Information you need to know about POCSO Act
ಮಕ್ಕಳ ಮೇಲೆ ಲೈಂಗಿಕ ಶೋಷಣೆಗಳು ಆಗದಂತೆ ತಡೆಯಬೇಕು ಮತ್ತು ಯಾರಾದರೂ ಮಕ್ಕಳನ್ನು ಲೈಂಗಿಕವಾಗಿ ಶೋಷಣೆಮಾಡಿದರೆ, ಅಂತಹವರಿಗೆ ಶಿಕ್ಷೆ ವಿಧಿಸಬೇಕು ಎಂದು ಉದ್ದೇಶಿಸಿ POCSO ಕಾಯಿದೆ (Protection of Children from Sexual Offences/ಮಕ್ಕಳನ್ನು ಲೈಂಗಿಕ ಅಪರಾಧಗಳ ವಿರುದ್ಧ ರಕ್ಷಿಸಲು ಕಾಯಿದೆ) 2012ನ್ನು ಜಾರಿಗೆ ತರಲಾಗಿದೆ. ಕಾಯಿದೆಯಲ್ಲಿನ ವಿಚಾರಗಳ ಕುರಿತು ಮಕ್ಕಳಿಗೆ ಮಾಹಿತಿ ಕೊಡಬೇಕು ಮತ್ತು ಮಕ್ಕಳು ಈ ವಿಚಾರಗಳನ್ನು ತಿಳಿದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಷ್ಟೇ ಅಲ್ಲದೆ, ಯಾರಾದರೂ ತಮ್ಮನ್ನು ಅಥವಾ ಬೇರೆ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲು ಯತ್ನಿಸಿದರೆ, ಅಥವಾ ಶೋಷಿಸಿದರೆ ಪೊಲೀಸರಿಗೆ ಅಥವಾ ತಾವು ಯಾರನ್ನು ನಂಬುತ್ತಾರೋ ಅಂತಹವರಿಗೆ ಮಾಹಿತಿ/ದೂರು ಕೊಡಬೇಕು ಎಂದು ಕಾಯಿದೆ ಆಶಿಸುತ್ತದೆ. ಇದು ಮಕ್ಕಳ ಹಕ್ಕು ಕೂಡಾ ಆಗಿದೆ.
ಹಾಗಾದರೆ ಈ ಕಾಯಿದೆಯಲ್ಲಿನ ಯಾವ ಯಾವ ವಿಚಾರಗಳನ್ನು ಮಕ್ಕಳು ತಿಳಿದುಕೊಳ್ಳಬೇಕು? ಕಾನೂನಿನ ಸಹಾಯ ಪಡೆಯಲು ತಾವೇನು ಮಾಡಬೇಕು? ತಮ್ಮ ಯಾವ ನಡವಳಿಕೆ ಕಾನೂನು ವಿರುದ್ದ ಆದೀತು ಎಂದು ಹೇಗೆ ತಿಳಿಯುವುದು? ಯಾರಿಗೆ ಯಾವ ವಿಚಾರಗಳಿಗೆ ದೂರು ಕೊಡಬೇಕು? ದೂರು ಕೊಟ್ಟರೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡುತ್ತಾರೇನು? ಇಂತಹ ಕೆಲವು ಪ್ರಶ್ನೆಗಳು ಮಕ್ಕಳಿಗೆ ಬರಬಹುದು.
ಜೊತೆಗೆ ಕಾನೂನು, ಕಾಯಿದೆ, ದೂರು ಎಂದರೆ ಪೊಲೀಸರ ಪ್ರವೇಶವಾಗುತ್ತದೆ. ವಿಚಾರಣೆಯಾಗುತ್ತದೆ. ನ್ಯಾಯಾಲಯಗಳಿಗೆ ಹೋಗಬೇಕಾಗುತ್ತದೆ ಅವೆಲ್ಲಾ ಮಕ್ಕಳಿಂದ ಸಾಧ್ಯವೇ ಎನ್ನುವ ಅನುಮಾನವೂ ಬಂದಿರಲು ಸಾಧ್ಯ. ಈ ಕೈಪಿಡಿಯಲ್ಲಿ ಅಂತಹ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡಲಾಗಿದೆ. ಆ ಮೂಲಕ ಎಲ್ಲ ಮಕ್ಕಳನ್ನು ಲೈಂಗಿಕ ಶೋಷಣೆಗೆ ಗುರಿಯಾಗದಂತೆ ರಕ್ಷಿಸಲು ಈ ಕೈಪಿಡಿಯಲ್ಲಿನ ಮಾಹಿತಿ ಸಹಾಯ ಮಾಡುತ್ತದೆ.
ನೀವು, ನಿಮ್ಮ ಶಾಲೆ, ನಿಮ್ಮ ಸಹಪಾಠಿಗಳು, ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳು, ಹಾಗೆಯೇ ಶಾಲಾ ಶಿಕ್ಷಕರು, ಮತ್ತಿತರ ವಯಸ್ಕರು POCSO ಕಾಯಿದೆಯ ಮುಖ್ಯಾಂಶಗಳನ್ನು ಅರಿತುಕೊಳ್ಳಲು ಮತ್ತು ನಮ್ಮ ಶಾಲೆಗಳನ್ನು ‘ಮಕ್ಕಳ ಲೈಂಗಿಕ ದುರುಪಯೋಗ ಮುಕ್ತ ಶಾಲೆ’ ಗಳನ್ನಾಗಿಸಲು ಹಾಗೂ ಸಂತಸದ ಕಲಿಕೆ ನೀಡುವ ‘ಹಕ್ಕುಗಳಿರುವ ಮಕ್ಕಳ ಶಾಲೆ’ ಗಳನ್ನಾಗಿಸಲು ಈ ಕೈಪಿಡಿಯಲ್ಲಿರುವ ವಿಚಾರಗಳು ಸಹಾಯಕ.
ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಹಂತದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲೈಂಗಿಕ ಶೋಷಣೆಯ ವಿರುದ್ಧದ ವಿಚಾರಗಳು, ಅದಕ್ಕೆ ಸಂಬಂಧಿಸಿದ ಕಾಯಿದೆ, ವ್ಯವಸ್ಥೆಗಳು, ಸಹಾಯದ ಲಭ್ಯತೆ ಕುರಿತು ಮಾಹಿತಿ ನೀಡಲೇಬೇಕೆಂದು/ತಿಳಿಸಲೇಬೇಕೆಂದು ಕರ್ನಾಟಕದ ನ್ಯಾಯಾಂಗ ಶಿಕ್ಷಣ ಇಲಾಖೆಗೆ ನೀಡಿರುವ ನಿರ್ದೇಶನದಂತೆ ಈ ಕೈಪಿಡಿಯನ್ನು ರಚಿಸಲಾಗಿದೆ.
ಈಗಾಗಲೇ ‘ಶಾಲಾ ಸುರಕ್ಷತಾ ನೀತಿ’ ಯನ್ನು ಎಲ್ಲಾ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರ್ನಾಟಕ ಸರ್ಕಾರವು 2016 ರಲ್ಲಿ ನೀಡಿರುವ ನಿರ್ದೇಶನದ ಅಡಿಯಲ್ಲಿ ಈ ಕೈಪಿಡಿಯನ್ನು ಪರಿಗಣಿಸಬೇಕು. ಎಂದು ತಿಳಿಸಲಾಗಿದೆ.
BROUCHER- CLICK HERE
TEACHER MODULE- CLICK HERE
STUDENT MODULE- CLICK HERE