Karnataka Teacher Recruitment 2026:ಶಿಕ್ಷಕರ ನೇಮಕಾತಿ 2026 – ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು (FAQ)

Table of Contents

Karnataka Teacher Recruitment 2026:ಶಿಕ್ಷಕರ ನೇಮಕಾತಿ 2026 – ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು (FAQ)

Karnataka Teacher Recruitment 2026:ಕರ್ನಾಟಕ ಶಿಕ್ಷಕರ ನೇಮಕಾತಿ 2026ರ FAQ ಮಾಹಿತಿ: ಅರ್ಹತೆ, ಅಗತ್ಯ ದಾಖಲೆಗಳು, 371J ಮೀಸಲಾತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ ಮೀಸಲಾತಿ, TET/CTET ಹಾಗೂ ಅರ್ಜಿ ಸಲ್ಲಿಕೆ ಕುರಿತು ಸಂಪೂರ್ಣ ಮಾಹಿತಿ.

ಶಿಕ್ಷಕರ ನೇಮಕಾತಿ 2026 – ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು (FAQ)

ಶಾಲಾ ಶಿಕ್ಷಣ ಇಲಾಖೆ
ಕೇಂದ್ರೀಕೃತ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕೆ.ಜಿ. ರಸ್ತೆ, ಬೆಂಗಳೂರು–09

2026–27ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕ–ಸಾಮಾನ್ಯ (1ರಿಂದ 5ನೇ ತರಗತಿ), ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್–1 (1ರಿಂದ 8ನೇ ತರಗತಿ), ಪದವೀಧರ ಪ್ರಾಥಮಿಕ ಶಿಕ್ಷಕ (6ರಿಂದ 8ನೇ ತರಗತಿ) ಹಾಗೂ ಗಣಕ ವಿಜ್ಞಾನ ಶಿಕ್ಷಕರ (1ರಿಂದ 8ನೇ ತರಗತಿ) ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯದ ಆಯಾ ಜಿಲ್ಲಾವಾರು ಅಧಿಸೂಚನೆಗಳನ್ನು ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅದೇ ರೀತಿಯಾಗಿ ಶಿಕ್ಷಣ ಇಲಾಖೆಯ ಆಯಾ ವಿಭಾಗೀಯ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಪ್ರೌಢಶಾಲಾ ಸಹಶಿಕ್ಷಕರು, ಭಾಷಾ ಶಿಕ್ಷಕರು, ಕಲಾ (ಕನ್ನಡ/ಇಂಗ್ಲೀಷ್), ಜೀವ ವಿಜ್ಞಾನ (ಕನ್ನಡ/ಇಂಗ್ಲೀಷ್) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್–1 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ವಿಭಾಗ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡುವ ಸಂಬಂಧ ವಿಭಾಗವಾರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ನೇಮಕಾತಿ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯೇ ಅಂತಿಮವಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಕೂಲಂಕುಷವಾಗಿ ಓದಿ ಅರ್ಥೈಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಉದ್ಭವಿಸಿರುವ ಅಥವಾ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಉತ್ತರ ನೀಡುವ ಉದ್ದೇಶದಿಂದ ಪದೇ ಪದೇ ಕೇಳಲಾಗಿರುವ ಪ್ರಶ್ನೆಗಳಿಗೆ ಕೆಳಗಿನಂತೆ ಉತ್ತರಿಸಲಾಗಿದೆ.

ವಿಶೇಷ ಸೂಚನೆ: ಸದರಿ ಪ್ರಶ್ನೋತ್ತರಗಳು ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಸುತ್ತೋಲೆ, ಆದೇಶ ಹಾಗೂ ಅಧಿಸೂಚನೆಗಳಿಗೆ ಒಳಪಟ್ಟಿರುತ್ತವೆ.

ಆನ್‌ಲೈನ್ ಅರ್ಜಿಗೆ ಸಂಬಂಧಿಸಿದಂತೆ

01. Online ಅರ್ಜಿ ಸಲ್ಲಿಸಲು ಪ್ರಾರಂಭದ ಮತ್ತು ಕೊನೆಯ ದಿನಾಂಕ ಯಾವುದು?

ಉತ್ತರ:
Online ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 18/08/2026
Online ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 15/09/2026

02. ಅಭ್ಯರ್ಥಿಗಳು ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು Upload ಮಾಡಬೇಕು?

ಉತ್ತರ:
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಾನ್‌-ಕ್ರೀಮಿ ಲೇಯರ್‌, 371J ಮೀಸಲಾತಿ ಪ್ರಮಾಣ ಪತ್ರ ಹೊರತುಪಡಿಸಿ, ಉಳಿದಂತೆ ಸಮತಲ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳನ್ನು Upload ಮಾಡಬೇಕಿರುತ್ತದೆ.

03. ನನ್ನ ಬಳಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ “ವ್ಯಾಸಂಗಕ್ಕಾಗಿ” ಎಂದು ನಮೂದಿಸಲಾಗಿದೆ. ಸದರಿ ಪ್ರಮಾಣ ಪತ್ರವನ್ನು ನೇಮಕಾತಿಗೆ ಸಲ್ಲಿಸಬಹುದೇ?

ಉತ್ತರ:
ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ “ವ್ಯಾಸಂಗಕ್ಕಾಗಿ” ಎಂದು ನಮೂದಿಸಿದ್ದಲ್ಲಿ ಪರಿಗಣಿಸುವುದಿಲ್ಲ. “ವ್ಯಾಸಂಗಕ್ಕಾಗಿ” ಅಥವಾ “ಉದ್ಯೋಗಕ್ಕಾಗಿ” ಎಂದು ನಮೂದಿಸದೇ ಇರುವ ಪ್ರಮಾಣ ಪತ್ರ ಸಲ್ಲಿಸಬಹುದು ಅಥವಾ “ಉದ್ಯೋಗಕ್ಕಾಗಿ” ಎಂದು ನಮೂದಿಸಿರುವ ಪ್ರಮಾಣ ಪತ್ರ ಸಲ್ಲಿಸಬಹುದು. ಅಭ್ಯರ್ಥಿಯು ನೇಮಕಾತಿ ಹೊಂದಿದ್ದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ.

04. ನೇಮಕಾತಿಗೆ ಜಾತಿ ಮತ್ತು ಆದಾಯದ ಮೀಸಲಾತಿ ಕೋರಿ, ಮುಖ್ಯ ಆಯ್ಕೆಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿ (GM) ಆಯ್ಕೆಯಾದರೂ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸಬೇಕೇ?

ಉತ್ತರ:
ಜಾತಿ ಮತ್ತು ಆದಾಯದ ಮೀಸಲಾತಿ ಕೋರಿ, ಮುಖ್ಯ ಆಯ್ಕೆಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿ (GM) ಆಯ್ಕೆಯಾದರೂ ಅಥವಾ ಪ್ರವರ್ಗದ ಮೀಸಲಾತಿಯಡಿ ಆಯ್ಕೆಯಾದರೂ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕಿರುತ್ತದೆ. ಜಾತಿ ಮತ್ತು ಆದಾಯ ಮೀಸಲಾತಿ ಪ್ರಮಾಣ ಪತ್ರದ ಸಿಂಧುತ್ವ ರದ್ದಾದಲ್ಲಿ ಉತ್ತಮ ಮೆರಿಟ್ ಇದ್ದರೂ ಸಹ ನೇಮಕಾತಿ ರದ್ದಾಗುತ್ತದೆ.

05. ನಾನು ಪರಿಶಿಷ್ಟ ಜಾತಿಯ ಅಭ್ಯರ್ಥಿಯಾಗಿದ್ದು, ನಿಗದಿತ ನಮೂನೆ–ಡಿ ಯಲ್ಲಿ ಪ್ರವರ್ಗ–ಎ, ಪ್ರವರ್ಗ–ಬಿ, ಪ್ರವರ್ಗ–ಸಿ ಎಂದು ನಮೂದಿಸದ ಜಾತಿ ಪ್ರಮಾಣ ಪತ್ರವನ್ನು ಹೊಂದಿದ್ದು, ಸದರಿ ಪ್ರಮಾಣ ಪತ್ರವನ್ನೇ ಸಲ್ಲಿಸಬಹುದೇ?

ಉತ್ತರ:
ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ನಮೂನೆ ‘B’ ಯಲ್ಲಿ (ಪ್ರವರ್ಗ–ಎ, ಪ್ರವರ್ಗ–ಬಿ, ಪ್ರವರ್ಗ–ಸಿ ಎಂಬುದಾಗಿ ನಮೂದಿಸಿದ) ಜಾತಿ ಪ್ರಮಾಣ ಪತ್ರವನ್ನು ಪಡೆದಿರುವುದು ಕಡ್ಡಾಯವಾಗಿರುತ್ತದೆ.

06. ವ್ಯಾಸಂಗದ ಉದ್ದೇಶಕ್ಕಾಗಿ 2A ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿರುತ್ತಾರೆ. ಉದ್ಯೋಗಕ್ಕಾಗಿ 3A ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿರಲಾಗುತ್ತದೆ. ನಾನು ಯಾವುದನ್ನು ಸಲ್ಲಿಸಬೇಕು?

ಉತ್ತರ:
ಕೆಲವು ಜಾತಿಗಳಿಗೆ ವ್ಯಾಸಂಗದ ಉದ್ದೇಶಕ್ಕಾಗಿ 2A ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗಿರುತ್ತದೆ. ಆದರೆ ಸಕ್ಷಮ ಪ್ರಾಧಿಕಾರದಿಂದ ಉದ್ಯೋಗಕ್ಕಾಗಿ ನೀಡಿರುವ 3A ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸುವುದು.

ಕಲ್ಯಾಣ ಕರ್ನಾಟಕ (371J) ಮೀಸಲಾತಿಗೆ ಸಂಬಂಧಿಸಿದಂತೆ

07. ನಾನು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ನಿವಾಸಿಯಾಗಿದ್ದು, ಸಕ್ಷಮ ಪ್ರಾಧಿಕಾರವು ನೀಡಿರುವ 371J ಪ್ರಮಾಣ ಪತ್ರವನ್ನು ಹೊಂದಿದ್ದು, ಆದರೆ RD ನಂಬರ್ ಇರುವುದಿಲ್ಲ. ಸದರಿ ಪ್ರಮಾಣ ಪತ್ರವನ್ನು ನೇಮಕಾತಿಗೆ ಸಲ್ಲಿಸಬಹುದೇ?

ಉತ್ತರ:
ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಹಾಗೂ RD ನಂಬರ್ ಹೊಂದಿರುವ 371J ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

08. HK ಸರ್ಟಿಫಿಕೇಟ್ ಇದೆ. ಆದರೆ ನಾನು ವಿವಾಹವಾಗಿ Non-HK ಜಿಲ್ಲೆಯ ನಿವಾಸಿಯಾಗಿರುತ್ತೇನೆ. ನಾನು 371J ಮೀಸಲಾತಿಯಡಿ ಅರ್ಜಿ ಸಲ್ಲಿಸಬಹುದೇ?

ಉತ್ತರ:
ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ RD ನಂಬರ್ ಹೊಂದಿರುವ 371J ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ, 371J ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

09. ನಾನು 371J ಮೀಸಲಾತಿಯ ಅಭ್ಯರ್ಥಿಯಾಗಿದ್ದು, ನಾನು ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬಹುದೇ?

ಉತ್ತರ:
ಅರ್ಜಿ ಸಲ್ಲಿಸಬಹುದು.

10. ನಾನು 371J ಮೀಸಲಾತಿಯ ಅಭ್ಯರ್ಥಿಯಾಗಿದ್ದು, ನಾನು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಶೇ.20ರಷ್ಟು ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದೇ?

ಉತ್ತರ:
ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.

11. ನಾನು Non-KK ಅಭ್ಯರ್ಥಿಯಾಗಿದ್ದು, ಕಲ್ಯಾಣ ಕರ್ನಾಟಕದ ಮಿಕ್ಕುಳಿದ ವೃಂದದ ಶೇ.20 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?

ಉತ್ತರ:
ಹೌದು. ಕಲ್ಯಾಣ ಕರ್ನಾಟಕದ ಪ್ರದೇಶ ವ್ಯಾಪ್ತಿಯಲ್ಲಿನ ಶೇ.20ರಷ್ಟು ಮಿಕ್ಕುಳಿದ ವೃಂದದ (RPC) ಹುದ್ದೆಗಳಿಗೆ, GBA ವ್ಯಾಪ್ತಿಯ ಬೆಂಗಳೂರು ಕೇಂದ್ರ ಜಿಲ್ಲೆ ಮತ್ತು ಬೆಂಗಳೂರು ಉತ್ತರ ಜಿಲ್ಲೆ ಇಲ್ಲಿನ ಶೇ.92ರಷ್ಟು ಹುದ್ದೆಗಳಿಗೆ ಹಾಗೂ (GBA ವ್ಯಾಪ್ತಿಯ 02 ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 07 ಜಿಲ್ಲೆಗಳನ್ನು ಹೊರತುಪಡಿಸಿದ) ರಾಜ್ಯದ ಉಳಿದ 26 ಜಿಲ್ಲೆಗಳಲ್ಲಿ ಶೇ.100ರಷ್ಟು ಹುದ್ದೆಗಳಿಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ರಾಜ್ಯದ ಯಾವ ಜಿಲ್ಲೆಯ ಅಭ್ಯರ್ಥಿಗಳಾದರೂ ಅರ್ಜಿ ಸಲ್ಲಿಸಬಹುದು.

12. ನಾನು 371J ಮೀಸಲಾತಿಯ ಅಭ್ಯರ್ಥಿಯಾಗಿದ್ದು, ನಾನು GBA ವ್ಯಾಪ್ತಿಯ ಬೆಂಗಳೂರು ಕೇಂದ್ರ ಜಿಲ್ಲೆ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳಲ್ಲಿ ಶೇ.8ರಷ್ಟು ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದೇ?

ಉತ್ತರ:
ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.

13. ನಾನು 371J ಮೀಸಲಾತಿ ಹೊಂದಿದ್ದು, PSTR, GPTR ಮತ್ತು HSTR ಹುದ್ದೆಗೆ Non-KK ಮತ್ತು KK ಅರ್ಜಿ ಸಲ್ಲಿಸಬಹುದಾ?

ಉತ್ತರ:
ಅಭ್ಯರ್ಥಿಯು 371J ಮೀಸಲಾತಿ ಪ್ರಮಾಣ ಪತ್ರ ಹೊಂದಿದ್ದಲ್ಲಿ KK ಮತ್ತು Non-KK ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.

14. ನಾನು 371J ಮೀಸಲಾತಿ ಹೊಂದಿದ್ದು, PSTR ಮತ್ತು GPTR ಹುದ್ದೆಗೆ ಕಲಬುರಗಿ ಜಿಲ್ಲೆಯಲ್ಲಿ KK ಮತ್ತು Non-KK ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾ?

ಉತ್ತರ:
ಸಲ್ಲಿಸಬಹುದು.

15. 371J ಮೀಸಲಾತಿಯ ಪ್ರಮಾಣ ಪತ್ರದಲ್ಲಿ “ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ” ಎಂದಿದೆ. ಸದರಿ ಪ್ರಮಾಣ ಪತ್ರವನ್ನು 371J ಮೀಸಲಾತಿಗೆ ಪರಿಗಣಿಸುವಿರಾ?

ಉತ್ತರ:
371J ಮೀಸಲಾತಿಯ ಪ್ರಮಾಣ ಪತ್ರದಲ್ಲಿ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ ಎಂದಿರುವುದರಿಂದ ಪರಿಗಣಿಸಲಾಗುವುದು.

ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದಂತೆ

16. ನಾನು ಸಾಮಾನ್ಯ ಅಭ್ಯರ್ಥಿಯಾಗಿದ್ದು (GM) Creamy Layer ವ್ಯಾಪ್ತಿಗೆ (ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಹೆಚ್ಚಿದೆ) ಒಳಪಡುತ್ತೇನೆ. ನಾನು ಗ್ರಾಮೀಣ ಮೀಸಲಾತಿ ಕೋರಬಹುದೇ?

ಉತ್ತರ:
Creamy Layer ವ್ಯಾಪ್ತಿಗೆ ಬರುವುದರಿಂದ ಗ್ರಾಮೀಣ ಮೀಸಲಾತಿ ಕ್ಲೇಮ್ ಮಾಡಲು ಬರುವುದಿಲ್ಲ.

17. ನಾನು ಸಾಮಾನ್ಯ ಅಭ್ಯರ್ಥಿಯಾಗಿದ್ದು (GM) Creamy Layer ವ್ಯಾಪ್ತಿಗೆ (ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಕಡಿಮೆ ಇದೆ) ಒಳಪಡುತ್ತೇನೆ. ನಾನು ಗ್ರಾಮೀಣ ಮೀಸಲಾತಿ ಕೋರಬಹುದೇ?

ಉತ್ತರ:
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಯ ಕುಟುಂಬದ ಆದಾಯ ರೂ.8.00 ಲಕ್ಷಕ್ಕೂ ಕಡಿಮೆ ಇದ್ದಲ್ಲಿ, ಮೇಲ್ವರ್ಗಕ್ಕೆ ಸೇರಿಲ್ಲದ ಬಗ್ಗೆ Non-Creamy Layer Certificate ನಮೂನೆ–1ರಲ್ಲಿ RD ನಂಬರ್ ಹೊಂದಿರುವ ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಪಡೆದು ಸಲ್ಲಿಸಬೇಕು.

18. ನಾನು ಹಿಂದುಳಿದ ವರ್ಗಕ್ಕೆ ಸೇರಿದ (2A, 2B, 3A ಮತ್ತು 3B) ಅಭ್ಯರ್ಥಿಯಾಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಹೆಚ್ಚಿದೆ. ನಾನು ಗ್ರಾಮೀಣ ಮೀಸಲಾತಿ ಕೋರಬಹುದೇ?

ಉತ್ತರ:
ಗ್ರಾಮೀಣ ಮೀಸಲಾತಿಗೆ ಕೆನೆ ಪದರ (Creamy Layer) ನೀತಿ ಅನ್ವಯಿಸುವುದರಿಂದ ಗ್ರಾಮೀಣ ಮೀಸಲಾತಿ ಕ್ಲೇಮ್ ಮಾಡಲು ಬರುವುದಿಲ್ಲ.

19. ನಾನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ–1ರ ಅಭ್ಯರ್ಥಿಯಾಗಿದ್ದು ನನಗೆ Creamy Layer ನೀತಿ ಅನ್ವಯಿಸುತ್ತದೆಯೇ? ಗ್ರಾಮೀಣ ಮೀಸಲಾತಿ ಕೋರಬಹುದೇ?

ಉತ್ತರ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ ಆದಾಯದ ಮಿತಿ ನಿಗದಿಪಡಿಸಿರುವುದಿಲ್ಲವಾದ್ದರಿಂದ ಗ್ರಾಮೀಣ ಮೀಸಲಾತಿ ಕೋರಿದ ಅಭ್ಯರ್ಥಿಗಳಿಗೆ Creamy Layer ನೀತಿ ಅನ್ವಯಿಸುವುದಿಲ್ಲ.

20. ನಾನು ಸಾಮಾನ್ಯ ವರ್ಗ (GM) ಅಭ್ಯರ್ಥಿಯಾಗಿದ್ದು, ವಾರ್ಷಿಕ ರೂ.8.00 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿ, ಕೆನೆ ಪದರ ಮಿತಿಗೆ ಒಳಪಡುತ್ತೇನೆ. ಗ್ರಾಮೀಣ ಮೀಸಲಾತಿ ಹೊರತುಪಡಿಸಿ ಉಳಿದಂತೆ ಸಮತಲ ಮೀಸಲಾತಿಯಾದ ಮಾಜಿ ಸೈನಿಕ, 2A/2B, ಕನ್ನಡ ಮಾಧ್ಯಮ, ಅಂಗವೈಕಲ್ಯ, ಯೋಜನಾ ನಿರಾಶ್ರಿತ, ತೃತೀಯ ಲಿಂಗಿ ಮೀಸಲಾತಿ ಕೋರಬಹುದೇ?

ಉತ್ತರ:
ವಾರ್ಷಿಕ ರೂ.8.00 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿ ಕೆನೆ ಪದರ (Creamy Layer) ಮಿತಿಗೆ ಒಳಪಡುವ ಸಾಮಾನ್ಯ ವರ್ಗ (GM) ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿಯನ್ನು ಹೊರತುಪಡಿಸಿ, ಉಳಿದಂತೆ ಸಮತಲ ಮೀಸಲಾತಿಯಾದ ಮಾಜಿ ಸೈನಿಕ, ಕನ್ನಡ ಮಾಧ್ಯಮ, ಅಂಗವೈಕಲ್ಯ, ಯೋಜನಾ ನಿರಾಶ್ರಿತ, ತೃತೀಯ ಲಿಂಗಿ ಮೀಸಲಾತಿ ಕೋರಬಹುದಾಗಿದೆ.

21. ನಾನು 2A ಪ್ರವರ್ಗಕ್ಕೆ ಸೇರಿದ್ದು, 1ನೇ ತರಗತಿಯಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ್ದೇನೆ. ನನ್ನ ತಂದೆಯವರು ಸರ್ಕಾರಿ ನೌಕರಿಯಲ್ಲಿದ್ದು, ವಾರ್ಷಿಕ ಆದಾಯ ರೂ.8.00 ಲಕ್ಷಕ್ಕಿಂತ ಹೆಚ್ಚಿರುತ್ತದೆ. ಸಾಮಾನ್ಯ (GM) ವರ್ಗದಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿ ಅನ್ವಯಿಸುತ್ತದೆಯೇ?

ಉತ್ತರ:
ಗ್ರಾಮೀಣ ಮೀಸಲಾತಿಗೆ ಕೆನೆ ಪದರ ನೀತಿ ಅನ್ವಯಿಸುವುದರಿಂದ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಹೆಚ್ಚಿದ್ದಲ್ಲಿ ಗ್ರಾಮೀಣ ಮೀಸಲಾತಿಯನ್ನು ಕೋರಲು ಅವಕಾಶವಿರುವುದಿಲ್ಲ.

ವಿದ್ಯಾರ್ಹತೆಗೆ ಸಂಬಂಧಿಸಿದಂತೆ

22. ನಾನು ಹುದ್ದೆಯ ಆಕಾಂಕ್ಷಿಯಾಗಿದ್ದು, ಪದವಿಯಲ್ಲಿ ಸರಾಸರಿ ಅಂಕಗಳನ್ನು ಗಳಿಸಿರಬೇಕೆ? ಅಥವಾ ಹುದ್ದೆಯ ವಿಷಯಕ್ಕೆ ನಿಗದಿಪಡಿಸಿದ ಸಮೂಹ ವಿಷಯಗಳಲ್ಲಿ ಶೇ.50ರಷ್ಟು ಅಂಕಗಳನ್ನು ಗಳಿಸಿರಬೇಕೆ?

ಉತ್ತರ:
ಪದವಿಯಲ್ಲಿ ಒಟ್ಟಾರೆಯಾಗಿ ಶೇ.50ರಷ್ಟು ಅಂಕಗಳನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.

23. ನಾನು ಪ್ರಾಥಮಿಕ ಶಾಲಾ ಶಿಕ್ಷಕ (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (GPT) ಮತ್ತು ಪ್ರೌಢಶಾಲಾ ಸಹಶಿಕ್ಷಕ (AM) ಈ ಮೂರೂ ವೃಂದಗಳಿಗೆ ವಿದ್ಯಾರ್ಹತೆಯನ್ನು ಹೊಂದಿದ್ದೇನೆ. ನಾನು ಎಲ್ಲಾ ಮೂರೂ ವೃಂದಗಳಿಗೆ ಒಂದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದೇ?

ಉತ್ತರ:
ಪ್ರಾಥಮಿಕ ಶಾಲಾ ಶಿಕ್ಷಕ (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (GPT) ಮತ್ತು ಪ್ರೌಢಶಾಲಾ ಸಹಶಿಕ್ಷಕ (AM) ಈ ಮೂರೂ ವೃಂದಗಳಿಗೆ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಯು ತಾನು ಇಚ್ಚೆಯಂತೆ ಬೇರೆ ಬೇರೆ ವೃಂದಗಳಿಗೆ, ಬೇರೆ ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಒಂದು ವೃಂದಕ್ಕೆ ಒಂದು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕಿರುತ್ತದೆ.

24. GPT ಕನ್ನಡ ಭಾಷಾ ವಿಷಯದ ಹುದ್ದೆಗೆ ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕವಾಗಿ ಮೂರೂ ವರ್ಷಗಳು ಅಧ್ಯಯನ ಮಾಡಿರಬೇಕೆ? ಅಥವಾ ಪದವಿಯಲ್ಲಿ ಭಾಷೆಯನ್ನಾಗಿ ಅಧ್ಯಯನ ಮಾಡಿದ್ದರೆ ಸಾಕಾಗುವುದಿಲ್ಲವೇ?

ಉತ್ತರ:
GPT ಕನ್ನಡ ಭಾಷಾ ವಿಷಯದ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕವಾಗಿ ಮೂರೂ ವರ್ಷಗಳು ಅಧ್ಯಯನ ಮಾಡಿರುವುದು ಕಡ್ಡಾಯವಾಗಿರುತ್ತದೆ.

25. ನಾನು ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದು, ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಕೋರ್ ವಿಷಯಕ್ಕೆ ಅರ್ಜಿ ಸಲ್ಲಿಸಬಹುದೇ?

ಉತ್ತರ:
ಇಂಗ್ಲೀಷ್ ಭಾಷೆಯನ್ನು ಪದವಿಯಲ್ಲಿ ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಅಥವಾ SSLCಯಲ್ಲಿ ಆಂಗ್ಲಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಅಥವಾ SSLC ಅಥವಾ ಪದವಿಯನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕು. ಅಥವಾ UGC ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಆ ಭಾಷೆಯ ಡಿಪ್ಲೊಮಾ ಅರ್ಹತೆ ಹೊಂದಿರತಕ್ಕದ್ದು.

TET/CTETಗೆ ಸಂಬಂಧಿಸಿದಂತೆ

26. ಪ್ರಾಥಮಿಕ ಶಾಲಾ PET-Grade-II (1ರಿಂದ 8ನೇ ತರಗತಿ) ವೃಂದದ ಹುದ್ದೆಗೆ ಮತ್ತು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ, PET-Grade-II, PET-Grade-I ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಅಗತ್ಯವೆ?

ಉತ್ತರ:
ಪ್ರಾಥಮಿಕ ಶಾಲಾ PET-Grade-II (1ರಿಂದ 8ನೇ ತರಗತಿ) ವೃಂದದ ಹುದ್ದೆಗೆ ಮತ್ತು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ, PET-Grade-I ಹುದ್ದೆಗೆ TET/CTET ಅಗತ್ಯವಿರುವುದಿಲ್ಲ.

27. ಪ್ರಾಥಮಿಕ ಶಾಲಾ ಶಿಕ್ಷಕರ (1ರಿಂದ 5ನೇ ತರಗತಿ) ವೃಂದದ ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಅಗತ್ಯವೆ?

ಉತ್ತರ:
TET/CTET ಪತ್ರಿಕೆ–1 ಕಡ್ಡಾಯವಾಗಿ ಪಡೆದಿರಬೇಕು. SC/ST/C-1/PH ಅಭ್ಯರ್ಥಿಗಳು ಶೇ.55 ಅಂಕಗಳನ್ನು ಹಾಗೂ GM ಮತ್ತು 2A, 2B, 3A, 3B ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಶೇ.60ರಷ್ಟು ಅಂಕಗಳನ್ನು ಗಳಿಸಿರಬೇಕು.

28. ಪದವೀಧರ ಪ್ರಾಥಮಿಕ ಶಿಕ್ಷಕ (6ರಿಂದ 8ನೇ ತರಗತಿ) ವೃಂದದ ಹುದ್ದೆಗೆ, PET-Grade-II, PET-Grade-I ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಅಗತ್ಯವೆ?

ಉತ್ತರ:
TET/CTET ಪತ್ರಿಕೆ–2 ಕಡ್ಡಾಯವಾಗಿ ಪಡೆದಿರಬೇಕು. SC/ST/C-1/PH ಅಭ್ಯರ್ಥಿಗಳು ಶೇ.55 ಅಂಕಗಳನ್ನು ಹಾಗೂ GM ಮತ್ತು 2A, 2B, 3A, 3B ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಶೇ.60ರಷ್ಟು ಅಂಕಗಳನ್ನು ಗಳಿಸಿರಬೇಕು.

ಸೇವಾನಿರತ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ

29. ನಾನು ಸೇವಾನಿರತ ಅಭ್ಯರ್ಥಿಯಾಗಿದ್ದು, NOC ಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾ?

ಉತ್ತರ:
ಸೇವಾನಿರತ ಅಭ್ಯರ್ಥಿಯು NOC ಅನ್ನು ಮೂಲ ದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಲ್ಲಿ, ಪರಿಶೀಲನಾ ವೇಳೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸುವುದು ಕಡ್ಡಾಯ.

30. ನಾನು ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯೇ?

ಉತ್ತರ:
ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ GPT ಶಿಕ್ಷಕಿಯಾಗಿ/ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

31. ನಾನು ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯೇ?

ಉತ್ತರ:
ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, 2026ನೇ ಸಾಲಿನಲ್ಲಿ ಮತ್ತೊಮ್ಮೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

32. ನಾನು ಅನುದಾನಿತ ಶಾಲೆಯಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾ?

ಉತ್ತರ:
ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

33. ನಾನು ಇತರೆ ಇಲಾಖೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದು, NOC ಪಡೆದು ಅರ್ಜಿ ಸಲ್ಲಿಸಬಹುದಾ?

ಉತ್ತರ:
ಈಗ NOC ಇಲ್ಲದೇ ಅರ್ಜಿ ಸಲ್ಲಿಸಬಹುದು. 1:2 ಮೂಲದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಲ್ಲಿ ದಾಖಲೆಗಳ ಪರಿಶೀಲನಾ ವೇಳೆಯಲ್ಲಿ ನೇಮಕಾತಿ ಪ್ರಾಧಿಕಾರಕ್ಕೆ NOC ಅನ್ನು ಹಾಜರುಪಡಿಸಬೇಕಿರುತ್ತದೆ.

ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ

34. ತಂದೆಯ ಹೆಸರಿನಲ್ಲಿ ಪಡೆದ ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ಸಲ್ಲಿಸಬಹುದೆ?

ಉತ್ತರ:
ಸಲ್ಲಿಸಬಹುದು. ನಮೂನೆಯಲ್ಲಿ ಅಭ್ಯರ್ಥಿಯ ಹೆಸರು ಸ್ಪಷ್ಟವಾಗಿ ನಮೂದಾಗಿರಬೇಕು.


ವಿಶೇಷ ಸೂಚನೆ: ಸದರಿ ಪ್ರಶ್ನೋತ್ತರಗಳು ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಸುತ್ತೋಲೆ, ಆದೇಶ ಹಾಗೂ ಅಧಿಸೂಚನೆಗಳಿಗೆ ಒಳಪಟ್ಟಿರುತ್ತವೆ.

Karnataka Teacher Recruitment 2026

CLICK HERE TO DOWNLOAD FAQ

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!