UGC NEWS: 4 ವರ್ಷದ ಪದವಿ ಮೂರೇ ವರ್ಷಕ್ಕೆ ಅಂತ್ಯ! 3 ವರ್ಷದ್ದು ಎರಡೂವರೆ ವರ್ಷದಲ್ಲೇ ಮುಗಿಸಿ, ಶಿಕ್ಷಣ ಸಂಸ್ಥೆಗಳಿಗೆ UGC ಅವಕಾಶ.

4 ವರ್ಷದ ಪದವಿ ಮೂರೇ ವರ್ಷಕ್ಕೆ ಅಂತ್ಯ! 3 ವರ್ಷದ್ದು ಎರಡೂವರೆ ವರ್ಷದಲ್ಲೇ ಮುಗಿಸಿ | ಶಿಕ್ಷಣ ಸಂಸ್ಥೆಗಳಿಗೆ UGC ಅವಕಾಶ ನೀಡಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನ, ಯುಜಿಸಿ ಅಧ್ಯಕ್ಷ ಜಗದೀಶಕುಮಾ‌ರ್ ಮಾಹಿತಿ

ಎನ್‌ಇಪಿಯಿಂದ ಪರಿವರ್ತನೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (UGC)  ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಗಳನ್ನು ಉಂಟು ಮಾಡಲಿದೆ. ಜತೆಗೆ, ಶಿಕ್ಷಣವನ್ನು ಕಡಿಮೆ ವೆಚ್ಚದಾಯಕವನ್ನಾಗಿಸುವ ಹೊಣೆಯು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಜಗದೀಶಕುಮಾರ್ ಹೇಳಿದರು. ವಿದ್ಯಾರ್ಥಿಗಳು ಯಾವ ಹಂತದವರೆಗೆ ಮುಂದುವರಿಯಬಲ್ಲರು, ಸಮಾಜದಲ್ಲಿ ಪಡೆಯುವ ಸ್ಥಾನಮಾನ ಹಾಗೂ ತಮ್ಮ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಅಂಶವು ಉನ್ನತ ಶಿಕ್ಷಣದಲ್ಲಿನ ಸಮಾನತೆ, ಒಳಗೊಳ್ಳುವಿಕೆ ಹಾಗೂ ಸರ್ವರಿಗೂ ಲಭ್ಯವಾಗುವ ಗುಣಗಳನ್ನು ಆಧರಿಸಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತ್ವರಿತವಾಗಿ ಪದವಿ ಪಡೆಯುವ ಅವಕಾಶವನ್ನು ನೀಡಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC)  ಮುಂದಾಗಿದೆ. ಇದರನ್ವಯ ಮೂರು ವರ್ಷಗಳ ಪದವಿ ವ್ಯಾಸಂಗವನ್ನು ಎರಡೂವರೆ ವರ್ಷದಲ್ಲಿ ಮುಗಿಸಬಹುದು. ನಾಲ್ಕು ವರ್ಷಗಳ ಪದವಿ ಅಧ್ಯಯನವನ್ನು ಮೂರು ವರ್ಷಗಳಲ್ಲಿಯೇ ಪೂರ್ಣಗೊಳಿಸಬಹುದು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದನ್ನು ಜಾರಿಗೊಳಿಸಲಿದೆ.

ಚೆನ್ನೈನಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಕಾಲೇಜುಗಳ ಸಮಾವೇಶದಲ್ಲಿ UGC ಅಧ್ಯಕ್ಷ ಪ್ರೊ.ಎಂ. ಜಗದೀಶ ಕುಮಾರ್ ಈ ವಿಷಯವನ್ನು ತಿಳಿಸಿದ್ದಾರೆ.

ಇದಷ್ಟೇ ಅಲ್ಲ, ಅಗತ್ಯವಾದಲ್ಲಿ ಪದವಿ ಪೂರ್ಣಗೊಳಿಸಲು ನಿಗದಿಗಿಂತಲೂ ಹೆಚ್ಚಿನ ಅವಕಾಶವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.

ಕೆಲ ಸಮಯದ ವಿರಾಮದ ಬಳಿಕ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಹೀಗಾಗಿ ಅವಧಿಯನ್ನು ಹಿಗ್ಗಿಸುವ ಅಥವಾ ಕುಗ್ಗಿಸುವ ಅವಕಾಶವನ್ನು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಲ್ಟಿ ಎಂಟ್ರಿ ಹಾಗೂ  ಮಲ್ಟಿ ಎಕ್ಸಿಟ್  ಅವಕಾಶ ನೀಡಲಾಗಿದೆ. ಇದರನ್ವಯ ವಿದ್ಯಾರ್ಥಿಯು ಪ್ರಥಮ. ದ್ವಿತೀಯ, ತೃತೀಯ ಅಥವಾ ನಾಲ್ಕನೇ ವರ್ಷದಲ್ಲಿ ವ್ಯಾಸಂಗದಿಂದ ಹಿಂದೆ ಸರಿದು ಕೆಲ ಸಮಯದ ಬಳಿಕ ಮತ್ತೆ ದಾಖಲಾಗುವ ಅವಕಾಶ ನೀಡಲಾಗಿದೆ. ಆದರೆ, ಅವಧಿ ಕಡಿತಗೊಳಿಸುವ ಚಿಂತನೆಯನ್ನು ಯುಜಿಸಿ ಇದೇ ಮೊದಲ ಬಾರಿಗೆ ಮುಂದಿಟ್ಟಿದೆ. ಅದರಲ್ಲೂ ಸ್ವಾಯತ್ತ ಕಾಲೇಜುಗಳ ಸಮಾವೇಶದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವುದು ಹೊಸ ಚರ್ಚೆಗೂ ನಾಂದಿ ಹಾಡಿದೆ.

ಬ್ರೇಕ್ ಪಡೆಯಿರಿ: ತ್ವರಿತವಾಗಿ ವ್ಯಾಸಂಗ ಮಾಡುವುದಷ್ಟೇ ಅಲ್ಲದೆ, ಅಧ್ಯಯನ ಅವಧಿಯ ನಡುವೆ ಬ್ರೇಕ್ ಪಡೆಯಲು ಈಗಾಗಲೇ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ವಿರಾಮವನ್ನು ಪಡೆದು ಮತ್ತೆ ಓದನ್ನು ಮುಂದುವರಿಸಬಹುದಾಗಿದೆ. ಒಟ್ಟಾರೆ ಶಿಕ್ಷಣದಲ್ಲಿ ಹೆಚ್ಚಿನ ಪ್ಲೆಕ್ಸಿಬಿಲಿಟಿಯನ್ನು ತರುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ.

ಸಮಿತಿ ಶಿಫಾರಸು: ಶೈಕ್ಷಣಿಕ ಅವಧಿಯನ್ನು ಕಡಿಮೆಗೊಳಿಸುವ ಚಿಂತನೆಯು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ನೇತೃತ್ವದ ಸಮಿತಿ ನೀಡಿದ ಶಿಫಾರಸು ಆಧರಿಸಿದೆ. ಹೊಸ ಯೋಜನೆಯನ್ನು ಯುಜಿಸಿ ಸಾಮಾನ್ಯ ಸಭೆಯು ಅಂಗೀಕರಿಸಿದೆ. ಈ ನಿಟ್ಟಿನಲ್ಲಿ ವಿಶ್ವತ ಮಾರ್ಗಸೂಚಿಗಳನ್ನು ಶೀಘ್ರದಲ್ಲಿ ಹೊರಡಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷರು ಮಾಹಿತಿ ಹಂಚಿಕೊಂಡಿದ್ದಾರೆ.

“ಮುಂಬರುವ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ಶಿಕ್ಷಣವನ್ನು ಪೂರೈಸಲು ಸಮರ್ಥವಿರುವ ವಿದ್ಯಾರ್ಥಿಗಳು ಆರು ತಿಂಗಳಿನಿಂದ  ಒಂದು ವರ್ಷದ ಅವಧಿಯನ್ನು ಉಳಿಸಬಹುದು.”

|ಪ್ರೊ.ಎಂ. ಜಗದೀಶಕುಮಾರ್ UGC ಅಧ್ಯಕ್ಷ.

 

ವಿದ್ಯಾರ್ಥಿಗಳ ಪ್ರತಿಭೆ ಆಧರಿಸಿದೆ

ಪದವಿ ಕೋರ್ಸ್‌ ಅನ್ನು ಎಷ್ಟು ತ್ವರಿತವಾಗಿ ಪೂರ್ಣಗೊಳಿಸುತ್ತಾರೆ ಎಂಬುದು ವಿದ್ಯಾರ್ಥಿಗಳ ಸಾಮರ್ಥ್ಯವನ್ನಾಧರಿಸಿದೆ. ಎರಡೇ ವರ್ಷದಲ್ಲಿ ಅಗತ್ಯ ಕ್ರೆಡಿಟ್‌ಗಳನ್ನು (ಅಂಕ) ಗಳಿಸಿ ಎಂದರೆ  ವಿದ್ಯಾರ್ಥಿಗಳಲ್ಲಿ ಭಾರಿ ಒತ್ತಡಕ್ಕೆ ಕಾರಣವಾಗಬಹುದು, ಹೀಗಾಗಿ ಪ್ರತಿಭಾವಂತರು ಆರು ತಿಂಗಳಿನಿಂದ  ಒಂದು ವರ್ಷದ  ಅವಧಿಯನ್ನು ಉಳಿಸಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ಜಗದೀಶ್ ಕುಮಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

 

Leave a Comment