Amma ninna Edeyaladalli: ಅಮ್ಮ ನಿನ್ನ ಎದೆಯಾಳದಲ್ಲಿ ಲೇಖನ-01

Amma ninna edeyaladalli: ಅಮ್ಮ ನಿನ್ನ ಎದೆಯಾಳದಲ್ಲಿ ಲೇಖನ-01

Amma ninna edeyaladalli: ಸೋಮವಾರದ ಸಂತೆ-ಗದ್ದಲದ ನೂಕು ನುಗ್ಗಲಲ್ಲಿ ಒಂದು ಕೈಯಲ್ಲಿ ಖಾಲಿ ಚೀಲ ಮತ್ತೊಂದು ಕೈಯಿಂದ ಅವ್ವನ ಕೈಹಿಡಿದು. ಆಕೆ ಸಂತೆಯಲ್ಲಿ ಕೊಡಿಸುತ್ತಿದ್ದ ತಿಂಡಿ-ತಿನಿಸೋ, ಆಟಿಕೆ ಸಾಮಾನಿನ ಆಸೆಯ ಸೆಳೆತಕ್ಕೋ ಮುನ್ನುಗ್ಗುತ್ತಿದ್ದೆ. ಹೀಗೆ ಸಾಗುತ್ತಿದ್ದಾಗ ಆ ಅಪರಿಚಿತಳಿಗೆ ಹಾಯ್ದುಬಿಟ್ಟೆ, ಆಕೆಯ ಚೀಲದಲ್ಲಿದ್ದ ಗೋಧಿ ಹೊರಚಿಮ್ಮಿತ್ತು! ಆಕೆ ಬಡವಿ ಅಂತಹ ಸಂತೆ ಗದ್ದಲಲ್ಲೇ ನನ್ನೊಂದೆರಡು ಬೈಯುತ್ತ ಮಣ್ಣಲ್ಲಿ ಬಿದ್ದು ಹೋದ ಕಾಳುಗಳನ್ನು ಅಮೂಲ್ಯ ಮುತ್ತು ರತ್ನಗಳನ್ನು ಆರಿಸಿಕೊಂಡಂತೆ ಆರಿಸತೊಡಗಿದಳು. ಅವನಿಗೆ ಆಕೆಯ ಬಡತನದ ಬೇಗೆಯ ಅರಿವಾಗಿ ಮರುಕಪಟ್ಟು ಆಕೆಗೆ “ನೀ ಇಲ್ಲೇ ಇರವ್ವಾ ನಾ ನಿನಗ ಗೋಧಿ ತಂದ ಕೊಡತೀನಿ” ಅಂತ ಹೇಳಿ ಕಾಳಿನ ಸಂತೆಗೆ ಸಾಗಿ ಒಂದು ಕಿಲೋ ಗೋಧಿ ತಂದು ಆಕೆಯ ಬಿದ್ದು ಹೋದ ಗೋಧಿಗಿಂತ ಹೆಚ್ಚಿಗೆ ಕಾಳನ್ನು ಎರಡು ಬೊಗಸೆಯಷ್ಟು ಆಕೆಯ ಚೀಲದೊಳಕ್ಕೆ ಹಾಕಿ “ಬಿಡಪ್ಪಾ ಮಣ್ಣಿನೊಳಗ ಬಿದ್ದಹೋದ ಕಾಳ ಆರಸಬ್ಯಾಡಾ ತಗೋ ಇವನ್ನ” ಎಂದು ಆಕೆ ಶ್ರಮಪಟ್ಟು ಮಣ್ಣಿನಲ್ಲಿ ಬಿದ್ದುಕೊಂಡ ಗೋಧಿಯನ್ನು ಆರಿಸುವುದನ್ನು ತಪ್ಪಿಸಿದ್ದಳು.

ಘಟನೆ ಹನ್ನೆರಡು ವರ್ಷದ ಹುಡುಗಿಯಾಗಿದ್ದ ನನ್ನಲ್ಲಿ ಕರುಣೆ, ಪ್ರಮಾಣಿಕತೆ ಹುಟ್ಟು ಹಾಕಿತ್ತು! ಅವ್ವ ನನಗೆ ಮತ್ತೂ ವಿವರಿಸಿ ಹೇಳಿದ್ದಳು. “ಪಾಪ ಬಡವರು, ಭಾಳ ಕಷ್ಟಾಪಟ್ಟು ದುಡಿತಿರತಾರ ಅಂತಾದ್ರಾಗ ನಮ್ಮಿಂದಾದ ನಷ್ಟ ನಾವ ತುಂಬಬೇಕು ಬಡ ಜನರನ್ನು ಮರಗಿಸಿದ್ದ ಜಯ ಆಗೂದಿಲ್ಲ ನಮಗೆ ಸುಖಾ ಆಗೂದಿಲ್ಲಾ” ಆ ಸತ್ಯದ ಮಾತುಗಳು ಇನ್ನೂ ನನ್ನ ಕಿವಿಯೊಳಗೆ ಗುಂಯ್‌ ಗುಡುತ್ತವೆ.

ಆಗಿನ್ನೂ ನನಗೆ ಏಳು ವರ್ಷ ವಯಸ್ಸು, ಎದುರು ಮನೆಯ ಚೆನ್ನವ್ವನ ದೇವರಮನೆಯಲ್ಲಿ ಸಣ್ಣದಾಗಿ ಸುರುಳಿ ಸುತ್ತಿ ಹೆಡೆ ಎತ್ತಿ ನಿಂತ ಬೆಳ್ಳಿ ನಾಗ ನನ್ನ ಮನದಲ್ಲಿ ಎತ್ತಿಕೊಳ್ಳುವ ಚಿತ್ತ ಹಚ್ಚಿಸಿ ತನ್ನ ಸುಂದರತನದಿಂದ ನನ್ನನ್ನು ಕಳ್ಳತನಕ್ಕೆ ಪ್ರೇರೇಪಿಸಿತು. ಚೆನ್ನಮ್ಮನ ದೇವರಮನೆಯಲ್ಲಿದ್ದ ನಾಗ ನಮ್ಮ ದೇವರ ಮನೆಯಲ್ಲಿ ಪ್ರತ್ಯಕ್ಷ! ನಾನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದೆ. ಅಣ್ಣ ಅಕ್ಕ ನನ್ನನ್ನು ಹಿಯಾಳಿಸಿ ಬೈದರು, ‘ಕಳ್ಳಿ’ ಎಂಬ ಬಿರುದು ಕೂಡ ನೀಡಿದರು. ಆದರೆ ಅವ್ವ ನನ್ನನ್ನು ಬೈಯಲಿಲ್ಲ, ಬಡಿಯಲಿಲ್ಲ. ಬದಲಾಗಿ ನನ್ನನ್ನು ತನ್ನ ತೊಡೆಯ ಮೇಲೆ ಕುಳ್ಳರಿಸಿ ನನ್ನ ಕತ್ತಿನಲ್ಲಿ ನಲಿಯುತ್ತಿದ್ದ ಅಪ್ಪ ನನಗಾಗಿ ತಂದಿದ್ದ ಸುಂದರ ಮುತ್ತಿನ ಸರವನ್ನು ತೋರಿಸುತ್ತ

“ಇದು ಯಾರದು?” “ನಂದು”

“ಇದನ್ನ ಯಾರಾದ್ರೂ ನಿನಗ ಗೊತ್ತ ಆಗದ ಹಂಗ ತಗೊಂಡ್ರ ಏನ ಆಗೈತಿ?” ಎಂದು ಆವ್ವ ನನ್ನನ್ನು ಕೇಳಿದಾಗ, ನನ್ನ ಸರವನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದು “ಆಯ್ಯೋ ಅವ್ವಾ ನಾ ಇದನ್ನ ಯಾರಿಗೂ ಕೊಡೂದಿಲ್ಲ”

“ಹಂಗ ಏನಾರ ಆದ್ರ ನೀ ಅಸ್ತೆಯಲ್ಲಾ?” “ಹುಂ”

“ಮತ್ತೆ ನಮ್ಮ ಸಾಮಾನು ಕಳದ್ರ ನಮಗ ಹ್ಯಾಂಗ ದುಃಖ ಆಗಿ ಅಳು ಬರತಿ, ಹಾಂಗ ಇನ್ನೊಬ್ಬರಿಗೂ ಆಕೃತಿ, ಇನ್ನೊಬ್ಬರಿಗೆ ದುಃಖಾ ಕೊಟ್ಟ ದೇವು ನಮಗೆ ಒಳ್ಳೆದು ಮಾಡೂದಿಲ್ಲ. ನಾವು ಯಾವಾಗೂ ಮತ್ತೊಬ್ಬರ ವಸ್ತು ಕಸಕೋಬಾರದು. ನಮ್ಮ ವಸ್ತನ ನಮ್ಮದಾಗಿ ಇರೂದಿಲ್ಲಾ ಅಂತಾದ್ದಾಗ ಬ್ಯಾರೆದಾರದ ನಮ್ಮದ ಹ್ಯಾಂಗ ಆಕೃತಿ?”

ಎಂದೆಲ್ಲ ನನ್ನ ಬಾಲಬುದ್ದಿಗೆ ತಿಳಿಯುವಂತೆ ನವಿರಾಗಿ ತಿಳಿಹೇಳಿ ಅಹಿಂಸೆ ಮೂಲಕ ಮುಂದೆ ಎಂದೂ ಕಳ್ಳತನ ಮಾಡದಂತೆ ತಡೆದಿದ್ದಳು. ಹೀಗೆ ಮಾತೃತ್ವದ ಆದರ್ಶವನ್ನು ಮೈಗೂಡಿಸಿಕೊಂಡ ನನ್ನ ಅವ್ವ ನನಗೆ ಹಾಲು ಅನ್ನದ ಜೊತೆ ಜೊತೆಗೆ ಅವಳಲ್ಲಿದ್ದ ಸತ್ಯ, ಪ್ರಾಮಾಣಿಕತೆ, ಕರುಣೆ, ಪರಿಶುದ್ಧತೆ, ತಾಳ್ಮೆ ಮುಂತಾದ ಸದ್ಗುಣಗಳೆಲ್ಲವನ್ನು ಉಣ್ಣಿಸುತ್ತಿದ್ದಳು.

ಆ ಘಟನೆ ನನ್ನ ಮನದಲ್ಲಿನ್ನೂ ಹಚ್ಚಹಸಿರಾಗಿದೆ. ನಾನಾಗ ಸರಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದೆ. ನಾನು ಶಾಲೆಯ ಉಪಮುಖ್ಯಮಂತ್ರಿ ನಮ್ಮ ಶಾಲೆಯ ಬೀಗವನ್ನು ಪ್ರತಿದಿನವೂ ನಮ್ಮ ಗುರುಗಳ ಮನೆಯಿಂದಲೇ ತಂದು ತೆರೆಯುವ ಪರಿಪಾಠ. ಅಂದು ಶಾಲೆಯನ್ನು ಬೇರೆ ಬೀಗದ ಕೈಯಿಂದ ತೆರೆದಿದ್ದರು. ನಮ್ಮ ಗುರುಗಳೂ ಕಾರಣಾಂತರದಿಂದ ಶಾಲೆಗೆ ಬಾರದ ಹೊತ್ತದು. ಮುಂದೆ ಊಟಕ್ಕೆ ಬಿಟ್ಟಾಗ. ಎಲ್ಲರೂ ಓಡೋಡಿ ಮನೆಗೆ ನಡೆದರು.

ಮುಖ್ಯಮಂತ್ರಿ ಕಸ್ತೂರಿ ಬೀಗ ಹಾಕಲು ಬೀಗ ಹುಡುಕಿದಾಗ ತಿಳಿಯಿತು ಅಂದು ಬೀಗದ ಕೈ ತಂದೇ ಇಲ್ಲವೆಂದು. ಇನ್ನೇನು ಮಾಡುವುದೆಂದು ಮುಖ್ಯಮಂತ್ರಿ ತನ್ನ ಜವಾಬ್ದಾರಿಯಿಂದ ಜಾರಿಕೊಂಡು ಮನೆಗೆ ನಡೆದಳು. ಎಲ್ಲರೂ ಹೋದರು ನನಗೂ ಹೋಗು ಎಂದರು ಆದರೆ ನನ್ನಲ್ಲಿ ನನ್ನ ಕರ್ತವ್ಯ ಜಾಗೃತಗೊಂಡಿತ್ತು. ಹಸಿವು ಬಾಯಾರಿಕೆಗೆ ನನ್ನ ಕರ್ತವ್ಯ ಸೋಲಲಿಲ್ಲ.

ಸಮಯ ಎರಡು ಮುಕ್ಕಾಲಾಯಿತು. ಅಂದು ಅಮಾವಾಸ್ಯೆ ಇತ್ತು. ಅಮಾವಾಸ್ಯೆಯ ದಿನ ನಮ್ಮ ಮನೆಗಳಲ್ಲಿ ಹೋಳಿಗೆ, ಪಾಯಸ, ಸಂಡಿಗೆ ಎಂದೆಲ್ಲ ಹಲವಾರು ವಿಧದ ಭಕ್ಷ್ಯಭೋಜನ ತಯಾರಿಸುತ್ತಿದ್ದರು. ಅಮಾವಾಸ್ಯೆಯ ತರತರಹದ ಅಡುಗೆ ಮಾಡಿ ಊಟಕ್ಕೆ ನನ್ನ ನಿರೀಕ್ಷೆಯಲ್ಲಿದ್ದ ಅವ್ವ ನಾನು ಮನೆಗೆ ಹೋಗದಿದ್ದಾಗ, ಚಡಪಡಿಸಿ ಶಾಲೆಯವರೆಗೂ ಗಾಬರಿಯಿಂದ ಬಂದಳು.

ವಿಷಯ ತಿಳಿದ ಅವ್ವ ಮುಖ್ಯಮಂತ್ರಿ ತನ್ನ ಜವಾಬ್ದಾರಿಯನ್ನು ಕಳಚಿದರೂ ಅವಳ ನಂತರದ ಹೊಣೆಹೊತ್ತ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಅಲ್ಲಿ ಇದ್ದ ಅಷ್ಟೊಂದು ಮಕ್ಕಳಲ್ಲಿ ನಾನು, ಮಿನುಗು ತಾರೆಗಳ ಸಮೂಹದಲ್ಲಿ ಚಂದ್ರನಂತೆ ಕಂಡಂತಾಗಿ ಹೆಮ್ಮೆಪಟ್ಟಿದ್ದಳು. ತಾನು ಬಿತ್ತಿದ ಬೀಜ ಮೊಳಕೆಯೊಡೆದುದನ್ನು ಕಂಡು ಮುಂದೆ ಹೆಮ್ಮರವಾಗಿ ಫಲನೀಡುವ ಭರವಸೆ ಕಂಡು ಸಂತಸಪಟ್ಟಳು.

ಅಮಾವಾಸ್ಯೆ ಎಂದ ತಕ್ಷಣ ನೆನಪಾಗುವುದು ಅವ್ವ, ಒಂದೊಂದಾಗಿ ಬೆರಳುಗಳನ್ನು ಮಡುಚುತ್ತಾ ಕಾರಹುಣ್ಣಿಮೆ, ಕಡ್ಲಿಗಾರ ಹುಣ್ಣವಿ, ಬಂದ ಹುಣ್ಣಿವಿ, ಭಾರಾತ ಹುಣ್ಣವಿ ಎಂದು ತಿಥಿಮತಿಗಳನ್ನು ತಿಂಗಳುಗಳ ಮೂಲಕ ಅರುಹುತ್ತಿದ್ದದ್ದು. ಹಾಗೆ ಹೇಳುವ ಅವ್ವನ ಬೆರಳುಗಳನ್ನೇ ನಾನು ಬೆರಗಿನಿಂದ ನೋಡುತ್ತಿದ್ದೆ. ಕೇವಲ ನಾಲ್ಕನೇ ತರಗತಿ ಓದಿಕೊಂಡ ಅವಳು ಯಾವ ವಿದ್ಯಾವಂತೆಗೂ ಕಡಿಮೆ ಎನಿಸಿರಲಿಲ್ಲ.

ಅತ್ಯುತ್ತಮವಾಗಿ ಕನ್ನಡದ ಪತ್ರಿಕೆಗಳನ್ನು ಓದುತ್ತಿದ್ದ ಅವ್ವ ಕನ್ನಡದ ಸಂಗೀತಗಾರರು, ವಿದ್ವಾಂಸರ ಬಗ್ಗೆ ಅರಿತುಕೊಂಡಿದ್ದಳು. ಅವಳು ಹೇಳುವುದೆಲ್ಲವೂ ಸ್ವಾರಸ್ಯಕರವೆನಿಸುತ್ತಿತ್ತು. ಅವಳ ಬದುಕಿನಲ್ಲಿ ನಡೆದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮತ್ತೆ ಮತ್ತೆ ಅವಳ ಮಾತಿನಲ್ಲಿಯೇ ಕೇಳಬೇಕೆನ್ನಿಸುತ್ತಿತ್ತು. ಅಂತಹ ಘಟನೆಗಳಲ್ಲಿ ರಾಮದುರ್ಗದ ಮಲಪಹಾರಿ ನದಿಯಲ್ಲಿ ಹಾಯ್ದು ಹೋದ ಮೊಸಳೆಯ ವಿಷಯ ತುಂಬಾ ಸ್ವಾರಸ್ಯಕರವಾಗಿತ್ತು. ಅದನ್ನು ಅವ್ವನ ಮಾತಿನಲ್ಲಿಯೇ ಹೇಳುವುದಾದರೆ, ‘ತಂಗಿ ಆಗ ಹೊಳಿ ತುಂಬಿ ಹರೀತಿತ್ತು. ಈಚೆ ದಡದಾಗಿಂದ ಆಚೆ ದಡಕ್ಕೆ ಹೋಗಬೇಕಾದ್ರ ನಾವಿನ್ಯಾಗ ಹೋಗಬೇಕಾಕ್ಕಿತ್ತು.

ಹಿಂಗ ಒಂದ ಸಲಾ ಹೊಳಿ ತುಂಬಿ ಹರಿಯೂ ಹೊತ್ತಿನ್ಯಾಗ, ಹೊಳಿ ಸಾಲಿನ ಮ್ಯಾಲೆ ಅರವಿ ಒಗ್ಯಾಕತ್ತಿದ್ದಿವಿ. ಯಕ್ಕೋಜಿ ನಾಗಪ್ಪ ಕಾಕಾ ಒಮ್ಮಿಂದೊಮ್ಮೆ ‘ಏ ಮ್ಯಾಗ ಬರಿವಾ ಎಲ್ಲಾರೂ ಮೊಸಳೆ ಬಂತ ಮೊಸಳಿ’ ಅಂತ ಚೀರಾಡಿದಾ ನಾವು ಅಂಜಿ ತಣ್ಣಗಾರ ಆದೀವಿ ಕೈಯಾಗಿನ ಅರವಿ ಒಕ್ಕೊಟ್ಟ ಏರಿ ಮ್ಯಾಲೆ ಹತ್ತಿ ನಿಂತಿವಿ. ಆ ಮೊಸಳಿ ಹಾಂಗ ಹಂಡೆದಂತಾ ಬಾಯಿ ತಕ್ಕೊಂಡ ಈಸಕೊಂತ ಹೋತ, ಹಂತಾ ದೊಡ್ಡ ಮೊಸಳಿ ನಾ ಯಾವಾಗೂ ನೋಡಿದ್ದಿಲ್ಲಾ. ಅದ ಹೋಗಿ ಭಾಳೊತ್ತ ಆದ್ರೂ ನಮಗ್ಯಾರಿಗೂ ಹೊಳೆನೀರಿಗೆ ಇಳಿದ ಅರವಿ ಒಗಿಯೂ ಧೈರ್ಯಾ ಆಗಲಿಲ್ಲಾ. ಬಡಾಬಡಾ ಅರವಿ ಬಕೇಟಿನ್ಯಾಗ ತುಂಬಕೊಂಡ ಹಂಗ ಹೊಳ್ಳಿ. ಮನೀಗೆ ಬಂದೀವಿ. ಮುಂದ ಹದಿನೈದ ದಿನವಾದ್ರೂ ಹೊಳಿಕಡೆ ಹೊಳ್ಳಿ ನೋಡಲಿಲ್ಲಾ’ ಎಂದೆಲ್ಲ ನಾನು ಆ ಘಟನೆಯನ್ನು ನೆನಪಿಸಿದಾಗೊಮ್ಮೆ ಸ್ವಾರಸ್ಯಕರವಾಗಿ ಏರಿಳಿತದ ಸ್ವರದಲ್ಲಿ ಹೇಳುತ್ತಿದ್ದಳು.

ಹೌದು ಆಗ ನನ್ನ ರಾಮದುರ್ಗದ ಮಲಪಹಾರಿ ನದಿ ಬಹಳ ವಿಸ್ತಾರವಾದದ್ದಾಗಿತ್ತು. ನದಿಯನ್ನು ದಾಟಬೇಕಾದರೆ ನಾವೆನಲ್ಲಿ ಸಾಗಬೇಕಿತ್ತು. ಅದರ ಕುರುಹಾಗಿ ನದಿ ತಟದಲ್ಲಿ ಬಲುದೊಡ್ಡ ಕೆಟ್ಟುಹೋದ ನಾವೆ ಇತ್ತು. ಅದು ನಾನು. ನನ್ನೂರಿನಲ್ಲಿಯೂ ಹಡಗು ಇತ್ತೇ ಎಂದು ಚಿಕಿತಳಾಗುವಂತೆ ಮಾಡುತ್ತಿತ್ತು. ಅಷ್ಟು ಸವಿಸ್ತಾರವಾದ ನದಿ ದಿನಗಳೆದಂತೆ ಕಿರಿದಾಗುತ್ತಾ ಬಂತು. ಆದರೂ ಕೂಡ ನದಿ ತುಂಬಿ ಹರಿಯುವಾಗ ಅವ್ವ ನಮ್ಮನ್ನು ನದಿಗೆ ಕಳುಹಿಸಲು ಹೆದರುತ್ತಿದ್ದಳು. ಮಧ್ಯಾಹ್ನದ ಹೊತ್ತು ಎಲ್ಲರೂ ಮಲಗಿಕೊಂಡಾಗ ನಾವು ಮಾತ್ರ ನದಿಗೆ ಓಡೋಡಿ ಹೋಗಿ ಮುಳುಗುತ್ತಿದ್ದೆವು. ಬಟ್ಟೆಗಳೆಲ್ಲ ತೋಯ್ದು ಹೋದಾಗ, ಅಲ್ಲಿಯೇ ಉಸುಕಿನ ಮೇಲೆ ಕುಳಿತು ಬಟ್ಟೆ ಒಣಗಿದ ಮೇಲೆ ಕಳ್ಳ ಬೆಕ್ಕಿನಂತೆ ಮನೆ ಸೇರುತ್ತಿದ್ದೆವು.

ಮಳೆಗಾಲದಲ್ಲಿ ತುಂಬಿಹರಿದ ನದಿ ಬೇಸಿಗೆಯಲ್ಲಿ ಮಾತ್ರ ಸಂಪೂರ್ಣ ಸಣ್ಣದಾಗಿ ಹರಿಯುತ್ತಿತ್ತು. ಇದೇ ಬೇಸಿಗೆಯಲ್ಲಿಯೇ ಕಾಮನ ಹಬ್ಬ ಬರುತ್ತಿತ್ತು. ಹೋಳಿ ಓಕುಳಿಯಲ್ಲಿ ಮಿಂದೆದ್ದ ಗಂಡಸರು ನದಿಯಲ್ಲಿ ಮೀಯಲು ಬಂದಾಗ ನದಿಯ ಬಣ್ಣವೆಲ್ಲ ರಂಗು ರಂಗು: ಒಂದು ಸಲ ಕೆಂಪಾಗಿ ಮತ್ತೊಂದು ಹಸಿರಾಗಿ ಮಗದೊಂದು ಸಲ ಹಳದಿಯಾಗಿ ಮೈದಳೆದು ಹರಿಯುವ ನದಿಯನ್ನು ನಿಂತು ನೋಡಬೇಕು. ಹೋಳಿ ಹುಣ್ಣಿಮೆ ದಿನ ಪ್ರತಿಯೊಂದು ಓಣಿ ಓಣಿಯಲ್ಲಿಯೂ ಕಾಮನನ್ನು ಕುಳ್ಳಿರಿಸುತ್ತಿದ್ದರು.

ಅವ್ವ ನನಗೆ ತಿಳಿದ ಮಟ್ಟಿಗೆ ಯಾವ ಗಳಿಗೆಯಲ್ಲಿಯೂ ಹೆಣ್ಣು, ಗಂಡು ಮಗು ಎಂಬ ಭೇದ ಮಾಡಲಿಲ್ಲ. ಹೋಳಿ ಹುಣ್ಣಿಮೆ ದಿನ ಗಂಡು ಮಕ್ಕಳೆಲ್ಲ ಸಕ್ಕರೆ ಗೊಂಬೆಯ ಸರ ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಆ ಸರಗಳು ನನ್ನನ್ನು ಆಕರ್ಷಿಸುತ್ತಿದ್ದವು. ಅಣ್ಣಂದಿರೆಲ್ಲ ಆ ಸರಗಳನ್ನು ಹಾಕಿಕೊಂಡು ನನಗೆ ಆಶೆ ತೋರಿಸುತ್ತಿದ್ದರು. ನಾನು ನನಗೂ ಬೇಕೆಂದು ಅತ್ತಾಗ, ‘ಇದು ಗಂಡ ಹುಡುಗರ ಹಬ್ಬಾ ಇವನ್ನ ನಾವ ಅಷ್ಟೆ ಹಾಕ್ಕೋಬೇಕು ಹುಡಿಗಿಯಾರು ಹಾಕ್ಕೋಬಾರದು’ ಎಂದೆಲ್ಲ ಕಾಡುತ್ತಿದ್ದರು. ಆದರೆ ಅವ್ವ ಮಾತ್ರ ನನಗೂ ಒಂದು ಸಕ್ಕರೆಗೊಂಬೆ ಸರ ಕೊಡಿಸಿ ನನ್ನ ಕೊರಳಿಗೆ ಹಾಕುತ್ತಿದ್ದಳು. ಆದರೆ ಮರುದಿನ ಬಣ್ಣದ ಓಕುಳಿಯಲ್ಲಿ ಭಾಗವಹಿಸುವ ಅವಕಾಶ ಮಾತ್ರ ನನ್ನದಾಗುತ್ತಿರಲಿಲ್ಲ.

ನನಗೂ ಬಣ್ಣ ಎರಚಬೇಕು ಎರಚಿಸಿಕೊಳ್ಳಬೇಕು ಎನ್ನಿಸುತ್ತಿತ್ತು. ಆದರೆ ಯಾವ ಹೆಣ್ಣು ಮಕ್ಕಳೂ ಕೂಡ ಅಂದಿನ ದಿನಗಳಲ್ಲಿ ಓಕುಳಿ ಆಟದಲ್ಲಿ ಭಾಗಿಯಾಗುತ್ತಿದ್ದಿಲ್ಲ. ಹೀಗಾಗಿ ಆಶೆಯನ್ನು ಒಳಗೊಳಗೇ ಹತ್ತಿಕ್ಕಿಕೊಳ್ಳಬೇಕಾಗುತ್ತಿತ್ತು.

ಆದರೆ ಜೇಷ್ಠ ಆಷಾಢ ಕಳೆದು ಇನ್ನೇನು ಜಿಣಿಗುಡುವ ಮಳೆಯ ಶ್ರಾವಣ ಬಂತು ಎಂದರೆ ಸಾಕು ನಮ್ಮದೇ ಅಂದರೆ ಹೆಣ್ಣುಮಕ್ಕಳ ಹಬ್ಬಗಳ ಸಾಲು ಸಾಲು. ಮಣ್ಣೆತ್ತಿನ ಅಮಾವಾಸ್ಯೆಯ ನಂತರ ಗುಳ್ಳವನ ಹಬ್ಬ ನಾಲ್ಕು ವಾರಗಳ ಕಾಲ ಪ್ರತಿ ಮಂಗಳವಾರ ಗುಳ್ಳವ್ವನನ್ನು ತರುತ್ತಿದ್ದೆವು. ಪ್ರಥಮ ವಾರವೇ ಗುಳ್ಳವ್ವನ ಅಲ್ಲಿಕೆರಿಗೆ ಹೋದಾಗ ಒಂದಿಷ್ಟು ಹೊಲದ ಮಣ್ಣನ್ನು ಅವ್ವನ ಸಲಹೆಯಂತೆ ತರುತ್ತಿದ್ದೆ. ಪ್ರತಿ ವರ್ಷ ಅವ್ವ ಕುಂಬಾರನ ಮನೆಗೆ ಹೋಗಿ ಹೊಸ ಮುಚ್ಚಳವನ್ನು ತರುತ್ತಿದ್ದಳು. ಆ ಮುಚ್ಚಳಗಳ ತಳದಲ್ಲಿ ಒಂದಿಷ್ಟು ನಾನು ಹೊಲದಿಂದ ತಂದ ಎರೆಮಣ್ಣನ್ನು ಹಾಕಿ, ಅದರ ಮೇಲೆ ಗೋಧಿ, ಭತ್ತ, ಜೋಳ, ರಾಗಿ ಮುಂತಾದ ನವ ಧಾನ್ಯಗಳನ್ನು ಹಾಕಿ ಮತ್ತೆ ಮಣ್ಣಿನಿಂದ ಮುಚ್ಚಿ ಅವುಗಳಿಗೆ ನೀರು ಚಿಮುಕಿಸಿ ಮುಚ್ಚಿ ದೇವರ ಮನೆಯಲ್ಲಿ ಇಡುತ್ತಿದ್ದಳು.

ನಾಲೈದು ದಿನಗಳಲ್ಲಿ ಕಾಳುಗಳು ಮಣ್ಣನ್ನು ನೂಕಿ ಸಣ್ಣವಾಗಿ ಮೊಳಕೆ ಬಿಟ್ಟು ಹೊರಗೆ ಕಾಣಿಸಿಕೊಳ್ಳುತ್ತಿದ್ದ ಪರಿಯನ್ನು ಅದೆಷ್ಟು ನೋಡಿದರೂ ಮನಸ್ಸು ತಣಿಯುತ್ತಿರಲಿಲ್ಲ. ಮೊಳಕೆ ಬಂದ ಮೇಲೆ ಪ್ರತಿ ದಿನವೂ ಬೆಳಿಗ್ಗೆ ಎದ್ದ ತಕ್ಷಣವೇ ಆ ಮುಚ್ಚಳಗಳನ್ನೇ ನೋಡುತ್ತಿದ್ದೆ ದಿನದಿಂದ ದಿನಕ್ಕೆ ಮೇಲೆ ಮೇಲಕ್ಕೆ ಉದ್ದುದ್ದಾಗಿ ಬೆಳೆದು ಗರಿಗರಿಯಾಗಿ ಎದ್ದು ನಿಲ್ಲುತ್ತಿದ್ದ ಸಸಿಗಳು ನನ್ನನ್ನು ಸಾಕಷ್ಟು ಆಕರ್ಷಿಸುತ್ತಿದ್ದವು. ಒಟ್ಟು ಇಪ್ಪತ್ತೊಂದು ದಿನಗಳಲ್ಲಿ ಈ ಸಸಿಗಳು ಸಾಕಷ್ಟು ಹುಲುಸಾಗಿಯೇ ಬೆಳೆಯುತ್ತಿದ್ದವು. ಹೀಗೆ ಬೆಳೆದ ಸಸಿಗಳು ಪಂಚಮಿಯ ನಾಗನಿಗೆ ಮೀಸಲಾಗುತ್ತಿದ್ದವು.

ನಾಗನಿಗೆ ಈ ಸಸಿಗಳನ್ನು ಮುಡಿಸಿ ಹಾಲೆರದ ಮೇಲೆ ಉಳಿದೆಲ್ಲಾ ಸಸಿಗಳು ನಮ್ಮೂರಿನ ಬಾಲೆಯರ ಮುಡಿಸೇರುತ್ತಿದ್ದವು. ಪಂಚಮಿಯ ದಿನ ಹೊಸ ಬಟ್ಟೆ ಹಾಕಿಕೊಂಡು ಈ ಸಸಿಗಳನ್ನು ಮುಡಿಗೇರಿಸಿಕೊಂಡು ಮರಗಳಿಗೆ ಕಟ್ಟಿದ್ದ ದೊಡ್ಡ ಜೋಕಾಲಿಗಳನ್ನು ಆಡಲು ಓಡಾಡುತ್ತಿದ್ದ ಲಲನೆಯರನ್ನು ನೋಡುವುದೇ ಒಂದು ಹಬ್ಬವಾಗಿ ಪರಿಣಮಿಸುತ್ತಿತ್ತು.

ಅವ್ವ ಪ್ರೀತಿ, ಕರುಣೆ ಹಾಗೂ ಅನುಕಂಪಗಳ ಆಗರವಾಗಿದ್ದಳು. ಹಾಗೆಂದೇ ಓಣಿಯ ಅದೆಷ್ಟೋ ಬಡ ಕೂಲಿಕಾದ ಹೆಂಗಳೆಯರು ಅವಳ ಹತ್ತಿರ ಸಹಾಯಕ್ಕಾಗಿ ಬರುತ್ತಿದ್ದರು. ಹಾಗೇ ಅವ್ವನ ಮೇಲೆ ಸಾಕಷ್ಟು ನಂಬುಗೆಯನ್ನು ಹೊತ್ತ ಅವರು ತಾವು ದುಡಿದು ಉಳಿಸಿದ ಅಷ್ಟಿಷ್ಟು ಹಣವನ್ನು ತೆಗೆದಿಡಲು ಅವ್ವನಿಗೆ ನೀಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಹತ್ತಿರವಿದ್ದರೆ ಭದ್ರವಾಗಿರುವುದಿಲ್ಲವೆಂಬ ಭಯಹೊಂದಿದವರು ತಮ್ಮಲ್ಲಿಯ ಚಾರೂಚೂರು ಬಂಗಾರವನ್ನು ಅವನ ಕಪಾಟು ಎಂಬ ಟ್ರೇಜರಿಯಲ್ಲಿ ಭದ್ರವಾಗಿಡಲು ನೀಡುತ್ತಿದ್ದರು. ಹಾಗೆ ಬಂಗಾರವಿಟ್ಟವರಲ್ಲಿ ಮಾದರ ನಿಂಗವ್ವ ಕೂಡ ಒಬ್ಬಳು. ಅವಳ ಸರದ ಘಟನೆ ಮರೆಯಲಾರದ್ದು.

ಅವ್ವ ಕಪಾಟಿನ ಕೀಲಿ ತೆಗೆದರೆ ಸಾಕು ಕಪಾಟಿನ ಬಳಿ ಓಡೋಡಿ ಹೋಗುತ್ತಿದ್ದೆ. ಆ ಕಪಾಟಿನೊಳಗೊಂದು ಸಣ್ಣ ಪೆಟ್ಟಿಗೆ ಅದೂ ಕೂಡ ಕೀಲಿ ತಗುಲಿಸಿಕೊಂಡಿರುತ್ತಿತ್ತು. ಅದನ್ನು ತೆಗೆದರೆ ಸಾಕಷ್ಟು ಸಣ್ಣ. ಪುಟ್ಟಿ ಆಭರಣದ ಡಬ್ಬಿಗಳು, ಒಂದೊಂದು ತೆಗೆದು ನೋಡುವುದರಲ್ಲಿ ಒಂದೊಂದು ಮಜಾ. ಮೂಗುತಿ, ನತ್ತು, ಬುಗುಡಿ, ಓಲೆ, ಸರ, ಉಂಗುರ, ಮುತ್ತು, ಬಣ್ಣ ಬಣ್ಣದ ಹರಳುಗಳು, ಹವಳ ಒಂದೇ ಎರಡೇ? ಕೆಂಪು ಕಾಗದದಲ್ಲಿ ಸುತ್ತಿಟ್ಟ ಅವುಗಳನ್ನು ತೆರೆ ತೆರೆದು ನೋಡುವುದರಲ್ಲಿ ಅದೇನೋ ಖುಷಿ ನನಗೆ. ಆದರೆ ಆವ್ವ, ‘ಏ ನಿನಗ ಎದಕ ಬೇಕು ಎಲ್ಲಾ ತಗದ ನೋಡತಿ ಸಣ್ಣ ಸಾಮಾನಾ ಎಲ್ಲೆರ ಕಳದು ಆಂದ್ರ ಏನ ಮಾಡೂದು? ದೂರ ಸರಿ ಅತ್ತಾಗ’ ಎಂದು ಗದರುತ್ತಿದ್ದರೂ ನನ್ನ ಕಾಯಕದಲ್ಲಿ ತೊಡಗುತ್ತಿದ್ದೆ,

ಆ ಬಂಗಾರದ ಸಾಮಾನುಗಳಲ್ಲಿ ಒಂದು ಸರ ಬಹಳ ಸುಂದರವಾಗಿತ್ತು. ಪ್ರತಿ ಸಲ ಕಪಾಟು ತೆರೆದಾಗೊಮ್ಮೆ ಅದನ್ನು ಎತ್ತಿಕೊಂಡು ನೋಡಿ ಸಂಭ್ರಮಿಸುತ್ತಿದ್ದೆ. ಆ ಸರವನ್ನು ಅವ್ವ ಎಂದೂ ಹಾಕಿಕೊಂಡ ನೆನಪಿಲ್ಲ. ಒಂದು ಸಲ ನಾನೇ ಹಾಕಿಕೊಳ್ಳಬೇಕೆನ್ನಿಸಿ ಅದನ್ನು ಎತ್ತಿ ಕತ್ತಿನಲ್ಲಿ ಹಾಕಿಕೊಳ್ಳುವಾಗಲೇ ಆವ್ವ ಕಸಿದುಕೊಂಡು ಮತ್ತೆ ಬಚ್ಚಿಟ್ಟಳು. ಒಂದು ಸಲ ಬೇಸರದಿಂದ ‘ಬ್ಯಾರೆ ಎಲ್ಲಾ ಬಂಗಾರಾ ಹಾಕ್ಕೊಳಾಕ ಕೊಡತಿ ಆದ್ರೆ ಅದನ್ನ ಯಾಕ ಕೊಡೂದಿಲ್ಲಾ? ಅದನ್ನೆನ ಕಪಾಟನ್ನಾಗ ಇಟ್ಟ ಪೂಜಿ ಮಾಡಾಕ ತಂದೀರಿ? ಹೋಗಲಿ ನನಗ ಕೊಡಲೀಕ ಅಷ್ಟ ಹೋತು ನೀನರ ಹಾಕ್ಕೊಬೇಕಲಾ ನಿನಗೂ ಇಲ್ಲಾ ನನಗೂ ಇಲ್ಲಾ? ಮತ್ತೆ ಅದನ್ನ ಯಾಕ ಇಟಿಕೊಂಡಿ? ಹೋಗಲಿ ಮಾರಿಬಿಡ’ ಎಂದು ಸಿಟ್ಟಿನಿಂದ ಕೂಗಾಡಿದಾಗ, ‘ಅದು ನಮ್ಮದಲ್ಲಾ ನಮ್ಮದಲ್ಲದ್ದನ್ನ ನಾವು ಹಾಕ್ಕೊಳ್ಳಾಕ ಹೋಗಬಾರದು’ ಮತ್ತೆ ಅದೇ ಉತ್ತರ ನೀಡುತ್ತಿದ್ದಳು. ‘ಹಂಗಾರ ಆದ ಯಾರದು ಅಂತರ ಹೇಳು. ಮತ್ತೆ ನಮ್ಮದಲ್ಲದ್ದು ನಮ್ಮ ಕಪಾಟಿನ್ಯಾಗ ಯಾಕ ಇಡಬೇಕು? ಅದು ಯಾರದ ಐತಿ ಅವರಿಗೆ ಕೊಟ್ಟಬಿಡ’ ಮತ್ತೆ ಆಸಮಾಧಾನದ ಮಾತು ನನ್ನಿಂದ ಹೊರಬಂದಾಗ, ‘ಅದು ಸೇರಬೇಕಾದಾರಿಗೆ ಸೇರಬೇಕಾದಾಗ ಸೇರತೈತಿ ನೀ ಸುಮ್ಮನ ಇರ’ ಹೀಗೆ ನಾನು ಆ ಸರ ಕೇಳುವುದು ಅವ್ವ ಇಲ್ಲ ಎನ್ನುವುದು ನಡದೇ ಇತ್ತು;

ಮಾದರ ನಿಂಗವ್ವ ನನಗೆ ತಿಳುವಳಿಕೆ ಬಂದಾಗಿನಿಂದಲೇ ನಮ್ಮ ಅಂಗಳದ ಕಸಗುಡಿಸುತ್ತಿದ್ದಳು. ಬೆಳಗ್ಗೆ ಎದ್ದ ತಕ್ಷಣವೇ ನಮಗೆಲ್ಲ ಅವಳ ದರುಶನವೇ, ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಅವಳಿಗೆ ಅವ್ವ ಮಾಡಿದ ಸಹಾಯ ಅಷ್ಟಿಷ್ಟಲ್ಲ, ನಿಂಗವ್ವ ಸತ್ತ ನಂತರ ಅವಳ ಮಗಳು ರಂಗವ್ವ ಕಸಗುಡಿಸುತ್ತಿದ್ದಳು. ಅವಳ ಮಗಳು ಲಕ್ಷ್ಮಿಯ ಮದುವೆ ಗೊತ್ತಾಗಿತ್ತು ‘ಯವ್ವಾ ಮಗಳ ಲಗ್ನಾ ಅಲ್ಲೆಟು ಇಲ್ಲೇಟು ಸಾಲಾ ಮಾಡಿ ಒಂದಿಷ್ಟು ಭಾಂಡೆ ಸಾಮಾನು ತಂದೀವಿ, ಆದ್ರೆ ಈ ತುಟ್ಟಿಕಾಲದಾಗ ಒಂದ ಗುಂಜಿ ಬಂಗಾರಾನೂ ಹಾಕಾಗ ಆಗಲಿಲ್ಲಾ, ಬೀಗರು ಏನಂತಾರೋ ಏನ ಆದ ಅಂಜಿಕಿ ಬರಾಕತೈತಿ’ ಎಂದು ಕಣ್ಣೀರು ಸುರಿಸುತ್ತಿದ್ದಳು. ಅವ್ವ ‘ಅಯ್ಯ ನಿನ ಹುಚ್ಚಿ ಯಾಕ ಅಳತಿ?’ ಎಂದವಳೇ ಆ ನನ್ನ ಕುತೂಹಲದ ಸರ ತಂದು ರಂಗವ್ವಳ ಕೈಗೆ ಕೊಟ್ಟಳು. ರಂಗವ್ವ ಹೆದರಿ ‘ಇದು ಇದು ನಮ್ಮ ಆಲ್ವಾ’ ಎಂದು ತೊದಲುತ್ತಿರುವಾಗಲೇ ‘ಹೌದವಾ ಇದ ನಿಮ್ಮ ಅವಂದ. ನಿನ್ನ ಮಗಾ ಮಲ್ಲೇಶಿನ್ನ ದವಾಖಾನೆದಾಗ ಇಟ್ಟಿದ್ರೆಲಾ ಆಗ ನಿಮಗೆ ಯಾರಿಗೂ ಗೊತ್ತ ಇಲ್ಲದಂಗ ಈ ಸರಾ ನನ್ನ ಕಡೆ ಆಡವ ಇಟ್ಟ ರೊಕ್ಕಾ ತುಗೊಂಡಿದ್ದಳು.

ಪಾಪ ಆ ಮ್ಯಾಲೆ ಆಕಿಗೆ ಸರಾ ಬಿಡಿಸಿಕೊಳ್ಳಾಕ ಆಗಲೇ ಇಲ್ಲಾ ‘ಇರಲಿ ಬಿಡಿ ಯಪ್ಪಾ ನನ್ನ ಮೊಮ್ಮಗಾ ಆದ್ರೂ ಉಳದಾ. ಆ ಸರಾ ನೀವ ಹಾಕ್ಕೊಂಡೂ ಒಂದ ನನ್ನ ಮಗಳ ಹಾಕ್ಕೊಂಡೂ ಒಂದ’ ಅಂತ ಹೇಳಿದಾಗ ನನಗೆ ಜೀವಾ ಮರಗಿ “ಇರಲಿ ನಿನ್ನ ಕಡೆ ರೊಕ್ಕಾ ಇದ್ದಾಗ ಒಂದೊಂದಿಷ್ಟ ಕೊಡಿಯಂತ ಇದನ್ನ ನೀನ ಇಟ್ಟಕೋ ಅಂತ ಕೊಡಾಕ ಹೋದ್ರ ‘ಬ್ಯಾಡ್ರಿ ಆದ ಇಲ್ಲೇ ಇರೋದ ಚೊಲೊ, ಇದನ್ನೇನಾರ ನಾ ಮನಿಗಿ ಒಯ್ಯದಿನ ಅಂಧ್ರ ಕುಡಕ ಅಳಿಯಾ ನುಂಗಿ ನೀರ ಕುಡಿತಾನಾ’ ಅಂತ ಅಂದಧ್ಯಕ್ಷ ಸರಾ ನನ್ನ ಕಡೇನ ಉಳೀತು. ನಾನು ಸಂದರ್ಭಕ್ಕೆ ಕಾಯಾಕತ್ತಿದ್ವಿ ಈಗ ಕಾಲಾ ಕೂಡಿಬಂತು’ ಎಂದು ಸರದ ಗುಟ್ಟನ್ನು ರಟ್ಟು ಮಾಡಿದಾಗ,

ನನ್ನ ಅವ್ವ ನನಗೆ ಮುಗಿಲಿನಷ್ಟು ಎತ್ತರವಾಗಿ ಗೋಚರಿಸಿದ್ದಳು. ಇಪ್ಪತ್ತು ವರ್ಷಗಳ ಕಾಲ ಅವ್ವನ ನೆರಳಾಗಿಯೇ ಬೆಳೆದ ನಾನು ಮದುವೆಯ ನಂತರ ಅವ್ವನನ್ನು ತೊರೆದು ಹೋಗುವುದು ಬಲುಕಷ್ಟವಾಯಿತು. ಹೆಜ್ಜೆ ಹೆಜ್ಜೆಗೂ ನನ್ನ ನೆರಳಾಗಿ ಕಾಯುತ್ತಿದ್ದ ಅವನ ನೆನಪು ಕಾಡತೊಡಗಿತು. ಕೂಡುಕುಟುಂಬದ ಬಲು ದೊಡ್ಡ ಮನೆಯಲ್ಲಿ ಅವನ ಪ್ರೀತಿಯಲ್ಲಿ ಮಿಂದೆದ್ದು ಹೆಚ್ಚು ಕೆಲಸವಾರದ ನನಗೆ ಕೆಲಸಮಾಡುವ ಮುಂದೆ ಬರೀ ಅವ್ವನದೇ ನೆನಪು.

ಅವ್ವ ನನ್ನನ್ನು ತವರಿಗೆ ಕರೆಯಲೆಂದೋ ನನ್ನ ನೋಡಲೆಂದೋ ನನ್ನ ಗಂಡನ ಮನೆಗೆ ಬಂದಿದ್ದಳು. ಅದೇ ಆಗ ನನ್ನ ಮೊದಲ ಕಥೆ ‘ಗೌರಿ’ ಕನ್ನಡಮ್ಮ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ನಾನು ಖುಷಿಯಿಂದ ನನ್ನ ಅವನಿಗೆ ನನ್ನ ಕಥೆಯನ್ನು ತೋರಿಸಿದೆ. ಅವ್ವ ತನ್ನ ಕನ್ನಡಕವನ್ನು ಸೀರೆಯ ಸೆರಗಿನಿಂದ ಒರೆಸಿಕೊಂಡು ಓದತೊಡಗಿದಳು. ನಾನೇ ಬರೆದ ಕಥೆಯನ್ನು ಪ್ರಥಮ ಬಾರಿ ಅವ್ವ ಓದುತ್ತಿರುವುದನ್ನು ನೋಡುತ್ತಾ ಸಂಭ್ರಮಿಸತೊಡಗಿದ್ದೆ, ಆದರೆ ಭಾವುಕ ಜೀವಿ ಅವ್ವ ಓದುತ್ತ ಓದುತ್ತ ಗದ್ಗದಿತಳಾಗಿ, ದುಃಖದಿಂದ ‘ಪಾಪ ಆಕಳಾ ಮನಿಬಿಟ್ಟು ಹೋತು’ ಎಂದು ಸಣ್ಣದಾಗಿ ಕಂಬನಿ ಮಿಡಿದಳು. ನನ್ನ ಕಥೆ ಯಶಸ್ವಿಗೊಂಡಿದೆ ಎಂದು ನನ್ನಲ್ಲಿ ನಂಬುಗೆ ಹುಟ್ಟಿತು. ನನ್ನ ಗಂಡನ ಮನೆಯಲ್ಲಿ ಗೌರಿ ಎಂಬ ಆಕಳು ತುಂಬಾ ಸಾಧುಪ್ರಾಣಿ.

ನಮ್ಮ ಕೊಟ್ಟಿಗೆಯಲ್ಲಿಯೇ ಹುಟ್ಟಿಬೆಳೆದು ಮುದಿಯಾದ ಮೇಲೆ ಮತ್ತೆ ಹೊಸ ಆಕಳುಗಳನ್ನು ತಂದಾಗ, ಕೊಟ್ಟಿಗೆಯಲ್ಲಿ ಜಾಗ ಸಾಲದೇ, ಕಟುಕರಿಗೆ ಮಾರಲು ಮನಸ್ಸು ಬಾರದೇ ಬಾದಾಮಿ ಹತ್ತಿರದ ಶಿವಯೋಗಮಂದಿರಕ್ಕೆ ಬಿಟ್ಟು ಬಂದರು. ಅದನ್ನು ಅಲ್ಲಿಗೆ ಕಳುಹಿಸುವಾಗ, ಒಬ್ಬ ಹೆಣ್ಣುಮಗಳು ಗಂಡನ ಮನೆಗೆ ಹೋಗುವ ದೃಶ್ಯದಂತೆ ತೋರಿತ್ತು, ಬಹುಶಃ ಆ ದೃಶ್ಯವೇ ನನಗೆ ಕಥೆ ಬರೆಯಲು ಪ್ರೇರಣೆಯಾಗಿರಬಹುದು. ಅದನ್ನು ನಾನು ಮತ್ತಷ್ಟು ಮನ ಮಿಡಿಯುವಂತೆ ಬರೆದುದರ ಫಲವೇ ಅವ್ವನ ಕಣ್ಣೀರು.

ಅವ್ವನಿಗೆ ಗ್ಯಾಂಗರಿನ್ ಆಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎನ್ನುವ ಸುದ್ದಿ ಕತ್ತುಹಿಸುಕಿದಂತಾಗಿತ್ತು. ಒಂದುವರೆ ವರ್ಷದ ಮಗು ದೇವಿಪ್ರಸಾದನನ್ನು ಎತ್ತಿಕೊಂಡು ತವರೂರು ಸೇರಿದ್ದೆ, ನನ್ನವ್ವ ನನ್ನ ಜೀವದ ಜೀವಾ ಹಾಸಿಗೆಯಲ್ಲಿ ಹಲ್ಲಿಮರಿಯಂತೆ ಬಿದ್ದುಕೊಂಡ ದೃಶ್ಯ ಬೆಂದ ಹೃದಯಕ್ಕೆ ಬೆಂಕಿ ಇಟ್ಟಿತ್ತು. ‘ಯಪ್ಪಾ ಆರಾಮ ಅದಿಯಾ ಕಳವಳದ ಪ್ರಶ್ನೆ ತಕ್ಷಣ ಬಾಯಿಂದ ಹೊರಬಂತು. ‘ಇನ್ನೆಲ್ಲಿ ಆರಾಮ ತಂಗಿ? ಆ ದೇವರು ಬಗೂಣ ಕಣ್ಣಮುಚ್ಚಿರ ಸಾಕಾಗೇತಿ’ ನೋವಿನಲ್ಲಿ ಅದ್ದಿ ತೆಗೆದಂತಿದ್ದ ಧ್ವನಿ, ಮಾತು ಕೇಳಿ ಮತ್ತಷ್ಟು ಧೃತಿಗೆಟ್ಟೆ ಎದ್ದು ಕುಳಿತು ಊಟ ಮಾಡದ ಸ್ಥಿತಿಯಲ್ಲಿದ್ದ ಅವನಿಗೆ ಬೆಡ್ ಮೇಲೆ ಒಂದೊಂದೇ ತುತ್ತು ಅನ್ನವನ್ನು ಬಾಯಿಗೆ ಹಾಕುವಾಗ, ಅವಳು ನನಗೆ ತಾಟಿನ ತುಂಬ ಅನ್ನದ ತುತ್ತುಗಳನ್ನಿಟ್ಟು, ನಾನು ಊಟಮಾಡಲು ಹಠಮಾಡಿದಾಗ, ಇದು ಕಾಗಿ. ಗುಬ್ಬಿ, ನವಿಲು ಎಂದೆಲ್ಲ ಪ್ರಯತ್ನಪಟ್ಟು ಉಣ್ಣಿಸುತ್ತಿದ್ದ ದೃಶ್ಯವೇ ಕಣ್ಣಮುಂದೆ ಬಂದಂತಾಗುತ್ತಿತ್ತು.

ದಿನಗಳೆದಂತೆ ಅವ್ವನಿಗೆ ತಾನುಟ್ಟ ಸೀರೆಯೇ ಭಾರವಾಗಿ ಉಡಿಸಲೂ ಕೂಡ ಬರದಂತಹ ಸ್ಥಿತಿ ತಲುಪಿ ನನ್ನ ಕೈಯಿಂದಲೇ ಸಂಪೂರ್ಣವಾಗಿ ಮೈಮುಚ್ಚುವಂತಹ ಬಟ್ಟೆ ಹೊಲಿದೆ. ಆದರೆ ಅದನ್ನು ಅವಳಿಗೆ ತೊಡಿಸಲು ಕಣ್ಣೀರು ಕಪಾಳಕ್ಕೆ ಬಂದಿತ್ತು ನನಗೆ ತಿಳುವಳಿಕೆ ಬಂದಾಗಿನಿಂದ ಅವ್ವನನ್ನು ದೊಡ್ಡ ದೊಡ್ಡ ಸೀರೆಗಳಲ್ಲಿಯೇ ಕಂಡಿದ್ದೆ. ಬೇರೆ ತೆಳುವಾದ ಸೀರೆಯನ್ನೂ ಕೂಡ ಉಡದ ಅವ್ವನಿಗೆ

ಅಂತಹ ಬಟ್ಟೆಯನ್ನು ಹಾಕುವಾಗ ಸಾಕಷ್ಟು ಸಂಕಟಪಟ್ಟಿದ್ದೆ. ಅವ್ವ ಆ ಆಸ್ಪತ್ರೆಯಲ್ಲಿ ಹುತಾರ ಆಗದೇ ಬೇರೆ ಊರಿನ ಆಸ್ಪತ್ರೆಗೆ ಸಾಗಿಸುವಾಗ, ಅವಳನ್ನು ಅವಳ ಮುಖವನ್ನು ಗಟ್ಟಿಯಾಗಿ ತಬ್ಬಿ ಕಣ್ಣೀರಗರೆದಿದ್ದೆ. ‘ನೋಡ ತರಗಿ ಕಡೀ ಸಲಾ ಅವನ್ನ ಕಣ್ಣತುಂಬ ನೋಡು’ ಹಿರಿಯಳೊಬ್ಬಳ ಮಾತಿನಿಂದ ಮತ್ತಷ್ಟು ದಾಃಖ ಉಕ್ಕಿತ್ತು. ಮುಂದೆ ಒಂದೆರಡು ದಿನಗಳಲ್ಲಿಯೇ ಅವ್ವ ನನಗೆ ಸಿಗದ ಸ್ಥಳದತ್ತ ಸರಿದುಬಿಟ್ಟಳು. ದೂರ ದೂರ ಬಲುದೂರ ಸಾಗಿಬಿಟ್ಟಳು.

ನನ್ನವ್ವ ನನ್ನ ಬಗ್ಗೆ ಬಲು ದೊಡ್ಡ ಕನಸು ಕಂಡಿದ್ದಳು. ಆ ಕನಸಂತೇ ನಾನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಹುದ್ದೆಗಳಿಸದಿದ್ದರೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನದತ್ತ ಸಾಗುವ ಒಬ್ಬ ಲೇಖಕಿಯಾಗಿ ಬೆಳೆಯುತ್ತಿದ್ದೇನೆ. ನನ್ನವ್ವನಂತೇ ನಾನೂ ಕೂಡ ನನ್ನ ಮಕ್ಕಳ ಕಣ್ಣುಗಳಲ್ಲಿ ಭರವಸೆಯ ಬೆಳಕನ್ನು ಕಂಡಿದ್ದೇನೆ. ಮುಂದೆ ಅವರನ್ನು ಸಮಾಜದ ಅತ್ಯುತ್ತಮ ಪ್ರಜೆಯನ್ನಾಗಿಸಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸುವ ಗುರಿಹೊತ್ತು ಅದಕ್ಕೆ ಬೇಕಾದ ಪರಿಶ್ರಮದ ಪಾಠವನ್ನು ಈಗಿಂದಲೇ ನೀಡುತ್ತಿದ್ದೇನೆ. ಮುಂದೊಂದು ದಿನ ಅವರು ಸಮಾಜದ ಆದರ್ಶ ಜೀವಿಗಳಾಗುವರೆಂಬ ದೃಢವಿಶ್ವಾಸದೊಂದಿಗೆ ಗಟ್ಟಿ ಹೆಜ್ಜೆ ಹಾಕುತ್ತ ಮುನ್ನಡೆದಿದ್ದೇನೆ ನನ್ನ ಆವನನ್ನು ನೆನಪಿಸಿಕೊಳ್ಳುತ್ತಾ…..

Amma ninna edeyaladalli

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!