ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025 (ಕರ್ನಾಟಕ ಕಾಯ್ದೆ ಸಂಖ್ಯೆ 15, 2025) ರ ಸೆಕ್ಷನ್ 18 ರ ಉಪವಿಭಾಗ (2) ರ ಪ್ರಕಾರ, ಅಧಿಸೂಚನೆ ಪ್ರಕಟ
ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ನಿಯಮಗಳು, 2025 ರ ಕರಡನ್ನು ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025 (ಕರ್ನಾಟಕ ಕಾಯ್ದೆ ಸಂಖ್ಯೆ 15, 2025) ರ ಸೆಕ್ಷನ್ 18 ರ ಉಪವಿಭಾಗ (2) ರ ಪ್ರಕಾರ, ಅಧಿಸೂಚನೆ ಸಂಖ್ಯೆ FD-CAM/23/2025, ದಿನಾಂಕ: 06.08.2025, ಕರ್ನಾಟಕ ರಾಜ್ಯಪತ್ರ, ವಿಶೇಷ ರಾಜ್ಯ ಪತ್ರಿಕೆ, ದಿನಾಂಕ: 11.08.2025 ರ ಬೆಂಗಳೂರು, ಭಾಗ- IV A, ಸಂಖ್ಯೆ 444 ರಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳಲ್ಲಿ ಇದರಿಂದ ಬಾಧಿತರಾಗುವ ಸಾಧ್ಯತೆ ಇರುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಮತ್ತು, ಸದರಿ ಗೆಜೆಟ್ ಅನ್ನು 11.08.2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ;
ಮತ್ತು ಮೇಲೆ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸದರಿ ಕರಡಿಗೆ ಸಂಬಂಧಿಸಿದಂತೆ ಸರ್ಕಾರವು ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿದೆ.
ಆದ್ದರಿಂದ, ಕರ್ನಾಟಕ ಸೂಕ್ಷ್ಮ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಕಾಯ್ದೆ, 2025 (2025 ರ ಕರ್ನಾಟಕ ಕಾಯ್ದೆ ಸಂಖ್ಯೆ 15) ರ ಸೆಕ್ಷನ್ 18 ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರೂಪಿಸುತ್ತದೆ, ಅವುಗಳೆಂದರೆ:-
ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ.
(1) ಈ ನಿಯಮಗಳನ್ನು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ನಿಯಮಗಳು, 2025 ಎಂದು ಕರೆಯತಕ್ಕದ್ದು.
(2) ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಈ ನಿಯಮಗಳನ್ನು ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
3) ಈ ನಿಯಮಗಳ ನಿಬಂಧನೆಗಳು ಅಧಿನಿಯಮದ ಸೆಕ್ಷನ್ 1 (3) ರಲ್ಲಿ ಹೊರಗಿಡಲಾದ ಘಟಕಗಳಿಗೆ ಅನ್ವಯಿಸುವುದಿಲ್ಲ.
2. ಪರಿಭಾಷೆಗಳು.- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು, ಪದಗಳ ಅರ್ಥ ಈ ಕೆಳಕಂಡಂತಿರತಕ್ಕದ್ದು, ಎಂದರೆ:-
(a) “ಅಧಿನಿಯಮ” ಎಂದರೆ, ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025 (2025ರ ಕರ್ನಾಟಕ ಅಧಿನಿಯಮ ಸಂಖ್ಯೆ 15);
(b) “ಅಧಿಕೃತ ಪ್ರತಿನಿಧಿ” ಎಂದರೆ, ವಕೀಲರನ್ನು ಹೊರತುಪಡಿಸಿ, ಒಂಬುಡ್ಸ್ ಪರ್ಸನ್‌ಗಳ ಮುಂದಿರುವ ವ್ಯವಹರಣೆಗಳಲ್ಲಿ ದೂರುದಾರನನ್ನು ಪ್ರತಿನಿಧಿಸುವುದಕ್ಕೆ ಕ್ರಮಬದ್ಧವಾಗಿ ನೇಮಕಗೊಂಡ ಮತ್ತು ಲಿಖಿತ ರೂಪದಲ್ಲಿ ಅಧಿಕೃತಗೊಂಡ ಒಬ್ಬ ವ್ಯಕ್ತಿ;
(c) “ಅನುಬಂಧ” ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಅನುಬಂಧ;
(d) “ಐತೀರ್ಪು” ಎಂದರೆ, ಒಂಬುಡ್ಸ್ ಪರ್ಸನ್ ನೀಡಿದ ಒಂದು ಐತೀರ್ಪು;
(e) “ಬ್ಯಾಂಕಿಂಗ್” ಎಂದರೆ, ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949 ರ ಕೇಂದ್ರ ಅಧಿನಿಯಮ ಸಂಖ್ಯೆ 10) ರಲ್ಲಿ ಪರಿಭಾಷಿಸಿದಂತೆ ಇರುವುದು;
(f) “ದೂರು” ಎಂದರೆ, ಸಾಲ ನೀಡುವವನು ನೀಡುವ ಸೇವೆಯಲ್ಲಿ ನ್ಯೂನ್ಯತೆಯಿದೆ ಎಂದು ಆಪಾದಿಸಿ ಮತ್ತು ಒಂಬುಡ್ಸ್ ಪರ್ಸನ್‌ನಿಂದ (ಸಂಬಂಧಪಟ್ಟ ಯೋಜನೆಯ ಅಡಿಯಲ್ಲಿ) ಪರಿಹಾರವನ್ನು ಕೋರಿ ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ನಂತಹ ಇತರ ವಿಧಾನಗಳ ಮೂಲಕ ಸಲ್ಲಿಸಿದ ಒಂದು ಮನವಿ;
(g) “ಸೇವೆಯಲ್ಲಿನ ನ್ಯೂನ್ಯತೆ” ಎಂದರೆ ಸಾಲ ನೀಡುವವನು ಶಾಸನಾತ್ಮಕವಾಗಿ ಅಥವಾ ಅನ್ಯಥಾ ಯಾವುದೇ ಹಣಕಾಸು ಸೇವೆಯನ್ನು ಅಥವಾ ಅದಕ್ಕೆ ಸಂಬಂಧಿಸಿದಂತಹ ಇತರ ಸೇವೆಗಳನ್ನು ನೀಡುವಂತೆ ಅಗತ್ಯಪಡಿಸಲಾದಂತೆ ನೀಡಿದ ಸೇವೆಗಳಲ್ಲಿ ಆದ ಕೊರತೆ ಅಥವಾ ಅಸಮರ್ಪಕತೆ, ಇದರಿಂದ ಸಾಲಗಾರನಿಗೆ ಆರ್ಥಿಕ ನಷ್ಟ ಅಥವಾ ಹಾನಿ ಉಂಟಾಗಿರಬಹುದು ಅಥವಾ ಆಗಿಲ್ಲದಿರಬಹುದು;
(h) “ನಮನೆ “ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆ;
(i) ಮೈಕ್ರೋ ಫೈನಾನ್ಸ್ ಸಂಸ್ಥೆ ಎಂದರೆ “ಮೈಕ್ರೋ ಲೋನ್” ಅಥವಾ “ಮೈಕ್ರೋ ಫೈನಾನ್ಸ್ ಸಾಲಗಳನ್ನು ನೀಡುವ ಸಂಸ್ಥೆ.
(j) “ಮೈಕ್ರೋ ಸಾಲ” ಅಥವಾ “ಮೈಕ್ರೋ ಫೈನಾನ್ಸ್ ಸಾಲ” ಎಂದರೆ ವಾರ್ಷಿಕ ರೂ.3,00,000 ದವರೆಗಿನ ಕೌಟುಂಬಿಕ ಆದಾಯವನ್ನು ಹೊಂದಿರುವ ಕುಟುಂಬಕ್ಕೆ ನೀಡಲಾಗುವ ಮೇಲಾಧಾರ-ರಹಿತ ಸಾಲವೆಂಬುದಾಗಿ ಕಾಲಕಾಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಪರಿಭಾಷಿಸಿದಂಥ ಮೈಕ್ರೋಫೈನಾನ್ಸ್ ಸಾಲ. ಈ ಉದ್ದೇಶಕ್ಕಾಗಿ, ಕುಟುಂಬ ಎಂದರೆ ಒಂದು ಪ್ರತ್ಯೇಕ ಕೌಟುಂಬಿಕ ಘಟಕ, ಎಂದರೆ ಅದರಲ್ಲಿ ಪತಿ, ಪತ್ನಿ ಮತ್ತು ಅವರ ಅವಿವಾಹಿತ ಮಕ್ಕಳು ಒಳಗೊಂಡಿರುತ್ತಾರೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ, ಎಂದರೆ ರೂ. 3,00,000 ದವರೆಗಿನ ವಾರ್ಷಿಕ ಆದಾಯವನ್ನು ಹೊಂದಿರುವ ಕುಟುಂಬಗಳಿಗೆ, ಆ ಸಾಲದ ಬಳಕೆಯ ಬಗ್ಗೆಯಾಗಲೀ ಮತ್ತು ಅರ್ಜಿ/ಕಾರ್ಯವಿಧಾನ/ಹಂಚಿಕೆ {ಭೌತಿಕ ರೂಪದ ಮೂಲಕವಾಗಲಿ ಅಥವಾ ಡಿಜಿಟಲ್ ವಾಹಿನಿಗಳ ಮೂಲಕವಾಗಲಿ) ಯನ್ನಾಗಲಿ ಪರಿಗಣಿಸದೆ ನೀಡಲಾದ ಎಲ್ಲಾ ಮೇಲಾಧಾರ-ರಹಿತ ಸಾಲಗಳನ್ನು, ಮೈಕ್ರೋ ಸಾಲ ಅಥವಾ ಮೈಕ್ರೋಫೈನಾನ್ಸ್ ಸಾಲಗಳೆಂದು ಪರಿಗಣಿಸತಕ್ಕದ್ದು; ಮತ್ತು
(k) “ಪ್ರಕರಣ” ಎಂದರೆ ಅಧಿನಿಯಮದ ಪ್ರಕರಣ.
(2) ಈ ನಿಯಮಗಳಲ್ಲಿ ಬಳಸಲಾಗಿರುವ, ಆದರೆ ಈ ಅಧಿನಿಯಮದಲ್ಲಿ ಪರಿಭಾಷಿಸದಿರುವ ಸಂಬಂಧಪಟ್ಟ ಕಾನೂನುಗಳಲ್ಲಿ ಮತ್ತು ಸಾಮಾನ್ಯ ಖಂಡಗಳ ಅಧಿನಿಯಮ, 1899 (1899 ರ ಕರ್ನಾಟಕ ಅಧಿನಿಯಮ ಸಂಖ್ಯೆ III) ರಲ್ಲಿ ಪರಿಭಾಷಿಸಿರುವ ಎಲ್ಲಾ ಇತರ ಪದಗಳು ಮತ್ತು ಪದಾವಳಿಗಳು ಅವುಗಳಿಗೆ ಅಲ್ಲಿ ಅನುಕ್ರಮವಾಗಿ ನೀಡಿರುವ ಅದೇ ಅರ್ಥವನ್ನೇ ಇಲ್ಲಿಯೂ ಹೊಂದಿರತಕ್ಕದ್ದು.
3. ನೋಂದಣಿ.- 3ನೇ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು, ಸಾಲದಾತರು ನೋಂದಣಿಗಾಗಿ ನಮನೆ ಸಂಖ್ಯೆ 1 ರಲ್ಲಿ ಈ ಕೆಳಕಂಡ ವಿವರಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸತಕ್ಕದ್ದು .
4. ಸಾಲ ನೀಡಿಕೆ ಮಾನದಂಡಗಳು- 5ನೇ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು, ಸಾಲ ನೀಡಿಕೆ ಮಾನದಂಡಗಳು, ವಸೂಲಿ ಮತ್ತು ವಸೂಲಾತಿ ಪದ್ಧತಿಗಳು ಈ ಕೆಳಕಂಡಂತಿರತಕ್ಕದ್ದು:
A. ಸಾಲಗಳಿಗಾಗಿ ಅರ್ಜಿಗಳು ಮತ್ತು ಅವುಗಳ ಕಾರ್ಯಪ್ರಕ್ರಿಯೆ,-
(i) ಸಾಲಗಳನ್ನು ಮಂಜೂರು ಮಾಡುವಾಗ, ಸಾಲ ನೀಡುವವನು ತನಗೆ ತಿಳಿದಷ್ಟು ಮಟ್ಟಿಗೆ, ಮತ್ತು ಅದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ನ ಮೇಲೆ, ಎಲ್ಲಾ ಮೂಲಗಳಿಂದ ಬಾಕಿ ಇರುವ ಸಾಲಗಳ ವಿವರಗಳನ್ನು, ಎಲ್ಲಾ ಮೂಲಗಳಿಂದ ಬರುವ ಆದಾಯವನ್ನು ಮತ್ತು ಈಗ ಕೋರಿರುವ ಸಾಲಗಳ ಉದ್ದೇಶಗಳು ಮತ್ತು ಉಪಯೋಗಗಳನ್ನು ಯುಕ್ತ ಜಾಗರೂಕತೆಯ ಕ್ರಮಗಳಾಗಿ ಪಡೆದುಕೊಳ್ಳತಕ್ಕದ್ದು ಮತ್ತು ಸಾಲದ ಮೊತ್ತ, ನಿಬಂಧನೆಗಳು ಮತ್ತು ಷರತ್ತುಗಳು ಅರ್ಜಿದಾರನ ಸಾಮರ್ಥ್ಯದ ಮಿತಿಯಲ್ಲಿದೆ ಎಂಬುದನ್ನು ಮರುಪಾವತಿ ಪಡಿಸಿಕೊಳ್ಳತಕ್ಕದ್ದು. ಖಾತರಿ
(ii) ಕುಟುಂಬದ ಮಾಸಿಕ ಸಾಲ ಮರುಪಾವತಿ ಹೊಣೆಗಾರಿಕೆಗಳು ಕುಟುಂಬದ ಮಾಸಿಕ ಆದಾಯದ ಶೇಕಡಾವಾರಿಗೆ ತಕ್ಕಂತೆ ಇರಬೇಕಾದ ಕಾರಣಕ್ಕಾಗಿ ಸಾಲ ನೀಡುವವನ ಹೊರ ಹರಿವಿನ ಮಿತಿಗೆ ಸಂಬಂಧಿಸಿದಂತೆ ಒಂದು ನೀತಿಯನ್ನು ಹೊಂದಿರತಕ್ಕದ್ದು.
(iii) ಸಾಲಗಾರನೊಂದಿಗೆ ನಡೆಸುವ ಎಲ್ಲಾ ಸಂವಹನಗಳು ಕನ್ನಡದಲ್ಲಿರತಕ್ಕದ್ದು .
(iv) ಇನ್ನಿತರ ಸಾಲ ನೀಡುವವರು ಒಡ್ಡುವ ನಿಬಂಧನೆಗಳು ಮತ್ತು ಷರತ್ತುಗಳೊಂದಿಗೆ ಸಾಲಗಾರನು ಅರ್ಥಪೂರ್ಣವಾದ ಹೋಲಿಕೆಯನ್ನು ಮಾಡಿಕೊಂಡು ತನಗೆ ತಿಳುವಳಿಕೆಯುಳ್ಳಂತಹ ತೀರ್ಮಾನವನ್ನು ತೆಗೆದುಕೊಳ್ಳುವ ಹಾಗೆ ಸಾಲಗಾರನ ಹಿತಾಸಕ್ತಿಗೆ ಪರಿಣಾಮ ಬೀರುವ ಅಗತ್ಯ ಮಾಹಿತಿಯನ್ನು ಸಾಲದ ಅರ್ಜಿ ನಮೂನೆಗಳು ಒಳಗೊಂಡಿರತಕ್ಕದ್ದು.
(v) ಸಾಲದ ಅರ್ಜಿ ನಮೂನೆಯು ಅರ್ಜಿ ನಮೂನೆಯೊಂದಿಗೆ ಸಲ್ಲಿಸಲು ಅಗತ್ಯವಿರುವ ದಸ್ತಾವೇಜುಗಳನ್ನು ಸೂಚಿಸತಕ್ಕದ್ದು .
(vi) ಸಾಲ ನೀಡುವವರು ತಮ್ಮ ಸಾಲಗಾರರಿಗೆ ನೀಡಿದ ಸಾಲಗಳಿಗೆ ಯಾವುದೇ ಆಧಾರವನ್ನು ಪಡೆಯತಕ್ಕದ್ದಲ್ಲ.
(vii) ಸಾಲ ನೀಡುವವರು ಪ್ರತಿ ಸಾಲದ ಅರ್ಜಿಯನ್ನು ಸ್ವೀಕರಿಸಿದ ತಕ್ಷಣ ಲಿಖಿತ ರೂಪದಲ್ಲಿ ಸ್ವೀಕೃತಿ ನೀಡತಕ್ಕದ್ದು ಮತ್ತು ಅದರಲ್ಲಿ ಸಾಲದ ಅರ್ಜಿಯನ್ನು ವಿಲೇವಾರಿ ಮಾಡತಕ್ಕ ಅವಧಿಯನ್ನು ಸೂಚಿಸತಕ್ಕದ್ದು.
B. ಸಾಲದ ಮೌಲ್ಯನಿರ್ಣಯ ಮತ್ತು ನಿಬಂಧನೆಗಳು/ಷರತ್ತುಗಳು:-
(i) ಸಾಲ ನೀಡುವವರು ಸಾಲಗಾರನಿಗೆ ಪ್ರಮುಖ ವಾಸ್ತವಾಂಶ ಪಟ್ಟಿಯಲ್ಲಿ (ಕೆಎಫ್ ಎಸ್ – ಕೀ ಫ್ಯಾಕ್ಸ್ ಶೀಟ್) ಅಥವಾ ಮಂಜೂರಾತಿ ಪತ್ರದ ಮೂಲಕ ವಾರ್ಷಿಕ ಬಡ್ಡಿ ದರ ಮತ್ತು ಅದನ್ನು ನಿರ್ಣಯಿಸುವ ವಿಧಾನ ಸೇರಿದಂತೆ ನಿಬಂಧನೆಗಳು ಮತ್ತು ಷರತ್ತುಗಳೊಂದಿಗೆ ಮಂಜೂರಾದ ಸಾಲದ ಮೊತ್ತವನ್ನು ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು ಮತ್ತು ಸಾಲಗಾರನು ಈ ನಿಬಂಧನೆಗಳು ಮತ್ತು ಷರತ್ತುಗಳಿಗೆ ನೀಡಿದ ಅಂಗೀಕಾರವನ್ನು ತನ್ನ ದಾಖಲೆಯಲ್ಲಿ ಇಟ್ಟುಕೊಂಡಿರತಕ್ಕದ್ದು. ಸಾಲ ನೀಡುವವರು ಸಾಲದ ಒಪ್ಪಂದದಲ್ಲಿ ತಡವಾಗಿ ಮರುಪಾವತಿ ಮಾಡಿದಕ್ಕಾಗಿ ವಿಧಿಸಲಾಗುವ ದಂಡದ ಬಡ್ಡಿಯನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸತಕ್ಕದ್ದು.
(ii) ಸಾಲಗಾರನು ಬಯಸಿದರೆ, ಸಾಲಗಳ ಮಂಜೂರಾತಿ/ಬಟವಾಡೆ ಸಮಯದಲ್ಲಿ ಸಾಲ ನೀಡುವವರು ಎಲ್ಲಾ ಸಾಲಗಾರರಿಗೆ ಸಾಲದ ಒಪ್ಪಂದದಲ್ಲಿ ಉಲ್ಲೇಖಿಸಿದ ಎಲ್ಲಾ ಲಗತ್ತುಗಳ ಒಂದು ಪ್ರತಿಯೊಂದಿಗೆ ಸಾಲಗಾರರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಸಾಲ ಒಪ್ಪಂದದ ಒಂದು ಪ್ರತಿಯನ್ನು ಒದಗಿಸತಕ್ಕದ್ದು.
5. ಸಾಲಗಳನ್ನು ಬಟವಾಡೆ ಮಾಡುವ ಮಾನದಂಡಗಳು.- 7ನೇ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು, ಈ ಕೆಳಕಂಡ ಅಂಶಗಳನ್ನು ಪಾಲಿಸತಕ್ಕದ್ದು;
A. ನಿಬಂಧನೆಗಳು ಮತ್ತು ಷರತ್ತುಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ ಸಾಲಗಳ ಬಟವಾಡೆ;
(i) ಸಾಲ ನೀಡುವವರು ಬಟವಾಡೆ ವೇಳಾಪಟ್ಟಿ, ಬಡ್ಡಿ ದರಗಳು, ಸೇವಾ ಶುಲ್ಕಗಳು, ಪೂರ್ವಪಾವತಿ ಶುಲ್ಕಗಳು ಮುಂತಾದವುಗಳನ್ನು ಸೇರಿದಂತೆ ನಿಬಂಧನೆಗಳು ಮತ್ತು ಷರತ್ತುಗಳಲ್ಲಿ ಆಗುವ ಯಾವುದೇ ಬದಲಾವಣೆಯ ಬಗ್ಗೆ ಸಾಲಗಾರನಿಗೆ ನೋಟೀಸು ನೀಡತಕ್ಕದ್ದು.
(ii) ಸಾಲ ನೀಡುವವರು ಬಡ್ಡಿ ದರಗಳು ಮತ್ತು ಶುಲ್ಕಗಳಲ್ಲಿನ ಬದಲಾವಣೆಗಳು ಭವಿಷ್ಯವರ್ತಿಯಾಗಿ ಮಾತ್ರ ಪರಿಣಾಮಕಾರಿಯಾಗಿರುತ್ತವೆ ಎಂಬುದನ್ನು ಸಹ ಖಾತರಿಪಡಿಸಿಕೊಳ್ಳಬೇಕು.
B. ಸಾಲ ಒಪ್ಪಂದ/ಪ್ರಮುಖ ವಾಸ್ತವಾಂಶ ಪಟ್ಟಿಯಲ್ಲಿನ ಬಹಿರಂಗಪಡಿಸುವಿಕೆಗಳು:
(i) ಎಲ್ಲಾ ಸಾಲ ನೀಡುವವರು ವ್ಯವಸ್ಥಾಪನ ಮಂಡಲಿಯ ಅನುಮೋದಿತ, ಪ್ರಮಾಣಬದ್ಧ ಸಾಲ ಒಪ್ಪಂದ ನಮ್ಮನೆಯನ್ನು ಹೊಂದಿರತಕ್ಕದ್ದು. ಪ್ರತಿಯೊಂದು ಸಾಲ ಯೋಜನೆಯ ಸಾಲ ಒಪ್ಪಂದದ ಪ್ರಮಾಣಬದ್ಧ ನಮನೆಯನ್ನು ನೋಂದಣಿ ನಮೂನೆಯೊಂದಿಗೆ ಸಲ್ಲಿಸತಕ್ಕದ್ದು. ಮುಂದೆ ಭವಿಷ್ಯದಲ್ಲಿ ಒಪ್ಪಂದಗಳಲ್ಲಿ ಯಾವುದಾದರೂ ಮಾರ್ಪಾಡುಗಳಾದಲ್ಲಿ ಅದನ್ನು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.
(ii) ಸಾಲದ ಒಪ್ಪಂದದಲ್ಲಿ ಈ ಕೆಳಗಿನವುಗಳನ್ನು ಬಹಿರಂಗಪಡಿಸತಕ್ಕದ್ದು:
(a) ಈ ಕೆಳಕಂಡವುಗಳನ್ನು ಒಳಗೊಂಡಂತೆ ಆದರೆ ಅಷ್ಟಕ್ಕೆ ಮಾತ್ರ ಸೀಮಿತಗೊಳಿಸದೆ ಸಾಲದ ಎಲ್ಲ ನಿಬಂಧನೆಗಳು ಮತ್ತು ಷರತ್ತುಗಳು,-
(i) ಅಸಲು ಮೊತ್ತ;
(ii) ಬಡ್ಡಿ ದರ
(iii) ಮರು-ಪಾವತಿಯ ಅವಧಿ; ಮತ್ತು
(iv) ಸಾಲ ಮರುಪಾವತಿ ಮಾಡಲು ವಿನಾಯಿತಿ ನೀಡಿರುವ ಅವಧಿ.
(b) ಕಾರ್ಯಪ್ರಕ್ರಿಯಾ ಶುಲ್ಕಗಳಂತಹ ಇತರ ವೆಚ್ಚಗಳ ಜೊತೆಗೆ ವಿಧಿಸಿದ ಪರಿಣಾಮಕಾರಿ ಬಡ್ಡಿ ದರ.
(c) ವಿಳಂಬ ಪಾವತಿಗೆ ವಿಧಿಸಲಾದ ದಂಡ – ಮೊತ್ತ ಅಥವಾ ದರ ಅಥವಾ ಅವೆರಡನ್ನೂ ಸೇರಿಸಿ ನಿರ್ದಿಷ್ಟಪಡಿಸಿದ್ದರೆ,
(d
) ಸಾಲಗಾರನ ಮಾಹಿತಿ ದತ್ತಾಂಶದ ಖಾಸಗಿತನವನ್ನು ಕಾಪಾಡಲಾಗುವುದು ಎನ್ನುವ ಆಶ್ವಾಸನೆ.
C. ಮುಖ್ಯ ವಾಸ್ತವಾಂಶ ಪಟ್ಟಿಯು ಈ ಮುಂದಿನ ವಿವರಗಳನ್ನು ಪ್ರಕಟಗೊಳಿಸತಕ್ಕದ್ದು, ಎಂದರೆ:-
(i) ವಿಧಿಸಿದ ಪರಿಣಾಮಕಾರಿ ಬಡ್ಡಿ ದರ;
(ii)
ಕಾರ್ಯಪ್ರಕ್ರಿಯಾ ಶುಲ್ಕ;
(iii)
ವಿಮೆ
(iv) ವಿಳಂಬ ಪಾವತಿಗಳಿಗೆ ವಿಧಿಸುವ ದಂಡಗಳು;
(v) ಮರು ಪಾವತಿ ವೇಳಾಪಟ್ಟಿ;
(vi) ಸಾಲಕ್ಕೆ ಲಗತ್ತಿಸಿರುವ ಇತರ ಎಲ್ಲ ನಿಬಂಧನೆಗಳು ಮತ್ತು ಷರತ್ತುಗಳು;
(vii) ಸಾಲಗಾರನನ್ನು ಸಮರ್ಪಕವಾಗಿ ಗುರುತಿಸುವ ಮಾಹಿತಿ ಮತ್ತು ಸ್ವೀಕರಿಸಿದ ಸಾಲ ಕಂತುಗಳು ಮತ್ತು ಅಂತಿಮ ತೀರುವಳಿಯೂ ಸೇರಿದಂತೆ ಎಲ್ಲ ಮರು ಪಾವತಿಗಳಿಗೆ ಸಾಲ ನೀಡಿದವನು ನೀಡಿದ ಸ್ವೀಕೃತಿ ಪತ್ರಗಳ ಮಾಹಿತಿ;
(viii) ಮುಖ್ಯ ವಾಸ್ತವಾಂಶ ಪಟ್ಟಿಯಲ್ಲಿ ಸಾಲ ನೀಡುವವನಿಂದ ಸ್ಥಾಪಿಸಲ್ಪಟ್ಟ ಕುಂದುಕೊರತೆ ನಿವಾರಣಾ ವ್ಯವಸ್ಥೆ ಮತ್ತು ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನೂ ಸಹ ಸ್ಪಷ್ಟವಾಗಿ ನಮೂದಿಸತಕ್ಕದ್ದು.
(
ix) ಸಾಲವಲ್ಲದ ಸೇವೆಗಳನ್ನು ಸಾಲಗಾರನ ಸಂಪೂರ್ಣ ಒಪ್ಪಿಗೆ ಪಡೆದೇ ನೀಡತಕ್ಕದ್ದು ಮತ್ತು ಶುಲ್ಕ ಸಂರಚನೆಯನ್ನು ಮುಖ್ಯ ವಾಸ್ತವಾಂಶ ಪಟ್ಟಿಯಲ್ಲಿಯೇ ತಿಳಿಸತಕ್ಕದ್ದು ಮತ್ತು
(x) ಮುಖ್ಯ ವಾಸ್ತವಾಂಶ ಪಟ್ಟಿಗೆ ಸಾಲ ನೀಡುವವನ ಅಧಿಕೃತ ಪ್ರತಿನಿಧಿಯೇ ಸಹಿಮಾಡಿರತಕ್ಕದ್ದು.
D. ಸಾಲ ಮೊಬಲಗು ಸಂಗ್ರಹ ಮತ್ತು ವಸೂಲಾತಿ:
(i) ಸಾಲ ನೀಡುವವನು ತನ್ನ ಕ್ಷೇತ್ರ ಸಿಬ್ಬಂದಿಯು ಅನುಸರಿಸಬೇಕಾದ ಒಂದು ಅನುಮೋದಿತ ನೀತಿ ಸಂಹಿತೆಯನ್ನು ಮತ್ತು ಅವರ ನೇಮಕಾತಿ, ತರಬೇತಿ, ಈ ಅಧಿನಿಯಮ ಮತ್ತು ನಿಯಮಗಳು ಹಾಗೂ ಜಾರಿಯಲ್ಲಿರುವ ಇತರ ಸುಸಂಗತ ಕಾನೂನುಗಳ ಕುರಿತು ಅರಿವು ಮಾಡಿಸುವಿಕೆಗಾಗಿ ಮತ್ತು ಮೇಲ್ವಿಚಾರಣೆಗಾಗಿ ಒಂದು ವ್ಯವಸ್ಥೆಯನ್ನು ರೂಪಿಸತಕ್ಕದ್ದು. ಆ ಸಂಹಿತೆಯು ಕ್ಷೇತ್ರ ಸಿಬ್ಬಂದಿಗೆ ಅವಶ್ಯವಿರುವ ಕನಿಷ್ಟ ವಿದ್ಯಾರ್ಹತೆಗಳನ್ನು ನಿಗದಿಪಡಿಸತಕ್ಕದ್ದು ಮತ್ತು ಅವರು ಸಾಲಗಾರರೊಂದಿಗೆ ವ್ಯವಹರಿಸುವುದು ಹೇಗೆಂಬ ಬಗ್ಗೆ ಗುರುತಿಸಿದ ಅವಶ್ಯ ತರಬೇತಿ ಸಾಧನಗಳನ್ನು ಅದು ಒಳಗೊಂಡಿರತಕ್ಕದ್ದು. ಕ್ಷೇತ್ರ ಸಿಬ್ಬಂದಿಗೆ ನೀಡುವ ತರಬೇತಿಯು ಸಾಲಗಾರರ ಮೇಲೆ ಬಲಪ್ರಯೋಗ ಮಾಡಿ ಸಾಲ ಮೊಬಲಗು ಸಂಗ್ರಹ ಮತ್ತು ವಸೂಲು ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳದೇ ಸಾಲಗಾರರ ಬಗ್ಗೆ ತೋರಿಸುವ ಶಿಷ್ಟಾಚಾರ ನಡವಳಿಕೆಯನ್ನು ಬೋಧಿಸುವ ಕಾರ್ಯಕ್ರಮಗಳನ್ನು ಒಳಗೊಂಡಿರತಕ್ಕದ್ದು.
(ii) ಸಿಬ್ಬಂದಿಗೆ ಕೊಡುವ ಸಂಭಾವನೆಯನ್ನು ನಿಗದಿಪಡಿಸುವಾಗ ಅವರು ಎಷ್ಟು ಸಾಲ ಮೊತ್ತಗಳ ಕ್ರೋಢೀಕರಣ ಮಾಡಿದ್ದಾರೆ ಮತ್ತು ಅವರು ವಸೂಲಾತಿ ಮಾಡಿರುವ ಪ್ರಮಾಣ ಎಷ್ಟು ಎಂಬ ಬಗ್ಗೆ ಮಹತ್ವ ನೀಡುವುದಕ್ಕಿಂತ ಅವರು ಒದಗಿಸಿದ ಸೇವೆ ಮತ್ತು ಸಾಲಗಾರರ ಸಂತುಷ್ಟಿಯ ಬಗ್ಗೆ ಪ್ರಾಧಾನ್ಯತೆ ನೀಡತಕ್ಕದ್ದು. ಕ್ಷೇತ್ರ ಸಿಬ್ಬಂದಿಯು ನೀತಿ ಸಂಹಿತೆಯನ್ನು ಅನುಪಾಲನೆ ಮಾಡದೇಯಿದ್ದ ಪಕ್ಷದಲ್ಲಿ ದಂಡನೆಗಳು ಮತ್ತು ಇತರ ಶಿಸ್ತು ಕ್ರಮಗಳನ್ನೂ ಸಹ ನಿಗದಿಪಡಿಸತಕ್ಕದ್ದು ಮತ್ತು ಈ ಅಧಿನಿಯಮದ ಅಡಿಯಲ್ಲಿ ಯಾವುದೇ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಯಾವುದೇ ಹಿಂಜರಿಕೆಯಿರತಕ್ಕದ್ದಲ್ಲ. ಈ ಉಪಬಂಧವು ಕರಾರಿನ ಮೇಲೆ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ಸಹ ಅನ್ವಯಿಸತಕ್ಕದ್ದು.
6. ಬಡ್ಡಿ ದರಗಳಲ್ಲಿ ಪಾರದರ್ಶಕತೆ.- ಪ್ರಕರಣ 7ರ ಉಪಬಂಧಗಳಿಗೆ ಒಳಪಟ್ಟು, ಈ ಮುಂದಿನವುಗಳಿಗೆ ಬದ್ಧರಾಗಿರತಕ್ಕದ್ದು:
(a) ಸಾಲ ನೀಡುವವರ ಆಡಳಿತ ಮಂಡಳಿಗಳು 7ನೇ ಪ್ರಕರಣದ (1)ನೇ ಉಪ-ಪ್ರಕರಣದಲ್ಲಿ ಉಲ್ಲೇಖಿತವಾದ ಸೂಕ್ತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ಮಾದರಿ ಬಡ್ಡಿ ದರವನ್ನು ಅಳವಡಿಸಿಕೊಳ್ಳತಕ್ಕದ್ದು, ಮತ್ತು ಸಾಲದ ಬಡ್ಡಿದರ (Pricing the Loan) ನಿಗದಿಪಡಿಸುವಲ್ಲಿ ಇತರ ಯಾವುದೇ ವೆಚ್ಚಗಳನ್ನು ಸೇರ್ಪಡೆಗೊಳಿಸತಕ್ಕದ್ದಲ್ಲ.
(b) ಸಾಲಗಾರರಿಗೆ ಅಥವಾ ಗ್ರಾಹಕರಿಗೆ ಬಡ್ಡಿ ದರವನ್ನು ಅರ್ಜಿ ನಮೂನೆಯಲ್ಲಿಯೇ ಬಹಿರಂಗಪಡಿಸಿರತಕ್ಕದ್ದು ಮತ್ತು ಅದನ್ನು ಮಂಜೂರಾತಿ ಪತ್ರ ಅಥವಾ ಮುಖ್ಯ ವಾಸ್ತವಾಂಶ ಪಟ್ಟಿಯಲ್ಲಿ (ಕೆಎಫ್‌ಎಸ್) ಸುಸ್ಪಷ್ಟವಾಗಿ ತಿಳಿಸತಕ್ಕದ್ದು.
(c) ಬಡ್ಡಿ ದರವು ಸಾಲ ನೀಡುವವರ ಜಾಲತಾಣದಲ್ಲೂ ಸಹ ಲಭ್ಯವಾಗುವಂತೆ ಮಾಡತಕ್ಕದ್ದು.
(d) ಜಾಲತಾಣದಲ್ಲಿ ಅಥವಾ ಇನ್ನಾವುದಾದರೂ ರೂಪದಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಬಡ್ಡಿ ದರವು ಬದಲಾವಣೆಗೊಂಡಾಗಲೆಲ್ಲಾ ಅದನ್ನು ಅಪ್‌ಡೇಟ್ ಮಾಡುತ್ತಿರತಕ್ಕದ್ದು.
(e) ಸಾಲಗಾರನು ತನ್ನ ಲೆಕ್ಕಕ್ಕೆ ವಿಧಿಸಲಾಗುವ ನಿಖರ ಬಡ್ಡಿ ದರವನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ಬಡ್ಡಿ ದರವನ್ನು ವಾರ್ಷಿಕ ದರದಲ್ಲಿ ನಿಗದಿಪಡಿಸುವುದು ಆದ್ಯತೆಯಾಗಿರತಕ್ಕದ್ದು.
(f) ಬಡ್ಡಿ ದರಗಳು ಮತ್ತು ವೆಚ್ಚಗಳಲ್ಲಿನ ಬದಲಾವಣೆಗಳನ್ನು ಸಾಲಗಾರರಿಗೆ ಸೂಕ್ತ ನೋಟಿಸನ್ನು ನೀಡಿದ ತರುವಾಯ ಭವಿಷ್ಯ ವರ್ತಿಯಾಗಿ ಮಾತ್ರವೇ ಕಾರ್ಯರೂಪಕ್ಕೆ ತರತಕ್ಕದ್ದು.
7. ನಿರ್ವಹಿಸಬೇಕಾದ ಪುಸ್ತಕಗಳು/ ಲೆಡ್ಡರ್‌ಗಳು. (1) ಪ್ರಕರಣ 7ರ ಉಪಬಂಧಗಳಿಗೆ ಒಳಪಟ್ಟು, ಸಾಲ
ನೀಡುವವರು ಈ ಕೆಳಗಿನ ಪುಸ್ತಕಗಳು/ಲೆಡ್ಡರ್‌ಗಳನ್ನು ನಿರ್ವಹಿಸತಕ್ಕದ್ದು:
(i)
ಆಯವ್ಯಯ ಪಟ್ಟಿ;
(ii) ಆದಾಯ ಮತ್ತು ಖರ್ಚು ವಿವರಣಾ ಪಟ್ಟಿ;
(
iii) ನಗದು ಹರಿವು ವಿವರಣಾ ಪಟ್ಟಿ; ಮತ್ತು
(iv) ಬಂಡವಾಳ ವರದಿ.
(2) ಸಾಲ ನೀಡುವವರು ಸಾಲಗಳ ಬಾಕಿ ಮತ್ತು ಮರುಪಾವತಿಗಳ ತ್ರೈಮಾಸಿಕ ವಿವರಣ ಪಟ್ಟಿ ಮತ್ತು ಸಾಲಗಳ ಬಾಕಿ ಮತ್ತು ಮರುಪಾವತಿಗಳ ವಾರ್ಷಿಕ ವಿವರಣ ಪಟ್ಟಿಯನ್ನು ನಿರ್ವಹಿಸತಕ್ಕದ್ದು.
8. ಜಿಲ್ಲಾ ಕಚೇರಿ.- (1) ಪ್ರಕರಣ 7ರ ಉಪಬಂಧಗಳಿಗೆ ಒಳಪಟ್ಟು, ಜಿಲ್ಲೆಯಲ್ಲಿನ ಪ್ರತಿಯೊಬ್ಬ ಸಾಲ ನೀಡುವವನು ತಾನು ಕಾರ್ಯನಿರ್ವಹಿಸುವ ಜಿಲ್ಲಾ ವ್ಯಾಪ್ತಿಯೊಳಗೆ ಕಚೇರಿಯನ್ನು ಹೊಂದಿರತಕ್ಕದ್ದು.
(2) ನೋಂದಾಯಿತ ಸಂಸ್ಥೆಗಳ ವಿರುದ್ಧ ಅಧಿನಿಯಮದ ದಂಡನಾ ಪ್ರಕರಣಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳು ಯಾವುವಾದರೂ ಇದ್ದರೆ, ಆ ಪ್ರತಿಯೊಂದು ಪ್ರಕರಣದ ಕುರಿತಾದ ಪೋಲಿಸ್ ಅಧಿಕಾರಿಗಳು ದೂರು ಪ್ರತಿ ಮತ್ತು ಎಫ್‌ಐಆರ್‌ನೊಂದಿಗೆ ಈ ಅಧಿನಿಯಮದಡಿಯಲ್ಲಿನ ನೋಂದಣಿ ಪ್ರಾಧಿಕಾರಕ್ಕೆ (ಜಿಲ್ಲೆಗಳ ಜಿಲ್ಲಾಧಿಕಾರಿಗಳು) ತಕ್ಷಣವೇ ತಿಳಿಯಪಡಿಸತಕ್ಕದ್ದು ಮತ್ತು ಆರೋಪ ದಾಖಲಿಸಿದ ಕುರಿತು ವರದಿಗಳನ್ನು ಮತ್ತು ಸಕ್ಷಮ ನ್ಯಾಯಾಲಯವು ಆರೋಪವನ್ನು ರೂಪಿಸಿದರೆ, ಪಾಸಿಕ್ಯೂಷನ್‌ನಲ್ಲಿ ಅದರ ಪ್ರಗತಿ ಮತ್ತು ತೀರ್ಪಿನ ವರದಿಗಳನ್ನು ಕೂಡ ಸಲ್ಲಿಸತಕ್ಕದ್ದು.
9. ಒಂಬುಡ್ಸ್ ಪರ್ಸನ್.- (1) ಪ್ರಕರಣ 11ರ ಉಪಬಂಧಗಳಿಗೆ ಒಳಪಟ್ಟು, ಕಂದಾಯ ಇಲಾಖೆಯ ಅಪರ ಜಿಲ್ಲಾಧಿಕಾರಿಯು ಒಂಬುಡ್ಸ್ ಪರ್ಸನ್ ಆಗಿರತಕ್ಕದ್ದು.
(2) ಒಂಬುಡ್ಸ್ ಪರ್ಸನ್ ವಿವಾದದಲ್ಲಿನ ಉಭಯಪಕ್ಷಕಾರರಿಗೆ ಒಪ್ಪಿಗೆಯಾಗುವಂಥ ಮಧ್ಯಸ್ಥಗಾರನಾಗಿರತಕ್ಕದ್ದು. ಹಾಗಾಗಿ, ವಿವಾದವನ್ನು/ ವಿಷಯವನ್ನು ನಿರ್ಣಯಕ್ಕಾಗಿ ಒಂಬುಡ್ಸ್ ಪರ್ಸನ್ ಮುಂದೆ ಒಪ್ಪಿಸುವ ಸಮಯದಲ್ಲಿ ಅರ್ಜಿದಾರ ಏಜೆನ್ಸಿಯು ಸರ್ಕಾರದಿಂದ ಮಧ್ಯಸ್ಥಗಾರನಾಗಿ ನೇಮಕಗೊಂಡಿರುವ ಒಂಬುಡ್ಸ್ ಪರ್ಸನ್‌ನನ್ನು ಅಫಿಡವಿಟ್ ಮೂಲಕ ಸಮ್ಮತಿಸತಕ್ಕದ್ದು.
10 . ಕುಂದುಕೊರತೆ ನಿವಾರಣಾ ವೇದಿಕೆ.- (1) 12ನೇ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು,
ಕುಂದುಕೊರತೆ ನಿವಾರಣಾ ವೇದಿಕೆಯು ಸಾಲ ನೀಡುವವರರಿಗೆ ಸಂಬಂಧಪಟ್ಟ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವ ವೇದಿಕೆಯಾಗಿರುತ್ತದೆ.
A. ಒಂಬುಡ್ಸ್ ಪರ್ಸನ್‌ರವರ ಪ್ರಕಾರ್ಯಗಳು
(i) ಒಂಬುಡ್ಸ್ ಪರ್ಸನ್ ಈ ಕೆಳಕಂಡ ಎಲ್ಲಾ ಅಥವಾ ಯಾವುದೇ ಪ್ರಕಾರ್ಯಗಳನ್ನು
ನಿರ್ವಹಿಸತಕ್ಕದ್ದು, ಎಂದರೆ:-
(a) ಸಾಲಗಾರನು, ಸಾಲ ನೀಡಿದವನ ಅಥವಾ ಆತನ ಉದ್ಯೋಗಿಗಳು ಮತ್ತು ಏಜೆಂಟರ ವಿರುದ್ಧ ನೀಡಿದ ದೂರಿನಲ್ಲಿ ಒಳಗೊಂಡಿರುವ ಯಾವುದೇ ಆರೋಪದ ಬಗ್ಗೆ ಅಥವಾ ಸರ್ಕಾರದ ನಿರ್ದೇಶನದ ಮೇಲೆ ತನಿಖೆ ಮಾಡುವುದು;
(b) ದೂರುದಾರನಿಂದ ಹಾಗೂ ಆತನು ಯಾರ ವಿರುದ್ಧ ದೂರು ನೀಡಿರುವನೋ ಆ ವ್ಯಕ್ತಿಯಿಂದ ಹೇಳಿಕೆಗಳನ್ನು ದಾಖಲಿಸುವುದು ಮತ್ತು ಅಗತ್ಯ ದಸ್ತಾವೇಜುಗಳನ್ನು ಪಡೆದುಕೊಳ್ಳುವುದು,
(c) ಆರೋಪದ ಬಗ್ಗೆ ಈ ಕೆಳಕಂಡ ರೀತಿಯಲ್ಲಿ ಒಂದು ಆದೇಶವನ್ನು ಹೊರಡಿಸುವುದು, ಎಂದರೆ:-
(i) ಅಕ್ರಮವು ಒಬ್ಬ ಲೋಕ ನೌಕರನಿಂದ ಮಾಡಿದ ಕ್ರಿಮಿನಲ್ ಅಪರಾಧವಾಗಿದ್ದರೆ, ಆ ವಿಷಯವನ್ನು ತನಿಖೆಗಾಗಿ ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(ii) ಅಕ್ರಮವು ಸಾಲಗಾರನಿಗೆ ನಷ್ಟ ಅಥವಾ ಅನಾನುಕೂಲತೆಯನ್ನು ಉಂಟುಮಾಡಿದ್ದರೆ, ನಷ್ಟ ಪರಿಹಾರವನ್ನು ನೀಡುವಂತೆ ಮತ್ತು ಅಕ್ರಮಕ್ಕೆ ಕಾರಣವಾದ ವ್ಯಕ್ತಿಯಿಂದ 3 ನಷ್ಟವನ್ನು ಮರುಪಾವತಿಸುವಂತೆ ಸಾಲ ನೀಡಿದವನಿಗೆ ನಿರ್ದೇಶನ ನೀಡುವ ಒಂದು ಐತೀರ್ಪು ಹೊರಡಿಸುವುದು;
(iii)ಅಕ್ರಮವು ಲೋಪ ಅಥವಾ ನಿಷ್ಕ್ರಿಯತೆಯ ಕಾರಣದಿಂದಾಗಿ ಸಂಭವಿಸಿದ್ದಲ್ಲಿ, ಆ ತಪ್ಪನ್ನು ಸರಿಪಡಿಸಲು ಒಂದು ಆದೇಶವನ್ನು ಹೊರಡಿಸುವುದು.
(ii) (i)ನೇ ಖಂಡದಲ್ಲಿ ನಮೂದಿಸಲಾದ ಪ್ರಕಾರ್ಯಗಳ ಜೊತೆಗೆ ಒಂಬುಡ್ಸ್ ಪರ್ಸನ್, ಆಪಾದಿತ ಕೃತ್ಯದಿಂದಾಗಿ ದೂರುದಾರರಿಗೆ ಹೆಚ್ಚಿನ ನಷ್ಟ ಅಥವಾ ಹಾನಿ. ಉಂಟಾಗುತ್ತದೆ ಎಂದು ತನಗೆ ಮನದಟ್ಟಾದರೆ, ದೂರುದಾರರ ಹಿತಾಸಕ್ತಿಗೆ ಬಾಧಕವಾಗುವಂಥ ಯಾವುದೇ ಕಾರ್ಯವನ್ನು ಮಾಡದಂತೆ ಸಾಲ ನೀಡಿದವರನ್ನು ನಿರ್ಬಂಧಿಸಿ ಒಂದು ಮಧ್ಯಂತರ ಆದೇಶವನ್ನು ಹೊರಡಿಸಬಹುದು.
(iii) ಒಂಬುಡ್ಸ್ ಪರ್ಸನ್, ಅಕ್ರಮವು ವೈಯಕ್ತಿಕ ಲಾಭದ ಭ್ರಷ್ಟಾಚಾರವನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟ, ಆದೇಶದ ಮೂಲಕ, ಪರಿಹಾರದ ಜೊತೆಗೆ ದಂಡವನ್ನು ಸಹ ವಿಧಿಸಬಹುದು.
B. ಒಂಬುಡ್ಸ್ ಪರ್ಸನ್‌ನ ಅಧಿಕಾರಗಳು
i. ಒಂಬುಡ್ಸ್ ಪರ್ಸನ್ ಈ ಅಧಿನಿಯಮದ ಅಡಿಯಲ್ಲಿ ಯಾವುದೇ ತನಿಖೆ ಅಥವಾ ವಿಚಾರಣೆಯ ಉದ್ದೇಶಕ್ಕಾಗಿ, ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರವನ್ನು ಹೊಂದಿರತಕ್ಕದ್ದು, ಎಂದರೆ:-
(a) ಯಾರೇ ಸಾಕ್ಷಿದಾರನನ್ನು ಕರೆಸುವುದು ಹಾಗೂ ಹಾಜರಾಗುವಂತೆ ಅಗತ್ಯಪಡಿಸುವುದು ಮತ್ತು ಆತನನ್ನು ವಿಚಾರಣೆ ಮಾಡುವುದು;
(b) ಸಾಲ ನೀಡಿದವನು ಅಥವಾ ಸಾಲಗಾರರಿಂದ ಯಾವುದೇ ದಸ್ತಾವೇಜನ್ನು ಬಹಿರಂಗಪಡಿಸುವಂತೆ ಮತ್ತು ಹಾಜರುಪಡಿಸುವಂತೆ ಅಗತ್ಯಪಡಿಸುವುದು;
(c) ಅಫಿಡವಿಟ್‌ಗಳ ಮೂಲಕ ಸಾಕ್ಷ್ಯವನ್ನು ಪಡೆದುಕೊಳ್ಳುವುದು;
(d) ಈ ಅಧಿನಿಯಮವನ್ನು ಅನುಷ್ಠಾನಗೊಳಿಸುವಲ್ಲಿ ತೊಡಗಿರುವ ಯಾರೇ ಲೋಕ ನೌಕರರಿಂದ ಯಾವುದೇ ಸಾರ್ವಜನಿಕ ದಾಖಲೆಗಳು ಅಥವಾ ಅದರ ಪ್ರತಿಯನ್ನು ಕೋರುವುದು;
ii. ಒಂಬುಡ್ಸ್ ಪರ್ಸನ್‌ರವರಿಗೆ ದೂರಿನಲ್ಲಿ ಒಳಗೊಂಡಿರುವ ಆರೋಪವು ಯಾವುದೇ ಆಧಾರರಹಿತವಾದದ್ದು ಅಥವಾ ಕ್ಷುಲ್ಲಕ ಸ್ವರೂಪದ್ದು ಎಂದು ಕಂಡುಬಂದರೆ, ಅವರು ತಮ್ಮ ಆದೇಶದ ಮೂಲಕ ಆದೇಶದಲ್ಲಿ ವೆಚ್ಚಗಳ ರೂಪದಲ್ಲಿ ನಿರ್ದಿಷ್ಟಪಡಿಸಿದ ಮೊತ್ತವನ್ನು ಎದುರು ಪಕ್ಷಕಾರನಿಗೆ ಸಂದಾಯ ಮಾಡುವಂತೆ ದೂರುದಾರನಿಗೆ ನಿರ್ದೇಶನ ನೀಡಬಹುದು.
iii. ದೂರಿನಲ್ಲಿ ಒಳಗೊಂಡಿರುವ ಆರೋಪವು ಸಾಲಗಾರನಿಗೆ ಉಂಟಾದ ನಷ್ಟ ಅಥವಾ ಅನಾನುಕೂಲತೆಗೆ ಸಂಬಂಧಿಸಿದ್ದರೆ, ಒಂಬುಡ್ಸ್ ಪರ್ಸನ್, ವಿಚಾರಣೆಯ ಸಮಯದಲ್ಲಿ, ಸಾಕ್ಷ್ಯವನ್ನು ಸಂಗ್ರಹಿಸಿ, ನಷ್ಟವನ್ನು ನಿರ್ಧರಿಸಿ, ಅದಕ್ಕೆ ಹೊಣೆಗಾರನಾದ ವ್ಯಕ್ತಿಯಿಂದ ವಸೂಲಿ ಮಾಡಬೇಕಾದ ಮೊತ್ತವನ್ನು ತನ್ನ ಆದೇಶದಲ್ಲಿ ನಿರ್ದೇಶಿಸಬಹುದು.
iv. ಒಂಬುಡ್ಸ್ ಪರ್ಸನ್ (ii)ನೇ ಉಪ-ನಿಯಮ ಅಥವಾ (iii)ನೇ ಉಪ-ನಿಯಮದ ಅಡಿಯಲ್ಲಿ ಹೊರಡಿಸಿದ ಆದೇಶದ ಅನುಸಾರ ಪಾವತಿಸಬೇಕಾದ ಮೊತ್ತವನ್ನು ಅವರು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಪಾವತಿಸದಿದ್ದರೆ, ಅದನ್ನು ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡತಕ್ಕದ್ದು.
C. ದೂರನ್ನು ಸಲ್ಲಿಸುವುದಕ್ಕೆ ಸಂಬಂಧಿಸಿದ ಕಾರ್ಯವಿಧಾನ:
(i) ದೂರನ್ನು ಖುದ್ದಾಗಿ ಭೌತಿಕ ವಿಧಾನದ ಮೂಲಕವಾಗಿಯಾಗಲಿ ಅಥವಾ ಈ ಉದ್ದೇಶಕ್ಕಾಗಿ ಯಾವುದಾದರೂ ಪೋರ್ಟಲ್ ವಿನ್ಯಾಸಗೊಳಿಸಿದ್ದರೆ, ಅದರ ಆನ್ ಲೈನ್ ಮುಖಾಂತರ ಮೂಲಕವಾಗಿಯಾಗಲಿ ಸಲ್ಲಿಸಬಹುದು. ದೂರಿನ ಮೇಲೆ ದೂರುದಾರ ಅಥವಾ ಅಧಿಕೃತ ಪ್ರತಿನಿಧಿಯು ಯುಕ್ತವಾಗಿ ಸಹಿ ಮಾಡಿರತಕ್ಕದ್ದು.
(ii) ಸಾಲ ನೀಡುವವನು ಮಾಡಿದ ಯಾವುದೇ ಕಾರ್ಯದಿಂದ ಅಥವಾ ಮಾಡದೆ ಬಿಟ್ಟ ಲೋಪದಿಂದ ಬಾಧಿತನಾದ ಯಾರೇ ಸಾಲಗಾರನು ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ದೂರನ್ನು ಸಲ್ಲಿಸಬಹುದು.
(iii)ಸಾಲ ನೀಡುವವನ ವಾಣಿಜ್ಯ ತೀರ್ಪು/ನಿರ್ಣಯವನ್ನು ಒಳಗೊಂಡಿರುವ ವಿಷಯಗಳಲ್ಲಿ ವೇದಿಕೆಯ ಅಡಿಯಲ್ಲಿ ಯಾವುದೇ ದೂರನ್ನು ಸಲ್ಲಿಸತಕ್ಕದ್ದಲ್ಲ.
(iv) ಒಂಬುಡ್ಸ್ ಪರ್ಸನ್ ದೂರು ನೀಡುವ ಮೊದಲು ದೂರನ್ನು ಸಂಬಂಧಪಟ್ಟ ಸಾಲ ನೀಡಿದವನಿಗೆ ಲಿಖಿತದಲ್ಲಿ ಸಲ್ಲಿಸಿದ ಹೊರತು ಮತ್ತು ಆ ದೂರನ್ನು ಸಾಲ ನೀಡಿದವನು ಸಂಪೂರ್ಣವಾಗಿ ಅಥವಾ ಭಾಗಶಃ ತಿರಸ್ಕರಿಸಿದ ಹೊರತು ಮತ್ತು ದೂರುದಾರನು ಆತನ ಉತ್ತರದಿಂದ ತೃಪ್ತನಾಗಿಲ್ಲದ ಹೊರತು; ಅಥವಾ ಸಾಲ ನೀಡಿದವನು ದೂರನ್ನು ಸ್ವೀಕರಿಸಿದ ತರುವಾಯ ಮೂವತ್ತು ದಿನಗಳೊಳಗೆ ಆತನಿಂದ ದೂರುದಾರನು ಯಾವುದೇ ಪ್ರತ್ಯುತ್ತರವನ್ನು ಸ್ವೀಕರಿಸಿಲ್ಲದ ಹೊರತು; ಮತ್ತು ಯಾವುದೇ ನ್ಯಾಯಾಲಯ, ನ್ಯಾಯಾಧೀಕರಣ ಅಥವಾ ಮಧ್ಯಸ್ಥಗಾರ ಅಥವಾ ಯಾವುದೇ ಇತರ ವೇದಿಕೆ ಅಥವಾ ಪ್ರಾಧಿಕಾರದ ಮುಂದೆ ಈಗಾಗಲೇ ಇತ್ಯರ್ಥದಲ್ಲಿರುವಂಥ ಅದೇ ವ್ಯಾಜ್ಯ ಕಾರಣಕ್ಕೆ ಆ ದೂರು ಸಂಬಂಧಿಸಿಲ್ಲದ ಹೊರತು; ಅಥವಾ ಯಾವುದೇ ನ್ಯಾಯಾಲಯ, ನ್ಯಾಯಾಧೀಕರಣ ಅಥವಾ ಮಧ್ಯಸ್ಥಗಾರ ಅಥವಾ ಯಾವುದೇ ಇತರ ವೇದಿಕೆ ಅಥವಾ ಪ್ರಾಧಿಕಾರವು, ಅದೇ ದೂರುದಾರರಿಂದ ಅಥವಾ ಸಂಬಂಧಪಟ್ಟ ಒಬ್ಬ ಅಥವಾ ಹೆಚ್ಚಿನ ದೂರುದಾರರು/ಪಕ್ಷಕಾರರಿಂದ ಸ್ವೀಕರಿಸಿರಲಿ ಅಥವಾ ಸ್ವೀಕರಿಸದಿರಲಿ, ಅದನ್ನು ಗುಣಾವಗುಣಗಳ ಮೇಲೆ ಇತ್ಯರ್ಥಪಡಿಸಿರುವ ಹೊರತು ಮತ್ತು ದೂರು ನಿಂದನೀಯ ಅಥವಾ ಕ್ಷುಲ್ಲಕ ಅಥವಾ ಕಿರಿಕಿರಿಯುಂಟು ಮಾಡುವ ಸ್ವರೂಪದ್ದಲ್ಲದ ಹೊರತು ವೇದಿಕೆಯ ಅಡಿಯಲ್ಲಿ ದೂರು ಸಲ್ಲಿಸಲು ಅವಕಾಶ ಇರತಕ್ಕದ್ದಲ್ಲ.
D. ಮಾಹಿತಿ ಕೋರುವ ಅಧಿಕಾರ:
(i) ಒಂಬುಡ್ಸ್ ಪರ್ಸನ್, ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ, ಆ ದೂರನ್ನು ಯಾರ ವಿರುದ್ಧ ನೀಡಲಾಗಿದೆಯೋ ಆ ಸಾಲ ನೀಡಿದವನಿಗೆ, ಯಾವುದೇ ಮಾಹಿತಿಯನ್ನು ಒದಗಿಸುವಂತೆ ಅಥವಾ ದೂರಿಗೆ ಸಂಬಂಧಿಸಿದಂತೆ ತನ್ನ ಸ್ವಾಧೀನದಲ್ಲಿರುವ ಅಥವಾ ಇವೆ ಎಂದು ಆರೋಪಿಸಲಾದಂಥ ಯಾವುದೇ ದಸ್ತಾವೇಜಿನ ಪ್ರಮಾಣೀಕೃತ ಪ್ರತಿಗಳನ್ನು ಒದಗಿಸುವಂತೆ ಅಗತ್ಯಪಡಿಸಬಹುದು.
(ii) ಸಾಲ ನೀಡಿದವನು ಸಾಕಷ್ಟು ಕಾರಣವಿಲ್ಲದೆ ಕೋರಿಕೆಯನ್ನು ಪೂರೈಸಲು ವಿಫಲನಾದ ಸಂದರ್ಭದಲ್ಲಿ, ಒಂಬುಡ್ಸ್ ಪರ್ಸನ್ ಸಾಲ ನೀಡಿದವನಿಗೆ ಒದಗಿಸಲು ಆತನ ಬಳಿ ಯಾವುದೇ ಮಾಹಿತಿಯಿಲ್ಲ ಎಂಬ ನಿರ್ಣಯಕ್ಕೆ ಬರಬಹುದು.
(iii) ಒಂಬುಡ್ಸ್ ಪರ್ಸನ್ ಕರ್ತವ್ಯಗಳನ್ನು ನಿರ್ವಹಿಸುವ ಕ್ರಮದಲ್ಲಿ ತಮ್ಮ ಅರಿವಿಗೆ ಅಥವಾ ಸ್ವಾಧೀನಕ್ಕೆ ಬಂದಿರುವ ಮಾಹಿತಿ ಅಥವಾ ದಸ್ತಾವೇಜುಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳತಕ್ಕದ್ದು ಹಾಗೂ ಕಾನೂನಿನ ಮೂಲಕ ಅನ್ಯಥಾ ಅಗತ್ಯಪಡಿಸಿದ ಹೊರತು ಅಥವಾ ಅಂತಹ ಮಾಹಿತಿ ಅಥವಾ ದಸ್ತಾವೇಜುಗಳನ್ನು ಒದಗಿಸಿದ ವ್ಯಕ್ತಿಯ ಒಪ್ಪಿಗೆ ಇಲ್ಲದೆ ಅಂತಹ ಮಾಹಿತಿ ಅಥವಾ ದಸ್ತಾವೇಜುಗಳನ್ನು ಯಾರೇ ವ್ಯಕ್ತಿಗೆ ಬಹಿರಂಗಪಡಿಸತಕ್ಕದ್ದಲ್ಲ. ಆದರೆ, ಈ ಉಪ ಖಂಡದಲ್ಲಿರುವುದು ಯಾವುದೂ, ಸ್ವಾಭಾವಿಕ ನ್ಯಾಯ ಮತ್ತು ನ್ಯಾಯಸಮ್ಮತ ವ್ಯವಹಾರ ತತ್ವಗಳನ್ನು ಪಾಲಿಸಲು ಅಗತ್ಯವೆಂದು ಪರಿಗಣಿಸುವಷ್ಟರ ಮಟ್ಟಿಗೆ, ವ್ಯವಹರಣೆಗಳ ಉಭಯ ಪಕ್ಷಕಾರರು ಪರಸ್ಪರ ಒದಗಿಸಿದ ಮಾಹಿತಿ ಅಥವಾ ದಸ್ತಾವೇಜುಗಳನ್ನು ಬಹಿರಂಗಪಡಿಸುವುದರಿಂದ ಒಂಬುಡ್ಸ್ ಪರ್ಸನ್‌ರವರನ್ನು ತಡೆಹಿಡಿಯತಕ್ಕದ್ದಲ್ಲ.
E. ದೂರುಗಳ ಪರಿಹಾರ:
(i) ಒಂಬುಡ್ಸ್ ಪರ್ಸನ್ ಕಾನೂನು ನೆರವು ಅಥವಾ ಸಂಧಾನ ಅಥವಾ ಮಧ್ಯಸ್ಥಿಕೆಯ ಮುಖಾಂತರ ದೂರುದಾರ ಮತ್ತು ಸಾಲ ನೀಡಿದವನ ನಡುವೆ ಒಪ್ಪಂದದ ಮೂಲಕ ದೂರಿನ ಇತ್ಯರ್ಥವನ್ನು ಮಾಡಲು ಪ್ರಯತ್ನಿಸತಕ್ಕದ್ದು.
(ii) ಒಂಬುಡ್ಸ್ ಪರ್ಸನ್ ಅಪಾದಿತ ಕೃತ್ಯದಿಂದಾಗಿ ದೂರುದಾರರಿಗೆ ಹೆಚ್ಚಿನ ನಷ್ಟ ಅಥವಾ ಹಾನಿ ಉಂಟಾಗುತ್ತದೆ ಎಂದು ತನಗೆ ಮನದಟ್ಟಾದರೆ, ದೂರುದಾರರ ಹಿತಾಸಕ್ತಿಗೆ ಬಾಧಕವಾಗುವಂಥ ಯಾವುದೇ ಕಾರ್ಯ ಮಾಡದಂತೆ ಸಾಲ ನೀಡಿದವನನ್ನು నిబFంధిసి ఒందు ಮಧ್ಯಂತರ ಆದೇಶವನ್ನು ಹೊರಡಿಸಬಹುದು.
(iii) ಒಂಬುಡ್ಸ್ ಪರ್ಸನ್‌ನ ಮುಂದಿನ ವ್ಯವಹರಣೆಗಳು ಕ್ಷಿಪ್ರ ನ್ಯಾಯಾಲಯ ಸ್ವರೂಪದ್ದಾಗಿರತಕ್ಕದ್ದು ಹಾಗೂ ಯಾವುದೇ ಸಾಕ್ಷ್ಯ ನಿಯಮಾವಳಿಗಳಿಗೆ ಬದ್ಧವಾಗಿರತಕ್ಕದ್ದಲ್ಲ. ಒಂಬುಡ್ಸ್ ಪರ್ಸನ್ ದೂರಿನ ಉಭಯ ಪಕ್ಷಕಾರರನ್ನೂ ವಿಚಾರಣೆಗೆ ಒಳಪಡಿಸಬಹುದು ಮತ್ತು ಅವರ ಹೇಳಿಕೆಯನ್ನು ದಾಖಲಿಸಬಹುದು.
(iv) ಸಾಲ ನೀಡಿದವನು, ದೂರನ್ನು ಸ್ವೀಕರಿಸಿದ ನಂತರ ದೂರಿನ, ವಾದಗಳಿಗೆ ಪ್ರತ್ಯುತ್ತರವಾಗಿ ತನ್ನ ಲಿಖಿತ ಹೇಳಿಕೆಯನ್ನು 15 ದಿನಗಳೊಗಾಗಿ ಅದಕ್ಕೆ ಸಂಬಂಧಿಸಿದ ದಾಖಲಾತಿಗಳ ಪ್ರತಿಗಳನ್ನು ಅದರೊಂದಿಗೆ ಲಗತ್ತಿಸಿ ನಿರ್ಣಯಕ್ಕಾಗಿ ಒಂಬುಡ್ಸ್ ಪರ್ಸನ್‌ರವರಿಗೆ ಸಲ್ಲಿಸತಕ್ಕದ್ದು.
(v) ಪರಂತು, ಸಾಲ ನೀಡಿದವನು ಒಂಬುಡ್ಸ್ ಪರ್ಸನ್‌ಗೆ ಮನವರಿಕೆಯಾಗುವಂತೆ ಲಿಖಿತ ಕೋರಿಕೆಯನ್ನು ಸಲ್ಲಿಸಿದ ಮೇಲೆ ಒಂಬುಡ್ಸ್ ಪರ್ಸನ್ ಅವರ ಲಿಖಿತ ಹೇಳಿಕೆಯನ್ನು ಮತ್ತು ದಸ್ತಾವೇಜುಗಳನ್ನು ಸಲ್ಲಿಸಲು ಸೂಕ್ತವೆಂದು ಭಾವಿಸಬಹುದಾದಷ್ಟು ಹೆಚ್ಚಿನ ಸಮಯವನ್ನು ಮಂಜೂರು ಮಾಡಬಹುದು.
(vi) ಒಂದು ವೇಳೆ ಸಾಲ ನೀಡಿದವನು ಕಾಲಮಿತಿಯೊಳಗೆ ತನ್ನ ಲಿಖಿತ ಹೇಳಿಕೆಯನ್ನು ಮತ್ತು ದಸ್ತಾವೇಜುಗಳನ್ನು ಸಲ್ಲಿಸಲು ತಪ್ಪಿದ ಅಥವಾ ವಿಫಲವಾದ ಸಂದರ್ಭದಲ್ಲಿ, ಒಂಬುಡ್ಸ್ ಪರ್ಸನ್‌ನು ದಾಖಲೆಯಲ್ಲಿ ಲಭ್ಯವಿರುವ ಸಾಕ್ಷ್ಯದ ಆಧಾರದ ಮೇಲೆ ಏಕಪಕ್ಷೀಯವಾಗಿ ವ್ಯವಹರಣೆ ಮುಂದುವರಿಸಬಹುದು. ನಿಗದಿತ ಸಮಯದೊಳಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಅಥವಾ ಕೋರಿದ ಮಾಹಿತಿಯನ್ನು ಒದಗಿಸದಿರುವ ಕಾರಣದಿಂದ ಹೊರಡಿಸಲಾದ ಐತೀರ್ಪಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವ ಹಕ್ಕು ಸಾಲ ನೀಡಿದವನಿಗೆ ಇರತಕ್ಕದ್ದಲ್ಲ.
(vii) ದೂರಿಗೆ ಸುಸಂಗತವಾಗಿರುವ ಮತ್ತು ಸಂಬಂಧಪಟ್ಟಿರುವಷ್ಟರ ಮಟ್ಟಿಗೆ ಒಬ್ಬ ಪಕ್ಷಕಾರನು ನೀಡಿದ ಲಿಖಿತ ಹೇಳಿಕೆ ಅಥವಾ ಪ್ರತ್ಯುತ್ತರ ಅಥವಾ ದಸ್ತಾವೇಜುಗಳನ್ನು ಇನ್ನೊಬ್ಬ ಪಕ್ಷಗಾರನಿಗೆ ಒದಗಿಸಲಾಗಿದೆ ಎಂಬುದನ್ನು ಮತ್ತು ಸೂಕ್ತವೆಂದು ಪರಿಗಣಿಸಬಹುದಾದಂತಹ ಕಾರ್ಯ ವಿಧಾನವನ್ನು ಅನುಸರಿಸಲಾಗಿದೆ ಮತ್ತು ಅಂತಹ ಹೆಚ್ಚುವರಿ ಸಮಯವನ್ನು ಒದಗಿಸಲಾಗಿದೆ ಎಂಬುದನ್ನು ಒಂಬುಡ್ಸ್ ಪರ್ಸನ್ ಖಾತ್ರಿಪಡಿಸಿಕೊಳ್ಳತಕ್ಕದ್ದು.
(viii)ಒಂದು ವೇಳೆ ದೂರನ್ನು ಈ ನ್ಯಾಯ ಸೌಲಭ್ಯದ ಮುಖಾಂತರ ಪರಿಹರಿಸಲಾಗದಿದ್ದ ಸಂದರ್ಭದಲ್ಲಿ ದೂರಿನ ಪರಿಹಾರಕ್ಕಾಗಿ ಸಂಧಾನ ಅಥವಾ ಮಧ್ಯಸ್ಥಿಕೆಯ ಮೂಲಕ ಸಾಲ ನೀಡಿದವನ ಅಧಿಕಾರಿಗಳೊಂದಿಗೆ ದೂರುದಾರನು ಸಭೆ ಸೇರುವುದು ಒಳಗೊಂಡಂತೆ ಸೂಕ್ತವೆಂದು ಪರಿಗಣಿಸಬಹುದಾದಂತಹ ಕ್ರಮವನ್ನು ಕೈಗೊಳ್ಳಬಹುದು.
(ix) ದೂರಿನ ಉಭಯಪಕ್ಷಕಾರರು ಸಂದರ್ಭಾನುಸಾರ ವಿವಾದವನ್ನು ಪರಿಹರಿಸುವಲ್ಲಿ ಮತ್ತು ನಿಗದಿತ ಸಮಯದೊಳಗೆ ಯಾವುದೇ ಸಾಕ್ಷ್ಯವನ್ನು ಮತ್ತು ಇತರ ಸಂಬಂಧಿತ ದಸ್ತಾವೇಜುಗಳನ್ನು ಹಾಜರುಪಡಿಸುವಂತೆ ನೀಡಿದ ನಿರ್ದೇಶನವನ್ನು ಪಾಲಿಸುವಲ್ಲಿ ಒಂಬುಡ್ಸ್ ಪರ್ಸನ್‌ನೊಂದಿಗೆ ಸದ್ಭಾವನೆಯಿಂದ ಸಹಕರಿಸತಕ್ಕದ್ದು.
(x) ಪಕ್ಷಕಾರರ ನಡುವೆ ದೂರಿನ ಬಗ್ಗೆ ಯಾವುದೇ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಅದನ್ನು ಉಭಯ ಪಕ್ಷಕಾರರು ದಾಖಲಿಸತಕ್ಕದ್ದು ಮತ್ತು ಅದಕ್ಕೆ ಸಹಿ ಮಾಡತಕ್ಕದ್ದು ಹಾಗೂ ತದನಂತರ ಇತ್ಯರ್ಥದ ನಿಬಂಧನೆಗಳನ್ನು ಅದಕ್ಕೆ ಅನುಬಂಧಿಸಿ, ನಿಗದಿತ ಸಮಯದೊಳಗೆ ನಿಬಂಧನೆಗಳನ್ನು ಪಾಲಿಸುವಂತೆ ಪಕ್ಷಕಾರರಿಗೆ ನಿರ್ದೇಶಿಸಿ ಇತ್ಯರ್ಥದ ವಾಸ್ತವ ಸಂಗತಿಯನ್ನು ದಾಖಲಿಸಬಹುದು.
(xi) ಈ ಕೆಳಕಂಡ ಸಂದರ್ಭಗಳಲ್ಲಿ ದೂರನ್ನು ಇತ್ಯರ್ಥಪಡಿಸಿಕೊಳ್ಳಲಾಗಿದೆಯೆಂದು ಭಾವಿಸತಕ್ಕದ್ದು:
ಎ. ಸಾಲ ನೀಡಿದವನು ದೂರುದಾರನೊಂದಿಗೆ ಒಂಬುಡ್ಸ್ ಪರ್ಸನ್ ಮಧ್ಯಸ್ಥಿಕೆಯಲ್ಲಿ ದೂರನ್ನು ಇತ್ಯರ್ಥಪಡಿಸಿಕೊಂಡಿರುವುದು; ಅಥವಾ
ಬಿ. ದೂರಿನ ಪರಿಹಾರದ ವಿಧಾನ ಮತ್ತು ವ್ಯಾಪ್ತಿಯು ತೃಪ್ತಿಕರವಾಗಿದೆ ಎಂದು ದೂರುದಾರನು ಲಿಖಿತವಾಗಿ ಅಥವಾ ಅನ್ಯಥಾ ರೀತಿಯಲ್ಲಿ (ಅದನ್ನು ದಾಖಲಿಸಬಹುದು) ಒಪ್ಪಿಕೊಂಡಿರುವುದು; ಅಥವಾ
ಸಿ. ದೂರುದಾರನು ಸ್ವಯಂಪ್ರೇರಣೆಯಿಂದ ದೂರನ್ನು ಹಿಂಪಡೆದಿರುವುದು.
F. ಒಂಬುಡ್ಸ್ ಪರ್ಸನ್ ಮಾಡುವ ಆದೇಶ ಅಥವಾ ಐತೀರ್ಪು
(i) ಒಂಬುಡ್ಸ್ ಪರ್ಸನ್ ದೂರನ್ನು ತಿರಸ್ಕರಿಸಿದ ಹೊರತು, ಈ ಕೆಳಕಂಡ ಸಂದರ್ಭಗಳಲ್ಲಿ ಐತೀರ್ಪುನ್ನು ಹೊರಡಿಸತಕ್ಕದ್ದು.
(a) ದಸ್ತಾವೇಜುಗಳು/ ಮಾಹಿತಿಯನ್ನು ಒದಗಿಸದಿರುವುದು; ಅಥವಾ
(b) ಮಂಡಿಸಲಾದ ದಾಖಲೆಗಳ ಆಧಾರದ ಮೇಲೆ ಮತ್ತು ಉಭಯಪಕ್ಷಕಾರರಿಗೆ ಅಹವಾಲನ್ನು ಹೇಳಿಕೊಳ್ಳುವ ಒಂದು ಯುಕ್ತ ಅವಕಾಶವನ್ನು ನೀಡಿ ವಿವಾದವನ್ನು ಪರಿಹರಿಸದಿರುವುದು.
(ii) ಒಂಬುಡ್ಸ್ ಪರ್ಸನ್, ಒಂದು ಸೂಕ್ತ ಐತೀರ್ಪನ್ನು ಹೊರಡಿಸುವ ಮುಂಚೆ, ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳು, ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಮತ್ತು ಸುಸಂಗತವಾಗಿರಬಹುದಾದಂತಹ ಇತರ ಸಂಗತಿಗಳನ್ನೂ ಸಹ ಹೆಚ್ಚುವರಿಯಾಗಿ ಗಣನೆಗೆ ತೆಗೆದುಕೊಳ್ಳತಕ್ಕದ್ದು.
(iii) ಈ ಐತೀರ್ಪು, ಇತರ ವಿಷಯಗಳ ಜೊತೆಗೆ, ಸಾಲ ನೀಡಿದವನಿಗೆ ಆತನ ಬಾಧ್ಯತೆಗಳನ್ನು ನಿರ್ದಿಷ್ಟವಾಗಿ ನಿರ್ವಹಣೆ ಮಾಡುವುದಕ್ಕಾಗಿ ಮತ್ತು ಅದರ ಜೊತೆಗೆ ಅಥವಾ ಅನ್ಯಥಾ ಸಾಲ ನೀಡಿದವನಿಂದ ದೂರುದಾರ ಅನುಭವಿಸಿದ ಯಾವುದೇ ನಷ್ಟಕ್ಕೆ ಪರಿಹಾರ ರೂಪದಲ್ಲಿ ಪಾವತಿಸಬೇಕಾದ ಮೊತ್ತ, ಯಾವುದಾದರೂ ಇದ್ದರೆ, ಅದನ್ನು ಸಂದಾಯ ಮಾಡುವುದಕ್ಕಾಗಿ ನೀಡುವ ನಿರ್ದೇಶನವನ್ನು ಒಳಗೊಂಡಿರತಕ್ಕದ್ದು.
(iv) ಸಾಲಗಾರನಿಗೆ ಅಕ್ರಮದ ಕಾರಣದಿಂದ ನಷ್ಟ ಅಥವಾ ಅನಾನುಕೂಲತೆ ಉಂಟಾದಲ್ಲಿ, ಒಂಬುಡ್ಸ್ ಪರ್ಸನ್, ನಷ್ಟ ಪರಿಹಾರವನ್ನು ಒದಗಿಸುವಂತೆ ಮತ್ತು ಅವರ ಕಡೆಯ ಅಕ್ರಮಕ್ಕೆ ಹೊಣೆಗಾರರಾದ ವ್ಯಕ್ತಿಯಿಂದ ಆದ ನಷ್ಟವನ್ನು ಮರುಭರ್ತಿ ಮಾಡಿಕೊಡುವಂತೆ ಸಾಲ ನೀಡಿದವನಿಗೆ ನಿರ್ದೇಶಿಸಿ ಒಂದು ಐತೀರ್ಪುನ್ನು ಹೊರಡಿಸಬಹುದು.
(v) ಅಂತಹ ಅಕ್ರಮವು ಲೋಪ ಅಥವಾ ನಿಷ್ಕ್ರಿಯ ಕಾರಣದಿಂದಾಗಿ ಸಂಭವಿಸಿದ್ದಲ್ಲಿ, ಆ ತಪ್ಪನ್ನು ಸರಿಪಡಿಸಲು ಒಂದು ಆದೇಶವನ್ನು ಹೊರಡಿಸಬಹುದು.
(vi) ಒಂಬುಡ್ಸ್ ಪರ್ಸನ್ ಐತೀರ್ಪು ನೀಡಬಹುದಾದಂತಹ ನಷ್ಟ ಪರಿಹಾರವು ವಿವಾದದಲ್ಲಿ ಒಳಗೊಂಡಿರುವ ಮೊತ್ತದಿಂದ ಪ್ರತ್ಯೇಕವಾಗಿರತಕ್ಕದ್ದು.
(vii) ಐತೀರ್ಪಿನ ಪ್ರತಿಯನ್ನು ದೂರುದಾರ ಮತ್ತು ಸಾಲ ನೀಡಿದವನಿಗೆ ಕಳುಹಿಸತಕ್ಕದ್ದು.
(viii)ದೂರುದಾರನು, ಐತೀರ್ಪಿನ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ದೂರುದಾರನು ಸಂಬಂಧಪಟ್ಟ ಸಾಲ ನೀಡಿದವನಿಗೆ ಸಂಪೂರ್ಣವಾಗಿ ಐತೀರ್ಪುನ್ನು ಮತ್ತು ಪ್ಲೇಮಿನ ಅಂತಿಮ ಇತ್ಯರ್ಥವನ್ನು ಅಂಗೀಕರಿಸಿರುವ ಬಗ್ಗೆ ಒಂದು ಪತ್ರವನ್ನು ಒದಗಿಸಿದ ಹೊರತು, ಅಥವಾ ಅವರು ಮೇಲ್ಮನವಿಯನ್ನು ಸಲ್ಲಿಸಿದ ನಂತರ, ಹೊರಡಿಸಿದ ಐತೀರ್ಪು ರಾಗತಕ್ಕದ್ದು ಮತ್ತು ಅದು ಪರಿಣಾಮಕಾರಿಯಾಗತಕ್ಕದ್ದಲ್ಲ.
(ix) ದೂರುದಾರರು, ಮೇಲ್ಮನವಿಯನ್ನು ಸಲ್ಲಿಸದ ಹೊರತು, ಸಾಲ ನೀಡಿದವನು ಐತೀರ್ಪಿನ ಅನುಪಾಲನೆ ಮಾಡತಕ್ಕದ್ದು ಮತ್ತು ದೂರುದಾರರಿಂದ ಅಂಗೀಕಾರ ಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಒಂಬಡ್ಸ್ ಪರ್ಸನ್‌ಗೆ ಅನುಪಾಲನೆ ಕುರಿತು ಮಾಹಿತಿ ನೀಡತಕ್ಕದ್ದು.
(
x) ಅಕ್ರಮವು ವೈಯಕ್ತಿಕ ಲಾಭದ ಭ್ರಷ್ಟಾಚಾರವನ್ನು ಒಳಗೊಂಡಿದೆ ಎಂದು ಒಂಬಡ್ಸ್ ಪರ್ಸನ್ ಅಭಿಪ್ರಾಯಪಟ್ಟರೆ, ಅವರು ಆದೇಶದ ಮೂಲಕ ಪರಿಹಾರದ ಜೊತೆಗೆ ದಂಡವನ್ನು ವಿಧಿಸಬಹುದು.
G. ದೂರನ್ನು ತಿರಸ್ಕರಿಸುವುದು
(i) ಸಾಲದ ಅವಧಿ ಅಥವಾ ಘಟನೆ ಸಂಭವಿಸಿದ ಅಥವಾ ಹೊರಹೊಮ್ಮಿದ ಒಂದು ವರ್ಷದೊಳಗೆ ಇವುಗಳಲ್ಲಿ ಯಾವುದು ಕಡಿಮೆಯೋ ಆ ಅವಧಿಯೊಳಗೆ ಸಲ್ಲಿಸದಿರುವ ದೂರುಗಳನ್ನು ತಿರಸ್ಕರಿಸತಕ್ಕದ್ದು.
(ii) ಒಂಬಡ್ಸ್ ಪರ್ಸನ್‌ನು ಸಲ್ಲಿಸಲಾದ ದೂರು,
(a) ಸಮರ್ಥನೀಯವಲ್ಲವೆಂದು; ಅಥವಾ ವ್ಯವಹರಣೆಗಳನ್ನು ಮುಂದುವರೆಸುವುದಕ್ಕೆ ಸಾಕಷ್ಟು ಕಾರಣಗಳಿಲ್ಲವೆಂದು; ಅಥವಾ
(b) ಸಲಹೆಗಳನ್ನು ನೀಡುವ ಅಥವಾ ಮಾರ್ಗದರ್ಶನ ಅಥವಾ ವಿವರಣೆಯನ್ನು ಕೋರುವ ಸ್ವರೂಪದ್ದೆಂದು ಅಥವಾ ದೂರುದಾರರಿಗೆ ಪರಿಹಾರಗಳು ಲಭ್ಯವಿವೆ ಎಂದು ಮತ್ತು ಪರಿಹಾರಗಳನ್ನು ಬಳಸಿಕೊಳ್ಳುವುದು ದೂರುದಾರರಿಗೆ ಪ್ರಕರಣದ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಅತ್ಯಂತ ಲಾಭದಾಯಕವಾದುದೆಂದು; – ತಮಗೆ ಕಂಡುಬಂದರೆ, ಯಾವುದೇ ಹಂತದಲ್ಲಿ ದೂರನ್ನು ತಿರಸ್ಕರಿಸಬಹುದು:
(iii) ಒಂಬಡ್ಸ್ ಪರ್ಸನ್ ಈ ಕೆಳಗೆ ಹೇಳಿದ ಸಂದರ್ಭಗಳಲ್ಲಿ ದೂರನ್ನು ಯಾವುದೇ ಹಂತದಲ್ಲಿ ತಿರಸ್ಕರಿಸಬಹುದು:
( a) ಸೇವೆಯಲ್ಲಿ ಯಾವುದೇ ನ್ಯೂನತೆ ಇಲ್ಲವೆಂದು ತಾವು ಅಭಿಪ್ರಾಯಪಡುವುದು; ಅಥವಾ
(b) ತತ್ಪರಿಣಾಮವಾದ ನಷ್ಟಕ್ಕೆ ಕೋರಲಾದ ನಷ್ಟ ಪರಿಹಾರವು ನ್ಯಾಯಸಮ್ಮತವಲ್ಲದಾಗಿರುವುದು;
(c) ದೂರುದಾರನು ಯುಕ್ತ ಜಾಗರೂಕತೆಯಿಂದ ದೂರನ್ನು ಅನುಸರಣೆ ಮಾಡದಿರುವುದು; ಅಥವಾ
(d) ದೂರಿನಲ್ಲಿ ಯಾವುದೇ ಪರ್ಯಾಪ್ತ ಕಾರಣವಿಲ್ಲದಿರುವುದು; ಅಥವಾ
(e) ದೂರಿಗೆ ವಿಸ್ತತವಾದ ದಸ್ತಾವೇಜೀಯ ಮತ್ತು ಮೌಖಿಕ ಸಾಕ್ಷ್ಯವನ್ನು ಪರಿಗಣಿಸುವ ಅಗತ್ಯವಿರುವುದು ಹಾಗೂ ಒಂಬಡ್ಸ್ ಪರ್ಸನ್ ಮುಂದಿರುವ ವ್ಯವಹರಣೆಗಳು ಅಂತಹ ದೂರಿನ ನ್ಯಾಯನಿರ್ಣಯಕ್ಕೆ ಸೂಕ್ತವಾಗಿಲ್ಲದಿರುವುದು; ಅಥವಾ
(f) ದೂರುದಾರರಿಗೆ ಯಾವುದೇ ಹಣಕಾಸು ನಷ್ಟ ಅಥವಾ ಹಾನಿ ಅಥವಾ ಆಗಿಲ್ಲವೆಂದು ಅನನುಕೂಲತೆ ಅಭಿಪ್ರಾಯಪಟ್ಟಿರುವುದು; ಒಂಬಡ್ಸ್ ಪರ್ಸನ್‌ಗೆ
(g) ದೂರು ನಿಷ್ಟ್ರಯೋಜಕ ಅಥವಾ ಕಿರುಕುಳಕಾರಿಯಾಗಿರುವುದು ಅಥವಾ ಸದ್ಭಾವನೆಯಿಂದ ಸಲ್ಲಿಸಿಲ್ಲದಿರುವುದು.
(iv) ಒಂಬಡ್ಸ್ ಪರ್ಸನ್, ಪ್ರತಿ ವರ್ಷ ಮಾರ್ಚ್ 31 ರಂತೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಗೆ, ಹಿಂದಿನ ಹಣಕಾಸು ವರ್ಷದಲ್ಲಿ ಪರಿಹರಿಸಿದ/ಪ್ರಗತಿಯಲ್ಲಿರುವ ಪ್ರಕರಣಗಳ ವ್ಯವಹರಣೆಗಳ ಸಾಮಾನ್ಯ ಪರಿಶೀಲನೆಯನ್ನು ಒಳಗೊಂಡ ವರದಿಯನ್ನು (30 ದಿನಗಳಲ್ಲಿ) ಸಲ್ಲಿಸಬೇಕು ಮತ್ತು ಸರ್ಕಾರ ನಿರ್ದೇಶಿಸಬಹುದಾದಂತಹ ಇತರ ಮಾಹಿತಿಯನ್ನು ಒದಗಿಸತಕ್ಕದ್ದು .
