RTE-2025-26 6 ವರ್ಷ ತುಂಬದವರಿಗೂ ಆರ್ಟಿಇ|ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ ಶಿಕ್ಷಣ ಇಲಾಖೆ | ಪ್ರಸಕ್ತ ಶೈಕ್ಷಣಿಕ ವರ್ಷಕ್ಕಷ್ಟೇ ಅನ್ವಯ.
RTE-2025-26: 5 ವರ್ಷ 5 ತಿಂಗಳ ಮಕ್ಕಳಿಗೂ ಅವಕಾಶ, ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿ ಪ್ರವೇಶಕ್ಕೆ ಮಕ್ಕಳಿಗೆ ಕನಿಷ್ಠ 6 ವರ್ಷ ತುಂಬಿರಬೇಕು ಎಂಬ ನಿಯಮ ಅನ್ವಯವಾಗಬೇಕಿತ್ತು. ಆದರೆ, ಹಿಂದಿನಂತೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೂ ಪ್ರವೇಶ ನೀಡಬೇಕು ಎಂಬ ಒತ್ತಡಕ್ಕೆ ಮಣಿದ ಸರ್ಕಾರ ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ನಿಯಮ ಸಡಿಲಿಸಿದೆ. ಆದರೆ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಅನ್ವಯ ಆರು ವರ್ಷ ತುಂಬಿದ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳು ಕೂಡ ಆರ್ಟಿಇ ಅನ್ವಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಹೀಗಾಗಿ ಖಾಸಗಿ ಶಾಲೆಯಲ್ಲಿರುವ ಶೇ.25 ಸೀಟುಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 28ರವರೆಗೆ ವಿಸ್ತರಿಸಿದೆ.
ಈ ಕುರಿತು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಈ ಮೊದಲು ಅರ್ಜಿ ಸಲ್ಲಿಸಲು ಮೇ 14ರಂದೇ ಅವಧಿ ಕೊನೆಗೊಂಡಿತ್ತು. ಜತೆಗೆ ಮೇ 21ರಂದು ಮೊದಲ ಸುತ್ತಿನ ಸೀಟು ಹಂಚಿಕೆಗಾಗಿ ಲಾಟರಿ ಪ್ರಕ್ರಿಯೆ ನಡೆಯಬೇಕಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆಯಾದ ದಿನವೇ ಪರಿಶೀಲಿಸಿ ಇತ್ಯರ್ಥಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಮೊದಲ ಸುತ್ತಿನ ಸೀಟು ಹಂಚಿಕೆ ಲಾಟರಿ ಪ್ರಕ್ರಿಯೆಯು ಮೇ 30ರಂದು ನಡೆಯಲಿದೆ. ಮೇ 31ರಿಂದ ಜೂನ್ 6ರವರೆಗೆ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2025-26 ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)ಬಿ ಮತ್ತು 12(1)ಸಿ ಅಡಿ ಪ್ರವೇಶ ಪ್ರಕ್ರಿಯೆ ಸಂಬಂಧ ಉಲ್ಲೇಖ(10) ರಸ್ತೆಯ ಮಾರ್ಗಸೂಚಿಗಳನ್ನೊಳಗೊಂಡಂತೆ ವೇಳಾಪಟ್ಟಿ ಸಹಿತ ಸುತ್ತೋಲೆ ಹೊರಡಿಸಲಾಗಿರುತ್ತದೆ.
ಸದರಿ ಸುತ್ತೋಲೆಯಲ್ಲಿ ಸರ್ಕಾರ ಆದೇಶ ಸಂಖ್ಯೆ ಇಪಿ 100 ಪಿಜಿಸಿ 2014 ದಿನಾಂಕ:26.06.2024 ರನ್ವಯ ಎಲ್.ಕೆ.ಜಿ ತರಗತಿಗೆ ಕನಿಷ್ಠ ವಯೋಮಿತಿ 04 ವರ್ಷ ಮತ್ತು ಗರಿಷ್ಠ ವಯೋಮಿತಿ 06 ವರ್ಷಗಳಾಗಿದ್ದು ಮತ್ತು 01ನೇ ತರಗತಿಗೆ ಕನಿಷ್ಠ 06 ವರ್ಷ ಮತ್ತು ಗರಿಷ್ಟ 08 ವರ್ಷವೆಂದು ಆದೇಶವಾಗಿರುವಂತೆ ಮಕ್ಕಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿರುತ್ತದೆ.
ಪ್ರಸ್ತುತ ಉಲ್ಲೇಖ(11)ರ ಸರ್ಕಾರದ ಆದೇಶದಲ್ಲಿ ಶೈಕ್ಷಣಿಕ ವರ್ಷದ ಜೂನ್ 01ನೇ ತಾರೀಖಿಗೆ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 01ನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು 01 ಬಾರಿಯ ಕ್ರಮವಾಗಿ ಸಡಿಲಿಕೆ ನೀಡಿ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 01ನೇ ತಾರೀಖಿಗೆ 05 ವರ್ಷ 05 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ 01ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಲಾಗಿದೆ. ಆದ್ದರಿಂದ ಸರ್ಕಾರದ ಆದೇಶದಂತೆ 2025 ರ ಜೂನ್ 01ನೇ ತಾರೀಖಿಗೆ 05 ವರ್ಷ 05 ತಿಂಗಳು ಪೂರ್ಣಗೊಂಡಿರುವ ಮಕ್ಕಳಿಗೂ ಸಹ 2025-26ನೇ ಸಾಲಿಗೆ ಆರ್.ಟಿ.ಇ. ಅಡಿ ಒಂದನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದರಂತೆ ಅರ್ಜಿ ಸಲ್ಲಿಸಲು 07 ದಿನಗಳ ಕಾಲಾವಕಾಶ ನೀಡಿ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಸುತ್ತೋಲೆಯನ್ನು ಹೊರಡಿಸಿದೆ.
ಮುಂದುವರೆದು 2025-26ನೇ ಸಾಲಿನ ಆರ್.ಟಿ.ಇ ಅಡಿ ಪ್ರವೇಶ ಪ್ರಕ್ರಿಯೆಗೆ ಉಲ್ಲೇಖ (10)ರ ದಿನಾಂಕ: 25.03.2025 ರ ಸುತೋಲೆಯಲ್ಲಿನ ಮಾರ್ಗಸೂಚಿಯಲ್ಲಿನ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.
ಇಲಾಖೆ ನೀಡಿದ ವಿಶೇಷ ಸೂಚನೆ :
ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರ್.ಟಿ.ಇ. ನೋಡಲ್ ಅಧಿಕಾರಿಗಳು 2025-26ನೇ ಸಾಲಿನ ಆರ್.ಟಿ.ಇ ಅಡಿ ಪ್ರವೇಶಕ್ಕೆ ಸಂಬಂಧಿಸಿದಂತೆ ದಿನಾಂಕ; 25/03/2025 ಮತ್ತು ಪರಿಷ್ಕೃತ ಸುತ್ತೋಲೆಯ ಮಾರ್ಗಸೂಚಿ ಅಂಶಗಳನ್ನು ಅನುಷ್ಠಾನಗೊಳಿಸುವುದು ಮತ್ತು ಪರಿಷ್ಕೃತ ವೇಳಾಪಟ್ಟಿಯಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆಯಾ ದಿನವೇ ಪರಿಶೀಲಿಸಿ ಇತ್ಯರ್ಥಪಡಿಸಲು ಕ್ರಮವಹಿಸುವುದು. ವ್ಯತ್ಯಯವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ತಿಳಿಸಿದೆ.