Reading hobby: 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಗ್ರಂಥಾಲಯ ಅವಧಿ ಅನುಷ್ಠಾನ ಆದೇಶ.
Reading hobby: ರಾಜ್ಯದ 01 ರಿಂದ 10ನೇ ತರಗತಿವರೆಗಿನ ಎಲ್ಲಾ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ “ಓದುವ ಹವ್ಯಾಸ ಜ್ಞಾನದ ವಿಕಾಸ” ಎಂಬ ಕಾರ್ಯಕ್ರಮದಡಿ ಕಡ್ಡಾಯವಾಗಿ ವಾರಕ್ಕೊಂದು ಗ್ರಂಥಾಲಯ ಅವಧಿಯನ್ನು ಅನುಷ್ಠಾನಗೊಳಿಸುವ ಕುರಿತು
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಶಾಲಾ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ವೃದ್ಧಿಸುವ ಸಲುವಾಗಿ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಗ್ರಂಥಾಲಯವನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸಲು ಮತ್ತು ಅದನ್ನು ಮಕ್ಕಳ ಬಳಕೆಗೆ ಅರ್ಹವಾಗಿಸಿ ನಿರಂತರ ಬಳಕೆಗೆ ನೀಡಲು ಉಲ್ಲೇಖದನುಸಾರ ಶಾಲೆಗಳಲ್ಲಿ ಓದುವ ಹವ್ಯಾಸ ಜ್ಞಾನದ ವಿಕಾಸ” ಎಂಬ ಕಾರ್ಯಕ್ರಮವನ್ನು ಇಲಾಖೆಯಿಂದ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳಲ್ಲಿ ವಾರಕ್ಕೆ ಒಂದು ಗ್ರಂಥಾಲಯ ಅವಧಿ ನಿಗಧಿಪಡಿಸಲು ಕ್ರಮವಹಿಸಲಾಗಿದೆ.
ಉದ್ದೇಶ:
ಶಾಲಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯು ಶಿಕ್ಷಣದ ಧೈಯವಾಗಿದ್ದು, ವಿದ್ಯಾರ್ಥಿಗಳ ಜ್ಞಾನ, ಬುದ್ಧಿ ಮತ್ತು ಮೌಲ್ಯದ ಕ್ರಿಯಾಶೀಲ ವಿಕಸನಕ್ಕಾಗಿ ಪಠ್ಯಪುಸ್ತಕಗಳ ಓದಿನ ಜೊತೆಗೆ ಇತರೆ ಪೂರಕ ಪುಸ್ತಕಗಳನ್ನು ಓದುವುದು ಅವಶ್ಯಕವಾಗಿರುತ್ತದೆ. ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಾಲಾ ಗ್ರಂಥಾಲಯಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಗ್ರಂಥಾಲಯಗಳು ಜ್ಞಾನಭಂಡಾರ ಅಷ್ಟೇ ಅಲ್ಲ ಬದಲಿಗೆ ವಿದ್ಯಾರ್ಥಿಗಳ ಸಂಪೂರ್ಣ ಮನೋವಿಕಾಸಕ್ಕೆ ಪೂರಕವಾಗಿರುತ್ತವೆ.
ಶಾಲಾ ಗ್ರಂಥಾಲಯದ ಪ್ರಾಥಮಿಕ ಉದ್ದೇಶವು ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವುದು. ಮಕ್ಕಳು ಆನಂದಿಂದ ಪುಸ್ತಕಗಳನ್ನು ಓದಿದಾಗ ಮಾತ್ರ ಈ ಹವ್ಯಾಸವು ಬೆಳೆಯಲು ಸಾಧ್ಯ. ಮಕ್ಕಳು ಆನಂದಿಸಿ ಓದಲು ಗ್ರಂಥಾಲಯದಲ್ಲಿ ಅನೇಕ ಪ್ರಕಾರದ, ಆಕರ್ಶಕ ಪುಸ್ತಕಗಳಿರಬೇಕು. ಈ ಪುಸ್ತಕಗಳು ಮಕ್ಕಳ ಅಭಿರುಚಿಗೆ ತಕ್ಕಂತಿರಬೇಕು.
ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ದಭಂಡಾರ ವೃದ್ಧಿಸಿ, ನಿರರ್ಗಳತೆ, ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ್ಯ ಮತ್ತು ಸೃಜನಾತ್ಮಕ ಬರವಣಿಗೆಗೆ ಪೂರಕವಾಗಿವೆ. ಅದಲ್ಲದೆ ಬೌದ್ಧಿಕ ಕೌಶಲ್ಯಗಳಾದ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಸಾರಾಂಶ ಮಾಡುವ ಕ್ಷಮತೆ, ಕಲ್ಪನಾ ಶಕ್ತಿ, ಸೃಜನಶೀಲತೆ, ಹಾಗೂ ಸಹಾನುಭೂತಿಯನ್ನು ಬೆಳೆಸುತ್ತದೆ.
ಮೇಲ್ಕಂಡ ಉದ್ದೇಶದ ಗುರಿಯನ್ನು ಸಾಧಿಸಲು ಇಲಾಖೆಯಿಂದ “ಓದುವ ಹವ್ಯಾಸ ಜ್ಞಾನದ ವಿಕಾಸ ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಮಾರ್ಗದರ್ಶಿಯನ್ನು ಪಾಲಿಸಬೇಕೆಂದು ಶಾಲೆಗಳಿಗೆ ತಿಳಿಸಲಾಗಿದೆ.
ಗ್ರಂಥಾಲಯ ಪುಸ್ತಕಗಳು, ಓದುವ ಸಾಮಗ್ರಿಗಳ ಸಂಗ್ರಹಣೆ ಮತ್ತು ಸ್ಥಾಪನೆ:
ಕಾಲ್ಪನಿಕ, ವಾಸ್ತವಿಕ, ಅವಾಸ್ತವಿಕ ಪರಿಕಲ್ಪನೆ, ಜಾನಪದ, ಕವನ, ಕವಿತೆ, ನಾಟಕ, ಕಾಮಿಕ್ ಈ ಎಲ್ಲಾ ಪ್ರಕಾರಗಳ ಪುಸ್ತಕಗಳು ಗ್ರಂಥಾಲಯಗಳಲ್ಲಿ ಓದುವ ಮೂಲೆಗಳಲ್ಲಿ ಲಭ್ಯವಿರಬೇಕು.
ಕೇವಲ ಪಠ್ಯಪುಸ್ತಕಗಳನ್ನು ಓದುವುದರಿಂದ ಶಿಕ್ಷಕರ ಗಮನ ಮತ್ತು ಮಕ್ಕಳ ಜ್ಞಾನವು ತರಗತಿಯಲ್ಲಿ ಅಂಕಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮಕ್ಕಳ ಕ್ರಿಯಾಶೀಲತೆ, ವಿಮರ್ಶಾತ್ಮಕ ಬೆಳವಣಿಗೆಗೆ ಎಲ್ಲಾ ಗುಣಮಟ್ಟದ ಸಾಹಿತ್ಯವನ್ನು ಓದುವುದು ಅಗತ್ಯವಾಗಿದೆ.
ಎಸ್.ಎಸ್.ಎಲ್.ಸಿ ಓದುವ ಮಕ್ಕಳಿಗೆ ಎಸ್.ಎಸ್.ಎಲ್.ಸಿ ನಂತರ ಮುಂದೇನು? ಎಂಬ ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ವ್ಯಾಸಂಗಕ್ಕೆ ಮಾರ್ಗದರ್ಶನವಾಗಿ ಸ್ವತಂತ್ರವಾಗಿ ತೀರ್ಮಾನಿಸಲು ಸಹಾಯವಾಗುವಂತೆ ಪೂರಕ ದಾಖಲೆಗಳನ್ನು ಸಂಗ್ರಹಿಸಿಡುವುದು.
ಗ್ರಂಥಾಲಯ ಅನುದಾನವನ್ನು ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ಪ್ರತಿ ವರ್ಷ ರಾಜ್ಯದ ಎಲ್ಲಾ ಶಾಲೆಗಳಿಗೆ ನೀಡಲಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತಿರುವ ರೀಡಿಂಗ್ ರೂಮ್(RR) ನಿಧಿಯಿಂದ ಕೂಡಾ ಅನುದಾನ ಶಾಲೆಗಳಲ್ಲಿ ಲಭ್ಯವಿದೆ. ಈ ಅನುದಾನವನ್ನು ಬಳಸಿ ಗ್ರಂಥಾಲಯಗಳಿಗೆ ಕಡ್ಡಾಯವಾಗಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗಾಗಿ ಗುಣಮಟ್ಟದ ಓದುವ ಸಾಮಗ್ರಿಗಳನ್ನು ಖರೀದಿಸಬೇಕಾಗಿರುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರವು ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಗುಣಮಟ್ಟದ ಪುಸ್ತಕಗಳ ಪಟ್ಟಿಯನ್ನು ಶಿಫಾರಸ್ಸು ಮಾಡಿದೆ. ಪುಸ್ತಕದ ಪಟ್ಟಿಯು ಡಿ.ಎಸ್.ಇ.ಆರ್.ಟಿ. ವೆಬೈಟ್ನಲ್ಲಿ ಲಭ್ಯವಿದೆ. (https://dsert.karnataka.gov.in/storage/pdf-files/library/SSKLevel-1List-1.pdf)) ಮೇಲ್ಕಂಡ ಎಲ್ಲಾ ಪ್ರಕಾರಗಳ ಪುಸ್ತಕಗಳನ್ನು ಈ ಪಟ್ಟಿಯಿಂದ ಶಾಲೆಗಳು ಆಯ್ಕೆ ಮಾಡಿ ಖರೀದಿಸಬಹುದು.,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಥವಾ ರೂಮ್ ಟು ರೀಡ್, ಪ್ರಥಮ್, ಎಪಿಎಫ್, ಕಲಿಕೆ ಟಾಟಾ ಟ್ರಸ್ಟ್ ಮುಂತಾದ ಇತರೆ ಎನ್ ಜಿ ಓ ಗಳ ಬೆಂಬಲದೊಂದಿಗೆ ಒದಗಿಸಿರುವ ಓದುವ ಸಾಮಗ್ರಿಗಳನ್ನು ಈ ಅವಧಿಯಲ್ಲಿ ಬಳಸಬೇಕು.
ಗ್ರಂಥಾಲಯಗಳಲ್ಲಿ ಖರೀದಿ ಮಾಡಿದ ಪುಸ್ತಕಗಳನ್ನು ದಾಸ್ತಾನು ವಹಿಯಲ್ಲಿ (Accession Register) ರಲ್ಲಿ ನಮೂದಿಸಿರುವುದು.
ಗ್ರಂಥಾಲಯ ದಾಸ್ತಾನು ವಹಿ ನಮೂನೆ (Accession Register format)

ಓದಲು ಮೀಸಲಿರಿಸುವ ಸ್ವಾಗತ ಪೂರ್ಣ ಭೌತಿಕ ಸ್ಥಳ :
ಮಕ್ಕಳಿಗೆ ಅನುಕೂಲವಾದ “ಮಕ್ಕಳ ಸ್ನೇಹಿ ಗಂಥಾಲಯ’ವನ್ನು ಅಥವಾ ಓದುವ ಮೂಲೆಯನ್ನು (Reading corner) ಸ್ಥಾಪಿಸಲು ಒಂದು ಸ್ಥಳವನ್ನು ನಿಗಧಿಪಡಿಸಬೇಕು. ಗಂಥಾಲಯದ ಅವಧಿಯಲ್ಲಾಗಲಿ ಅಥವಾ ಯಾವುದೇ ಸಮಯದಲ್ಲಾಗಲಿ ಯಾವುದೇ ಅಡಚಣೆ ಇಲ್ಲದೆ ಸ್ವತಂತ್ರವಾಗಿ ಈ ಸ್ಥಳವನ್ನು ಮಕ್ಕಳು ಬಳಸುವಂತಿರಬೇಕು. ಇಲ್ಲಿ ಪುಸ್ತಕಗಳು ಓದುವ ಸಾಮಗ್ರಿಗಳನ್ನು ಯಾವುದೇ ಕಪಾಟುಗಳಲ್ಲಿ ಮುಚ್ಚಿಡುವುದು ಮತ್ತು ಕೀಲಿ ಹಾಕುವುದನ್ನು ಮಾಡಬಾರದು ವುಸ್ತಕಗಳನ್ನು ಮಕ್ಕಳಿಗೆಟುಕುವಂತೆ ಜೂಟ್ ಬ್ಯಾಗ್ ಗಳಲ್ಲಿ ಅಥವಾ ಸೃಜನಾತ್ಮಕವಾಗಿ ಶಾಲೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಉಪಯೋಗಿಸಿ ಪ್ರದರ್ಶಿಸುವುದು
ಶಾಲೆಗಳಲ್ಲಿ ಗ್ರಂಥಾಲಯದ ಅವಧಿ: –
ಪ್ರತಿ ತರಗತಿಗೆ ಕನಿಷ್ಠ ಪಕ್ಷ ವಾರಕ್ಕೊಂದು ಗ್ರಂಥಾಲಯದ ಅವಧಿಯನ್ನು ನಿಗದಿಪಡಿಸಲು ಸಲಹೆ ನೀಡಲಾಗಿದೆ. ಈ ಕಛೇರಿಯಿಂದ ಪ್ರಕಟಿಸಲಾಗಿರುವ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ನೀಡಲಾಗಿರುವ ಸಲಹಾತ್ಮಕ ವೇಳಾಪಟ್ಟಿಯಲ್ಲಿ ಈ ಕೆಳಕಂಡಂತೆ ನಿಗಧಿಯಾಗಿರುವ ವಿಷಯಗಳ ಬದಲಿಗೆ ಎಲ್ಲಾ ಶಾಲೆಗಳಲ್ಲಿಯೂ ಗ್ರಂಥಾಲಯ ಅವಧಿಯನ್ನು ಅಳವಡಿಸಿಕೊಂಡು ಕೆಳಕಂಡಂತೆ ನಿರ್ವಹಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.

ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನದ ವೇಳಾ ಪಟ್ಟಿ:
ಮುಖ್ಯಶಿಕ್ಷಕರು ಗ್ರಂಥಾಲಯಗಳನ್ನು ನಿರ್ವಹಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಅವರು ಆಯ್ಕೆ ಶಿಕ್ಷಕರಿಗೆ ಗ್ರಂಥಾಲಯ ನಿರ್ವಹಣಾ ಪ್ರಭಾರ ಹಂಚುವ ಮೂಲಕ ಗ್ರಂಥಾಲಯ ನಿರ್ವಹಣೆ ಕುರಿತು ಖಚಿತಪಡಿಸಿಕೊಳ್ಳಬೇಕು. ಗ್ರಂಥಾಲಯ ನಿರ್ವಹಣೆಯ ಜವಾಬ್ದಾರಿಯನ್ನು 01ರಿಂದ 03ನೇ ತರಗತಿವರೆಗೆ ನಲಿ-ಕಲಿ ಶಿಕ್ಷಕರಿಗೆ ಮತ್ತು 04 ರಿಂದ 10ನೇ ತರಗತಿವರೆಗೆ ಭಾಷಾ (ಕನ್ನಡ/ಇಂಗ್ಲೀಷ್/ಹಿಂದಿ) ಶಿಕ್ಷಕರಿಗೆ ನೀಡುವುದು.
ಗ್ರಂಥಾಲಯದಲ್ಲಿ ಓದುವ ಚಟುವಟಿಕೆಗಳು:
ಪ್ರಾಥಮಿಕ (ತರಗತಿ 1 ರಿಂದ 5) ತರಗತಿಗಳಲ್ಲಿ ಓದುವ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಶಿಕ್ಷಕರು ಹೊಂದಿರುತ್ತಾರೆ. ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಒದುವ ಚಟುವಟಿಕೆಯ ಪರಿಚಯದಿಂದ ಸ್ವತಂತ್ರ ಓದುಗರಾಗುವವರೆಗಿನ ಮಾರ್ವಾಡಾಗುವ ಪ್ರಯಾಣವು ಬಹಳ ಮುಖ್ಯ ಅದಕ್ಕಾಗಿ ಗ್ರಂಥಾಲದಲ್ಲಿ ಶಿಕ್ಷಕರು ಓದುವ ಚಟುವಟಿಕೆಗಳನ್ನು ನೆಡೆಸಬೇಕು ಓದುವ ಚಟುವಟಿಕೆಗಳನ್ನು ನೆಡೆಸುವ ಕ್ರಮವನ್ನು ಅನುಬಂಧದಲ್ಲಿ ಕಾಣಬಹುದು.
ಮಕ್ಕಳ ಸ್ನೇಹಿ ಗ್ರಂಥಾಲಯದ ನಿರ್ವಹಣೆ:-
ಪುಸ್ತಕಗಳ ಕಲಿಕಾ ಸಾಮಾಗ್ರಿಗಳ,ದಾಸ್ತಾನು ನಿರ್ವಹಣೆ ವಹಿ ಮತ್ತು ರಿಜಿಸ್ಟರ್ ಪಾಲನೆ ಮಾಡುವುದು.
ಮನೆಯಲ್ಲಿ ಓದಲು ಮಕ್ಕಳಿಗೆ ಪುಸ್ತಕ ವಿತರಣೆಯ ದಾಖಲೆಯನ್ನು ರಿಜಿಸ್ಟ್ರರ್ ಅಥವಾ ಪ್ರತಿ ಮಗುವಿಗೆ ಪುಸ್ತಕ ವಿತರಣಾ ಕಾರ್ಡ್ ನಿರ್ವಹಿಸುವುದು.
ಗ್ರಂಥಾಲಯ ಪುಸ್ತಕ ವಿತರಣಾ ವಹಿ ನಮೂನೆ: (Issue Register / Card format)

ಪುಸ್ತಕಗಳು ಮತ್ತು ಓದುವ ಸಾಮಗ್ರಿಗಳ ನಿರ್ವಹಣೆ ಮತ್ತು ರಕ್ಷಣೆ/ದುರಸ್ತಿ/ವಿಲೇ ಮಾಡುವುದು ಕ್ರಮಬದ್ಧವಾಗಿರಬೇಕು. ಈ ಕುರಿತು ಅಗತ್ಯ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಪ್ರತಿ ವರ್ಷದ ಮಾರ್ಚ್ ಅಂತ್ಯಕ್ಕೆ ದಾಸ್ತಾನು ಪರಿಶೀಲಿಸಿ ದೃಢೀಕರಿಸುವುದು.( ಅನುಬಂಧದಂತೆ)
ಗ್ರಂಥಾಲಯದಲ್ಲಿ ಗ್ರಂಥಾಲಯ ನಿರ್ವಹಣೆ ಮತ್ತು ಪುಸ್ತಕಗಳ ಆರೈಕೆ ನಿಯಮಗಳ ಕುರಿತ ಚಾರ್ಟ್ಸ್ಗಳನ್ನು ಪ್ರದರ್ಶನ ಮಾಡುವುದು.
ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿ ಮಾರ್ಪಡಿಸಲು ಶಾಲಾ ಮಟ್ಟದಲ್ಲಿ ಅಗತ್ಯ ಕ್ರಿಯಾ ಯೋಜನೆಯನ್ನು ತಯಾರಿಸಿ ಅದರಂತೆ ಕ್ರಮವಹಿಸುವುದು.
ಶಾಲಾ ಗ್ರಂಥಾಲಯಗಳಲ್ಲಿ ಮಕ್ಕಳ ಓದುವಿಕೆ, ಗ್ರಹಿಸುವಿಕೆ ಮತ್ತು ಅನುಪಾಲನಾ ಕ್ರಮಗಳ ಕುರಿತಂತೆ ಬಲವರ್ಧನೆಗೊಳಿಸಲು ಅನುಸರಿಸಬೇಕಾದ/ವಹಿಸಬೇಕಾದ ಕ್ರಮಗಳ ವಿವರವನ್ನು ಅನುಬಂಧದಲ್ಲಿ ದಾಖಲಿಸಿ ಲಗತ್ತಿಸಿದೆ.
ಮೇಲ್ಕಂಡ ಎಲ್ಲಾ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಿ ಅನುಷ್ಠಾನಗೊಳಿಸಲು ಈ ಮೂಲಕ ಇಲಾಖೆಯ ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದೆ.ಈ ಬಗ್ಗೆ ಆದೇಶ.
ಇದನ್ನೂ ನೋಡಿ…… 58000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೀಘ್ರವೇ ಬಡ್ತಿ ಭಾಗ್ಯ!