Distribution of free shoes and socks: 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಿಸುವ ಬಗ್ಗೆ ಆದೇಶ ಪ್ರಕಟ.
Distribution of free shoes and socks: ಮೇಲೆ ಓದಲಾದ ನಿರ್ದೇಶಕರು, ಮೈನಾರಿಟಿ, ಆಯಕ್ತರ ಕಛೇರಿ, ಶಾಲಾ ಶಿಕ್ಷಣ ಇವರ ಪತ್ರದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.74 ಲಕ್ಷ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಶೂ ಮತ್ತು ಸಾಕ್ಸ್ ವಿತರಣಾ ಯೋಜನೆಯನ್ನು ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಕೆಲವು ಪರ್ಯಾಯ ಅವಕಾಶ ನೀಡುವ ಅಗತ್ಯತೆಯಿದೆ. ಮಲೆನಾಡು ಮತ್ತು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಅತಿ ಹೆಚ್ಚಿನ ಮಳೆ ಬೀಳುವುದರಿಂದ ವಿದ್ಯಾರ್ಥಿಗಳಿಗೆ ಶೂಗಳು ಸಮರ್ಪಕ ಪಾದರಕ್ಷೆ ಆಗಲಿಕ್ಕಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ ಭಾಗದಲ್ಲಿ ಅತಿ ಹೆಚ್ಚಿನ ಉಷ್ಣಾಂಶದ ವಾತಾವರಣ ಇರುವುದರಿಂದ ಶೂ, ಸೂಕ್ತ ಪಾದರಕ್ಷೆ ಎನಿಸುವುದಿಲ್ಲ. ವಾತಾವರಣದ ಸ್ಥಿತಿಗಳು ಮತ್ತು ಹಾಕಿಕೊಳ್ಳಲು ಹಾಗೂ ತೆಗೆಯಲು ಸುಲಭವಾಗುವ ದೃಷ್ಟಿಯಿಂದ ಇಂತಹ ಭಾಗದಲ್ಲಿನ ವಿದ್ಯಾರ್ಥಿಗಳು ಶೂಗಳ ಬದಲಾಗಿ ಪಾದರಕ್ಷೆ ಧರಿಸಲು ಬಯಸುವುದನ್ನು ಗಮನಿಸಿದೆ. ಈ ನಮ್ಯತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ತೀರ್ಮಾನಕ್ಕೆ ಬಿಡಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಇಪಿ 54 ಎಂಪಿಇ 2025, ಬೆಂಗಳೂರು ದಿನಾಂಕ:21:06.2025.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.68ಲಕ್ಷ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ::2202-01-109-0-03 Vidya Vikasa Scheme for Students Incentive for Students ರಡಿ ನಿಗಧಿಪಡಿಸಿರುವ ರೂ.41000.00 ಲಕ್ಷಗಳ ಅನುದಾನದಿಂದ ರೂ.11188.00 ಲಕ್ಷಗಳ ವೆಚ್ಚದಲ್ಲಿ ಉಚಿತವಾಗಿ 01 ಜೊತೆ ಶೂ ಮತ್ತು 02 ಜೊತೆ ಸಾಕ್ಸ್ಗಳನ್ನು ಒದಗಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರಿಗೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಅನುಮತಿ ನೀಡಿದೆ.
ಸದರಿ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು 2025-26ನೇ ಸಾಲಿನ ಲೆಕ್ಕಶೀರ್ಷಿಕೆ: 2202-01-109-0-03 Vidya Vikasa Scheme for Students Incentive for Students ರಡಿ ಕೆಳಕಂಡಂತೆ ಬಿಡುಗಡೆಗೊಳಿಸಲಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಅದಕ್ಕನುಗುಣವಾಗಿ ಅನುದಾನವನ್ನು ಭರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರಿಗೆ ಆದೇಶಿಸಿದೆ.

ಅನುದಾನದ ಬಳಕೆಯಲ್ಲಿ ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳು:-
1. ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಪಾದರಕ್ಷೆಯನ್ನು ಸ್ಥಳೀಯವಾಗಿ ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್ ಡಿ ಎಂ ಸಿ)ಗೆ ವಹಿಸುವುದು.
2. ಒಂದು ಜೊತೆ ಕಪ್ಪು ಬಣ್ಣದ ಶೂ ಗಳನ್ನು ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ಗಳನ್ನು ಖರೀದಿಸಿ ವಿತರಿಸುವುದು. ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್ ಗಳ ಬದಲಾಗಿ ಪಾದರಕ್ಷೆಗಳನ್ನು ಖರೀದಿಸಿ ವಿತರಿಸುವುದು.
3. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರು ಈ ಪ್ರಕ್ರಿಯೆಯನ್ನು ಎಲ್ಲ ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳು ಈ ಆದೇಶ ಹೊರಡಿಸಿದ 30 ದಿನಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಿತಕ್ಕದ್ದು.
4. ಎಲ್ಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ಗಳನ್ನು ಖರೀದಿಸಿ ವಿತರಿಸುವ ಪ್ರಕ್ರಿಯೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು (ಎಸ್.ಡಿ.ಎಂ.ಸಿ) ಪಾರದರ್ಶಕತೆ ಕಾಪಾಡಲು ಕ್ರಮವಹಿಸತಕ್ಕದ್ದು.
5. ಶೂ ಮತ್ತು ಸಾಕ್ಸ್ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಈ ಆದೇಶ ಹೊರಡಿಸಿದ ಒಂದು ವಾರದೊಳಗೆ ಎಸ್.ಡಿ.ಎಂ.ಸಿ.ಯು ಕೆಳಕಂಡಂತೆ ಖರೀದಿ ಸಮಿತಿಯನ್ನು ರಚಿಸತಕ್ಕದ್ದು:-

6. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಸಭೆ ನಡೆಸಿ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆ ಖರೀದಿ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಬೇಕು. ಈ ಉದ್ದೇಶಕ್ಕಾಗಿ ನಡೆಸುವ ಎಸ್.ಡಿ.ಎಂ.ಸಿ. ಸಭೆಯಲ್ಲಿ ಕನಿಷ್ಟ ಅರ್ಧದಷ್ಟು ಸದಸ್ಯರು ಹಾಜರಿರತಕ್ಕದ್ದು ಹಾಗೂ ಸಮಿತಿಯ ನಡಾವಳಿಯನ್ನು ವಲಯ ಸಂಪನ್ಮೂಲ ವ್ಯಕ್ತಿಗಳು ಅಥವಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಬಿ.ಆರ್.ಪಿ ಅಥವಾ ಸಿ.ಆರ್.ಪಿ) ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ತಪ್ಪದೆ ದಾಖಲಿಸತಕ್ಕದ್ದು.
7. ಸದರಿ ಸಮಿತಿಯು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಾಯಿತವಾದ, ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆ ವಿತರಿಸುವ ಸತತ 3 ವರ್ಷ ಅನುಭವವುಳ್ಳ ಕನಿಷ್ಠ ಮೂರು ಪ್ರತಿಷ್ಠಿತ ಬ್ರಾಂಡೆಡ್ ಕಂಪನಿಗಳ ಅಧಿಕೃತ ಸರಬರಾಜುದಾರರಿಂದ ಅಂದಾಜು ದರ ಪಟ್ಟಿಯನ್ನು ಪಡೆಯತಕ್ಕದ್ದು ಹಾಗೂ ಅಂದಾಜು ದರ ಪಟ್ಟಿಯ ಪ್ರತಿಗಳು, ಸರಬರಾಜುದಾರರ ವಿವರ ಮತ್ತು ಸರಬರಾಜುದಾರರ GSTIN ಸಂಖ್ಯೆಯನ್ನು ಶಾಲಾ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣದಲ್ಲಿ ಕಡ್ಡಾಯವಾಗಿ ದಾಖಲಿಸತಕ್ಕದ್ದು.
8. ಶೂಗಳ ಮೇಲ್ಪದರು ಪಾಲಿವಿನೈಲ್ 1ಪಿ.ವಿ.ಸಿ] ಕೋಟೆಡ್ ವಿಸ್ಕೋಸ್/ಪಾಲಿಯೆಸ್ಟರ್/ ಪಾಲಿಯೆಸ್ಟರ್ ಕಾಟನ್ ಫ್ಯಾಬ್ರಿಕ್ 1.5 ಎಂಎಂ ಹೊಂದಿದ ಮತ್ತು ಎಕ್ಸೆಂಡೆಡ್ ಪಾಲಿವಿನೈಲ್ ಕ್ಲೋರೈಡ್ ಪಿ.ವಿ.ಸಿ] ಸೋಲ್ ಹೊಂದಿದ ಹಾಗೂ ಪಾದರಕ್ಷೆಯ ಒಳಪದರು (Insock) ಬಟ್ಟೆ/ಫ್ಯಾಬ್ರಿಕ್ನಿಂದ ಕೂಡಿರುವುದನ್ನು (ಅಂದಾಜು 0.8 ಎಂ.ಎಂ ದಪ್ಪ) ಖರೀದಿಸುವುದು. ಎಸ್.ಡಿ.ಎಂ.ಸಿ.ಗಳು ಪಾದರಕ್ಷೆಗಳನ್ನು ಖರೀದಿಸಲು ತೀರ್ಮಾನಿಸಿದಲ್ಲಿ ವೆಲ್ ಪಾದರಕ್ಷೆಗಳನ್ನು (Velcro Sandals) ಮತ್ತು ಲೈನಿಂಗ್ ಸಾಕ್ಸ್ ಖರೀದಿಸಿ ವಿತರಿಸುವುದು. ಶೂ, ಸಾಕ್ಸ್ ಮತ್ತು ಪಾದರಕ್ಷೆಯ ವೈಶಿಷ್ಟ್ಯತೆಯ ವಿಸ್ತ್ರತವಾದ ವಿವರಗಳನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಎಲ್ಲಾ ಎಸ್.ಡಿ.ಎಂ.ಸಿ.ಯವರಿಗೆ ತಲುಪಿಸುವುದು.
9. ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಠ ಶೇ.5ರಷ್ಟು ಶಾಲೆಗಳಲ್ಲಿನ ಶೂ ಮತ್ತು ಸಾಕ್ಸ್ ಗುಣಮಟ್ಟವನ್ನು ಯಾದೃಚ್ಚಿಕವಾಗಿ ಪರೀಕ್ಷಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಒಂದು ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳುವುದು.
10. ಹಿಂದಿನ ಸಾಲುಗಳಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಬ್ರಾಂಡೆಡ್ ಶೂ ಮತ್ತು ಸಾಕ್ಸ್ ಸರಬರಾಜಾಗಿರುವ ಬಗ್ಗೆ ಸರ್ಕಾರದ ಹಂತದಲ್ಲಿ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಜಾಗರೂಕತೆಯಿಂದ ಪರಿಶೀಲಿಸಿ, ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ/ ಪ್ರತಿಷ್ಠಿತ ಬ್ರಾಂಡ್ ಗಳ ಅಧಿಕೃತ ಮಾರಾಟಗಾರರಿಂದ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸತಕ್ಕದ್ದು. ಅನಧಿಕೃತ ಮಾರಾಟಗಾರರಿಂದ ನಕಲಿ ಬ್ರಾಂಡ್/ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸಿರುವ ಬಗ್ಗೆ ದೂರುಗಳು ವರದಿಯಾದಲ್ಲಿ ತಪಾಸಣೆಗೆ ಒಳಪಡಿಸಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು/ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದು.
11. ಶೂ ಮತ್ತು ಸಾಕ್ಸ್ಗಳನ್ನು ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಸ್.ಡಿ.ಎಂ.ಸಿ ಅನುಮೋದಿತ ಸಮಿತಿಯು ಸ್ಥಳೀಯವಾಗಿ ಖರೀದಿಸುವುದು. ವಲಯ/ಕ್ಲಸ್ಟರ್ ಅಥವಾ ಜಿಲ್ಲಾ ಮಟ್ಟದಲ್ಲಿ ಕೇಂದ್ರೀಕೃತ ವ್ಯವಸ್ಥೆಯಡಿ ಖರೀದಿ ಪ್ರಕ್ರಿಯೆ ನಡೆಸುವುದನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಕೇಂದ್ರೀಕೃತ ಖರೀದಿ ಪ್ರಕ್ರಿಯೆ ನಡೆಸತಕ್ಕದ್ದಲ್ಲ.
12. ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆ ಖರೀದಿಸುವ ಶಾಲೆಗಳು/ಶಾಲಾ ಖರೀದಿ ಸಮಿತಿಯು ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಹಾಗೂ ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
13. 2025-26ನೇ ಸಾಲಿನಲ್ಲಿ ಈ ಕೆಳಕಂಡ ದರದಲ್ಲಿ ಎಸ್.ಡಿ.ಎಂ.ಸಿಗಳು ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸುವುದು. ಅಗತ್ಯವಾದ ಅನುದಾನಗಳನ್ನು ಎಸ್.ಡಿ.ಎಂ.ಸಿ.ಗಳ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ರಾಜ್ಯ ಖಜಾನೆ ತ೦ತ್ರಾ೦ಶದ ನೇರ ನಗದು ವರ್ಗಾವಣೆ ಪ್ರಕಾರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಬಿಡುಗಡೆ ಮಾಡುವುದು ಹಾಗೂ ಯಾವುದೇ ಹಂತದಲ್ಲಿ ಯಾವುದೇ ವಿಳಂಬವಿಲ್ಲದೆ ಅನುದಾನ ವರ್ಗಾವಣೆ ಆಗುವಂತೆ ಖಾತರಿಪಡಿಕೊಳ್ಳತಕ್ಕದ್ದು.
- ಅ) 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ : ತಲಾ ರೂ. 265/-
- ಆ) 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ : ತಲಾ ರೂ. 295/-
- ಇ) 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ :ತಲಾ ರೂ. 325/-
ಆದಾಗ್ಯೂ, ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಸ್ಥೆಗಳು ಈ ಉದ್ದೇಶಕ್ಕಾಗಿ ಹೆಚ್ಚುವರಿ ಹಣ ನೀಡಿದಲ್ಲಿ, ಇದನ್ನೂ ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ಗಳನ್ನು ಖರೀದಿಸಿ ವಿತರಿಸಬಹುದು.
14. ಎಸ್.ಡಿ.ಎಂ.ಸಿ.ಯವರು ವಿದ್ಯಾರ್ಥಿಗಳ ಪಾದದ ಅಳತೆ ಪಡೆದು ನೋಂದಾಯಿತ ವಿತರಕರಿಂದ ದರಪಟ್ಟಿ ಪಡೆದು,ಶೂ, ಸಾಕ್ಸ್/ ಗುಣಮಟ್ಟದ ಪಾದರಕ್ಷೆಗಳನ್ನು ನಿಯಮಾನುಸಾರ ಖರೀದಿಸಲು ಕ್ರಮವಹಿಸುವುದು. ಯಾವುದೇ ಕಾರಣಕ್ಕೂ ಖರೀದಿ ಪ್ರಕ್ರಿಯೆಯನ್ನು ವಿಳಂಬ ಮಾಡತಕ್ಕದ್ದಲ್ಲ.
15. ನಿಯಮಾನುಸಾರ ಖರೀದಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ, ಖರೀದಿ ಬಳಕೆ ಪ್ರಮಾಣ ಪತ್ರವನ್ನು ಮತ್ತು ಖರೀದಿ ಸ್ವೀಕೃತಿಗಳನ್ನು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒದಗಿಸುವುದು ಮತ್ತು ಈ ವೆಚ್ಚಗಳನ್ನು ಆಡಿಟ್ಗೆ ಒಳಪಡಿಸುವುದು. ಮಕ್ಕಳ ದಾಖಲಾತಿ ಅನುಗುಣವಾಗಿ ವೆಚ್ಚ ಮಾಡಲಾದ ಅನುದಾನವನ್ನು ಹೊರತುಪಡಿಸಿ ಉಳಿಕೆ ಅನುದಾನವನ್ನು ಎಸ್.ಡಿ.ಎಂ.ಸಿ ಗಳಿಂದ ಪಡೆಯಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಹಂತದಲ್ಲಿ ನಿಯಮಾನುಸಾರ ಕ್ರಮವಹಿಸುವುದು.
16. ಸಂಭಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಕಾರ್ಯಕ್ರಮ ಅನುಷ್ಠಾನ ಮೇಲುಸ್ತುವಾರಿ ನೋಡಿಕೊಳ್ಳುವುದು. ಗುಣಮಟ್ಟದ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳು ಖರೀದಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಈ ಪ್ರಕ್ರಿಯೆಗೆ ನಿಗದಿತ ವೇಳಾಪಟ್ಟಿಯನ್ನು ಹೊರಡಿಸಿ ವಿತರಣಾ ಕಾರ್ಯ ಪೂರ್ಣಗೊಳಿಸುವುದು. ಆಯಾ ತಾಲ್ಲೂಕು ಮತ್ತು ಜಿಲ್ಲೆಯ ಶಾಲಾವಾರು ಬಳಕೆ ಪ್ರಮಾಣ ಪತ್ರಗಳನ್ನು, ಪೂರ್ಣ ಕ್ರೋಢೀಕೃತ ವರದಿಯೊಂದಿಗೆ ನಿಗದಿತ ಸಮಯದೊಳಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಸಲ್ಲಿಸುವುದು.
17. ಸದರಿ ಕಾರ್ಯಕ್ರಮದ ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ನಿಗಧಿಪಡಿಸುವುದು ಹಾಗೂ ಭರಿಸಲಾದ ವೆಚ್ಚದ ವಿವರಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಅವಲೋಕನ (New Decision Supportive System) ತಂತ್ರಾಂಶದಲ್ಲಿ ಇಂದೀಕರಿಸುವುದು.
18. ಸದರಿ ಕಾರ್ಯಕ್ರಮದ ಭೌತಿಕ ಪ್ರಗತಿಯನ್ನು ತಂತ್ರಾಶದಲ್ಲಿ ಶಾಲಾವಾರು ಇಂದೀಕರಿಸುವುದು ಹಾಗೂ ಬಳಕೆಯಾಗದ ಅನುದಾನದ ವಿವರಗಳನ್ನು ಸರ್ಕಾರಕ್ಕೆ ವರದಿ ಮಾಡತಕ್ಕದ್ದು.
19. ಸದರಿ ಆದೇಶವನ್ನು ಹಾಗೂ ಸಂಬಂಧಿತ ಎಲ್ಲ ಆರ್ಥಿಕ, ಭೌತಿಕ ಪ್ರಗತಿ ವರದಿಗಳನ್ನು ಶಾಲಾ ಶಿಕ್ಷಣ ಇಲಾಖಾ ವೆಬ್ಸೈಟ್ ನಲ್ಲಿ ತಪ್ಪದೇ ಪ್ರಕಟಿಸಲು ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ರವರು ಕ್ರಮವಹಿಸುವುದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ 373 ವೆಚ್ಚ-8/2024 ದಿನಾಂಕ: 20..06.2024 ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಆಇ 01 ಟಿ ಎಫ್ ಪಿ 2025, ದಿನಾಂಕ:02.04.2025ರ ಆದೇಶದಡಿ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.