Shikshana Varthe -April – June 2025, ಶಿಕ್ಷಣ ವಾರ್ತೆ- ಏಪ್ರಿಲ್ – ಜೂನ್ 2025
Shikshana Varthe –
ಆತ್ಮೀಯರೇ….
ಶೈಕ್ಷಣಿಕ ವರ್ಷವನ್ನು ಸ್ವಾಗತಿಸುತ್ತಿರುವ ಈ ಮಹತ್ವದ ಕ್ಷಣದಲ್ಲಿ, ನಾನು ನಿಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಸರ್ಕಾರವು ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧವಾಗಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಮಾನ ಸೌಲಭ್ಯಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಿನ ಕಾಲದಲ್ಲಿ ಡಿಜಿಟಲ್ ಶಿಕ್ಷಣದ ಮಹತ್ವ ಪ್ರಮುಖವಾಗಿದೆ. ಆದ್ದರಿಂದ ಹಂತ ಹಂತವಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಬೋದನೆ-ಕಲಿಕೆಗೆ ಅವಕಾಶ ನೀಡಲಾಗುತ್ತಿದೆ.
ಪ್ರತಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲು ಅಧಿಕಾರಿಗಳು ಶಿಕ್ಷಕರು ಶ್ರಮಿಸಬೇಕೆಂಬುದು ನನ್ನ ಆಶಯವಾಗಿದೆ. ಇದಕ್ಕೆ ಸರ್ಕಾರದ ಬೆಂಬಲ ಸದಾ ಇರುತ್ತದೆ. ದಾಖಲಾದ ಪ್ರತಿ ಮಗು ಶಾಲೆಯಲ್ಲಿರಬೇಕು. ಚೆನ್ನಾಗಿ ಕಲಿಯಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದೇ ದಾಖಲಾದ ಎಲ್ಲಾ ಮಕ್ಕಳು ಶಾಲೆಗೆ ನಿರಂತರವಾಗಿ ಹಾಜರಾಗಿ, ಗುಣಮಟ್ಟದ ಶಿಕ್ಷಣವನ್ನು ಪಡೆದು ದೇಶದ ಸತ್ಪಜೆಗಳನ್ನಾಗಿ ರೂಪಿಸುಲು ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ.
ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮೊಳಗೆ ಆಪಾರ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದ್ದು ಈ ಶೈಕ್ಷಣಿಕ ವರ್ಷವು ಆ ಶಕ್ತಿಯನ್ನು ಗುರುತಿಸಲು ಮತ್ತು ನಿಮ್ಮ ಗುಣಮಟ್ಟವನ್ನು ಹೆಚ್ಚಿಸಲು ಒಂದು ಸುಂದರ ಅವಕಾಶವಾಗಿದೆ. ಪ್ರತಿ ದಿನವೂ ಪಾಠಶಾಲೆಯಲ್ಲಿ ಕಲಿಯುವ ಪಾಠವು ನಿಮ್ಮ ಭವಿಷ್ಯದ ಮೆಟ್ಟಿಲಾಗಿದೆ. ಸಮಯ ವ್ಯರ್ಥ ಮಾಡದೇ, ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು. ವಿದ್ಯಾರ್ಥಿಗಳೇ, ಈ ವರ್ಷವನ್ನು ನಿಮ್ಮ ಸಾಧನೆಯ ವರ್ಷವನ್ನಾಗಿ ಮಾಡಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೊಡ್ಡ ಕನಸು ಕಾಣಬೇಕು. ಅದನ್ನು ಸಾಧಿಸಲು ನಿತ್ಯ ಪ್ರಯತ್ನವೂ ಅಗತ್ಯ. ಹೆಮ್ಮೆಯ ಬದುಕಿಗಾಗಿ ಶ್ರಮಿಸಬೇಕು.
ನಿಮ್ಮ ಉತ್ತಮ ಕನಸುಗಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಮುಂದುವರೆಯಬೇಕು. ವಿದ್ಯೆಯ ಜೊತೆಗೆ ನೈತಿಕ ಮೌಲ್ಯಗಳು ಮತ್ತು ಪರಿಸರದ ಜಾಗೃತಿ ಕುರಿತು ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಳ್ಳುವುದು. ಶಾಲೆಯಲ್ಲಿ ತ್ಯಾಜ್ಯ ನಿರ್ವಹಣೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು. ಕಲಿಕೆಯ ಜೊತೆಗೆ ಕ್ರೀಡೆ ಮತ್ತು ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಈ ಎಲ್ಲಾ ಕ್ಷೇತ್ರಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.
ಶಿಕ್ಷಕರು ಮತ್ತು ಪೋಷಕರು, ಮಕ್ಕಳ ಶಕ್ತಿಯನ್ನು ಅರಿಯುವ ಬೆಳೆಸುವ ದಾರಿದೀಪಗಳು, ನಿಮ್ಮ ಬೆಂಬಲದಿಂದಾಗಿ ಮಕ್ಕಳು ಯಶಸ್ವಿಯಾಗಿ ಬೆಳೆಯುತ್ತಾರೆ. ಇನ್ನೂ ಉತ್ತಮ ಫಲಿತಾಂಶ ಪಡೆಯಲು ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ.
ಉತ್ತಮ ನೈಜ ಫಲಿತಾಂಶದಿಂದ ಪೋಷಕರು ಸರ್ಕಾರಿ ಶಾಲೆಗಳತ್ತ ಒಲವು ತೋರಿಸಲು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆಂದು ಭಾವಿಸುತ್ತೇನೆ. ಯಾವುದೇ ಮಗುವು ಶಿಕ್ಷಣದಿಂದ ವಂಚಿತರಾಗದಿರಲಿ ಎಂಬ ಸದುದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಕೆನೆಭರಿತ ಹಾಲು, ರಾಗಿ ಮಾಲ್ಟ್ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ಶೂ-ಸಾಕ್ಸ್, ಮುಂತಾದವುಗಳನ್ನು ನೀಡುವುದರೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ.
2025-26ರ “ಶಿಕ್ಷಣ ವಾರ್ತೆ” ವೈಚಾರಿಕ, ವೈಜ್ಞಾನಿಕ ಲೇಖನಗಳಿಂದ ಶಿಕ್ಷಕರ/ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಪತ್ರಿಕೆಯಾಗಿ ಮೂಡಿ ಬಂದಿದೆ.
2025-26ರ “ಶಿಕ್ಷಣ ವಾರ್ತೆ” ವೈಚಾರಿಕ, ವೈಜ್ಞಾನಿಕ ಲೇಖನಗಳಿಂದ ಶಿಕ್ಷಕರ/ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಪತ್ರಿಕೆಯಾಗಿ ಹೊರಹೊಮ್ಮುಲಿ ಎಂದು ಆಶಿಸುತ್ತಾ, ಶುಭ ಕೋರುತ್ತೇನೆ.
ಮಧು ಬಂಗಾರಪ್ಪ, ಮಾನ್ಯ ಸಚಿವರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ.
ಆತ್ಮೀಯರೇ..
ಎಲ್ಲರಿಗೂ ಶೈಕ್ಷಣಿಕ ವರ್ಷಾರಂಭದ ಹಾರ್ದಿಕ ಶುಭಾಶಯಗಳು ಹಾಗೂ ಪ್ರೀತಿಯ ವಿದ್ಯಾರ್ಥಿಗಳಿಗೆ ನಲ್ಲೆಯ ಸ್ವಾಗತ. ಬೇಸಿಗೆ ರಜೆಯ ಸಂಭ್ರಮದ ನಂತರ ನವ ಉತ್ಸಾಹದೊಂದಿಗೆ ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿ ಸಮೂಹವನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಿ ಶಾಲೆಯಿಂದ ಹೊರಗುಳಿಯಬಾರದು. ಪ್ರತಿ ಅರ್ಹ ಮಗುವೂ ಸರ್ಕಾರಿ ಶಾಲೆಗೆ ದಾಖಲಾಗಿ ಶಿಕ್ಷಣದ ಸೌಲಭ್ಯವನ್ನು ಪಡೆಯುವಂತಾಗಬೇಕು. ಶಾಲಾ ಶಿಕ್ಷಣ ಇಲಾಖೆಯು ಬೃಹತ್ತಾದ ವ್ಯಾಪ್ತಿಯನ್ನು ಹೊಂದಿದ್ದು, ಅಧಿಕ ಮಕ್ಕಳು ಇಲಾಖೆಯ ವ್ಯಾಪ್ತಿಗೊಳಪಡುತ್ತಾರೆ. ರಾಜ್ಯದ ಪ್ರತಿ ಮಗುವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಹಾಗೂ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಆಕರ್ಷಣೀಯಗೊಳಿಸುವುದೂ ಸೇರಿದಂತೆ ಶಿಕ್ಷಣ ಇಲಾಖೆಯನ್ನು ಪ್ರಾಮಾಣಿಕ, ಶಿಸ್ತುಬದ್ಧ ಹಾಗೂ ಕ್ರಿಯಾಶೀಲ ಇಲಾಖೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ತಾವೆಲ್ಲರೂ ಕೈಜೋಡಿಸುವ ಭರವಸೆ ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ.ಸಿ ಸಹಯೋಗದೊಂದಿಗೆ ಪ್ರತಿ ಸರ್ಕಾರಿ ಶಾಲೆಯನ್ನೂ ಮಾದರಿ ಶಾಲೆಯನ್ನಾಗಿ ರೂಪಿಸಲು ಅಧಿಕಾರಿಗಳು, ಶಿಕ್ಷಕರು ಶ್ರಮಿಸಬೇಕೆಂಬುದು ಆಶಿಸುತ್ತೇನೆ.
ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ದಾಖಲಾಗುವಂತೆ ಪ್ರೇರೇಪಿಸುವುದು. ಉತ್ತಮ ಶಾಲಾ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಶಾಲಾ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯನ್ನು ವೃದ್ಧಿಸಬೇಕಿದೆ. ಅದಕ್ಕಾಗಿ ಪ್ರತಿ ವಾರ ಕನಿಷ್ಟ 10 ಪೋಷಕರನ್ನು ನಿಯಮಿತವಾಗಿ ಶಾಲೆಗೆ ಆಹ್ವಾನಿಸಿ ಬಿಸಿಯೂಟವನ್ನು ವಿತರಿಸಿ ಅದರ ಗುಣಮಟ್ಟವನ್ನು ನಿರಂತರವಾಗಿ ಖಾತರಿಗೊಳಿಸಬಹುದು. ಹಾಗೆಯೇ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಎಲ್ಲಾ ಮಕ್ಕಳ ಪೋಷಕರನ್ನು ಮಧ್ಯಾಹ್ನದ ಭೋಜನಕ್ಕೆ ಆಹ್ವಾನಿಸಿ ಆಹಾರದ ಗುಣಮಟ್ಟದ ಖಾತರಿಯೊಂದಿಗೆ ಪೋಷಕರನ್ನು ಶಾಲಾ ಚೆಟುವಟಿಕೆಗಳೊಂದಿಗೆ ಬೆಸೆದು ಆ ಮೂಲಕ ಶಾಲಾ ಶಿಕ್ಷಣದ ಪ್ರಕ್ರಿಯೆಯಲ್ಲಿ ಪೋಷಕರು ನಿರಂತರವಾಗಿ ಕ್ರಿಯಾಶೀಲಾ ಭಾಗೀದಾರರಾಗಲಿ ಎಂದು ಆಶಿಸುತ್ತೇನೆ.
ಶಾಲೆಗೆ ದಾಖಲಾದ ಪ್ರತಿಯೊಂದು ಮಗುವು ಕಲಿಕೆಯಲ್ಲಿ ತೊಡಗಿಸಿಕೊಂಡು, ಒಳ್ಳೆಯ ನಾಗರಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಶಾಲೆಗಳಲ್ಲಿ ಕಲಿಕಾ ವಾತಾವರಣ ರೂಪಿಸಲು ಗ್ರಂಥಾಲಯಗಳ ಸ್ಥಾಪನೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಕ ಶಿಕ್ಷಣದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಆಯ್ದ ಶಾಲೆಗಳಲ್ಲಿ ಕಂಪ್ಯೂಟರ್ ಕೋಡಿಂಗ್ ಕಲಿಕೆಗೆ ಉತ್ತೇಜಿಸಲಾಗುತ್ತಿದೆ. ಕೆಲವು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ಸಾಮರ್ಥ್ಯಗಳನ್ನು ವೃದ್ಧಿಸಲು ಬುನಾದಿ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಇದರೊಂದಿಗೆ ಪಠ್ಯಪುಸ್ತಕ, ಸಮವಸ್ತ್ರ, ಕೆನೆಭ-ರಿತ ಹಾಲು, ರಾಗಿ ಮಾಲ್ಟ್ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ. ಬಾಳೆಹಣ್ಣು, ಮೊಟ್ಟೆ, ಶೂ-ಸಾಕ್ಸ್, ಮುಂತಾದವುಗಳನ್ನು ನೀಡುವುದರೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರವು ಹರ್ಷಿಸುತ್ತದೆ.
ಈ ಎಲ್ಲಾ ಪ್ರಯತ್ನಗಳೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕಾಗಿ ಸಂಗೀತ ಶಿಕ್ಷಣ, ಹೆಣ್ಣು ಮಕ್ಕಳ ಸ್ವರಕ್ಷಣೆಗಾಗಿ ಕರಾಟೆಯ ಕಲಿಕೆ ಹಾಗೂ ಶಾರೀರಿಕ ಸದೃಢತೆಗಾಗಿ ಕ್ರೀಡಾ ಸೌಲಭ್ಯಗಳನ್ನು ವೃದ್ಧಿಸಲು ಇಲಾಖೆಯು ಶ್ರಮಿಸುತ್ತಿದೆ.
ಸುಂದರ ಮುಖಪುಟದೊಂದಿಗೆ ವೈಚಾರಿಕ ಲೇಖನ, ಇಲಾಖೆಯಲ್ಲಿ ರೂಪಗೊಂಡಿರುವ ಉತ್ತಮ ಅಭ್ಯಾಸಗಳು. ಸಾಧನೆಗಳು, ಕಥೆ-ಕವನಗಳು, ಸರ್ಕಾರಿ ಆದೇಶಗಳು, ಅಧಿಸೂಚನೆಗಳು ಹಾಗೂ ಸುತ್ತೋಲೆಗಳನ್ನು ಪ್ರಕಟಿಸುತ್ತಿರುವ “ಶಿಕ್ಷಣ ವಾರ್ತೆ” ಮಾಸ ಪತ್ರಿಕೆಯು 2025-26 ನೇ ಸಾಲಿನಲ್ಲಿಯೂ ಸೃಜನಶೀಲವಾಗಿ ಮೂಡಿಬರಲಿ ಎಂದು ಹಾರೈಸುತ್ತಾ ವಿದ್ಯಾರ್ಥಿಗಳಿಗೆ ಇನ್ನೊಮ್ಮೆ ಶುಭ ಕೋರುತ್ತೇನೆ.
ವಿ.ರಶ್ಮಿ ಮಹೇಶ್, ಭಾ.ಅ.ಸೇ.
ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ
ಆತ್ಮೀಯರೇ…
2025-26ನೇ ಶೈಕ್ಷಣಿಕ ವರ್ಷಕ್ಕೆ ಎಲ್ಲ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಹಾಗೂ ಅಧಿಕಾರಿಗಳಿಗೆ ಹಾರ್ದಿಕ ಶುಭಾಷಯವನ್ನು ಕೋರುತ್ತೇನೆ. ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸುತ್ತೀರಿ ಎಂದು ನಂಬಿದ್ದೇನೆ. ಎಸ್.ಡಿ. ಎಂ.ಸಿ., ಸಮುದಾಯದ ಮುಖಂಡರು ಮತ್ತು ಪೋಷಕರನ್ನು ಶಾಲಾ ಪ್ರಾರಂಭೋತ್ಸವದಲ್ಲಿ ಹಾಗೂ ದಾಖಲಾತಿ ಆಂದೋಲನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಎಲ್ಲಾ ಸರ್ಕಾರಿ ಶಾಲೆಯಲ್ಲೂ ದಾಖಲಾತಿ-ಹಾಜರಾತಿ ಈ ವರ್ಷ ಗಣನೀಯವಾಗಿ ಹೆಚ್ಚಾಗುವಂತೆ ಪ್ರಯತ್ನಿಸುವುದು ಪ್ರತಿಯೊಬ್ಬ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ.
ಕೊರೋನಾ ಅಪ್ಪಳಿಸುತ್ತಿರುವ ಈ ಸಂದರ್ಭದಲ್ಲಿ ಕೊಠಡಿ, ಶಾಲಾ ಆವರಣ, ಶೌಚಾಲಯ, ಅಡುಗೆ ಕೋಣೆ ಹಾಗೂ ಪಾತ್ರೆಗಳು, ನೀರಿನ ತೊಟ್ಟಿ ಎಲ್ಲವನ್ನೂ ಸ್ವಚ್ಚವಾಗಿಸಿ ಮಕ್ಕಳ ಆರೋಗ್ಯವನ್ನು ಕಾಪಾಡುವಂತೆ ಪ್ರಯತ್ನಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಶಿಕ್ಷಕರು ಪೂರಕ ಅಂಶಗಳನ್ನು ಮುಂಚಿತವಾಗಿಯೇ ಯೋಗ್ಯ ರೀತಿಯಲ್ಲಿ ಸಿದ್ಧಪಡಿಸಿಕೊಂಡು ಇಲಾಖೆಯ ಆಶಯದಂತೆ ವೈಚಾರಿಕ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.
ಸರ್ಕಾರ ಉಚಿತವಾಗಿ ನೀಡುತ್ತಿರುವ ಪಠ್ಯ ಪುಸ್ತಕಗಳು, ಸಮವಸ್ತ್ರ, ಶೂ-ಸಾಕ್ಸ್, ಡೈರಿ ಈ ಮೊದಲಾದ ಪೂರಕ ಸಾಮಗ್ರಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ದೊರೆಯುವಂತೆ ಮಾಡುವುದು ಎಲ್ಲಾ ಶಿಕ್ಷಕರ ಹಾಗೂ ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಕಲಿಕೆಯನ್ನು ಆರಂಭಿಸುವ ಮುನ್ನ ಮಕ್ಕಳು ಈಗಾಗಲೇ ಕಲಿತಿರುವುದನ್ನು ಖಾತ್ರಿಪಡಿಸಿಕೊಳ್ಳಲು ಸೇತುಬಂಧ ಕಾರ್ಯವನ್ನು ಹಮ್ಮಿಕೊಳ್ಳುತ್ತಿರೆಂದು ಭಾವಿಸುತ್ತೇನೆ.
ಜೂನ್ 15-06-2025 ದಿನಾಂಕದವರೆಗೆ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರ್ಹ ವಯಸ್ಸಿನ ಯಾವ ಮಗುವೂ ಶಾಲೆಯಿಂದ ಹೊರಗುಳಿಯದೆ ಶಾಲೆಗೆ ದಾಖಲಾಗುವಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.. ದಾಖಲಾದ ಪ್ರತಿ ಮಗು ಶಾಲೆಯಲ್ಲಿ ಉಳಿಯುವಂತೆ ಮತ್ತು ನಿಗದಿಪಡಿಸಿದ ಸಾಮರ್ಥ್ಯಗಳನ್ನು ಗಳಿಸುವಂತೆ ಶಿಕ್ಷಕರು ಬೋಧನಾ ಕಲಿಕಾ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು.
ಜೂನ್-05ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಿವಿಧ ರೀತಿಯ ಮಾಲಿನ್ಯಗಳು, ಅವುಗಳಿಗೆ ಕಾರಣಗಳು ಮತ್ತು ನಿವಾರಣೋಪಾಯಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡುವುದು. ಮಳೆನೀರು ಸಂಗ್ರಹಣೆ, ಇಂಗುಗುಂಡಿ, ಪ್ಲಾಸ್ಟಿಕ್ ಬಳಕೆಯ ನಿಷೇಧ. ಇಂಥ ಹಲವು ವಿಚಾರಗಳ ಬಗ್ಗೆ ಎಲ್ಲ ವಯೋಮಾನದ ಮಕ್ಕಳೊಂದಿಗೆ ಚರ್ಚಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಗತ್ಯ. ಜೊತೆಗೆ ಶಾಲಾ ಪರಿಸರದಲ್ಲಿ ಗಿಡಮರ ಬೆಳೆಸಿ ಹಸಿರಾಗಿಟ್ಟುಕೊಳ್ಳುವುದು.
ನೀರನ್ನು ಪೋಲು ಮಾಡದೆ ಗಿಡಮರಗಳಿಗೆ ಬಳಸುವುದು, ವಿದ್ಯುತ್ ಪೋಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಬಳಸುವುದು. ಸಾರ್ವಜನಿಕ ವಾಹನಗಳ ಬಳಕೆ ಇಂಥ ವಿಚಾರಗಳ ಬಗ್ಗೆ ಮಕ್ಕಳಿಗೆ ಆಗಿಂದಾಗ್ಗೆ ಮಾಹಿತಿ ನೀಡುವುದು. ಈ ಬಗ್ಗೆ ಪುಸ್ತಕ ಓದಿಸುವುದು, ಮಕ್ಕಳಲ್ಲೇ ಚರ್ಚೆ ಏರ್ಪಡಿಸುವುದು ಅಗತ್ಯ, ಶಿಕ್ಷಕರು ತಮ್ಮ ಸ್ಥಳೀಯ ಪರಿಸರಕ್ಕೆ ಮತ್ತು ತಮ್ಮ ಶಾಲೆಯ ಸ್ಥಳಾವಕಾಶಕ್ಕೆ ಅನುಗುಣವಾಗಿ ಗಿಡಮರಬಳ್ಳಿಗಳು. ಔಷಧೀಯ ಸಸ್ಯಗಳು, ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಲು ಮಾರ್ಗದರ್ಶನ ನೀಡಿ ಪರಿಸರ ಪ್ರೇಮವನ್ನು ಮಕ್ಕಳಲ್ಲಿ ಬೆಳೆಸುವುದು.
ಜೂನ್ 12 ಅಂತಾರಾಷ್ಟ್ರೀಯ ಬಾಲಕಾರ್ಮಿಕ ವಿರೋಧಿ ದಿನ. ಅಂದಿನ ದಿನ ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಬಾಲಕಾರ್ಮಿಕ ಈ ವ್ಯವಸ್ಥೆಯನ್ನು ಹೋಗಲಾಡಿಸಲು ಶಿಕ್ಷಣವೊಂದೇ ಅಂತಿಮ ಪರಿಹಾರ ಎನ್ನುವುದನ್ನು ಮನಗಾಣಿಸುವುದು.
ಭಾರತದ ಪ್ರಾಚೀನ ಸಂಪ್ರದಾಯವಾದ ‘ಯೋಗ’ದ ಮಹತ್ವವನ್ನು ಇಡೀ ವಿಶ್ವಕ್ಕೆ ತಿಳಿಸುವ ಉದ್ದೇಶದಿಂದ “ಅಂತರಾಷ್ಟ್ರೀಯ ಯೋಗ ದಿನಾಚರಣೆ”ಯನ್ನು ಪ್ರತಿ ವರ್ಷ ಜೂನ್-21 ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಯೋಗ’ವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನವನ್ನು ಮಕ್ಕಳಿಗೆ ತಿಳಿಸುತ್ತಿರೆಂದು ಭಾವಿಸುತ್ತೇನೆ.
ಹೊಸ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕರು ಅಧಿಕಾರಿಗಳು ಮತ್ತು ಎಸ್.ಡಿ.ಎಂ.ಸಿ ಯವರ ಜೊತೆಗೂಡಿ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ. ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಗುಣಾತ್ಮಕವಾಗಿ ನಿರ್ವಹಿಸಿ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಶ್ರಮಿಸುತ್ತಿರೆಂದು ನಂಬಿದ್ದೇನೆ.
ಡಾ|| ಕೆ.ವಿ.ತ್ರಿಲೋಕ ಚಂದ್ರ, ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ
