KARTET -2025 ಟಿಇಟಿ: ನೇಮಕ ವಿಧಾನದ ಬಗ್ಗೆ ಲೇಟೆಸ್ಟ್ ಮಾಹಿತಿ
KARTET -2025: ಶಿಕ್ಷಕರ ಅರ್ಹತೆ ಮತ್ತು ಬೋಧನಾ ಸಾಮರ್ಥ್ಯವನ್ನು ಖಚಿತಪಡಿಸುವ ಉದ್ದೇಶದಿಂದ ‘ಶಿಕ್ಷಕರ ಅರ್ಹತಾ ಪರೀಕ್ಷೆ’
(ಟಿಇಟಿ)ಯನ್ನು ನಡೆಸಲಾಗುತ್ತಿದೆ. ಮಕ್ಕಳ ಉಚಿತ ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ ಸಿಟಿಇ) ಆದೇಶದಂತೆ ಈ ಪರೀಕ್ಷೆ ನಡೆಯಲಿದ್ದು, ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರಾಗಬಯಸುವವರು ಈ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಿರಲೇಬೇಕು. ಶಿಕ್ಷಣದ ರಾಷ್ಟ್ರೀಯ ಮಾದರಿಯನ್ನು ಅಳವಡಿಸಿಕೊಂಡಿರುವ ರಾಜ್ಯ ಸರಕಾರ 2014ರಿಂದ ಶಿಕ್ಷಕರ ನೇಮಕಾತಿಗೆ ಈ ಅರ್ಹತಾ ಪರೀಕ್ಷೆಯನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಿದ್ದು, ಪ್ರತಿವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುತ್ತಿದೆ. ರಾಜ್ಯ ಸರಕಾರವು ಈ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕಕ್ಕೆ (ಸಿಎಸಿ) ವಹಿಸಿದೆ. ಈಗ 2025ನೇ ಸಾಲಿನ ಅರ್ಹತಾ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 9 ಕೊನೆಯ ದಿನ. ಈ ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
▪️ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಎನ್ಟಿಎ-ಯುಜಿಸಿನೆಟ್) ನಡೆಸುವ ‘ನೆಟ್’, ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮಾದರಿಯಲ್ಲಿಯೇ ಟಿಇಟಿ ಕೂಡ ನಡೆಯುತ್ತಿದೆ. ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ನೀಡಲಾಗಿರುತ್ತದೆ.
▪️ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ಅಂಕ ಪಡೆಯಲು ಬಯಸುವವರು ಮರುಪರೀಕ್ಷೆಯನ್ನು ಸಹ ತೆಗೆದುಕೊಳ್ಳಬಹುದು. ಈ ಪರೀಕ್ಷೆಯ ಅಂಕಗಳನ್ನು ನೇಮಕಾತಿಗೆ ಮಾನದಂಡವನ್ನಾಗಿ ಅನುಸರಿಸಲಾಗುತ್ತದೆ.
▪️ಎನ್ಸಿಟಿಇಯಿಂದ ಮಾನ್ಯತೆ ಪಡೆದಂತಹ ಡಿಪ್ಲೊಮಾ/ ಪದವಿ ಕೋರ್ಸುಗಳನ್ನು ಮಾತ್ರ ವಿದ್ಯಾರ್ಹತೆಯಲ್ಲಿ ಪರಿಗಣಿಸಲಾಗಿದೆ.
▪️ಎರಡು ವರ್ಷ ಡಿ.ಇಡಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಹಾಗೂ ಎರಡು ವರ್ಷದ ಬಿ.ಇಡಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದ್ದು, ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಮಾಣಪತ್ರ ಮಾನ್ಯ ಮಾಡಲಾಗುತ್ತದೆ.
▪️ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ನಡೆಸಲ್ಪಡುತ್ತಿರುವುದರಿಂದ ಅರ್ಹತಾ ಪ್ರಮಾಣಪತ್ರವು ಅನುದಾನರಹಿತ, ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೆ ಅನ್ವಯಿಸುತ್ತದೆ.
▪️ಅಭ್ಯರ್ಥಿಯು ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿಯು ಅಂತಿಮವಾಗಿರುತ್ತದೆ. ನಂತರದಲ್ಲಿ ಯಾವುದೇ ಮಾಹಿತಿಗಳ ಬದಲಾವಣೆಗೆ ಅವಕಾಶವಿರುವುದಿಲ್ಲ. ಆನ್ಲೈನ್ ಅರ್ಜಿಯಲ್ಲಿನ ಅಭ್ಯರ್ಥಿಗಳ ಮಾಹಿತಿ ಬದಲಾವಣೆ/ತಿದ್ದುಪಡಿ ಕುರಿತಂತೆ ಯಾವುದೇ ಮನವಿಯನ್ನು ಸ್ವೀಕರಿಸುವುದಿಲ್ಲ.
▪️ಅಭ್ಯರ್ಥಿಗಳು ಒಮ್ಮೆ ಪಾವತಿಸಿರುವ ಪರೀಕ್ಷಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿಯೂ ಮರು ಪಾವತಿ ಮಾಡುವುದಿಲ್ಲ. ಅಥವಾ ಮುಂದಿನ ಪರೀಕ್ಷೆಗಳಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ.
▪️ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಯಲ್ಲಿ ಏನಾದರೂ ತಿದ್ದುಪಡಿ ಮಾಡಬೇಕಾದಲ್ಲಿ ಪರೀಕ್ಷಾ ಶುಲ್ಕ ಕಟ್ಟುವುದಕ್ಕಿಂತ ಮೊದಲು ಮಾಡಬೇಕಾಗಿರುತ್ತದೆ. ನಂತರದಲ್ಲಿ ಯಾವುದೇ ತಿದ್ದುಪಡಿ/ಬದಲಾವಣೆಗೆ ಅವಕಾಶವಿರುವುದಿಲ್ಲ.
▪️ಅರ್ಜಿಯಲ್ಲಿ ಭಾಷೆ ಆಯ್ಕೆ ಮಾಡುವಾಗ ಭಾಷೆ-1 ಅನ್ನು ಹೊರತುಪಡಿಸಿ ಲಭ್ಯವಿರುವ ಭಾಷಾ ಆಯ್ಕೆಗಳಲ್ಲಿ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆಮಾಡಿಕೊಂಡು ಅದೇ ವಿಷಯವನ್ನು ದೃಢೀಕರಣ ಪೇಜ್ನಲ್ಲಿ ನಮೂದಿಸಬೇಕು. ಭಾಷೆ-1 ಮತ್ತು ಭಾಷೆ-2 ಒಂದೇ ಭಾಷೆಯಾಗಿರದಂತೆ ಎಚ್ಚರವಹಿಸಬೇಕು. ಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿಯಲ್ಲಿ ಭಾಷೆ-1 ಮತ್ತು ಭಾಷೆ-2 ನ್ನು ಸ್ಪಷ್ಟವಾಗಿ ನಮೂದಿಸಬೇಕಿರುತ್ತದೆ.
▪️ಅರ್ಹತಾ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೂ ಅಂಕಪಟ್ಟಿ ನೀಡಲಾಗುತ್ತದೆ. ಆದರೆ, ಅಂಕಪಟ್ಟಿಯ ಯಾವುದೇ ಮುದ್ರಿತ ಪ್ರತಿ ನೀಡಲಾಗುವುದಿಲ್ಲ. ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ತಿಳಿಸಿರುವಂತೆ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
▪️ಪತ್ರಿಕೆ-1ರಲ್ಲಿನ ಎಲ್ಲಾ ಪ್ರಶ್ನೆಗಳು ಎನ್ ಸಿಇಆರ್ಟಿ / ರಾಜ್ಯದ 1ರಿಂದ 8ನೇ ತರಗತಿಗೆ ಸಂಬಂಧಿಸಿದ ಪಠ್ಯವಸ್ತುವನ್ನು ಆಧರಿಸಿರುತ್ತದೆ. ಪ್ರಶ್ನೆಗಳ ಕಠಿಣತೆಯ ಮಟ್ಟ ಪ್ರೌಢ ಹಂತಕ್ಕೆ (ಹತ್ತನೇ ತರಗತಿಯವರೆಗೆ) ಸೀಮಿತವಾಗಿರುತ್ತದೆ. ಅಂತೆಯೇ ಪತ್ರಿಕೆ-2ರಲ್ಲಿನ ಎಲ್ಲಾ ಪ್ರಶ್ನೆಗಳು ಎನ್ ಸಿಇಆರ್ಟಿ / ರಾಜ್ಯದ 6ರಿಂದ10ನೇ ತರಗತಿಗೆ ಸಂಬಂಧಿಸಿದ ಪಠ್ಯವಸ್ತುವನ್ನು ಆಧರಿಸಿದ್ದು, ಆದರೆ, ಪ್ರಶ್ನೆಗಳ ಕಠಿಣತೆಯ ಮಟ್ಟ ಹಿರಿಯ ಪ್ರೌಢ ಹಂತಕ್ಕೆ (ಪಿಯುಸಿ) ಸೀಮಿತವಾಗಿರುತ್ತದೆ.
▪️ಹೇಗೆ ಅರ್ಜಿ ಸಲ್ಲಿಸಬೇಕೆಂಬ ಮಾಹಿತಿಯ ಕೈಪಿಡಿಯನ್ನು ಮತ್ತು ಈ ಪರೀಕ್ಷೆಯ ಸಿಲಬಸ್ ಹಾಗೂ ರೆಫರೆನ್ಸ್ ಬುಕ್ಗಳ ಪಟ್ಟಿಯನ್ನು ಇಲಾಖೆಯ ವೆಬ್ನಲ್ಲಿ ಅಧಿಸೂಚನೆಯೊಂದಿಗೆ ನೀಡಲಾಗಿದೆ. ಇವುಗಳನ್ನೂ ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಿ.
▪️ನಿಗದಿಪಡಿಸಿದ ಅರ್ಹತಾ ಅಂಕಗಳು:
ಟಿಇಟಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯಲು ಸಾಮಾನ್ಯ ಪ್ರವರ್ಗ, ಪ್ರವರ್ಗ 2ಎ, ಪ್ರವರ್ಗ 2ಬಿ ಮತ್ತು ಪ್ರವರ್ಗ 3ಬಿಯವರು ಕನಿಷ್ಠ ಶೇಕಡಾ 60 ಅಂಕವನ್ನು ಗಳಿಸಲೇಬೇಕು. ಇತರ ವರ್ಗದವರು ಶೇ.55 ಅಂಕ ಗಳಿಸಿದರೆ ಅರ್ಹತೆ ಪಡೆಯುತ್ತಾರೆ. ಯಾವುದೇ ಅರ್ಹತೆಯನ್ನು ನಿಗದಿಪಡಿಸುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಶೇಷಚೇತನರಿಗೆ ಶೇ.05ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದೇ ಮಾದರಿಯನ್ನು ಈ ಪರೀಕ್ಷೆಯಲ್ಲಿಯೂ ಅಳವಡಿಸಲಾಗಿದೆ. ಒಬ್ಬ ಅಭ್ಯರ್ಥಿಯು ಶಿಕ್ಷಕನಾಗಿ ನೇಮಕ ಹೊಂದಲು ಈ ಅರ್ಹತಾ ಪರೀಕ್ಷೆಯಲ್ಲಿ ಮೇಲಿನಂತೆ ಕನಿಷ್ಠ ಅಂಕಗಳನ್ನು ಗಳಿಸಬೇಕಾದುದು ಕಡ್ಡಾಯ. ಈ ಕನಿಷ್ಠ ಅಂಕಗಳು ಕೇವಲ ಅರ್ಹತೆಯನ್ನು ನಿರ್ಧರಿಸುತ್ತವೆ. ಆದರೆ, ಅಭ್ಯರ್ಥಿಯು ಎಸ್ಸೆಸ್ಸೆಲ್ಸಿ/ ಪಿ.ಯು.ಸಿ.ಯಲ್ಲಿ ಗಳಿಸಿದ ಅಂಕಗಳು ಟಿ.ಸಿ.ಎಚ್./ ಡಿ.ಎಡ್.ನಲ್ಲಿ ಗಳಿಸಿದ ಅಂಕಗಳು+ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಸರಾಸರಿ ಅಂಕವನ್ನು ಪರಿಗಣಿಸಿ ಆಯ್ಕೆ ನಡೆಯಬಹುದು. ಆದ್ದರಿಂದ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ ಅಂಕದ ಮೇಲ್ಪಟ್ಟು ಅತಿ ಹೆಚ್ಚು ಅಂಕ ಗಳಿಸುವುದು ನೇಮಕಾತಿಯ ದೃಷ್ಟಿಯಿಂದ ಬಹಳ ಅಗತ್ಯ.
CLICK HERE MORE INFORMATION