PM POSHAN SCHEME ಯೋಜನೆಯ ಅಡುಗೆ ಸಿಬ್ಬಂದಿ: ಅಡುಗೆ ಕೇಂದ್ರದಲ್ಲಿ ನಿರ್ವಹಿಸಬೇಕಾದ/ನಿರ್ವಹಿಸಬಾರದ ಅಂಶಗಳು-2025

PM POSHAN SCHEME ಯೋಜನೆಯ ಅಡುಗೆ ಸಿಬ್ಬಂದಿ: ಅಡುಗೆ ಕೇಂದ್ರದಲ್ಲಿ ನಿರ್ವಹಿಸಬೇಕಾದ/ನಿರ್ವಹಿಸಬಾರದ ಅಂಶಗಳು-2025

PM POSHAN SCHEME ಯೋಜನೆಯ ಅಡುಗೆ ಸಿಬ್ಬಂದಿ: ಅಡುಗೆ ಕೇಂದ್ರದಲ್ಲಿ ನಿರ್ವಹಿಸಬೇಕಾದ/ನಿರ್ವಹಿಸಬಾರದ ಅಂಶಗಳು-2025: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ-1 ರ ಸುತ್ತೋಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳು ಪ್ರತಿ ದಿನ ಶಾಲಾ ಅಡುಗೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಮತ್ತು ನಿರ್ವಹಿಸಬಾರದ ಅಂಶಗಳ ಕುರಿತು ಮಾಹಿತಿಯನ್ನು ನೀಡಲಾಗಿತ್ತು.

ಸದರಿ ಅಂಶಗಳೊಂದಿಗೆ ಹೆಚ್ಚುವರಿಯಾಗಿ ಈ ಸುತ್ತೋಲೆಯೊಂದಿಗೆ ಕೆಳಕಂಡ ನಿರ್ವಹಿಸಬೇಕಾದ ಮತ್ತು ನಿರ್ವಹಿಸಬಾರದ ಅಂಶಗಳನ್ನು ಶಾಲಾ ಅಡುಗೆ ಕೇಂದ್ರದಲ್ಲಿ ಪ್ರತೀ ದಿನ ಯಾವುದೇ ಲೋಪವಿಲ್ಲದೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ ಹಾಗೂ ಈ ಅಂಶಗಳ ಅನುಪಾಲನೆ ಕುರಿತು ಶಾಲಾ ಮುಖ್ಯ ಶಿಕ್ಷಕರು, ಸಹಾಯಕ ನಿರ್ದೇಶಕರು, ಪಿ.ಎಂ ಪೋಷಣೆ ಮತ್ತು ಶಿಕ್ಷಣಾಧಿಕಾರಿಗಳು, ಪಿ.ಎಂ. ಪೋಷಣ್ ರವರು ತಪ್ಪದೇ ಪ್ರತಿ ನಿತ್ಯ ಮೇಲ್ವಿಚಾರಣೆ ಮಾಡಿ ದಾಖಲೆ ನಿರ್ವಹಿಸುವುದು ಮುಖ್ಯವಾಗಿದೆ.

PM POSHAN SCHEME: ಪ್ರತಿ ದಿನ ಶಾಲಾ ಅಡುಗೆ ಕೇಂದ್ರಗಳಲ್ಲಿ ಅಡುಗೆ ಸಿಬ್ಬಂದಿ ವರ್ಗದವರು ಮಾಡಬೇಕಾದ ಕೆಲಸಗಳು (Dos):

1. ಅಡುಗೆ ಸಿಬ್ಬಂದಿಯು ಸಕಾಲಕ್ಕೆ ಕೆಲಸಕ್ಕೆ ಹಾಜರಾಗುವುದು. ಹಾಗೂ ಕೆಲಸಕ್ಕೆ ಬರುವ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಚತೆ, ಸ್ವಚ್ಚವಾದ ಬಟ್ಟೆಗಳನ್ನು ಧರಿಸುವುದು, ಕೂದಲು ಹಾರಾಡದಂತೆ ಬಾಚಿ ಮೇಲಕ್ಕೆ ಕಟ್ಟಿರುವುದು ಮುಂತಾದ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು.

2. ವೈಯಕ್ತಿಕ ಸ್ವಚ್ಚತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ವೈಯಕ್ತಿಕ ಆರೋಗ್ಯ ಹಾಗೂ ದೈಹಿಕ ಸುಸ್ಥಿತಿಯ ಬಗ್ಗೆ ಸ್ಥಳೀಯ ಸರ್ಕಾರಿ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ಖಾತ್ರಿ ಪಡಿಸಿಕೊಂಡಿರುವ ಪ್ರಮಾಣ ಪತ್ರವನ್ನು ಪಡೆದು ಶಾಲೆಯ ಮುಖ್ಯಸ್ಥರಿಗೆ ಸಲ್ಲಿಸಬೇಕು.

3. ಬಿಸಿಹಾಲು ಸಿದ್ದಪಡಿಸಿ ವಿತರಿಸಲು ಬೆಳಗ್ಗೆ ಸರಿಯಾದ ಸಮಯಕ್ಕೆ ಆಗಮಿಸಿ ಅಡುಗೆಕೋಣೆ ಸ್ವಚ್ಚಗೊಳಿಸಿಕೊಂಡು ಸ್ವಚ್ಚಗೊಳಿಸಿದ ಪಾತ್ರೆಯಲ್ಲಿ ವಾರದ 5 ದಿನಗಳಿಗೆ ಪ್ರತಿ ವಿದ್ಯಾರ್ಥಿಗೆ ಬೆಳಗಿನ ಪ್ರಾರ್ಥನಾ ಸಮಯದಲ್ಲಿ 5 ಗ್ರಾಂ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪೌಡರ್ ನ್ನು ಬಿಸಿ ಹಾಲಿನೊಂದಿಗೆ ಬೆರೆಸಿ ಕುದಿಸಿದ ಮಿಶ್ರಣವನ್ನು 150 ಮಿ.ಲೀ ಪ್ರಮಾಣದಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಲೋಟದಲ್ಲಿಯೇ ಸ್ವಚ್ಚಗೊಳಿಸಿದ ಆವರಣದಲ್ಲಿ ಶಾಲಾ ಮಕ್ಕಳನ್ನು ಸಾಲಾಗಿ ಕುಳ್ಳಿರಿಸಿ ವಿತರಿಸಿದ ನಂತರ ಬಿಸಿಯೂಟ ಚಟುವಟಿಕೆಗಳನ್ನು ಆರಂಭಿಸುವುದು.

4. ಪ್ರತಿ ನಿತ್ಯ ಬಿಸಿಯೂಟ ಸಿದ್ದಪಡಿಸಿದ ನಂತರ ಇಲ್ಲವೇ ಎನ್.ಜಿ.ಓ. ನಿಂದ ಸ್ವೀಕರಿಸಿ ಸಿದ್ಧಪಡಿಸಿರುವ ಆಹಾರವನ್ನು ಮುಖ್ಯ ಅಡುಗೆಯವರು ತಪ್ಪದೇ ಬಿಸಿಯೂಟವನ್ನು ಶಾಲಾ ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಆಹಾರದ ಶುಚಿ-ರುಚಿ ಪರೀಕ್ಷಿಸಿ ಉತ್ತಮ ಗುಣಮಟ್ಟವನ್ನು ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ತಮ್ಮ ಅಭಿಪ್ರಾಯವನ್ನು ಶುಚಿ-ರುಚಿ ಪುಸ್ತಕದಲ್ಲಿ ದಾಖಲಿಸಿ ಸಹಿ ಮಾಡಿ ದಿನಾಂಕ, ಸಮಯವನ್ನು ನಮೂದಿಸಬೇಕು. ಇದು ಅಡುಗೆ ಸಿಬ್ಬಂದಿಗೆ ಕಡ್ಡಾಯವಾಗಿರುತ್ತದೆ. ನಂತರವೇ ಆಹಾರವನ್ನು ಮಕ್ಕಳಿಗೆ ವಿತರಿಸಬೇಕು.

5. ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಸೌಹಾರ್ಧತೆ ಹಾಗೂ ಕಾಳಜಿಯಿಂದ ವರ್ತಿಸುವುದು.

6. ಹಾಲಿನ ಪುಡಿ ತುಂಬಿರುವ ಪೊಟ್ಟಣವನ್ನು ಹಾಗೂ ರಾಗಿ ಹೆಲ್ತ್ ಮಿಕ್ಸ್ ಪೌಡರ್ ನ ಪ್ಯಾಕೆಟ್‌ನ್ನು ತೆರೆದಲ್ಲಿ /ತೆರೆದು ಅಪೂರ್ಣವಾಗಿ ಬಳಸಿದಲ್ಲಿ, ಉಳಿದ ಪ್ರಮಾಣವಿರುವ ಪೊಟ್ಟಣವನ್ನು ಏರ್ ಟೈಟ್ ಸ್ಟೀಲ್ /ಕ್ಲೋಸ್ ಕಂಟೈನರ್/ ಸ್ಟೀಲ್ ಡಬ್ಬಿಯಲ್ಲಿಯೇ ಇಟ್ಟು ಮುಚ್ಚಳ ಹಾಕಿ ಬಳಸಬೇಕು. ಅದರ ಗುಣಮಟ್ಟ ಹಾಗೂ ಸ್ವಾದಿಷ್ಠತೆ ನಾಶವಾಗದಂತೆ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು.

7. ಆಗಾಗ್ಗೆ ಒಣ ಬಟ್ಟೆಯಿಂದ ಅಡುಗೆ ಕೋಣೆಯ ನೆಲ ಒರೆಸಿಕೊಳ್ಳುವುದು ಹಾಗೂ ಅಡುಗೆ ಕೋಣೆಯನ್ನು ಸದಾ ಸ್ವಚ್ಚವಾಗಿಟ್ಟುಕೊಳ್ಳುವುದು.

8. ಪ್ರತಿ ದಿನ ಶಾಲೆಗೆ ಬಂದ ಕೂಡಲೇ ಮಕ್ಕಳು ಕುಡಿಯುವ ನೀರು ಮತ್ತು ಬಿಸಿಯೂಟ ಸಿದ್ಧತೆಗಾಗಿ ಬಳಸುವ ನೀರಿನ ವಾಸನ ಸ್ವಚ್ಚತೆಯನ್ನು ಪರಿಶೀಲಿಸಿಕೊಳ್ಳುವುದು ಕಡ್ಡಾಯ.ವ್ಯತ್ಯಯವಿದ್ದಲ್ಲಿ ಕೂಡಲೇ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿ ಅವಘಡವಾಗುವುದನ್ನು ತಡೆಗಟ್ಟುವುದು.

9. ದಿನಕ್ಕೆ ಒಂದು ಸಾರಿ ಇಲ್ಲವೇ ವಾರಕ್ಕೊಮ್ಮೆ ಅಡುಗೆ ಮನೆಗೆ ನೀರು ಪೂರೈಸುವ ನೀರಿನ ಮೂಲವಾಗಿರಬಹುದಾದ ಓವರ್ ಹೆಡ್ ಟ್ಯಾಂಕ್, ನೆಲದ ಹಂತದಲ್ಲಿರುವ ನೀರಿನ ಸಂಪು. ನೀರಿನ ಸಂಗ್ರಹದ ಯಾವುದೇ ಮೂಲವನ್ನು ಸ್ವಚ್ಚವಾಗಿರಿಸಿಕೊಂಡಿರಬೇಕು. ಆಗಾಗ್ಗೆ ಡೀಪ್ ಕ್ಲೀನಿಂಗ್ ಮಾಡಿಸಿ ಸ್ವಚ್ಚವಾಗಿ ನೀರು ಸಂಗ್ರಹವಾಗಿರುವಂತೆ ನೋಡಿಕೊಳ್ಳುತ್ತಿರಬೇಕು. ಸ್ವಚ್ಛತೆಗೊಳಿಸಿದ ದಿನಾಂಕವನ್ನು ತಪ್ಪದೇ ನಮೂದಿಸಬೇಕು.

10. ಅಡುಗೆ ಕೋಣೆಯನ್ನು ಪ್ರವೇಶಿಸಿದಾಗ ಏನಾದರೂ ಗ್ಯಾಸ್ ಸಿಲೆಂಡರ್ ನಿಂದ ಎಲ್.ಪಿ.ಜಿ. ಅನಿಲದ ಸೋರುವಿಕೆಯ ವಾಸನೆ ಬರುತ್ತಿದೆಯೇ? ಎಂದು ಸೂಕ್ಷ್ಮವಾಗಿ ಗ್ರಹಿಸುವುದು, ಗ್ಯಾಸ್ ಪೈಪ್, ಸ್ಪೋವ್ ಬರ್ನಅ್ರನ್ನು ಪರಿಶೀಲಿಸಿಕೊಂಡು ಸಂಪರ್ಕ ವ್ಯವಸ್ಥೆಯು ಸುಸ್ಥಿತಿಯಲ್ಲಿರುವುದನ್ನು, ಯಾವುದೇ ಅಪಾಯವಿಲ್ಲವೆಂದು ಖಾತ್ರಿ ಪಡಿಸಿಕೊಳ್ಳುವುದು, ನಂತರವೇ ರೆಗ್ಯೂಲೇಟರ್ ಆನ್ ಮಾಡಿ ಗ್ಯಾಸ್ ಸ್ಟೋವ್ ಅನ್ನು ಹಚ್ಚಿಕೊಂಡು ಸಮರ್ಪಕವಾಗಿ ಗ್ಯಾಸ್ ಬಳಸುವುದು. ಗ್ಯಾಸ್ ಲೀಕೇಜ್ ಆಗದಂತೆ ನೋಡಿಕೊಳ್ಳುವುದು.

11. ಗ್ಯಾಸ್ ಸ್ಪೋವ್‌ಗಿಂತ ಸ್ವಲ್ಪ ದೂರದಲ್ಲಿ ಸಿಲಿಂಡರ್ ಇರುವಂತೆ, ಇಲ್ಲವೇ ಪಕ್ಕದ ಕೋಣೆಯಲ್ಲಿ ಇಲ್ಲವೇ ಅಡುಗೆ ಕೋಣೆಯ ಹೊರಗಡೆ ನಿರ್ಮಾಣ ಮಾಡಿರುವ ಸುರಕ್ಷಿತ ಕ್ಯಾಬಿನ್ ನಲ್ಲಿ ತುಂಬಿದ ಸಿಲಿಂಡ‌ರ್ ಇಟ್ಟು ಗ್ಯಾಸ್ ಪೈಪ್ ಲೈನ್ ಮೂಲಕ ಸಂಪರ್ಕ ಪಡೆದು ಎಲ್.ಪಿ.ಜಿ. ಗ್ಯಾಸ್‌ನ್ನು ಬಳಸುವುದು.

12. ಅಡುಗೆ ಮಾಡುವ ಮತ್ತು ವಿತರಿಸುವ ಸಂದರ್ಭದಲ್ಲಿ ಪ್ರತಿ ದಿನ ಕಡ್ಡಾಯವಾಗಿ ಏಪ್ರಾನ್ (ಕಾಟನ್ ಬಟ್ಟೆ/ಅಗ್ನಿ ನಿರೋಧಕ) ಮತ್ತು ತಲೆಗವಸು ಧರಿಸಬೇಕು.

13. ಪ್ರತಿ ಹಂತದಲ್ಲಿಯೂ ತರಕಾರಿ, ಸೊಪ್ಪುಗಳನ್ನು ಶುದ್ಧವಾದ ನೀರಿನಿಂದ ತೊಳೆದು ಅಡುಗೆಗೆ ಬಳಸಬೇಕು. ಉಗುರು ಬೆಚ್ಚಗಿನ ಅರಿಶಿನ, ಉಪ್ಪು ಬರೆಸಿದ ನೀರಿನಲ್ಲಿ ತರಕಾರಿ-ಸೊಪ್ಪುಗಳನ್ನು ತೊಳೆದು ಶುಚಿ ಗೊಳಿಸಿಕೊಳ್ಳಬೇಕು.

14. ಪ್ರತಿ ದಿನ ಅಡುಗೆ ತಯಾರಿಕೆಯ ಪೂರ್ವದಲ್ಲಿ, ಅಡುಗೆ ಸಿದ್ಧಪಡಿಸುವಾಗ ಹಾಗೂ ಅಡುಗೆ ಬಡಿಸುವಾಗ ಇಲಾಖೆಯ ಎಸ್.ಓ.ಪಿ ಯನ್ನು ಕಡ್ಡಾಯವಾಗಿ ಪಾಲಿಸಬೇಕು.

15. ಪ್ರತಿ ವಾರಕ್ಕೆ ಒಂದು ಬಾರಿಯಾದರೂ ಅಡುಗೆ ಸಿಬ್ಬಂದಿ ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಯನ್ನು ಡೀಪ್ ಕ್ಲೀನಿಂಗ್ ಮಾಡಿ ಸ್ವಚ್ಚವಾಗಿಡಬೇಕು. ಇಲಿ-ಹೆಗ್ಗಣ, ಇರುವೆ, ಜಿರಲೆ, ಕ್ರಿಮಿ-ಕೀಟಗಳು ಬಾರದಂತೆ ದಾಸ್ತಾನು ಕೊಠಡಿಯ ಒಳಗೆ ಬಿಲಗಳನ್ನು- ಯಾವುದೇ ರಂದ್ರಗಳನ್ನು ಸಿಮೆಂಟ್ ನಿಂದ ಭದ್ರವಾಗಿ ಮುಚ್ಚಬೇಕು.

16. ಮರದ ಹಲಗೆ ಇಲ್ಲವೇ ಪ್ಲಾಸ್ಟಿಕ್ ಪ್ಲಾಂಕ್‌ಗಳನ್ನು, ಬೆಂಚುಗಳನ್ನು ಬಳಸಿ ಆಹಾರ ಧಾನ್ಯಗಳ ಮೂಟೆಗಳನ್ನು ಪ್ರತ್ಯೇಕ ಗುಂಪಿನಲ್ಲಿ ಇಟ್ಟು ನಿರ್ವಹಿಸಿರಬೇಕು. ಆಹಾರ ಧಾನ್ಯಗಳ ಸುರಕ್ಷತೆಗಾಗಿ ಪ್ರತಿ ವಾರ ದಾಸ್ತಾನು ಕೊಠಡಿಯನ್ನು ಗುಡಿಸಿ, ಸ್ವಚ್ಚಗೊಳಿಸಿ ಮೂಟೆಗಳ ಜಾಗ ಬದಲಾಯಿಸುತ್ತಿರಬೇಕು.

17. ಅಡುಗೆ ಕೋಣೆಯಲ್ಲಿ ನೆಲ ಒರೆಸಲು ಬಳಸುವ ಬಟ್ಟೆಯನ್ನು ಬಳಸಿದ ಮೇಲೆ ಹೊರಗಡೆ ಬಿಸಿಲಿಗೆ ಒಣ ಹಾಕುವುದು. ತರಕಾರಿ ಸೊಪ್ಪು ಹೆಚ್ಚಿದ ಮೇಲೆ ಚಾಕು ಇಲ್ಲವೆ ಈಳಿಗೆ ಮಣೆಯನ್ನು ಶುದ್ಧ ನೀರಿನಲ್ಲಿ ತೊಳೆದಿಡುವುದು.

18. ಮೊದಲು ಬಂದ ಆಹಾರ ಧಾನ್ಯಗಳ ಚೀಲಗಳ ಮೇಲೆ ಸ್ವೀಕರಿಸಿದ ದಿನಾಂಕಗಳನ್ನು ನಮೂದಿಸುವುದು FIFO-FEFO ರಂತ ಬಳಸಿ. ಉಳಿಕೆಯಾಗದಂತೆ ನೋಡಿಕೊಳ್ಳುವುದು ಹಾಗೂ ಅನಗತ್ಯವಾಗಿ ಹೆಚ್ಚುವರಿ ಆಹಾರ ಧಾನ್ಯಗಳಿಗಾಗಿ ಬೇಡಿಕೆ ನೀಡದಂತೆ ಮಿತವ್ಯಯ ಸಾಧಿಸುವ ಹಾಗೂ ಅಪವ್ಯಯವಾಗದಂತೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವುದು ಅಡುಗೆ ಸಿಬ್ಬಂದಿಯ ಜವಾಬ್ದಾರಿಯಾಗಿರುತ್ತದೆ.

19. ಪ್ರತಿನಿತ್ಯ ಆಹಾರ ದಾಸ್ತಾನು ಕೊಠಡಿಗೆ ಅಡುಗೆ ಕೆಲಸದ ನಂತರ ಭೇಟಿ ಕೊಟ್ಟು ಮುಂದಿನ ದಿನಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಹಸನು ಮಾಡಿಕೊಂಡು ಸ್ವಚ್ಚಗೊಳಿಸಿಕೊಳ್ಳುವುದು.

20. ದಾಸ್ತಾನುವಿನಲ್ಲಿ ಇರುವ ಅಕ್ಕಿ, ಗೋಧಿ, ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ ಪ್ರಮಾಣವನ್ನು ಆಗಾಗ್ಗೆ ಪರಿಶೀಲಿಸಿಕೊಂಡು ತರಗತಿವಾರು ಸರಾಸರಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಇನ್ನೂ ಎಷ್ಟು ದಿನಗಳಿಗೆ ಲಭ್ಯವಾಗುತ್ತವೆ? ಗುಣಮಟ್ಟ ಉತ್ತಮವಾಗಿರುವುದೇ? ಎಂಬುದನ್ನು ಪರಿಶೀಲಿಸಿಕೊಂಡು ಮುಖ್ಯ ಶಿಕ್ಷಕರ ಅವಗಾಹನಗೆ ಆಗಾಗ್ಗೆ ತಂದು ಚರ್ಚಿಸುವುದು ಯೋಗ್ಯ ಕೆಲಸವಾಗಿರುತ್ತದೆ.

21. ಗುಣಮಟ್ಟ ಹಾಳಾಗದಂತೆ ನೋಡಿಕೊಳ್ಳಲು ಗೋಧಿ, ಅಕ್ಕಿ, ತೊಗರಿಬೇಳೆಯನ್ನು ಮೂಟೆಗಳಿಂದ ತೆಗೆದು ದೊಡ್ಡ ಪ್ಲಾಸ್ಟಿಕ್ ಹಾಳೆ/ಟಾರ್ಪಾಲಿನ್ ಹಾಸಿ ವಿಶಾಲವಾಗಿ ಹರಡಿ ಬಿಸಿಲಿನಲ್ಲಿ ಒಣಗಿಸಿದಲ್ಲಿ ಈ ಪದಾರ್ಥಗಳ ಬಾಳಿಕೆ/ವಾಯಿದೆ ಇನ್ನೂ ಹೆಚ್ಚು ವಾರಗಳು, ತಿಂಗಳು ಬರುವಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

22. ಅಡುಗೆ ಕೋಣೆಯೊಳಗೆ ಮರುಪೂರಣಗೊಳಿಸಿದ ದಿನಾಂಕವನ್ನು ಅಗ್ನಿನಂದಕದ ಮೇಲೆ ನಮೂದಿಸುವುದು ಕಡ್ಡಾಯ ಹಾಗೂ ನೆಲದ ಅಂತರದಿಂದ 4 ಅಡಿ ಎತ್ತರಕ್ಕೆ ಗೋಡೆಯ ಮೇಲೆ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಇಡಬೇಕು. ಹಾಗೂ ತುರ್ತು ಸಂದರ್ಭದಲ್ಲಿ ಉಪಯೋಗಿಸಲು ಭರ್ತಿ ಮಾಡಿ ಸುಸ್ಥಿತಿಯಲ್ಲಿ ಇಟ್ಟು ಅಡುಗೆ ಸಿಬ್ಬಂದಿ ನಿರ್ವಹಿಸಬೇಕು. ಇದರ ವಾಯಿದೆಯ ದಿನಾಂಕವನ್ನು ನಮೂದಿಸಿ, ನೋಡಿಕೊಳ್ಳುತ್ತಿರಬೇಕು. ಬಳಸಲು ಸೂಕ್ತ ತರಬೇತಿಯನ್ನು, ಬಳಸುವ ಕೌಶಲವನ್ನು ಎಲ್ಲಾ ಅಡುಗೆ ಸಿಬ್ಬಂದಿಗಳು ಹೊಂದಿರಬೇಕು.

23. ಶಾಲಾ ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಮೊದಲಿಗೆ ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ತರಗತಿಗಳ (1-5ನೇ) ಮಕ್ಕಳಿಗೆ ಬಿಸಿಯೂಟ ಬಡಿಸಿದ ನಂತರ, ಹಿರಿಯ ಪ್ರಾಥಮಿಕ (6-7/8, 9-10) ತರಗತಿ ಮಕ್ಕಳಿಗೆ ಸಾಲಾಗಿ ಶಿಸ್ತಿನಿಂದ ಕೂರಿಸಿ ನೂಕುನುಗ್ಗಲು ಆಗದಂತೆ, ಶಾಂತ ರೀತಿಯಲ್ಲಿ, ನಿಧಾನವಾಗಿ, ಕಾಳಜಿಯಿಂದ ಸಮಯಕ್ಕೆ ಸರಿಯಾಗಿ ಬಿಸಿಯೂಟ ಬಡಿಸಬೇಕು.

24. ತರಗತಿ ಶಿಕ್ಷಕರ ನೆರವನ್ನು ಪಡೆದು ಮಕ್ಕಳನ್ನು ಸಾಲಾಗಿ ಕೂರಿಸಿಕೊಂಡ ನಂತರವೇ ಅಡುಗೆ ಸಿಬ್ಬಂದಿ ಬಿಸಿಯೂಟ ಬಡಿಸಬೇಕು.

25. ಅಡುಗೆ ಕೋಣೆಯಲ್ಲಿ ಕೊರತೆ ಇರುವ, ಹಾಳಾಗಿರುವ, ಬದಲಾಯಿಸಬೇಕಾಗಿರುವ ಪಾತ್ರೆ-ಪರಿಕರಗಳ ಬಗ್ಗೆ ಕೂಡಲೇ ಗಮನ ಹರಿಸಿ ಮುಖ್ಯ ಶಿಕ್ಷಕರಿಗೆ ಪಟ್ಟಿ ನೀಡಿ ಖರೀದಿಸಿ ಪೂರೈಸುವಂತೆ ಬೇಡಿಕೆ ನೀಡಬೇಕು.

26. ಅಡುಗೆ ಕೋಣೆಯಲ್ಲಿ ಯಾವುದೇ ವ್ಯತ್ಯಯವಾಗಿದ್ದಲ್ಲಿ, ಆಹಾರ ಪದಾರ್ಥಗಳ ಅಭಾವ ಉಂಟಾಗುತ್ತಿದ್ದಲ್ಲಿ ಒಂದು ವಾರ ಮೊದಲೇ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಕೊರತೆಯನ್ನು ಪೂರೈಸಿಕೊಳ್ಳುವುದು.

27. ಪ್ರತಿ ಎರಡು ತಿಂಗಳಿಗೊಮ್ಮೆ ಆಹಾರ ಬೇಡಿಕೆ ಸಲ್ಲಿಸುವಾಗ ಆಹಾರ ದಾಸ್ತಾನುವಿನಲ್ಲಿರುವ ಉಳಿಕ ಪ್ರಮಾಣವನ್ನು ಕಳೆದು ಅಗತ್ಯವಿರುವ ದಿನಗಳಿಗೆ ಮಾತ್ರವೇ ಆಹಾರ ಬೇಡಿಕೆಯನ್ನು ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು.

28. ಕುಕ್ಕರ್ ಬಳಸುವಾಗ, ಕುಕ್ಕರ್ ಗ್ಯಾಸ್ಕಟ್, ಕುಕ್ಕರ್ ವಿಶಲ್ ಇತ್ಯಾದಿ ಸುಸ್ತಿತಿಯಲ್ಲಿರುವುದೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಕುಕ್ಕ‌ನ್ನು ಬಳಸಬೇಕು. ಆದಷ್ಟು ಮಟ್ಟಿಗೆ ಸಿಪ್ಪೆ ಇರುವ ತೊಗರಿ ಬೇಳೆ, ಕಾಳುಗಳು, ಸೊಪ್ಪು-ನಾರು ತರಕಾರಿಗಳನ್ನು ಕುಕ್ಕರ್ ನಲ್ಲಿ ಬೇಯಿಸದೇ ಪ್ರತ್ಯೇಕವಾದ ಪಾತ್ರೆಗಳಲ್ಲಿ ಬೇಯಿಸಿಕೊಳ್ಳುವುದು ಸೂಕ್ತವಾದ ಸುರಕ್ಷಿತ ಕ್ರಮವಾಗಿರುತ್ತದೆ. ಅಡುಗೆಯಲ್ಲಿ ಕುಕ್ಕರ್ ಬಳಸುವಾಗ ಕುಕ್ಕರ್ ವಿಶಲ್ ಕೂಗುವುದನ್ನು ಸರಿಯಾಗಿ ಎಣಿಕೆ ಮಾಡಿಕೊಂಡು, ಸೂಕ್ತ ಸಮಯದಲ್ಲಿ ಕೂಗದೇ ಇದ್ದಾಗ ಸ್ಪೋವ್ ಆರಿಸಿ ಕುಕ್ಕರ್ ತಂಪಾದ ನಂತರವೇ ತೆರೆಯಬೇಕು.

29. ವಾಯಿದೆ ಮೀರದೇ ಇರುವ ಆಹಾರ ಪದಾರ್ಥಗಳನ್ನೆ ಅಡುಗೆಗೆ ಬಳಸಬೇಕು. ಹಳೆ ತೊಗರಿಬೇಳೆ, ದೀರ್ಘ ಕಾಲ ದಾಸ್ತಾನು ಇಟ್ಟು ಹುಳಹಿಡಿದಿರುವ, ಗುಣಮಟ್ಟ ಕಳೆದುಕೊಂಡಿರುವ, ಕಳಪೆಯಾಗಿರುವ, ಬಳಸುವ ವಾಯಿದೆ ಮುಗಿದಿರುವ ತೊಗರಿಬೇಳೆ, ಗೋಧಿ, ಅಕ್ಕಿಯನ್ನು, ಕೊಳೆತ ತರಕಾರಿಯನ್ನು ಅಡುಗೆಗೆ ಬಳಸದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಂತಹವುಗಳನ್ನು ಕೂಡಲೇ ದಾಸ್ತಾನುವಿನಿಂದ ಹೊರಗೆ ಹಾಕಿ ವಿಲೇವಾರಿ ಮಾಡುವುದು.

30. ಮಸಾಲಾ ಪದಾರ್ಥಗಳನ್ನು, ರಾಗಿಹೆಲ್ತ್ ಮಿಕ್ಸ್ ಪೌಡರ್ ಅನ್ನು ಜರಡಿಯಿಂದ ಹಸನುಗೊಳಿಸಿ,ಹಾಲಿನ ಪುಡಿಯ ಗುಣಮಟ್ಟವನ್ನು ಪರಿಶೀಲಿಸಿಕೊಂಡು ಬಳಸುವುದು ಹಾಗೂ ಗುಣಮಟ್ಟ ಹಾಳಾಗದಂತೆ ಸ್ವಚ್ಚಗೊಳಿಸಿರುವ ಆಹಾರ ಧಾನ್ಯಗಳನ್ನು, ಏರ್ ಟೈಟ್ ಸ್ಟೀಲ್ ಕಂಟೈನರ್/ ಡಬ್ಬಿಗಳಲ್ಲಿ ಸುರಕ್ಷಿತವಾಗಿ ತುಂಬಿಡುವುದು.ಆದಷ್ಟು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದೇ ಇರುವುದು ಆರೋಗ್ಯಕರ.

31. ತಾಜಾ ತರಕಾರಿಗಳಾದ ಟೊಮ್ಯಾಟೋ, ಹಸಿಮೆಣಸಿನಕಾಯಿ, ತೊಂಡೆಕಾಯಿ, ಬೀನ್ಸ್, ಬದನೇಕಾಯಿ, ಸಿಹಿಕುಂಬಳ, ಸೌತೇಕಾಯಿ, ಮೂಲಂಗಿ, ಈರುಳ್ಳಿ, ಬೆಳ್ಳೂಳ್ಳಿ, ಆಲೋಗೆಡ್ಡೆ, ಕ್ಯಾರೇಟ್, ಹಸಿರು ತಾಜಾ ಸೊಪ್ಪುಗಳನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇಲ್ಲವೇ ಅಗಲವಾದ ಪ್ಲಾಸ್ಟಿಕ್ ಟ್ರೇಗಳಲ್ಲಿ, ಕ್ರೇಟರ್ ಗಳಲ್ಲಿ ಕೆಡದಂತೆ, ಗಾಳಿಯಾಡುವಂತೆ, ಮುಚ್ಚಿಟ್ಟು ಅಡುಗೆ ಕೋಣೆಯಲ್ಲಿ ಎತ್ತರದ ಕಪಾಟುಗಳಲ್ಲಿ ಸುರಕ್ಷಿತವಾಗಿ ಇಡುವುದು ಸೂಕ್ತವಾದ ಕ್ರಮವಾಗಿರುತ್ತದೆ.

32. ಅಡುಗೆಗೆ ಆಹಾರ ಪದಾರ್ಥಗಳನ್ನು, ಸೊಪ್ಪು-ತರಕಾರಿಗಳನ್ನು ಬಳಸುವ ಮುನ್ನ ಅಡುಗೆ ಸಿಬ್ಬಂದಿ ತಪ್ಪದೇ ವಾಸನೆ ಗ್ರಹಿಸಿ ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ, ಕೊಳೆತುಹೋಗಿರುವ, ಬಣ್ಣ ಗೆಟ್ಟ, ಮುಗ್ಗಲು ಆಗಿರುವ, ಪಂಗಸ್ ಹಿಡಿದು ವಾಸನೆ ಬರುತ್ತಿರುವ, ರಾಸಾಯಿನಿಕ ಸಿಂಪಡಿಸಿ ಕೆಟ್ಟ ವಾಸನೆ ಬರುತ್ತಿದ್ದು, ಇಲ್ಲವೇ ಸೀಮೆಎಣ್ಣೆ ಮತ್ತಿತರ ಸೋಂಕಿನಿಂದ ಕೂಡಿದ್ದು ಕೆಟ್ಟ. ಅಸಹಜ ವಾಸನೆ ಬರುತ್ತಿದ್ದರೆ, ಅಂತಹ ಪದಾರ್ಥಗಳನ್ನು ಅಡುಗೆಗೆ ಬಳಸದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು.

33. ಶಾಲೆಯಲ್ಲಿ ತರಗತಿವಾರು ಹಾಜರಾಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿಯೇ ಆಹಾರ ದಾಸ್ತಾನುವಿನಿಂದ ಆಹಾರ ಪದಾರ್ಥಗಳನ್ನು ಅಳತೆ ಮಾಡಿ ಪಡೆದುಕೊಂಡು ಪೂರ್ಣ ಬಳಸಬೇಕು.ಮಕ್ಕಳ ಹಾಜರಾತಿ ವಿವರಗಳ ವಹಿಯನ್ನು ಅಡುಗೆ ಕೋಣೆಯಲ್ಲಿ ನಿರ್ವಹಿಸಬೇಕು.

34. ಆಹಾರ ಪದಾರ್ಥಗಳಾದ ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಅಕ್ಕಿ, ಗೋಧಿಯನ್ನು ಪ್ರತಿ ನಿತ್ಯ ಬಳಸಬೇಕಾಗಿರುವ ಮಕ್ಕಳ ಸಂಖ್ಯೆಗೆ ಇರುವ ಆಹಾರ ಪ್ರಮಾಣಕ್ಕೆ ಅನುಗುಣವಾಗಿ ಬಳಸದೇ ಅಪೂರ್ಣ ಬಳಸುತ್ತಿದ್ದು, ದಾಸ್ತಾನುವಿನಲ್ಲಿ ಆಹಾರ ದಾನ್ಯಗಳು ಅಪಾರ ಪ್ರಮಾಣದಲ್ಲಿ ಉಳಿಕೆಯಾಗುತ್ತಿರುವುದಕ್ಕೆ ಕಾರಣವಾಗುತ್ತಿರುವುದನ್ನು ತಪ್ಪಿಸಬೇಕು. ಪ್ರತಿ ನಿತ್ಯ ಸರಿಯಾದ ಪ್ರಮಾಣದಲ್ಲಿ ಬಳಸಿ, ಆಹಾರ ಧಾನ್ಯಗಳು ಉಳಿಕೆಯಾಗಿ ಹಾಳಾಗುತ್ತಿರುವುದನ್ನು ಹಾಗೂ ಅಪವ್ಯಯವಾಗುತ್ತಿರುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು.

35. ಸುರಕ್ಷತೆಯ ಹಿತದೃಷ್ಟಿಯಿಂದ ಅಡುಗೆ ಸಿಬ್ಬಂದಿ ಬಿಸಿಪಾತ್ರೆಗಳನ್ನು ಇಳಿಸುವಾಗ, ಕುಕ್ಕರ್ ಬಳಸುವಾಗ. ಉರಿಯುತ್ತಿರುವ ಗ್ಯಾಸ್ ಸ್ಟೋವ್ ಮುಂದೆ ನಿಂತು ಅಡುಗೆ ಕೆಲಸ ಮಾಡುವಾಗ ಬೆಂಕಿ ತಗಲದಂತೆ, ಕುಕ್ಕರ್ ಬ್ಲಾಸ್ಟ್ ಆಗದಂತೆ, ಬಿಸಿ ಪಾತ್ರ ಕೈ ಹಿಡಿತ ತಪ್ಪಿ ಮೈಮೇಲೆ ಸುರಿಯುವ ಪರಿಸ್ಥಿತಿ ಉಂಟಾಗದಂತ ಅತೀ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬಿಸಿಯೂಟ ತಯಾರಿಸಿದಲ್ಲಿ ಕೆಳಗೆ ಇಳಿಸದೆ ಕೊಂಡೊಯ್ಯಲು ಸಾಧ್ಯವಾಗುವಂತಹ ಚಿಕ್ಕ ಚಿಕ್ಕ ಪಾತ್ರೆ/ಬಕೆಟ್ ಗಳಿಗೆ ವರ್ಗಾಯಿಸಿಕೊಂಡು ವಿದ್ಯಾರ್ಥಿಗಳಿಗೆ ಬಡಿಸಬೇಕು.

36. ದೈಹಿಕ ನಿಶ್ಯಕ್ತಿಯಿಂದಾಗಿ ಇಲ್ಲವೇ ಕೆಲಸದಿಂದ ಆಯಾಸವಾಗಿರುವ ಅಡುಗೆಯ ಸಿಬ್ಬಂದಿ ಒಬ್ಬರೇ ಪಾತ್ರ ಇಳಿಸಲು ಕೈಹಾಕದೇ, ಉಳಿದವರ ಸಹಾಯ ಪಡೆದು ಸುರಕ್ಷಿತವಾಗಿ ನಿರ್ವಹಿಸಬೇಕು ಇಲ್ಲವೇ ಬೇರೆಯವರಿಗೆ ಅಂತಹ ಕೆಲಸ ಮೊದಲೇ ಬಿಟ್ಟುಕೊಡಬೇಕು.

37. ಇಲಾಖಾ ಸೂಚಿತ ಮನುವನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪ್ರತಿ ನಿತ್ಯ ನಿಗದಿತ ಪ್ರಮಾಣದಲ್ಲಿಯೇ ಮಕ್ಕಳಿಗೆ ಊಟ ಬಡಿಸಬೇಕು.

38. ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಬಡಿಸುವ ಸ್ಥಳವು ಹಂದಿ, ನಾಯಿ, ಬೆಕ್ಕು, ಇಲಿ, ನೊಣ, ಇರುವೆಗಳಿಂದ ಮುಕ್ತವಾಗಿರುವಂತೆ, ಸುರಕ್ಷತೆಯಿಂದ ಇರುವಂತೆ ನೋಡಿಕೊಳ್ಳಬೇಕು.

39. ಮಕ್ಕಳು ಸಾಲಾಗಿ ಕುಳಿತು ಕೊಳ್ಳುವ ಪೂರ್ವದಲ್ಲಿ ಕೈ ಮತ್ತು ತಟ್ಟೆಗಳನ್ನು ಸೋಪಿನಿಂದ ತೊಳೆದುಕೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಮತ್ತು ಬಿಸಿಯೂಟ ಸ್ವೀಕರಿಸಿದ ನಂತರ ತಟ್ಟೆ-ಲೋಟ, ಕೈತೊಳೆಯಲು ಎದ್ದು ಹೋದಾಗ ಎರಡನೇ ಸಾರಿ, ಅಂದರೆ ಎರಡೂ ಬಾರಿ ಬಿಸಿಯೂಟ ಸ್ವೀಕರಿಸುವ ಸ್ಥಳವನ್ನು ಗುಡಿಸಿ ಸ್ವಚ್ಚಗೊಳಿಸುವುದು ಸಹಾಯಕ ಅಡುಗೆಯವರ ಅದ್ಯ ಕರ್ತವ್ಯವಾಗಿರುತ್ತದೆ.

40. ಮುಖ್ಯ ಅಡುಗೆಯವರು ಶಾಲೆಯ ಆಹಾರ ದಾಸ್ತಾನು ಸ್ವೀಕೃತಿ, ದಾಸ್ತಾನು ಪ್ರಮಾಣ, ದೈನಂದಿನ ಆಹಾರ ದಾನ್ಯಗಳ ಖರ್ಚು-ವೆಚ್ಚ, ಅನುದಾನ ಖರ್ಚು-ವೆಚ್ಚ, ದೈನಂದಿನ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಆಹಾರ ಪ್ರಮಾಣ ವಿತರಣೆಯ ಲೆಕ್ಕವಿವರಗಳನ್ನು ಇಟ್ಟು ನಿರ್ವಹಿಸುವುದು. ಮುಖ್ಯಶಿಕ್ಷಕರ/ನೋಡಲ್ ಶಿಕ್ಷಕರ ಸಹಕಾರ ಪಡೆದುಕೊಳ್ಳುವುದು.

41. ಅಡುಗೆಗೆ ಅಯೋಡಿಕರಿಸಿದ ಉಪ್ಪನ್ನೇ ಬಳಸಬೇಕು. ಪುಡಿ ಉಪ್ಪು, ಕಲ್ಲು ಉಪ್ಪು ಯಾವುದೇ ಉಪ್ಪಾದರೂ ಅದು ಅಯೋಡೈಸ್ ಆಗಿರಬೇಕು. ವಾಯಿದೆ ಮೀರದಂತೆ ಅಡುಗೆಗೆ ಬಳಸಬೇಕು.

42. ಮಕ್ಕಳಿಗೆ ಬಿಸಿಯೂಟ ಬಡಿಸಲು ಇಬ್ಬರು ಅಡುಗೆ ಸಿಬ್ಬಂದಿ ಬಂದಲ್ಲಿ ಉಳಿದ ಒಬ್ಬರು ಆಹಾರದ ಪಾತ್ರೆಗಳನ್ನು ಮುಚ್ಚಿಟ್ಟು ಕಾವಲಿರಬೇಕು. ಇಲ್ಲವಾದರೆ ಪಾತ್ರೆಯ ಬಾಯಿಯನ್ನು ಮುಚ್ಚಿ ಅಡುಗೆ ಕೋಣೆಯೊಳಗೆ ಇಟ್ಟು ಬಾಗಿಲು ಹಾಕಿಕೊಂಡ ಸುರಕ್ಷತೆಗೆ ದಕ್ಕೆಯಾಗದಂತೆ, ಯಾವುದೇ ಮಕ್ಕಳು ಹೋಗದಂತೆ ಸೂಕ್ತ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

43. ಅಡುಗೆ ಮನೆಯಲ್ಲಿ ಬಿಸಿ ಸಾಂಬಾರು ತುಂಬಿದ ಪಾತ್ರೆ/ಬಿಸಿ ಹಾಲು, ಬಿಸಿಯೂಟ ತುಂಬಿರುವ ದೊಡ್ಡ ಪಾತ್ರೆಗಳ ಹತ್ತಿರ ಯಾವುದೇ ಶಾಲಾ ಮಕ್ಕಳು ಹೋಗದಂತೆ, ಅತೀ ಎಚ್ಚರಿಕೆವಹಿಸಬೇಕು. ಅಡುಗೆಯವರೇ ಖುದ್ದು ಬಿಸಿ ಸಾಂಬಾರು, ಬಿಸಿ ಹಾಲು, ಬಿಸಿ ಅನ್ನವನ್ನು ಸಣ್ಣ ಪಾತ್ರೆಗಳಲ್ಲಿ ತುಂಬಿ ತೆಗೆದುಕೊಂಡು ಬಂದು ಸಾಲಾಗಿ ಕುಳಿತಿರುವ ಮಕ್ಕಳ ತಟ್ಟೆಗೆ ಕಾಳಜಿಯಿಂದ ಬಡಿಸಬೇಕು.

44. ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನೇ ದಾಸ್ತಾನುವಿನಿಂದ ಪಡೆದು ಅಡುಗೆಗೆ ಬಳಸುವುದು.

45. ಕಿಟಕಿಗಳಿಗೆ ಹಾಕಿರುವ ಜಾಲರ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವುದು. ಹಾಳಾಗಿದ್ದಲ್ಲಿ ದುರಸ್ತಿ ಪಡಿಸಲು ಮುಖ್ಯ ಶಿಕ್ಷಕರಿಗೆ ತಿಳಿಸುವುದು.

46. ಶಾಲಾ ಅಡುಗೆ ಕೇಂದ್ರಗಳಲ್ಲಿ ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸದೇ ಬದಲಾಗಿ ಸ್ಪೇನ್‌ಲೆಸ್ ಸ್ಟೀಲ್ ಪಾತ್ರಗಳನ್ನೇ ಆಹಾರ ಸಿದ್ಧಪಡಿಸಲು ಮತ್ತು ವಿತರಿಸಲು ಬಳಸಬೇಕು.

47. ಪ್ರತಿ ದಿನ ಶಾಲಾ ಅಡುಗೆ ಕೋಣೆಯನ್ನು ಪ್ರವೇಶಿಸಿದ ಕೂಡಲೇ ಕಿಟಕಿ, ಗೋಡೆ ಮತ್ತು ಮೇಲ್ಟಾವಣಿಗಳನ್ನು ಪರಿಶೀಲಿಸಿ ಹಲ್ಲಿ, ಜೇಡ, ಜಿರಲೆ ಮುಂತಾದ ಕ್ರಿಮಿಕೀಟಗಳಿದ್ದಲ್ಲಿ ಅವುಗಳನ್ನು ನಿವಾರಿಸಿ ಸ್ವಚ್ಚಗೊಳಿಸಿ ತಪ್ಪದೇ ಎಚ್ಚರಿಕೆ ವಹಿಸುವುದು.

48. ಪ್ರತಿ ದಿನ ಅಡುಗೆ ಮಾಡಲು ಕುಕ್ಕರ್ ಬಳಸುವಾಗ ಅದರ ಸೇಫ್ರಿ ವಾಲ್ಸ್, ವಿಶಲ್ (ವೇಯ್) ಮತ್ತು ಗ್ಯಾನ್ ಕೆಟ್‌ಗಳ ಗುಣಮಟ್ಟವನ್ನು ಮತ್ತು ಸ್ವಚ್ಚತೆಯನ್ನು ಪರಿಶೀಲಿಸಿಕೊಂಡು ಖಾತ್ರಿ ಪಡಿಸಿಕೊಂಡ ನಂತರ ಉಪಯೋಗಿಸಬೇಕು.

49. ಉತ್ತಮ ಗುಣಮಟ್ಟದ ISI ಗುರುತಿನ ಸ್ಪೇನ್‌ಲೆಸ್ ಸ್ಟೀಲ್ ಕುಕ್ಕರ್ ಅನ್ನು ಅಡುಗೆ ತಯಾರಿಸಲು ಬಳಸಬೇಕು.

PM poshan scheme : ಪ್ರತಿ ದಿನ ಶಾಲಾ ಅಡುಗೆ ಕೇಂದ್ರಗಳಲ್ಲಿ ಆಡುಗೆ ಸಿಬ್ಬಂದಿ ವರ್ಗದವರು ಮಾಡಬಾರದ ಕೆಲಸಗಳು (Don’ts):

1. ಅಡುಗೆ ಕೆಲಸಕ್ಕೆ ವಿಳಂಬವಾಗಿ ಬರಬಾರದು ಹಾಗೂ ಯಾವುದೇ ಪೂರ್ವ ತಯಾರಿ ಇಲ್ಲದೇ ಅಡುಗೆ ಮಾಡಬಾರದು.

2. ಅಡುಗೆಗೆ ಬಳಸುವ ಪದಾರ್ಥಗಳು ಕಳಪೆ ಗುಣಮಟ್ಟದ್ದಾಗಿರಬಾರದು.

3. ಕೊಳೆತ ಹಾಗೂ ಕೆಟ್ಟ ಆಹಾರ ಪದಾರ್ಥಗಳನ್ನು, ತರಕಾರಿ ಸೊಪ್ಪುಗಳನ್ನು ಅಡುಗೆಗೆ ಬಳಸಬಾರದು.

4. ಅಡುಗೆ ಕೆಲಸದಲ್ಲಿ ತೊಡಗಿರುವಾಗ ಕೈಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಚ ಮಾಡಿಕೊಳ್ಳದೇ ಆಹಾರ ಪದಾರ್ಥಗಳನ್ನು ಮುಟ್ಟಬಾರದು ಹಾಗೂ ವಿತರಿಸಬಾರದು.

5. ಆಹಾರ ಧಾನ್ಯಗಳನ್ನು ಸರಿಯಾಗಿ ಸಂಸ್ಕರಿಸದೆ, ಸ್ವಚ್ಚಗೊಳಿಸಿಕೊಳ್ಳದೆ ಅಡುಗೆಗೆ ಬಳಸಿಕೊಳ್ಳಬಾರದು.

6. ಹಳ ತೊಗರಿ ಬೇಳೆ, ಹಾಳಾಗಿರುವ, ಹುಳ ಹಿಡಿದಿರುವ ತೊಗರಿ ಬೇಳೆ, ಗೋಧಿ, ಅಕ್ಕಿಯನ್ನು ಅಡುಗೆಗೆ ಬಳಸಬಾರದು.

7. ಏಪ್ರಾನ್. ತಲೆಗವಸು ಮತ್ತು ಕೈಗವಸುಗಳನ್ನು ಹಾಕಿಕೊಳ್ಳದೆ ಅಡುಗೆ ಕೆಲಸದಲ್ಲಿ ತೊಡಗಬಾರದು ಮತ್ತು ಆಹಾರ ವಿತರಣೆ ಮಾಡಬಾರದು.

8. ಶಾಲಾ ವಿದ್ಯಾರ್ಥಿಗಳನ್ನು ಸಾಲಾಗಿ ಕುಳ್ಳಿರಿಸದೆಯೇ ಸಾಲಾಗಿ ನಿಲ್ಲಿಸಿ ಬಿಸಿಯೂಟ, ಬಿಸಿ ಹಾಲು ವಿತರಿಸುವುದು ಸರಿಯಾದ ಕ್ರಮವಲ್ಲ.

9. ಬಿಸಿ ಹಾಲು ಸಿದ್ಧಪಡಿಸಿ ವಿತರಿಸುವಾಗ ಶಾಲೆಗೆ ಹಾಜರಾಗಿರುವ ಪ್ರತಿ ವಿದ್ಯಾರ್ಥಿಗೆ ಪ್ರಮಾಣ ಬದ್ಧವಾಗಿ 15 ಗ್ರಾಂ ನಷ್ಟು ಹಾಲಿನ ಪುಡಿಯನ್ನು ಹಾಗೂ 5 ಗ್ರಾಂ ರಾಗಿ ಹೆಲ್ತ್ ಪೌಡರ್ ಬಳಸಿ 150 ಮಿ.ಲೀ ಬಿಸಿ ಹಾಲು ಮತ್ತು ರಾಗಿ ಮಿಶ್ರಣವನ್ನು 10 ಗ್ರಾಂ ಸಕ್ಕರೆ ಬೆರೆಸಿ ತಯಾರಿಸಿ ವಿತರಿಸಬೇಕೆ ಹೊರತು ಆಳತೆಯಲ್ಲಿ ಕಡಿಮೆ ಮಾಡಿ ಸಿದ್ಧಪಡಿಸಿ ವಿತರಿಸಬಾರದು.

10. ಅವಧಿ ಪೂರ್ಣಗೊಂಡಿರುವ ಆಹಾರ ಪದಾರ್ಥಗಳನ್ನು. ಕೊಳೆತ ಸೊಪ್ಪು, ತರಕಾರಿಗಳನ್ನು ಅಡುಗೆಯಲ್ಲಿ ಬಳಸಬಾರದು. ಕೊಳೆತ ಮೊಟ್ಟೆ, ಬಾಳೆಹಣ್ಣನ್ನು ಹಾಗೂ ತಣ್ಣನೆಯ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಸೇವಿಸಲು ನೀಡಬಾರದು.
11. ಎಲೆ, ಅಡಿಕೆ, ತಂಬಾಕು ಸೇವನೆ ಮಾಡಬಾರದು, ಉಗುರುಗಳನ್ನು ಬಿಟ್ಟಿರಬಾರದು ಮತ್ತು ಉಗುರುಗಳಿಗೆ ಉಗುರು ಬಣ್ಣ ಹಚ್ಚಿರಬಾರದು.

12. ಕಮ್ಮು, ಶೀತ, ಜ್ವರ ಇದ್ದಲ್ಲಿ ಕೆಲಸಕ್ಕೆ ಹಾಜರಾಗಬಾರದು, ರಜೆ ತೆಗೆದುಕೊಂಡು ಬದಲಿ ವ್ಯವಸ್ಥೆ ಮಾಡಿ ಗುಣಮುಖ ಹೊಂದಿದ ನಂತರ ಹಾಜರಾಗುವುದು.

13. ಶಾಲಾ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬಿಸಿಯೂಟ ವಿತರಿಸಬಾರದು.

14. ಅಡುಗೆ ಕೋಣೆಯೋಳಗೆ ಯಾವುದೇ ವಿದ್ಯಾರ್ಥಿಗೆ ಪ್ರವೇಶಿಸಲು ಅವಕಾಶ ಕೊಡಬಾರದು ಹಾಗೂ ತಮ್ಮ ಕೈಗೂಸು ಮಕ್ಕಳನ್ನು ಅಡುಗೆ ಕೋಣೆಯೊಳಗೆ ತರಬಾರದು.

15. ತರಕಾರಿಗಳನ್ನು, ಸೊಪ್ಪು, ಗೆಡ್ಡೆ ಗೆಣಸುಗಳನ್ನು ಚೆನ್ನಾಗಿ ತೊಳೆಯದೇ ಅಡುಗೆಗೆ ಬಳಸಬಾರದು ಹಾಗೂ ಶುದ್ಧ ನೀರಿನಲ್ಲಿ ತೊಳೆಯದೇ ಕತ್ತರಿಸಬಾರದು.

16. ಅಡುಗೆ ಕೋಣೆ ಪ್ರವೇಶಿಸಿದಾಗ ಗೋಡೆಗಳ ಮೇಲೆ ಹಲ್ಲಿ, ಜಿರಲೆ, ಜೇಡ ಇದ್ದಲ್ಲಿ ಅವುಗಳನ್ನು ಗುಡಿಸಿ ಹೊರ ಹಾಕದೆ ಅಡುಗೆ ಸಿದ್ಧತೆ ಮಾಡಬಾರದು.

17. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಆಹಾರವನ್ನು ಬಡಿಸಬಾರದು.

18. ಯಾವುದೇ ಕಾರಣಕ್ಕೂ ಹಾಲಿನ ಪುಡಿಯಿಂದ ತಯಾರಿಸಿದ ಹಾಲಿನಿಂದ ಮೊಸರು/ಮಜ್ಜಿಗೆ ಮಾಡಬಾರದು.

19. ಬಿಸಿ ಸಾಂಬಾರು, ಬಿಸಿ ಅನ್ನ ತಯಾರಿಸುವ ಸಂದರ್ಭ,ತಯಾರಿಸಿದ ನಂತರದ ಸಂದರ್ಭದಲ್ಲಾಗಲೀ ಬಿಸಿಯೂಟದ ಪಾತ್ರೆಗಳ ಬಳಿ ಯಾರೂ ಇರದಂತೆ ಹೊರ ತೆರಳಬಾರದು. ಊಟ ತಯಾರಾದ ನಂತರ ಪಾತ್ರಗಳನ್ನು ಮುಚ್ಚಿಡದೆ ಹಾಗೇ ಹೊರ ಬರಬಾರದು ಹಾಗೂ ಮಕ್ಕಳನ್ನು ಹತ್ತಿರ ಸೇರಿಸಬಾರದು.

20. ಅಡುಗೆ ಸಿದ್ದಪಡಿಸಿ ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಶುಚಿರುಚಿ ಪರೀಕ್ಷಿಸದೆ ಹಾಗು ಅಭಿಪ್ರಾಯವನ್ನು ದಾಖಲಿಸದೇ ಮಕ್ಕಳಿಗೆ ವಿತರಿಸಬಾರದು.

21. ಬಿಸಿಯೂಟ ಮಕ್ಕಳಿಗೆ ಬಡಿಸುವ ಪೂರ್ವದಲ್ಲಿ ಕುಳಿತುಕೊಳ್ಳುವ ಸ್ಥಳವನ್ನು ಗುಡಿಸದೇ, ಧೂಳು ರಹಿತ ಗೊಳಿಸದೇ, ಮಕ್ಕಳನ್ನು ಹಾಗೆ ಕೂರಿಸಿ ವಿತರಿಸಬಾರದು.

22. ವಾಯಿದೇ ಮೀರಿದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸಬಾರದು ಹಾಗೂ ಮೊದಲು ದಾಸ್ತಾನಿಗೆ ಬಂದ ಆಹಾರ ಪದಾರ್ಥಗಳನ್ನು ಮೊದಲು ಬಳಸದೇ ಹಾಗೆ ದೀರ್ಘ ಕಾಲ ಇಟ್ಟು ಬಳಸಬಾರದು.

23. ಅಂಗಡಿಯಿಂದ ಮಾರುಕಟ್ಟೆಯಿಂದ ತಂದ ಆಹಾರ ಪದಾರ್ಥವನ್ನು ಸೂಕ್ಷ್ಮವಾಗಿ ಪರಿಶೀಲಿಸದೆ ವಾಸನೆ ಗ್ರಹಿಸದೆ ಹಾಗೆಯೇ ಅಡುಗೆಗೆ ಬಳಸುವುದು ಸೂಕ್ತವಾದ ಕ್ರಮವಾಗಿರುವುದಿಲ್ಲ.

24. ಕುಕ್ಕರ್ ಬಳಸುವ ಬಗ್ಗೆ ಸ್ಪಷ್ಟ ಅರಿವು ತಿಳುವಳಿಕೆ ಮತ್ತು ತರಬೇತಿ ಇಲ್ಲದೇ ಬಳಸಬಾರದು.

25. ಶಾಲಾ ಅಡುಗೆ ಕೇಂದ್ರಕ್ಕೆ ಅಡುಗೆ ತಯಾರಿಸಲು ಮತ್ತು ಸ್ವಚ್ಚಗೊಳಿಸಲು, ಕುಡಿಯುವ ನೀರಿಗಾಗಿ ಶಾಲಾ ವಿದ್ಯಾರ್ಥಿಗಳಿಂದ ನೀರನ್ನು ತರಿಸಬಾರದು.

26. ಪ್ರತಿ ದಿನ ಶಾಲಾ ಅಡುಗೆ ಕೇಂದ್ರದಲ್ಲಿ ಸಿದ್ಧಪಡಿಸುವ ಹಾಗೂ NGO ಸಂಸ್ಥೆಯಿಂದ ಸರಬರಾಜುಗೊಳಿಸುವ ಬಿಸಿಯೂಟದ ಶುಚಿ-ರುಚಿಯನ್ನು ಮೊದಲು ಪರೀಕ್ಷಿಸಿ ಅಭಿಪ್ರಾಯ ದಾಖಲಿಸದ ಹೊರತು ವಿದ್ಯಾರ್ಥಿಗಳಿಗೆ ವಿತರಿಸಬಾರದು.

27. ಶಾಲಾ ಮಕ್ಕಳನ್ನು ಶಾಲೆಯ ಆವರಣದಲ್ಲಿ ಸಾಲಾಗಿ ನಿಲ್ಲಿಸಿ ರಾಗಿ ಮತ್ತು ಹಾಲಿನ ಮಿಶ್ರಣದ ಬಿಸಿ ಪೇಯವನ್ನಾಗಲಿ ಹಾಗೂ ಬಿಸಿಯೂಟವನ್ನಾಗಲೀ ವಿತರಿಸಬಾರದು.

28. ಶಾಲಾ ಅಡುಗೆ ಕೇಂದ್ರ ಮತ್ತು ಆಹಾರ ಸಂಗ್ರಹಣಾ ಕೊಠಡಿಯನ್ನು ವಾರಕ್ಕೊಮ್ಮೆ ಡೀಪ್ ಕ್ಲೀನಿಂಗ್ (Deep Cleaning) ಮಾಡದೇ ಇರಬಾರದು.

29. ಅಡುಗೆ ಕೋಣೆ ಮತ್ತು ಆಹಾರ ಉಗ್ರಾಣದಲ್ಲಿ ಬಿಲಕೊರೆದು ಇಲಿ/ಹೆಗ್ಗಣಗಳು ಓಡಾಡುವಂತೆ ಅವಕಾಶ ನೀಡಬಾರದು. ಬಿಲಗಳು ಕಂಡುಬಂದಲ್ಲಿ ಕೂಡಲೇ ಸಿಮೆಂಟ್‌ನಿಂದ ತುಂಬಿಸಿ ಮುಚ್ಚದೇ ಹಾಗೆಯೇ ಬಿಡಬಾರದು.

30. ಕಿಟಕಿಗಳು, Exhaust Fan ಅಳವಡಿಸಿರುವ ಜಾಗಗಳಲ್ಲಿ ಹಲ್ಲಿ, ಜಿರಲೆ, ನೊಣ ಮತ್ತು ಇಲಿಗಳು ಹೊರಗಡೆಯಿಂದ ಅಡುಗೆ ಕೋಣೆ ಪ್ರವೇಶಿಸದಂತೆ ತೆರೆದಿಡಬಾರದು. ಬದಲಿಗೆ ಕಬ್ಬಿಣದ ಮೆಷ್‌ಗಳನ್ನು ಅಳವಡಿಸಿರಬೇಕು.

31. ಅಡುಗೆ ಕೋಣೆಯ ಗೋಡೆ, ಕಿಟಕಿಗಳನ್ನು ಹಾಗೂ ಬಾಗಿಲುಗಳನ್ನು ತೊಳೆಯದೇ / ಗುಡಿಸದೇ ಹಾಗೇ ಇರಬಾರದು.

32. ಪ್ರತಿ ದಿನ ಕುಡಿಯುವ ನೀರನ್ನು ಬದಲಾಯಿಸದೇ ಹಾಗೇ ಇಡಬಾರದು. ನಲ್ಲಿ ಪೈಪ್‌ಗಳನ್ನು ದುರಸ್ತಿ ಮಾಡಿಸದೇ ಹಾಗೇಯೆ ಬಿಡಬಾರದು. ನೀರಿನ ಸಂಪ್/ಸಂಗ್ರಹಣೆಯ ಘಟಕಗಳನ್ನು ತೆರೆದಿಡಬಾರದು.

33. ಅಗ್ನಿ ನಂದಕವನ್ನು ಸುಸ್ಥಿತಿಯಲ್ಲಿ ಇಡದೇ ಹಾಗೇ ಮೂಲೆಯಲ್ಲಿ ಅನುಪಯುಕ್ತ ಸ್ಥಿತಿಯಲ್ಲಿ ಇಟ್ಟಿರಬಾರದು. ಅಗ್ನಿ ನಂದಕವನ್ನು ನಾಲ್ಕಡಿ ಎತ್ತರದಲ್ಲಿ ಗೋಡೆಗೆ ತಗುಲಿಸಿ ಇಡಬೇಕೆ ಹೊರತು ಕೈಗೆ ಸಿಗದಂತೆ ಅತೀ ಎತ್ತರದಲ್ಲಿ ಇಡಬಾರದು ಹಾಗೂ ಅಡುಗೆ ಕೋಣೆ ಹೊರತುಪಡಿಸಿ ಅಗ್ನಿನಂದಕವನ್ನು ಬೇರೆ ಕೊಠಡಿಗಳಲ್ಲಿ ಇಡಬಾರದು.

34. ಪ್ರತಿ ದಿನ ಗ್ಯಾಸ್ ಸ್ಟೋವ್, ಪೈಪ್ ಲೈನ್ ಮತ್ತು ಸೇಫ್ಟಿ ಡಿವೈಸ್‌ ಅನ್ನು ಚೆಕ್ ಮಾಡಿಕೊಳ್ಳದೇ ನೇರವಾಗಿ ಉಪಯೋಗಿಸಬಾರದು.

35. ಅಡುಗೆ ಮಾಡುವ ಸಂದರ್ಭದಲ್ಲಿಯೇ ಗ್ಯಾಸ್ ಸಿಲಿಂಡರ್‌ಅನ್ನು ಬದಲಾಯಿಸಬಾರದು.

36. ಅಡುಗೆ ಮನೆಗೆ ಮತ್ತು ಆಹಾರ ಉಗ್ರಾಣದ ಕೊಠಡಿಗಳಿಗೆ ಅಪರಿಚಿತರಿಗೆ ಪ್ರವೇಶ ನೀಡಬಾರದು ಹಾಗೂ ಮಕ್ಕಳನ್ನು ಅಡುಗೆ ಕೆಲಸದಲ್ಲಿ ಮತ್ತು ವಿತರಣೆಯಲ್ಲಿ ಬಳಸಬಾರದು.

37. ಕಳಪೆ ಗುಣಮಟ್ಟದ ಹಾಗೂ ತಾಂತ್ರಿಕವಾಗಿ ದೋಷಪೂರಿತವಾದ ಕುಕ್ಕರ್‌ಗಳನ್ನು ಬಳಸಬಾರದು ಹಾಗೂ ದಾನಿಗಳಿಂದ ಪಡೆಯಬಾರದು.

38. ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆಯನ್ನು ವಿತರಿಸುವಾಗ ಕಳಪೆ ಗುಣಮಟ್ಟದ ಹಾಗೂ ಅರ್ಧ ಪ್ರಮಾಣದ ಮೊಟ್ಟೆಯನ್ನು ವಿತರಿಸಬಾರದು. ಕೊಳೆತ ಬಾಳೆ ಹಣ್ಣನ್ನು ಇಲ್ಲವೇ ಕಾಯಿ ಬಾಳೆಹಣ್ಣನ್ನು ವಿದ್ಯಾರ್ಥಿಗಳಿಗೆ ವಿತರಿಸಬಾರದು.

PM POSHAN SCHEME

CLICK HERE TO DOWNLOAD ORDER

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!