ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ವಿಕಲಚೇತನರಿಗೆ ನೀಡುತ್ತಿರುವ ಸೌಲಭ್ಯಗಳ ವಿವರಗಳ ಬಗ್ಗೆ ಇಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ.
ಇಲಾಖೆಯು ವಿಕಲಚೇತನರಿಗಾಗಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳು:
ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆ:
ಈ ಯೋಜನೆಯಡಿ ಬುದ್ಧಿಮಾಂದ್ಯ (ಸೆರಬ್ರಲ್ ಪಾಲ್ಸಿ, ಆಟಿಸಂ), ದೃಷ್ಟಿದೋಷ, ಶ್ರವಣದೋಷವುಳ್ಳ ಮಕ್ಕಳಿಗಾಗಿ ವಸತಿಯುತ ಹಾಗೂ ವಸತಿರಹಿತ ಶಾಲೆಗಳು ಸೇರಿದಂತೆ ಒಟ್ಟು 164 ವಿಶೇಷ ಶಾಲೆಗಳು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುತ್ತಿವೆ. 2022-23ನೇ ಸಾಲಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸುತ್ತಿರುವ ವಿಶೇಷ ಶಾಲೆಗಳ ನಿರ್ವಹಣೆಗೆ ನೀಡಲಾಗುತ್ತಿದ್ದ ಅನುದಾನವನ್ನು ಶೇ.50%ರಷ್ಟು ಹೆಚ್ಚಿಸಿ ಸರ್ಕಾರದ ಆದೇಶ ಸಂಖ್ಯೆ ಮ. ಮ.ಇ 153:ಪಿ ಹೆಚ್ ಪಿ:2020, ದಿನಾಂಕ:14.09.2022 ರಲ್ಲಿ ಅದೇಶಿಸಲಾಗಿದೆ. ಈ ಅನುದಾನದಲ್ಲಿ ಶಿಕ್ಷಕರ ಗೌರವಧನ, ಮಕ್ಕಳ ಆಹಾರ ವೆಚ್ಚ, ಕಟ್ಟಡದ ಬಾಡಿಗೆ ಹಾಗೂ ನಿರ್ವಹಣಾ ವೆಚ್ಚ, ಸಮವಸ್ತ್ರ, ವೈದ್ಯಕೀಯ ವೆಚ್ಚ ಹಾಗೂ ಸಾದಿಲ್ವಾರು ವೆಚ್ಚಗಳು ಒಳಗೊಂಡಿರುತ್ತವೆ.
ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹನ ಧನ:
ಈ ಯೋಜನೆಯಡಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಆಯಾ ಜಿಲ್ಲಾ ಕಛೇರಿಗಳ ಮೂಲಕ ಆನ್ಲೈನ್ನಲ್ಲಿ ಮಂಜೂರು ಮಾಡಲಾಗುತ್ತಿದೆ. 2001-02ನೇ ಸಾಲಿನಿಂದ ಈ ಯೋಜನೆಯ ಫಲಾನುಭವಿಗಳಿಗೆ ಆದಾಯ ಮಿತಿಯಿಂದ ವಿನಾಯಿತಿಗೊಳಿಸಲಾಗಿದೆ.
ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ:
ಸಾರ್ವತ್ರಿಕ ಪರೀಕ್ಷೆಗಳಲ್ಲಿ ಶೇಕಡ 60 ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ.
ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ:
ಎಸ್.ಎಸ್.ಎಲ್.ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ, ಔದ್ಯೋಗಿಕ ಶಿಕ್ಷಣಗಳಿಗೆ ನಿಯಮಾನುಸಾರ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿರುವ ಪರೀಕ್ಷಾ ಶುಲ್ಕ ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ ಕ್ರೀಡಾ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ಮರುಪಾವತಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಆದಾಯಮಿತಿ ಇರುವುದಿಲ್ಲ.
ಆಧಾರ ಯೋಜನೆ :
ವಿಕಲಚೇತನರು ಸ್ವಯಂ ಉದ್ಯೋಗ ಕೈಗೊಂಡು ಜೀವನ ಸಾಗಿಸಲು ಅನುಕೂಲವಾಗುವಂತೆ ಆಧಾರ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಶೇ.50ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50ರಷ್ಟು ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತದೆ.
ಗ್ರಾಮೀಣ ಪುನರ್ವಸತಿ ಯೋಜನೆ:
ಈ ಯೋಜನೆಯನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳ 176 ತಾಲ್ಲೂಕುಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣ/ ಅನುತ್ತೀರ್ಣರಾದ ಸಮರ್ಥ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ಥಳೀಯ ಸಮರ್ಥ ಪದವೀಧರ ವಿಕಲಚೇತನರೊಬ್ಬರನ್ನು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರೆಂದು, ಸ್ಥಳೀಯ ನಗರ ಪ್ರದೇಶಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರೆಂದು 03 ಜಿಲ್ಲೆಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರು ಮತ್ತು ನಿರ್ದೇಶನಾಲಯದಲ್ಲಿ ರಾಜ್ಯ ಸಂಯೋಜಕರನ್ನು ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ. ಈ ಕಾರ್ಯಕರ್ತರ ಮೂಲಕ ವಿಕಲಚೇತನರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ಅವರಿರುವ ಸ್ಥಳಗಳಲ್ಲಿಯೇ ತಲುಪಿಸಲಾಗುವುದು. ಗೌರವಧನವನ್ನು ಕ್ರಮವಾಗಿ 6000/- ದಿಂದ 9000/- ಗಳಿಗೆ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ 12000/- ದಿಂದ ಹೆಚ್ಚಿಸಲಾಗಿದೆ.
ಜಿಲ್ಲಾ ಸಂಯೋಜಕರಿಗೆ ನೀಡಲಾಗುತ್ತಿದ್ದ ಗೌರವಧನ ರೂ.13,000/-ಗಳಿಂದ ರೂ.19,000/-ಗಳಿಗೆ ಹಾಗೂ ರಾಜ್ಯ ಸಂಯೋಜಕರಿಗೆ ನೀಡಲಾಗುತ್ತಿದ್ದ ಗೌರವಧನ ರೂ.26,000/-ಗಳಿಂದ ರೂ.38,000/-ಗಳಿಗೆ ಹೆಚ್ಚಿಸಲಾಗಿದೆ.
ಸರ್ಕಾರದ ಆದೇಶ ದಿ:03.06.2025ರಲ್ಲಿ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವಧನವನ್ನು ರೂ.9000/-ಗಳಿಂದ ರೂ.10000/-ಗಳಿಗೆ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವಧನವನ್ನು ರೂ.15000/-ಗಳಿಂದ ರೂ. 16000/-ಗಳಿಗೆ ಹೆಚ್ಚಿಸಲಾಗಿರುತ್ತದೆ.
ಮರಣ ಪರಿಹಾರ ನಿಧಿ ಯೋಜನೆ:
ಈ ಯೋಜನೆಯಡಿ ಕಾರ್ಯಕರ್ತರು ನಿಧನಹೊಂದಿದಲ್ಲಿ ರೂ.50,000/-ಗಳಿಂದ ರೂ.1.00 ಲಕ್ಷಗಳಿಗೆ ಹೆಚ್ಚಿಸಲಾಗಿದ್ದು, ಪರಿಹಾರ ಧನ ನೀಡಲು ಅವಕಾಶವಿರುತ್ತದೆ.
ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯರು ಮದುವೆಯಾದಲ್ಲಿ ಪ್ರೋತ್ಸಾಹ ಧನ ನೀಡುವ ಯೋಜನೆ:
ವಿಕಲಚೇತನ ಯುವಕ/ಯುವತಿಯರನ್ನು ವಿವಾಹವಾಗುವ ಸಾಮಾನ್ಯ ಯುವಕ/ ಯುವತಿಯರಿಗೆ. ನಿರಂತರವಾಗಿ ಮಾಸಿಕ ಆದಾಯ ದೊರಕಿಸಲು ವಿಕಲಚೇತನ ವ್ಯಕ್ತಿಯ ಹೆಸರಿನಲ್ಲಿ ರೂ.50,000/-ಗಳನ್ನು 05 ವರ್ಷದ ಅವಧಿಗೆ ಹೂಡಿಕೆಯ ರೂಪದಲ್ಲಿ ನೀಡಲಾಗುವುದು. ಅದರಿಂದ ಬರುವ ಬಡ್ಡಿ ಹಣವನ್ನು ಫಲಾನುಭವಿಗಳು ಉಪಯೋಗಿಸಬಹುದು ಹಾಗೂ 05 ವರ್ಷಗಳ ನಂತರ ಠೇವಣಿ ಮೊತ್ತವನ್ನು ವಾಪಸ್ಸು ಪಡೆಯಬಹುದು ಅಥವಾ ಮುಂದುವರೆಸಲು ಸಹ ಅವಕಾಶವಿರುತ್ತದೆ.
ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಆರೈಕೆ ಭತ್ಯೆ ಒದಗಿಸುವ ಯೋಜನೆ :
ಅಂಧ ಮಹಿಳೆಯರು ಮಗುವಿಗೆ ಜನ್ಮ ನೀಡಿದಾಗ ಆ ಮಗುವನ್ನು ಇತರೆ ಸಾಮಾನ್ಯ ತಾಯಂದಿರಂತೆ ಆರೈಕೆ ಮಾಡುವುದು ಕಷ್ಟಕರವಾಗಿರುತ್ತದೆ. ಇಂತಹ ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಆರೈಕೆ ಮಾಡಲು ಆಯಾ ಸೇವೆ, ಆರೋಗ್ಯ ಪಾಲನೆ, ಪೌಷ್ಠಿಕ ಆಹಾರ, ಔಷಧೋಪಚಾರಗಳಿಗೆ ಮಾಹೆಯಾನ ರೂ.2000/- ದಂತೆ 5 ವರ್ಷಗಳ ಅವಧಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಗರಿಷ್ಠ 2 ಮಕ್ಕಳವರೆಗೆ ಪಡೆಯಬಹುದಾಗಿದೆ.
ಸಾಧನ ಸಲಕರಣೆಗಳು:
ಈ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಅವಶ್ಯವಾಗಿರುವ ಸಾಧನ ಸಲಕರಣೆಗಳನ್ನು (ಕ್ಯಾಲಿಪರ್ಸ್, ಬೈಲ್ ವಾಚ್, ವಾಕಿಂಗ್ ಸ್ಟಿಕ್. ಕ್ರಚಸ್, ಊರುಗೋಲು, ಶ್ರವಣಸಾಧನ ಇನ್ನು ಮುಂತಾದವುಗಳು) ರೂ.15,000/-ಗಳ ಮಿತಿಯೊಳಗೆ ಉಚಿತವಾಗಿ ನೀಡಲಾಗುತ್ತದೆ. ಫಲಾನುಭವಿಯ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶದ ರೂ.11,500/- ಮತ್ತು ನಗರ ಪ್ರದೇಶದಲ್ಲಿ ರೂ.24,000/- ನಿಗದಿಗೊಳಿಸಲಾಗಿದೆ. ಫಲಾನುಭವಿಗಳು ಅರ್ಜಿಯನ್ನು ಆಯಾ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಸೌಲಭ್ಯ ಪಡೆಯಬಹುದು.
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ಯೋಜನೆ :
ಎಸ್.ಎಸ್.ಎಲ್.ಸಿ ನಂತರ ವ್ಯಾಸಂಗ ಮಾಡುವ ದೃಷ್ಟಿದೋಷವುಳ್ಳ ವಿಕಲಚೇತನ ವಿದ್ಯಾರ್ಥಿಗಳು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶದ ಉಪಯೋಗದಿಂದ ಉನ್ನತ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ ಮಾತನಾಡುವ (ಟಾಕಿಂಗ್) ಲ್ಯಾಪ್ಟಾಪ್ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ.
ತೀವ್ರತರನಾದ ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆ:
20 ರಿಂದ 60 ವರ್ಷದ ವಯೋಮಾನದ ತೀವ್ರತರವಾದ ದೈಹಿಕ ವಿಕಲಚೇತನರ ಕುಟುಂಬದ ವಾರ್ಷಿಕ ವರಮಾನ ರೂ.2.00 ಲಕ್ಷಗಳಿಗಿಂತ ಕಡಿಮೆ ಇರುವ ವಿಕಲಚೇತನರಿಗೆ ಅನುಕೂಲವಾಗುವಂತೆ ಜೀವಿತ ಕಾಲದಲ್ಲಿ ಒಂದು ಬಾರಿ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಒದಗಿಸಲಾಗುತ್ತಿದೆ.
ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳು:
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಖರೀದಿಸಿ ವಿತರಿಸಲಾಗುತ್ತಿದೆ. ಹೊಲಿಗೆ ಯಂತ್ರವನ್ನು ವಿತರಿಸಲು ನಿರ್ದೇಶನಾಲಯದಲ್ಲಿ ಟೆಂಡರ್ ಕರೆಯಲಾಗಿ ಸಂಸ್ಥೆಯನ್ನು ಆಯ್ಕೆ ಮಾಡಲಾಗುವುದು ನಂತರ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿದ್ದು, ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಗುವುದು.
ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ ಬ್ರೈಲ್ ಕಿಟ್:
ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ರಾಜ್ಯದ ೫೦೦ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೆಲ್ ವಾಚ್. ವಾಕಿಂಗ್ ಸ್ಟಿಕ್ ಮತ್ತು ಇನ್ನಿತರೆ ಸಾಧನಗಳನ್ನು ಒಳಗೊಂಡ ಖರೀದಿಸಿ ವಿತರಿಸಲಾಗುತ್ತಿದೆ.
ಬ್ಯಾಟರಿ ಚಾಲಿತ ವೀಲ್ ಚೇರ್ಗಳನ್ನು ವಿತರಿಸುವ ಯೋಜನೆ:
2023-24ನೇ ಸಾಲಿನಿಂದ ಬ್ಯಾಟರಿ ಚಾಲಿತ ವೀಲ್ ಚೇರ್ಗಳನ್ನು ವಿಕಲಚೇತನರಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೆರ್ಗಳನ್ನು ವಿತರಿಸಲಾಗುತ್ತಿದೆ.
ಅಂಗವಿಕಲತೆಯನ್ನು ನಿವಾರಿಸುವ ಶಸ್ತ್ರಚಿಕಿತ್ಸೆಗಾಗಿ ವೈದ್ಯಕೀಯ ಪರಿಹಾರ ನಿಧಿ ಯೋಜನೆ:-
ಅಂಗವಿಕಲ ವ್ಯಕ್ತಿಗಳಿಗೆ ಅಂಗವಿಕಲತೆಯನ್ನು ನಿವಾರಿಸಲು ಶಸ್ತ್ರ, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ, ಸಂಜಯಗಾಧಿ ಆಸ್ಪತ್ರೆಗಳಲ್ಲಿ ಹಾಗೂ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಅಂಗವಿಕಲತೆ ನಿವಾರಣಾ ಶಸ್ತ್ರ ಚಿಕಿತ್ಸೆಗಾಗಿ ರೂ.1.00 ಲಕ್ಷಗಳವರೆಗೆ ಸಹಾಯ ಧನವನ್ನು ಮಂಜೂರು ಮಾಡಲಾಗುತ್ತಿದೆ.
ಸಾಧನೆ ಮತ್ತು ಪ್ರತಿಭೆ ಯೋಜನೆ:
ವಿಕಲಚೇತನರು ನೀಡುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಧನಸಹಾಯ ನೀಡುವ ಸಲುವಾಗಿ “ಪ್ರತಿಭೆ” ಎಂಬ ಯೋಜನೆಯನ್ನು ಹಾಗೂ ಅಂಗವಿಕಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಧನಸಹಾಯ ನೀಡಲು “ಸಾಧನೆ” ಎಂಬ ಯೋಜನೆಯು ಜಾರಿಯಲ್ಲಿದ್ದು ಕ್ರೀಡೆಗಳಲ್ಲಿ ವಿಶೇಷ ಸಾಧನೆಗೈದ ವಿಕಲಚೇತನರಿಗೆ ರೂ.50,000/-ಗಳ ಧನ ಸಹಾಯವನ್ನು ನೀಡಲಾಗುತ್ತಿದೆ.
ನಿರಾಮಯ ಆರೋಗ್ಯ ವಿಮಾ ಯೋಜನೆ : (ಆಟಿಸಂ, ಸರೆಬ್ರಲ್ ಪಾಲ್ಸಿ, ಬೌದ್ಧಿಕ ಅಂಗವಿಕಲತೆ ಮತ್ತು ಬಹುವಿಧ ಅಂಗವಿಕಲತೆ)
ಬುದ್ಧಿಮಾಂದ್ಯ, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ ನಿರಾಮಯ ಎಂಬ ಆರೋಗ್ಯ ವಿಮಾ ಯೋಜನೆಯು ಜಾರಿಯಲ್ಲಿದ್ದು, ಮೇಲೆ ವಿವರಿಸಿದ ಅಂಗವಿಕಲತೆ ಹೊಂದಿರುವ ಪ್ರತಿ ವ್ಯಕ್ತಿಗೆ ವರ್ಷಕ್ಕೆ ಒಂದು ಬಾರಿಗೆ ಪ್ರೀಮಿಯಂ ಮೊತ್ತ ರೂ.250/-ಗಳನ್ನು ನ್ಯಾಷನಲ್ ಟ್ರಸ್ಟ್ ಸಂಸ್ಥೆಗೆ ಪಾವತಿಸಲಾಗುವುದು. ಪ್ರತಿ ವರ್ಷ ಯೋಜನೆಯಡಿ ಬರುವ ಫಲಾನುಭವಿಗಳು ರೂ.1.00 ಲಕ್ಷಗಳವರೆಗೆ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿರುತ್ತದೆ.
ಸ್ಪರ್ಧಾ ಚೇತನ:-
ಈ ಯೋಜನೆಯಡಿ ಐ.ಎ.ಎಸ್./ಕೆ.ಎ.ಎಸ್. ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದ ಇತರೆ ಇಲಾಖೆಗಳಡಿ ಗುರುತಿಸಲ್ಪಟ್ಟ ಪರೀಕ್ಷಾ ಪೂರ್ವ ತರಬೇತಿ ಕೇಂದ್ರಗಳು ಹಾಗೂ ಈ ಇಲಾಖೆಯಿಂದ ಗುರುತಿಸಲ್ಪಟ್ಟ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವ ವಿಕಲಚೇತನರಿಗೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಮೊತ್ತವನ್ನು ಪಾವತಿಸಲಾಗುವುದು.
ಆರೈಕೆದಾರರ ಭತ್ಯೆ/ಪ್ರೋತ್ಸಾಹ ಧನ:
Cerebral Palsy. Muscular Dystrophy. Parkinsons Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಹಾಗೂ ವಿಶೇಷ ಚೇತನ ಮಕ್ಕಳನ್ನೂ ಒಳಗೊಂಡಂತೆ ಆರೈಕೆ ಮಾಡುತ್ತಿರುವವರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹ ಧನ ನೀಡುವ ಯೋಜನೆಯಾಗಿದೆ 2025-26ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಯವರ ಆಯವ್ಯಯ ಭಾಷಣದಲ್ಲಿ ಈ ಆರೈಕೆದಾರರ ಭತ್ಯೆಯನ್ನು ಭೌದ್ಧಿಕ ವಿಕಲತ, ಬಹುವಿಧ ಅಂಗವಿಕಲತೆ (ಡಫ್ ಬೈಂಡ್). ಆಟಿಸಂ ವಿಕಲತೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಆರೈಕ ಮಾಡುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗಿದೆ.
ನಿರಾಶ್ರಿತ ಭೌದ್ಧಿಕ ವಿಕಲಚೇತನರ ಅನುಪಾಲನಾ ಗೃಹ: ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರ್ರೈಕ ಮತ್ತು
ಸಂರಕ್ಷಣೆಗಾಗಿ 4 ಅನುಪಾಲನಾ ಗೃಹಗಳನ್ನು ಬೆಂಗಳೂರು ನಗರ ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಇಲಾಖೆಯಿಂದ ಪ್ರಾರಂಭಿಸಲುದ್ದೇಶಿಸಲಾಗಿದ್ದು ಈಗಾಗಲೇ ಬೆಂಗಳೂರು ವಿಭಾಗಕ್ಕ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಹಾಗೂ ಕಲಬುರಗಿ ವಿಭಾಗಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಉಳಿದ ವಿಭಾಗಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.






ಇದನ್ನೂ ನೋಡಿ……ರಾಜ್ಯದ ನಿವೃತ್ತ ನೌಕರರ ಪರಿಷ್ಕೃತ ವೇತನ ಶ್ರೇಣಿಯ ಬಗ್ಗೆ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ