Bank Customers Alert: ಜನವರಿ 1ರಿಂದ ಜಾರಿಗೆ ಬರುವ ಹೊಸ ಬ್ಯಾಂಕ್ ನಿಯಮಗಳು
Bank Customers Alert: ಅವಧಿಗೆ ಮುನ್ನ ಸಾಲ ತೀರಿಸಿದರೆ ಶುಲ್ಕದ ಹೊರೆ ಇಲ್ಲ,
ಬ್ಯಾಕಿಂಗ್ ಹಾಗೂ ಹಣಕಾಸು ಸೇವೆಗಳ ವಲಯಗಳಲ್ಲಿ 2026ರ ಜನವರಿ 1ರಿಂದ ಹಲವು ಬದಲಾವಣೆ ಆಗುತ್ತಿವೆ. ಅದರಲ್ಲೂ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ವಿವಿಧ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಡಿಜಿಟಲ್ ಹಣಕಾಸು ಸೇವೆಯಲ್ಲಿ ಪಾರದರ್ಶಕತೆ, ಹಣಕಾಸು ವಂಚನೆ ತಡೆ ಮತ್ತು ಸಾಲಗಾರರಿಗೆ ಶುಲ್ಕ ಕಡಿತ ಸೇರಿ ಹಲವು ಸುಧಾರಣಾ ಕ್ರಮಗಳು ಕೂಡ ಜಾರಿಗೆ ಬರುತ್ತಿವೆ. ಯಾವೆಲ್ಲ ನಿಯಮಗಳನ್ನು ಬದಲಾಯಿಸಲಾಗುತ್ತಿದೆ? ಬ್ಯಾಂಕ್ ಗ್ರಾಹಕರಿಗೆ ಹೇಗೆಲ್ಲ ಅನುಕೂಲ ಎಂಬುದನ್ನು ತಿಳಿಯೋಣ ಬನ್ನಿ.
ಸಾಲದ ಮರುಪಾವತಿಗೆ ಶುಲ್ಕ ಇಲ್ಲ:
ಅವಧಿಗೂ ಮುನ್ನ ಸಾಲವನ್ನು ಮರುಪಾವತಿಸಿದರೆ ಗ್ರಾಹಕರಿಗೆ ಕೆಲವು ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ದಂಡ ಶುಲ್ಕವನ್ನು ವಿಧಿಸುತ್ತಿದ್ದವು. ಈ ದಂಡವನ್ನು ಆರ್‌ಬಿಐ ನಿರ್ಬಂಧಿಸಿದೆ. ಉದ್ಯಮ ಚಟುವಟಿಕೆಗಳ ಹೊರತಾಗಿ ಸಾಲ ತೆಗೆದುಕೊಂಡವರು ಅವಧಿಗೂ ಮುನ್ನ ಸಾಲವನ್ನು ಮರುಪಾವತಿಸಿದರೆ, ಅದಕ್ಕಾಗಿ ಅವರಿಗೆ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ, ಫ್ಲೋಟಿಂಗ್ ರೇಟ್ ಆಧಾರದ ಮೇಲೆ ಸಾಲ ಪಡೆದವರಿಗೆ ಇದು ಅನ್ವಯವಾಗುತ್ತದೆ.
ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಷ್ಟೇ ಅಲ್ಲ, ಸಾಲ ಪಡೆದವರು ಯಾವಾಗ ಬೇಕಾದರೂ ಸಾಲವನ್ನು ತೀರಿಸಬಹುದು. ಇದಕ್ಕೆ ಯಾವುದೇ ಲಾಕ್-ಇನ್ ಅವಧಿ ಇರುವುದಿಲ್ಲ.
ವೈಯಕ್ತಿಕ ಮಾಹಿತಿ ಸಂಗ್ರಹಕ್ಕೆ ಅನುಮತಿ ಅಗತ್ಯ:
ಸಾಲಗಾರರ ಹಿತದೃಷ್ಟಿಯಿಂದ ಆರ್‌ಬಿಐ ಮತ್ತೊಂದು ಗಮನಾರ್ಹ ನಿಯಮ ಜಾರಿಗೆ ತರುತ್ತಿದೆ. ಆರ್‌ಬಿಐನ ‘ಡಿಜಿಟಲ್ ಲೆಂಡಿಂಗ್ ಡೈರೆಕ್ಷನ್ಸ್ 2025’ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಡಿಜಿಟಲ್ ವೇದಿಕೆ ಮೂಲಕ ಸಾಲದ ಅರ್ಜಿ ಭರ್ತಿ ಮಾಡಿಕೊಳ್ಳುವಾಗ ಗ್ರಾಹಕರ ವೈಯಕ್ತಿಕ ಮಾಹಿತಿ ಸಂಗ್ರಹಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ. ಗ್ರಾಹಕರ ಮೊಬೈಲ್‌ನ ಕಾಂಟ್ಯಾಕ್ಟ್‌ಗಳು, ಲೊಕೇಷನ್, ಕ್ಯಾಮೆರಾ ಸೇರಿ ಯಾವುದೇ ಆ್ಯಕ್ಸೆಸ್‌ಗೆ ಗ್ರಾಹಕರ ಅನುಮತಿ ಅಗತ್ಯ. ಹಾಗೆಯೇ, ಆ್ಯಪ್ ಗಳಲ್ಲಿ ಇಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯಬಾರದು. ಇಂತಹ ಸಂದರ್ಭಗಳಲ್ಲಿ ಗ್ರಾಹಕರಿಗೆ ತಿರಸ್ಕರಿಸುವ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.
ಬ್ಯಾಂಕ್ ಕರೆಗಳಿಗೆ ನಂಬರ್ ಸೀರೀಸ್:
ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ವಿಮಾ ಕಂಪನಿಗಳು ಗ್ರಾಹಕರಿಗೆ ಕರೆ ಮಾಡಬೇಕಾದರೆ, ಅವರ ದೂರವಾಣಿ ಸಂಖ್ಯೆಯ ಆರಂಭಿಕ ಸೀರೀಸ್ ಕಡ್ಡಾಯವಾಗಿ ‘1600’ ಇರಬೇಕು ಎಂದು ಟ್ರಾಯ್ ಸೂಚನೆ ನೀಡಿದೆ. ಸೈಬರ್ ಸೆಕ್ಯುರಿಟಿ ಹೆಚ್ಚಿಸುವುದು ಮತ್ತು ಗ್ರಾಹಕರಿಗೆ ಆಗುವ ಆನ್‌ಲೈನ್ ವಂಚನೆ ತಡೆಯಲು ಟ್ರಾಯ್ ಇಂತಹ ಕ್ರಮ ತೆಗೆದುಕೊಳ್ಳುತ್ತದೆ. ಗ್ರಾಹಕರು ಜನವರಿ 1ರಿಂದ ‘1600 ಸೀರೀಸ್‌ನ ಸಂಖ್ಯೆಯಿಂದ ಕರೆ ಮಾಡಿದರೆ ಮಾತ್ರ ನಿಖರವಾಗಿ ಇವು ಬ್ಯಾಂಕ್ ಅಥವಾ ಅಧಿಕೃತ ಕಂಪನಿಗಳಿಂದ ಬಂದಿರುವ ಕರೆ ಎಂಬುದಾಗಿ ಗುರುತಿಸಲಾಗಿದೆ. ಜನವರಿ 1ರಿಂದ ಬ್ಯಾಂಕ್ಗಳಿಗೆ ಮಾತ್ರ ಹೊಸ ನಿಯಮ ಅನ್ವಯವಾಗಲಿದೆ. ಉಳಿದವರಿಗೆ ಹಂತಹಂತವಾಗಿ ಅನ್ವಯವಾಗಲಿವೆ. ವಿಮಾ ಕಂಪನಿಗಳಿಗೂ ಇದೇ ಸಿರೀಸ್‌ನ ನಂಬರ್ ಆಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
