Child Care Leave: ಶಿಶುಪಾಲನಾ ರಜೆ ನಿಯಮಾವಳಿ,ಮಹಿಳಾ ನೌಕರರಿಗೆ ಇಡೀ ಸೇವಾವಧಿಯಲ್ಲಿ 180 ದಿನ ಶಿಶುಪಾಲನಾ ರಜೆ ಮಂಜೂರು

Child Care Leave Information:

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ (Child Care Leave) ಮಂಜೂರು ಮಾಡುವ ಕುರಿತು ಆದೇಶ

ದಿನಾಂಕ: 21.6.2021ರ ಸರ್ಕಾರಿ ಆದೇಶ ಸಂಖ್ಯೆ: BC 4(C) ಸೇನಿಸೇ 2021ರ ರೀತ್ಯಾ ಮಹಿಳಾ ನೌಕರರಿಗೆ ಇಡೀ ಸೇವಾವಧಿಯಲ್ಲಿ 180 ದಿನ ಶಿಶುಪಾಲನಾ ರಜೆ ಮಂಜೂರು ಮಾಡಲಾಗುತ್ತದೆ. ಈ ಆದೇಶದಂತೆ ಜಾರಿಯಾದ ದಿನಾಂಕದ ನಂತರ ಮಗು ಜನಿಸಬೇಕೆಂದಿಲ್ಲ. ಆದರೆ, ಅತ್ಯಂತ ಕಿರಿಯ ಮಗುವಿಗೆ 18 ವರ್ಷವಾಗುವವರೆಗೆ ಈ ರಜೆ ಸೌಲಭ್ಯ. ಆದ್ದರಿಂದ 17 ವರ್ಷದ ಮಗು ಇದ್ದರೂ ಈ ರಜೆ ಪಡೆಯಬಹುದು.

ಪ್ರಸ್ತಾವನೆ:

ಮೇಲೆ ಓದಲಾದ(1)ರ ಆದೇಶದಲ್ಲಿ ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರದ ಆಧಾರದ ಮೇಲೆ ಕೆಲವು ಷರತ್ತಿಗೊಳಪಟ್ಟು ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ ಇಡೀ ಸೇವಾವಧಿಯಲ್ಲಿ ಎರಡು ವರ್ಷಗಳ ಅವಧಿಗೆ ಅಂದರೆ 730 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗಿದೆ.

ಪ್ರಸಕ್ತ ಸರ್ಕಾರವು 2021-22ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-37ರಲ್ಲಿ ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಘೋಷಿಸಿದ್ದು, ಈ ಕುರಿತಂತೆ ರಾಜ್ಯ ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಈ ಕೆಳಕಂಡ ಷರತ್ತುಗಳ ಮೇರೆಗೆ ಇಡೀ ಸೇವಾವಧಿಯಲ್ಲಿ ಗರಿಷ್ಟ ಆರು ತಿಂಗಳವರೆಗೆ ಅಂದರೆ 180 ದಿನಗಳ “ಶಿಶುಪಾಲನಾ ರಜೆ”ಯನ್ನು, ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ಮಂಜೂರು ಮಾಡತಕ್ಕದ್ದು.

i) ಮಹಿಳಾ ಸರ್ಕಾರಿ ನೌಕರಳು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ, ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಈ ರಜೆಯ ಸೌಲಭ್ಯಕ್ಕೆ ಅರ್ಹರಾಗತಕ್ಕದ್ದು.

ii) ಈ ರಜೆಯ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟ ಪೂರ್ವದಲ್ಲಿ ಪಡೆಯಲರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗತಕ್ಕದ್ದು.

iii) ಪ್ರತಿ ಬಾರಿಯ ಈ ರಜೆ ಮಂಜೂರಾತಿಯು ಕನಿಷ್ಟ 15 ದಿನಗಳಿಗಿಂತ ಕಡಿಮೆ ಇರಬಾರದು.

iv) ಮಹಿಳಾ ಸರ್ಕಾರಿ ನೌಕರಳು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ, ನಿಯಮಾನುಸಾರ ಪಡೆಯಲರ್ಹವಿರುವ ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದು.

v) ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯತಕ್ಕದ್ದಲ್ಲ. ಉಪಯೋಗಿಸಿಕೊಳ್ಳದ ಈ ಸೌಲಭ್ಯದ ಸಂಬಂಧದಲ್ಲಿನ ರಜೆಯನ್ನು ಗಳಿಕೆ ರಜೆ ಲೆಕ್ಕಕ್ಕೆ ಜಮೆಗೊಳಿಸಲು/ನಗದೀಕರಿಸಲು ಅವಕಾಶವಿರುವುದಿಲ್ಲ.

vi) ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಅರ್ಹರಾದ ಯಾವುದೇ ನೌಕರಳು ಆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಅದರೊಂದಿಗೆ ಈ ಯೋಜನೆಯಡಿಯಲ್ಲಿನ ಸೌಲಭ್ಯಕ್ಕೂ ಅರ್ಹರಾಗತಕ್ಕದ್ದಲ್ಲ.

vii) ಶಿಶುಪಾಲನಾ ರಜೆಯ ಮಂಜೂರಾತಿಗಾಗಿ ಯಾವುದೇ ಪೂರಕ ದಾಖಲೆಗಳನ್ನು ಪಡೆಯುವ ಅವಶ್ಯಕತೆಯಿರುವುದಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು.

viii) ಈ ಪೂರ್ವದಲ್ಲಿ ಮಂಜೂರಾಗಿರುವ ಯಾವುದೇ ಬಗೆಯ ರಜೆಯನ್ನು ಶಿಶುಪಾಲನಾ ರಜೆಯಾಗಿ ಪರಿವರ್ತಿಸತಕ್ಕದ್ದಲ್ಲ. ಈ ಆದೇಶದಡಿಯಲ್ಲಿನ ಸೌಲಭ್ಯವು ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೊಳ್ಳತಕ್ಕದ್ದು.

ix) ಈ ರಜೆಯನ್ನು ಮಂಜೂರು ಮಾಡುವ ಸಕ್ಷಮವಾದ ಪ್ರಾಧಿಕಾರವು ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಸೇವಾ ಪುಸ್ತಕದಲ್ಲಿ ದಾಖಲು ಮಾಡುವುದು ಮತ್ತು ನಿಗಧಿತ ನಮೂನೆಯಲ್ಲಿ ಲೆಕ್ಕವಿಡಬೇಕು.(ವಿಶೇಷ ಮಕ್ಕಳ ಶಿಶುಪಾಲನಾ ರಜೆಯ ಲೆಕ್ಕವನ್ನಿಡುವ ಪ್ರಪತ್ರದ ಮಾದರಿಯಲ್ಲಿ)

ಈ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಿಗೆ ಪ್ರತ್ಯೇಕವಾಗಿ ಸೂಕ್ತ ತಿದ್ದುಪಡಿ ತರಲಾಗುವುದು.

 

CLICK HERE TO DOWNLOAD ORDER

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!