ESSAY-06 ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಪ್ರಜ್ಞೆ

ESSAY-06 ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಪ್ರಜ್ಞೆ

ESSAY-06 ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಪ್ರಜ್ಞೆ: ಈ ವಾರ ‘ನಾಗರಿಕ ಪ್ರಜೆಯ ಕೊರತೆಯೇ ಭಾರತದ ಹಿಂದುಳಿದಿರುವಿಕೆಗೆ ಕಾರಣ’ ಎಂಬ ವಿಷಯದ ಮೇಲೆ ಪ್ರಬಂಧ ನೀಡಲಾಗಿದೆ.

ನಾಗರಿಕ ಪ್ರಜ್ಞೆ ಎಂಬುದು ಒಂದು ದೇಶದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದಕ್ಕೆ ಸಂಬಂಧಿಸಿದ ವಿಷಯವಾಗಿದೆ. ದುರದೃಷ್ಟವಶಾತ್, ಭಾರತೀಯರಲ್ಲಿ ಈ ಪ್ರಜ್ಞೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಇದು ದೇಶೀಯವಾಗಿ ಹಲವಾರು ಸಾಮಾಜಿಕ, ಆರ್ಥಿಕ, ಪರಿಸರಾತ್ಮಕ ಸಮಸ್ಯೆಗಳಿಗೆ ಕಾರಣವಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ಪ್ರಜ್ಞೆಯ ಕೊರತೆಯ ಮುಖಗಳು, ಕಾರಣ ಹಾಗೂ ಪರಿಹಾರಗಳ ಕುರಿತು ಇಲ್ಲಿ ಚರ್ಚಿಸೋಣ.

ನಾಗರಿಕ ಪ್ರಜ್ಞೆ ಕೊರತೆಯ ವಿವಿಧ ಮುಖಗಳು:


ಉಗುಳುವುದು:

ಎಲೆ-ಅಡಿಕೆ, ಗುಟ್ಕಾ ಇತ್ಯಾದಿಗಳನ್ನು ಜಗಿದು ಉಗುಳುವುದು ಒಂದು ವ್ಯಾಪಕ ಸಮಸ್ಯೆ. ರಸ್ತೆಗಳು, ಉದ್ಯಾನಗಳು, ಬಸ್-ರೈಲ್ವೆ ನಿಲ್ದಾಣಗಳು, ಶೌಚಾಲಯಗಳು, ಮನರಂಜನಾ ಸ್ಥಳಗಳು, ದೇವಾಲಯಗಳು, ಶಾಲೆ-ಕಾಲೇಜುಗಳು- ಹೀಗೆ ಎಲ್ಲೆಂದರಲ್ಲಿ ಉಗುಳುವವರು ಸಭ್ಯತೆಯ ಪದವನ್ನೇ ಅರಿಯದವರಾಗಿದ್ದಾರೆ. ಯಾರೋ ಉಗುಳಿದ್ದು ಇನ್ನಾರಿಗೋ ಸಿಂಪಡಣೆಯಾಗುತ್ತದೆ. ವಾಹನಗಳಲ್ಲಿ ಚಲಿಸುತ್ತಲೇ ಉಗುಳುವವರಂತೂ ಲೋಕಕಂಟಕರಾಗಿದ್ದಾರೆ. ಇದು ಕೇವಲ ದೇಶದೊಳಗಿನ ಸಮಸ್ಯೆಯಲ್ಲ. ಈ ಮಹನೀಯರು ವಿದೇಶಗಳಿಗೆ ಹೋದಾಗಲೂ ತಮ್ಮೊಂದಿಗೆ ಈ ಚಟವನ್ನು ಕರೆದುಕೊಂಡು ಹೋಗುತ್ತಾರೆ.

ರಸ್ತೆ ನಿಯಮಗಳ ಉಲ್ಲಂಘನೆ:

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವವರು ತಮ್ಮ ಗುರಿ ತಲುಪುವುದಕ್ಕಿಂತ ಹೆಚ್ಚಾಗಿ ಇತರರನ್ನು ಹಿಂದಿಕ್ಕುವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ. ನಮ್ಮಲ್ಲಿ ಸಾಲು ಶಿಸ್ತು ಬಹುತೇಕ ಅಸ್ತಿತ್ವದಲ್ಲಿಲ್ಲ. ತಪ್ಪು ಬದಿಯಿಂದ ಹಿಂದಿಕ್ಕುವುದು ಮತ್ತು ಸಂಚಾರ ಸಂಕೇತಗಳನ್ನು ನಿರ್ಲಕ್ಷಿಸುವುದು ಸಾಮಾನ್ಯ ವಿಷಯವಾಗಿದೆ. ಗೊತ್ತಿರಲಿ, ಬಹಳಷ್ಟು ಮುಂದುವರಿದ `ದೇಶಗಳಲ್ಲಿ ಓವರ್‌ಟೇಕ್ ಎಂಬ ಪರಿಕಲ್ಪನೆಯೇ ಇಲ್ಲ. ಅಲ್ಲಿ ನಿರ್ದಿಷ್ಟ ವಾಹನಗಳು, ನಿರ್ದಿಷ್ಟ ಲೇನ್‌ಗಳಲ್ಲಿ ನಿರ್ದಿಷ್ಟ ವೇಗದಲ್ಲಿ ಚಲಿಸುತ್ತಿರುತ್ತವೆ. ಇದರಿಂದ ಅಪಘಾತಗಳು ಕಡಿಮೆ ಮತ್ತು ಆತಂಕರಹಿತ ವಾಹನ ಚಾಲನೆ ಸಾಧ್ಯ.

ಕಸ ಎಸೆಯುವುದು:

ಬಹುತೇಕ ನಾಗರಿಕರು ಕಸವನ್ನು ರಸ್ತೆಗಳಲ್ಲಿ
ಎಸೆಯುವುದರಿಂದ, ಸುಡುವುದರಿಂದ ಭಾರತದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಸಾಧ್ಯವಿಲ್ಲವಾಗಿದೆ. ಈ ಸಮಸ್ಯೆ ಕೇವಲ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ; ದೇಶದ ಅರಣ್ಯಗಳು, ನದಿ – ದಡಗಳು, ಸರೋವರಗಳು ಕಸದ ರಾಶಿಯ ತಾಣಗಳಾಗಿವೆ. ತುಂಬಿ ತುಳುಕುವ ಕಸವು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ, ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳನ್ನು ಹರಡುತ್ತದೆ.

ಮೊಬೈಲ್, ಡಿಜೆ, ಪಟಾಕಿಗಳ ಹಾವಳಿ:

ಬಸ್‌ಗಳಲ್ಲಿ ರೈಲುಗಳಲ್ಲಿ,ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೆಡ್‌ಫೋನ್‌ ಗಳಿಲ್ಲದೆ ಜೋರಾಗಿ ಸಂಗೀತ ಕೇಳುವವರು, ವಿಡಿಯೊ ನೋಡುವವರು; ಜೋರಾಗಿ ಡಿಜೆ ಕಾರ್ಯಕ್ರಮಗಳನ್ನು ಆಯೋಜಿಸುವವರು; ಮಿತಿರಹಿತವಾಗಿ ಪಟಾಕಿ ಸುಡುವವರು ಸಭ್ಯತೆಯ ಎಲ್ಲಾ ಎಲ್ಲೆಗಳನ್ನು ಮೀರಿ ನಿಂತವರಾಗಿದ್ದಾರೆ. ಜಪಾನ್‌ನಂತಹ ದೇಶಗಳಲ್ಲಿ ಸಾರ್ವಜನಿಕ
ಸ್ಥಳಗಳಲ್ಲಿ ಅನಗತ್ಯವಾಗಿ ಮಾತನಾಡುವುದೇ ಇಲ್ಲ; ಮಾತನಾಡಬೇಕಾದ ಅನಿವಾರ್ಯತೆ ಇದ್ದಲ್ಲಿ ಮೆಲುದನಿಯಲ್ಲಿ ಮಾತನಾಡುತ್ತಾರೆ. ನಮ್ಮ ಜನ ಸಹಜವಾಗಿ ಮಾತನಾಡಿದರೂ ಅಮೆರಿಕ, ಜಪಾನ್‌ಗಳಿಗೆ ಕೇಳಿಸುತ್ತದೆ!

ಸರತಿ ಸಾಲು ಉಲ್ಲಂಘನೆ:

ಮಿತಿಮೀರಿದ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಎಲ್ಲದಕ್ಕೂ ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯ ವಿದ್ಯಮಾನವಾಗಿದೆ. ಸರದಿಯಲ್ಲಿ ನಿಲ್ಲುವುದು ತಪ್ಪಲ್ಲ; ಸರದಿ ಮುರಿಯುವುದು ತಪ್ಪು, ಮಧ್ಯೆ-ಮಧ್ಯೆ ತೂರಿಕೊಳ್ಳುವುದು; ಇವರು ನಮ್ಮವರು, ಈಗ ಆಚೆ ಹೋಗಿದ್ದರು ಎಂದು ಹೇಳುವುದು; ವಿಐಪಿಗಳೆಂದು ತೋರಿಸಿಕೊಳ್ಳುವುದು ಸಮಾಜದ ಮೇಲಿನ
ನಂಬಿಕೆಯನ್ನೇ ಹಾಳುಮಾಡುತ್ತಿವೆ.

ವಿದೇಶಿ ಪ್ರವಾಸಿಗರೊಂದಿಗೆ ಅನುಚಿತ ವರ್ತನೆ:

ನಾಗರಿಕ ಪ್ರಜ್ಞೆಯ ಕೊರತೆಯು ಜಾಗತಿಕವಾಗಿ ಭಾರತದ ಪ್ರತಿಷ್ಠೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ಥಳೀಯರು ವಿದೇಶಿ ಪ್ರವಾಸಿಗರೊಂದಿಗೆ ಅನುಚಿತವಾಗಿ
ವರ್ತಿಸುವ ವಿಡಿಯೊಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಅತಿಥಿ ದೇವೋಭವ ಎಂದು ಹೇಳುವ ದೇಶದಲ್ಲಿ ವಿದೇಶಿಯರೊಂದಿಗೆ ಅನುಚಿತವಾಗಿ ವರ್ತಿಸಿದಾಗ, ಅವರು ನಮ್ಮ ದೇಶದ ಬಗ್ಗೆ ಎಂತಹ ಸಂದೇಶವನ್ನು ಕೊಂಡೊಯ್ಯಲು ಸಾಧ್ಯ?

ನಾಗರಿಕ ಪ್ರಜ್ಞೆಯ ಕೊರತೆಗೆ ಕಾರಣಗಳು:


1. ಭಾರತದ ಅತಿಯಾದ ಜನಸಂಖ್ಯೆ ಮತ್ತು ಬಡತನ ಇದಕ್ಕೆ – ಕಾರಣ ಎಂದು ಹಲವರು ವಾದಿಸುತ್ತಾರೆ. ಆದರೆ, ನಮ್ಮಷ್ಟೇ ಜನಸಂಖ್ಯೆಯನ್ನು ಹೊಂದಿರುವ ಚೀನಾದ ನಗರಗಳು ಸ್ವಚ್ಛವಾಗಿವೆ.

2. ಬಡತನವು ಮತ್ತೊಂದು ಕಾರಣವೆಂದು ಹೇಳಲಾಗುತ್ತದೆ. ಆದರೆ, ಭಾರತಕ್ಕಿಂತ ಹೆಚ್ಚು ಪ್ರತಿಶತ ಬಡತನ ಹೊಂದಿರುವ ಎಷ್ಟೋ ರಾಷ್ಟ್ರಗಳಲ್ಲಿ ನಾಗರಿಕ ಪ್ರಜ್ಞೆ ಉನ್ನತ ಮಟ್ಟದಲ್ಲಿದೆ. ಇದಕ್ಕೆ ಆಫ್ರಿಕಾ ಖಂಡದ ರುವಾಂಡಾದ ರಾಜಧಾನಿ ಕಿಗಾಲಿಯನ್ನು ಉದಾಹರಣೆಯಾಗಿ ನೋಡಬಹುದು. ಅಲ್ಲಿ ನಾಗರಿಕರು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವಲ್ಲಿ ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಾರೆ.

3.ನಾಗರಿಕ ಶಿಕ್ಷಣದ ಕೊರತೆ:

ಭಾರತದ ನಾಗರಿಕ ಸಮಸ್ಯೆಗಳ ‘ಮೂಲ ನಾಗರಿಕ ಶಿಕ್ಷಣದ ಕೊರತೆಯಲ್ಲಿದೆ ಎಂಬುದು ಒಪ್ಪಬೇಕಾದ ಸಂಗತಿ. ನಮ್ಮಲ್ಲಿ ಶಿಕ್ಷಣ ಎಂದರೆ ಅಂಕ ಗಳಿಸುವ ಪ್ರಕ್ರಿಯೆಯಾಗಿದೆ. ಹೀಗಾಗಿಯೇ, ಸ್ನಾತಕ, ಸ್ನಾತಕೋತ್ತರ ಪದವಿಗಳನ್ನು ಪಡೆದವರೂ, ಉನ್ನತ ಹುದ್ದೆಗಳಲ್ಲಿ ಇರುವವರೂ ಕಡಿಮೆ ನಾಗರಿಕ ಪ್ರಜ್ಞೆ ಹೊಂದಿರುತ್ತಾರೆ. ಜಪಾನ್‌ನಂತಹ – ದೇಶಗಳಲ್ಲಿ, ಮಕ್ಕಳು ತಮ್ಮ ತರಗತಿ ಕೊಠಡಿಗಳನ್ನು ತಾವೇ ಸ್ವಚ್ಛಗೊಳಿಸುತ್ತಾರೆ, ಅಲ್ಲಿನ ಜನ ತಮ್ಮ ಓಣಿಗಳನ್ನು ತಾವೇ ಶುಚಿಯಾಗಿಟ್ಟುಕೊಳ್ಳುತ್ತಾರೆ.

4. ಮೂಲಸೌಕರ್ಯಗಳ ಕೊರತೆ:

ಸಾಕಷ್ಟು ತ್ಯಾಜ್ಯ ತೊಟ್ಟಿ ಶೌಚಾಲಯ, ನೀರಿನ ತೊಟ್ಟಿಗಳು ಮತ್ತು ಸಾರ್ವಜನಿಕ ಆಸನಗಳಂತಹ ಮೂಲಸೌಕರ್ಯಗಳ ಕೊರತೆಯು ನಾಗರಿಕ ಪ್ರಜ್ಞೆಯಲ್ಲಿನ ಕೊರತೆಗೆ ಕಾರಣವಾಗಿದೆ. ಸ್ವಚ್ಛ ನಗರ ಸರ್ವೇಕ್ಷಣದಲ್ಲಿ ನಿರಂತರವಾಗಿ ಮೊದಲ ಸ್ಥಾನವನ್ನು ಪಡೆಯುತ್ತಿರುವ – ಇಂದೋರ್‌ನಲ್ಲಿ ನಾಗರಿಕ ಸೌಲಭ್ಯಗಳ ಹೆಚ್ಚಳವು ಒಳ್ಳೆಯ ನಾಗರಿಕ ಪ್ರಜ್ಞೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ.

5. ಕಠಿಣ ದಂಡನಾ ಕ್ರಮಗಳು ಇಲ್ಲದಿರುವುದು:

ಸ್ವಚ್ಚತಾ – ಮಾನದಂಡಗಳ ಕಟ್ಟುನಿಟ್ಟಿನ ಜಾರಿಯಲ್ಲಿ ವಿಫಲತೆ ಮತ್ತು ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ, ಕಠಿಣ ಶಿಕ್ಷೆ – ವಿಧಿಸದಿರುವುದು ನಮ್ಮಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಈ ಮನೋಭಾವವನ್ನು ಹುಟ್ಟುಹಾಕಿದೆ.

ನಾಗರಿಕ ಪ್ರಜ್ಞೆಯನ್ನು ಬೆಳೆಸಲುಮಾರ್ಗೋಪಾಯಗಳು:


ಶಿಕ್ಷಣದಲ್ಲಿ ಸುಧಾರಣೆ:

ಚಿಕ್ಕ ವಯಸ್ಸಿನಿಂದಲೇ ಮೌಲ್ಯಗಳು, ಸಹಾನುಭೂತಿ ಮತ್ತು ಪೌರತ್ವದ ಮೇಲೆ ಕೇಂದ್ರೀಕರಿಸುವ – ಪ್ರಾಯೋಗಿಕ ನಾಗರಿಕ ಶಿಕ್ಷಣವನ್ನು ನೀಡಬೇಕು.

ವ್ಯವಸ್ಥೆಯಲ್ಲಿ ಬದಲಾವಣೆ:

ಬಲವಾದ, ಸ್ಥಿರ ಕಾನೂನು ಜಾರಿ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ನಾಗರಿಕ ಮೂಲಸೌಕರ್ಯಗಳಲ್ಲಿ ಸರಕಾರ ಹೆಚ್ಚು ಹೂಡಿಕೆ ಮಾಡಬೇಕು.

ಸಮುದಾಯದ ಪಾಲ್ಗೊಳ್ಳುವಿಕೆ:

ಎಲ್ಲವನ್ನೂ ಸರಕಾರವೇ ಮಾಡಬೇಕು ಎಂಬ ಮನಸ್ಥಿತಿಯ ಬದಲಿಗೆ ದೇಶವನ್ನು ಸುಂದರ, ಸಹನೀಯವಾಗಿಟ್ಟುಕೊಳ್ಳುವಲ್ಲಿ ಪ್ರತಿಯೊಬ್ಬನಿಗೂ ಒಂದು ಪಾತ್ರ ವಿದೆ. ದೇಶದ ಆಸ್ತಿ ನಮ್ಮದೇ ಆಸ್ತಿ ಎಂಬ ಮನಸ್ಥಿತಿ ಬೆಳೆಯಬೇಕು.

ಉನ್ನತ ಸ್ಥಾನದಲ್ಲಿರುವವರು ಮಾದರಿಯಾಗಬೇಕು:

ನಮ್ಮ ದೇಶದ ಪ್ರಧಾನಿ ಶುಚಿತ್ವಕ್ಕೆ ಬಹಳಷ್ಟು ಮಹತ್ವ ನೀಡುತ್ತ ಬಂದಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಇದಕ್ಕೊಂದು ಉದಾಹರಣೆಯಾಗಿದೆ. ಅವರಂತೆಯೇ ದೇಶದ ಇತರ ನಾಯಕರು, ಸೆಲೆಬ್ರಿಟಿಗಳು, ಆಧ್ಯಾತ್ಮಿಕ ಗುರುಗಳು, ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿ ಸಂಘಟನೆಗಳು ನಾಗರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಮಾದರಿಯಾಗಬೇಕು.

ಉಪಸಂಹಾರ:

ಜಾಗತಿಕವಾಗಿ ಭಾರತ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತೇವೆ. ಅದೇ ಹೊತ್ತಿಗೆ, ದೇಶದ ಪರಿಸರವನ್ನು, ಸಂಪತ್ತನ್ನು ಮೂಲಸೌಕರ್ಯಗಳನ್ನು ಹಾಳು ಮಾಡುವ; ನಿಯಮಗಳನ್ನು ಉಲ್ಲಂಘಿಸುವ ಜನರನ್ನು ಕಂಡಾಗ ಮನಸ್ಸು ಮುದುಡುತ್ತದೆ. ನಾಗರಿಕ ಪ್ರಜ್ಞೆಯ ಕೊರತೆಯು ಕೇವಲ ಒಂದು ಪಿಡುಗಲ್ಲ; ಇದು ದೇಶದ ಸರ್ವಾಂಗೀಣ ಪ್ರಗತಿಗೆ ದೊಡ್ಡ ಅಡಚಣೆಯಾಗಿದೆ. ಉನ್ನತ ನಾಗರಿಕ ಪ್ರಜ್ಞೆಯು ನಮ್ಮ ಶಿಕ್ಷಣ, ಆಡಳಿತ ಮತ್ತು ಸಂಸ್ಕೃತಿಯಲ್ಲಿ ಸಮಗ್ರ ಬದಲಾವಣೆಯನ್ನು ಬಯಸುತ್ತದೆ. ದೇಶದ ಹಿರಿಮೆಗಾಗಿ, ಎಲ್ಲರ ಒಳಿತಿಗಾಗಿ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ.

ESSAY-06



ಕೃಪೆ: ಐ.ಜಿ. ಚೌಗಲಾ ಉಪನ್ಯಾಸಕರು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!