7th Pay Commission: ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಪ್ರಯಾಣ ಭತ್ಯೆ ದರಗಳ ಪರಿಷ್ಕರಣೆ.
7th Pay Commission :ಈ ಮೊದಲು ಚಾಲ್ತಿಯಲ್ಲಿದ್ದ ರಾಜ್ಯ ಸರ್ಕಾರದ ನೀತಿಯಂತೆ, ಮೇಲೆ (1) ಮತ್ತು (2)ರಲ್ಲಿ ಓದಲಾದ ದಿನಾಂಕ: 14.02.1979 ಮತ್ತು ದಿನಾಂಕ: 17.07.1979ರ ಸರ್ಕಾರಿ ಆದೇಶಗಳಲ್ಲಿ ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ಆದೇಶದ ನಿಬಂಧನೆಗಳ ಪೂರೈಕೆಗೊಳಪಟ್ಟು ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಿ ಆದೇಶಗಳನ್ನು ಹೊರಡಿಸಲಾಗಿತ್ತು. ಸದರಿ ಸೌಲಭ್ಯವನ್ನು ನಿರ್ದಿಷ್ಟ ಬದಲಾವಣೆಗಳೊಂದಿಗೆ ಕಾಲದಿಂದ ಕಾಲಕ್ಕೆ ಮುಂದುವರೆಸಿಕೊಂಡು ಬರಲಾಗಿರುತ್ತದೆ. ಮುಂದುವರೆದು, 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಬೆಳಕಿನಲ್ಲಿ, ಮೇಲೆ (3)ರಲ್ಲಿ ಓದಲಾದ ದಿನಾಂಕ: 11.01.2019ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಸದರಿ ಆದೇಶದಲ್ಲಿನ ನಿಬಂಧನೆಗಳ ಪೂರೈಕೆಗೊಳಪಟ್ಟು ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಲು ವಿಸ್ತ್ರತ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಮೇಲೆ (4)ರಲ್ಲಿ ಓದಲಾದ ದಿನಾಂಕ: 23.08.2024ರ ಸರ್ಕಾರಿ ಆದೇಶದಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಗಳನ್ನು ದಿನಾಂಕ: 01.08.2024 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗಿರುತ್ತದೆ. ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಪ್ರಯಾಣ ಭತ್ಯೆಯ ಮಂಜೂರಾತಿ ಕುರಿತಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಪದ್ದತಿಗೆ ಕೆಲವು ಬದಲಾವಣೆಗಳನ್ನು ಮಾಡಲು 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುತ್ತದೆ ಮತ್ತು ವಿಶೇಷ-ಚೇತನ ನೌಕರರುಗಳಿಗೆ ಪ್ರಸ್ತುತ
ಚಾಲ್ತಿಯಲ್ಲಿರುವ ಮೂಲ ವೇತನದ 62 ರಷ್ಟು ಪ್ರಯಾಣ ಭತ್ಯೆಯ ಸೌಲಭ್ಯವನ್ನು ಮುಂದುವರೆಸಲು ಸಹ ಆಯೋಗವು ಶಿಫಾರಸ್ಸು ಮಾಡಿರುತ್ತದೆ.
ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ ಪ್ರಯಾಣ ಭತ್ಯೆ ಸೌಲಭ್ಯ ಮಂಜೂರು ಮಾಡುವುದನ್ನು ಕ್ರಮಬದ್ಧಗೊಳಿಸುವ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶಗಳನ್ನು ಹೊರಡಿಸಿದೆ.
ಆದೇಶ:
ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಅವರ ಮೂಲ ವೇತನದ 6% ದರದಲ್ಲಿ ಯಾವುದೇ ಗರಿಷ್ಠ ಮಿತಿ ಇಲ್ಲದೇ 1ನೇ ಡಿಸೆಂಬರ್ 2024 ರಿಂದ ಜಾರಿಗೆ ಬರುವಂತೆ ಮಾಹೆಯಾನ ವಿಶೇಷ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.
2.ಈ ವಿಶೇಷ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಅಂಗವಿಕಲತೆ (ವಿಶೇಷ-ಚೇತನ) ಎಂದರೆ ಅದು ‘ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016’ ರಲ್ಲಿರುವಂತೆ ಇರತಕ್ಕದ್ದು ಮತ್ತು ಅದರಂತೆ ಅರ್ಥೈಸಿಕೊಳ್ಳತಕ್ಕದ್ದು. ಅದರಂತೆ, ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ಹಾಗೂ ವಾಕ್ ಮತ್ತು ಶ್ರವಣ ವೈಕಲ್ಯತೆಯುಳ್ಳ ನೌಕರರನ್ನೂ ಒಳಗೊಂಡಂತೆ ರಾಜ್ಯ ಸರ್ಕಾರದ ಎಲ್ಲಾ ವಿಶೇಷ-ಚೇತನ ನೌಕರರುಗಳು ದಿನಾಂಕ: 01.12.2024 ರಿಂದ ಜಾರಿಗೆ ಬರುವಂತೆ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
3.ಈ ಭತ್ಯೆಯನ್ನು ಮಂಜೂರು ಮಾಡಲು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ನಿಬಂಧನೆಗಳು ಈ ಕೆಳಕಂಡಂತಿರತಕ್ಕದ್ದು;
i.40% ರಷ್ಟು ಕನಿಷ್ಠ ಶಾಶ್ವತ ಅಂಗವಿಕಲತೆ ಹೊಂದಿರುವ ನೌಕರರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
ii. ‘ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016’ ರ ಅವಕಾಶಗಳನ್ವಯ ನೇಮಕಗೊಂಡ ವಿಶೇಷ-ಚೇತನ ನೌಕರರುಗಳ ಪ್ರಕರಣಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಒತ್ತಾಯಿಸತಕ್ಕದ್ದಲ್ಲ ಮತ್ತು ಈ ಸೌಲಭ್ಯವನ್ನು ಈ ಮೇಲೆ ತಿಳಿಸಿರುವ ಕನಿಷ್ಠ ಅಂಗವಿಕಲತೆಯ ಮಿತಿಗೊಳಪಟ್ಟು ಮಂಜೂರು ನ ಮಾಡತಕ್ಕದ್ದು.
iii. ಯಾವುದೇ ವೈಜ್ಞಾನಿಕ ಉಪಕರಣಗಳ/ಸಾಧನಗಳ ಬಳಕೆಯಿಂದ ಸರಿಪಡಿಸಲಾಗದಂತಹ ಶಾಶ್ವತ ಅಂಗವಿಕಲತೆಯುಳ್ಳ ನೌಕರರಿಗೆ ಮಾತ್ರ ಈ ಸೌಲಭ್ಯವು ಸೀಮಿತವಾಗಿರುತ್ತದೆ.
iv. ವೈದ್ಯಕೀಯ ಉಪಕರಣಗಳ ಮುಖಾಂತರ ಸರಿಪಡಿಸಬಹುದಾದ ದೃಷ್ಟಿ ಮತ್ತು ಶ್ರವಣ ದೋಷ ಇರುವ ನೌಕರರುಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲು ಬರುವುದಿಲ್ಲ.
4.’ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016′ ನಿಯಮಗಳು ಜಾರಿಗೆ ಬರುವುದಕ್ಕೆ ಪೂರ್ವದಲ್ಲಿಯೇ ಖಾಯಂ ಸರ್ಕಾರದ ಸೇವೆಗೆ ನೇಮಕಗೊಂಡು ಪ್ರಸಕ್ತ ಚಾಲ್ತಿಯಲ್ಲಿರುವ ಆದೇಶ/ನಿಯಮಗಳ ಅವಕಾಶಗಳಡಿ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಿರುವ ವಿಶೇಷ- ಚೇತನ ನೌಕರರ ಪ್ರಕರಣಗಳಲ್ಲಿ ಅವರು ಈಗಾಗಲೇ ಸಲ್ಲಿಸಿರುವ ಪ್ರಮಾಣ ಪತ್ರದ ಆಧಾರದ ಮೇಲೆ ಪರಿಷ್ಕೃತ ವಿಶೇಷ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡತಕ್ಕದ್ದು, ಅವರುಗಳು ಹೊಸ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಒತ್ತಾಯಿಸತಕ್ಕದ್ದಲ್ಲ.
5.ರಾಜ್ಯ ಸರ್ಕಾರದ ಸೇವೆಗೆ ಸೇರಿದ ನಂತರ ಶಾಶ್ವತ ಅಂಗವಿಕಲತೆಯನ್ನು ಹೊಂದಿದ ನೌಕರರುಗಳ ಪ್ರಕರಣಗಳಲ್ಲಿ ಅವರುಗಳು, ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿರುವ ನಮೂನೆಯಲ್ಲಿ ಸಲ್ಲಿಸುವ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಅವರ ಅರ್ಹತೆಯನ್ನು ಪ್ರಕರಣವಾರು ನಿರ್ಧರಿಸತಕ್ಕದ್ದು. ಮೇಲಿನ ಕಂಡಿಕೆ 3ರಲ್ಲಿ ತಿಳಿಸಿರುವ ಕನಿಷ್ಠ ಅಂಗವಿಕಲತೆಯ ನಿಬಂಧನೆಯು ಈ ಪ್ರಕರಣಗಳಿಗೂ ಅನ್ವಯಿಸುತ್ತದೆ.
6.ಈ ಆದೇಶಗಳನ್ವಯ ಪ್ರಯಾಣ ಭತ್ಯೆಯನ್ನು ಪಡೆಯುತ್ತಿರುವ ವಿಶೇಷ-ಚೇತನ ನೌಕರರುಗಳು, ಸಮಾನಾಂತರ ಉದ್ದೇಶಕ್ಕೆ ಇತರೆ ಸರ್ಕಾರಿ ನೌಕರರುಗಳು ಮಾಹೆಯಾನ ಪಡೆಯುತ್ತಿರುವ ನಗರ ಪರಿಹಾರ ಭತ್ಯೆ ಮತ್ತು ನಿಗದಿತ ಪ್ರಯಾಣ ಭತ್ಯೆ/ವಾಹನ ಭತ್ಯೆ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ. ಪರಂತು, ಅವರುಗಳು ಸರ್ಕಾರದ ಕೆಲಸದ ನಿಮಿತ್ತ ಕೈಗೊಳ್ಳುವ ಅಧಿಕೃತ ಪ್ರವಾಸಕ್ಕೆ ನಿಯಮಾನುಸಾರ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.
7.ಸರ್ಕಾರದಿಂದ ಅಥವಾ ಸರ್ಕಾರದ ನಿಯಂತ್ರಣಕ್ಕೊಳಪಡುವ ಸಂಸ್ಥೆಗಳಿಂದ ಅಧಿಕೃತ ವಾಹನಗಳನ್ನು ಒದಗಿಸಿರುವ ಅಥವಾ ಸರ್ಕಾರದ ವೆಚ್ಚದಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸಿರುವ ನೌಕರರುಗಳಿಗೆ ಈ ಸೌಲಭ್ಯವು ಲಭ್ಯವಿರುವುದಿಲ್ಲ.
8.ಈ ಆದೇಶದನ್ವಯ ಪಾವತಿಸಲಾಗುವ ಪ್ರಯಾಣ ಭತ್ಯೆಯ ಸೌಲಭ್ಯವು ನೌಕರನ ನಿರ್ದಿಷ್ಟ ಖಾಯಂ ಸೇವಾವಧಿಗೆ ಸೀಮಿತವಾಗಿರುತ್ತದೆ ಮತ್ತು ನಿವೃತ್ತ ನೌಕರರುಗಳ ಪ್ರಕರಣಗಳಲ್ಲಿ ಇದು ಅನ್ವಯಿಸುವುದಿಲ್ಲ.
9.ಪ್ರಯಾಣ ಭತ್ಯೆಯನ್ನು ಕ್ರಮಬದ್ಧಗೊಳಿಸುವ ಕುರಿತ ಸಮುಚಿತ ನಿಯಮ/ಆದೇಶ ಗಳಲ್ಲಿನ ಇತರೆ ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ ಮತ್ತು ಅದು ಅನ್ವಯಿಸುವ ಸೇವಾ ನಿಯಮಗಳಲ್ಲಿ ನಿಗದಿಪಡಿಸಿರುವ ನಿಬಂಧನೆಗಳ ಪೂರೈಕೆಗೆ ಒಳಪಟ್ಟಿರುತ್ತದೆ.
10.ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರುಗಳು ಈ ಸೌಲಭ್ಯವನ್ನು ಮಂಜೂರು ಮಾಡಲು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. ಆದರೆ, ಈಗಾಗಲೇ ಮಂಜೂರು ಮಾಡಿರುವ ಪ್ರಕರಣಗಳಿಗೆ ಪುನ: ಇದನ್ನು ಅನ್ವಯಿಸಿ ಮಂಜೂರು ಮಾಡುವ ಅಗತ್ಯವಿರುವುದಿಲ್ಲ.
11.ಈ ಸೌಲಭ್ಯಗಳ ಹಕ್ಕು ಸ್ಥಾಪನೆಯ ಬಗ್ಗೆ ನೌಕರರ ಅರ್ಹತೆ ಕುರಿತಂತೆ ಯಾವುದೇ ವ್ಯಾಜ್ಯ/ವಿವಾದಿತ ವಿಷಯಗಳು ಉದ್ಭವಿಸಿದಲ್ಲಿ ಅದು ಸಂಬಂಧಿಸಿದ ಇಲಾಖಾ ಮುಖ್ಯಸ್ಥರ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
12.ರಾಜ್ಯ ಸರ್ಕಾರದ ಅಧೀನಕ್ಕೊಳಪಡುವ ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿಶೇಷ-ಚೇತನ ನೌಕರರುಗಳಿಗೂ ಈ ಆದೇಶವು ಅನ್ವಯಿಸುತ್ತದೆ. ಸಂಬಂಧಿಸಿದ ಆಡಳಿತ ಇಲಾಖೆಗಳು ಈ ಕುರಿತಂತೆ ಸೂಕ್ತ ಆದೇಶಗಳನ್ನು ಹೊರಡಿಸತಕ್ಕದ್ದು.
13.ಈ ಆದೇಶದ ಉಪಬಂಧಗಳನ್ನು ಜಾರಿಗೆ ತರುವಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅಥವಾ ಆದೇಶದ ಉಪಬಂಧಗಳನ್ನು ಅನುಷ್ಠಾನಗೊಳಿಸುವಲ್ಲಿ ಸಮಸ್ಯೆಗಳು ಉಂಟಾಗುವ ಬಗ್ಗೆ ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದಲ್ಲಿ ಸ್ಪಷ್ಟಿಕರಣ ಕೋರಿ ಅಂತಹ ವಿಷಯಗಳನ್ನು ಸರ್ಕಾರಕ್ಕೆ ಸಲ್ಲಿಸುವುದು. ಈ ಕುರಿತಂತೆ ಕೈಗೊಳ್ಳುವ ರಾಜ್ಯ ಸರ್ಕಾರದ ನಿರ್ಣಯವು ಅಂತಿಮವಾಗಿರುತ್ತದೆ.
14.ಈ ಆದೇಶದ ಉಪಬಂಧಗಳು 1ನೇ ಡಿಸೆಂಬರ್ 2024 ರಿಂದ ಜಾರಿಗೆ ಬರುತ್ತವೆ.
15.ದಿನಾಂಕ: 11.01.2019ರ ಸರ್ಕಾರಿ ಆದೇಶ ಸಂಖ್ಯೆ: ಆಇ 24 ಎಸ್‌ಆರ್‌ಪಿ 2018 (VII) ರ ಆದೇಶವನ್ನು ದಿನಾಂಕ: 01.12.2024ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.