SSLC EXAM-2025 INSPECTION TEAM
SSLC ವಿದ್ಯಾರ್ಥಿಗಳಿಗೆ CCE ಪದ್ಧತಿಯನ್ವಯ ಕೈಗೊಳ್ಳಲಾಗಿರುವ ಆಂತರಿಕ ಮೌಲ್ಯಮಾಪನದ ಅಂಕಗಳ ಪರಿಶೀಲನೆಗೆ ತ್ರಿ-ಸದಸ್ಯ ಸಮಿತಿ ನೇಮಿಸಿ ಪರಿಶೀಲನೆ ನಡೆಸುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರದ ಆದೇಶ ಸಂಖ್ಯೆ:ಇಡಿ 156 ಮಾಹಿತಿ 2014 ದಿನಾಂಕ:26-06-2014 ಮತ್ತು ಸರ್ಕಾರದ ಆದೇಶ ಸಂಖ್ಯೆ: ಇಡಿ 295 ಮಾಹಿತಿ 2014 ದಿನಾಂಕ:09-01-2015 ರನ್ವಯ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ(ಸಿ.ಸಿ.ಇ) ಪದ್ಧತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಅನುಷ್ಟಾನಗೊಳಿಸಲಾಗಿರುತ್ತದೆ. ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ (ಸಿ.ಸಿ.ಇ) ಪದ್ಧತಿಯಲ್ಲಿ ಅಳವಡಿಸಿರುವ ವಿಧಿವಿಧಾನಗಳನ್ನು ಕೆಳಕಂಡಂತೆ ವಿವರಿಸಲಾಗಿದೆ.
ಶೈಕ್ಷಣಿಕ ವರ್ಷದಲ್ಲಿ ವಿಷಯವಾರು ಒಟ್ಟು 04 ರೂಪಣಾತ್ಮಕ ಮೌಲ್ಯಮಾಪನಗಳನ್ನು ನಡೆಸಬೇಕಾಗಿದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿ ಎರಡು ಚಟುವಟಿಕೆಗಳು ಮತ್ತು ಒಂದು ಕಿರುಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಒಟ್ಟಾರೆ 04 ರೂಪಣಾತ್ಮಕ ಮೌಲ್ಯಮಾಪನಗಳಿಗೆ 08 ಚಟುವಟಿಕೆಗಳು ಹಾಗೂ 04 ಕಿರುಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.
ಪರೀಕ್ಷೆಯು ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷಾ ವಿಧಾನದಿಂದ ಕೂಡಿದ್ದು, ಅದರಲ್ಲಿ ಬಾಹ್ಯ ಪರೀಕ್ಷೆಗೆ ಶೇ.80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಶೇ:20 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಬಾಹ್ಯ ಹಾಗೂ ಆಂತರಿಕ ಅಂಕಗಳ ಹಂಚಿಕೆ ಈ ಕೆಳಗಿನಂತಿದೆ.

ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧಾರಿಸಲಾಗುತ್ತದೆ. (FA1, FA2, FA3, FA4)
ಪ್ರತಿಯೊಂದು ರೂಪಣಾತ್ಮಕ ಮೌಲ್ಯಮಾಪನಕ್ಕೆ 50 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಇದರಲ್ಲಿ 20 ಅಂಕಗಳಿಗೆ ಒಂದು ಕಿರುಪರೀಕ್ಷೆ(ಶಿಕ್ಷಕರ ನಿರ್ಧಾರದಂತೆ) ಹಾಗೂ 15 ಅಂಕಗಳಿಗೆ ಎರಡು ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಅದರಂತೆ ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಒಟ್ಟು ಅಂಕಗಳು 200 ಆಗಿರುತ್ತವೆ. ಈ ಅಂಕಗಳಿಗೆ ವಿದ್ಯಾರ್ಥಿಯು ಗಳಿಸಿದ ಅಂಕಗಳನ್ನು ಪರಿಮಾಣಾತ್ಮಕವಾಗಿ ಪ್ರಥಮ ಭಾಷೆಗೆ 25 ಅಂಕಗಳಿಗೂ, ಉಳಿದ 05 ವಿಷಯಗಳಲ್ಲಿ 20 ಅಂಕಗಳಿಗೆ ಪರಿವರ್ತಿಸಿ (ಲೆಕ್ಕಹಾಕಿ) ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸುವುದು.
ಆಂತರಿಕ ಮೌಲ್ಯಮಾಪನದಲ್ಲಿ ನಡೆಸುವ ಕಿರುಪರೀಕ್ಷೆ ಹಾಗೂ ಚಟುವಟಿಕೆಗಳು ಸಿ.ಸಿ.ಇ. ಪದ್ದತಿ ಆಧಾರವಾಗಿರಬೇಕು.
ಆಂತರಿಕ ಮೌಲ್ಯಮಾಪನದಲ್ಲಿನ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ.
ವಿದ್ಯಾರ್ಥಿಗಳು ತೇರ್ಗಡೆಯಾಗಲು ಆಂತರಿಕ ಮೌಲ್ಯಮಾಪನದಲ್ಲಿ ಇಂತಿಷ್ಟೇ ಕನಿಷ್ಠ ಅಂಕಗಳನ್ನು ಪಡೆಯಬೇಕೆಂದು ನಿಯಮವಿರುವುದಿಲ್ಲ.
ಅರ್ಧ ವಾರ್ಷಿಕ ಪರೀಕ್ಷೆಯ ಅಂಕಗಳನ್ನು ರೂಪಣಾತ್ಮಕ ಮೌಲ್ಯಮಾಪನಕ್ಕೆ ಪರಿಗಣಿಸಬಾರದು.
ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಈ ಮೇಲಿನ ಸೂಚನೆಗಳನ್ನು ನೀಡಿದ್ದರೂ, ಆಂತರಿಕ ಮೌಲ್ಯಮಾಪನದಲ್ಲಿ ಶಿಕ್ಷಕರು ಲೋಪವೆಸಗಿರುವ ಬಗ್ಗೆ ಮಂಡಲಿಗೆ ದೂರುಗಳು ಬಂದಿರುತ್ತವೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದಲ್ಲಿ ಅಂಕಗಳನ್ನು ಶಾಲಾ ಹಂತದಲ್ಲಿ ಗರಿಷ್ಠ ಅಂಕಗಳನ್ನು ನೀಡಿದ್ದರೂ, ಸದರಿ ವಿದ್ಯಾರ್ಥಿಗಳು ಮಂಡಲಿ ನಡೆಸುವ ಬಾಹ್ಯ ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕಗಳನ್ನು ಗಳಿಸಿ ಅನುತ್ತೀರ್ಣರಾಗಿರುವುದು ಕಂಡುಬಂದಿರುತ್ತದೆ.
ಈ ಸಂಬಂಧ ಆಯ್ದ ಶಾಲೆಗಳ ದಾಖಲೆಗಳನ್ನು ಮಂಡಲಿ ಹಂತದಲ್ಲಿ ಪರಿಶೀಲಿಸಿದಾಗ ಕಿರುಪರೀಕ್ಷೆಗಳು ಮತ್ತು ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿರುವ ವಾಸ್ತವಿಕ ಅಂಕಗಳಿಗೂ ಮತ್ತು SATS / ಮಂಡಲಿಯ Database ನಲ್ಲಿ ನಮೂದಿಸಿರುವ ಅಂಕಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಮಂಡಲಿಯಲ್ಲಿ ಗಮನಿಸಲಾಗಿದೆ. ಇದು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಕರ್ತವ್ಯ ಲೋಪವನ್ನು ತೋರಿಸುತ್ತದೆ. ಸದರಿ ವಿಷಯವನ್ನು ಮಂಡಲಿಯು ಗಂಭೀರವಾಗಿ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ, ಜಿಲ್ಲಾ ಉಪನಿದೇಶಕರು(ಆಡಳಿತ) ರವರು ತಾಲ್ಲೂಕು ಹಂತದಲ್ಲಿ ತ್ರಿ-ಸದಸ್ಯ ಸಮಿತಿಯನ್ನು ರಚಿಸಿ, ಸದರಿ ಸಮಿತಿಯ ಸದಸ್ಯರು ಆಯಾ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಭೇಟಿ ನೀಡಿ, ವಿಷಯ ಶಿಕ್ಷಕರು ಶಾಲಾ ಹಂತದಲ್ಲಿ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ನೀಡಿರುವ ಅಂಕಗಳ ಕುರಿತು ವಿದ್ಯಾರ್ಥಿಗಳ ಕಿರುಪರೀಕ್ಷೆಗಳ ಉತ್ತರಪತ್ರಿಕೆಗಳು ಮತ್ತು ಕೈಗೊಂಡಿರುವ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ.
ತ್ರಿ-ಸದಸ್ಯ ಸಮಿತಿಯಲ್ಲಿ ವಿಷಯ ಪರಿಣತಿ ಹೊಂದಿರುವ ಒಬ್ಬರು ಪ್ರೌಢಶಾಲಾ ಮುಖ್ಯ ಶಿಕ್ಷಕರು, ಒಬ್ಬರು ವಿಜ್ಞಾನ ಶಿಕ್ಷಕರು ಹಾಗೂ ಒಬ್ಬರು ಕಲಾ/ಭಾಷಾ ಶಿಕ್ಷಕರನ್ನೊಳಗೊಂಡ ಸಮಿತಿಯನ್ನು ರಚಿಸುವುದು. (ಆಯಾ ತಾಲ್ಲೂಕಿನಲ್ಲಿರುವ ಪ್ರೌಢಶಾಲೆಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸಂಖ್ಯೆಯ ಸಮಿತಿಗಳನ್ನು ರಚಿಸುವುದು).
ಸಮಿತಿಯ ಸದಸ್ಯರು ಶಾಲೆಗೆ ಭೇಟಿ ನೀಡಿ, ಉಲ್ಲೇಖಿತ ಸರ್ಕಾರಿ ಆದೇಶ ಮತ್ತು ಮಂಡಲಿಯ ಮಾರ್ಗಸೂಚಿಯಂತೆ ಸಿ.ಸಿ.ಇ. ಪದ್ಧತಿಯನ್ವಯ ಶಾಲಾ ಹಂತದಲ್ಲಿ ಕಿರುಪರೀಕ್ಷೆ ಮತ್ತು ಚಟುವಟಿಕೆಗಳನ್ನು ಕೈಗೊಂಡಿರುವ ಬಗ್ಗೆ ಹಾಗೂ ಗುಣಮಟ್ಟವನ್ನಾಧರಿಸಿ ವಿಷಯವಾರು ಆಂತರಿಕ ಮೌಲ್ಯಮಾಪನದ ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವುದನ್ನು ಖಾತರಿಪಡಿಸಿಕೊಳ್ಳುವುದು ಹಾಗೂ FAI, FA2, FA3, FA4 2 ದಾಖಲೆಗಳನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಿ ಮೌಲ್ಯಮಾಪನ ಮಾಡಿರುವುದನ್ನು ದೃಢೀಕರಿಸುವುದು.
ಮಂಡಲಿಯ ವತಿಯಿಂದ 2024-25ನೇ ಸಾಲಿನ CCERE ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಶಾಲಾ ಲಾಗಿನ್‌ನಲ್ಲಿ FAI, FA2, FA3, FA4 ನಾಲ್ಕು ರೂಪಣಾತ್ಮಕ ಮೌಲ್ಯಮಾಪನಗಳ ಅಂಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ರೂಪಣಾತ್ಮಕ ಮೌಲ್ಯಮಾಪನಕ್ಕೂ ಗರಿಷ್ಠ 50 ಅಂಕಗಳಿಗೆ, ವಿದ್ಯಾರ್ಥಿಯು ಪಡೆದಿರುವ ಅಂಕಗಳನ್ನು ನಮೂದಿಸಬೇಕಿದೆ.
ಶಾಲೆಯ ಕ್ರೋಢೀಕೃತ ಅಂಕ ವಹಿಯಲ್ಲಿ ನಮೂದಿಸಿರುವ ಅಂಕಗಳು, ಮಂಡಲಿಯ ಶಾಲಾ ಲಾಗಿನ್‌ನಲ್ಲಿ ನಮೂದಿಸಿರುವ ಅಂಕಗಳಿಗೂ ತಾಳೆ ಆಗುತ್ತಿದೆಯೇ ಎಂದು ಪರಿಶೀಲಿಸಿ, ದೃಡೀಕರಿಸುವುದು. ಈ ಸಂಬಂಧ ಮಂಡಲಿಯಿಂದ ನೀಡಲಾಗಿರುವ ನಮೂನೆಯಲ್ಲಿ ಮಾಹಿತಿಗಳನ್ನು ಮೂರು ಪ್ರತಿಗಳಲ್ಲಿ ಭರ್ತಿಮಾಡಿ, ಒಂದು ಪ್ರತಿಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ, ಒಂದು ಪ್ರತಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಒಂದು ಪ್ರತಿಯನ್ನು ಸಮಿತಿ ಸದಸ್ಯರ ಹಂತದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು. ಸದರಿ ಭರ್ತಿ ಮಾಡಿದ ನಮೂನೆಯನ್ನು ಫಲಿತಾಂಶ ಪ್ರಕಟವಾದ ಮೂರು (3) ತಿಂಗಳವರೆಗೆ ಎಲ್ಲಾ ಹಂತದಲ್ಲೂ ಕಾಯ್ದಿರಿಸಲು ತಿಳಿಸಿದೆ.
ಕಿರುಪರೀಕ್ಷೆ ಮತ್ತು ಚಟುವಟಿಕೆಗಳಿಗೆ ಅಂಕ ನೀಡಿಕೆಯಲ್ಲಿ ಶಿಕ್ಷಕರು ಲೋಪವೆಸಗಿದ್ದಲ್ಲಿ ಅಗತ್ಯ ಸೂಚನೆಗಳನ್ನು ನೀಡಿ, ಅಂಕ ನೀಡಿಕೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು ತಿಳಿಸುವುದು. ಒಂದು ವೇಳೆ ತ್ರಿ-ಸದಸ್ಯ ಸಮಿತಿಯ ಸಲಹೆಗಳನ್ನು ಅನುಪಾಲನೆ ಮಾಡದೆ ಕರ್ತವ್ಯ ಲೋಪವೆಸಗಿರುವ ಶಿಕ್ಷಕರ ಬಗ್ಗೆ ಅಗತ್ಯ ಕ್ರಮವಹಿಸಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ವರದಿಯನ್ನು ಸಲ್ಲಿಸಲು ತಿಳಿಸಿದೆ.
FA4 ಪೂರ್ಣಗೊಂಡ ಕೂಡಲೇ ತ್ರಿ-ಸದಸ್ಯ ಸಮಿತಿ ಸದಸ್ಯರು ಆಯಾ ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸುವ ಕಾರ್ಯವನ್ನು ದಿನಾಂಕ:20-02-2025 ರೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಲು ಸೂಚಿಸಿದೆ.