) “ಲೇವಾದೇವಿದಾರ” ಎಂಬುದು ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆಗಳನ್ನು ಒಳಗೊಳ್ಳುವುದು ಹಾಗೂ ದಿನಕ್ಕೆ. ವಾರಕ್ಕೆ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ಬಡ್ಡಿಯನ್ನು ವಿಧಿಸುವ ಮೂಲಕ ಲಾಭವನ್ನು ಗಳಿಸಲು ನಗದು ಅಥವಾ ವಸ್ತುರೂಪದಲ್ಲಿ ಸಾಲ ನೀಡುವ ಅಥವಾ ಯಾವುದೇ ಸ್ವರೂಪದ ಹಣಕಾಸು ನೆರವು ನೀಡುವುದನ್ನು ಪ್ರಧಾನ ಅಥವಾ ಪ್ರಾಸಂಗಿಕ ಚಟುವಟಿಕೆಯಾಗಿಸಿಕೊಂಡ ಯಾವುದೇ ಪಾಲುದಾರ ಫರ್ಮು ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಅಥವಾ ಡಿಜಿಟಲ್ ಸಾಲನೀಡಿಕೆ ಪ್ಲಾಟ್ ಫಾರ್ಮ್:
(ಎಫ್) “ನೋಂದಣಿ ಪ್ರಾಧಿಕಾರಿ” ಎಂದರೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ:
ಪರಂತು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಂಥ ಇತರ ಗೊತ್ತುಪಡಿಸಿದ ಅಧಿಕಾರಿಯನ್ನು ನೋಂದಣಿ ಪ್ರಾಧಿಕಾರಿ ಎಂದು ನೇಮಿಸಬಹುದು;
(ಜಿ) “ಸಮಾಜದ ದುರ್ಬಲ ವರ್ಗ” ಎಂದರೆ ರೈತರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು, ಕೃಷಿ ಕಾರ್ಮಿಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವ ಇತರ ವ್ಯಾಪಾರಿಗಳು, ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಅವರ ಮೂಲ ಸೇವೆಗಳಿಗೆ ಕುಗ್ಗಿರುವ ಪ್ರವೇಶಾವಕಾಶದ ಮತ್ತು ಮುಖ್ಯವಾಗಿ ಆರೋಗ್ಯ, ವಸತಿ ನೈರ್ಮಲ್ಯ ಇತ್ಯಾದಿಗಳ ಅಂತರ್ನಿಹಿತ ನಿರ್ಣಾಯಕತೆಗಳ (underlying determinants) ಕಾರಣದಿಂದಾಗಿ ಇತರರಿಗೆ ಹೋಲಿಸಿದಲ್ಲಿ ಅನನುಕೂಲತೆಯಿರುವ ಜನರ ಗುಂಪು ಮತ್ತು ಆರ್ಥಿಕವಾಗಿ ಹಿಂದುಳಿದ, ನಿಯತ ಆದಾಯದ ಮೂಲವಿಲ್ಲದೆ ಜೀವನೋಪಾಯದ ಮಾದರಿಗಳಲ್ಲಿ ಕೆಳಮಟ್ಟದಲ್ಲಿರುವವರು.
(2) ಈ ಅಧ್ಯಾದೇಶದಲ್ಲಿ ಬಳಸಿರುವ ಆದರೆ ಪರಿಭಾಷಿಸದಿರುವ ಪದಗಳು, ಸಂಬಂಧಪಟ್ಟ ಅಧಿನಿಯಮಗಳು ಮತ್ತು ಅದರಡಿ ರಚಿಸಿದ ನಿಯಮಗಳಲ್ಲಿ ಅನುಕ್ರಮವಾಗಿ ಅವುಗಳಿಗೆ ನೀಡಲಾದ ಅವೇ ಅರ್ಥಗಳನ್ನು ಹೊಂದಿರತಕ್ಕದ್ದು.
3.ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರ ನೋಂದಣಿ. (1) ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಂದು ಕರ್ನಾಟಕ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು, ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಅವುಗಳು ಕಾರ್ಯನಿರ್ವಹಿಸುತ್ತಿರುವ ಅಥವಾ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮಗಳು ಅಥವಾ ಪಟ್ಟಣಗಳು, ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿಯ ದರ, ಯುಕ್ತ ಜಾಗರೂಕ ನಿರ್ವಹಣಾ ವ್ಯವಸ್ಥೆ ಮತ್ತು ವಸೂಲಾತಿಯನ್ನು ಜಾರಿಗೊಳಿಸುವ ವ್ಯವಸ್ಥೆ ಹಾಗೂ ಸಾಲ ನೀಡಿಕೆ
ಅಥವಾ ನೀಡಲಾದ ಹಣದ ವಸೂಲಾತಿ ಚಟುವಟಿಕೆಯನ್ನು ನಿರ್ವಹಿಸಲು ಅಧಿಕೃತಗೊಳಿಸಲಾದ ವ್ಯಕ್ತಿಗಳ ಪಟ್ಟಿ ಹಾಗೂ ಸಾಲಗಾರನ ಹೆಸರು ಮತ್ತು ವಿಳಾಸ, ಸಾಲಗಾರನಿಗೆ ನೀಡಲಾದ ಒಟ್ಟು ಅಸಲು ಮೊತ್ತ ಸಾಲಗಾರನಿಂದ ಈಗಾಗಲೇ ವಸೂಲು ಮಾಡಲಾದ ಮೊತ್ತ, ಸಾಲಗಾರನಿಂದ ಇನ್ನೂ ವಸೂಲು ಮಾಡಬೇಕಾದ ಬಾಕಿ ಮೊತ್ತ ಹಾಗೂ ಈ ಅಧ್ಯಾದೇಶದ ಉಪಬಂಧಗಳಿಗೆ ಅನುಸಾರವಾಗಿ ಯಾವಾಗಲೂ ಕಾರ್ಯವಹಿಸತಕ್ಕದೆಂಬ ಲಿಖಿತ ಮುಚ್ಚಳಿಕೆಯನ್ನು ಅದರಲ್ಲಿ ನಿರ್ದಿಷ್ಟಪಡಿಸಿ ಜಿಲ್ಲೆಯ ನೋಂದಣಿ ಪ್ರಾಧಿಕಾರಿಯ ಮುಂದೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) ಈ ಅಧ್ಯಾದೇಶದ ಪ್ರಾರಂಭದ ತರುವಾಯ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿಕೆ ವ್ಯವಹಾರವನ್ನು ನಿರ್ವಹಿಸುತ್ತಿರುವ ಅಥವಾ ಅದನ್ನು ಪ್ರಾರಂಭಿಸಲು ಉದ್ದೇಶಿಸಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು, ನೋಂದಣಿ ಪ್ರಾಧಿಕಾರಿಯಿಂದ ಈ ಅಧ್ಯಾದೇಶದಡಿ ನೋಂದಣಿ ಪಡೆಯದೆ ಯಾವುದೇ ಸಾಲಗಳನ್ನು ಮಂಜೂರು ಮಾಡತಕ್ಕದ್ದಲ್ಲ ಅಥವಾ ಯಾವುದೇ ಸಾಲವನ್ನು ವಸೂಲು ಮಾಡತಕ್ಕದ್ದಲ್ಲ.
(3) ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ಒದಗಿಸಲಾದ ವಿವರಗಳನ್ನು ನೋಂದಣಿ ಪ್ರಾಧಿಕಾರಿಯು ಪರಿಶೀಲಿಸತಕ್ಕದ್ದು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯಾಚರಣೆಗಾಗಿ ನಿರ್ದಿಷ್ಟಪಡಿಸಬಹುದಾದಂಥ ವಿಧಾನದಲ್ಲಿ ಒಂದು ವರ್ಷದ ಅವಧಿಗಾಗಿ ನೋಂದಣಿಯನ್ನು ನೀಡತಕ್ಕದ್ದು.
(4) ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು ನೋಂದಣಿಯ ನವೀಕರಣಕ್ಕಾಗಿ ಅರ್ಜಿಸಲ್ಲಿಸಿದಾಗ, (3)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಒಂದು ವರ್ಷದ ಅವಧಿಯ ಮುಕ್ತಾಯಗೊಳ್ಳುವ ಮೊದಲು, ಅರವತ್ತು ದಿನಗಳೊಳಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆ ಉದ್ದೇಶಕ್ಕಾಗಿ ಅರ್ಜಿಯನ್ನು ದಾಖಲಿಸತಕ್ಕದ್ದು ಹಾಗೂ ನೋಂದಣಿ ಪ್ರಾಧಿಕಾರಿಯು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕ್ಷೇತ್ರ ಮಟ್ಟದ ಕಾರ್ಯಕ್ಷಮತೆಯ ಯುಕ್ತ ಪರಿಶೀಲನೆಯ ತರುವಾಯ ಮತ್ತು ನೋಂದಣಿ ವಿಸ್ತರಣೆಯ ಕುರಿತು ಸಾರ್ವಜನಿಕರಿಂದ ಯಾವುವಾದರೂ ಆಕ್ಷೇಪಣೆಗಳಿದ್ದಲ್ಲಿ, ಅವನ್ನು ಆಲಿಸಿದ ತರುವಾಯ ನೋಂದಣಿ ಮುಕ್ತಾಯದ ದಿನಾಂಕಕ್ಕೆ ಮೊದಲು ಕನಿಷ್ಟ ಹದಿನೈದು ದಿನಗಳಲ್ಲಿ ನವೀಕರಣ ಮಂಜೂರು ಮಾಡುವುದೇ ಅಥವಾ ನವೀಕರಣ ನಿರಾಕರಿಸುವುದೇ ಎಂಬುದನ್ನು ತೀರ್ಮಾನಿಸತಕ್ಕದ್ದು.
(5) ಪ್ರತಿ ನೋಂದಣಿ ಪ್ರಾಧಿಕಾರಿಯು ತನ್ನ ಅಧಿಕಾರವ್ಯಾಪ್ತಿಯಡಿಯಲ್ಲಿನ ಪ್ರದೇಶಕ್ಕಾಗಿ ನಿರ್ದಿಷ್ಟಪಡಿಲಾದಂತೆ, ಸಿಂಧುವಾದ ನೋಂದಣಿ ಹೊಂದಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾದೇವಿದಾರರ ರಿಜಿಸ್ಟರ್‌ಗಳನ್ನು ನಿರ್ವಹಿಸತಕ್ಕದ್ದು.
4.ನೋಂದಣಿಯನ್ನು ರದ್ದುಗೊಳಿಸುವ ಅಥವಾ ಅಮಾನತ್ತುಗೊಳಿಸುವ ಅಧಿಕಾರ.- (1) ನೋಂದಣಿ ಪ್ರಾಧಿಕಾರಿಯು ಯಾವುದೇ ಸಮಯದಲ್ಲಿ ಸ್ವತಃ ಅಥವಾ ಸಾಲಗಾರನಿಂದ ದೂರು ಸ್ವೀಕರಿಸಿದ ಮೇಲೆ ಅಂಥ ರದ್ದತಿಗಾಗಿ ಲಿಖಿತದಲ್ಲಿ ಸಾಕಷ್ಟು ಕಾರಣಗಳನ್ನು ನೀಡಿದ ತರುವಾಯ ಮತ್ತು ಅದನ್ನು k
ಆಲಿಸಿದ ತರುವಾಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾದೇವಿದಾರರ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ರದ್ದುಪಡಿಸಲು ಶಿಫಾರಸ್ಸು ಮಾಡಬಹುದು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳನ್ನು ಅಥವಾ ಲೇವಾದೇವಿದಾರರನ್ನು ಯಾವ ಅಂಶಗಳ ಮೇಲೆ ಮೇಲ್ನೋಟಕ್ಕೆ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆಯೆಂದು ತಿಳಿಸುವ ನೋಟೀಸು ನೀಡಿದ ಹೊರತು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಗೆ ಅಂಥ ನೋಟೀಸಿನ ವಿರುದ್ಧ ಅಹವಾಲನ್ನು ಹೇಳಿಕೊಳ್ಳುವ ಸೂಕ್ತ ಅವಕಾಶವನ್ನು ನೀಡಿದ ಹೊರತು ನೋಂದಣಿ ರದ್ದತಿಯ ಆದೇಶವನ್ನು ಹೊರಡಿಸತಕ್ಕದ್ದಲ್ಲ.
ವಿವರಣೆ: ಉಪಪಪ್ರಕರಣ (1)ರ ಉದ್ದೇಶಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ
ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು, ಈ ಅಧ್ಯಾದೇಶದ ಯಾವುದೇ ಉಪಬಂಧಗಳ ಉಲ್ಲಂಘನೆಯ ಅಪರಾಧಕ್ಕಾಗಿನ ಅಪರಾಧ ನಿರ್ಣಯವು ಅದರ ನೋಂದಣಿಯನ್ನು ಅಮಾನತ್ತುಗೊಳಿಸಲು ಅಥವಾ ರದ್ದುಗೊಳಿಸಲು ಸಾಕಷ್ಟು ಕಾರಣವುಳ್ಳದ್ದಾಗಿರತಕ್ಕದ್ದು.
(2) ನೋಂದಣಿ ಪ್ರಾಧಿಕಾರಿಯು (1)ನೇ ಉಪಪ್ರಕರಣದಡಿ ವಿಚಾರಣೆಯನ್ನು ಬಾಕಿಯಿರಿಸಿ,
ದಾಖಲಿಸಬೇಕಾದ ಸಾಕಷ್ಟು ಕಾರಣಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾದೇವಿದಾರರ ನೋಂದಣಿಯನ್ನು ಅಮಾನತ್ತುಪಡಿಸಬಹುದು.
5. ಸಾಲ ನೀಡಿಕೆ ಮಾನದಂಡಗಳು. ಸರ್ಕಾರವು ಅಧಿಸೂಚನೆಯ ಮೂಲಕ ಸಾಲನೀಡಿಕೆ ಮಾನದಂಡಗಳು, ಸಂಗ್ರಹಣೆ ಮತ್ತು ವಸೂಲಾತಿ ಪದ್ಧತಿಗಳನ್ನು ನಿರ್ದಿಷ್ಟಪಡಿಸಬಹುದು.
6. ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ
ಸಂಸ್ಥೆಗಳು ಅಥವಾ ಲೇವಾದೇವಿದಾರರು ಭದ್ರತೆಯನ್ನು ಕೋರುವಂತಿಲ್ಲ. ಯಾವುದೇ ಮೈಕ್ರೋ
ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು
ಸಾಲಕ್ಕಾಗಿ ಗಿರವಿ, ಒತ್ತೆ ಅಥವಾ ಯಾವುದೇ ಇತರ ರೂಪದ ಭದ್ರತೆಯನ್ನು ಸಾಲಗಾರನಿಂದ ಭದ್ರತೆಯಾಗಿ ಕೋರತಕ್ಕದ್ದಲ್ಲ:
ಪರಂತು ಈ ಅಧ್ಯಾದೇಶದ ಪ್ರಾರಂಭದ ದಿನಾಂಕಕ್ಕೆ ಮೊದಲು ಸಾಲಗಾರನಿಂದ ಪಡೆಯಲಾದ ಯಾವುದೇ ಅಂಥ ಭದ್ರತೆಯು, ಸಾಲಗಾರನ ಪರವಾಗಿ ತಕ್ಷಣವೇ ಬಿಡುಗಡೆಗೊಳ್ಳದ್ದಾಗಿರತಕ್ಕದ್ದು.
ವಿವರಣೆ: ಈ ಅಧ್ಯಾದೇಶದ ಉದ್ದೇಶಗಳಿಗಾಗಿ, ಭದ್ರತೆ” ಎಂದರೆ, ಆಧಾರ ಮಾಡಿರುವುದರ ಯಾವುದೇ ಸ್ವರೂಪ.
7.ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ವಿಧಿಸಿದ ಬಡ್ಡಿಯ ದರಗಳಲ್ಲಿನ ಪಾರದರ್ಶಕತೆ (1) ಸಾಲವನ್ನು ಬೆಲೆಕಟ್ಟುವಲ್ಲಿ ಕೇವಲ ನಾಲ್ಕು ಘಟಕಗಳು ಇರತಕ್ಕದ್ದು, ಎಂದರೆ, ಬಡ್ಡಿ ವಿಧಿಸುವ ಶುಲ್ಕ, ಸಂಸ್ಕರಣಾ ಶುಲ್ಕ, ವಿಮಾ ಪ್ರೀಮಿಯಂ ಮತ್ತು ವಿಳಂಬಿತ ಪಾವತಿ ದಂಡಶುಲ್ಕ.
(2) ನಿರ್ದಿಷ್ಟಪಡಿಸಿದ ಒಂದು ಮಾದರಿ (standard) ಸಾಲದ ಕರಾರು ಇರತಕ್ಕದ್ದು.
(3) ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ಸಾಲಗಾರನಿಗೆ,
(i) ವಿಧಿಸಲಾದ ಪರಿಣಾಮಕಾರಿ ಬಡ್ಡಿಯ ದರ;
(ii) ಸಾಲಕ್ಕೆ ಲಗತ್ತಾಗಿರುವ ಎಲ್ಲಾ ಇತರ ಷರತ್ತುಗಳು ಮತ್ತು ನಿಬಂಧನೆಗಳು;
(iii) ಸಾಲಗಾರನನ್ನು ಗುರುತಿಸುವ ಸಾಕಷ್ಟು ಮಾಹಿತಿ;
(iv) ಮೈಕ್ರೋ ಫೈನಾನ್ಸ್ ಸಂಸ್ಥೆಯ ಮೂಲಕ ಸ್ವೀಕರಿಸಿದ ಕಂತುಗಳು ಮತ್ತು ಅಂತಿಮ ತೀರಿಕೆಯನ್ನೊಳಗೊಂಡ ಎಲ್ಲಾ ಮರುಪಾವತಿಗಳ ಹಿಂಬರಹಗಳು; ಮತ್ತು
(v) ಸಾಲದ ಕಾರ್ಡಿನಲ್ಲಿರುವ ಎಲ್ಲಾ ನಮೂದುಗಳು ಕನ್ನಡದಲ್ಲಿರತಕ್ಕದೆಂದು,
-ತೋರಿಸುವ ಸಾಲದ ಕಾರ್ಡನ್ನು ಒದಗಿಸತಕ್ಕದ್ದು.
(4) ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ವಿಧಿಸಲಾದ ಪರಿಣಾಮಕಾರಿ ಬಡ್ಡಿದರವನ್ನು ತಮ್ಮ ಎಲ್ಲಾ ಕಚೇರಿಗಳಲ್ಲಿನ ಎದ್ದುಕಾಣುವ ಸ್ಥಳದಲ್ಲಿ ಮತ್ತು ಅವುಗಳು ಹೊರಡಿಸಿದ ಪತ್ರಗಳಲ್ಲಿ ಮತ್ತು ಅವುಗಳ ಜಾಲತಾಣದಲ್ಲಿ ಪ್ರದರ್ಶಿಸತಕ್ಕದ್ದು.
(5) ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಂದ ಸಾಲಗಾರನು ಪಡೆದ ಎಲ್ಲಾ ಸಾಲಗಳನ್ನೂ ಅವುಗಳಲ್ಲಿನ ವಿಧಾನದಂತೆ ಕರಾರು ಮಾಡಿಕೊಳ್ಳತಕ್ಕದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ಸಾಲಗಳನ್ನು ಮಂಜೂರು ಮಾಡುವ ಮತ್ತು ವಿತರಣೆ ಮಾಡುವ ಪ್ರಕ್ರಿಯೆಯಲ್ಲಿ ಈ ಮುಂದಿನವುಗಳನ್ನು ಪಾಲಿಸತಕ್ಕದ್ದು,
(i) ಸಾಲಗಾರರೊಂದಿಗಿನ ಎಲ್ಲಾ ಪತ್ರವ್ಯವಹಾರಗಳು ಕನ್ನಡದಲ್ಲಿರತಕ್ಕದ್ದು;
(ii) ಇತರ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು, ನೀಡಿದ ಷರತ್ತುಗಳು ಮತ್ತು ನಿಬಂಧನೆಗಳೊಂದಿಗೆ ಅರ್ಥಪೂರ್ಣ ಹೋಲಿಕೆಯನ್ನು ಮಾಡುವಂತೆ ಮತ್ತು ಸಾಲಗಾರನು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಾಲಗಾರನ ಹಿತಾಸಕ್ತಿಗೆ ಪರಿಣಾಮಬೀರಬಹುದಾದ ಅಗತ್ಯ ಮಾಹಿತಿಗಳನ್ನು ಸಾಲದ ಅರ್ಜಿ ನಮೂನೆಗಳು ಒಳಗೊಂಡಿರತಕ್ಕದ್ದು. ಸಾಲದ ಅರ್ಜಿ ನಮೂನೆಯಲ್ಲಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾದ ಅವಶ್ಯಕ ದಸ್ತಾವೇಜುಗಳನ್ನು ಸೂಚಿಸತಕ್ಕದ್ದು;
(6) ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ನಗದು ಪುಸ್ತಕ, ಖಾತಾ ಪುಸ್ತಕ ಮತ್ತು ನಿರ್ದಿಷ್ಟಪಡಿಸಬಹುದಾದ ಅಂಥ ಇತರ ಲೆಕ್ಕದ ಪುಸ್ತಕಗಳನ್ನು ಇರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(7) ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರನು ಸಾಲವನ್ನು ನೀಡಿದ ಒಂದು ದಿನದ ಮೊದಲು, ಸಾಲಗಾರನಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ, ಸಾಲದ ಮೊತ್ತ ಮತ್ತು ದಿನಾಂಕ ಹಾಗೂ ಅದರ ವಾಯಿದೆ, ಮತ್ತು ವಿಧಿಸಲಾದ ಪರಿಣಾಮಕಾರಿ ಬಡ್ಡಿ ದರ, ಈ ಅಂಶಗಳನ್ನು ನಿಚ್ಚಳ ಮತ್ತು ಸುಸ್ಪಷ್ಟವಾಗಿ ತೋರಿಸುವ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿನ ವಿವರಪಟ್ಟಿಯನ್ನು ತಲುಪಿಸತಕ್ಕದು ಅಥವಾ ತಲುಪಿಸುವಂತೆ ಮಾಡತಕ್ಕದ್ದು.
(8) ಪ್ರತಿ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರತಕ್ಕದ್ದು.
(9) ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಆತನಿಗೆ/ಆಕೆಗೆ ಅದರ ಅಧಿಕೃತ ಪ್ರತಿನಿಧಿಯು ಯುಕ್ತವಾಗಿ ಸಹಿಮಾಡಿದ ಪಾವತಿಯ ರಸೀದಿಯನ್ನು ನೀಡಿದ ಹೊರತು ಯಾವುದೇ ಸಾಲದ ಕಾರಣಕ್ಕಾಗಿ ಸಾಲಗಾರನಿಂದ ಯಾವುದೇ ಪಾವತಿಯನ್ನು ಸ್ವೀಕರಿಸತಕ್ಕದ್ದಲ್ಲ.
(10) ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಸಾಲಗಾರನ ಲಿಖಿತ ಬೇಡಿಕೆಯ ಮೇರೆಗೆ, ಅಥವಾ ಸಾಲಗಾರನು ಹಾಗೆ ಅಗತ್ಯಪಡಿಸಿದಲ್ಲಿ, ಬೇಡಿಕೆಯಲ್ಲಿ ಈ ಕುರಿತು ನಿರ್ದಿಷ್ಟಪಡಿಸಿದ ಯಾರೇ ವ್ಯಕ್ತಿಗೆ ಆತನು/ಆಕೆಯು ಪಡೆದ ಸಾಲ ಸಂಬಂಧಿ ಯಾವುದೇ ದಸ್ತಾವೇಜಿನ ಪ್ರತಿಯನ್ನು ಒದಗಿಸತಕ್ಕದ್ದು:
ಪರಂತು ಈ ಅಧ್ಯಾದೇಶದ ಪ್ರಾರಂಭಕ್ಕೆ ಮೊದಲು ನೀಡಿದ ಸಾಲಗಳ ಸಂದರ್ಭದಲ್ಲಿ, ಸಾಲಗಾರನಿಂದ ಯಾವುದೇ ಭದ್ರತೆಯನ್ನು ಸ್ವೀಕರಿಸಲಾಗಿದ್ದಲ್ಲಿ ಲೇವಾದೇವಿದಾರನು ಅದನ್ನು ನಿರ್ದಿಷ್ಟಪಡಿಸುವುದು ಕಡ್ಡಾಯವಾಗಿರತಕ್ಕದ್ದು.
(11) ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಮುಂಬರುವ ತ್ರೈಮಾಸಿಕ ಮತ್ತು ಸಂದರ್ಭಾನುಸಾರವಾಗಿ ಹಣಕಾಸು ವರ್ಷದ 10ನೇ ದಿನಾಂಕಕ್ಕೆ ಮೊದಲು ನೋಂದಣಿ ಪ್ರಾಧಿಕಾರಿಗೆ, ಸಾಲಗಾರರ ಪಟ್ಟಿ, ಪ್ರತಿಯೊಬ್ಬರಿಗೆ ನೀಡಲಾದ ಸಾಲ ಮತ್ತು ಮಾಡಲಾದ ಮರುಪಾವತಿಯ ಮೇಲೆ ವಿಧಿಸಿದ ಬಡ್ಡಿದರವನ್ನು ತೋರುವ ತ್ರೈಮಾಸಿಕ ತಃಖೆ ಮತ್ತು ವಾರ್ಷಿಕ ತಃಖೆಯನ್ನು ಸಲ್ಲಿಸತಕ್ಕದ್ದು.
(12) ತ್ರೈಮಾಸಿಕ ತಃಖೆ ಮತ್ತು ವಾರ್ಷಿಕ ತಃಖ್ಯೆಯನ್ನು ಸಲ್ಲಿಸಲು ವಿಫಲವಾದ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು, ಆರು ತಿಂಗಳುಗಳ ಕಾರವಾಸದೊಂದಿಗೆ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ಅಥವಾ ಅವರಡರಿಂದಲೂ ದಂಡಿತವಾಗತಕ್ಕದ್ದು.
8.ಬಲವಂತದ ಕ್ರಮಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ (MFI) ವಿರುದ್ಧ ದಂಡನೆ.-ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು, ಸಾಲಗಾರರಿಂದ ಹಣ ವಸೂಲಾತಿಗಾಗಿ ಸ್ವತಃ ಅಥವಾ ಅದರ ಏಜೆಂಟರ ಮೂಲಕವಾಗಲಿ ಯಾವುದೇ ಇತರ ಬಲವಂತದ ಕ್ರಮವನ್ನು ಬಳಸತಕ್ಕದ್ದಲ್ಲ ಮತ್ತು ಬಲವಂತ ವಸೂಲಾತಿಯ ಯಾವುದೇ ಸ್ವರೂಪಕ್ಕಾಗಿ ಈ ಅಧ್ಯಾದೇಶದ ಉಪಬಂಧಗಳಡಿ ದಂಡನೆಗೆ ಹೊಣೆಯಾಗತಕ್ಕದ್ದು ಹಾಗೂ ಈ ಅಧ್ಯಾದೇಶದ ಮೇರೆಗೆ ಉಪಬಂಧಿಸಲಾದಂತೆ ಅಂಥ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನ ನೋಂದಣಿಯನ್ನು ಅಮಾನತ್ತುಪಡಿಸಲು ಅಥವಾ ರದ್ದುಪಡಿಸಲು ನೋಂದಣಿ ಪ್ರಾಧಿಕಾರಿಯು ಅಧಿಕಾರವುಳ್ಳವನಾಗಿರತಕ್ಕದ್ದು.
ವಿವರಣೆ: ಈ ಪ್ರಕರಣದ ಉದ್ದೇಶಗಳಿಗಾ, ಮೈಕ್ರೋ ಫೈನಾನ್ಸ್ ಸಂಸ್ಥೆಯ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನ ಮೂಲಕ ಸಾಲಗಾರರ ವಿರುದ್ಧದ “ಬಲವಂತದ ಕ್ರಮ”ವು ಈ ಮುಂದಿನವುಗಳನ್ನು ಒಳಗೊಳ್ಳುವುದು, ಎಂದರೆ:-
(i) ಸಾಲಗಾರರನ್ನು ಅಥವಾ ಆತನ/ಆಕೆಯ ಕುಟುಂಬ ಸದಸ್ಯರಿಗೆ ಒತ್ತಡವನ್ನು ಹಾಕುವುದು ಅಥವಾ ತಡೆಯೊಡ್ಡುವುದು ಅಥವಾ ಹಿಂಸೆಯನ್ನು ಬಳಸುವುದು ಅಥವಾ ಅವಮಾನಿಸುವುದು ಅಥವಾ ಬೆದರಿಸುವುದು, ಅಥವಾ
(ii) ಸಾಲಗಾರನನ್ನು ಆತನ/ಆಕೆಯ ಕುಟುಂಬ ಸದಸ್ಯರನ್ನು ಸ್ಥಳದಿಂದ ಸ್ಥಳಕ್ಕೆ ನಿರಂತರವಾಗಿ ಹಿಂಬಾಲಿಸುವುದು ಅಥವಾ ಆತನ/ಆಕೆಯ ಒಡೆತನದ ಅಥವಾ ಬಳಕೆಯಲ್ಲಿನ ಯಾವುದೇ ಸ್ವತ್ತಿಗೆ ಮಧ್ಯಪ್ರವೇಶಿಸುವುದು ಅಥವಾ ಆತನ/ಆಕೆಯಿಂದ ಕಿತ್ತುಕೊಳ್ಳುವುದು ಅಥವಾ ಯಾವುದೇ ಅಂಥ ಸ್ವತ್ತಿನ ಬಳಕೆಗೆ ಅಡ್ಡಿಪಡಿಸುವುದು, ಅಥವಾ
(ii) ಅಂಥ ಇತರ ವ್ಯಕ್ತಿಯು ಯುಕ್ತವಾಗಿ ತೊಡಗಿರುವ ಅಥವಾ ವಾಸವಾಗಿರುವ ಅಥವಾ ಕೆಲಸ ಮಾಡುತ್ತಿರುವ ಅಥವಾ ವ್ಯವಹಾರ ನಡೆಸುತ್ತಿರುವ ಮನೆ ಅಥವಾ ಇತರ ಸ್ಥಳಕ್ಕೆ ಬಲವಂತದ ಕ್ರಮವನ್ನು ಕೈಗೊಳ್ಳುವ ಉದ್ದೇಶದಿಂದ ಆಗಾಗ ಭೇಟಿ ನೀಡುವುದು ಅಥವಾ ಭೇಟಿಯಾಗುವಂತೆ ಮಾಡುವುದು, ಅಥವಾ
(iv) ಸಾಲಗಾರನಿಗೆ ಹಣ ಪಾವತಿಗಾಗಿ ಬಲವಂತದ ಮತ್ತು ಅನುಚಿತ ಪ್ರಭಾವವನ್ನು ಬಳಸಿ ಮಾತುಕತೆಗೆ/ಒತ್ತಾಯಿಸುವುದಕ್ಕೆ ಖಾಸಗಿ ಅಥವಾ ಹೊರಗುತ್ತಿಗೆ ಅಥವಾ ಬಾಹ್ಯ ಏಜೆನ್ಸಿಗಳ, ಕ್ರಿಮಿನಲ್ ಹಿನ್ನಲೆಯುಳ್ಳವರ ಸೇವೆಯನ್ನು ಬಳಸುವುದು, ಅಥವಾ
(v) ಸರ್ಕಾರದ ಯಾವುದೇ ಕಾರ್ಯಕ್ರಮದಡಿಯಲ್ಲಿ ಸಾಲಗಾರನಿಗೆ ಪ್ರಯೋಜನದ ಹಕ್ಕುಗಳುಳ್ಳ ಯಾವುದೇ ದಸ್ತಾವೇಜನ್ನು ಸಾಲಗಾರನಿಂದ ಬಲವಂತವಾಗಿ ಪಡೆಯುವುದು.
9.ದಾಖಲೆಗಳು ಅಥವಾ ದಸ್ತಾವೇಜುಗಳನ್ನು ಹಾಜರುಪಡಿಸಲು ಅಗತ್ಯಪಡಿಸುವ ಅಧಿಕಾರ ಹಾಗೂ ಪ್ರವೇಶ, ತಪಾಸಣೆ ಮತ್ತು ವಶಪಡಿಸಿಕೊಳ್ಳುವ ಅಧಿಕಾರ.- (1) ನೋಂದಣಿ ಪ್ರಾಧಿಕಾರಿ ಅಥವಾ ಆತನು/ಆಕೆಯು ಈ ಕುರಿತು ಅಧಿಕೃತಗೊಳಿಸಿದ ಯಾರೇ ಅಧಿಕಾರಿಯು, ಈ ಅಧ್ಯಾದೇಶದ ಉಪಬಂಧಗಳಿಗೆ ಅನುಸಾರವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ವ್ಯವಹಾರ ನಡೆಸುತ್ತಿರುವರೆ ಎಂಬುದನ್ನು ಪರಿಶೀಲಿಸುವುದು, ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನ ಕಛೇರಿಯ ಆವರಣಕ್ಕೆ ಪ್ರವೇಶಿಸುವುದು ಅಥವಾ ಆತನ/ಆಕೆಯ ಅಭಿಪ್ರಾಯದಲ್ಲಿ ಯಾರೇ ವ್ಯಕ್ತಿಯು ಸಾಲ ಕೊಡುವ ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ ಮತ್ತು ಅಂಥ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಅಥವಾ ದಸ್ತಾವೇಜನ್ನು ಆತನಿಗೆ/ಆಕೆಗೆ ಹಾಜರುಪಡಿಸಲು ಸೂಚಿಸುವುದು ಹಾಗೂ ಪ್ರತಿಯೊಂದು ಅಂಥ ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಅಂಥ ತಪಾಸಣೆಗೆ ಅನುಮತಿಸತಕ್ಕದ್ದು ಮತ್ತು ಅಂಥ ತಪಾಸಣೆಯಲ್ಲಿ ಅಂಥ ದಾಖಲೆ ಅಥವಾ ದಸ್ತಾವೇಜನ್ನು ಅಗತ್ಯವಿರುವಾಗಲೆಲ್ಲಾ ಹಾಜರುಪಡಿಸತಕ್ಕದ್ದು.
(2) ನೋಂದಣಿ ಪ್ರಾಧಿಕಾರಿಯು, (1)ನೇ ಉಪಪ್ರಕರಣದ ಉದ್ದೇಶಗಳಿಗಾಗಿ ಆವರಣಗಳನ್ನು ಶೋಧಿಸಬಹುದು ಮತ್ತು ಅಗತ್ಯವಿರಬಹುದಾದ ಯಾವುದೇ ದಾಖಲೆ ಅಥವಾ ದಸ್ತಾವೇಜನ್ನು ವಶಪಡಿಸಿಕೊಳ್ಳಬಹುದು ಹಾಗೂ ಪರಿಶೀಲನೆ, ಪ್ರಾಸಿಕ್ಯೂಶನ್ ಅಥವಾ ಇತರೆ ಕಾನೂನು ಕ್ರಮಗಳ ಉದ್ದೇಶಗಳಿಗಾಗಿ ಅಗತ್ಯವಿರಬಹುದಾದಂಥ ಅವಧಿಗೆ ಮಾತ್ರವೇ ವಶಪಡಿಸಿಕೊಂಡ ದಾಖಲೆಗಳು ಅಥವಾ ದಸ್ತಾವೇಜುಗಳನ್ನು ಇಟ್ಟುಕೊಳ್ಳತಕ್ಕದ್ದು.
(3) ನೋಂದಣಿ ಪ್ರಾಧಿಕಾರಿ ಅಥವಾ (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿರುವ ಇತರ
ಅಧಿಕಾರಿಯು, ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನು ಸಂಬಂಧಿತ ಮಾಹಿತಿಯನ್ನು ಒದಗಿಸುವ ಮಟ್ಟದಲ್ಲಿರುವನೆಂದು ಆತನು/ಆಕೆಯು ಅಭಿಪ್ರಾಯಪಟ್ಟ ಯಾರೇ ವ್ಯಕ್ತಿಯನ್ನು ಸಮನು ಮಾಡುವ ಮತ್ತು ಪರಿಶೀಲಿಸುವ ಅಧಿಕಾರವನ್ನು ಸಹ ಹೊಂದಿರತಕ್ಕದ್ದು.
10.ದೂರುಗಳು.- ಮೈಕ್ರೋ ಫೈನಾನ್ಸ್ ಸಂಸ್ಥೆ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರನಿಂದ ಈ ಅಧ್ಯಾದೇಶದ ಉಪಬಂಧಗಳ ಉಲ್ಲಂಘನೆಯ ಕುರಿತು ಸಂಬಂಧಪಟ್ಟ/ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಮುಂದೆ ದೂರನ್ನು ದಾಖಲಿಸುವುದು. ಯಾರೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲು ನಿರಾಕರಿಸತಕ್ಕದ್ದಲ್ಲ:
ಪರಂತು ಪೊಲೀಸ್ ಉಪ ಅಧೀಕ್ಷಕರ (Deputy Superintendent of Police) ದರ್ಜೆಗೆ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಯು ಸ್ವತಃ ಪ್ರಕರಣವನ್ನು ದಾಖಲಿಸಿಕೊಳ್ಳಲು ಅಧಿಕಾರವುಳ್ಳವನಾಗಿರತಕ್ಕದ್ದು.
11.ಒಂಬುಡ್ಸ್ ಪರ್ಸನ್ನ ನೇಮಕ.- ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕಾಗಿ,
ಸಾಲಗಾರ ಮತ್ತು ಲೇವಾದೇವಿದಾರನ ನಡುವೆ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸರ್ಕಾರವು ಅಧಿಸೂಚನೆಯ ಮೂಲಕ ಒಂಬುಡ್ಸ್ ಪರ್ಸನ್ನನ್ನು ನೇಮಕ ಮಾಡಬಹುದು.
12.ಅಧ್ಯಾದೇಶದ 8ನೇ ಪ್ರಕರಣದ ಉಲ್ಲಂಘನೆಗಾಗಿ ದಂಡನೆ. ಈ ಅಧ್ಯಾದೇಶದ 8ನೇ ಪ್ರಕರಣವನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ವಿಚಾರಣೆಗೆ ಒಳಪಡತಕ್ಕದು ಮತ್ತು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ ಮೂಲಕ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದೊಂದಿಗೆ ಹಾಗೂ ಐದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು. ಈ ಅಧ್ಯಾದೇಶದಡಿಯಲ್ಲಿನ ಅಪರಾಧಗಳು ಸಂಸ್ಕೃಯವಾಗಿರತಕ್ಕದ್ದು ಮತ್ತು ಜಾಮೀನುರಹಿತವಾಗಿರತಕ್ಕದ್ದು.
13.ಪ್ರತಿಯೊಬ್ಬ ಅಧಿಕಾರಿಯು ಲೋಕನೌಕರನಾಗಿರುವುದು. ಈ ಅಧ್ಯಾದೇಶದ ಉಪಬಂಧಗಳಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಭಾರತೀಯ ನ್ಯಾಯ ಸಂಹಿತೆ, 2023ರ 2ನೇ ಪ್ರಕರಣದ (28)ನೇ ಉಪಪ್ರಕರಣದ ಅರ್ಥವ್ಯಾಪ್ತಿಯೊಳಗೆ ಲೋಕನೌಕರನೆಂದು ಭಾವಿಸತಕ್ಕದ್ದು.
14.ಲೈಸೆನ್ನುರಹಿತ ಮತ್ತು ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರ ಮೂಲಕ ಬಲವಂತದ ಕ್ರಮದಿಂದ ಸಾಲಗಾರನಿಗೆ ಪರಿಹಾರ (relief).- ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಅಥವಾ ಯಾವುದೇ ಅಂಥ ಕಾನೂನಿನ ಮೂಲಕ ಜಾರಿಯಲ್ಲಿರುವ ಕರಾರಿನಲ್ಲಿ ಅಥವಾ ಲಿಖಿತಪತ್ರದಲ್ಲಿ ಏನೇ ಒಳಗೊಂಡಿದ್ದರೂ ಮತ್ತು ಈ ಅಧ್ಯಾದೇಶದಲ್ಲಿ ಅನ್ಯಥಾ ಸ್ಪಷ್ಟವಾಗಿ ಉಪಬಂಧಿಸಿದುದನ್ನುಳಿದು, ಈ ಪ್ರಕರಣದ ಪ್ರಾರಂಭದ ದಿನಾಂಕದಿಂದ ಜಾರಿಗೆ ಬರುವಂತೆ,-
(ಎ) ಈ ಪ್ರಕರಣದ ಪ್ರಾರಂಭಕ್ಕೆ ಮೊದಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ನೋಂದಾಯಿತವಲ್ಲದಿದ್ದರೆ ಮತ್ತು ಲೈಸೆನ್ನುರಹಿತವಾಗಿದ್ದರೆ, ಸಾಲಗಾರನು ಪಾವತಿಸಬೇಕಾದ. ಯಾವುದಾದರೂ ಬಡ್ಡಿಯ ಮೊತ್ತವಿದ್ದಲ್ಲಿ ಅದನ್ನೂ ಒಳಗೊಂಡಂತೆ “ಸಮಾಜದ ದುರ್ಬಲ ವರ್ಗದವರಿಗಾಗಿ” ಮುಂಗಡ ನೀಡಿದ ಪ್ರತಿಯೊಂದು ಸಾಲವನ್ನು ಸಂಪೂರ್ಣವಾಗಿ ತೀರಿಕೆಯಾಗಿದೆಯೆಂದು ಭಾವಿಸತಕ್ಕದ್ದು;
(ಬಿ) ಯಾವುದಾದರೂ ಬಡ್ಡಿಯಿದ್ದಲ್ಲಿ ಅದನ್ನೂ ಒಳಗೊಂಡಂತೆ ಅಂಥ ಸಾಲದ ಯಾವುದೇ ಮೊತ್ತದ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಯಾವುದೇ ದಾವೆ ಅಥವಾ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯವು ಪುರಸ್ಕರಿಸತಕ್ಕದ್ದಲ್ಲ:
ಪರಂತು ಸಾಲಗಾರ ಮತ್ತು ಯಾರೇ ಇತರ ವ್ಯಕ್ತಿಯ ವಿರುದ್ಧ ಜಂಟಿಯಾಗಿ ದಾವೆ ಅಥವಾ ವ್ಯವಹರಣೆಯನ್ನು ಹೂಡಲಾಗಿದ್ದರೆ, ಈ ಪ್ರಕರಣದಲ್ಲಿ ಇರುವುದಾವುದೂ ಅಂಥ ಇತರ ವ್ಯಕ್ತಿಗೆ ಅದು ಸಂಬಂಧಿಸಿರುವಷ್ಟರ ಮಟ್ಟಿಗೆ ದಾವೆ ಅಥವಾ ವ್ಯವಹರಣೆಯ ಪುರಸ್ಕರಣೆಯು (maintainability) ಅನ್ವಯವಾಗತಕ್ಕದ್ದು.
(ಸಿ) ಯಾವುದೇ ಸಾಲದ ವಸೂಲಾತಿಗಾಗಿ ಯಾರೇ ಸಾಲಗಾರನ ವಿರುದ್ಧ ಸದರಿ ದಿನಾಂಕದಂದು ಬಾಕಿಯಿರುವ ಎಲ್ಲಾ ದಾವೆಗಳು ಮತ್ತು ವ್ಯವಹರಣೆಗಳು (ಅಪೀಲುಗಳು, ಪುನರೀಕ್ಷಣೆಗಳು, ಜಪ್ತಿಗಳು ಅಥವಾ ಅಮಲ್ಕಾರಿ ವ್ಯವಹರಣೆಗಳನ್ನು ಒಳಗೊಂಡು) ಕೊನೆಗೊಳ್ಳತಕ್ಕದ್ದು.
15. ತೊಂದರೆಗಳನ್ನು ನಿವಾರಿಸುವ ಅಧಿಕಾರ.- ಈ ಅಧ್ಯಾದೇಶದ ಉಪಬಂಧಗಳನ್ನು
ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ರಾಜಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ತೊಂದರೆಗಳನ್ನು ನಿವಾರಿಸುವ ಉದ್ದೇಶಗಳಿಗಾಗಿ ತನಗೆ ಅವಶ್ಯಕ ಅಥವಾ ಯುಕ್ತವೆಂದು ಕಂಡುಬರುವ, ಈ ಅಧ್ಯಾದೇಶದ ಉಪಬಂಧಗಳಿಗೆ ಅಸಂಗತವಾಗಿರದಂಥ ಉಪಬಂಧಗಳನ್ನು ರಚಿಸಬಹುದು:
ಪರಂತು, ಈ ಅಧ್ಯಾದೇಶವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯಗೊಂಡ ತರುವಾಯ ಈ ಪ್ರಕರಣದಡಿ ಅಂಥ ಯಾವುದೇ ಆದೇಶವನ್ನು ಮಾಡತಕ್ಕದ್ದಲ್ಲ.
16. ನಿರ್ದೇಶನಗಳನ್ನು ನೀಡುವ ಅಧಿಕಾರ. ಸರ್ಕಾರವು ಕಾಲಕಾಲಕ್ಕೆ ಈ ಅಧ್ಯಾದೇಶದ
ಸೂಕ್ತ ಅನುಷ್ಠಾನಕ್ಕಾಗಿ, ಅಧಿಕಾರಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು, ಸಾಲಗಾರರು, ಲೇವಾದೇವಿದಾರರಿಗೆ ಈ ಅಧ್ಯಾದೇಶದ ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಉಪಬಂಧಗಳಿಗೆ ಅಸಂಗತವಾಗಿರದ ಅಂಥ ಆದೇಶಗಳು, ಸೂಚನೆಗಳು ಮತ್ತು ನಿರ್ದೇಶನಗಳನ್ನು ರಿಜಿಸ್ಟರ್ಗಗಳು ನಮೂನೆಗಳು, ಆನ್‌ಲೈನ್ ಪ್ರಕ್ರಿಯೆಗಳು, ಪೋರ್ಟಲ್‌ಗಳು, ಸಹಾಯ ಕೇಂದ್ರಗಳನ್ನು ನಿರ್ದಿಷ್ಟಪಡಿಸುವ ಮೂಲಕ ಹೊರಡಿಸಬಹುದು ಹಾಗೂ ಅಧ್ಯಾದೇಶವನ್ನು ಜಾರಿಗೊಳಿಸಲು ನಿಯೋಜಿತರಾದ ಅಂಥ ಅಧಿಕಾರಿಗಳು ಮತ್ತು ಇತರ ಎಲ್ಲಾ ವ್ಯಕ್ತಿಗಳು ಅಂಥ ಆದೇಶಗಳನ್ನು, ಸೂಚನೆಗಳನ್ನು ಹಾಗೂ ನಿರ್ದೇಶನಗಳನ್ನು ಪಾಲಿಸತಕ್ಕದ್ದು.
17.ನಿಯಮಗಳ ರಚನಾಧಿಕಾರ.-(1) ರಾಜ್ಯ ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ, ಈ ಅಧ್ಯಾದೇಶದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ನಿಯಮಗಳನ್ನು ರಚಿಸಬಹದು.
(2) ಈ ಪ್ರಕರಣದ ಮೂಲಕ ಪ್ರದತ್ತವಾದ ನಿಯಮಗಳನ್ನು ರಚಿಸುವ ಅಧಿಕಾರವು ಪೂರ್ವ ಪ್ರಕಟಣೆಯ ತರುವಾಯ ಮಾಡಬಹುದಾದ ನಿಯಮಗಳ ಷರತ್ತಿಗೆ ಒಳಪಟ್ಟಿರತಕ್ಕದ್ದು.
(3) ಈ ಅಧ್ಯಾದೇಶದ ಅಡಿಯಲ್ಲಿ ರಚಿಸಿದ ಪ್ರತಿಯೊಂದು ನಿಯಮ ಅಥವಾ ಅಧಿಸೂಚನೆಯನ್ನು, ಅದನ್ನು ರಚಿಸಿದ ತರುವಾಯ ಸಾಧ್ಯವಾದಷ್ಟು ಬೇಗನೇ ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ ಒಟ್ಟು ಮೂವತ್ತು ದಿನಗಳಿಗಾಗಿ ಒಳಗೊಂಡಿರಬಹುದಾದ ಒಂದು ಅಥವಾ ಎರಡು ಅಥವಾ ಹೆಚ್ಚಿನ ನಿಕಟೋತ್ತರ ಅಧಿವೇಶನಗಳಲ್ಲಿ ಮಂಡಿಸತಕ್ಕದ್ದು ಮತ್ತು ಅದನ್ನು ಹಾಗೆ ನಿಕಟೋತ್ತರ ಅಧಿವೇಶನಗಳು ಮುಕ್ತಾಯವಾಗುವ ಮೊದಲು, ವಿಧಾನಮಂಡಲದ ಉಭಯಸದನಗಳು ನಿಯಮದಲ್ಲಿ ಯಾವುದೇ ಮಾರ್ಪಾಟುಮಾಡಬೇಕೆಂದು ಒಪ್ಪಿದರೆ ಅಥವಾ ನಿಯಮವನ್ನು ರಚಿಸಬಾರದೆಂದು ತೀರ್ಮಾನಿಸಿದರೆ, ಆ ತರುವಾಯ ಅಂಥ ನಿಯಮವು ಸಂದರ್ಭಾನುಸಾರ ಹಾಗೆ ಮಾರ್ಪಾಟಾದ ರೀತಿಯಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ. ಆದಾಗ್ಯೂ, ಅಂಥ ಮಾರ್ಪಾಟು ಅಥವಾ ರದ್ದತಿಯು ಆ ನಿಯಮದ ಅಥವಾ ಅಧಿಸೂಚನೆಯ ಅಡಿಯಲ್ಲಿ ಈ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವಾಗತಕ್ಕದ್ದಲ್ಲ.
ಥಾವರ್‌ಚಂದ್ ಗೆಹೋಟ್
ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.